ಕೇಳಿದ್ದು ಕೊಡುವ ಆಲದಮರ

7

ಕೇಳಿದ್ದು ಕೊಡುವ ಆಲದಮರ

Published:
Updated:
Deccan Herald

ದಡ್ಡ ಶಿಖಾಮಣಿಯೊಬ್ಬ ಬಸ್ಸಿಗೆ ಕಾಸಿಲ್ಲದೇ ಕಾಲುದಾರಿಯಲ್ಲಿ ನಡೆದುಕೊಂಡು ಹೊರಟಿದ್ದ, ಅವನು ದೂರದ ಸಂಬಂಧಿಕರ ಮನೆಗೆ ತೆರಳುತ್ತಿದ್ದ. ಅವರ ಊರಿನಿಂದ ನೆಂಟರ ಊರಿಗೆ ಸಾಕಷ್ಟು ದೂರವಿತ್ತು, ಕೈಯಲ್ಲಿ ಕಾಸಿಲ್ಲದ ಕಾರಣ ನಡೆದೇ ಹೋಗುವುದೆಂದು ನಿರ್ಧರಿಸಿದ್ದ. ದಾರಿಮಧ್ಯೆ ದೊಡ್ಡದೊಂದು ಕಾಡಿತ್ತು. ಆ ಕಾಡಿನ ಕಾಲುದಾರಿಯಲ್ಲಿ ಅದಾಗಲೇ ಅರ್ಧ ಸವೆಸಿ ಬಂದುಬಿಟ್ಟಿದ್ದ. ಸಾಕಷ್ಟು ಬಿಸಿಲಿದ್ದ ಕಾರಣ ಆಯಾಸವೆನಿಸಿ ಒಂದರೆಕ್ಷಣ ವಿಶ್ರಮಿಸೋಣವೆಂದುಕೊಂಡು ಕಾಡಿನೊಳಗಿದ್ದ ದೊಡ್ಡದಾದೊಂದು ಆಲದ ಮರದ ಕೆಳಗೆ ಕುಳಿತುಕೊಂಡ. ನೆರಳು ಮತ್ತು ತಂಪಾದ ಗಾಳಿಯು ಅವನ ಆಯಾಸವನ್ನು ಕಡಿಮೆ ಮಾಡಿತ್ತು.

ಆದರೆ ಅವನಿಗೆ ತಿಳಿಯದೇ ಅವನು ‘ಕೇಳಿದ್ದನ್ನು ಕೊಡುವ ಆಲದ ಮರ’ದ ಕೆಳಗೆ ಕುಳಿತುಬಿಟ್ಟಿದ್ದ. ಹಾಗಾಗಿ ಅವನು ಬಯಸಿದ್ದೆಲ್ಲವೂ ಸಿಗುವುದಿತ್ತು. ಅದ್ಯಾವುದರ ಪರಿವೆಯೇ ಇಲ್ಲದ ಹೆಡ್ಡನು ಮರದ ಕೆಳಗೆ ಕುಳಿತು ‘ಅಬ್ಬಾ.. ಎಷ್ಟೊಂದು ತಂಪಿದೆ. ಕುಡಿಯಲು ತಣ್ಣನೆಯ ನೀರಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂದುಕೊಂಡನು. ತಕ್ಷಣಕ್ಕೆ ಅವನೆದುರಿಗೆ ತಂಪಾದ ನೀರು ಲಭ್ಯವಾಯಿತು. ನೀರನ್ನು ಕಂಡೊಡನೆ ಗಟಗಟನೆ ಕುಡಿದ ಹೆಡ್ಡನು ‘ಸ್ವಲ್ಪ ಹೊತ್ತು ನಿದ್ರೆ ಬರುವಂತಿದ್ದರೆ ಚೆನ್ನಿತ್ತು’ ಎಂದುಕೊಳ್ಳುವಷ್ಟರಲ್ಲಿ ಅವನನ್ನು ನಿದ್ರಾದೇವಿ ಆವರಿಸಿದಳು. ಮಲಗಿಕೊಂಡೇ ‘ಅಲ್ಲಿಂದಾ ನಡೆದು ಕಾಲು ನೋವುತ್ತಿವೆ. ಯಾರಾದರೂ ಆಳು ಕಾಲೊತ್ತುವಂತಿದ್ದರೆ ಮಜವಾಗಿರುತ್ತಿತ್ತು’ ಎಂದುಕೊಂಡನು. ತಕ್ಷಣವೇ ಆಳೊಬ್ಬ ಅವನ ಕಾಲನ್ನು ಮೃದುವಾಗಿ ಒತ್ತುತ್ತಿರುವುದು ಅವನ ಗಮನಕ್ಕೆ ಬಂತು. ಸ್ವಲ್ಪ ನಿದ್ರೆಯ ನಂತರ ಎಚ್ಚೆತ್ತ ಹೆಡ್ಡನು ‘ಆಯಾಸವೇನೋ ಪರಿಹಾರವಾಯ್ತು. ತಿನ್ನಲು ಒಂದಿಷ್ಟು ರುಚಿಯಾದ ಆಹಾರ ಸಿಕ್ಕರೆ ಒಳ್ಳೆಯದಿತ್ತು’ ಎಂದುಕೊಳ್ಳುವಾಗಲೇ ಅವನೆದುರಿಗೆ ವಿವಿಧ ಭಕ್ಷ್ಯಭೋಜ್ಯಗಳು ಪ್ರತ್ಯಕ್ಷವಾದವು.

ತನಗೆ ರುಚಿಯೆನಿಸಿದ್ದೆಲ್ಲವನ್ನೂ ಗಬಗಬನೆ ತಿಂದ ಹೆಡ್ಡನು ‘ಏನಾಶ್ಚರ್ಯ.. ನಾನು ಮನದಲ್ಲಿ ಅಂದುಕೊಂಡಿದ್ದೆಲ್ಲವೂ ನಿಜವಾಗುತ್ತಿದೆ. ಇಲ್ಲಿ ಯಾರಾದರೂ ದೈವಿಕ ಶಕ್ತಿಯುಳ್ಳವರು ಕುಳಿತು ನನ್ನ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಾರೆಯೇ?, ಇಲ್ಲಾ.. ಯಾವುದಾದರೂ ದೆವ್ವ ಪಿಶಾಚಿಗಳು ನನ್ನನ್ನು ಹೀಗೆ ಆಟವಾಡಿಸುತ್ತಿರಬಹುದೇ?” ಎಂದು ಯೋಚಿಸತೊಡಗಿದನು. ಇಂಥಹ ಆಲೋಚನೆಯಿಂದ ಸ್ವಲ್ಪ ವಿಚಲಿತನಾದಂತೆ ಕಂಡ ಹೆಡ್ಡನು ಅಂಜಿಕೆಯಿಂದ ಮೇಲೆದ್ದು “ಅಯ್ಯೋ.. ಈ ಕಾಡಿನಲ್ಲಿ ಕ್ರೂರ ಹುಲಿಯೊಂದಿದೆ ಎಂದು ನಮ್ಮಜ್ಜಿ ಹೇಳುತ್ತಿದ್ದಳು. ಒಂದೊಮ್ಮೆ ಆ ಹುಲಿಯೇನಾದರೂ ಪ್ರತ್ಯಕ್ಷವಾದರೇ?” ಎಂದು ಯೋಚಿಸುತ್ತಿರುವಾಗಲೇ ಅವನೆದುರಿಗೆ ದೊಡ್ಡದಾದೊಂದು ಹುಲಿ ಪ್ರತ್ಯಕ್ಷವಾಯಿತು. ಅದನ್ನು ಕಂಡು ಭಯಬಿದ್ದ ಹೆಡ್ಡನು ‘ಈ ಹುಲಿ ಏನಾದರೂ ನನ್ನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟರೇ” ಎಂದು ಯೋಚಿಸಿದ. ತಕ್ಷಣವೇ ಹುಲಿಯು ಅವನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟಿತು.

ಅದಕ್ಕೇ ಮಕ್ಕಳೇ ನಾವು ಯಾವಾಗಲೂ ಒಳ್ಳೆಯದನ್ನೇ ಯೋಚಿಸಬೇಕು. ಕೆಟ್ಟದ್ದನ್ನು ಯೋಚಿಸಿದರೆ ಕೆಟ್ಟದ್ದೇ ಆಗುತ್ತದೆ.
(ಬಿಹಾರದ ಜಾನಪದ ಕತೆ)

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !