ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಾರ್ ವೃಕ್ಷದ ಅಳು

Last Updated 27 ಜುಲೈ 2019, 19:30 IST
ಅಕ್ಷರ ಗಾತ್ರ

ಕಡು ಹಳದಿ ಮತ್ತು ಕಿತ್ತಳೆ ಬಣ್ಣದ ಎಲೆಗಳು ಕಳೆದ ಎರಡು ತಾಸಿನಿಂದ ತಮ್ಮ-ತಮ್ಮಲ್ಲೇ ಗುಟ್ಟಾಗಿ ಏನನ್ನೋ ಮಾತಾಡಿಕೊಳ್ಳುತ್ತಿವೆ. ಸಾಕಷ್ಟು ಬಲಿತಿರುವ ಆ ಗಂಡು ಎಲೆಗಳು ಬಹುಶಃ ಯಾವುದೋ ಒಂದು ಗಂಭೀರ ವಿಷಯದ ಕುರಿತೇ ಚರ್ಚೆ ನಡೆಸುತ್ತಿರುವಂತಿದೆ. ಅವುಗಳ ನಿರಂತರ ಮಾತು ಮತ್ತು ಗುನುಗುಡುವಿಕೆಯು, ತಾರುಣ್ಯದಲ್ಲಿರುವ ಹಸಿರೆಲೆಗಳನ್ನು ಕುತೂಹಲ ಮತ್ತು ಸಂದೇಹಕ್ಕೆ ದೂಡುತ್ತಿದೆ. ತಮ್ಮ ಹಿರಿಯೆಲೆಗಳು ಏನು ಮಾತಾಡಿಕೊಳ್ಳುತ್ತಿರಬಹುದು ಎಂಬುದನ್ನು ಕೇಳಲು ಮತ್ತು ತಿಳಿಯಲು ಅವು ಗುಪ್ತವಾಗಿ ಪ್ರಯತ್ನ ಪಡುತ್ತಿದ್ದವಾದರೂ, ಎಲ್ಲೆಡೆ ಗದ್ದಲವೇ ತುಂಬಿದ್ದ ಕಾರಣ ಅವುಗಳಿಗೆ ಏನೂ ಅರ್ಥವಾಗುತ್ತಿಲ್ಲ. ಆದರೂ ಅದೇನಿರಬಹುದು ಎಂಬುದನ್ನು ತಿಳಿದುಕೊಳ್ಳುವ ಅವುಗಳ ಕುತೂಹಲ ಮತ್ತು ತುಂಟಾಟ ನಿಲ್ಲುತ್ತಲೇ ಇಲ್ಲ. ಅಷ್ಟೊಂದು ಗಂಭೀರವಾಗಿದ್ದ ವಾತಾವರಣದಲ್ಲೂ ಮೇಲಿನಿಂದ ದೂರದ ವರೆಗೂ ಕಣ್ಣು ಹಾಯಿಸಿ ಸುತ್ತಲಿನ ಸುಂದರ ವಾತಾವರಣವನ್ನು ನೋಡುವ ಅವಕಾಶ ಆ ಎಲೆಗಳಿಗೆಲ್ಲ ಇತ್ತೆಂಬುದೇ ಅಲ್ಲಿನ ಹೆಚ್ಚುಗಾರಿಕೆಯಾಗಿತ್ತು.

‘... ಹಾಂ, ಎಲ್ಲರೂ ಸುಮ್ಮನಿರಿ...’ ಹಳೆಯ ಹಳದಿಯೆಲೆ ಎಲ್ಲರಿಗೂ ಆದೇಶಿಸಿತು. ಅದು ಬಹಳ ಹೊತ್ತಿನಿಂದಲೂ ಏನೋ ವಿಚಾರಿಸಿಯೇ ಹಾಗೆ ಹೇಳಿತ್ತು.

‘...ಯಾಕೆ, ಏನು ವಿಷಯ?....ಏನಾಗಿದೆ?’- ಕಣ್ತುಂಬ ಭಯ ಮತ್ತು ಕುತೂಹಲ ತುಂಬಿಕೊಂಡ ಹೆಂಡತಿಯೆಲೆ ಕೇಳಿತು.

ಹೆಂಡತಿಯೆಲೆಯ ಆ ಮಾತು, ತಾವು ತಾರುಣ್ಯದಲ್ಲಿ ಜೊತೆಯಾಗಿ ಕಳೆದ ದಿನಗಳನ್ನು ಗಂಡೆಲೆಗೆ ನೆನಪಿಗೆ ತಂದಿತು. ನೆನಪಿನ ಲೋಕಕ್ಕೆ ಜಾರಿದ ಅದು, ತಾವು ಮೊದಲು ಭೆಟ್ಟಿಯಾದ ಕ್ಷಣವನ್ನು ಕಲ್ಪಿಸಿಕೊಳ್ಳತೊಡಗಿತು.

ಆಗ ಅವಳು ಕಡು ಹಸಿರಿನಿಂದ ತೊನೆದಾಡುತ್ತಿದ್ದ ಎಲೆಯಾಗಿದ್ದಳು, ಆತ ಸದೃಢನಾಗಿದ್ದರೂ, ಮೃದು ಗುಣದ ಗಂಡು ಎಲೆಯಾಗಿದ್ದನು. ಮೊದಲ ಸಲ ಅವಳ ಕೋಮಲ ಸೌಂದರ್ಯವನ್ನು ಕಂಡಾಗ ಆತನಿಗೆ ಇಡೀ ಜಗತ್ತೇ ಒಂದು ಕ್ಷಣ ನಿಂತುಹೋದಂಥ ಅನುಭವವಾಗಿತ್ತು. ಅಲ್ಲಿಂದ ಮುಂದೆ ಅವಳು ಆತ್ಮವಿಶ್ವಾಸದಿಂದ ಗಟ್ಟಿಯಾಗಿ ಬೆಳೆದು ನಿಂತಳು. ತನ್ನ ಸಣ್ಣ ಶರೀರದ ಮೇಲೆ ಡಿಸೆಂಬರ್ ಮಾಹೆಯ ಹಿಮದ ಭಾರ ಬಿದ್ದಾಗಲೂ ಕೆಳಗೆ ಬೀಳಲಾರದಷ್ಟು ಸದೃಢವಾದಳು. ಆದರೆ, ಈಗವಳು ಕಳಾಹೀನಳಾಗಿದ್ದಾಳೆ, ಮುದುಕಿಯಾಗಿದ್ದಾಳೆ. ಅವಳ ಅಂಗಾಂಗದ ನರನಾಡಿಗಳು ಒಣಗಿವೆ, ಮತ್ತು ಮೈಯೆಲ್ಲವೂ ಸುಕ್ಕುಗಟ್ಟಿದೆ. ‘...ಅವರು ನಮ್ಮ ಮನೆಯನ್ನು ಕೆಡವಿ ಹಾಕುವವರಿದ್ದಾರೆ’ -ಹೀಗೆ ಹೊರಬಂದ ಆತನ ಪಿಸುಗುಟ್ಟುವಿಕೆಯು ಸೆಪ್ಟೆಂಬರ್ ತಿಂಗಳ ಚಳಿಗಾಳಿಯ ಮೂಲಕ ಹರಡಿ ನಡುಕವನ್ನು ಹುಟ್ಟಿಸಿತು. ತರುಣ ತಾಯಿಯೆಲೆ ಕೂಡಲೇ ತನ್ನ ಹಸಿರೆಲೆಗೂಸುಗಳನ್ನು ಎದೆಗವಚಿಕೊಂಡಿತು. ‘ನಮ್ಮ ಮನೆಯನ್ನು ಅವರು ಹಾಳು ಮಾಡಿತ್ತಿದ್ದಾರೆಯೆ? ನಮ್ಮ ಚಿನಾರ್ ವೃಕ್ಷವನ್ನು!! ಆದರೆ, ಯಾಕೆ?’ ಹೆಣ್ಣೆಲೆ ಸೋತ ಸ್ವರದಲ್ಲಿ ಪ್ರಶ್ನೆ ಕೇಳಿತು. ಗಂಡೆಲೆಯಿಂದ ಉತ್ತರವಿಲ್ಲ, ಯಾವ ಉತ್ತರವೂ ಇಲ್ಲ. ಹಳೆಯೆಲೆಯ ಉಸಿರಾಟದ ಒಂದೊಂದೂ ಗತಿಯನ್ನು ಕುತೂಹಲದಿಂದ ಗಮನಿಸುವ ಹಾಗೆ ಇಡೀ ಚಿನಾರ್ ವೃಕ್ಷ ಸ್ತಬ್ಧವಾಯಿತು. ‘ನಮ್ಮ ಮನೆಯನ್ನು ಹಾಳು ಮಾಡುತ್ತಿದ್ದಾರಾ...?’ ಎನ್ನುವ ಪ್ರತಿಯೊಂದೂ ಶಬ್ದದಲ್ಲಿದ್ದ ಭಯಾನಕತೆ ಆ ಇಡೀ ಮರವನ್ನೇ ನಡುಗಿಸಿತು. ಚಿನಾರ್ ವೃಕ್ಷ ಹುಟ್ಟಿ, ಬೆಳೆದು, ಬಾಳಿ-ಬದುಕುತ್ತ ಬಂದ ಅದೆಷ್ಟೋ ವರ್ಷಗಳ ನಂತರ ಅನಿರೀಕ್ಷಿತವಾಗಿ ಇಂಥ ಆಘಾತಕಾರಿ ಸುದ್ದಿಯೊಂದು ಬಂದಿತ್ತು!

ಹಳೆಯೆಲೆಯು ತನ್ನ ದೃಷ್ಟಿಯನ್ನು ಚಿನಾರ್ ವೃಕ್ಷಕುಟುಂಬದ ಸುತ್ತಲೂ ಹರಿಸಿತು. ಮಕ್ಕಳು, ತಾಯಂದಿರು, ಹಸುಗೂಸುಗಳು, ಹಳಬರು- ಎಲ್ಲರೂ, ಎಂದಿನಿಂದಲೂ ಅನ್ಯೋನ್ಯತೆಯಿಂದ, ಒಂದೇ ಕುಟುಂಬದ ಸದಸ್ಯರಾಗಿ ಬಾಳುತ್ತಿರುವುದು ಅದರ ನೆನಪಿಗೆ ಬಂತು. ಅವರೆಲ್ಲರೂ ಒಟ್ಟಾಗಿಯೇ ಮಾರ್ಚ್‌ ತಿಂಗಳ ಮೊದಲ ಮಳೆಯ ವಾಸನೆಯನ್ನು ಅನುಭವಿಸುತ್ತಿದ್ದರು. ತಮ್ಮ ಸ್ವಂತ ನೆರಳಲ್ಲೇ ಬೀಳುತ್ತಿದ್ದ ನಗೆಮುಖದ ಹಾಗೂ ಉತ್ಸಾಹಭರಿತ ಹಳದಿ ಹೂಗಳನ್ನು ನೋಡಿ ನಲಿಯುತ್ತಿದ್ದರು. ‘ತಾವೆಲ್ಲರೂ ಬೇರೆಯಾಗುತ್ತಿದ್ದೇವೆಯೇ?’– ಅಂಥ ವಿಚಾರವೇ ಹಳೆಯೆಲೆಯ ಎದೆಯನ್ನು ನಡುಗಿಸಿತು. ಆ ನೋವಲ್ಲೂ ಅದು ಹೇಳಿತು- ‘...ವಿಷಯವೇನೆಂದರೆ, ನಮ್ಮ ಹತ್ತಿರವಿರುವ ಮನೆಯವರು ಆಧುನಿಕ ವಾಸ್ತಶಿಲ್ಪ ಮತ್ತು ತಂತ್ರಜ್ಞಾನದಿಂದ ಕೂಡಿದ ಹೊಸ ಮನೆಯೊಂದನ್ನು ಕಟ್ಟಲು ಈ ಜಾಗೆಯನ್ನು ಖಾಲಿ ಮಾಡುವವರಿದ್ದಾರೆ. ಅದಕ್ಕಾಗಿ ಅವರಿಗೆ ಈಗಿರುವುದಕ್ಕಿಂತ ಇನ್ನೂ ಹೆಚ್ಚು ವಿಸ್ತಾರವಾದ ನೆಲ ಬೇಕಿದೆಯಂತೆ’ ‘ಆದರೆ, ಇದು ನಮ್ಮ ಮನೆ!’ ತಡೆಯಲಾರದೆ ಹೆಣ್ಣೆಲೆ ಒಮ್ಮೆಲೆ ಒದರಿತು.

‘ನಮ್ಮ ಮನೆಯಿರುವ ಭೂಮಿಯನ್ನು ತೆಗೆದುಕೊಳ್ಳಲು ಅವರಿಗೆ ಯಾವ ಹಕ್ಕೂ ಇಲ್ಲ. ಹಾಗೆ ಮಾಡಿದರೆ ನಮ್ಮ ಗತಿಯೇನು? ಇಲ್ಲಿ ಬದುಕು ಕಟ್ಟಿಕೊಂಡಿರುವ ಗುಬ್ಬಚ್ಚಿಗಳ ಪಾಡೇನು? ಅವುಗಳ ಮರಿಗಳಿಗೇನು ದಿಕ್ಕು? ಅವು ಇನ್ನೂ ಚಿಕ್ಕವು, ಹಾರಲಾರವು ಕೂಡ. ಅಷ್ಟೇ ಅಲ್ಲ; ನಮ್ಮ ಮಕ್ಕಳು ಸಹ ಇನ್ನೂ ತಿಂಗಳಾನುಗಟ್ಟಲೇ ಬದುಕಬೇಕಿದೆ. ಈ ಮನೆಗೆ ಅವು ಇನ್ನೂ ಸೇವೆ ಸಲ್ಲಿಸುವುದಿದೆ. ನೋಡಿ..., ಈಗ ನಾವು ಅವರೊಂದಿಗೆ ಮಾತಾಡುವುದೇ ಬೇಡ. ದಯವಿಟ್ಟು ನನ್ನ ಮಾತು ಕೇಳಿ...’ ಒಂದೇ ಏಟಿಗೆ ಹೀಗೆ ಮಾತಾಡಿದ ಹೆಣ್ಣೆಲೆಯ ಮುದುಡಿದ ಮುಖದ ಕಣ್ಣಿಂದ ಒಂದು ಹನಿ ನೀರು ತಂತಾನೇ ಜಾರಿತು. ‘ಹಾಗಲ್ಲ, ನಾವು ಹಾಗೆ ಮಾಡಲು ಬರುವುದಿಲ್ಲ. ಮತ್ತು ಅವರಿಗೆ ಇದು ಅರ್ಥವಾಗುವುದೂ ಇಲ್ಲ...’ – ಹಳೆಯ ಎಲೆಯು ಅವಳಿಗೆ ಸಮಜಾಯಿಸಿಯ ಉತ್ತರ ಕೊಡಲು ಯತ್ನಿಸಿತು. ತನ್ನ ಮಾತನ್ನು ಮುಂದುವರೆಸಿ, ‘ನೋಡು ಇದು ಅವರ ಭೂಮಿ, ನಾವು ಹಾಗೆಲ್ಲ ಮಾಡಲಾಗುವುದಿಲ್ಲ. ಹೆಚ್ಚೆಂದರೆ, ನಾವೆಲ್ಲರೂ ಒಬ್ಬರೊಬ್ಬರ ಕೈ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ಹೀಗಾಗದಿರಲಿ’ ಎಂದು ದೇವರಲ್ಲಿ ಪ್ರಾರ್ಥಿಸಬಹುದು ಅಷ್ಟೆ’ ಎಂದಿತು.

‘ಅಯ್ಯೋ, ದೇವರೇ...’ ಕೆಲವು ಜನರ ಗುಂಪೊಂದು ಚಿನಾರ್ ವೃಕ್ಷದ ಕಡೆಗೇ ಬರುತ್ತಿದ್ದ ಸಪ್ಪಳವನ್ನು ಕೇಳಿದ ಹೆಣ್ಣೆಲೆಯ ಮಾತು ಅರ್ಧಕ್ಕೇ ನಿಂತಿತು. ಅವರು ಬರುತ್ತಿದ್ದ ರಭಸಕ್ಕೆ ಕೆಳಗಿದ್ದ ಭೂಮಿ ಅದುರುತ್ತಿತ್ತು. ಚಿನಾರ್ ವೃಕ್ಷದ ಎಲ್ಲ ಸದಸ್ಯರೂ ಅವರ ಬರುವಿಕೆಯ ಭಯಾನಕ ಹೆಜ್ಜೆಗಳ ಸದ್ದನ್ನು ಕೇಳಿ ಭೀತಿಗೊಳಗಾದರು. ‘ಆದಷ್ಟು ಬೇಗನೇ ಈ ಗಿಡವನ್ನು ಕತ್ತರಿಸಿರಿ....’ ತನ್ನ ಬೆರಳುಗಳ ಸಂದಿಯಲ್ಲಿ ಸಿಗರೇಟು ಹಿಡಿದಿದ್ದ ಬಡಕಲು ವ್ಯಕ್ತಿಯು ಕೆಲಸಗಾರರಿಗೆ ಸೂಚನೆ ಕೊಟ್ಟ.

‘ಸಾಹೇಬ್ರೆ, ಈಗ ಸಂಜೆಯಾಗಿದೆ. ಗಿಡವನ್ನು ಈ ಹೊತ್ತಲ್ಲಿ ಕಡಿಯಬಾರದು. ಹೊತ್ತು ಮುಳುಗಿದ ಮೇಲೆ ಮರ ಕಡಿಯುವುದು ಒಳ್ಳೆಯದಲ್ಲ’- ಒಬ್ಬ ಕೆಲಸಗಾರ ನುಡಿದ.

‘ಅದೆಲ್ಲಾ ಬೇಕಿಲ್ಲ. ಬೆಳಗಾಗುವುದರೊಳಗೇ ನೀವು ಈ ಗಿಡವನ್ನು ಕಡಿದಿರಬೇಕು ಅಷ್ಟೆ’ ಎಂದು ಖಚಿತವಾಗಿ ಆದೇಶಿಸಿ ಆತ ಅಲ್ಲಿಂದ ನಡೆದುಬಿಟ್ಟ. ‘ಅಯ್ಯೋ... ಅಮ್ಮಾ....’- ಇಡೀ ಚಿನಾರ್ ವೃಕ್ಷ ನಿಟ್ಟುಸಿರು ಹಾಕಿತು. ಸಂಜೆಯ ಹೊತ್ತು ಗಿಡ ಕಡಿಯುಬಾರದು ಎಂಬುದುದೇನೋ ಸರಿ, ಆದರೆ ಯಾವ ವೇಳೆಯಾದರೂ ಇರಲಿ, ಮರಗಳನ್ನು ಕಡಿಯುವುದು ಶುಭಕಾರ್ಯವೆ? ಎಲ್ಲಿ ಹೋಯಿತು ಮನುಷ್ಯರೆಂದು ಜಂಭ ಕೊಚ್ಚಿಕೊಳ್ಳುವವರ ಮಾನವೀಯ ಧರ್ಮ? ಮರಗಳನ್ನು ಕಡಿಯಬಾರದೆಂದು ಪ್ರತಿಭಟನೆ ನಡೆಸುತ್ತಿದ್ದವರ ದನಿಗಳು ಎಲ್ಲಿ ಹೋದವು? ಅವರಲ್ಲಿ ಒಂದಾದರೂ ದನಿ ಈಗ ಉಳಿದಿದೆಯೆ?

ವೃಕ್ಷದ ಎಲ್ಲ ಎಲೆಗಳ ಮನಸ್ಸುಗಳೂ ಭಯದಿಂದ ತತ್ತರಿಸಿ ಹೋಗಿದ್ದವು. ಆದರೆ, ಅವೆಲ್ಲವೂ ಸೇರಿ ಕಳೆಯಬಹುದಾದ ಕೊನೆಯ ರಾತ್ರಿ ಅದಾಗಿತ್ತೆಂಬ ಮಾತು ಮಾತ್ರ ಸತ್ಯವಾಗಿತ್ತು. ಆಮೇಲೆ ಯಾವೊಂದೂ ಎಲೆಯೂ ಚಕಾರವೆತ್ತಲಿಲ್ಲ. ಒಂದೂ ಅತ್ತಿತ್ತ ಚಲಿಸಲಿಲ್ಲ!

ರಾತ್ರಿಯಾಯಿತು. ಚಿನಾರ್ ವೃಕ್ಷವು ನಕ್ಷತ್ರಗಳಿಂದ ಒಡಗೂಡಿದ ಆಕಾಶವೆಂಬ ಕೊಡೆಯಿಂದ ಹೊದೆಯಲ್ಪಟ್ಟಿತು. ಆ ರಾತ್ರಿ, ಮೊಟ್ಟಮೊದಲನೆಯ ಸಾರಿ ಚಿನಾರ್ ವೃಕ್ಷದ ಎಲೆಗಳೆಲ್ಲವೂ ತಮ್ಮ ಸುತ್ತಲಿದ್ದ ಅಗಾಧವಾದ ಸೌಂದರ್ಯವನ್ನು ಗಮನಿಸಿದವು. ತಮ್ಮ ಹಳೆಯ ನೆನಪಿನ ಹಳವಂಡಗಳನ್ನು ಮೆಲಕು ಹಾಕುವ ಹಾಗೆ ಕೆಲವು ಎಲೆಗಳು ಪರ್ವತಗಳ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿಯತ್ತ ತಮ್ಮ ಮುಖಗಳನ್ನು ಹೊರಳಿಸಿದವು. ಪ್ರತೀ ರಾತ್ರಿಯೂ ದೊಡ್ಡ ಎಲೆಗಳು ಅತ್ತಿತ್ತ ಓಲಾಡಿ ಬರ್ ಬರ್ ಶಬ್ದ ಮಾಡುತ್ತ ಸಣ್ಣ ಎಲೆಗಳ ಮೇಲೆ ಎರಗುತ್ತಿದ್ದ ಹಾಗೆ ಅವತ್ತು ಮಾಡಲಿಲ್ಲವಾದ ಕಾರಣ ಸಣ್ಣ ಎಲೆಗಳಿಗಂತೂ ಅತ್ಯಂತ ಖುಷಿಯಾಗಿತ್ತು. ಪಾಪ, ತಮಗೆ ಬಂದೊದಗಿದ ವಿಪತ್ತಿನ ಬಗ್ಗೆ ಅವುಗಳಿಗೆ ಹೆಚ್ಚೇನೂ ತಿಳಿದಿರಲಿಲ್ಲ.

ಎಂದಿಗಿಂತಲೂ ಅವತ್ತಿನ ರಾತ್ರಿಯ ಹೊತ್ತು ಅತ್ಯಂತ ವೇಗವಾಗಿ ಓಡಿತು. ಏನೂ ಅರಿಯದ ಕೆಲವು ಎಲೆಗಳು ಗಾಢ ನಿದ್ರೆಯಲ್ಲಿ ಲೀನವಾದವು. ಆದರೆ ಹಳೆಯೆಲೆಗೆ ನಿದ್ದೆಯೇ ಬರಲಿಲ್ಲ. ಅದರ ಕಣ್ಣಿಗೆ ಗಿಡದ ಎಲೆಗಳೆಲ್ಲ ಎತ್ತರೆತ್ತರಕ್ಕೆ ಬೆಳೆದಂತೆ, ಗಾಢ ಹಸಿರಾದಂತೆ, ಹಸಿರಾಗುತ್ತಲೇ ಕಿತ್ತಳೆ ಬಣ್ಣಕ್ಕೆ ತಿರುಗಿದಂತೆ. ಕಿತ್ತಳೆ ಬಣ್ಣದವಾಗುತ್ತಿರುವಂತೆಯೇ ಹಳದಿಗೂಡುತ್ತಿದ್ದಂತೆ- ಹೀಗೆ ಏನೇನೋ ಯೋಚನೆಗಳು, ಕಲ್ಪನೆಗಳು ಮತ್ತು ಕನಸುಗಳು!

ಆದರೆ ಈಗ ಎಲ್ಲವೂ ಕೆಳಗೆ ಬೀಳುವುದರಲ್ಲಿತ್ತು!! ಬೆಳಗಾಯಿತು. ಚಿನಾರ್ ವೃಕ್ಷದಲ್ಲಿ ಮನೆ ಮಾಡಿದ್ದ ಗುಬ್ಬಚ್ಚಿಗಳಿಗೂ ಆ ಸುದ್ದಿ ಹೇಗೋ ಗೊತ್ತಾಗಿತ್ತು. ಅತ್ಯಂತ ದುಃಖ ಮತ್ತು ಭಾರವಾದ ಹೃದಯದಿಂದ ಅವೆಲ್ಲವೂ ತಮ್ಮ ಪುಟ್ಟ ಪುಟ್ಟ ಮರಿಗಳನ್ನು ಬೇರೆಡೆಗೆ ಸಾಗಿಸಿದವು.

ಗಿಡ ಕತ್ತರಿಸುವ ಕಬ್ಬಿಣದ ಕರಗಸಗಳು ಎತ್ತರಕ್ಕೆ ಬೆಳೆದಿದ್ದ ದೊಡ್ಡ ದೊಡ್ಡ ಕೊಂಬೆಗಳನ್ನು ಮೊದಲು ಕತ್ತರಿಸತೊಡಗಿದವು. ಬೃಹತ್ತಾಗಿ ಬೆಳೆದಿದ್ದ ಚಿನಾರ್ ವೃಕ್ಷದ ಕೊಂಬೆಗಳನ್ನು ಅವು ಕತ್ತರಿಸುತ್ತ ಹೋದ ಹಾಗೆ ಅದು ಸಣ್ಣ ಚೆಂಡಿನ ಆಕಾರಕ್ಕೆ ತಿರುಗಿತು.

ಮುಂದುವರೆದು ಅವರು ವೃಕ್ಷದ ಎಲ್ಲ ಟೊಂಗೆಗಳಿಗೂ ಕೈ ಹಾಕಿದರು. ಕರಗಸಗಳಿಂದ ಕತ್ತರಿಸಿ ತುಂಡು ಮಾಡಿದರು. ಕತ್ತರಿಸಿದ ಮರದ ಭಾಗಗಳಿಂದ ರಕ್ತರಸ ಸುರಿಯುತ್ತಿತ್ತು. ಕೆಳಗೆ ಬಿದ್ದ ಟೊಂಗೆಗಳು ಒರಲುತ್ತಿದ್ದವು. ಮರದಲ್ಲಿದ್ದ ವಯಸ್ಸಾದ, ಅಶಕ್ತ ಮತ್ತು ಹಳದಿ ಎಲೆಗಳು ನೆಲಕ್ಕುರುಳಿದವು!

ಮರದ ವಿವಿಧ ಭಾಗಗಳಲ್ಲಿ, ಆಳವಾದ ಹಾಗು ಅಸಾಧ್ಯ ನೋವನ್ನುಂಟು ಮಾಡುವ ಗಾಯಗಳಾಗಿದ್ದವು. ತನ್ನ ಕುಟುಂಬದ ಎಲೆಗಳೆಲ್ಲವೂ ಒಂದೊಂದಾಗಿ ನೆಲಕ್ಕೆ ಬೀಳುತ್ತಿದ್ದುದನ್ನು ನೋಡುತ್ತಿದ್ದ ಹೆಣ್ಣೆಲೆಗೆ ದುಃಖ ಒತ್ತರಿಸಿ ಬಂತು.

‘ಅವ್ವಾ, ಅವ್ವಾ, ನನ್ನ ಮೃದುಹಸಿರೆಲೆ ಗೆಳೆಯ ಯಾಕೆ ಅಳುತ್ತಿದ್ದಾನೆ? ಅವನು ನನ್ನನ್ನು ಬಿಟ್ಟು ಹೋಗುತ್ತಿದ್ದಾನೆಯೆ? ಆದರೆ ಅವ್ವಾ, ಮತ್ತೆ ನೀನು ಆಗಾಗ ಹೇಳುತ್ತಿದ್ದೆಯಲ್ಲ, ದಟ್ಟವಾದ ಬಿಳಿಮಳೆಯ ಭಯಂಕರ ಆರ್ಭಟದ ಬಗ್ಗೆ, ಅದು ಇನ್ನೂ ಆಗೇ ಇಲ್ಲವಲ್ಲ?’- ಮುಗ್ಧ ಹಸಿರೆಲೆ ಹಾಗೇ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಲೇ ಇತ್ತು.

‘ಅದನ್ನು ಹಿಮ ಎನ್ನುತ್ತಾರೆ ಮಗು. ಅದಲ್ಲ ಕಂದಾ ಇದು. ನೀನೇನೂ ಚಿಂತಿಸಬೇಡ. ನಮ್ಮಲ್ಲಿ ಯಾರೂ ಯಾರೊಬ್ಬರನ್ನೂ ಬಿಟ್ಟು ಹೋಗುತ್ತಿಲ್ಲ. ನಾವೆಲ್ಲರೂ ಕೂಡಿಯೇ ಹೋಗೋಣ’ ಮರದ ಟೊಂಗೆಗಳೆಲ್ಲವೂ ನೆಲಕ್ಕುರುಳಿದವು; ಎಲೆಗಳೆಲ್ಲ ಚೆಲ್ಲಾಪಿಲ್ಲಿಯಾದವು.

‘...ಮತ್ತೆ.....ನಿನ್ನನ್ನು ನಾನು ಭೆಟ್ಟಿಯಾಗುತ್ತೇನೆಯೇ?’- ಅನ್ನುತ್ತಾ, ಹೆಣ್ಣೆಲೆಯು ತನ್ನ ಹಳೆಯೆಲೆಯ ಕೈ ಹಿಡಿಯುತ್ತಿರುವ ಹಾಗೆಯೇ ಜಾರಿ ಕೆಳಕ್ಕೆ ಬಿತ್ತು.

ಒತ್ತರಿಸಿ ಬಂದ ದುಃಖದಲ್ಲಿ ಗಂಡೆಲೆಗೆ ಉತ್ತರ ಕೊಡಲು ಸಾಧ್ಯವಾಗುತ್ತಲಿಲ್ಲ! ‘...ಅಂದರೆ... ಅಂದರೆ, ಇದೇ ನಮ್ಮ ಕೊನೆಯೇ?’ ಆತ ತನ್ನಲ್ಲಿಯೇ ಪ್ರಶ್ನಿಸಿಕೊಂಡ. ಪ್ರಶ್ನಿಸುವುದಲ್ಲ; ಖಚಿತಪಡಿಸಿಕೊಂಡ.

ಅಯ್ಯೋ....ಹೌದು. ಈಗ ಮರದ ಬೊಡ್ಡೆಯೇ ನೆಲಕ್ಕುರುಳಿತು!

ಅವನು ತನ್ನ ಉಸಿರನ್ನು ಗಟ್ಟಿಯಾಗಿ ಹಿಡಿಯಲು ಯತ್ನಿಸಿದ. ಆದರೆ ಅದು ಸಾಧ್ಯವಾಗಲಿಲ್ಲ! ಇಲ್ಲ, ಸಾಧ್ಯವಾಗಲೇ ಇಲ್ಲ!

ಎತ್ತರೆತ್ತರಕ್ಕೆ ಬೆಳೆದಿದ್ದ ಚಿನಾರ್ ವೃಕ್ಷವು ಈಗ ಗಾಳಿಯ ರಭಸದೊಂದಿಗೆ ಹೊಯ್ದಾಡುತ್ತ ಉರುಳಿ ಭೂಮಿತಾಯಿಯ ಮಡಿಲಿಗೆ ಬಿತ್ತು!

ಉಳಿದ ಎಲೆಗಳೆಲ್ಲವೂ ಬರ್ ಬರ್ ಶಬ್ದದೊಂದಿಗೆ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ, ಕೆಲವು ದೂರ ದೂರಕ್ಕೆ ಹಾರಾಡುತ್ತ, ಮತ್ತೆ ಕೆಲವು ರಕ್ತಸಂಬಂಧದ ತಮ್ಮ ಬಂಧು-ಬಾಂಧವರನ್ನು ಅಗಲುತ್ತ, ಒಂದರ ಮೇಲೊಂದು ಭಾರ ಹಾಕುತ್ತ ನೆಲಕ್ಕೆ ಬಿದ್ದು ಅಪ್ಪಚ್ಚಿಯಾಗತೊಡಗಿದವು.

ಒಂದಾನೊಮ್ಮೆ ಜೀವಕಳೆಯಿಂದ ನಳನಳಿಸುತ್ತಿದ್ದ ಚಿನಾರ್ ವೃಕ್ಷ ಈಗ ನೆಲಕ್ಕೊರಗಿತ್ತು; ನಿರ್ಜೀವಿಯಾಗಿ.

(ಕಾಶ್ಮೀರಿಗಳ ಇತಿಹಾಸ, ಪುರಾಣ, ವರ್ತಮಾನ-ಹೀಗೆ ಎಲ್ಲವುಗಳೊಂದಿಗೂ ಗಾಢವಾಗಿ ಬೆಸೆದುಕೊಂಡಿರುವ ‘ಚಿನಾರ್ ವೃಕ್ಷ’ವು ಅವರ ಪರಂಪರೆಯ ಒಂದು ಮಹಾನ್ ರೂಪಕದಂತಿದೆ. ಕಾಶ್ಮೀರಿಗಳ ಅಸ್ಮಿತೆಯ ಸಂಕೇತವಾಗಿಯೂ ಈ ವೃಕ್ಷ ಮಹತ್ವ ಪಡೆದಿದೆ. ಆಧುನಿಕತೆಯ ಭರಾಟೆಯಲ್ಲಿ ಅದು ಅವಸಾನದ ಅಂಚಿಗೆ ಹೋಗುತ್ತಿರುವುದು ದೊಡ್ಡ ಪರಂಪರೆಯೊಂದರ ನಾಶವನ್ನೇ ಸೂಚಿಸುತ್ತದೆ. ಈ ನೋವೇ ಇಲ್ಲಿ ಕಥೆಯಾಗಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT