ಕಾಫೀ

7

ಕಾಫೀ

Published:
Updated:
Deccan Herald

ಅದು ಒಂದು ಮಳೆಯೊಂದಿಗಿನ ಬೆಳಗು. ರಾತ್ರಿಯ ಆರ್ಭಟಕ್ಕೆ ಸಂಬಂಧವಿಲ್ಲದೆ, ಸಣ್ಣ ತುಂತುರು ಮಾತ್ರವೇ ಉಳಿದಿತ್ತು. ಆದರೂ ಮಳೆಯ ತೇವದ ಗಾಳಿಗೆ ದಟ್ಟವಾಗಿ ಅಂಟಿಕೊಂಡಿತ್ತು. ಇಂದು ಕೆಲಸಕ್ಕೆ ಹೋಗುವ ರಗಳೆ ಇಲ್ಲ ಎಂಬುದೇ ಆ ದಿನದ ಸಂತೋಷವನ್ನು ದ್ವಿಗುಣಗೊಳಿಸಿತು. ಒಂದು ಸ್ಟಾರ್ ಹೋಟೆಲಿನಲ್ಲಿ ನಡೆಯಲಿರುವ ಸಣ್ಣ ಸೆಮಿನಾರೊಂದಕ್ಕೆ ಮಾತ್ರ ಹೋಗಬೇಕಿತ್ತು. ‘ಏನು ಉಡುವುದು?’ ಎಂಬ ಆಲೋಚನೆಯೊಂದಿಗೆ ಸ್ನಾನದ ಮನೆಯ ಒಳಗೆ ಹೋಗಿ, ಅದೇ ಯೋಚನೆಯೊಂದಿಗೆ ಹೊರಗೆ ಬಂದೆ. ಎಂದಿನಂತೆ ‘ಇಂಕಿ ಪಿಂಕಿ ಪಾಂಕಿ’ಯೇ ಹಾಕಬೇಕು. ಗಂಟೆ ಏಳೂವರೆ. ದಡದಡ ಎಂದು ಹೊರಟು, ಟ್ರಾಫಿಕ್ಕಿನಲ್ಲಿ ಈಜಿ, ಒಂಬತ್ತು ಗಂಟೆಗೆ ಅಲ್ಲಿ ಹಾಜರಾದೆ.
ಸೆಮಿನಾರ್ ನಡೆಯುವ ಹಾಲ್ ನೊಣ ಹೊಡೆಯುತ್ತಿತು. ಗುಂಪು ಇನ್ನೂ ಸೇರಿರಲಿಲ್ಲ. ಆತುರಪಟ್ಟು ಅರ್ಧ ಗಂಟೆ ಮುಂಚೆ ಗೇರುಬೀಜದಂತೆ ಮೂಗು ಮುಂದುಮಾಡಿಕೊಂಡು ಬಂದದ್ದು ತಿಳಿಯಿತು. ಒಂದು ಕಾಫೀ ಕುಡಿಯಬಹುದಲ್ಲವೇ ಎಂದು ತೋಚಿ, ಹಾಲಿನ ಹೊರಗೆ ಬಂದು ಹೋಟೆಲಿನ ಸಿಬ್ಬಂದಿಯ ಬಳಿ ದಾರಿ ಕೇಳಿ ಕಾಫಿಗೆ ಬಂದೆ.
ಕಾಫೀ ಶಾಪ್ ಖಾಲಿಯಾಗಿತ್ತು. ಒಂದು ಮೂಲೆಯಲ್ಲಿ ಕೋಟು ಸೂಟು ಧರಿಸಿದ ಒಬ್ಬನೇ ಒಬ್ಬ ಪತ್ರಿಕೆಯನ್ನು ತಿರುವುತ್ತಿದ್ದ. ನಾನು ಗಮನಿಸುವುದನ್ನು ನೋಡಿ ತಲೆ ಎತ್ತಿ ನೋಡಿದ. ಹೋಟೆಲ್ ಸಿಬ್ಬಂದಿ ಇರಬೇಕು! ಇಲ್ಲವೇ, ನನ್ನಂತೆ ಗೇರುಬೀಜವಾಗಿರಬೇಕು.
‘ಒಂದು ಕಫೇ ಲಾಟ್ಟೆ’ ಎಂದು ಹೇಳುತ್ತಲೇ ಕುಳಿತೆ.
ಸಿಬ್ಬಂದಿ ಆರ್ಡರ್ ತೆಗೆದುಕೊಂಡು ಹೋದಮೇಲೆ, “ಇಲ್ಲಿ ಕೆಪೋಚಿನೋ ಚೆನ್ನಾಗಿರುತ್ತೆ” ಪಕ್ಕದಲ್ಲಿ ಗಂಡಸಿನ ದನಿ ಕೇಳಿ ತಲೆ ಎತ್ತಿದೆ.
“ಎಕ್ಸ್‌ಕ್ಯೂಸ್ ಮೀ?”
“ಕೆಪ್ಪೋಚಿನೋ ಈಸ್ ಗುಡ್ ಹಿಯರ್” ಎಂದು ಮೊದಲು ಹೇಳಿದ್ದನ್ನೇ ಅನುವಾದಿಸಿದ.
“ನೀವು ಈ ರೆಸ್ಟೋರೆಂಟ್‌ ಶೆಫಾ?”
“ಹಾಗಿದ್ದರೆ ಚೆನ್ನಾಗಿರೋದು!” ಎಂದು ಹೇಳಿ ನಕ್ಕ.
ಮತ್ತೊಬ್ಬರ ಪ್ರೈವಸಿಯಲ್ಲಿ ಯಾವ ಮುಂದಾಲೋಚನೆಯೂ ಇಲ್ಲದೆ ಮೂಗು ತೂರಿಸಲು ಹೇಗೆ ಸಾಧ್ಯ ಎಂಬ ಉರಿ ಎದ್ದರೂ, ಅವನ ಆಕಾರ, ನಗು ಒಂದು ಕ್ಷಣ ತಬ್ಬಿಬ್ಬು ಮಾಡಿತು. ಆಕರ್ಷಕ ನಗುವಿಗೆ ಸಾಲದ ಹಲ್ಲುಗಳ ಅವಶ್ಯಕತೆ ಇಲ್ಲ ಎಂಬುದನ್ನು ನಿರೂಪಿಸುವಂತಿದ್ದ. ‘ನಗುವನ್ನು ನೋಡಿ ಯಾರೆಂದು ತಿಳಿದುಕೊಳ್ಳಲು ಸಾಧ್ಯವೇ?’
ಇವನು ತಮಿಳು ಮಾತನಾಡುವವನೆಂದು ಅವನ ಇಂಗ್ಲಿಷ್ ಹೇಳಿತು. ಬೇರೆಯ ಊರು. ಖಂಡಿತ ಹೋಟೆಲಿನ ಆಸಾಮಿ ಅಲ್ಲ. ಅದೇ ಸೆಮಿನಾರಿಗೆ ಬಂದವನಲ್ಲ. ನನ್ನ ಮನಸ್ಸನ್ನು ಓದಿದವನಂತೆ, “ಒಳ್ಳೆಯ ವೆದರ್ ಇವತ್ತು. ಹೆದರುತ್ತಲೇ ಬಂದೆ ಈ ಊರಿನ ಬಿಸಿಲಿಗೆ...”
ನಾನು ಕೇಳದೇನೇ ಮೂರು ವಿಷಯಗಳು ತಿಳಿದವು. ಮೆಲ್ಲಗೆ ನಗುತ್ತಾ ‘ಹೌದು’ ಎಂಬಂತೆ ತಲೆಯಾಡಿಸಿದೆ.
“ನನಗೆ ಪ್ರೋಗ್ರಾಮ್ ಶುರುವಾಗಲು ಇನ್ನೂ ಒಂದು ಗಂಟೆ ಇದೆ. ನಿಮಗೆ?”
ಬೇರೆ ಸೆಮಿನಾರ್ ಎಂಬ ನಾಲ್ಕನೆ ವಿಷಯವೂ ತಿಳಿಯಿತು.
ಹಿಂದೂ ಮುಂದೂ ತಿಳಿಯದವರ ಬಳಿ ಹೇಗೆ ಮಾತನಾಡುವುದು? ಹೆಣ್ಣಿಗೆ ಇರುವ ಆತ್ಮರಕ್ಷಣೆಯ ಅಲಾರಾಮ್‌ ನನ್ನ ತಲೆಯೊಳಗೆ ಹೊಡೆಯಲು ತೊಡಗಿತು; ಸ್ವ ಇಚ್ಛೆಯಿಂದ.
“ಕುಳಿತುಕೊಳ್ಳಬಹುದೇ?’’ ಕುರ್ಚಿಯನ್ನು ಎಳೆಯುತ್ತಲೇ ಕೇಳಿದ.
ಬೇಡ ಎಂದು ಹೇಗೆ ಹೇಳುವುದು ಎಂದು ಯೋಚಿಸಿ ಮುಗಿಸುವುದರೊಳಗೇ ಕುಳಿತುಬಿಟ್ಟ -ಎದುರಿನಲ್ಲಿ.
ಕಾಫಿ ನೀಡಿ ಅವನು, “ಕೆಪ್ಪೋಚ್ಚಿನೋ?” ಅಂದ.
“ನೋ ಥ್ಯಾಂಕ್ಸ್” ಎಂದೆ.
“ನಿಮ್ಮ ಪ್ರೋಗ್ರಾಮ್ ಎಷ್ಟು ಗಂಟೆಗೆ ?” ಎರಡನೇ ಸಲ ಕೇಳಿದ.
“ಇನ್ನು ಹದಿನೈದು ನಿಮಿಷ ಇದೆ.”
“ಓ ಆ ಕಂಪನಿಯಾ?” ಎಂದು ಕಂಪನಿಯ ಹೆಸರು ಹೇಳಿದ.
“ಹೌದು...”
“ನೀವು ಏನಾಗಿದ್ದೀರಿ ಅಲ್ಲಿ?”
“ಗುಡಿಸಿ ಸಾರಿಸೋ ಕೆಲಸ” ಅಂತ ಹೇಳಬೇಕೆಂದುಕೊಂಡೆ. ಹಿಂದುಮುಂದು ತಿಳಿಯದ ಒಬ್ಬರ ಬಳಿ ವೈಯಕ್ತಿಕ ವಿವರಗಳನ್ನು ಕೇಳಲು ಹೇಗೆ ಸಾಧ್ಯ ಇವರಿಂದ?
“ಯಾತಕ್ಕೆ ಕೇಳ್ತಾ ಇದ್ದೀರಾ?” ಎಂದೆ. ಆದರೂ, ಯಾವ ಉದ್ದೇಶದಿಂದ ಹಿಂದುಮುಂದು ತಿಳಿಯದ ಇವನೊಂದಿಗೆ ಯಾಕೆ ಮಾತನಾಡುತ್ತಿದ್ದೇನೆ? ಎಂದು ಒಳಮನಸ್ಸು ಕೇಳಿತು.
“ಅಲ್ಲಾ, ಇದೆ ಊರಿನವರು ನೀವು! ಯಾಕೆ ಇಷ್ಟು ಬೇಗ ಬಂದಿರಿ?”
ನಾನು ಯಾವಾಗ ಬಂದರೆ ಇವನಿಗೇನು? ಅಂದುಕೊಂಡೆ. ಆದರೆ, ಹೇಳಲಿಲ್ಲ. ಬುದ್ಧಿ ತಿಳಿಯಾಗಿ ಯೋಚಿಸುವಷ್ಟು ಬಾಯಿ ಸಹಕರಿಸಲು ನಿರಾಕರಿಸಿತು.
“ಟ್ರಾಫಿಕ್ಕಿಗೆ ಹೆದರಿ ಮನೆಯಿಂದ ಬೇಗನೆ ಹೊರಟುಬಿಟ್ಟೆ.”
“ಅಯ್ಯೋ ಚೆನ್ನೈಯಲ್ಲಿ ಇದು ಒಂದು ದೊಡ್ಡ ಸಮಸ್ಯೆ...” ಎಂದ, ತಕ್ಷಣದ ಉತ್ತರ ಎಂಬಂತೆ.
ಬಹಳ ಊರು ಸುತ್ತಿರುವವನಂತೆ ಕಾಣುತ್ತೆ ಎಂದು ಅಂದುಕೊಂಡೆ. “ಹೌದು, ಮೆಟ್ರೊ ರೈಲು ಕೆಲಸ ನಡೆಯುತ್ತಿದೆಯಲ್ಲಾ...” ಎಂದು ಸಂಬಾಳಿಸಿದೆ.
“ಅದಲ್ಲದೆ ಕಾರು – ಬೈಕ್ ಎಲ್ಲಾ ತುಂಬಾನೇ ಜಾಸ್ತಿ ಆಗಿದೆ ಚೆನ್ನೈನಲ್ಲಿ” ಎಂದು ನನ್ನನ್ನು ಸಮಾಧಾನಪಡಿಸುವಂತೆ ಹೇಳುವಾಗ, ‘ಬೆಳಗ್ಗೆ ಬೆಳಗ್ಗೆ ಇವನ ಜತೆ ಯಾಕೆ ಟ್ರಾಫಿಕ್ ರಾಮಸ್ವಾಮಿ ತರಾ ಮೊಂಡುವಾದ ಮಾಡಬೇಕಿದೆ?’ ಎಂದು ಅಂದುಕೊಂಡರೂ, ನನಗೆ ಅರಿವಿಲ್ಲದೆ, “ಮ್ ಹೌದು” ಎಂದು ಉತ್ತರಿಸಿದೆ.
“ಮನಸ್ಸೊಳಗೆ ಏನೋ ಅಂದುಕೋತೀರಾ, ಆದರೆ ಬೇರೆ ಏನನ್ನೋ ಹೇಳ್ತೀದ್ದೀರಾ!...”
‘ಅಯ್ಯೋ ಇವನ ಬಗ್ಗೆ ಅಂದುಕೊಂಡದ್ದೆಲ್ಲಾ ಗೊತ್ತಾಗಿರುತ್ತೋ?’
“ಯೂ ಥಿಂಕ್ ಅಲೌಡ್” ಎಂದ.
ಟೀವಿ ಷೋನಲ್ಲಿ, ನೀವು ಮನಸ್ಸಿನಲ್ಲಿ ಯಾವುದಾದರೂ ನಂಬರನ್ನು ಇಟ್ಟುಕೊಳ್ಳಿ ಎಂದು ಹೇಳಿ, ಆ ನಂಬರ್ ಬರೆದ ಚೀಟಿಯನ್ನು ಎತ್ತಿಕೊಡುವ ಕೋಟು ಸೂಟು ಧರಿಸಿದ ಜಾದೂಗಾರನಂತೆ ಕಾಣುವ ಇವನಿಗೆ ಟೋಪಿ, ಕೈಯಲ್ಲೊಂದು ಮಂತ್ರದಂಡ ಮಾತ್ರವೇ ಮಿಸ್ಸಿಂಗ್.
ಒಳ್ಳೆಯ ಸಮಯಕ್ಕೆ ಕಾಫೀ ಬಂತು. ಮಗ್ಗನ್ನು ಎರಡು ಕೈಗಳಿಂದಲೂ ಹಿಡಿದು ಇನ್ನು ಮಾತನ್ನು ನಿಲ್ಲಿಸುತ್ತಾನೆ ಎಂಬ ನಂಬಿಕೆಯಲ್ಲಿ ಕುಡಿಯಲು ತೊಡಗಿದೆ.
“ಕಾಫೀ ಮಗ್ಗನ್ನು ಹೀಗೇ ಹಿಡಿಯುತ್ತೀರಾ? ನಿಮ್ಮ ಮನೆಯಲ್ಲಿ ಸಣ್ಣ ಮಗು ಇದೆಯೇ?”
“ಹಾ... ಹಾ ಯಾಕೆ?”
“ಮಗುವಿಗೆ ಹೀಗೆ ಹಿಡಿಯಲು ಕಲಿಸಿಕೊಡುತ್ತಾರೆ. ಅದಕ್ಕೇ ಕೇಳಿದೆ” ಎಂದ.
“ಓ...” ಎಂದು ಒಂದು ಪದದಲ್ಲಿ ಹೇಳಿಮುಗಿಸುವಾಗ, “ಕಾಫೀ ಚೆನ್ನಾಗಿದೆಯೇ?” ಎಂದು ಕೇಳಿದ.
“ಕಳಪೆ...”
“ನಾನು ಹೇಳಿದೆನಲ್ಲಾ, ಇಲ್ಲಿ ಇದು ಚೆನ್ನಾಗಿರೋದಿಲ್ಲಾಂತ. ನಾನು ನಿನ್ನೆ ಇದೇ ಕಳಪೆಯನ್ನೇ ಕುಡಿದೆ.”
ಏನೋ ಒಂದು ಆಕರ್ಷಣೆ ಇವನ ಬಳಿ. ಮಾತು ಚುರುಕಾಗಿದ್ದರೂ, ಇವನು ಗೇರುಬೀಜದ ಥರಾ ಕಾಣುತ್ತಿಲ್ಲ. ಅಥವಾ ಹಾಗೆ ಯಾಕೆ ತೋಚುತ್ತಿಲ್ಲ? ಎಂಬ ಆಲೋಚನೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟೆ.
ಸಮಯ ಸಿಕ್ಕಾಗ ಗುಬ್ಬಚ್ಚಿ ಮೆದುಳನ್ನು ಕೆದಕಬಹುದು. ಆದರೆ ತಲೆಯೊಳಗೆ ಹೊಡೆಯುತ್ತಿದ್ದ ಸುರಕ್ಷತೆಯ ಅಲಾರಾಮಿನ ಶಬ್ದ ಕಡಿಮೆಯಾದಂತೆ ತೋರಿತು.
“ಆಕ್ಚುಯಲಿ, ಈ ಕಾಫೀ ಶಾಪಿನ ಕಾಫೀ ಟೇಸ್ಟ್ ಎಲ್ಲಾ ಪರದೇಶದ ನಾಲಿಗೆಗೆ ಸರಿ. ನಾವು ನಮ್ಮ ಟೇಸ್ಟಿಗೆ ತಕ್ಕಂತೆ ಆರ್ಡರ್ ಮಾಡಬೇಕು...”
“ಮ್...”
“ಈಗ ಕೋಲ್ಡ್ ಕಾಫೀಯನ್ನೇ ತೆಗೆದುಕೊಳ್ಳಿ, ಬಹುಪಾಲು ಲೈಟಾಗೆ ಇರುತ್ತೆ. ಸಿಂಗಲ್ ಶಾಟ್‌ಗೆ ಬದಲು ಡಬಲ್ ಶಾಟ್ ಎಕ್ಪ್ರೆಸ್ಸೋ ಹಾಕೋದಿಕ್ಕೆ ಹೇಳಿ, ಸೂಪರಾಗಿರುತ್ತೆ...”
ಹೇಗೆ, ಯಾರು ಎಂದು ತಿಳಿಯದ ಒಬ್ಬ ಹೆಣ್ಣಿನ ಬಳಿ, ತನಗೆ ತಿಳಿದದ್ದೆಲ್ಲವನ್ನೂ ಈ ಗಂಡಸರಿಂದ ಬಡಬಡಿಸಲು ಹೇಗೆ ಸಾಧ್ಯ? ಇವನೂ ಎಲ್ಲರಂತೆ ಜೊಲ್ಲು ಪಾರ್ಟೀನೇ ಎಂದು ಸುಲಭವಾಗಿ ಹೇಳಬಹುದು. ಆದರೆ, ಹಾಳಾದ ಕಾಫಿಗಿಂತ ಅವನ ಮಾತು ಸ್ವಲ್ಪ ಸ್ವಾರಸ್ಯವಾಗೇ ಇತ್ತು.
ಅವನ ಮಾತಿನ ಇಪ್ಪತ್ತು ನಿಮಿಷಗಳು ಕಾಫಿಯಲ್ಲಿ ಒಂದು ಮಿನಿ ಸ್ನಾನ ಮಾಡಿದಂತೆ ಇತ್ತು. ಇವನು ಕಾಫಿಯ ಬಗ್ಗೆ ಬಹಳ ಓದಿಕೊಂಡಿರಬೇಕು. ಅಥವಾ, ಕಾಫೀ ಶಾಪಿನಲ್ಲಿ ಕೆಲಸ ಮಾಡಿರಬೇಕು.
ಮತ್ತೆ ಮತ್ತೆ ವಾಚು ನೋಡಿದೆ. “ಅಯ್ಯೋ, ಲೇಟಾಯಿತು.”
“ನೈಸ್ ಟಾಕಿಂಗ್ ಟು ಯೂ ಮೇಂ.”
“ನಾನೇ ಮಾತಾಡಿದ್ದು ಇಷ್ಟು ಹೊತ್ತು!?”
ಮತ್ತೆ ಅದೇ ಆಕರ್ಷಕ ನಗು.
ಅದು ಒಂದು ಮಿನಿ ಹಾಲ್. ಸ್ವಾಗತ ಭಾಷಣದಿಂದ ಸೆಮಿನಾರ್ ಪ್ರಾರಂಭವಾಯಿತು. ಇನ್ನೂರು ಜನ ಕುಳಿತುಕೊಳ್ಳುವ ಕೊಠಡಿಯಲ್ಲಿ ಕಾಫೀ ಕೆಫೆಯ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗಿ ತಲೆಗಳು ತುಂಬಿದ್ದವು. ಸ್ವಾಗತ ಭಾಷಣ ಮುಗಿದು, ಒಬ್ಬರ ನಂತರ ಒಬ್ಬರು ವೇದಿಕೆಯ ಮೇಲೆ ಮಾತನಾಡಿ ಮುಗಿಸಿದರು. ಯಾವುದೋ ಒಂದು ಪ್ರೆಸೆಂಟೇಷನಿಗಾಗಿ ಹಾಲಿನಲ್ಲಿ ಭಾಷಣಕಾರರೊಬ್ಬರು ಲೈಟನ್ನು ಆರಿಸಿದಾಗಲೇ ತಿಳಿಯಿತು, ಒಂದಿಷ್ಟು ಜನರ ಹೊರತಾಗಿ ತಲೆ ಬಾಗಿಸಿದ ಎಲ್ಲರ ಮುಖದಲ್ಲೂ ತಿಳಿನೀಲಿ ಬೆಳಕು. ‘ಕೈಂಡ್ಲಿ ಸ್ವಿಚ್ ಆಫ್ ಯುವರ್ ಮೊಬೈಲ್ ಫೋನ್ಸ್’ ಎಂಬ ಸೂಚನೆಯನ್ನು ಕೇಳಿ ಫೋನಿನ ಮೇಲೆ ಬೆರಳಾಡಿಸುತ್ತಿದ್ದವರು ಸೆಟೆದು ಕುಳಿತರು.
ಮಾತಿನಿಂದ ಒಬ್ಬರನ್ನು ವಶೀಕರಿಸಿ, ಗಮನ ಚದುರದಂತೆ ಕೇಳಿಸುವುದು ಒಂದು ವಿಶೇಷ ಸಾಮರ್ಥ್ಯ. ಸಪ್ಪೆ ವಿಷಯವನ್ನೂ ಸಹ ಕೆಲವರಿಂದ ಮಾತ್ರವೇ ಸ್ವಾರಸ್ಯಗೊಳಿಸಲು ಸಾಧ್ಯ. ಎಲ್ಲರಿಗೂ ಆ ಕಲೆ ಕರಗತವಾಗಿರುವುದಿಲ್ಲ. ಟಕ್ ಎಂದು ಬೆಳಗಿನ ಕಾಫೀ ಶಾಪ್ ಸಂಭಾಷಣೆ ನೆನಪಿಗೆ ಬಂತು. ಅದರೊಂದಿಗೆ ಕಾಫಿಗೆ ಹಣ ಕೊಡದೆ ಓಡಿಬಂದದ್ದು ಆಗಲೇ ನೆನಪಾಯಿತು. ‘ಸರಿ, ಬ್ರೇಕ್‌ನಲ್ಲಿ ನೆನಪಿಂದ ಹೋಗಿ ಕೊಟ್ಟು ಬರಬೇಕು’ ಎಂದು ಮೆದುಳಿಗೆ ಒಂದು ಮೆಸೇಜನ್ನು ಕಳುಹಿಸಿಕೊಟ್ಟೆ. ಮೆದುಳು ಎಚ್ಚರಗೊಂಡಿತು. ಜತೆಗೆ, ಆ ಆಕರ್ಷಕ ನಗುವನ್ನು ನೆನಪುಮಾಡಿತು. ಮೈಕಿನಲ್ಲಿ ಕೇಳಿದ ದನಿ ಮನಸ್ಸಿನೊಳಗೆ ಇಳಿಯಲು ನಿರಾಕರಿಸಿತು.
ಹನ್ನೊಂದು ಗಂಟೆಗೆ ಟೀ ಬ್ರೇಕ್. ಲಾಬಿಯಲ್ಲಿ ಜನ ಹೆಚ್ಚಾಗಿದ್ದರು. ಉಳಿದ ಸೆಮಿನಾರಿನ ಹಾಲುಗಳಲ್ಲೂ ಟೀ ಬ್ರೇಕ್ ಅಂತ ಕಾಣುತ್ತೆ. ಕಾಫೀ ಶಾಪ್.
“ಹಲೋ...” ಅದೇ ಕಾಫಿಯ ದನಿ, ಅದೇ ಆಕರ್ಷಕ ನಗು.
“ಹಲೋ! ನಿಮಗೆ ಟೀ ಬ್ರೆಕಾ?”
“ಹೌದು, ನಿಮಗೆ ಕಾಟ ಕೊಟ್ಟಿದ್ದಕ್ಕೆ ನಾನೇ ಬಿಲ್ ಕೊಟ್ಟುಬಿಟ್ಟೆ.”
ನಿರೀಕ್ಷಿಸಿದ್ದೇ.
“ಥ್ಯಾಂಕ್ ಯೂ, ದುಡ್ಡು ತೆಗೆದುಕೊಳ್ಳಿ” ಹಣ ನೀಡಿದೆ.
‘‘ನೋ ಥ್ಯಾಂಕ್ಸ್. ನಾನು ಹಣ ತೆಗೆದುಕೊಳ್ಳಲ್ಲ.”
“ಇದನ್ನ ಒಂದು ಸರ್ವೀಸಾಗಿ ಮಾಡ್ತಾ ಇದ್ದೀರಾ?”
ನಗುತ್ತಲೇ, “ಇಷ್ಟೊಂದು ಒಳ್ಳೆಯ ಕೆಲಸ ಎಲ್ಲಾ ಸರ್ವೀಸಿನಲ್ಲಿ ಬರೋದಿಲ್ಲಾ ರೀ...”
“ಪ್ಲೀಸ್ ತೆಗೆದುಕೊಳ್ಳಿ.”
“ನಾನು ಹಣ ತೆಗೆದುಕೊಳ್ಳೋದಿಲ್ಲ...”
“ಚೆಕ್ ಅಕ್ಸೆಪ್ಟ್ ಮಾಡ್ತೀರಾ?”
ಅದೇ ನಗು. ಉಳಿದ ಸೆಮಿನಾರನ್ನು ಗಮನಿಸಿದಂತೆಯೇ.
“ಕಾಫಿ ಕೊಡಿಸಿಯೂ ಹಿಂತಿರುಗಿಸಬಹುದು. ಈಗಲೇ ಕೊಡಬೇಕು ಅಂತ ಏನೂ ಇಲ್ಲ...”
ಇದು ಯಾವ ತಲೆನೋವು? ಒಳ್ಳೇ ಬಿಸಿನೆಸ್‌ಮನ್‌ ಆಗಿರಬೇಕು ಈ ಕಾಫೀಮೆನ್. ಆದರೂ, ತಕ್ಷಣ ಕಾಫೀ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಲು ಬಾಯಿ ಬರಲಿಲ್ಲ. ಬಹುಶಃ ನಾನೂ ಇದನ್ನು ಅಪೇಕ್ಷಿಸುತ್ತಲೇ ಇದ್ದೆನೋ? ಸುರಕ್ಷತೆಯ ಅಲಾರಾಮ್‌ ಏನಾಯ್ತು? ಬಹಳ ಸಮಯದಿಂದ ಶಬ್ದವೇ ಇಲ್ಲ.
“ಮ್, ಬೈ...”
“ಫರ್ ನೌ...”
ನಕ್ಕು ನಡೆದೆ. ಕಾಫೀ ಕುಡಿಯಲು ಒಪ್ಪಿಕೊಂಡು ಬಂದನೇ? ಇಲ್ಲ, ಆ ಕ್ಷಣಕ್ಕೆ ಓಕೇ ಹೇಳಿ ಕಳಚಿಕೊಳ್ಳುವ ಐಡಿಯಾನೇ ಎಂದು ಗುಬ್ಬಚ್ಚಿ ಮೆದುಳನ್ನು ತಟ್ಟಿ ಎಬ್ಬಿಸಿದೆ. ‘ಕಾಫೀ ತಾನೇ... ಕೊಡಿಸಿದರಾಯ್ತು’ ಎಂದು ಗ್ರೀನ್ ಸಿಗ್ನಲ್ ಕೊಟ್ಟು ಮತ್ತೆ ಕಾಣೆಯಾಯಿತು.
‘ಇವನಿಗೆ ಕಾಫೀ ಶಾಪಿನಲ್ಲಿಯೇ ಕೆಲಸವೋ? ಇಲ್ಲ ನನಗಾಗಿಯೇ ಕಾಯುತ್ತಿದ್ದನೋ? ಕಾಫೀ ಯಾವಾಗ ಕುಡಿಯೋದು? ಕಾಫೀ ಶಾಪಿನಲ್ಲಿ ಮತ್ತೆ ಕಾಯುತ್ತಿರುತ್ತಾನೆಯೇ?...’ ಎಷ್ಟೊಂದು ಪ್ರಶ್ನೆಗಳು! ಬ್ಯಾಂಕಿನಲ್ಲಿ ಲೋನ್ ತೆಗೆದುಕೊಂಡು ಕಾಫಿ ಕುಡಿದಂತೆ, ಒಂದೇ ಒಂದು ಕಾಫೀ ಸಾಲ ತಲೆಯನ್ನು ಕೊರೆಯಿತು. ಲಂಚ್ ಬ್ರೇಕಿನಲ್ಲೇ ಕುಡಿದುಬಿಟ್ಟರೆ ಒಳಿತು ಎಂದು ತೋಚಿತು. ಒಂದು ‘ಕೆಲಸ’ ಮುಗಿಸಿದ ತೃಪ್ತಿಯಲ್ಲಿ ಮೆದುಳು ಫ್ರೀಯಾಗಿ, ಮಧ್ಯಾಹ್ನದ ಸೆಮಿನಾರನ್ನು ಶಿಸ್ತಿನಿಂದ ಗಮನಿಸಬಹುದು.
ಮಧ್ಯಾಹ್ನ ಒಂದು ಗಂಟೆಗೆ ಲಂಚ್ ಬ್ರೇಕ್. ಬಫೆ ಲಂಚನ್ನು ಮೇಯ್ದು, ಹಾಲಿನ ಹೊರಗೆ ಬಂದೆ. ‘ಅವನಿಗೂ ಲಂಚ್ ಬ್ರೇಕೋ?’ ಲಾಬಿಯಲ್ಲಿದ್ದ ಗುಂಪಿನ ಮೇಲೆ ಕಣ್ಣು ಹಾಯಿತು. ಕಾಣಲಿಲ್ಲ. ‘ಯಾತಕ್ಕಾಗಿ ಅವನನ್ನು ಹುಡುಕುತ್ತಿದ್ದೇನೆ? ಓ ಕಾಫಿಗೆ ಹಣ ಕೊಡಬೇಕು. ಅಥವಾ ಕಾಫಿಯನ್ನೇ ಕೊಡಿಸಬೇಕು.’ ಒಮ್ಮೆ ಮನಸ್ಸಿನಲ್ಲಿಯೇ ಹೇಳಿಕೊಂಡೆ. ‘ಕಾಫೀ ಶಾಪಿನಲ್ಲಿರುವನೋ?’ ಒಂದು ಹೆಜ್ಜೆ ಹೋಗಿ ನೋಡಿ ಬರುವ.
ಕಾಣಲಿಲ್ಲ. ‘ಹೊರಟುಹೋದನೇ?’
ತಳಮಳದಿಂದ ಉಳಿದ ಸೆಮಿನಾರನ್ನು ಶ್ರದ್ಧೆಯಿಂದ ಕೇಳಲಾಗಲಿಲ್ಲ. ಸ್ಕೂಲಿನಲ್ಲಿ ಓದುವಾಗ ‘ರೋಜಾ’ ಸಿನಿಮಾ ನೋಡಿ, ಮಾರನೆಯ ದಿನ ಯಾವ ತರಗತಿಯನ್ನು ಗಮನಿಸಲಾಗದೆ ಒದ್ದಾಡಿದ್ದು ನೆನಪಾಯಿತು.
‘ನಾನಿನ್ನೂ ಬೆಳೆಯಲೇ ಇಲ್ಲವೇ?’
ಸೆಮಿನಾರ್ ಮುಗಿಸಿ ಹೊರಬರಲು ಸಂಜೆ ನಾಲ್ಕು ಗಂಟೆ ಆಯಿತು. ಗುರುತಿದ್ದವರಿಗೆಲ್ಲಾ ‘ಬೈ’ ಹೇಳಿ ಹೊರಡಲು ಮತ್ತೆ ಅರ್ಧ ಗಂಟೆ ಹಿಡಿಯಿತು. ಯಾರಾದರೂ ನಾಳೆ ಆಫೀಸಿನಲ್ಲಿ ಸೆಮಿನಾರ್ ಬಗ್ಗೆ ಕೇಳಿದರೆ, ಬಹುಶಃ ಕಾಫಿಯ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವೆ.
ಹೊರಗೆ ಬಂದ ಮೇಲೆ ಮತ್ತೆ ಅವನನ್ನು ಹುಡುಕಿದೆ. ‘ಇನ್ನೂ ಅವನ ಸೆಮಿನಾರ್ ಮುಗಿಯಲಿಲ್ಲವೇ?’ ಕಾಫೀ ಶಾಪಿನಲ್ಲಿ ಕಡಿಮೆ ಜನ. ಸಾಲಗಾರನನ್ನು ಕಾಣಲಿಲ್ಲ. ‘ವೆಯ್ಟ್ ಮಾಡಲೇ?’ ಬೇಡ.
ಲಿಫ್ಟ್‌ನಿಂದ ಇಳಿದು ಬಂದು ರಿಸೆಪ್ಷನ್ ಲಾಬಿಯನ್ನು ದಾಟಿ ಬಂದೆ. ಬೆಳಗ್ಗೆ ಕುಡಿದ ಕಳಪೆ ಪುಕ್ಕಟೆ ಕಾಫೀ ಗಂಟಲಲ್ಲಿ ಕಹಿಯಾಗಿತ್ತು. ಅವನನ್ನು ಕಾಣದೆ ಹೋಟೆಲಿನಿಂದ ಹೊರಟಿದ್ದರಿಂದ ಸ್ವಲ್ಪ ನಿರಾಶೆಯಾಗಿತ್ತು. ರಿಸೆಪ್ಷನ್ ಲಾಬಿಯಲ್ಲಿ ಅವನಂತೆಯೇ ಯಾರೋ ಒಬ್ಬ ವಯಸ್ಸಾದ ಆಸಾಮಿಯೊಂದಿಗೆ ಏನನ್ನೋ ಮಾತನಾಡುತ್ತಿದ್ದ. ‘ಭ್ರಮೇಯೇ?’
ಕಾರಿಗಾಗಿ ಹೊರಗೆ ಕಾಯುತ್ತಿದ್ದಾಗ “ಹೀಗೆ ಎಸ್ಕೇಪ್ ಆಗಬಾರದು” ಎಂಬ ದನಿ ಕೇಳಿ ಗಾಬರಿಯಿಂದ ಹಿಂತಿರುಗಿದರೆ, ಅದೇ ಆಕರ್ಷಕ ನಗುವಿನೊಂದಿಗೆ ಕಾಫೀ ಸಾಲಗಾರ. ಮನಸ್ಸಿನಲ್ಲಿ ಒಂದು ಪುಳಕ ಎದ್ದು ಅಡಗಿತು. ಮೆದುಳು ರೆಸ್ಟ್ ತೆಗೆದುಕೊಳ್ಳಲು ಹೊರಟು ಹೋಯಿತೋ ಎಂಬ ಸಂಶಯ ಬಂದು ಸುರಕ್ಷತೆಯ ಅಲಾರಾಮನ್ನು ತಟ್ಟಿದೆ. ಬ್ಯಾಟರಿ ಮುಗಿದುಹೋದ ಗಡಿಯಾರದಂತೆ ಮೌನ ವಹಿಸಿತು ಅಲಾರಾಮ್‌.
“ಇಲ್ಲ ಇನ್ನೂ ನಿಮ್ಮ ಕನ್ವೆಂಷನ್ ಮುಗಿಯಲಿಲ್ಲ ಅಂದುಕೊಂಡೆ.”
“ನಮಗೆ ಲಂಚ್‌ವರೆಗೆ ಮಾತ್ರ. ಅದರನಂತರ ನನ್ನ ಪ್ರೈವೇಟ್ ಮೀಟಿಂಗ್ಸ್ ಇತ್ತು. ಈಗ ಮುಗಿಯಿತು, ನಿಮ್ಮನ್ನ ನೋಡಿದ ಕೂಡಲೇ...”
“ಓ, ನೀವು ಕಂಟಿನ್ಯೂ ಮಾಡಿ” ತುಟಿಯಿಂದ ಹೊರಟ ಮಾತುಗಳು.
“ಆಮೇಲೆ ನನ್ನ ಕಾಫೀ?”
ಬಿಡಲ್ಲಾಂತ ಕಾಣುತ್ತೆ. ಮನಸ್ಸಿನ ಯಾವುದೋ ಮೂಲೆಯಲ್ಲಿ, ದುರ್ಬಲವಾದ ಒಂದು ಎಪಿಸೆಂಟರ್ ರೂಪಗೊಳ್ಳುವುದನ್ನು ಅರಿಯಲು ಸಾಧ್ಯವಾಯಿತು.
“ತೆಗೆದುಕೊಳ್ಳಿ ದುಡ್ಡು...” ಚೀಲವನ್ನು ತೆರೆದೆ.
“ಏನ್ರೀ ಕಂಡಕ್ಟರ್ ಹಾಗೇ ಟಕ್ ಟಕ್ ಅಂತ ಹ್ಯಾಂಡ್ ಬ್ಯಾಗನ್ನ ತೆರೀತೀರಿ. ನನಗೆ ಕಾಫೀನೇ ಬೇಕು. ಕಾಫೀ ಪುಡಿ, ಡಿಕಾಕ್ಷನ್, ಕಾಫೀ ಬೀನ್ಸ್ ಹೀಗೆ ಏನಾದರೂ ತೆಗೆಸಿಕೊಡಿ. ಆದರೆ, ಹಣ ಮಾತ್ರ ಕೊಡ್ಬೇಡ್ರೀ.”
ನಗುತ್ತಲೇ, “ಸರಿ ಬನ್ನಿ ಕಾಫೀ ಶಾಪಿಗೆ ಹೋಗೋಣಾ” ಎಂದು ಲಿಫ್ಟ್ ಕಡೆಗೆ ನಡೆದೆ.
“ಒಂದು ಒಳ್ಳೇ ಕಾಫೀ ಕೊಡಿಸಬಾರದೇ? ಇಲ್ಲಿ ಕುಡಿಯೋದರ ಬದಲು, ನನ್ನ ಸಿದ್ಧಾಂತವನ್ನ ಉಲ್ಲಂಘಿಸಿ ನಾನು ಹಣವನ್ನೇ ತೆಗೆದುಕೊಳ್ತೀನಿ, ಬಿಡಿ.”
“ನಾನು ಮನೆಗೆ ಹೋಗಬೇಕು, ಟೈಮ್ ಆಯ್ತು.”
ನಿರಾಶೆ ಮಾರ್ಕರ್ ಪೆನ್ನಿನಿಂದ ಅವನ ಮುಖದಲ್ಲಿ ಬರೆದಿತ್ತು.
“ಓ ಹಾಗಾದರೆ ಸರಿ, ನೀವು ಹೊರಡಿ.” ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಾ, ನಗದೇ ಸೀರಿಯಸ್ಸಾಗಿ ಹೇಳಿದ.
‘ಈ ಭೇಟಿ ಹೀಗೆ ಕೊನೆಯಾಗಬೇಕೆ?’ ಎಂಬ ಚಡಪಡಿಕೆ, ನನ್ನ ಮುಖದಲ್ಲಿ ಕಂಡಿರಬೇಕು. ನನಗೆ ಯೋಚಿಸಲು ಸಮಯ ಕೊಟ್ಟು ಕಾಯುತ್ತಿದ್ದ.
“ನಿಮಗೆ ಈ ಸಂಜೆ ಏನು ಕಾರ್ಯಕ್ರಮವಿದೆ?”
“ದೊಡ್ಡದಾಗಿ ಏನೂ ಇಲ್ಲ. ರಾತ್ರಿ ಹತ್ತು ಗಂಟೆಗೆ ಟ್ರೈನ್. ಅಷ್ಟರಲ್ಲಿ ಎರಡು ಕೆಲಸಕ್ಕೆ ಬಾರದ ಫ್ರೆಂಡ್ಸ್‌ನ್ನು ನೋಡಬೇಕು, ಅಷ್ಟೇ.”
ಮನಸ್ಸಿನಲ್ಲಿ ರಿಕ್ಟರ್ ಮಾಪಕದಲ್ಲಿ ಕಂಪನ ಹೆಚ್ಚಾಗುವುದನ್ನು ಕಂಡುಕೊಂಡೆ.
“ಇಫ್ ಯೂ ಡೋಂಟ್ ಮೈಂಡ್... ನನ್ನ ಜತೆ ಕಾರಿನಲ್ಲಿ ಬನ್ನಿ. ನನಗೆ ಒಂದು ಕೆಲಸ ಇದೆ. ಅದನ್ನ ಮುಗಿಸಿ ಕಾಫೀ ಪುಡಿಯನ್ನಾದರೂ ಕೊಡಿಸ್ತೀನಿ.”
ಹೇಗೋ ಹೇಳಿಬಿಟ್ಟೆ. ಎಪಿಸೆಂಟರ್ ಬಲವಾಯಿತು. ಅಲಾರಾಮ್‌ ಸಹ ಕಾಣೆಯಾಯಿತು. ಹತ್ತು ಸೆಕೆಂಡ್ ಕೂಡ ಯೋಚಿಸಲಿಲ್ಲ ಅವನು.
“ವಿತ್ ಪ್ಲಷರ್” ಎಂದ.
ಕಾರನ್ನು ಹೋಟೆಲ್ ಸಿಬ್ಬಂದಿ ತಂದು ಪೋರ್ಟಿಕೋದಲ್ಲಿ ನಿಲ್ಲಿಸಿದ.
“ಡ್ರೈವರ್ ಇಲ್ಲವೇನ್ರೀ?”
ಮುಖದಲ್ಲಿ ಕಲರವ ಕಂಡಿತು.
“ಇಲ್ಲ ಸೆಲ್ಫ್ ಡ್ರೈವ್.”
‘‘ನಾನು ಓಡಿಸಲೇ?”
“ಯಾಕೆ?”
“ಇಲ್ಲಾ... ಸರಿ... ನೀವೇ ಓಡಿಸಿ...” ಎಂದು ಎಳೆದ. ಆದರೆ ಅದಕ್ಕಿಂತ ಹೆಚ್ಚಾಗಿ ಏನೂ ಮಾತನಾಡದೇ ಮುಂದಿನ ಸೀಟಿನಲ್ಲಿ ಕುಳಿತುಕೊಂಡ.
“ಎಷ್ಟು ವರ್ಷದಿಂದ ಕಾರು ಓಡಿಸುತ್ತಿದ್ದೀರಾ ?”
“ಡ್ಯಾಶ್‌ಬೋರ್ಡ್ ತೆಗೀರಿ.”
“ಅದರಲ್ಲಿ ನೋಡಿದರೆ ಗೊತ್ತಾಗುತ್ತಾ?”
“ಹೌದು, ಡ್ರೈವಿಂಗ್ ಲೈಸೆನ್ಸ್ ಅದರಲ್ಲೇ ಇದೆ.”
“ಒಂದು ಅಂದಾಜಿನಲ್ಲಿ ಹೇಳಿ, ಪ್ರೂಫ್ ಎಲ್ಲಾ ಬೇಡಾ...”
‘‘ಆರು ವರ್ಷದಿಂದ.”
“ಓಕೇ. ತಪ್ಪು ತಿಳಿಯಬೇಡಿ. ಲೇಡೀಸ್ ಕಾರು ಓಡಿಸುವಾಗ ನಾನು ಪಕ್ಕದಲ್ಲಿ ಕೂತಿಲ್ಲ.”
“ಇದರಿಂದ ಏನು ಪ್ರೂವ್ ಮಾಡೋದಿಕ್ಕೆ ಹೊರಟಿದ್ದೀರಾ?”
“ನನಗೆ ಹೆದರಿಕೆಯಾಗ್ತಿದೆ ಅಂತ.”
“ದಟ್ ಈಸ್ ಫನ್ನಿ. ಯೂ ಆರ್ ಶಾವನಿಸ್ಟಿಕ್”
“ಎಷ್ಟು ಸುಲಭವಾಗಿ ನಿಮ್ಮಿಂದ ಈ ಪದವನ್ನ ನಮ್ಮ ಮೇಲೆ ಎಸಿಯೋದಿಕ್ಕೆ ಆಗುತ್ತಲ್ಲಾ? ಇದನ್ನೇ ತಮಿಳಿನಲ್ಲಿ ಹೇಳಿ ನೋಡಿ. ಆ ಮಾತಿನ ಪವರ್ ಅರ್ಥವಾಗುತ್ತೆ.”
“ಐ ಆಮ್ ಸಾರಿ, ಆದರೆ, ನೀವು ಮಾತನಾಡಿದ್ದು ಹಾಗೆಯೇ ಇತ್ತು. ಹೆದರದೇ ಕುಳಿತುಕೊಳ್ಳಿ. ನಿಮ್ಮ ಟ್ರೈನ್ ಟಿಕೆಟ್ ವೇಸ್ಟ್ ಆಗೋದಿಲ್ಲ.”
“ಮ್...”
ಇವನ ಬಗ್ಗೆ ಏನು ಗೊತ್ತು? ಸುಂದರವಾಗಿ ನಗ್ತಾನೆ, ಲೊಡ ಲೊಡ ಅಂತ ಮಾತಾಡ್ತಾನೆ, ಕಾಫೀ ಬಗ್ಗೆ ಏನೇನೋ ತಿಳ್ಕೊಂಡಿದ್ದಾನೆ, ಒಳ್ಳೇ ಡ್ರೆಸ್ಸಿಂಗ್ ಸೆನ್ಸ್ ಇರೋ, ಕಾರು ಓಡಿಸೋದಿಕ್ಕೆ ಗೊತ್ತಿರೋ, ಲ್ಯಾಪ್‌ಟಾಪ್ ಇಟ್ಟಿರೋ ಯಾವುದೋ ಒಬ್ಬ ಬಿಸಿನೆಸ್‌ಮನ್. ಇಷ್ಟೇ ಸಾಕೇ ಒಬ್ಬನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೋಗಲು? ಮಂಕುದಿಣ್ಣೆಗಳನ್ನೇ ಹೆಚ್ಚಾಗಿ ನೋಡಿದ್ದವಳಿಗೆ ಇವನ ಮಾತಿನಲ್ಲಿ ಧ್ವನಿಸುವ ಕೆಣಕನ್ನು, ಕಿಂಡಲನ್ನು ಸುಲಭವಾಗಿ ಬದಿಗೆ ಸರಿಸಲಾಗಲಿಲ್ಲ. ಹೀಗೆ ಹಿಂದುಮುಂದು ತಿಳಿಯದವನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೋಗುವ ನನ್ನ ಬಗ್ಗೆ ಇವನು ಏನಂದುಕೊಂಡಾನು? ಆದರೆ, ಅವನ ಬಗ್ಗೆ ಕೆಟ್ಟದಾಗಿ ಅಂದುಕೊಳ್ಳಲು ಮನಸ್ಸು ನಿರಾಕರಿಸುತ್ತಿದೆಯಲ್ಲಾ ಯಾಕೆ? ಮೆದುಳು ಕೇಳುವ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರ ಹೇಳದೇ, ಸೋಗು ಹಾಕುತ್ತಿದ್ದ ಮನಸ್ಸಿನೊಳಗೆ ಒಂದು ಪ್ರಳಯವೇ ನಡೆಯುತ್ತಿತ್ತು.
“ನನಗೆ ನಿಮ್ಮ ಬಗ್ಗೆ ಏನೂ ತಿಳೀದೂ ರೀ” ಎಂದ ಹೊರಗೆ ತಮಾಷೆ ನೋಡುತ್ತ.
“ಅಯ್ಯೋ ಹೇಗೆ ಹೀಗೆ ಮೈಂಡ್ ರೀಡಿಂಗ್ ಮಾಡ್ತೀದ್ದೀರಾ?” ಆಶ್ಚರ್ಯದಿಂದ ಕೇಳಿದೆ.
“ಗೊತ್ತಿಲ್ಲಾರೀ, ತನ್ನಷ್ಟಕ್ಕೆ ಬರುತ್ತೆ.”
ಈ ಮುಗ್ಧವಾದ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ‘ಮತ್ತೊಬ್ಬರ ಮನಸ್ಸನ್ನು ಓದುವುದು ಹೇಗೆ?’ ಎಂದು ಒಂದು ಸಣ್ಣ ಲೆಕ್ಚರನ್ನು ಅಪೇಕ್ಷಿಸಿ ಮೋಸ ಹೋದೆ.
“ಓಕೇ...”
“ತುಂಬಾ ಯೋಚನೆ ಮಾಡಬೇಡ್ರೀ. ಬಹಳ ಸಿಂಪಲ್. ಈ ನಿಮಿಷ ಚೆನ್ನಾಗಿರಬೇಕು, ಲಿವ್ ದಿಸ್ ಮೊಮೆಂಟ್.”
“ಅದೇ ನಿಮ್ಮ ಬದುಕಿನ ತಾರಕ ಮಂತ್ರವೇ?” ಎಂದು ಕೇಳಿದಾಗ, “ಹಾಗೆ ಹೇಳಿಕೊಳ್ಳಬಹುದು. ಸಂತೋಷವಾದ ಗಳಿಗೆಗಳನ್ನು ಮುಂದುವರೆಸಲು ಕಲಿಯಬೇಕು. ಅಷ್ಟೇ ಮೇಟ್ಟರ್...” ಎಂದವನನ್ನು ನೋಡಿ, “ಮ್. ಭಯ ಹೋಯ್ತೆ?...” ಎಂದು ಕೇಳಿದೆ.
“ಆಲ್‌ಮೋಸ್ಟ್. ಚೆನ್ನಾಗಿಯೇ ಗಾಡಿ ಓಡಿಸ್ತೀರಾ.”
“ಥ್ಯಾಂಕ್ ಯೂ. ಮಧ್ಯಾಹ್ನ ಕಾಣಿಸ್ಲಿಲ್ಲವಲ್ಲಾ, ಆಗಲೇ ಹೊರಟು ಹೋದ್ರೀ ಅಂದ್ಕೊಂಡೆ” ಎಂದೆ, ಗೇರ್‌ ಬದಲಾಯಿಸುತ್ತಾ.
“ಕಾಫೀ ಶಾಪ್‌ವರೆಗೆ ಬಂದು ಹುಡುಕಿದಿರಲ್ಲ!...” ಎಂದು ಅವನು ತಕ್ಷಣ ಹೇಳಿದಾಗ, ‘ನಾನು ಹುಡುಕಿದ್ದನ್ನು ನೋಡಿದನೇ? ನನ್ನ ಬಗ್ಗೆ ಏನಂದುಕೊಂಡಿರುತ್ತಾನೆ?’ ಎಂದು ಯೋಚಿಸಿದೆ, “ನನ್ನನ್ನ ನೋಡಿದ್ರಾ?” ಎಂದು ಕೇಳಿದೆ.
“ಆಕ್ಚುಯಲಿ, ನನ್ನ ಬಾಸ್ ಜತೆ ಮಾತಾಡ್ತಾ ಇದ್ದೆ. ನನ್ನನ್ನೇ ಹುಡುಕ್ತಾ ಇದ್ರೀಂತ ಗೊತ್ತು. ಮಧ್ಯೆ ಕಟ್ ಮಾಡಿ ಬರಲಿಕ್ಕೆ ಆಗಲಿಲ್ಲ. ಸಾರಿ...” ಎಂದು ನಕ್ಕ.
“ದಟ್ಸ್ ಓಕೇ!”
“ಯಾತಕ್ಕೆ ಹುಡುಕಿದ್ರೀ?”
“ಲಂಚಿಗೆ ಕರ್ಕೊಂಡ್ ಹೋಗೋಣಾಂತ’’ ನಾನೂ ನಕ್ಕೆ.
“ನಿಜವಾಗ್ಲೂ? ಕಂಪನಿಗೆ ಧಿಕ್ಕಾರ. ಸೆಮಿನಾರಿಗೆ ಧಿಕ್ಕಾರ. ಬಾಸಿಗೆ ಧಿಕ್ಕಾರ. ಏ ಅಮೆರಿಕಾ ಏಕಾಧಿಪತ್ಯವೇ...”
“ಆಹಾ ಹಾ... ಕಾಫಿಗೆ ದುಡ್ಡು ಕೊಡುವುದಕ್ಕೆ” ಎಂದು ನಾನು ಹೇಳಿದಾಗ, “ಸರಿ ನಂಬ್ತೀನಿ...” ಎಂದ ಮುಗ್ಧವಾಗಿ.
“ಹಾಗಾದ್ರೆ ನಂಬಲಿಲ್ಲವಾ?”
“ನಿಜ ಹೇಳಿದ್ರೆ ಕಾರಿಂದ ಇಳಿಸಿಬಿಡ್ತೀರಾ?”
“ಹಾಗೆ ಮಾಡಿದ್ರೂ ಮಾಡಿದ್ನೇ!...”
‘ಹೇಗೆ ಹೀಗೆ ನಾನ್ ಸ್ಟಾಪ್‌ ಆಗಿ ಮಾತಾಡ್ತಾನೆ?’ ಯಾರೊಂದಿಗೂ ಹೀಗೆ ಮಾತಿಗೆ ಮಾತು ಉತ್ತರ ಹೇಳಿದಂತೆ ನನಗೆ ನೆನಪಿಲ್ಲ.’ ಎಂದು ನನ್ನೊಳಗೆ ಮಾತನಾಡಿಕೊಳ್ಳುತ್ತಿರುವಾಗಲೇ, ಮುಂದಿನ ಮಾತು ಅವನಿಂದ... ‘‘ಒಂದು ಸಣ್ಣ ಟಿಪ್ ಕೊಡಬಹುದೇ?”
“ಯಾವುದರ ಬಗ್ಗೆ?”
“ಡ್ರೈವಿಂಗ್ ಬಗ್ಗೆ.”
“ಹೋಪ್ ಇಟ್ ಈಸ್ ನಾಟ್ ಶಾವನಿಸ್ಟಿಕ್.”
“ಇಲ್ಲ, ಇಲ್ಲ. ಇದು ಯಾವ ಕತ್ತೆ ಕುದುರೆ ಗಾಡಿ ಓಡಿಸಿದರು, ಫಾಲೋ ಮಾಡಿದ್ರೇ ಒಳ್ಳೇದು” ಎಂದು ಚಂದವಾಗಿ ಸಂಬಾಳಿಸಿದ.
“ಇದರಲ್ಲಿ ಯಾರು ಕತ್ತೆ? ಯಾರು ಕುದುರೆ?” ತುಸು ಸಿಟ್ಟಿನಿಂದ ಕೇಳಿದೆ.
“ಎರಡೂ ನಾನೇ. ಸಾಕಾ? ಟಿಪ್ ಕೇಳ್ರೀ...” ಎಂದು ನನ್ನ ಕೋಪವನ್ನ ತನ್ನ ಸಮಯಪ್ರಜ್ಞೆಯಿಂದ ಕಾಣೆಯಾಗಿಸಿದ.
“ಸರಿ ಹೇಳ್ರೀ” ಎಂದೆ.
“ಡ್ರೈವಿಂಗ್ ಸೀಟಲ್ಲಿ ಕುಳಿತು ಸ್ಟೀರಿಂಗ್ ವೀಲ್ ಮೇಲೆ, ಟಾಪಲ್ಲಿ ಕೈನೀಡಿ ಇಡಿ. ಮಣಿಕಟ್ಟು ವೀಲಿನ ಟಾಪಿಗೆ ತಾಕಬೇಕು.”
“ಓಕೇ...”
“ನಿಮ್ಮ ಮಣಿಕಟ್ಟಿಂದ ಅಂಗೈಯೂ ಬೆರಳುಗಳೂ ಫ್ರೀಯಾಗಿ ಮೂವಾಗಬೇಕು.”
“ಸರಿ.”
“ಹಾಗೆ ಮೂವ್ ಆದರೇನೆ ನೀವು ಸ್ಟೀರಿಂಗ್ ವೀಲಿಂದ ಸರಿಯಾದ ದೂರದಲ್ಲಿ ಕುಳಿತಿದ್ದೀರಿ ಅಂಥ ಅರ್ಥ. ಟ್ರೈ ಮಾಡಿ...”
ಅವನು ಹೇಳಿದಂತೆ ಮಾಡಿ ನೋಡಿದೆ. ಅಂಗೈಯನ್ನು ಬೆರಳುಗಳನ್ನು ಆರಾಮಾಗಿ ಆಡಿಸಲು ಸಾಧ್ಯವಾಗಲಿಲ್ಲ.
“ಹೆಚ್ಚಾಗಿ ಲೇಡಿ ಡ್ರೈವರ್ಸ್ ಫ್ರಂಟ್ ವೀಲ್ಸ್ ಕಾರಲ್ಲೇ ಇದೆಯಾಂತಾ ಇಣಕಿ ನೋಡ್ಕೋಂಡೇ ಓಡಿಸ್ತಾರೆ ಅಲ್ಲಾ?” ನಗುತ್ತಲೇ ಕೇಳಿದ. ಆದರೂ ‘ಏನು ಒಂದು ಕಿಂಡಲ್?’ ಎಂದು ದಿಟ್ಟಿಸಿದೆ.
“ಸರಿ ಸರಿ ಕೋಪಿಸಿಕೊಳ್ಳಬೇಡಿ. ಹೆಚ್ಚಾಗಿ ಹಾಗೆ ಓಡಿಸುವಂತೆಯೇ ಇರುತ್ತದೆ. ನೀವು ಬೇಕಾದರೆ ಗಮನಿಸಿ.”
ಅವನು ಹೇಳಿದಂತೆ ನಾನೂ ಗಮನಿಸಿದ್ದೆ. ಆದರೆ, ಮುಂದೆ ಸರಿದು ಕುಳಿತು ಗಾಡಿ ಓಡಿಸುವುದಕ್ಕೂ, ಇವನಿಂದ ಹೀಗೊಂದು ಕಿಂಡಲನ್ನು ನಿರೀಕ್ಷಿಸಿರಲಿಲ್ಲ.
“ನಾನು ಹಾಗೆ ಓಡಿಸ್ತಿದ್ದೇನೆಯೇ?”
“ಇಲ್ಲ, ಇಲ್ಲ... ಅದನ್ನ ನೀವು ಸೀಟಲ್ಲಿ ಕುಳಿತಕೂಡಲೇ ಗಮನಿಸಿದೆ. ಬಹುಶಃ ನಿಮ್ಮ ಸೀಟನ್ನ ಸ್ವಲ್ಪ ಎಳೆದುಕೊಳ್ಳಬೇಕಾಗುತ್ತೆ... ಅದಕ್ಕೆ ಹೇಳಿದ್ದು. ಇದೇ ಪೊಸಿಷನಿನಲ್ಲಿ ಗಾಡಿ ಓಡಿಸಿದರೆ ತೋಳುಗಳಿಗೆ ನೋವಾಗುತ್ತೆ...”
“ಯೂಸ್‌ಫುಲ್ ಟಿಪ್... ಥ್ಯಾಂಕ್ ಯೂ” ಎಂದೆ.
“ನಿಮಗೆ ಏನೋ ಕೆಲಸ ಇದೆ ಅಂತ ಹೇಳಿದ್ರಲ್ಲಾ?”
“ಹೌದು ಅಲ್ಲೇ ಹೋಗ್ತಾ ಇದ್ದೀವಿ. ನಾನು ಒಂದು ಕಾಲ್ ಮಾಡ್ತೀನಿ...”
ಕಾರನ್ನು ಸುಲಭವಾಗಿ ತಿರುಗಿಸುತ್ತಲೇ, ಸ್ಪೀಡ್ ಡೈಯಲಿನಲ್ಲಿ ನಂಬರನ್ನು ಒತ್ತಿದೆ. ರಿಂಗ್ ಹೋಯಿತು. ಫೋನನ್ನು ತೆಗೆದು ಕಿವಿಯಲ್ಲಿಟ್ಟುಕೊಂಡು, ತಲೆಯನ್ನು ವಾಲಿಸಿ, ತೋಳಿನ ಮೇಲೆ ಒತ್ತಿಕೊಂಡು ಗೇರ್‌ ಬದಲಾಯಿಸಿದೆ.
“ಮೆಚ್ಚುಗೆ ಸೂಚಿಸುತ್ತೀರಾ?” ಎಡಗಡೆ ತಲೆಯನ್ನು ತಿರುಗಿಸಿ, ಅವನನ್ನು ನೋಡಿ ಕೇಳಿದೆ.
“ಮ್‌, ಕೊಂಚ. ನಿಮ್ಮ ಫೋನಲ್ಲಿ ವಾಯ್ಸ್ ಆಕ್ಟಿವೇಷನ್ ಮಾಡಬಹುದಲ್ಲಾ?”
“ಹೌದು ಮಾಡಬಹುದು.”
“ಯಾಕೆ ಇಷ್ಟು ದಿನ ಮಾಡಲಿಲ್ಲ? ಗಾಡಿ ಓಡಿಸುವಾಗ ಗಮನ ಕಳೆದುಕೊಳ್ಳದೆ ಇರಬಹುದಲ್ಲಾ...”
“ಯಾರಿಗೆ?” ಎಂದೆ.
“ಈಗ ನಿಮ್ಮ ಪಕ್ಕದಲ್ಲಿ ಇರುವ ನನಗೆ.”
ಅವನು ಹೇಳಿ ಮುಗಿಸುವಾಗ, ನನ್ನ ಅರಿವಿಲ್ಲದೇ ನಗು ಬಂದಿತು.
ಯಾವುದೋ ತಿರುವಿನಲ್ಲಿ ತಿರುಗಿಸಿ ಕಾರನ್ನು ಪಾರ್ಕ್ ಮಾಡಿದೆ.
“ಹತ್ತು ನಿಮಿಷದ ಕೆಲಸ ಅಷ್ಟೇ. ಹೆಚ್ಚೆಂದರೆ ಹದಿನೈದು ನಿಮಿಷ. ಹಾಡು ಕೇಳುತ್ತಾ ಇರಿ. ಬಂದುಬಿಡುತ್ತೇನೆ.”
“ನೋ ಪ್ರಾಬ್ಲಮ್” ಎಂದ ಸಹಜವಾಗಿ.
ಕಾರಿಂದ ಇಳಿದು ಒಂದು ಗಾಜಿನ ಕಟ್ಟಡದ ಒಳಗೆ ಹೋದೆ.
ಕಾರಿನ ಹಿಂದಿನ ಸೀಟನ್ನು ನೋಡಿದ. ಪೇಪರ್ ಚೀಲಗಳಲ್ಲಿ ಬಟ್ಟೆಬರೆ, ಕೆಲವು ತಮಿಳು, ಹಲವು ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ಸಿನಿಮಾ ಡಿವಿಡಿಗಳು, ಅಂದಿನ ಇಂಗ್ಲಿಷ್ ದಿನಪತ್ರಿಕೆಗಳು ಒಂದು ಮಿನಿ ಎಕ್ಸಿಬಿಷನ್ ಥರಾ ಹರಡಿಕೊಂಡಿದ್ದವು.
ಸಂಗೀತ ಹಾಕಿದ.
ಒಂದು ಗಂಡು ದನಿ, ಪಿಯಾನೊ ನೋವಿನಿಂದ ಇಂಗ್ಲೀಷಿನಲ್ಲಿ ಶಬ್ದ ಮಾಡಿದವು. ಇದನ್ನು ಕೇಳಲು ಹೇಳಿದಳೇ? ರೇಡಿಯೊ ಬದಲಿಸಿದ. ಅದರಲ್ಲಿ ಉಸಿರು ಬಿಗಿಹಿಡಿದುಕೊಂಡು ಮಾತನಾಡಿದ ಹೆಣ್ಣು ದನಿ ಕೇಳಿತು. ಅವನಿಗೆ ಎದೆ ನೋವು ಬಂದಂತೆ ತೋರಿತು. ರೇಡಿಯೊ ಆರಿಸಿ ಹಿಂದಿನ ಸೀಟಿನಲ್ಲಿದ್ದ ತಮಿಳು ಪುಸ್ತಕಗಳನ್ನು ತೆಗೆದು ತಿರುವಿದ.
“ಕಾಫಿಗೆ ಹೋಗೋಣವೆ?”
ಸರಕ್ಕನೆ ತಲೆ ಎತ್ತಿದ.
“ನೀವು ಬಂದ ಸುಳಿವೇ ಸಿಗಲಿಲ್ಲ.”
“ಸಾರಿ, ಹೆದರಿಬಿಟ್ರಾ?”
“ನಿಮ್ಮ ಜತೆ ಮಾತನಾಡೋದು ಒಂದು ಇಂಗ್ಲಿಷ್ ಸಿನಿಮಾ ನೋಡೋ ಪರಿಣಾಮ ಕೊಡ್ತಿದೆ. ಅದಕ್ಕೆ ಕಾರಣ ಏನಂತ ನಿಮ್ಮ ಕಾರಿನ ಹಿಂದಿನ ಸೀಟ್ ನೋಡಿ ತಿಳ್ಕೊಂಡೆ.”
“ಹಾ... ಹಾ, ಮ್ಯೂಸಿಕ್?”
“ಇಲ್ಲ ಬೇಡ. ಮಾರ್ಕ್ ಆಂಟನಿ ಇಷ್ಟಾನೋ?”
“ಕೇಳಿದ್ರಾ? ತುಂಬಾ ಇಷ್ಟ. ನಿಮಗೆ?”
“ಸುಮಾರಾಗಿ ಇಷ್ಟ. ವಾಯ್ಸ್‌ನಲ್ಲಿ ಯಾವಾಗಲೂ ಒಂದು ತವಕ ಇರುತ್ತೆ.”
“ಹೌದು, ಲೇಟಸ್ಟ್ ಆಗಿ ಅಟೆಲ್ ಇಷ್ಟ.”
“ಮ್. ನಾನು ಮ್ಯೂಸಿಕ್‌ನಲ್ಲಿ ಬಹಳ ಚೂಸಿ.”
ಹೋಗುತ್ತಿರುವುದು ಗೊತ್ತಾಗದಂತೆ ಗಾಡಿ ಸಾಗುತ್ತಿತ್ತು.
ಸ್ಟಾರ್ ಬಕ್ಸ್. ವೆಲ್ಕಮ್ ಟು ಸ್ಟಾರ್ ಬಕ್ಸ್ ಎಂಬ ಗದ್ದಲಕ್ಕೆ ತುಸು ಗಾಬರಿಯಾಗಿ, ತಬ್ಬಿಬ್ಬಾಗಿ, ಜಾಗ ಹಿಡಿದು ಎದುರುಬದುರು ಕೂತರು.
“ನಾನೇ ಆರ್ಡರ್ ಮಾಡಲೇ ನಿಮಗೂ?”
“ಪ್ಲೀಸ್...”
ಆರ್ಡರ್ ಮಾಡಿ ಬಂದು ಅವನ ಮುಂದೆ ಕುಳಿತೆ.
“ಕೊಯ್ದುಕೊಂಡು ಬರುತ್ತಾರೆಯೇ?”
“ಏನನ್ನಾ?”
‘‘ಕಾಫೀ ಬೀಜಾನಾ. ಎಷ್ಟೊತ್ತಾಯ್ತು ಆರ್ಡರ್ ಮಾಡಿ!”
“ನಿಮಗೆ ಒಳ್ಳೆ ಸೆನ್ಸ್ ಆಫ್‌ ಹ್ಯೂಮರ್.”
“ಥ್ಯಾಂಕ್ಸ್, ನಿಮ್ಮ ಹಾಗೇನೇ.”
“ಅಂಡ್ ಅ ಕ್ಯೂಟ್ ಸ್ಮೈಲ್.”
“ಥ್ಯಾಂಕ್ಸ್ ಅಗೈನ್.”
“ಕಾಫಿಗೆ ಕರೀತಾರಾ?”
“ಇಲ್ಲ, ಇಲ್ಲಿಗೇ ತರಲಿಕ್ಕೆ ಹೇಳಿದ್ದೀನಿ.”
“ಏನು ಆರ್ಡರ್ ಮಾಡಿದೆ ಅಂಥಾ ಕೇಳಲ್ವೇನ್ರೀ?”
“ಏನಾದ್ರೂ ಓಕೆ. ಇಟ್ಸ್ ಯುವರ್ ಚಾಯ್ಸ್.” ನಕ್ಕೆ.
“ನಿಮ್ಮ ಹತ್ರ ಒಂದು ಕೇಳಬಹುದೇ? ತಪ್ಪು ತಿಳೀಕೂಡದು...”
“ಪ್ರಯತ್ನ ಮಾಡ್ತೀನಿ.”
“ನನ್ನ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಆದರೆ ಕಾರಲ್ಲಿ ಕರೆದುಕೊಂಡು ಬಂದು ಕಾಫೀ ಕೊಡಿಸ್ತಾ ಇದ್ದೀರಿ. ನಿಮ್ಮನ್ನ ಒಬ್ಬ ಈಸಿ ಗೋಯಿಂಗ್ ಟೈಪ್ ಅಂತ ಅಂದುಕೋಬಹುದೇ?”
“ನನ್ನ ಮಟ್ಟಿಗೆ ಲೈಫ್ ಈಸ್ ಆ ಗ್ಯಾಂಬಲ್. ಅದೂ ಅಲ್ಲದೆ ಒಂದು ವಿಷಯವನ್ನ ಹೇಗೆ ಡೀಲ್ ಮಾಡಬೇಕನ್ನೋದು ಅವರವರ ಮನಸ್ಸಿನ ಬೆಳವಣಿಗೆಗೆ ತಕ್ಕಂತೆ ಇರುತ್ತೆ ಅಲ್ವಾ?”
“ನನ್ನ ಜಾಗದಲ್ಲಿ ಒಂದು ಹೆಣ್ಣಿದ್ದಿದ್ದರೆ ಹೀಗೆ ಕಾರಲ್ಲಿ ಕರೆದುಕೊಂಡು ಬಂದು ಕಾಫೀ ಕೊಡಿಸ್ತಾ ಇದ್ರಾ?”
“ಐ ಡೋಂಟ್. ಯಾಕ್ರೀ ಹೀಗೊಂದು ಪ್ರಶ್ನೆ? ಈ ಫೋಟೊದಲ್ಲಿ ಇರೋದು ನಾನೇ. ಒಂದು ಆಪರೇಷನ್ ನಂತರ ಹೀಗೆ ಬದಲಾದೆ ಅಂತ ಹೇಳಿ ಬಿಡ್ತೀರಾ?”
ಜೋರಾಗಿ ನಕ್ಕ.
“ಒಂದು ಸೀರಿಯಸ್ ಆದ ಪ್ರಶ್ನೆನಾ ಕಾಮಿಡಿ ಮಾಡಿ ಬಿಟ್ರೀ. ಬೈ ದ ಬೈ ಇದೇ ಪ್ರಶ್ನೆನಾ ನೀವೂ ಕೇಳಬಹುದು. ಒಂಟಿಯಾಗಿ ಬಂದ ಗಂಡಸಿನ ಬಳಿ ಬೆಳಗಾನ್ಬೆಳಗೆ ಕಾಫೀ ಬಗ್ಗೆ ಕ್ಲಾಸ್ ತಗೋತೀರಾಂತಾ..”
“ಕೆಲವು ಪ್ರಶ್ನೆಗಳನ್ನ ಕೇಳದೆ ಇರೋದೆ ಚಂದ. ಚಂದವಾಗೆ ಇರಲಿ ಬಿಡಿ. ಎಲ್ಲಕ್ಕೂ ಕಾರ್ಯ ಕಾರಣ ಕಂಡುಹಿಡಿದರೆ ಲೈಫಲ್ಲಿ ಸ್ವಾರಸ್ಯ ಹೊರಟೋಗುತ್ತೆ, ಅಲ್ವೇ?”
ಪಕ್ಕದ ಟೇಬಲಿನ ನಗುವಿನ ಸದ್ದು ನಮ್ಮ ಸಂಭಾಷಣೆಯನ್ನು ನಿಲ್ಲಿಸಿತು. ಹಬೆಯಾಡುತ್ತಾ ಒಂದು ಕಾಫಿಯೂ, ಉದ್ದನೆಯ ಬೆವರಿದ ಗಾಜಿನ ಲೋಟದಲ್ಲಿ ಮತ್ತೊಂದು ಕಾಫಿಯೂ ಬಂದವು.
“ನಿಮಗೆ ಯಾವುದು ಬೇಕೋ ಅದನ್ನು ತೆಗೆದುಕೊಳ್ಳಿ.”
“ಸೋ ಸ್ವೀಟ್.”
“ಇಲ್ಲ ಕಹಿಯಾಗೆ ಇರುತ್ತೆ.”
“ಯಾವಾಗಲೂ ಇಷ್ಟು ಶಾರ್ಪಾ ನೀವು?”
“ಯಾವಾಗಲೂ ಹೆಂಗಸರಿಗೆ ಬಹಳ ಕಾಂಪ್ಲಿಮೆಂಟ್ ಕೊಡ್ತೀರೊ?”
“ಫ್ಲರ್ಟ್ ಮಾಡ್ತಾ ಇದ್ದೀನಿ ಅಂತ ಪಾಲಿಷ್ಡ್ ಆಗಿ ಕೇಳ್ತಾ ಇದ್ದೀರಾ?”
“ಇಲ್ಲಾಂತಾ ಹೇಳಕ್ಕೆ ಆಗ್ತಿಲ್ಲಾ...”
“ನಿಜ ಹೇಳಬೇಕಂದ್ರೆ, ನಾನು ಮಾತಾಡೋವಾಗ ಯಾರಾದ್ರೂ ಚಾಲೆಂಜಾಗಿ ರಿಪ್ಲೈ ಮಾಡೋರನ್ನ ಕಂಡ್ರೆ ನನಗೆ ಹಿಡಿಸುತ್ತೆ. ನಾನು ಉತ್ತರ ಕೊಡೋದಿಕ್ಕೆ ಆಗದಷ್ಟು ಸ್ಮಾರ್ಟ್‌ ಆಗಿ ಉತ್ತರ ಇದ್ರೆ ತುಂಬಾ ಇಷ್ಟಪಡ್ತೀನಿ. ಅದು ಗಂಡಾಗಿದ್ರೂ ಸರಿ! ಹೆಣ್ಣಾಗಿದ್ರೂ ಸರಿ!
“ಮ್ಮ್...”
“ಇದರಲ್ಲಿ ಹೆಂಗಸರಿಗೆ ನಾರ್ಮಲ್ಲಾಗಿ ಮೀಸಲಾತಿ ಜಾಸ್ತಿ. ಅದು ಜೆನಟಿಕ್ ವೀಕ್ನೆಸ್.”
“ಹೆಚ್ಚಿನ ಗಂಡಸರು ಬುದ್ಧಿವಂತಿಕೆಯಿಂದ ಉತ್ತರ ಕೊಡೋ ಹೆಣ್ಣನ್ನ ರಸಿಕತೆಯಿಂದ ನೋಡೋದಿಲ್ಲ ಅಲ್ವಾ?” ಎಂದು ಕೇಳಿದಾಗ, “ಇದು ಒಂದು ಸಾರ್ವಜನಿಕ ಅಭಿಪ್ರಾಯ. ಈಗ ನೋಡಿ...” ಎಂದು ಪ್ರಾರಂಭಿಸಿ ಉಸಿರು ಹಿಡಿದುಕೊಂಡು ಒಂದು ಲೆಕ್ಚರ್ ಮಾಡಿದ.
ಅವನ ಲೆಕ್ಚರ್ ಕೇಳಿ, “ಕಾಫಿಗೆ ಬದಲು ಸೋಡಾ ಹೇಳಬಹುದಿತ್ತಲ್ಲ?” ಎಂದೆ.
“ಹಾ... ಹ... ಹಾ... ನಾನು ಹೇಳಿದ್ದಕ್ಕೆ ಒಪ್ಪಿಗೆಯೇ ಇಲ್ಲವೇ ಅಂತ ಉತ್ತರ ಹೇಳದೇ ಟಾಪಿಕ್ ಬದಲಾಯಿಸುತ್ತಿದ್ದೀರಿ ಅಲ್ಲವೇ, ಅದೇ ನಿಮ್ಮ ಸ್ಮಾರ್ಟ್‌ನೆಸ್...” ಎಂದು ನನ್ನನ್ನು ಹೊಗಳಿದ. ಅದರ ನಂತರ ಹಾಪೀಸ್, ಸಿನಿಮಾ, ಬುಕ್ಸ್, ಪಯಣ, ಡ್ರೆಸ್ಸಿಂಗ್ ಸೆನ್ಸ್, ಬೀತೋವನ್ ಮೊದಲುಗೊಂಡು ಬೀಪ್ ಹಾಡುಗಳವರೆಗೆ ಕಲಸಿ ಕುಡಿದಾಗ, ಹೆಚ್ಚುಕಡಿಮೆ ಒಂದೂವರೆ ಗಂಟೆ ಕಾಫಿಯ ಹಬೆಯಂತೆ ಹಾರಿಹೋಯಿತು.
“ನೈಸ್ ಕಾಫಿ, ಒಳ್ಳೆಯ ಟೇಸ್ಟ್ ನಿಮಗೆ, ಎಲ್ಲದರಲ್ಲೂ.”
“ಥ್ಯಾಂಕ್ಸ್. ಲೇಟ್ ಆಯ್ತಾ ನಿಮಗೆ?” ಕೇಳಿದೆ.
“ಹೌದು, ಫ್ರೆಂಡ್ಸ್ ಕಾಯುತ್ತಿರುತ್ತಾರೆ. ಹೊರಡ್ತೀನಿ...”
“ಮ್.”
ಕಾಫೀ ಶಾಪಿನ ಹೊರಗೆ ಬಂದು ಹೊಸ್ತಿಲಲ್ಲಿ ನಿಂತ. ಕತ್ತಲಾಗಲು ತೊಡಗಿತು, ಸಣ್ಣನೆ ಚಳಿಯೊಂದಿಗೆ.
“ಮಳೆ ಬರುವ ಹಾಗಿದೆ ಅಲ್ಲವೇ” ಎಂದೆ ಆಕಾಶ ನೋಡಿ.
“ಹೌದು, ನಾನು ಹೊರಡಲೇನ್ರೀ?” ಕೇಳಿದ.
“ಮ್ ಸರಿ. ನಾನೂ ಮನೆಗೆ ಹೋಗಬೇಕು. ಭಯಂಕರ ಟ್ರಾಫಿಕ್ ಇರುತ್ತೆ ಈ ಹೊತ್ತಲ್ಲಿ...”
“ಹೌದು, ಮೆಟ್ರೊ ಕೆಲಸ ನಡೆಯುತ್ತಿದೆ ಅಲ್ಲಾ...” ಎಂದು ಅವನು ಹೇಳಿದಾಗ, “ಚೆನ್ನೈಯಲ್ಲಿ ಕಾರು ಬೈಕು ಎಲ್ಲಾ ಜಾಸ್ತಿ ಆಗೋಯ್ತು...” ಎಂದೆ.
ಬೆಳಗಿನ ಇದೇ ಸಂಭಾಷಣೆ ಬೇರೆ ಜಾಗದಲ್ಲಿ ಆಗಿದ್ದನ್ನು ಅರಿತು ಇಬ್ಬರೂ ಜೋರಾಗಿ ನಕ್ಕೆವು.
“ತಡೀರಿ, ಪಕ್ಕದಲ್ಲಿ ಎಲ್ಲಾದರೂ ಆಟೊ ಸ್ಟ್ಯಾಂಡ್ ಇದ್ದರೆ ಡ್ರಾಪ್ ಮಾಡ್ತೀನಿ.”
“ಸರಿ ಕಣ್ರೀ...” ಎಂದು ತಲೆಯಾಡಿಸಿ ಹೇಳಿದ.
ಆಟೊ ಸ್ಟ್ಯಾಂಡ್ ಕೆಲವು ನಿಮಿಷಗಳಲ್ಲಿಯೇ ಬಂತು. ‘ನಡೆದುಕೊಂಡೇ ಬಂದಿರಬಹುದೇನೋ?’ ಎಂದು ಅಂದುಕೊಳ್ಳುತ್ತಲೇ ಡ್ರೈವರ್ ಸೀಟಿನಿಂದ ಇಳಿದೆ.
“ಥ್ಯಾಂಕ್ ಯೂ ಫರ್ ದ ನೈಸ್ ಟೈಮ್.”
“ನಾನೇ ಥ್ಯಾಂಕ್ಸ್ ಹೇಳಬೇಕು. ಇಟ್ಸ್ ಅ ಪರ್ಫೆಕ್ಟ್ ಈವನಿಂಗ, ಕಾಫೀ, ಡಿಸ್ಕಷನ್, ನಿಮ್ಮ ಟೈಮ್, ನೀವು... ಎಲ್ಲದ್ದಕ್ಕೂ...” ಎನ್ನುತ್ತಾ ಕೈನೀಡಿ ಕುಲುಕಿದೆ.
“ಥ್ಯಾಂಕ್ ಯೂ ಬೈ.”
“ಬೈ, ಬೈ, ಕೀಪ್ ಸ್ಮೈಲಿಂಗ್.”
ಕುಲುಕಿ ಮುಗಿದಿದ್ದರೂ ಕೈಯನ್ನು ಹಿಡಿದುಕೊಂಡೇ ನಿಂತಿದ್ದ. ಮೆಲ್ಲಗೆ ಕೈಯನ್ನು ಬಿಡಿಸಿಕೊಂಡೆ. ಅವನು ಇಷ್ಟವಿಲ್ಲದೆ ಕೈಯನ್ನು ಬಿಟ್ಟಂತೆ ತೋರಿತು.
ಮೌನ. ಏನೆಂದು ಅರಿಯಲಾಗದ ಒಂದು ಭಾವನೆ ಮನಸ್ಸನ್ನು ಮೆಲ್ಲಗೆ ಒದ್ದೆ ಮಾಡಿತು. ಇದಕ್ಕಿಂತ ಹೆಚ್ಚಾಗಿ ಇದ್ದರೆ ಇಬ್ಬರೂ ಏನನ್ನಾದರೂ ಒದರಲು ಶುರುಮಾಡಬಹುದು ಎಂದು ತಕ್ಷಣ ಸರಿಯಾಗಿ ಕೇಳದ ಒಂದು ‘ಬೈ’ಯನ್ನು ಗೊಣಗಿ ಮೆಲ್ಲಗೆ ತಿರುಗಿ ನಡೆದು ಸ್ಟ್ಯಾಂಡಿನಲ್ಲಿದ್ದ ಮೊದಲ ಆಟೊದಲ್ಲಿ ಹತ್ತಿ ತಲೆ ತಗ್ಗಿಸಿ ಚಿಂತೆಯೊಂದಿಗೆ ಕುಳಿತ.
ಆಟೊ ಹೊರಡುವವರೆಗೆ ನೋಡುತ್ತಾ ನಿಂತಿದ್ದೆ. ಮಳೆ ಮೆಲ್ಲಗೆ ಹನಿಯಿತು.
ಹೊತ್ತನ್ನು, ರಸಿಕತೆಯನ್ನು, ಕಾಫಿಯನ್ನು ಹೊರತು ಬೇರೆ ಇನ್ಯಾವುದನ್ನೂ ಹಂಚಿಕೊಳ್ಳದೆ, ಕವಿತೆಯಂತೆ ಮುಗಿದುಹೋದ ಈ ಭೇಟಿಯಲ್ಲಿ ಅವನ ಹೆಸರು ಏನಿರಬಹುದು ಎಂದು ಯೋಚಿಸುತ್ತಾ ಕಾರನ್ನು ಸ್ಟಾರ್ಟ್ ಮಾಡಿದೆ.

 

ತಮಿಳು ಮೂಲ: ಅರುಣ ರಾಜ್ ಕನ್ನಡಕ್ಕೆ: ಕೆ. ನಲ್ಲತಂಬಿ

****

ಮಯೂರ: ಸಂಪುಟ: 51, ಸಂಚಿಕೆ: 07, ಜುಲೈ 2018

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !