ಮೂಢನಂಬಿಕೆಗಳ ಅಪಾಯ

7

ಮೂಢನಂಬಿಕೆಗಳ ಅಪಾಯ

ಗುರುರಾಜ ಕರಜಗಿ
Published:
Updated:

ಹಿಂದೆ ಮಗಧ ದೇಶವನ್ನು ಒಬ್ಬ ಧಾರ್ಮಿಕ ರಾಜ ಆಳುತ್ತಿರುವಾಗ ಬೋಧಿಸತ್ವ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದ. ನಂತರ ಪಬ್ಬಜ್ಜನಾಗಿ, ಸಮಾಪತ್ತಿಯನ್ನು ಪಡೆದು ಹಿಮಾಲಯದಲ್ಲಿ ನೆಲೆಸಿದ.

ಇಲ್ಲಿ ರಾಜನ ಮನೆಯಲ್ಲಿದ್ದ ಬ್ರಾಹ್ಮಣನೊಬ್ಬನಿಗೆ ಶಕುನಗಳಲ್ಲಿ ಅಪಾರ ನಂಬಿಕೆ. ಧರ್ಮದ ವಿಚಾರಗಳಲ್ಲಿ ನಂಬಿಕೆ ಕಡಿಮೆಯಾದರೂ ಮೂಢನಂಬಿಕೆಗಳಲ್ಲಿ ಶ್ರದ್ಧೆ ಬೆಳೆಸಿಕೊಂಡಿದ್ದ. ಮನೆಯಿಂದ ಆತ ಶ್ರೀಮಂತನೂ ಆಗಿದ್ದ. ಒಂದು ದಿನ ಸ್ನಾನ ಮಾಡಿ ಪೆಟ್ಟಿಗೆಯೊಳಗಿನ ಬಟ್ಟೆಗಳನ್ನು ತೆಗೆದುಕೊಳ್ಳಲು ನೋಡಿದಾಗ ಎರಡೂ ಬಟ್ಟೆಗಳನ್ನು ಇಲಿಗಳು ಕಡಿದು ಬಿಟ್ಟಿದ್ದು ಕಂಡಿತು.

ಅವನಿಗೆ ಇದು ಅಮಂಗಲಕಾರಕ, ದರಿದ್ರವನ್ನು ತರುತ್ತದೆ ಎಂಬ ಖಚಿತವಾದ ನಂಬಿಕೆ. ಈ ಬಟ್ಟೆಗಳು ಮನೆಯಲ್ಲಿದ್ದರೆ ಮನೆ ನಾಶವಾಗಿಬಿಡುತ್ತದೆ. ಇದನ್ನು ನೌಕರರಿಗೂ ಕೊಡಬಾರದು, ಭಿಕ್ಷೆ ಬೇಡುವವರಿಗೂ ಕೊಡಕೂಡದು. ಯಾಕೆಂದರೆ ಇಲಿ ಕಡಿದ ಬಟ್ಟೆಯನ್ನು ಯಾರು ಬಳಸುತ್ತಾರೋ ಅವರ ಸರ್ವನಾಶ ಖಚಿತ. ಹೀಗೆಲ್ಲ ಯೋಚಿಸಿ ತನ್ನ ಮಗನನ್ನು ಕರೆದು ಹೇಳಿದ, ‘ಮಗೂ, ಈ ಬಟ್ಟೆಗಳನ್ನು ನೀನೂ ಕೈಯಿಂದ ಮುಟ್ಟಬಾರದು. ಅವುಗಳನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿಕೊಂಡು ಹೋಗು. ಯಾರಿಗೂ ಕೊಡಬೇಡ, ಅವರಿಗೂ ಅನರ್ಥವಾಗುತ್ತದೆ. ಕೊನೆಗೆ ಇವುಗಳನ್ನು ಕಚ್ಚಾ ಸ್ಮಶಾನದಲ್ಲಿ ಬಿಸಾಕಿಬಿಟ್ಟು, ತಲೆಸ್ನಾನಮಾಡಿ ಮನೆಗೆ ಬಾ’ ಮಗ ಕೋಲು ಹಿಡಿದು ಹೊರಟ.

ಬೋಧಿಸತ್ವ ಇದನ್ನು ದಿವ್ಯದೃಷ್ಟಿಯಿಂದ ಕಂಡ. ಈ ತಂದೆ-ಮಕ್ಕಳಿಬ್ಬರಿಗೂ ಸೋತಾಪತ್ತಿ ಪಡೆಯುವ ಶಕ್ತಿ ಇದೆ. ಆದರೆ ಮೂಢನಂಬಿಕೆಯಲ್ಲಿ ಕಳೆದು ಹೋಗುತ್ತಿದ್ದಾರೆ. ಅವರನ್ನು ಬದಲಿಸಬೇಕು ಎಂದುಕೊಂಡು ಬ್ರಾಹ್ಮಣನ ಮಗ ಸ್ಮಶಾನಕ್ಕೆ ಬರುವುದಕ್ಕಿಂತ ಮೊದಲೇ ಅಲ್ಲಿ ಬಂದು ಕುಳಿತುಕೊಂಡ. ಅವನು ಬಿಸಾಕಿದ ಬಟ್ಟೆಗಳನ್ನು ಈತ ಎತ್ತಿಕೊಂಡ. ಹುಡುಗ ಗಾಬರಿಯಿಂದ ಕೂಗಿದ, ‘ಅಯ್ಯಾ ಸನ್ಯಾಸಿ, ಆ ಬಟ್ಟೆಗಳನ್ನು ಮುಟ್ಟಬೇಡ. ಅವು ಇಲಿ ತಿಂದಿರುವ ಬಟ್ಟೆಗಳು. ಘೋರವಿಷಕ್ಕಿಂತ ಕೆಟ್ಟವು. ನಿನ್ನ ಸರ್ವನಾಶವಾಗುತ್ತದೆ.’

ಬೋಧಿಸತ್ವ ನಗುನಗುತ್ತ ಆ ಬಟ್ಟೆಗಳನ್ನು ತೆಗೆದುಕೊಂಡು ರಾಜೋದ್ಯಾನಕ್ಕೆ ನಡೆದ. ಮಗ ಓಡಿ ಹೋಗಿ ತಂದೆಗೆ ನಡೆದದ್ದನ್ನು ಹೇಳಿದ. ತಂದೆ ಚಿಂತಾಗ್ರಸ್ತನಾದ. ಈ ಬಟ್ಟೆಯಿಂದ ಸನ್ಯಾಸಿ ಸರ್ವನಾಶ ಹೊಂದುತ್ತಾನೆ, ವಿಹಾರವೂ ಹಾಳಾಗುತ್ತದೆ. ಆದ್ದರಿಂದ ತಾನೇ ಕೆಲವು ಹೊಸ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ, ಇಲಿ ತಿಂದ ವಸ್ತ್ರಗಳನ್ನು ಎಸೆಯುವಂತೆ ಮಾಡುತ್ತೇನೆಂದುಕೊಂಡು ಬಟ್ಟೆ ತೆಗೆದುಕೊಂಡು ಹೋದ. ಬೋಧಿಸತ್ವ ಅವನಿಗೆ ಬೋಧಿಸಿದ, ‘ಅಯ್ಯಾ, ಇಲಿ ತೀರ ಪುಟ್ಟ ಪ್ರಾಣಿ. ನೀನು ಇಷ್ಟು ದೊಡ್ಡ ವ್ಯಕ್ತಿ. ನೀನು ಬೇಕಾದರೆ ಅದರ ಭವಿಷ್ಯವನ್ನು ನಿರ್ಧರಿಸಬಹುದು. ಅದು ಹೇಗೆ ನಿನ್ನ ಸರ್ವನಾಶ ಮಾಡೀತು? ಒಂದು ಪುಟ್ಟ ಇಲಿಗೆ ಸರ್ವನಾಶಮಾಡುವ ಶಕ್ತಿ ಇದ್ದರೆ ದೊಡ್ಡ ಮೃಗಗಳಿಂದ ಪ್ರಪಂಚ ಬದುಕೀತೇ? ಈ ಮೂಢನಂಬಿಕೆಗಳನ್ನು ಬಿಡು. ನಮ್ಮಂತಹ ಸನ್ಯಾಸಿಗಳಿಗೆ ಈ ಚಿಂದಿಯಾದ ಬಟ್ಟೆಗಳೇ ಸರಿ’ ಎಂದು ಬೋಧಿಸಿದ ನಂತರ ತಂದೆ-ಮಕ್ಕಳಿಬ್ಬರೂ ಪಬ್ಬಜಿತರಾದರು.

ಬುದ್ಧ ಹೇಳಿದ, ‘ಮಂಗಲ-ಅಮಂಗಲಗಳು, ಸೂರ್ಯಗ್ರಹಣ, ಚಂದ್ರಗ್ರಹಣಗಳೆಂಬ ಉತ್ಪಾತಗಳು, ಶುಭ-ಅಶುಭ ಸ್ಪಪ್ನಗಳು, ಲಕ್ಷಣ-ಅವಲಕ್ಷಣಗಳ ದೋಷಗಳನ್ನು ಗಣಿಸದೆ ಮುಂದೆ ಸಾಗುವವನು, ಧರ್ಮ ದ್ವಂದ್ವಗಳನ್ನು ದಾಟಿದವನು, ಖಂಡಿತವಾಗಿಯೂ ಮತ್ತೆ ಈ ಲೋಕದಲ್ಲಿ ಹುಟ್ಟುವುದಿಲ್ಲ.’

ಈ ಮೂಢನಂಬಿಕೆಗಳು ನಮ್ಮನ್ನು ಇಂದಿಗೂ ಕಾಡುತ್ತಿವೆಯಲ್ಲವೇ?

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !