ಭಾನುವಾರ, ಮಾರ್ಚ್ 29, 2020
19 °C

ಚಿಟ್ಟೆ ಮತ್ತು ಚಿದಂಬರ

ಸದಾನಂದ ಹೆಗಡೆಕಟ್ಟೆ, ಮೂಡುಬಿದಿರೆ Updated:

ಅಕ್ಷರ ಗಾತ್ರ : | |

Prajavani

ಕೃಷಿಕ ಗೋಪಾಲಯ್ಯನವರ ಪುತ್ರ ಚಿದಂಬರ. ಸ್ಥಳೀಯ ಪ್ರೌಢಶಾಲೆಯಲ್ಲಿ ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದ. ಜಾಣನಾದ ಅವನು ತರಗತಿಯಲ್ಲಿ ಸದಾ ಪ್ರಥಮ ಸ್ಥಾನ ಪಡೆಯುತ್ತಿದ್ದ. ಲೆಕ್ಕದಲ್ಲಿ ಮತ್ತು ವಿಜ್ಞಾನದಲ್ಲಿ ಆತನಿಗೆ ನೂರಕ್ಕೆ ನೂರು ಅಂಕ ದೊರೆಯುತ್ತಿತ್ತು. ಆತ ವಿಜ್ಞಾನಿಯಾಗಬೇಕೆಂದು ನಿರ್ಧರಿಸಿದ್ದ.

ಗೋಪಾಲಯ್ಯನವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಭತ್ತ, ತೆಂಗು, ಕಬ್ಬು ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದರು. ಸಮಗ್ರ ಕೃಷಿ ಅವರದ್ದಾಗಿತ್ತು. ಹಾಗಾಗಿ ಅವರಿಗೆ ಕೃಷಿಯಿಂದ ನಷ್ಟವಾಗುತ್ತಿರಲಿಲ್ಲ. ಭತ್ತಕ್ಕೆ ಬೆಲೆ ಲಭಿಸದಿದ್ದರೆ, ಮಾರುಕಟ್ಟೆಯಲ್ಲಿ ತೆಂಗಿಗೆ, ಕಬ್ಬಿಗೆ ಬೆಲೆ ದೊರೆಯುತ್ತಿತ್ತು. ಅವರು ತಮ್ಮ ತೋಟದ‌ಲ್ಲಿ ಹಲವಾರು ಜೇನು ಪೆಟ್ಟಿಗೆಗಳನ್ನು ಇರಿಸಿದ್ದರು. ಜೇನು ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತಿತ್ತು. ಅವರ ಬಳಿ ಐದು ದನಗಳಿದ್ದವು. ನೆರೆಹೊರೆಯವರು ಗೋಪಾಲಯ್ಯನವರ ಮನೆಗೆ ಬಂದು ಹಾಲು ತೆಗೆದುಕೊಂಡು ಹೋಗುತ್ತಿದ್ದರು. ಗೋವುಗಳಿಂದ ದೊರೆತ ಸಗಣಿ ಗೊಬ್ಬರಕ್ಕೆ ಆಗುತ್ತಿತ್ತು. ಗೋಪಾಲಯ್ಯನವರು ಊರಲ್ಲಿ ಓರ್ವ ಪ್ರತಿಷ್ಠಿತ ಕೃಷಿಕರಾಗಿದ್ದರು. ಸಿರಿವಂತರಾಗಿದ್ದರು.

ಒಮ್ಮೆ ಚಿದಂಬರ, ಅವನ ತೋಟದಲ್ಲಿ ಒಂದು ಸುಂದರವಾದ ಚಿಟ್ಟೆಯನ್ನು ನೋಡಿದ. ಅದರ ಬಣ್ಣ ನೀಲಿ, ಕೆಂಪು ಹಾಗೂ ವಿಶಾಲ ರೆಕ್ಕೆಗಳು ಹಳದಿ ಬಣ್ಣದ್ದು. ಒಂದು ಹೂವಿನ ಮೇಲೆ ಅದು ಕುಳಿತಿತ್ತು. ಮನಮೋಹಕವಾದ ಹಾಗೂ ಬಣ್ಣ ಬಣ್ಣದ ಚಿಟ್ಟೆಯನ್ನು ಕಂಡು ಚಿದಂಬರ ಸಂತಸಪಟ್ಟ. ‘ಆಹಾ! ಎಷ್ಟು ಸುಂದರ ಚಿಟ್ಟೆ. ಇದನ್ನು ಹಿಡಿದು ಒಂದು ಕುಪ್ಪಿಯಲ್ಲಿ (ಸೀಸೆ) ಇಟ್ಟರೆ ಮನೆಯಲ್ಲಿ ಇದನ್ನು ಸದಾ ವೀಕ್ಷಿಸಬಹುದು. ಅದೊಂದು ರೀತಿಯಲ್ಲಿ ಮಜವಾಗಿ ಇರುತ್ತದೆ’ ಎಂದುಕೊಂಡ ಹಾಗೂ ಚಿಟ್ಟೆ ಹಿಡಿಯಲೆಂದು ಮೆಲ್ಲನೆ ಅದರ ಬಳಿ ಸಾಗಿದ.

ಆದರೆ ಚಿಟ್ಟೆ ಅವನ ಕೈಗೆ ಸಿಗಲಿಲ್ಲ. ಅವನು ಅದರ ಹತ್ತಿರ ಬರುತ್ತಿದ್ದಂತೆಯೇ ಅದು ರಪಕ್ಕನೆ ಹಾರಿ ಇನ್ನೊಂದು ಹೂವಿನ ಮೇಲೆ ಕುಳಿತುಕೊಂಡಿತು. ಚಿದಂಬರ ಹಟ ಬಿಡಲಿಲ್ಲ. ಚಿಟ್ಟೆಯನ್ನು ಹಿಂಬಾಲಿಸಿದ. ಅದು ಮತ್ತೆ ಹಾರಿ, ಇನ್ನೊಂದು ಪುಷ್ಪದ ಮೇಲೆ ಕುಳಿತುಕೊಂಡಿತು. ಚಿದಂಬರ ಆಗಲೂ ತನ್ನತ್ತ ಬರುವುದನ್ನು ನೋಡಿದ ಚಿಟ್ಟೆ ‘ನಿಲ್ಲು, ಸಾಕು ನಿನ್ನಾಟ. ನಾನು ನಿನ್ನ ಕೈಗೆ ಸಿಗಲಾರೆ. ಸುಮ್ಮನೆ ನಿನ್ನ ಸಮಯ ಹಾಳು ಮಾಡಿಕೊಳ್ಳಬೇಡ. ನನ್ನನ್ನು ಹಿಂಸಿಸಬೇಡ’ ಎಂದಿತು.

ಚಿದಂಬರ, ತನ್ನನ್ನು ಹಿಡಿಯಲು ಪ್ರಯತ್ನಿಸದೇ ನಿಂತಿರುವುದನ್ನು ನೋಡಿದ ಚಿಟ್ಟೆ ‘ತಮ್ಮಾ, ನಾನು ನಿನ್ನ ಕೈಗೆ ಸಿಗಲಿಲ್ಲವೆಂದು ಬೇಸರಗೊಳ್ಳದೇ ನನ್ನ ಮಾತನ್ನು ಸ್ವಲ್ಪ ಕೇಳು’ ಎಂದು ಮತ್ತೆ ಮಾತಿಗೆ ಇಳಿಯಿತು.

‘ಚಿಟ್ಟೆಗಳಾದ ನಮ್ಮಿಂದ ಮನುಷ್ಯರಾದ ನಿಮಗೆ ಉಪಕಾರವಾಗುತ್ತದೆ. ನಮ್ಮ ಸಂತತಿ ನಾಶವಾದರೆ ಪರಾಗ ಸ್ಪರ್ಶ ಆಗುವುದೇ ಇಲ್ಲ. ಆಗ ಹಣ್ಣುಗಳು ನಿಮಗೆ ದೊರೆಯುವುದಿಲ್ಲ. ನೂರಾರು ವರ್ಷಗಳಿಂದ ನಾವು ನಿಮಗೆ ಮುದ ನೀಡುತ್ತಿದ್ದೇವೆ. ನಮ್ಮ ಕುರಿತು ಕವಿಗಳು ಕವನ ರಚಿಸುತ್ತಾರೆ. ನಾವು ಪರಿಸರ ರಕ್ಷಣೆ ಮಾಡುತ್ತೇವೆ ಎಂಬುದು ನಿನಗೆ ಗೊತ್ತಿಲ್ಲವಾದರೆ ನಿನ್ನ ಹಿರಿಯರಿಂದ ಹಾಗೂ ಶಿಕ್ಷಕರ ಬಳಿ ಕೇಳಿ ತಿಳಿ. ನಮ್ಮ ಸಂತತಿ ವೃದ್ಧಿಸಲು ವಿಶ್ವದ ಹಲವಾರು ದೇಶಗಳಲ್ಲಿ ನಮಗಾಗಿ ಪ್ರತ್ಯೇಕ ವನವನ್ನು ಬೆಳೆಸುತ್ತಾರೆ. ಅಲ್ಲಿ ನಮಗೆ ಪ್ರಿಯವಾದ ಹೂವಿನ ಗಿಡಗಳನ್ನು, ಮರಗಳನ್ನು ಬೆಳೆಸುತ್ತಾರೆ. ನಾವು ತತ್ತಿಗಳನ್ನು ಇಡಲು ಅನುಕೂಲವಾದ ಬಳ್ಳಿಗಳನ್ನು ಬೆಳೆಸುತ್ತಾರೆ. ಅರಣ್ಯಗಳಿಗೆ ಬೆಂಕಿ ಬಿದ್ದಾಗ ನಮಗೆ ಸಹಿಸಲು ಅಸಾಧ್ಯ ಎನ್ನುವಷ್ಟು ಸಂಕಟವಾಗುತ್ತದೆ. ಹಾಗೆಯೇ, ಮನುಷ್ಯರು ತಮ್ಮ ಮಕ್ಕಳನ್ನು ಖುಷಿಪಡಿಸಲು ನಮ್ಮನ್ನು ಹಿಡಿಯುವುದು ತಮಾಷೆಯಾಗಿ ಕಾಣಿಸಬಹುದು. ಆದರೆ, ಆಗ ಕೂಡ ನಮಗೆ ಸಹಿಸಲಸಾಧ್ಯವಾದ ಹಿಂಸೆಯಾಗುತ್ತದೆ.’

‘ತಮ್ಮಾ, ನಾನು ಹೇಳುವುದನ್ನು ದಯಮಾಡಿ ಲಕ್ಷ್ಯವಿಟ್ಟು ಕೇಳು. ನಿಮ್ಮ ಗೆಳೆಯರಿಗೆಲ್ಲ ನಮ್ಮ ಮಹತ್ವ ತಿಳಿಸಿ, ನಮ್ಮನ್ನು ಪೀಡಿಸದಿರುವಂತೆ ಹೇಳು. ನಮಗೆ ಬದುಕಲು ಬಿಡಲು ತಿಳಿಸಿ ಉಪಕರಿಸು’ ಎಂದು ಹೇಳಿ ಚಿಟ್ಟೆ ಹಾರಿ ಹೋಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)