ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗವಧೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ

ದೇವರ ತಾಣ
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಮೃಗವಧೆ. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವ್ಯಾಪ್ತಿಗೆ ಸೇರಿದ ಪ್ರದೇಶ.

ಐತಿಹಾಸಿಕ ಹಿನ್ನೆಲೆ: ಮೃಗವಧೆಯ ಮತ್ತೊಂದು ಹೆಸರು ಮರವಸೆ. ಪಾರ್ವತಿ ತಪಸ್ಸು ಮಾಡಿದ ಸ್ಥಳ. ಇಲ್ಲಿಯ ಆಕರ್ಷಣೆಯ ಕೇಂದ್ರವೆಂದರೆ ಶ್ರೀ ಮಲ್ಲಿಕಾರ್ಜುನಸ್ವಾಮಿಯ ದೇವಸ್ಥಾನ ಹಾಗೂ ಗ್ರಾಮದಲ್ಲಿರುವ ಶನೈಶ್ಚರನ ದೇವಸ್ಥಾನ.

ಬ್ರಹ್ಮಕಪಾಲದೋಷಕ್ಕೆ ಸಿಲುಕಿದ್ದ ಈಶ್ವರನನ್ನು, ಶನಿಯು ಈ ಸ್ಥಳದಲ್ಲಿ ಮುಕ್ತಗೊಳಿಸಿದನೆಂದು ಪ್ರತೀತಿ. ಶನೈಶ್ಚರನ ದರ್ಶನದ ನಂತರ ಮಲ್ಲಿಕಾರ್ಜುನನ ದರ್ಶನ ಮಾಡುವುದು ಇಲ್ಲಿಯ ವಾಡಿಕೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಶ್ರೀ ಮಲಹಾನಿಕರೇಶ್ವರ ಎಂಬ ಹೆಸರೂ ಇದೆ. ಆಗಮೋಕ್ತ ವಿಧಿವಿಧಾನಗಳಿಂದ ದೈನಂದಿನ ತ್ರಿಕಾಲ ಪೂಜಾ ಕಾರ್ಯಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ.

ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ದೇವಸ್ಥಾನ ಕಟ್ಟಲಾಗಿತ್ತು. ಹತ್ತನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ತ್ರಿಭುವನ ಮಲ್ಲದೇವರ ಆಳ್ವಿಕೆ ಕಾಲದಲ್ಲಿ, ಆತನ ಮಾಂಡಲೀಕ ಹೊಂಬುಚದ ಶಾಂತಾರಸನು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಾನದತ್ತಿಗಳನ್ನು ಬಿಟ್ಟು ಶಾಸನವನ್ನು ಬರೆಸಿದ್ದಾನೆ. ಈ ದೇವಸ್ಥಾನ ಮತ್ತೆ ಶಿಥಿಲಗೊಂಡಾಗ ಕೆಳದಿ ಸೋಮಶೇಖರ ನಾಯಕ (1714–1740) ಜೀರ್ಣೋದ್ಧಾರ ಮಾಡುತ್ತಾನೆ.

ಪೌರಾಣಿಕ ಹಿನ್ನೆಲೆ: ಮಾರೀಚ, ರಾವಣನ ಸೋದರಮಾವ. ಶಿವನ ಮಹಾಭಕ್ತ. ಸೀತೆಯ ಮೇಲೆ ಮೋಹಗೊಂಡ ರಾವಣ, ತನ್ನ ಸೋದರಮಾವನಿಗೆ ‘ನೀನು ಮಾಯಾಜಿಂಕೆಯ ವೇಷ ಧರಿಸಿ, ಸೀತೆ ಆಕರ್ಷಿತಳಾಗುವಂತೆ ಮಾಡಿ, ಶ್ರೀರಾಮನನ್ನು ಸೀತೆಯಿಂದ ಬೇರ್ಪಡಿಸಿ, ಶ್ರೀರಾಮನ ದಾರಿ ತಪ್ಪಿಸು’ ಎಂದು ಆಜ್ಞಾಪಿಸುತ್ತಾನೆ. ಇದಕ್ಕೆ ಒಲ್ಲದ ಮಾರೀಚ ‘ಶ್ರೀರಾಮನಿಗೆ ಮೋಸ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡ’ ಎಂದು ಪ್ರಾರ್ಥಿಸಿದರೂ ರಾವಣ ಒಪ್ಪುವುದಿಲ್ಲ. ವಿಧಿಯಿಲ್ಲದೆ ಮಾರೀಚ ರಾವಣನ ಆಜ್ಞೆಯನ್ನು ಪಾಲಿಸುತ್ತಾನೆ.

ಹೊಂಬಣ್ಣದ ಜಿಂಕೆಯ ಛದ್ಮವೇಶವನ್ನು ಧರಿಸಿ, ಸೀತೆಯ ಮುಂದೆ ಹರಿದಾಡಿದಾಗ, ಸೀತೆ ಈ ಅಪರೂಪದ ಜಿಂಕೆಗೆ ಆಕರ್ಷಿತಳಾಗಿ ತನಗೆ ಈ ಜಿಂಕೆ ಬೇಕೆಂದು ಶ್ರೀರಾಮನಲ್ಲಿ ಆಸೆ ವ್ಯಕ್ತಪಡಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರೂ ಅದು ಕೈಗೆ ಸಿಗದಾಗ, ಶ್ರೀರಾಮ ಜಿಂಕೆಯನ್ನು ತನ್ನ ಬಾಣದಿಂದ ವಧೆ ಮಾಡುತ್ತಾನೆ. ಹೀಗಾಗಿ ಈ ಸ್ಥಳಕ್ಕೆ ‘ಮೃಗವಧೆ’ ಎಂಬ ಹೆಸರು ಬಂದಿದೆ.

ಮಾರೀಚನನ್ನು ಕೊಂದಿದ್ದಕ್ಕೆ ರಾಮನಿಗೆ ಬ್ರಹ್ಮಹತ್ಯಾದೋಷ ಬರುತ್ತದೆ. ತನ್ನ ತೊಡೆಯಲ್ಲಿರುವ ಬಾಣಲಿಂಗವನ್ನು ತೆಗೆದು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದರೆ, ಬ್ರಹ್ಮಹತ್ಯಾ ದೋಷ ಪರಿಹಾರ ಆಗುತ್ತದೆ ಎಂದು ಮಾರೀಚನೇ ಸಲಹೆ ನೀಡುತ್ತಾನೆ. ಶ್ರೀರಾಮ ಬ್ರಾಹ್ಮೀ ಮುಹೂರ್ತದಲ್ಲಿ ನದೀತೀರದಲ್ಲಿ ಬಾಣಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಈ ನದಿಗೆ ‘ಬ್ರಾಹ್ಮೀನದಿ’ ಎಂಬ ಹೆಸರು ಬಂದಿದೆ.

ಹೋಗುವುದು ಹೇಗೆ?
ಶಿವಮೊಗ್ಗದಿಂದ ಮೃಗವಧೆಗೆ ಸುಮಾರು 60 ಕಿ.ಮೀ. ತೀರ್ಥಹಳ್ಳಿ ಮಾರ್ಗವಾಗಿ ಬರುವುದಾದರೆ 85 ಕಿ.ಮೀ. ತೀರ್ಥಹಳ್ಳಿಯಿಂದ ಬಸ್ ಸಂಪರ್ಕವಿದೆ.

ಕೊಪ್ಪ ತಾಲ್ಲೂಕು ಕೇಂದ್ರ ಇಲ್ಲಿಂದ 22 ಕಿ.ಮೀ. ಅಲ್ಲಿಂದಲೂ ನೇರ ರಸ್ತೆ ಸಂಪರ್ಕವಿದೆ. ಸ್ವಂತ ವಾಹನ ವ್ಯವಸ್ಥೆ ಉಳ್ಳವರು ಶಿವಮೊಗ್ಗದಿಂದ ಮಂಡಗದ್ದೆ, ಮುಡುಬ ಮಾರ್ಗವಾಗಿ ಮೃಗವಧೆ ತಲುಪುವುದು ಹತ್ತಿರದ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT