ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ವಿಶೇಷಾಂಕ 2022: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ - ವಿಧ್ಯುಕ್ತ

Last Updated 5 ನವೆಂಬರ್ 2022, 21:45 IST
ಅಕ್ಷರ ಗಾತ್ರ

ಮನೆ ಹತ್ತಿರವಿರುವ ಕೆರೆ ಏರಿಯಲ್ಲಿ ನಾನು ಪಾಪು ವಾಕಿಂಗ್ ಹೋಗಿ ಕೆರೆ ಏರಿಯ ಆ ಕಡೆ ತುದಿಯಲ್ಲಿರುವ ಜೋಕಾಲಿಯಲ್ಲಿ ಪಾಪುವನ್ನು ಹತ್ತು ಹದಿನೈದು ನಿಮಿಷ ಆಟ ಆಡಿಸಿ ಮನೆಗೆ ಹಿಂತಿರುಗಿದಾಗ ಆರೂಕಾಲು; ಅದಾಗಲೇ ಕತ್ತಲೆ ಕಾಲಿಡಲಾರಭಿಸಿತ್ತು. ಅಪಾರ್ಟ್‌ಮೆಂಟಿನ ದೊಡ್ಡ ಗೇಟಿನ ಬಳಿ ಎಂಟು ಹತ್ತು ಜನರು ನಿಂತಿದ್ದರು. ಒಬ್ಬನ ಕೈಯ್ಯಲ್ಲಿ ಹೂವಿನ ಹಾರವಿತ್ತು. ಮತ್ಯಾರನ್ನೋ ಕಾಯುತ್ತಾ ಅಲ್ಲಿ ನಿಂತಂತಿತ್ತು. ಇವರ್ಯಾರು? ಯಾಕಿಲ್ಲಿ ನಿಂತಿದ್ದಾರೆ? ಎಂದು ಯೋಚಿಸುತ್ತಾ ಪಾಪು ಕೈ ಹಿಡಿದು ಗೇಟು ದಾಟಿ ಒಳಗೆ ಬಂದೆ. ಪಾರ್ಕಿಂಗ್ ಏರಿಯಾದಲ್ಲಿ ಕೆಳಗಡೆ ಮನೆ ಆಂಟಿ, ಸೆಕ್ಯುರಿಟಿ ಬಂಗಾರಪ್ಪ, ಎದುರುಗಡೆ ಮನೆ ಶ್ಯಾಮಲ, ಮೂರನೇ ಫ್ಲೋರಿನ ಪ್ರಭಾಕರ ಮತ್ತಿತ್ತರರು ಅಲ್ಲಲ್ಲಿ ನಿಂತು ಗುಸುಗುಸು ಮಾತಾಡುತ್ತಿದ್ದರು.

ಎಲ್ಲರ ಮುಖದಲ್ಲೂ ಮನೆ ಮಾಡಿದ್ದ ದುಗುಡದ ಛಾಯೆಯೇ ಏನೋ ಅನಾಹುತ ಘಟಿಸಿದೆ ಎನ್ನುವುದನ್ನು ಮಾತಿಲ್ಲದೆ ದಾಟಿಸುತ್ತಿತ್ತು. ನನಗೆ ಸ್ವಲ್ಪ ಆತ್ಮೀಯರಾಗಿದ್ದ ಕೆಳಗಡೆ ಮನೆಯ ಆಂಟಿಯ ಬಳಿ ಹೋದಾಗ ‘ಗೊತ್ತಾಯ್ತಾ? ರೇಖಾ ಹೋದಳಂತೆ’ ಎಂದರು. ನನಗೆ ಇದು ತೀರಾ ಅನಿರೀಕ್ಷಿತವೆನಿಸಿ ‘ಓಹ್! ಯಾವಾಗ?’ ಎನ್ನುವ ಆಘಾತ ಬೆರೆತ ಉದ್ಘಾರ! ‘ಮಧ್ಯಾಹ್ನ ಒಂದೂ ಒಂದೂವರೆಗಿರಬೇಕು, ಯಾರಿಗೂ ಮೊದಲು ಹೇಳಿರಲಿಲ್ಲ’ ಎಂದ ಬಂಗಾರಪ್ಪ. ‘ರೇಖಂಗೆ ಕ್ಯಾನ್ಸರ್ ಇದ್ದಿದ್ದು ನಿಂಗೆ ಗೊತ್ತಿರಬೇಕಲ್ಲ, ಈಗ ಎಂಟ್ಹತ್ತು ದಿನಗಳಿಂದ ಜಾಸ್ತಿಯಾಗಿತ್ತು. ಹಾಸಿಗೆಯಿಂದ ಏಳಕ್ಕೆ ಆಗ್ತಿರಲಿಲ್ಲವಂತೆ, ಈಗೊಂದು ನಾಲ್ಕು ದಿನಗಳ ಹಿಂದೆ ಅವರಮ್ಮ ಸಿಕ್ಕು ಕರೆದಿದ್ದರು, ಸಿಕ್ಕಾಪಟ್ಟೆ ದುಃಖದಲ್ಲಿದ್ದರು. ಹೋಗಿ ನೋಡಿ ಸ್ವಲ್ಪ ಹೊತ್ತು ಕುಳಿತು ಬಂದಿದ್ದೆ’ ಎಂದರು ಆಂಟಿ. ಹೊರಗಡೆ ನಿಂತಿದ್ದ ನಾಲ್ಕೈದು ಜನ ಒಳಗೆ ಬಂದು ಲಿಫ್ಟಿನೊಳಗೆ ಹೋದರು. ಮೇಲಿನಿಂದ ಕೆಳಗೆ ಬಂದವರಿಬ್ಬರು ನಮ್ಮನ್ನು ದಾಟಿಕೊಂಡು ಹೋದರು. ಲಿಫ್ಟ್ ಮತ್ತೆ ನಾಲ್ಕನೇ ಫ್ಲೋರಿಗೆ ಹೋಯಿತು.

ಆಂಟಿ ಹೇಳಿದ್ದಕ್ಕೆ ಏನು ಪ್ರತಿಕ್ರಿಯಿಸಬೇಕು ತಿಳಿಯದೆ ‘ಛೆ ಪಾಪ ಅಲ್ಲ, ಅವಳ ಮಗಳನ್ನು ನೋಡಿದ್ರೆ ಅಯ್ಯೋ ಎನಿಸತ್ತೆ’ ಅಂದೆ. ‘ಈಗೊಂದು ಆರು ತಿಂಗಳ ಹಿಂದೇನೇ ಏನೂ ಮಾಡಕ್ಕಾಗಲ್ಲ ಅಂಥ ಡಾಕ್ಟರ್ ಹೇಳಿಬಿಟ್ಟಿದ್ರಂತೆ ಮೇಡಂ, ಆದ್ರೂ ಹಾಸ್ಪಿಟಲ್ಲಿಗೆ ಹೋಗಿ ಬರ್ತಾನೇ ಇದ್ರು’ ಎಂದ ಬಂಗಾರಪ್ಪ. ಬೇಸರ, ವಿಷಾದ, ದುಃಖ, ನಿರ್ಲಿಪ್ತತೆ ಎಲ್ಲವನ್ನೂ ಒಳಗೊಂಡ ಭಾವವೊಂದನ್ನು ಅನುಭವಿಸುತ್ತಾ ಮನೆಯ ಲಾಕ್ ಓಪನ್ ಮಾಡಿ ಉಸ್ ಎಂದು ಡೈನಿಂಗ್ ಟೇಬಲ್ ಕುರ್ಚಿಯೊಂದನ್ನು ಎಳೆದು ಕೂತೆ. ಪಾಪು ಆಡಲು ಪಕ್ಕದ ಮನೆ ಹೊಕ್ಕಿದ್ದ. ಫೋನ್ ತೆಗೆದುಕೊಂಡು ‘ರೇಖಾ ಹೋದಳಂತೆ’ ಎಂದು ಸಿದ್ದಾರ್ಥನಿಗೆ ಮೆಸೇಜು ಹಾಕಿ ಒಂದೆರಡು ನಿಮಿಷ ಸುಮ್ಮನೆ ಕುಳಿತೆ. ಸಾವಿನ ಸುತ್ತ ಯೋಚನೆಗಳ ಗಿರಕಿ; ಬಹುಷಃ ಸಾವಿನಷ್ಟು ಮನುಷ್ಯನನ್ನು ಕಾಡುವ ಸಂಗತಿ ಮತ್ತೊಂದಿಲ್ಲ.

ಎಷ್ಟೆಲ್ಲಾ ಮುಂದುವರೆದು ವೈದ್ಯಕೀಯ ಸೌಲಭ್ಯಗಳಿದ್ದರೂ ಸಾವಿನೆದುರು ಮಾತ್ರ ಮನುಷ್ಯ ಅಸಹಾಯಕ! ಸಾಯುತ್ತಾರೆ ಎಂದು ಗೊತ್ತಿದ್ದೂ ಉಳಿಸಿಕೊಳ್ಳಲಾಗದ, ಏನೂ ಮಾಡಲಾಗದ ಮನಃಸ್ಥಿತಿಯನ್ನು ಸಂಬಂಧಪಟ್ಟವರು ಹೇಗೆ ಎದುರಿಸುತ್ತಾರೋ? ನೆಂಟರಲ್ಲ, ಬಂಧುಗಳಲ್ಲ, ಕೊನೇಪಕ್ಷ ಸ್ನೇಹಿತರೂ ಅಲ್ಲ, ಏನೂ ಸಂಬಂಧವಿಲ್ಲದವಳ ಸಾವು ನನ್ನನ್ನೇ ಇಷ್ಟು ನೋಯಿಸುತ್ತಿರುವಾಗ ಇನ್ನು ಅವಳ ಗಂಡ, ಮಗಳು, ತಾಯಿಗೆ ಎಷ್ಟು ದುಃಖವಾಗಿರಬೇಡ...

ಮೆಸೇಜ್ ರಿಪ್ಲೈ ಸೌಂಡ್ ಎಚ್ಚರಿಸಿತು. ‘ಓಹ್! ಯಾವಾಗ?’ ಎನ್ನುವ ರಿಪ್ಲೈ ಅವನಿಂದ. ‘ಮಧ್ಯಾಹ್ನ ಇರಬೇಕು, ಯಾರಿಗೂ ಹೇಳಿರಲಿಲ್ಲವಂತೆ’ ಎಂದುತ್ತರಿಸಿ ಕೈಕಾಲು ತೊಳೆದು ಬಂದು ಟೀ ಕಾಯಿಸಿದ್ದ ಪಾತ್ರೆ ತೊಳೆದು ಒಂದಿಷ್ಟು ಜೀರಿಗೆ ನೀರಿಗೆ ಹಾಕಿ ಕಾಯಿಸಲು ಇಟ್ಟೆ. ದೇವರಿಗೆ ದೀಪ ಹಚ್ಚಿ ಊದಿನಕಡ್ಡಿ ಬೆಳಗಿ ಭಜನೆ ಮಾಡಲು ಕುಳಿತೆ. ಕರೆಕ್ಟ್ ನಮ್ಮನೆ ಮೇಲೇ ಇರುವ ನಾಯಿಮನೆಯ ಯಾವ ಕಡೆ ರೇಖಾಳ ಹೆಣವನ್ನು ಮಲಗಿಸಿರಬಹುದು? ರೇಖಾಳ ಗಂಡ ಹರೀಶ, ಹತ್ತು ವರ್ಷದ ಮಗಳು ಅದಿತಿ ಏನು ಮಾಡುತ್ತಿರಬಹುದು? ಅಲ್ಲಿ ಪರಿಸ್ಥಿತಿ ಈಗ ಹೇಗಿರಬಹುದು? ಯಾರಾದರೂ ಅಳುವ ಶಬ್ಧ ಕೇಳಿಸಬಹುದಾ? ಎಂದು ತುಸು ಆಲಿಸಿದೆ.

ಹೂಂಹೂಂ ಇಲ್ಲ, ರಸ್ತೆಯಲ್ಲಿ ಯಥಾಪ್ರಕಾರ ವಾಹನಗಳು ಓಡುವ ಸದ್ದು, ಆ ಕಡೆ ಇರುವ ಗೋಡೌನಲ್ಲಿ ಕಿರ್ ಎಂದು ಕೊರೆಯುವ ವೆಲ್ಡಿಂಗ್ ಮೆಷಿನ್ನಿನ ಸಪ್ಪಳ, ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ಆಡುವ ಮಕ್ಕಳ ಕೂಗಾಟ, ಆಗೀಗ ಪಾರಿವಾಳಗಳ ರೆಕ್ಕೆ ಬಡಿಯುವ ಶಬ್ಧ...ಮೇಲಿನ ಮನೆಯಲ್ಲಿ ಮಾತ್ರ ವಾತಾವರಣ ಬದಲಾಗಿದೆ; ಉಳಿದಂತೆ ಜಗತ್ತು ಇದ್ದ ಹಾಗೇ ಇದೆ; ರೇಖಾಳ ಸಾವಿನಿಂದ ನಾವೆಲ್ಲರೂ ಕರೆಯುತ್ತಿದ್ದ ನಾಯಿಮನೆ ಸದ್ಯ ಸಾವಿನ ಮನೆಯಾಗಿ ಬದಲಾಗಿದೆ. ಮುತ್ತುತ್ತಿದ್ದ ಯೋಚನೆಗಳ ಮಧ್ಯೆಯೇ ಬ್ರಹ್ಮ ಮುರಾರಿ, ದೇವಿ ಸುರೇಶ್ವರಿ ಹಾಡಿ ಕೈ ಮುಗಿದು ತುಸು ಹೆಚ್ಚೇ ದೇವರ ಪಟ ದಿಟ್ಟಿಸಿ ಹಣೆಗೆ ಭಸ್ಮ ಹಚ್ಚಿಕೊಂಡು ಬಂದು ಸ್ಟವ್ ಆರಿಸಿ ನಿತ್ಯದಂತೆ ವ್ಯಾಯಾಮ ಮಾಡಲು ಮುಂದಾದೆ. ಕಾಲೆತ್ತಿ ಹಾರುತ್ತಾ ಕೈ ಎತ್ತಿ ತಿರುಗಿಸುತ್ತಾ ದೇಹವನ್ನು ವ್ಯಾಯಾಮದಲ್ಲಿ ತೊಡಗಿಸುತ್ತಿದ್ದೆನಾದರೂ ಮನಸ್ಸು ಮಾತ್ರ ರೇಖಾಳ ಸಾವಿನ ಸುತ್ತವೇ ತಿರುಗುತ್ತಿತ್ತು. ನಮ್ಮೂರಲೆಲ್ಲಾ ಯಾರಾದರೂ ಸತ್ತರೆ ಅವರ ಮನೆಗೆ ಹೋಗಿ ನೋಡಿಕೊಂಡು ಬರುವುದು, ಕೊನೆಯದಾಗಿ ದರ್ಶನ ಮಾಡುವುದು ಪದ್ಧತಿ.

ಇವರ ಮನೆಗೂ ಹೋಗಿ ನೋಡಿಕೊಂಡು ಬರಬೇಕಾ? ಅಥವಾ ಬೇಡವಾ? ಇವರೇನು ಸಂಬಂಧಿಕರಲ್ಲ. ಮೇಲಾಗಿ ಸ್ನೇಹಿತರೂ ಅಲ್ಲ. ಬದಲಾಗಿ ಒಂದು ನಾಯಿಯ ಕಾರಣದಿಂದ ವೈರಿಗಳಾಗಿ ಬದಲಾದವರು! ನಾನು ಹೋದರೂ ಸಿದ್ದಾರ್ಥನಂತೂ ಖಂಡಿತಾ ಬರುವುದಿಲ್ಲ; ಅವನು ಬಂದರೂ ಮೊದಲೇ ಆಘಾತದಲ್ಲಿರುವ ಹರೀಶ ನೀನ್ಯಾಕೆ ಬಂದಿದ್ದು ಅಂಥ ಸಿಟ್ಟಾಗಿ ಬೈದರೂ ಬೈದನೇ? ಇಷ್ಟಕ್ಕೂ ಆಗದವರ ಮನೆಗೆ ನಾನಾದರೂ ಯಾಕೆ ನೋಡಲು ಹೋಗಬೇಕು? ಆದರೂ ಅವರೊಂದಿಗೆ ಮನಃಸ್ತಾಪವಿದ್ದರೂ ಆ ಮನೆಯಲ್ಲುಂಟಾದ ಸಾವು ನನ್ನನ್ನು ಇಷ್ಟು ತಲ್ಲಣಗೊಳಿಸುತ್ತಿರುವುದೇಕೆ? ಸಾವಿಗೆ ದ್ವೇಷವನ್ನು ಮರೆಸುವ ಶಕ್ತಿಯಿದೆಯೇ? ಎಷ್ಟೋ ಸಾರಿ ಬದುಕಿದ್ದಾಗ ಮಾಡಿದ ಕೆಡುಕುಗಳನ್ನು ಸತ್ತ ಮೇಲೆ ಮರೆತು ಮನ್ನಿಸಿಬಿಡುತ್ತೇವಲ್ಲ! ಹೀಗೆ ಯೋಚನೆಗಳ ಪ್ರವಾಹ. ಆದ ಘಟನೆಗಿಂತ ಹೆಚ್ಚಾಗಿ ಆಗದವರ ಮನೆಯಲ್ಲಿ ಸಾವಾದರೆ ನೋಡಲು ಹೋಗಬೇಕಾ? ಬೇಡವಾ? ಎನ್ನುವ ಸಂಧಿಗ್ಧವೇ ನನ್ನನ್ನು ಹೆಚ್ಚು ಬಾಧಿಸುತ್ತಿರುವಂತೆ ಕಂಡಿತು.

ರೂಢಿಯಂತೆ ಕಾಲು ಮಡಚುತ್ತಾ ಎತ್ತುತ್ತಾ ಸೂರ್ಯನಮಸ್ಕಾರ ಮಾಡಲು ಬಾಗುತ್ತಿದ್ದರೂ, ಈ ಅಪಾರ್ಟ್‌ಮೆಂಟಿನಲ್ಲಿ ಮನೆ ತೆಗೆದುಕೊಂಡು ಬಂದ ಮೊದಲ ದಿನಗಳು ನೆನಪಾದವು. ದೊಡ್ಡದಾದ ಕಿಟಕಿಗಳು, ಯಥೇಚ್ಛ ಗಾಳಿ ಬೆಳಕು ಅಪೇಕ್ಷಿಸುವ, ಮನೆಯೊಳಗೂ ಆಕಾಶ ಕಾಣಬೇಕೆಂದು ಬಯಸುವ ನಾನು ಸಾಮಾನು ಸರಂಜಾಮುಗಳನ್ನು ಸ್ವಲ್ಪ ಜೋಡಿಸಿ ಒಂದು ಹಂತಕ್ಕೆ ಬಂತು ಎನ್ನುವಾಗ ಆಕಾಶ ನೋಡಲು ಟೆರೇಸಿಗೆ ಓಡಿದ್ದೆ.

ಆಕಾಶ ಹೊಂಬಣ್ಣವಾಗಿ ಸೂರ್ಯ ಕೇಸರಿ ಚೆಂಡಾಗಿ ನೋಡಲು ಚೆಂದ ಕಂಡರೂ ಮೇಲೆ ನೋಡುತ್ತಾ ಮೈಮರೆತು ಕಾಲು ಎತ್ತೆತ್ತಲೋ ಇಡುವಂತಿಲ್ಲ! ನೆಲದ ತುಂಬಾ ಎಲ್ಲೆಂದರಲ್ಲಿ ನಾಯಿಯ ಕಕ್ಕ! ಇದೇನು ಕರ್ಮ? ಇಡೀ ಟೆರೇಸ್ ನಾಯಿಯ ಟಾಯ್ಲೆಟ್ ಆಗಿಬಿಟ್ಟಿದೆಯಲ್ಲಾ! ನಾಯಿಯನ್ನು ಸಾಕಿಕೊಂಡು ಟೆರೇಸಿಗೆ ಕರೆದುಕೊಂಡು ಬಂದು ಕಕ್ಕ ಮಾಡಿಸುವ ಭೂಪರು ಯಾರಿರಬಹುದು? ಎಂದು ಬೈದುಕೊಳ್ಳುತ್ತಾ ಕೆಳಗಿಳಿದೆ. ಸಿದ್ಧಾರ್ಥ ಆಫೀಸಿನಿಂದ ಬರುತ್ತಿದ್ದಂತೆಯೇ ಹೀಗ್ಹೀಗೆ ಎಂದು ಆಕಾಶ, ಸೂರ್ಯಾಸ್ತ ನೋಡಲು ಟೆರೇಸಿಗೆ ಹೋದ ಕತೆ, ನೆಮ್ಮದಿ ಪಡೆದುಕೊಳ್ಳಲು ಹೋಗಿ ಅಸಮಧಾನ ಉಂಟಾದ ಬಗೆ ವಿವರಿಸಿದೆ. ‘ನಾಲ್ಕನೇ ಫ್ಲೋರಿನಲ್ಲಿ ನಮ್ಮನೆ ಮೇಲೇನೇ ಕನ್ನಡ ಮಾತಾಡುವ ಫ್ಯಾಮಿಲಿ ಇದೆಯಲ್ಲ, ಹರೀಶ್‌ದು, ಅವರ ಮನೇಲಿ ನಾಯಿ ಇದೆ, ಅವರದೇ ಕೆಲಸ’ ಅಂದ.

‘ಎಂಥಾ ಮನುಷ್ಯರಪ್ಪಾ ಅವ್ರು! ನಾಯಿ ಸಾಕ್ಕೊಂಡು ಎಲ್ಲರಿಗೂ ಸೇರಿದ ಪಬ್ಲಿಕ್ ಪ್ಲೇಸಲ್ಲಿ ಹೊಲಸು ಮಾಡಿಸೋದಾ? ನನ್ನಂಥವರಿಗೆ ನಾಯಿ ಸಾಕ್ಕಂಡ್ರೆ ವಾಕಿಂಗ್ ಅಂಥ ಕರ್ಕೊಂಡು ಹೋಗಿ ತೀರಾ ರಸ್ತೆ ಮೇಲೆ ಕಕ್ಕ ಮಾಡಿಸೋಕೇ ಮುಜುಗರವಾಗತ್ತೆ, ಇವರೆಂಥವರು? ಟೆರೇಸ್ ಮೇಲೇ ಆರಾಮಾಗಿ ಹೊಲಸು ಮಾಡಿಸ್ತಾರಲ್ಲ, ಇದನ್ನ ಹೇಗಾದರೂ ತಡೀಬೇಕು ಅಂದೆ.

ಈ ಅಪಾರ್ಟ್‌ಮೆಂಟಿನಲ್ಲಿ ಇರುವವರ್ಯಾರೂ ಹರೀಶನ ಮನೆಯವರು ನಾಯಿಯನ್ನು ಟೆರೇಸಿಗೆ ಕರ್ಕೊಂಡು ಹೋಗಿ ಕಕ್ಕ ಮಾಡಿಸುವ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಮಾಡುವುದು ಸೆಕ್ಯುರಿಟಿ ಕೆಲಸವಾದರೂ ಕೆಳಗೆ ಹೋದಾಗಲೆಲ್ಲಾ ಮಾತುಗಳಿಗೆ ಕಿವಿಯಾಗಿ ಆತ್ಮೀಯತೆ ತೋರುತ್ತಿದ್ದ ಬಂಗಾರಪ್ಪನ ಬಳಿ ಟೆರೇಸ್, ನಾಯಿಯ ಟಾಯ್ಲೆಟ್ ಆಗಿರುವ ಬಗ್ಗೆ ಕೇಳಿದಾಗ ‘ಹರೀಶಪ್ಪೋರು ಬೆಳಿಗ್ಗೆ ಕೆಲ್ಸಕ್ಕೆ ಹೋದ್ರೆ ರಾತ್ರಿಯೇ ಬರೋದು, ಆವಮ್ಮುಂಗೆ ಕಾಲು ಸರಿ ಇಲ್ಲ, ಕ್ಯಾನ್ಸರ್ ಆಗಿ ಕಾಲಲ್ಲಿ ಬಲ ಇಲ್ಲ, ನಾಯಿಯನ್ನು ಹೊರಗೆ ವಾಕಿಂಗ್ ಕರ್ಕಂಡು ಹೋಗೋರು ಯಾರೂ ಇಲ್ಲ’ ಅಂದ.

‘ಸಾಕಕ್ಕೆ ಆಗೋದಿಲ್ಲ ಅಂದ್ರೆ ನಾಯಿಯನ್ನು ಯಾಕೆ ಇಟ್ಕೋಬೇಕು? ಕೊನೇಪಕ್ಷ ಹೊತ್ತುಹೊತ್ತಿಗೆ ವಾಕಿಂಗ್ ಕರ್ಕೊಂಡು ಹೋಗಕ್ಕೆ ಯಾರುನ್ನಾದ್ರೂ ಜನನ್ನಾದ್ರೂ ಇಟ್ಕೋಬೇಕು, ಅದು ಬಿಟ್ಟು ತಮ್ಮದೇ ಓನ್ ಹೌಸು ಅನ್ನೋರಂಗೆ ಎಲ್ರಿಗೂ ಸೇರಿದ ಜಾಗ ಟೆರೇಸನ್ನ ಹೊಲಸು ಮಾಡದು ಅಂದ್ರೆ...ಇಂಥಾ ಜನನ್ನ ಎಲ್ಲೂ ನೋಡಿಲ್ಲಪ’ ಅಂದೆ. ತಲೇಲಿ ಹೇಗಾದ್ರೂ ಟೆರೇಸಲ್ಲಿ ಕಕ್ಕ ಮಾಡಿಸೋದನ್ನ ತಡೀಬೇಕು ಅನ್ನೋದೇ ಓಡ್ತಾ ಇತ್ತು. ಮರುದಿನ ನನ್ನ ದೂರದ ನೆಂಟರಾದ ಫಸ್ಟ್ ಫ್ಲೋರ್ ಆಂಟಿ ಸಿಕ್ಕಿದಾಗಲೂ, ಸಂಜೆ ಹೊತ್ತು ಅಗಾಧ ಅನಂತ ಆಕಾಶದ ಬಣ್ಣಗಳು ಖುಷಿಯನ್ನು ಹಂಚುವ ಬಗ್ಗೆ, ಆಕಾಶ ನೋಡ್ತಾ ರಿಲ್ಯಾಕ್ಸ್ ಆಗುವ ಬಗ್ಗೆ ಹೇಳ್ತಾ ನಾಯಿಯ ಕಕ್ಕದ ವಿಷಯ ಪ್ರಸ್ತಾಪಿಸಿದೆ.

‘ಹೂಂ, ಅವಳಿಗೆ ಹುಷಾರಿಲ್ಲ ಅಂಥ ಈ ಅಪಾರ್ಟ್ಮೆಂಟೋರು ತೋರಿಸುವ ಸಹಾನುಭೂತಿಯನ್ನ ಟೆರೇಸ್ ಮೇಲೆ ಕಕ್ಕ ಮಾಡಿಸೋಕೆ ಅನುಮತಿ ಅಂಥ ಅನ್ಕೊಂಡುಬಿಟ್ಟಿದ್ದಾರೆ! ನಾವು ಯಾರೂ ಟೆರೇಸಿಗೇ ಹೋಗದೆ ಯಾವ ಕಾಲವಾಯ್ತೇನ’ ಅಂದ್ರು. ‘ನಂಗಂತೂ ಟೆರೇಸಿಗೆ ಹೋಗದೇ ಇರಕ್ಕಾಗಲ್ಲ, ಅದು ಅವರೊಬ್ಬರಿಗೆ ಸೇರಿದ ಜಾಗವೂ ಅಲ್ಲ, ಹೇಗಾದ್ರೂ ಅದನ್ನ ನಿಲ್ಲಿಸಬೇಕು’ ಅಂದೆ. ‘ಅದನ್ನ ಅವರೇ ತಿಳ್ಕೋಬೇಕು, ಹೇಳಿ ಪ್ರಯೋಜನ ಇಲ್ಲ, ಹಿಂದೆ ಹಲವಾರು ಬಾರಿ ಹೇಳಿದ್ವಿ. ಆದ್ರೆ ಮೇಂಟೆನೆನ್ಸ್ ನೋಡಿಕೊಳ್ಳುವ ಶ್ರೀನಿವಾಸನ ಮನೆಗೂ ರೇಖಾಳ ಮನೆಗೂ ತುಂಬಾ ಫ್ರೆಂಡ್‌ಶಿಪ್, ಹಾಗಾಗಿ ಅವ್ರೂ ಏನೂ ಹೇಳದಿಲ್ಲ’ ಅಂದ್ರು. ‘ಯಾವ ಅಪಾರ್ಟ್ಮೆಂಟಲ್ಲೂ ಹೀಗೆಲ್ಲಾ ಬಿಡಲ್ಲ, ಇಲ್ಲೇ ಹೀಗೆ ನೋಡ್ತಿರೋದು ನಾನು’ ಅಂದೆ ಬೇಸರದಲ್ಲಿ. ‘ಹೂಂ, ಅವ್ರಿಗೆ ದುಡ್ಡಿಗೇನು ಬರ ಇಲ್ಲ, ಬೇಕು ಅಂದ್ರೆ ನಾಯೀನ ಹೊತ್ತು ಹೊತ್ತಿಗೆ ವಾಕಿಂಗ್ ಕರ್ಕೊಂಡು ಹೋಗಕ್ಕೆ ಜನ ಇಟ್ಕೋಬಹುದು, ಆದ್ರೆ ಇಟ್ಕೊಳಲ್ಲ, ನಮ್ಗೆ ಹೇಳೀ ಹೇಳೀ ಸಾಕಾಗಿ ಬಿಟ್ಟಿದೀವಿ’ ಎನ್ನುತ್ತಾ ಮಾತಿನ ವಿಷಯ ಬದಲಿಸಿದರು. ಮಧ್ಯಾಹ್ನ ಊಟಕ್ಕೇನು ಮಾಡಿದ್ದು ಕೇಳ್ತಾ ರಾತ್ರಿಗೆ ಚಪಾತಿ ಮಾಡ್ಬೇಕು ಎನ್ನುತ್ತಾ ಹೋದರು.

ಸಂಜೆ ಸಿದ್ದಾರ್ಥ ಬಂದಾಗ ‘ಇನ್ನೊಬ್ಬರಿಗೆ ತೊಂದರೆಯಾಗದಂತೆ ಸಾಕುವ ಯೋಗ್ಯತೆ ಇದ್ದರೆ ಮಾತ್ರ ನಾಯಿಯನ್ನು ಸಾಕ್ಕೋಬೇಕು; ಇಲ್ಲವಾದ್ರೆ ನಾಯಿ ಯಾಕೆ ಬೇಕು? ಹತ್ತಿರದಲ್ಲಿ ಪಾರ್ಕೂ ಇಲ್ಲ, ಮಗು ಕರ್ಕೊಂಡು ಟೆರೇಸಿಗೆ ವಾಕಿಂಗ್ ಹೋಗಿದ್ದೆ, ಆದ್ರೆ ಕೆಳಗೆ ಬಿಡಕ್ಕಾಗಲ್ಲ, ಎಲ್ಲಾ ಕಡೆ ಗಬ್ಬು’ ಅಂದೆ. ‘ಈ ಸಾರಿ ಮೀಟಿಂಗ್‌ನಲ್ಲಿ ನೀ ವಿಷಯ ಪ್ರಸ್ತಾಪಿಸಿ, ಕಕ್ಕ ಮಾಡಿಸೋದನ್ನ ನಿಲ್ಲಿಸಬೇಕು’ ಅಂದೆ. ಇದಾಗಿ ಸ್ವಲ್ಪ ದಿನಗಳಿಗೆ ಮೀಟಿಂಗ್ ಮುಗಿಸಿ ಬಂದ ಸಿದ್ದಾರ್ಥ ‘ಹರೀಶ ಟೆರೇಸಲ್ಲಿ ಕಕ್ಕ ಮಾಡಿಸುವುದನ್ನ ನಿಲ್ಲಿಸಕ್ಕೆ ಒಪ್ಪದೇ ಹೋದ್ರೂ ತಕ್ಷಣ ತೆಗೆದು ಕ್ಲೀನ್ ಮಾಡಿಸುವುದಾಗಿ ಹೇಳಿದ್ದಾನೆ ಕಣೆ’ ಎಂದ.

ನನ್ನ ನಿರಾಸೆಯನ್ನು ಗಮನಿಸಿದವನು ‘ಇಲ್ಲಿ ಯಾರಿಗೂ ಅದರ ಬಗ್ಗೆ ಯೋಚನೆಯೇ ಇಲ್ಲ, ಮೀಟಿಂಗ್‌ನಲ್ಲಿ ಬೇರೆ ಬೇರೆ ವಿಷಯಗಳಿದ್ವು ಮಾತಾಡಕ್ಕೆ. ನಾಯಿಯ ಕಕ್ಕ ಅವರಿಗೆ ಮ್ಯಾಟರ್ರೇ ಅಲ್ಲ, ಇಷ್ಟಾದ್ರೂ ಆಯ್ತಲ್ಲ’ ಅಂದ. ಯಾರಿಗೂ ಅಷ್ಟೇನೂ ಸಮಸ್ಯೆಯಲ್ಲದ ಟೆರೇಸಿನಲ್ಲಿ ನಾಯಿಯ ಕಕ್ಕ ಮಾಡಿಸುವ ವಿಷಯ ಆಕಾಶವನ್ನು ಪ್ರೀತಿಸುವ ನನಗೆ ಅಡ್ಡಿಯಾಗಿ ಕಂಡಿತ್ತು.

ಹಲವು ದಿನಗಳ ನಂತರ ನಾನು ಟೆರೇಸಿಗೆ ಹೋಗಿದ್ದಾಗ ಮತ್ತೆ ಒಂದೆರಡು ಕಡೆ ನಾಯಿಯ ಕಕ್ಕ ಕಾಣಿಸಿ ಕ್ಲೀನ್ ಮಾಡಿಸುವುದಿಲ್ಲ, ಏನೂ ಇಲ್ಲ, ಸುಮ್ಮನೆ ಜಾರಿಕೊಳ್ಳಲು ಹೇಳ್ತಾರಷ್ಟೆ ಎಂದು ಬೈದುಕೊಳ್ಳುತ್ತಾ ಕಕ್ಕದ ಫೋಟೋ ತೆಗೆದು ವಾಟ್ಸಪ್ಪಿನಲ್ಲಿ ಅಂದು ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ ಸಿದ್ಧಾರ್ಥನಿಗೆ ಕಳಿಸಿದೆ. ಅದನ್ನು ಅವನು ಅಪಾರ್ಟ್‌ಮೆಂಟ್ ಗ್ರೂಪಿನಲ್ಲಿ ‘ಛೀ ಹೊಲಸು, ನಾಟ್ ಕ್ಲೀನಿಂಗ್’ ಅಂಥ ಕಳಿಸಿ, ರೇಖಾ ಕ್ಲೀನ್ ಮಾಡಿಸ್ತಿದ್ದೀವಲ್ಲ ಅಂಥ ಸಮರ್ಥನೆಗಿಳಿದು ಹಾಗಾದ್ರೆ ಫೋಟೋದಲ್ಲಿರುವ ಕಕ್ಕ ಕಾಣಿಸ್ತಿಲ್ಲವೇ ಎಂದು ಸಿದ್ದಾರ್ಥ ಕಕ್ಕಕ್ಕೆ ಕೆಂಪು ಸರ್ಕಲ್ ಹಾಕಿ ‘ಥೂ’ ಅಂಥ ಕಳಿಸಿದನಂತೆ. ಅಂದೇ ರಾತ್ರಿ ಹತ್ತರ ನಂತರ ಸಿದ್ಧಾರ್ಥನಿಗೆ ಹರೀಶ ಪೋನ್ ಮಾಡಿ, ಮಾತಿಗೆ ಮಾತಾಗಿ ವಿಷಯ ಎಲ್ಲಿಂದ ಎಲ್ಲಿಗೋ ಹೋಗಿ ಜಗಳವಾಯಿತಂತೆ.

ಇದು ಇಷ್ಟಕ್ಕೇ ನಿಲ್ಲದೇ ಆ ತಿಂಗಳ ಅಸೋಸಿಯೇಶನ್ ಮೀಟಿಂಗಲ್ಲಿ ವಿಷಯ ಮುನ್ನೆಲೆಗೆ ಬಂದು ‘ಟೆರೇಸಲ್ಲಿ ನಾಯಿಯ ಕಕ್ಕ ಮಾಡಿಸುವುದೇ ತಪ್ಪು, ಮೇಲಿಂದ ಕ್ಲೀನ್ ಮಾಡಿಸ್ತೀನಿ ಹೇಳಿ ಕ್ಲೀನೂ ಮಾಡಿಸದೆ ಫೋಟೋ ಕಳಿಸಿದ್ರೂ ಗಂಡ ಹೆಂಡತಿ ಇಬ್ರೂ ಸುಳ್ಳು ಹೇಳ್ತೀರಾ’ ಎಂದು ಸಿದ್ಧಾರ್ಥ ರೈಸ್ ಆಗಿ ‘ನೀನು ಗ್ರೂಪಲ್ಲಿ ನನ್ನ ಹೆಂಡತಿಗೆ ‘ಛೀ’ ‘ಥೂ’ ಅಂಥ ಕಳಿಸ್ತೀಯಾ’ ಅಂಥ ಹರೀಶ ಮೇಲೇರಿ ಬಂದು ಇಬ್ಬರೂ ಕೈಕೈ ಮಿಲಾಯಿಸಿ ಜಗಳಕ್ಕೆ ಇಳಿಯುವ ಹಂತಕ್ಕೆ ತಲುಪಿದ್ದರಂತೆ. ಅವತ್ತು ಭಾನುವಾರ; ಸ್ನಾನ ಮಾಡಿಸುವ ಮುಂಚೆ ಮಗನನ್ನು ನಿಲ್ಲಿಸಿಕೊಂಡು ಮೈ ಗೆ ಎಣ್ಣೆ ಹಚ್ಚಿ ಮಸಾಜು ಮಾಡ್ತಿದ್ದೆ. ನಮ್ಮನೆ ಎದುರಿಗಿರುವ ಹಿಂದಿ ಭಾಷಿಕರಾಗಿದ್ದ ಶಂಕರಣ್ಣ ಸಿದ್ಧಾರ್ಥನನ್ನು ತಡೆದು ಸಮಾಧಾನಪಡಿಸಿ ಮನೆಯೊಳಗೆ ಕರೆತಂದಿದ್ದ. ನೆರೆಹೊರೆಯವರಾಗಿ ಜಗಳ ಮಾಡಿಕೊಂಡು ಪ್ರಯೋಜನವಿಲ್ಲ ಎಂದು ಇಂಗ್ಲಿಷಿನಲ್ಲಿ ಹೇಳ್ತಿದ್ದ. ನನಗೂ ಸಮಾಧಾನಪಡಿಸಲು ಹೇಳಿ ಶಂಕರಣ್ಣ ಮನೆಗೆ ಹೋಗಿದ್ದ. ಏನಾಯಿತೆಂದು ನನಗೆ ಪೂರ್ತಿ ವಿವರ ಗೊತ್ತಾಗದಿದ್ದರೂ ಇಬ್ಬರಿಗೂ ಸ್ವಲ್ಪ ಜಾಸ್ತಿಯೇ ಜಗಳವಾಗಿದೆ ಎಂದು ಊಹಿಸಬಲ್ಲವಳಾಗಿದ್ದೆ.

‘ನಾನವತ್ತು ಪೋನ್‌ಲ್ಲಿ ಡ್ರಿಂಕ್ಸ್ ಮಾಡಿ ಏನೇನೋ ಮಾತಾಡಿದ್ದೀನಿ ಅಂಥ ಹೇಳಕ್ಕೆ ಬರ್ತಾನೆ ಈಡಿಯಟ್, ಅವನೇನು ನೋಡಿದ್ದಾನಾ? ಅಷ್ಟಕ್ಕೂ ಅವನಿಗ್ಯಾಕೆ ಬೇಕು? ಇನ್ನೊಬ್ಬರ ಪರ್ಸನಲ್ ವಿಷಯ, ಟೆರೇಸಿಗೆ ಹೋಗುವ ಬಾಗಿಲಿಗೆ ಗೇಟ್ ಹಾಕಿ ಬೀಗ ಹಾಕ್ತೇನೆ, ಅದು ಹೇಗೆ ನಾಯಿಯನ್ನ ಬಿಡ್ತೀಯ ಬಿಡು ಅಂದಿದ್ದೇನೆ’ ಎಂದು ಸಿದ್ಧಾರ್ಥ ಉರಿಯುತ್ತಿದ್ದ. ‘ಏನೇ ಆದ್ರೂ ನೀ ಕೈ ಎತ್ತುವ ಹಂತಕ್ಕೆ ಇವತ್ತು ಅಂಥಲ್ಲ, ಎಲ್ಲಿಯೂ ಯಾವಾಗಲೂ ಇಳಿಯಬಾರದು, ಸಿಟ್ಟನ್ನು ನಿಯಂತ್ರಿಸಿಕೊಳ್ಳಬೇಕು’ ಎಂದಿದ್ದೆ. ‘ನಿನ್ನಿಂದಲೇ ಆಗಿದ್ದು ಇಷ್ಟೆಲ್ಲಾ’ ಎಂದು ನನ್ನ ಮೇಲೂ ಹರಿಹಾಯ್ದಿದ್ದ.

ಈ ಘಟನೆಯಾದ ನಂತರ ಟೆರೇಸಿನ ಬಾಗಿಲಿಗೆ ಉದ್ದ ಗ್ರಿಲ್ ಫಿಕ್ಸ್ ಆಗಿತ್ತು; ಆದ್ರೆ ಬೀಗ ಜಡಿದಿರಲಿಲ್ಲ. ಅವರೇ ಬಾಗಿಲು ತೆಗೆದು ಬಿಡುತ್ತಿದ್ದರೋ, ಸ್ವತಃ ತಾವೇ ಕರೆದುಕೊಂಡು ಬಂದು ವಾಕಿಂಗ್ ಮಾಡಿಸುತ್ತಿದ್ದರೋ ಬಾಗಿಲ್ಲಲ್ಲಂತೂ ನಾಯಿ ಉಚ್ಚೆ ಹೊಯ್ದ ಗುರುತಿರುತ್ತಿತ್ತು. ಗಾಳಿ ಬಂದಾಗ ವಾಸನೆ ಅಡರುತ್ತಿತ್ತು. ಕಕ್ಕ ತೆಗೆದು ಕ್ಲೀನ್ ಮಾಡುತ್ತಿದ್ದರೇನೋ, ಅಷ್ಟರ ನಂತರ ನಾನೂ ಟೆರೇಸಿಗೆ ಹೋಗುವುದು ಕಡಿಮೆ ಆಗಿ ಜಾಸ್ತಿ ಕಕ್ಕವೂ ಕಣ್ಣಿಗೆ ಬೀಳದೆ ಚೂರುಪಾರು ಕಾಣಿಸಿದರೂ ಬೇಸರಗೊಳ್ಳದೆ ಟೆರೇಸಿನಲ್ಲಿ ನಾಯಿಯ ಕಕ್ಕ ಮಾಡಿಸುವುದನ್ನು ಮಿಕ್ಕವರಂತೆ ಸಹಜವೆಂಬಂತೆ ಸ್ವೀಕರಿಸಲು ಕಲಿತಿದ್ದೆನೇನೋ. ಹೆಚ್ಚಾಗಿ ತಮಿಳು, ತೆಲುಗು, ಹಿಂದಿ ಭಾಷಿಕರೇ ತುಂಬಿಕೊಂಡ, ಬೆಂಗಳೂರಾದರೂ ಕನ್ನಡ ಮಾತಾಡುವವರೇ ಅಪರೂಪವಾಗಿದ್ದ ಅಪಾರ್ಟ್‌ಮೆಂಟ್ ಸಮುಚ್ಛಯದಲ್ಲಿ ಇದ್ದ ಒಂದು ಕನ್ನಡ ಫ್ಯಾಮಿಲಿಯೂ ನಾಯಿಯ ಕಾರಣದಿಂದ ಶತ್ರುವಾಗಿ ಬದಲಾಗಿದ್ದು ಬೇಸರ ತರಿಸಿತ್ತು. ಇವರೊಬ್ಬರೇ ಸಾಲದು ಎಂಬಂತೆ, ಮತ್ತೊಂದು ನಾಯಿ ಸಾಕುವ ಫ್ಯಾಮಿಲಿಯೂ ಬಾಡಿಗೆದಾರರಾಗಿ ಬಂದು ಇವರನ್ನು ನೋಡಿ ಅವರೂ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಟೆರೇಸಿಗೇ ಕರೆತಂದು ಉಚ್ಚೆ ಮಾಡಿಸುವುದಕ್ಕೆ ಬೇರೆ ಶುರು ಮಾಡಿದ್ದರು!

ಇಷ್ಟೆಲ್ಲಾ ಆಗಿ ವರುಷಗಳುರುಳಿ ಕಾಲ ಎಲ್ಲವನ್ನೂ ತಣ್ಣಗಾಗಿಸಿ ಟೆರೇಸು ನಾಯಿಯ ಕಕ್ಕಕ್ಕಿಂತ ಮಿಗಿಲಾದ ಸಮಸ್ಯೆಗಳಿಂದ ಹಣ್ಣಾಗಿ ಮಾಗಿದ್ದರಿಂದಲೋ ಏನೋ ಬಹುಶಃ ಇಂದು ರೇಖಾಳ ಸಾವು ಮನಸ್ಸನ್ನು ಕಲಕಿತ್ತು. ಈ ಅಪಾರ್ಟ್‌ಮೆಂಟಲ್ಲಿ ಮನೆ ತೆಗೆದುಕೊಂಡು ಬಂದಾಗಿನಿಂದ ಅಷ್ಟಾಗಿ ಸಲುಗೆಯಿಲ್ಲದಿದ್ದರೂ ಲಿಫ್ಟಿನಲ್ಲೋ ಕೆಳಗೋ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಅವಳ ಮುಖ ಎದುರಿಗೆ ಬರುತ್ತಿತ್ತು. ನಾನು ಹಾಕಿದ ಹಳೇ ಬಣ್ಣ ಮಾಸಿದ ಚೂಡಿದಾರದಲ್ಲೇ ಕೆಳಗೆಲ್ಲಾ ಹೋಗಿ ತಿರುಗಾಡಿಕೊಂಡು ಬರುತ್ತಿದ್ದೆ; ಆದರೆ ರೇಖಾಳನ್ನು ಒಂದು ದಿನವೂ ನನಗೆ ಹಾಗೆ ಕಂಡ ನೆನಪಿಲ್ಲ. ತುಟಿಗೆ ಹದವಾದ ಬಣ್ಣ, ಕಣ್ಣಿಗೆ ಕಾಡಿಗೆ ಹಚ್ಚಿ ನೀಟಾಗಿ ಮೇಕಪ್ ಮಾಡಿಕೊಂಡು ಪ್ರಸೆಂಟಬಲ್ ಆಗಿಯೇ ಸದಾ ಹೊರಗೆ ಕಾಣಿಸಿಕೊಳ್ಳುತ್ತಿದುದು.

ಕಾಲು ಸ್ವಲ್ಪ ಕುಂಟುತ್ತಿದ್ದರೂ ಸ್ಕೂಟಿಯ ಹಿಂದೆ ಇನ್ನೊಂದು ಗಾಲಿ ಫಿಕ್ಸ್ ಮಾಡಿಸಿಕೊಂಡು ಓಡಿಸುತ್ತಿದ್ದಳು. ಉಫ್ ಎಂದು ಜೋರಾಗಿ ಉಸಿರು ಬಿಟ್ಟು ತಲೆಕೊಡವಿಕೊಂಡು ರೇಖಾಳ ಗುಂಗಿನಿಂದ ಹೊರಬರಲೆತ್ನಿಸಿದೆ. ಮಾಡುತ್ತಿದ್ದ ವ್ಯಾಯಾಮದ ಮೇಲೆ ಗಮನವೇ ಇರಲಿಲ್ಲ; ಹೇಗೋ ಮಾಡಿದೆ ಅಂಥ ಮುಗಿಸಿ ಮಗನಿಗೆ ತಿನ್ನಿಸುವ ಹೊತ್ತಿಗೆ ಸಿದ್ಧಾರ್ಥ ಬಂದ. ‘ಹೊರಗೆ ಯಾರೂ ಜಾಸ್ತಿ ಜನ ಕಾಣಿಸಲಿಲ್ಲ’ ಅಂದ. ‘ಸಂಜೆ ಹೊತ್ತಿಗೇ ಎಲ್ಲರೂ ಬಂದು ಹೋಗಿದ್ದಾರೆ’ ಅಂದೆ. ‘ಯಾವಾಗ ಬಾಡಿ ತಗೊಂಡು ಹೋಗೋದಂತೆ’ ಅಂದ. ‘ಗೊತ್ತಿಲ್ಲ, ನಾಳೆ ಬೆಳಿಗ್ಗೆ ಇರಬಹದು. ಅವರು ಯಾರೋ ನಮಗೆ ಸಂಬಂಧವೇ ಇಲ್ಲ, ಆದ್ರೂ ರೇಖಾಳ ಸಾವು ಒಂಥರಾ ಅನಿಸ್ತಿದೆ. ನಮ್ಮನೆ ಪಾಪುನ್ನ ಕಂಡಾಗಲೆಲ್ಲಾ ಗೊಂಬೆ ಗೊಂಬೆ ಅಂಥ ಮಾತಾಡಿಸ್ತಿದ್ಲು’ ಅಂದೆ. ‘ಅದೇ ಜಗಳ ಆದನಂತರ ಅವನು ನಮ್ಮನೆ ಪಾಪು ಅಳೋದು ಡಿಸ್ಟರ್ಬ್ ಆಗತ್ತೆ ಹೇಳ್ತಿದ್ದ’ ಅಂದ.

ಸ್ಟವ್ವು, ಅಡುಗೆ ಕಟ್ಟೆ ಒರೆಸಿ ಮಲಗುವ ಕೋಣೆಗೆ ಬಂದಾಗಲೂ ನಮ್ಮ ಮನೆಯ ಮೇಲೇ ಇರುವ ಅವರ ಮನೆಯಿಂದ ಏನಾದರೂ ಸದ್ದು ಕೇಳಿಸಬಹುದೇ ಎಂದು ಕಿವಿ, ಮನಸ್ಸು ಆಲಿಸುತ್ತಿತ್ತು. ಆದರೆ ಮನೆಯಲ್ಲಿ ಸಾವಾಗಿದೆ ಎನ್ನುವ ವಿಶೇಷ ಸೂಚನೆಗಳನ್ನೇನೂ ತೋರದೆ ನಾಯಿಮನೆ ಶಾಂತವಾಗಿದ್ದಂತೆ ಸ್ತಬ್ಧತೆಯನ್ನ ಆವಾಹಿಸಿಕೊಂಡಿದ್ದಂತೆ ಅನಿಸಿತು. ಸ್ವಲ್ಪ ಹೊತ್ತು ಆಟದ ನಂತರ ಮಗ ನಿದ್ದೆ ಹೋದ. ಮಗುವಿಗೆ ನಿದ್ರೆ ಬಂದಿದ್ದನ್ನು ಗಮನಿಸಿ ಸಿದ್ಧಾರ್ಥ ಹತ್ತಿರ ಬಂದ. ನನಗಿವತ್ತು ಸೆಕ್ಸ್ ಅನುಭವಿಸುವ ಮೂಡಿರಲಿಲ್ಲ. ಸಾವು, ಬದುಕಿನ ನಶ್ವರತೆ, ಗೊತ್ತಿದ್ದೂ ಗೊತ್ತಿದ್ದೂ ಮನುಷ್ಯ ತೋರಿಸುವ ಸಣ್ಣತನ, ಕ್ಷುಲ್ಲಕ ಅಹಂಕಾರ, ಅರಿವೇ ಇಲ್ಲದೆ ಒಂದು ದಿನ ಈ ಜಗತ್ತಿನೊಂದಿಗೆ ಸಂಬಂಧ ಕಡಿದು ಹೊರಟೇ ಹೋಗುವ ಅಸಹಾಯಕತೆ ಹೀಗೆಲ್ಲಾ ಯೋಚನೆಗಳು ನುಗ್ಗುತ್ತಿದ್ದವು.

ಆದರೆ ಯಾವಾಗ ಬಯಸಿದರೂ ಮಲಗುವುದು ತಡ ಆಗಿದೆ, ಸುಸ್ತು, ತಲೆನೋವು ಎಂದು ಅದೂ ಇದೂ ಕಾರಣ ಹೇಳಿ ನಿರುತ್ಸಾಹ ತೋರಿಸುತ್ತಿದ್ದ ಸಿದ್ಧಾರ್ಥ ಇವತ್ತು ಅಪರೂಪಕ್ಕೆಂಬಂತೆ ತಾನಾಗಿಯೇ ಹತ್ತಿರ ಬಂದಿದ್ದ! ನಾನೂ ಐದಾರು ದಿನಗಳಿಂದ ಕಾಯುತ್ತಿದ್ದು, ಇವತ್ತೂ ಬೇಡ ಎನ್ನಲು ಬಾಯಿ ಬರಲಿಲ್ಲ. ಕರೆಕ್ಟ್ ನಮ್ಮ ಮನೆಯ ಮೇಲಿನ ಮನೆಯಲ್ಲಿ ಜೀವವೊಂದರ ಅಕಾಲಿಕ ಸಾವು, ವಿದಾಯದ ನೋವು; ಕೆಳಗಿನ ಮನೆಯ ಕೋಣೆಯಲ್ಲಿ ಮೈಥುನದ ಸುಖ! ಒಂದಕ್ಕೊಂದು ತೀರಾ ವಿರುದ್ಧವಾದ ಜಗತ್ತಿನ ಎರಡು ಸ್ಥಿತಿ ಸನ್ನಿವೇಶಗಳ ಬಗ್ಗೆ ಮನಸ್ಸು ಕಸಿವಿಸಿಗೊಂಡಿದ್ದರಿಂದ ನನಗೆ ತನ್ಮಯಳಾಗಿ ಸುಖಿಸಲಾಗಲಿಲ್ಲ.

ತೆಂಗಿನ ಮರಗಳ ನಡುವೆ ಹೊಳೆಯುತ್ತಾ ಬಿಸಿಲು ಪಸರಿಸಿದ ಸೂರ್ಯನನ್ನು ನೋಡಿದಾಗ ಈ ಲೌಕಿಕ ಜಗತ್ತಿನಲ್ಲಿ ನಡೆಯುವ ಸಾವು ನೋವುಗಳು ಬ್ರಹ್ಮಾಂಡದ ದೃಷ್ಟಿಯಲ್ಲಿ ತೀರಾ ಯಕಶ್ಚಿತ್ ಎನಿಸಿತು. ಎಂದಿನಂತೆ ಬೆಳಗು; ಜಗತ್ತು ಜನರು ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಸಾವಿನ ಮನೆಯ ಭಾವದಲ್ಲಿ ಮಾತ್ರ ವ್ಯತ್ಯಾಸ; ಬಹುಷಃ ದುಃಖ ಮಡುಗಟ್ಟಿರುತ್ತದೆ. ತೀರಾ ವಯಸ್ಸಾಗಿ ಕಾಯಿಲೆಯಿಂದ ನರಳಿ ಸತ್ತರೆ ನಿರ್ಗಮನ ನೋವು ಕೊಡುವುದಿಲ್ಲ; ಪಾಪ, ರೇಖಾಳದು ಸಾಯುವ ವಯಸ್ಸಲ್ಲ; ನನ್ನಷ್ಟೇ ಆಗಿರಬಹುದು ಅಥವಾ ಇನ್ನೂ ಚಿಕ್ಕವಳಾ?

ಎಷ್ಟು ಹೊತ್ತಿಗೆ ಇಲ್ಲಿಂದ ಹೆಣ ತೆಗೆದುಕೊಂಡು ಹೋಕ್ತಾರೋ? ಅವರಿಂದ ನಾಯಿಯ ವಿಷಯದಲ್ಲಿ ತೊಂದರೆಯಾಗಿದ್ದರೂ ಯಾಕೋ ಹೇಗಾದರೂ ಕೊನೇಬಾರಿ ಒಮ್ಮೆ ನೋಡಬೇಕೆನಿಸಿತು. ತಿಂಡಿ ಮುಗಿಸಿ ಮಗುವಿಗೂ ತಿನ್ನಿಸಿ ಕಾರಿಡಾರಿನಲ್ಲಿ ಸುಮ್ಮನೆ ಓಡಾಡಿಕೊಂಡು ಬಂದೆ. ಮೇಲಿನ ಫ್ಲೋರಿನಲ್ಲಿ ಜನ ಮಾತಾಡುವ ಗೌಜು. ಬಾಗಿಲು ತೆಗೆದುಕೊಂಡಿದ್ದ ಪಕ್ಕದ ಮನೇಲಿ ‘ನೀವು ನೋಡುವುದಕ್ಕೆ ಹೋಗಿದ್ರಾ?’ ಎಂದು ಸಹಜವಾಗಿ ಕೇಳಿದೆ. ಇಲ್ಲ ಅಂದರು. ಹೀಗೆ ಮಾತಾಡುತ್ತಿರುವಾಗಲೇ ನಾಲ್ಕಾರು ಜನ ಹೆಣ ಹೊತ್ತು ಸ್ಟೇರ್ಸ್‌ನಲ್ಲಿ ಇಳಿದರು; ಹಿಂದೆಯೇ ನೆಂಟರಿಷ್ಟರು, ಬಳಗದವರು ಒಂದಷ್ಟು ಮಂದಿ. ಸಿದ್ಧಾರ್ಥ ಮಗನನ್ನು ಆಟವಾಡಿಸ್ತಾ ಕೋಣೆಯಲ್ಲಿದ್ದ, ‘ನಾನೊಮ್ಮೆ ಕೆಳಗೆ ಹೋಗಿ ಬರ್ತೇನೆ’ ಎಂದು ಹೊರಟೆ. ಅವರ ಕಾರು ಪಾರ್ಕ್ ಮಾಡುವ ಜಾಗವನ್ನು ಕ್ಲೀನ್ ಮಾಡಿಸಿ ಅಲ್ಲಿ ಹೆಣವನ್ನು ಮಲಗಿಸಿದ್ದರು. ಸುತ್ತ ಜನ; ಸೀದಾ ಅಲ್ಲಿಗೇ ಹೋಗಲು ಒಂಥರಾ ಸಂಕೋಚ, ಹಾಗಾಗಿ ಬೇರೆ ಕೆಲಸಕ್ಕೆ ಕೆಳಗೆ ಬಂದಿದ್ದು ಎಂಬಂತೆ ಪಾರ್ಕಿಂಗ್ ಏರಿಯಾದ ಹಿಂಬದಿಯಲ್ಲಿ ಗಿಡಗಳನ್ನು ಬೆಳೆಸಿದ್ದ ಜಾಗಕ್ಕೆ ಬಂದೆ.

ಬಾಲ್ಕನಿಯಲ್ಲಿ ತುಂಬಾ ದಿನಗಳಿಂದ ಪಾಟ್‌ನಲ್ಲಿ ಸಕ್ಕರೆ ಹಣ್ಣಿನ ಗಿಡ ಹಾಕಬೇಕು ಎಂದುಕೊಂಡು ಆಗಿರಲಿಲ್ಲ. ಇವತ್ತು ಆ ಮುಹೂರ್ತ ಬಂದಿತ್ತು ಎನಿಸುತ್ತದೆ; ಬೀಜ ಹಾರಿಬಂದು ತಾನಾಗಿಯೇ ಹುಟ್ಟಿ ಸ್ವಲ್ಪ ಬೆಳೆದಿದ್ದ ಗಿಡವನ್ನು ನಿಧಾನ ಬೇರು ಸಮೇತ ಕಿತ್ತು ಕೈಯ್ಯಲ್ಲಿ ಹಿಡಿದುಕೊಂಡೇ ಗುಂಪಿನ ಹಿಂದೆ ನಿಂತು ನೋಡಿದೆ. ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದ ಹರೀಶ ಕೂತು ಪುರೋಹಿತರು ಹೇಳಿದಂತೆ ವಿಧಿ ಕಾರ್ಯ ಮಾಡುತ್ತಿದ್ದ. ರೇಖಾ ಇಷ್ಟಗಲ ಕುಂಕುಮ ಹಚ್ಚಿಸಿಕೊಂಡು ಚಟ್ಟದ ಮೇಲೆ ಇಹಲೋಕದ ಪರಿವೆಯಿಲ್ಲದೆ ತಣ್ಣಗೆ ಮಲಗಿದ್ದಳು. ಕಣ್ಣು ಅವಳ ಪುಟಾಣಿ ಮಗಳನ್ನು ಹುಡುಕಿತು. ಆರೋ ಏಳೋ ಕ್ಲಾಸಿರಬೇಕು. ತುಂಬಾ ಮುದ್ದಾಗಿದ್ದಳು; ಚಿಕ್ಕ ವಯಸ್ಸಿಗೇ ಅಮ್ಮನನ್ನು ಕಳೆದುಕೊಂಡ ಅವಳ ಬಗ್ಗೆ ಮನಸ್ಸು ಮರುಗಿತು. ಒಟ್ಟಾರೆ ಅಲ್ಲಿನ ಪರಿಸರಕ್ಕೋ, ಒಂದು ಸಾವು ಹುಟ್ಟುಹಾಕುವ ವಿಷಾದ, ವಿಷಣ್ಣತೆಗೋ ನನ್ನ ಕಣ್ಣಲ್ಲೂ ನೀರು ಬಂತು. ಅಂಥಾ ಮನಕಲಕುವ ಸನ್ನಿವೇಶದಲ್ಲೂ ಹೆಂಗಸರೊಬ್ಬರು ಮೊಬೈಲ್ ಹಿಡಿದು ಹೆಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದನ್ನು ನೋಡಿ ಮೊಬೈಲ್ ಬಂದ ನಂತರ ಬದುಕು ತೋರಿಕೆಯದಾಗಿ ನಿಜದ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ಮುಖಕ್ಕೆ ರಾಚಿತು.

ತುಂಬಾ ಹೊತ್ತು ಅಲ್ಲಿ ನಿಂತಿರುವುದಕ್ಕೆ ಮುಜುಗರವಾಗಿ ಮೆಲ್ಲ ಅಲ್ಲಿಂದ ಹೊರಟು ಸೀದಾ ಮೇಲೆ ಬಂದು ದೊಡ್ಡ ಪಾಟೊಂದರಲ್ಲಿ ಗಿಡ ನೆಡುವುದಕ್ಕೆ ತಯಾರಿ ಮಾಡಿಕೊಳ್ಳತೊಡಗಿದೆ. ಈ ಬಾಲ್ಕನಿಯಿಂದ ಅಪಾರ್ಟ್‌ಮೆಂಟಿನ ದೊಡ್ಡ ಗೇಟು ಕಾಣಿಸುತ್ತಿತ್ತು. ಬಾಗಿಲಲ್ಲಿ ಹೆಣವನ್ನು ಹೊತ್ತೊಯ್ಯುವ ವಾಹನ ನಿಂತಿತ್ತು. ನಾನು ಮಣ್ಣನ್ನು ಸಡಿಲಗೊಳಿಸಿ ಗಿಡ ನೆಡುವುದಕ್ಕೂ ಹೆಣವನ್ನು ತಂದು ವಾಹನದಲ್ಲಿ ಇಡುವುದಕ್ಕೂ ಸರಿಹೋಯಿತು. ಹಾಗೇ ನೋಡುತ್ತಿದ್ದ ನನ್ನ ಮನಸ್ಸಿನಲ್ಲಿ ವಿಚಿತ್ರ ಯೋಚನೆ; ರೇಖಾಳ ಆತ್ಮ ನಾನು ನೆಟ್ಟ ಗಿಡದಲ್ಲಿ ಸೇರಿಕೊಂಡಂತೆ ಭಾಸವಾಗಿ ದಂಗಾದೆ! ಎಷ್ಟೋ ದಿನಗಳಿಂದ ನೆಡಬೇಕು ಅಂದುಕೊಂಡು ನೆಡಲಾಗದೇ ಈ ಸಂದರ್ಭದಲ್ಲೇ ನಾನ್ಯಾಕೆ ಗಿಡವನ್ನು ನೆಟ್ಟೆ? ಒಂದಕ್ಕೊಂದು ಸಂಬಂಧವೇ ಇಲ್ಲ ಎನಿಸಿತು. ಆದರೆ, ಯಾರಾದ್ರೂ ಪ್ರೀತಿಪಾತ್ರರು ಸತ್ತರೆ ಅವರ ನೆನಪಿಗೆ ಗಿಡ ನೆಟ್ಟು ಅದು ಬೆಳೆದು ಹೂವರಳಿಸುವುದನ್ನು, ಮರವಾಗಿ ನೆರಳು ಚೆಲ್ಲುವುದನ್ನು ನೋಡ್ತಾ ದುಃಖ ಮರೆಯಬಹುದಲ್ಲ, ಅಗಲಿಕೆ ಭರಿಸಬಹುದಲ್ಲ ಎನ್ನುವ ಹೊಳಹೊಂದು ಮೂಡಿ ರೋಮಾಂಚನಗೊಂಡೆ.!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT