ಶನಿವಾರ, ಸೆಪ್ಟೆಂಬರ್ 25, 2021
22 °C

ಜೇಡರ ದಾಸಿಮಯ್ಯ

ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ದಾಸಿಮಯ್ಯ ಮೂಲತಃ ಕಲಬುರ್ಗಿ ಜಿಲ್ಲೆ ಮುದನೂರಿನವರು. ನೇಯ್ಕೆ ಕಾಯಕ ಮಾಡುತ್ತಾ ವಚನ ವಾಙ್ಮಯಕ್ಕೆ ಒಂದು ತಳಹದಿ, ಒಂದು ಪರಂಪರೆ ಹಾಕಿಕೊಟ್ಟ ಆದ್ಯ ವಚನಕಾರ ಜೇಡರ ದಾಸಿಮಯ್ಯ; ತನ್ನ ವಚನಗಳ ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದಾಗಿ ಬಸವಪೂರ್ವದ ಶ್ರೇಷ್ಠ ವಚನಕಾರ. ತಾಜಾತನದಿಂದ ಕೂಡಿದ ತನ್ನ ವಿಚಾರಪ್ರಣಾಲಿಯನ್ನು ಜನವಾಣಿ ಹಾಗೂ ದೇಸಿ ಛಂದಸ್ಸಿನಿಂದ ಹದವಾಗಿ ಪಾಕಗೊಳಿಸಿ ಮುಂದಣ ಶಿವಶರಣರಿಗೆ ದಾಸಿಮಯ್ಯ ಮಾರ್ಗದರ್ಶಿಯಾದನು. ಆತನ ವಚನಗಳ ಮುಖ್ಯ ಗುಣ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥ ಪ್ರಚುರತೆ. ವಚನ ಒಂದು ಸಾಹಿತ್ಯ ಪ್ರಕಾರವಾಗಿ ರೂಪುಗೊಳ್ಳುತ್ತಿದ್ದುದನ್ನು ಈತನ ವಚನಗಳಲ್ಲಿ ಕಾಣಬಹುದು. ಹೊಸ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮಗಳನ್ನು ತೋರಿಸಿದವರು ದಾಸಿಮಯ್ಯ.

ದಾಸಿಮಯ್ಯ ಜನ್ಮತಃ ಸಾಮಾನ್ಯ ವ್ಯಕ್ತಿ; ಆದರೆ ಸಾಧನೆಯ ಮೂಲಕ ಅಸಮಾನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು. ಷಟ್‌ಸ್ಥಲಾಚರಣೆ ಹಾಗೂ ಶಿವಯೋಗ ಸಾಧನೆಗೆ ಅನುಸಂಧಾನ ಮೊದಲ ಮೆಟ್ಟಿಲು. ವ್ಯಕ್ತಿಗೆ ಸಮ್ಯಕ್ ಜ್ಞಾನೋದಯ ಉಂಟಾದ ಕೂಡಲೇ ಅಂತರಂಗ–ಬಹಿರಂಗಗಳ ಸೂಕ್ಷ್ಮ ನಿರೀಕ್ಷಣೆಯ ವಿಮರ್ಶೆ ನಡೆಯಬೇಕು. ಅವರು ತಮ್ಮ ಅಂತರಂಗವನ್ನು ಪರಿಶೋಧಿಸಿ, ಇರುವ ಕಲ್ಮಶವನ್ನು ದೂರೀಕರಿಸಿ ಅಂತರಂಗಶುದ್ಧಿಯನ್ನು ಹೊಂದಬೇಕಾಗುವುದು. ದಾಸಿಮಯ್ಯ ಅವರಲ್ಲಿ ಇಂತಹ ವಿಮರ್ಶೆ ಮತ್ತು ಶೋಧನೆಗಳು ನಡೆದುದು ಕಂಡುಬರುತ್ತವೆ.

ಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಸ್ಯಭಾವ, ಸಮರ್ಪಣಾಭಾವ, ಧರ್ಮ, ನೀತಿ ಮೊದಲಾದ ವಿಷಯಗಳು ದಾಸಿಮಯ್ಯುನ ವಚನಗಳಲ್ಲಿ ಚೆನ್ನಾಗಿ ಪ್ರತಿಪಾದಿತವಾಗಿವೆ. ತನ್ನ ಅನುಭವಕ್ಕೆ ನಿಲುಕದ ಯಾವುದೇ ಸಂಗತಿಯನ್ನು ಅವರು ಹೇಳಹೋಗಿಲ್ಲ. ಯಾವುದೇ ಅನುಭವವು ಸಹೃದಯರಿಗೆ ತಲುಪುವಂತೆ ಉಪಮೆ- ರೂಪಕಾದಿಗಳ ಸಹಾಯಗಳಿಂದ ಹೇಳುವ ರೀತಿ ಸೋಪಜ್ಞತೆಯಿಂದ ಕೂಡಿದೆ. ಭಾಷೆಯಲ್ಲಿ ಸರಳತೆ ಕಂಡುಬಂದರೂ ಭಾವದಲ್ಲಿ ಅರ್ಥ ಶ್ರೀಮಂತಿಕೆ ಎದ್ದುಕಾಣುತ್ತದೆ. ಇವರ ವಚನಗಳಲ್ಲಿ ಸಮಾಜವಿಮರ್ಶೆ ಕಟುವಾಗಿ ವಿಡಂಬನಾತ್ಮಕವಾಗಿ ನಿರೂಪಿತವಾಗಿದೆ.

ದಾಸಿಮಯ್ಯ ತನ್ನ ಬುದ್ಧಿಯ ಮಿಂಚಿಗೆ, ಭಾವದ ಬೆಳಕಿಗೆ ಅನುಭಾವದ ಉಸಿರಿಗೆ ಆಕಾರವನ್ನು ನೀಡುವಾಗ ಆಡು ನುಡಿಯನ್ನು ಬಳಸಿ ಕೊಂಡುದುದರಿಂದ ಆತನ ಭಾಷೆಯಲ್ಲಿ ಕಸುವಿದೆ, ಕಾವಿದೆ, ಹೊಸತನವಿದೆ, ಜೀವಂತಿಕೆಯಿದೆ. ಸಾಹಿತ್ಯ, ಭಾವ, ಕಾವ್ಯ, ಭಾಷೆ, ಸೌಂದರ್ಯ ಎಲ್ಲ ದೃಷ್ಟಿಯಿಂದಲು ದಾಸಿಮಯ್ಯನ ವಚನಗಳು ತುಂಬ ಎತ್ತರಕ್ಕೆ ನಿಲ್ಲುತ್ತವೆ. ದಾಸಿಮಯ್ಯನ ವಚನಗಳಲ್ಲಿ ತತ್ತ್ವದ ಶುಷ್ಕವಾದ ನಿರೂಪಣೆಯಿಲ್ಲ. ಉದಾತ್ತವಾದ ಭಾವಗಳನ್ನು ಬಹು ಚಮತ್ಕಾರವಾಗಿ ಸುಲಭವಾದ ಮಾತುಗಳಲ್ಲಿ ಓದಿದೊಡನೆಯೇ ಮನಸ್ಸಿಗೆ ಹಿಡಿಯುವ ಹಾಗೆ ಒಂದೊಂದು ಅರ್ಥಗರ್ಭವಾದ ಉಪಮಾನದಿಂದ ಒಂದೊಂದು ದೊಡ್ಡ ಚಿತ್ರವೇ ಕಣ್ಣಮುಂದೆ ನಿಂತ ಹಾಗೆ ಕಾಣುತ್ತವೆ. ಸ್ವತಂತ್ರ ವಿಚಾರ ವ್ಯಕ್ತಿತ್ವದಿಂದ ಘನತೆಯನ್ನು ಪಡೆದಿರುವ ದಾಸಿಮಯ್ಯ ಬಸವಣ್ಣ ಮುಂತಾದ ಮುಂದಿನ ಶರಣರಿಗೆ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ.

ದಾಸಿಮಯ್ಯ ನಡೆಸುತ್ತಿದ್ದ ಶಿವಕಾರುಣ್ಯಗೋಷ್ಠಿಗಳು ಮುಂದೆ ಬಸವಣ್ಣನವರ ಕಾಲದಲ್ಲಿ ‘ಅನುಭವ ಮಂಟಪ’ದಂತಹ ಪ್ರಸಿದ್ಧ ವಿಚಾರಗೋಷ್ಠಿಗಳು ರೂಪುಗೊಳ್ಳಲು ಕಾರಣವಾಯಿತು. ನವಸಮಾಜದ ದೃಷ್ಟಿಯಿಂದ ದಾಸಿಮಯ್ಯ ಪ್ರಾರಂಭಿಸಿದ ಧಾರ್ಮಿಕ ಸಾಮಾಜಿಕ ಸುಧಾರಣೆಗಳು ಮುಂದುವರಿದು ಬಸವಣ್ಣ ಮತ್ತು ಸಮಕಾಲೀನ ಶರಣರ ಕಾಲದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಮುಂದುವರಿದುದನ್ನು ಕಾಣಬಹುದು.

ದಾಸಿಮಯ್ಯನ ಆದರ್ಶ ವ್ಯಕ್ತಿತ್ವ ಬಸವಣ್ಣ ಹಾಗೂ ಇತರ ಶರಣರ ಮೇಲೆ ಪ್ರಭಾವ ಬೀರಿವೆ. ಬಸವಣ್ಣನವರ ಸಮಗ್ರ ಚಟುವಟಿಕೆಗಳಿಗೆ ದಾಸಿಮಯ್ಯ ಪ್ರೇರಕ ಶಕ್ತಿ. ನ್ಯಾಯಬದ್ಧವಾದ ವಿಚಾರ ಮತ್ತು ಸೌಜನ್ಯದಿಂಲೇ ಅನ್ಯರನ್ನು ಪರಿವರ್ತಿಸಿದ ಕೀರ್ತಿ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು