ವಸ್ತ್ರದಾನ

7

ವಸ್ತ್ರದಾನ

Published:
Updated:
Deccan Herald

ಢಂ!

ಬೆಳಗಿನ ಜಾವದ ನಿದ್ದೆಯಲ್ಲಿದ್ದ ನಾನು ಬೆಚ್ಚಿಬಿದ್ದು ಎದ್ದು ಕುಳಿತೆ. ಸಮಾ ನಮ್ಮ ಮನೆಯ ಸ್ಲ್ಯಾಬಿನ ಮೇಲೇ ಸಿಡಿತ ಉಂಟಾಗಿತ್ತು; ಇಂಡಿಯಾದ ಮೇಲೆ ಪಾಕಿಸ್ತಾನ ಬಾಂಬು ಹಾಕಿದ ಹಾಗೆ. ಯಾಕೋ ಬಾಯಾರಿಕೆಯೆನಿಸಿತು. ಮೈಮೇಲಿದ್ದ ಚಾದರ ಸರಿಸಿ ತಲೆದಿಂಬಿನ ಪಕ್ಕ ಇರಿಸಿಕೊಂಡಿದ್ದ ಸ್ಟೀಲು ಚೊಂಬನೆತ್ತಿ ನೀರು ಗಟಗಟನೆ ಗಂಟಲಲ್ಲಿಳಿಸುವ ಹೊತ್ತಿಗೆ ಪಟಪಟನೆ ಪಟಾಕಿ ಸಿಡಿಸಿದ ಶಬ್ದ ದೇವಿ ದೇವಸ್ಥಾನ ರಸ್ತೆಯ ಕಡೆಯಿಂದ ಸಣ್ಣಗೆ ತೇಲಿಬಂತು. ತಕ್ಷಣವೇ ಮನೆಯ ಪಕ್ಕದಲ್ಲಿ ಮತ್ತೊಂದು ಬಾಂಬು ಸಿಡಿಯಿತು...

ಢಂ!!

ನಾನು ಮತ್ತೊಮ್ಮೆ ಬೆಚ್ಚಿಬಿದ್ದರೂ ಭಯಪಡುವುದಕ್ಕೆ ಯಾವ ಕಾರಣವೂ ಇಲ್ಲ ಎಂದು ಸಮಾಧಾನ ಮಾಡಿಕೊಂಡೆ! ಪಕ್ಕದಲ್ಲಿರುವ ನನ್ನ ಮೊದಲನೇ ತಮ್ಮ ಷಣ್ಮುಖನ ಮನೆಯವರೇ ಗರ್ನಾಲು ಹೊಡೆದದ್ದು ಎಂಬುದು ಖಾತ್ರಿಯಾಗಿ ಮತ್ತೆ ಚಾದರು ಮೈಮೇಲೆ ಎಳೆದುಕೊಂಡು ಮಲಗಿದೆ. ಹಿಂದೆಲ್ಲ ದೀಪಾವಳಿಯ ಸ್ನಾನ ಮಾಡುವ ಹಬ್ಬದ ದಿನ ನಾಲ್ಕು ಗಂಟೆ ಸುಮಾರಿಗೆ ಮೊದಲು ಪಟಾಕಿ ಸಿಡಿಯುವುದೇ ದೇವಿ ದೇವಸ್ಥಾನದ ರಸ್ತೆಯಲ್ಲಾಗಿತ್ತು. ಆ ಶಬ್ದ ಕೇಳಿಯೇ ನಮ್ಮ ಓಣಿಯವರು ಎದ್ದು ಹಬ್ಬದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಿದ್ದರೇ ವಿನಃ ಪಟಾಕಿಗೆ ದುಡ್ಡು ಖರ್ಚು ಮಾಡುವ ತಾಕತ್ತು ಯಾರಿಗೂ ಇರಲಿಲ್ಲ. ಆದರಿಂದು ನಮ್ಮವರೇ ಮೊದಲು ಪರವಾಗಿಲ್ಲ!

ನಾವು ಚಿಕ್ಕವರಿರುವಾಗ ಈ ನರಕ ಚತುರ್ದಶಿ ದಿನವನ್ನು ಅಮ್ಮ ನಮ್ಮ ಪಾಲಿಗೆ ಅಕ್ಷರಶಃ ನರಕ ಮಾಡಿಬಿಡುತ್ತಿದ್ದಳು! ಕೋಳಿ ಕೂಗುವ ಮುನ್ನವೇ ನಮ್ಮೆಲ್ಲರನ್ನೂ ಎಬ್ಬಿಸಿ ಮನೆಯಿಂದ ಹೊರಗೆ ಹಾಕಿಬಿಡುತ್ತಿದ್ದಳು. ಕರಗದ ಕತ್ತಲಲ್ಲಿ ಹೊರಗೆ ಚಳಿ ತಡೆಯಲಾರದೆನಡುಗುತ್ತ ಮೈಗೆ ಎಣ್ಣೆ ಹಚ್ಚಿಕೊಂಡು ಬಚ್ಚಲಿಗೆ ಹೋಗಿ ಸ್ನಾನ ಮಾಡಬೇಕಿತ್ತು. ಸ್ನಾನ ಮುಗಿದ ಕೂಡಲೇ ಮನೆ ಒಳಗೆ ಪ್ರವೇಶಿಸಲಿಕ್ಕಿಲ್ಲ. ಕೊಟ್ಟ ಹೊಸ ಬಟ್ಟೆ ಹಾಕಿಕೊಂಡು ಅಂಗಳದಲ್ಲೇ ಕುಳಿತು ಕಾಯಬೇಕಿತ್ತು. ಪ್ರತಿ ದೀಪಾವಳಿಯಲ್ಲೂ ಈ ಶಿಕ್ಷೆ ನಾವು ಮೂವರು ಮಕ್ಕಳಿಗೆ ತಪ್ಪಿದ್ದಲ್ಲ. ಅಪ್ಪ ಲಾರಿ ಚಾಲಕನಾದ್ದರಿಂದ ಹಬ್ಬದಲ್ಲಿ ಮನೆಯಲ್ಲಿರುವ ಸಾಧ್ಯತೆ ಕಡಿಮೆ.

ಅಮ್ಮ ಮನೆಯ ಎಲ್ಲ ಕೋಣೆಗಳನ್ನು ಸಗಣಿಯಿಂದ ಸಾರಿಸಿ, ತಾನೂ ಮಿಂದು, ಹೊಸಬಟ್ಟೆ ಹಾಕಿಕೊಂಡು ದೇವರ ಪೂಜೆ ಮುಗಿಸಿ, ಮನೆಯ ಮುಂಬಾಗಿಲಿನ ಮುಂದೆ ಅಂಗಳದಲ್ಲಿ ಅಡ್ಡಕ್ಕೆ ಒಂದೇ ನೇರಕ್ಕೆ ಮೂರ‍್ನಾಲ್ಕು ಚಿಕ್ಕ ಚಿಕ್ಕ ಗೋಲಾಕಾರದ ರಂಗೋಲಿಗಳನ್ನು ಬಿಡಿಸುತ್ತಿದ್ದಳು. ಒಂದೊಂದು ರಂಗೋಲಿಯ ಮಧ್ಯೆ ಎರಡೆರಡು ಹಿಂಡಲಕಾಯಿಯನ್ನು ಇಡುತ್ತಿದ್ದಳು. ನಂತರ ರಂಗೋಲಿಯ ಮೇಲೆ ನಮ್ಮನ್ನು ನಿಲ್ಲಿಸಿ ಒಬ್ಬೊಬ್ಬರಿಗೂ ಆರತಿ ಮಾಡುತ್ತ ಸಾಗುತ್ತಿದ್ದಳು. ಆರತಿ ಮಾಡಿದ ಮೇಲೆ ಆರತಿ ತಟ್ಟೆಗೆ ಹಾಕಲು ನಮ್ಮ ಕೈಗೆ ಚಿಲ್ಲರೆ ಕಾಸುಗಳನ್ನು ಮೊದಲೇ ಕೊಟ್ಟಿಡುತ್ತಿದ್ದಳು. ಎಲ್ಲರಿಗೂ ಆರತಿ ಮಾಡಿಯಾದ ಮೇಲೆ ನಮ್ಮ ನಮ್ಮ ಬುಡದಲ್ಲಿದ್ದ ಹಿಂಡಲಕಾಯಿಯನ್ನು ಕಾಲಿನಿಂದ ಹೊಸಕಿ ಒಡೆದು, ಅದರ ತಿರುಳನ್ನು ಒಂಚೂರು ಬಾಯಲ್ಲಿ ಹಾಕಿಕೊಂಡು ಕಹಿಯನ್ನು ತಡೆಯಲಾರದೆ ಮುಖ ಕಿವುಚಿಕೊಂಡು ನುಂಗಿದ ಮೇಲೆ ಮನೆಯೊಳಗೆ ಕಾಲಿಡಲು ಸ್ವತಂತ್ರರಾಗುತ್ತಿದ್ದೆವು.

ದೀಪಾವಳಿಯ ಈ ದಿನ ಎಣ್ಣೆ ಸ್ನಾನ ಮಾಡಿದ ಮೇಲೆ ಹೊಸ ಬಟ್ಟೆ ಹಾಕಿಕೊಳ್ಳಲೇಬೇಕು; ಎಲ್ಲ ಸಾಧ್ಯವಿಲ್ಲದಿದ್ದರೆ ಒಂದು ಬನಿಯನ್ನಾದರೂ ಹೊಸದು ಹಾಕಿಕೊಳ್ಳಬೇಕೆಂದು ಅಮ್ಮ ಹೇಳುತ್ತಿದ್ದಳು; ದುಡ್ಡಿಲ್ಲದಿದ್ದರೆ ಕೊನೆಗೆ ಒಂದು ಒಳವಸ್ತ್ರವನ್ನಾದರೂ ಹೊಸತು ತೆಗೆಸಿಕೊಡುತ್ತಿದ್ದಳು. ಆದರೆ ಈ ಸಲ ಒಂದು ಹೊಸ ಒಳವಸ್ತ್ರವನ್ನೂ ತೆಗೆದುಕೊಳ್ಳಲು ನನ್ನ ಕೈಯ್ಯಲ್ಲಿ ದುಡ್ಡಿರಲಿಲ್ಲ. ಹದಿನೈದನೇ ವಯಸ್ಸಿನಲ್ಲಿ ಕೇವಲ ನೂರಿಪ್ಪತ್ತು ತಿಂಗಳ ಪಗಾರಿಗೆ ದುಡಿಯಲು ಆರಂಭಿಸಿದ್ದ ನಾನು ಏಷ್ಟೆಷ್ಟೋ ಏಳುಬೀಳು, ಲಕ್ಷದ ಲೆವೆಲ್ಲಿನಲ್ಲಿ ಬ್ಯಾಂಕ್ ಬ್ಯಾಲೆನ್ಸ್‌ನ್ನೂ ಕಂಡು, ನಲವತ್ತೈದನೇ ವಯಸ್ಸಿಗೆ ಜೀರೋಕ್ಕೆ ತಲುಪಿದ್ದೆ. ಮೂಲ ಮನೆಯ ಮಣ್ಣಿನ ಗೋಡೆ ಕೆಡವಿ ಎರಡನೆಯ ತಮ್ಮ ರಾಮುನ ಜೊತೆಗೆ ಸೇರಿ ಹೊಸ ಆರ್‌ಸಿಸಿ ಮನೆ ಕಟ್ಟಿ, ಮದುವೆ ಮಾಡಿಕೊಂಡು, ಹೊಂದಾಣಿಕೆಯಾಗದ ಹೆಂಡತಿಯೊಂದಿಗೆ ಡೈವೋರ್ಸ್ ಪಡೆದು, ಕಾಡುತ್ತಿರುವ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಷ್ಟರಲ್ಲಿ ನಾನು ಸಾಲಗಾರನಾಗದಿದ್ದದ್ದೇ ದೊಡ್ಡ ವಿಷಯ. ನಮ್ಮ ಮನೆಯ ಪಕ್ಕದಲ್ಲಿಯೇ ಮನೆ ಮಾಡಿಕೊಂಡಿದ್ದ ಮೊದಲನೆಯ ತಮ್ಮ ಷಣ್ಮುಖ ತನ್ನ ಮನೆಗೆ ಕರೆದು ಊಟ ಹಾಕದಿದ್ದರೆ ನಾನು ಇಷ್ಟೊತ್ತಿಗೆ ನೇಣಿಗೆ ಕೊರಳು ಒಡ್ಡಿಯಾಗಿರುತ್ತಿತ್ತೇನೋ!

***

ಹೌದು, ನಮ್ಮಪ್ಪ ಅಮ್ಮಂದಿರಿಗೆ ನಾವು ಮೂವರು ಗಂಡುಮಕ್ಕಳು. ಹೆಣ್ಣು ಮಕ್ಕಳು ಹುಟ್ಟದಿದ್ದದ್ದು ಅನುಕೂಲವೋ ಅನಾನುಕೂಲವೋ ಇನ್ನೂ ನನಗೆ ನಿರ್ಧರಿಸಲಾಗಿಲ್ಲ. ತಮಿಳುನಾಡಿನಿಂದ ಬಂದು ಯಲ್ಲಾಪುರದಲ್ಲಿ ನೆಲೆಸಿದ್ದ ಅಪ್ಪ ಅನಾಥಳಾದ ಅಮ್ಮನನ್ನು ವರಿಸಿ, ಮಣ್ಣಿನ ಗೋಡೆಯ ಹಂಚಿನ ಸೂರಿನ ಮನೆಯನ್ನು ಕಟ್ಟಿಕೊಂಡು ಲಾರಿ ಚಾಲಕನಾಗಿ ಸಂಸಾರದ ದೋಣಿ ನಡೆಸಿದ್ದ. ಮೊದಮೊದಲು ಚೆನ್ನಾಗಿ ಸಾಗಿದ್ದ ಸಂಸಾರ ಅಪ್ಪನ ಕುಡಿತದಿಂದಾಗಿ ಹಳ್ಳ ಹಿಡಿಯಿತು. ಮನೆಯಲ್ಲಿ ಒಲೆ ಉರಿಯುವುದು ಕಷ್ಟವಾಗತೊಡಗಿತು. ತಮ್ಮಂದಿರಿಬ್ಬರೂ ಹೈಸ್ಕೂಲು ಮೆಟ್ಟಿಲು ಹತ್ತದೆ ಕೆಲಸದ ಪಾಲಾದರು.

ನಾನು ವಕಾರಿಯೊಂದರಲ್ಲಿ ರಾತ್ರಿ ಕಾವಲುಗಾರ ಕೆಲಸ ಮಾಡುತ್ತ ಪಿಯೂಸಿಗೆ ನೆಗೆದುಬಿಟ್ಟಿದ್ದೆ. ಹೀಗೆ ನಾನು ಕಲಿಯುತ್ತಿರುವಾಗಲೇ ತಮ್ಮ ಷಣ್ಮುಖ ಕಾರವಾರ ಬದಿ ಹೆಣ್ಣನ್ನು ಮದುವೆಯಾಗುವ ಇರಾದೆ ವ್ಯಕ್ತಪಡಿಸಿದ. ಮದುವೆಗೆ ಮನೆಯಲ್ಲ್ಯಾವ ವಿರೋಧವೂ ಇರಲಿಲ್ಲ. ಅಣ್ಣನಾದ ನಾನೇ ನಾನಿನ್ನೂ ಕಲಿಯಬೇಕು; ಅವನು ಮದುವೆಯಾಗುವುದಾದರೆ ಆಗಲಿ ಎಂದುಬಿಟ್ಟಿದ್ದೆ. ಆದರೆ ಇವನು ಸಾರಾಯಿ ಕುಡಿಯಲು ಶುರು ಮಾಡಿದ್ದನ್ನು ಕಂಡು ಹೆಣ್ಣಿನ ಮನೆಯವರು ಮದುವೆ ನಿರಾಕರಿಸಿದರು.

ಆಮೇಲೆ ಅವನ ಕುಡಿತ ಇನ್ನೂ ಹೆಚ್ಚಾಯಿತು. ಸಣ್ಣಪುಟ್ಟ ಕಾರಣಕ್ಕೂ ಅಮ್ಮನಿಗೆ ಹೊಡೆಯಲು ಮುಂದಾಗುತ್ತಿದ್ದ. ಮೊದಲೇ ಕುಡಿದು ಬರುವ ಅಪ್ಪನ ಉಪಟಳವೇ ಸಹಿಸಲಸಾಧ್ಯವಾದಷ್ಟಿತ್ತು. ಇನ್ನು ಇವನ ಕಾಟ ಬೋನಸ್! ಒಮ್ಮೆ ಅಮ್ಮನಿಗೆ ಹೊಡೆಯಲು ಬಂದ ಅವನನ್ನು ನಾನು ವಿರೋಧಿಸಿದೆ. ಅದರ ಫಲವಾಗಿ ನನ್ನನ್ನು ಚೆನ್ನಾಗಿ ಥಳಿಸಿ ಪರಾರಿಯಾಗಿದ್ದ. ನಂತರ ಅವನು ಮನೆಗೆ ಬಂದಿದ್ದು ಹೆಂಡತಿ ಮತ್ತು ಮಗುವಿನ ಜೊತೆಗೇ! ಆಗಲೇ ಅಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ನನ್ನ ಓದು ಕುಂಟುತ್ತಲೇ ಸಾಗಿತ್ತು. ಕೊನೆಯ ತಮ್ಮ ರಾಮು ಕೂಲಿ ಕೆಲಸದ ಪಾಲಾಗಿದ್ದ.

ಹೀಗಾಗಿ ಡ್ರೈವರ್ ಕೆಲಸ ಮಾಡುತ್ತಿದ್ದ ಇವನು ಬಂದದ್ದು ಅಪ್ಪನಿಗೆ ಆಶಾಕಿರಣವಾಗಿ ಕಂಡಿತು. ಹೇಗೂ ಮನೆ ನಡೆಸಿಕೊಂಡು ಹೋಗುತ್ತಾನೆಂದುಕೊಂಡ. ಆದರೆ ಒಂದೇ ವಾರದಲ್ಲಿ ನಾನು ಮನೆ ಖರ್ಚಿಗೆ ದುಡ್ಡು ಕೊಡುವುದಿಲ್ಲ; ಬೇಕಾದರೆ ವಾರಕ್ಕೊಮ್ಮೆ ಸಂತೆ ಕಾಸು ಕೊಡುತ್ತೇನೆಂದು ಅಪ್ಪನ ಆಶಾಗೋಪುರ ಕೆಡವಿಬಿಟ್ಟಿದ್ದ. ಒಂದೇ ತಿಂಗಳಲ್ಲಿ ಅಪ್ಪ-ಅಮ್ಮನಲ್ಲಿ ಜಗಳ ಮಾಡಿಕೊಂಡು ಹಿಂದಿನ ಪಡವಿಯಲ್ಲಿ ತನ್ನ ಸಂಸಾರ ಶಿಫ್ಟ್ ಮಾಡಿದ್ದ.

ಅದಾಗಿ ಒಂದೇ ವರ್ಷದಲ್ಲಿ, ತಾನು ಮನೆ ಕಟ್ಟಬೇಕು ತನ್ನ ಪಾಲಿನ ಜಾಗ ಕೊಡು ಎಂದು ಅಪ್ಪನಿಗೆ ಗಂಟುಬಿದ್ದ. ಅಪ್ಪ ನಿರಾಕರಿಸಿದ. ನಾನು, ಸುಮ್ಮನೆ ಜಗಳ ಯಾಕೆ ಅಪ್ಪ... ಅವನ ಜಾಗ ಕೊಟ್ಟುಬಿಡು... ಎಂದು ಜಾಗ ಕೊಡಿಸಿ, ಮನೆ ಕಟ್ಟುವಾಗ ಚೀರೆಕಲ್ಲು ಹೊತ್ತೂ ಸಹಾಯ ಮಾಡಿದ್ದೆ. ಈ ಕಡೆ ನಾನೂ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ, ಉತ್ತಮ ಸಂಬಳದೊಂದಿಗೆ ಷಣ್ಮುಖನಿಗಿಂತಲೂ ಒಂದು ಇಂಚು ಹೆಚ್ಚೇ ಎನ್ನುವಂತೆ ಜೀವನ ಸಾಗಿಸಿದ್ದೆ.

ಆದರೆ ವಿಧಿಯಾಟ ಬೇರೆಯದೇ ಇತ್ತು. ಮದುವೆಯಾದ ಮೇಲೆ ನನ್ನ ಜೀವನ ಸೂತ್ರ ಹರಿದ ಗಾಳಿಪಟವಾಯಿತು; ಆಗದವರೆಲ್ಲ ನೋಡಿ ನಗುವ ಪಾಡಾಯಿತು. ನಗುವುದರಲ್ಲಿ ದೊಡ್ಡಪಾಲು ಪಡೆದವನೇ ಷಣ್ಮುಖ! ಮದುವೆಯಾದ ಮತ್ತೊಬ್ಬ ತಮ್ಮ ರಾಮು ಸಂಸಾರವನ್ನು ಹೈದರಾಬಾದಿಗೆ ತೆಗೆದುಕೊಂಡು ಹೋಗಿ, ಮನೆಯ ಕಡೆ ಆಸಕ್ತಿ ಕಡಿಮೆ ಮಾಡಿದ. ನಾನು ಒಂಟಿಗೂಬೆಯಂತೆ, ಗೂ... ಗೂ... ಎಂದು ಗೊರಲುತ್ತ, ಈ ದೊಡ್ಡ ಮನೆಯಲ್ಲಿ ಕಾಲನ ಕರೆಗೆ ಓಗೊಡಲು ಸಿದ್ಧನಾಗಿ ಕಾಲ ನೂಕತೊಡಗಿದೆ...

***

ಮತ್ತೊಂದು ನಿದ್ದೆ ತೆಗೆದು ಎಂಟು ಗಂಟೆ ಸುಮಾರಿಗ ಎದ್ದ ನಾನು ಚಾದರ, ಚಾಪೆ ಮಡಚಿಡುತ್ತ ಅಂಗಳದಲ್ಲಿ ಏನೋ ಸದ್ದು ಕೇಳಿಸಿ, ಕಿಡಕಿಯ ಗಾಜಿನಿಂದ ಹೊರಗಿಣುಕಿದೆ. ಸ್ನಾನ ಮಾಡಿ ಹೊಸಬಟ್ಟೆಯಲ್ಲಿದ್ದ ಷಣ್ಮುಖನ ಹೆಂಡತಿ ಅಮ್ಮ ಹಾಕುತ್ತಿದ್ದಂತೆ ಚಿಕ್ಕ ಚಿಕ್ಕ ರಂಗೋಲಿಗಳನ್ನು ಹಾಕತೊಡಗಿದ್ದಳು. ಅರೆ! ಇವಳು ತನ್ನ ಮನೆಯ ಮುಂದೆ ರಂಗೋಲಿ ಹಾಕುವುದು ಬಿಟ್ಟು ಇಲ್ಲೇಕೆ ಹಾಕುತ್ತಿದ್ದಾಳೆ? ಓಹೋ... ಇದು ಮೂಲ ಮನೆಯಲ್ಲ? ಇದನ್ನು ಬಿಡಬಾರದು ಎಂದೇನೋ! ಏನಾದರೂ ಮಾಡಿಕೊಳ್ಳಲಿ... ನಾನಂತೂ ಈ ಸಲ ಹಬ್ಬ ಆಚರಿಸುವುದಿಲ್ಲ; ಆಚರಿಸಲು ಹೊಸ ಬಟ್ಟೆ ಇದ್ದರೆ ತಾನೆ?

ಮೊನ್ನೆ ಊಟ ಮಾಡುತ್ತಿರುವಾಗ ಷಣ್ಮುಖ ಮತ್ತವನ ಹೆಂಡತಿ ಮಕ್ಕಳು ಹಬ್ಬಕ್ಕೆ ಹೊಸ ಬಟ್ಟೆ ತರುವ ಕುರಿತು ಮಾತನಾಡಿಕೊಳ್ಳುತ್ತಿದ್ದರು. ನನಗೂ ಒಂದು ಹೊಸ ಬಟ್ಟೆ ತರಬಹುದೆಂದು ಆಶಿಸಿದ್ದೆ. ಆದರೆ ನನಗೆ ಹೊಸ ಬಟ್ಟೆ ಬಂದ ಬಗ್ಗೆ ಸುದ್ದಿಯೇ ಇರಲಿಲ್ಲ. ಕೊನೆಯ ಸಮಯದಲ್ಲಿ ಬ್ರೇಕಿಂಗ್ ನ್ಯೂಸೇನಾದರೂ ಬಂದರೂ ಬರಬಹುದೆಂದು ಮನೆಯ ಮುಂಬಾಗಿಲು ತೆರೆದು ಕಾದೆ. ಷಣ್ಮುಖ, ಅವನ ಮಕ್ಕಳು ಮಿರಮಿರನೆ ಮಿನುಗುವ ಹೊಸಬಟ್ಟೆಯಲ್ಲಿ ಆರತಿ ಬೆಳಗಿಸಿಕೊಳ್ಳಲು ಅಂಗಳಕ್ಕೆ ಬಂದರು. ಅಣ್ಣಾ, ಬಾರೋ ಹಿಂಡಲಕಾಯಿ ಒಡೆಯೋಣ... ಷಣ್ಮುಖ ಕೂಗಿ ನನ್ನ ಕರೆದ. ಇಲ್ಲ... ನಂದಿನ್ನೂ ಮಿಂದಾಗಿಲ್ಲ... ನೀವು ಒಡೀರಿ... ಎಂದೆ ಕುರ್ಚಿಯ ಮೇಲೆ ಕುಂತಲ್ಲಿಂದಲೇ.

ಅವರು ಆರತಿ, ಹಿಂಡಲಕಾಯಿ ಒಡೆಯುವುದು ಮುಗಿಸಿಕೊಂಡು, ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಲೇ ನನಗೆ ಖಾತರಿಯಾಯಿತು: ಇನ್ನು ಬ್ರೇಕಿಂಗ್ ನ್ಯೂಸ್ ಬರಲಾರದು ಎಂದು.

ಒಲ್ಲದ ಮನಸ್ಸಿನಿಂದ ಟವೆಲ್ ತೆಗೆದುಕೊಂಡು ಬಚ್ಚಲಿಗೆ ಹೋದೆ. ಅಮ್ಮನ ಕಾಲದ ಕಟ್ಟಿಗೆ ಒಲೆಯ ಬಚ್ಚಲುಮನೆ ಈಗಿಲ್ಲ. ಬಟನು ಹೊಡೆದರೆ ಹತ್ತು ನಿಮಿಷದಲ್ಲಿ ನೀರು ಕಾಯುತ್ತದೆ. ಅಮ್ಮನೂ ಇಲ್ಲಿಲ್ಲ; ಹೈದರಾಬಾದಿನಲ್ಲಿ ಉತ್ತಮ ಸಂಪಾದನೆಯಲ್ಲಿರುವ ಕಿರಿಮಗ ರಾಮು ತನ್ನ ಔಷಧಿ ವೆಚ್ಚವೆಲ್ಲವನ್ನೂ ಸ್ವಲ್ಪವೂ ಬೇಸರಿಸಿಕೊಳ್ಳದೆ ನೋಡಿಕೊಳ್ಳುತ್ತಾನೆಂದು ಅವನ ಆಶ್ರಯಕ್ಕೆ ಸೇರಿಕೊಂಡಿದ್ದಾಳೆ. ಇದೆಲ್ಲ ಆಟ ಅವನ ಪುಟ್ಟ ಪುಟ್ಟ ಮಕ್ಕಳು ದೊಡ್ಡಾಗುವತನಕ ಮಾತ್ರ ಅಂತ ನನಗೆ ವಾಸನೆ ಹೊಡೆಯುತ್ತಿರುತ್ತದೆ.

ಅದನ್ನು ಅವಳಿಗೆ ಮಾತ್ರ ಹೇಳಲು ಹೋಗುವುದಿಲ್ಲ; ಮತ್ತೆ ಇಲ್ಲಿ ನನ್ನ ದುಡಿತವೂ ಇಲ್ಲ; ಆ ದೃಷ್ಟಿಯಲ್ಲಿ ಅವಳ ನಡೆ ಸರಿಯಾಗಿಯೇ ಇದೆ. ಈ ಮನೆಯಲ್ಲಿ ತನ್ನದೂ ಪಾಲು ಇರುವುದರಿಂದ ಹರಾಜಾಗಬಾರದೆಂದು ಮನೆಯ ಕರೆಂಟು ಬಿಲ್ಲು, ನಿರ್ವಹಣಾ ವೆಚ್ಚ ರಾಮುನೇ ತಾನು ಇಲ್ಲಿಗೆ ಬಂದಾಗ ಭರಿಸಿ ಹೋಗುತ್ತಾನೆ; ಆದರೆ ಅಣ್ಣನಾದ ನನ್ನ ಖರ್ಚು ತನ್ನ ಹೊಣೆಯಲ್ಲ ಎಂದು ಅರಿಯುವಷ್ಟು ಬುದ್ಧಿವಂತನಾಗಿದ್ದಾನೆ!
ಅಮ್ಮ ಇದ್ದಿದ್ದರೆ ಗೊಂಡೆ, ಹಿಂಡಲಕಾಯಿ ಬಳ್ಳಿಯ ಹಾರ ಹಾಕಿಸಿಕೊಂಡ ತಾಮ್ರದ ಹಂಡೆಯ ತುಂಬ ಬಿಸಿನೀರು ಕಾದಿರುತ್ತಿತ್ತು. ಮೈಗೆ ಹಚ್ಚಲು ತೆಂಗಿನೆಣ್ಣೆಯ ಬಟ್ಟಲು ಸಿದ್ಧವಾಗಿರುತ್ತಿತ್ತು. ಹೋಗಲಿ ಬಿಡು... ಅದೆಲ್ಲ ಈಗೇಕೆ? ಅವಳು ಅಲ್ಲಿ ಸುಖವಾಗಿದ್ದರೆ ಸಾಕು... ಎಂದು ಯೋಚಿಸುತ್ತ ನೀರು ಕಾಯಿಸಲು ಬಟನ್ ಒತ್ತಿದೆ.

***

ಮಾರನೇ ದಿನ ದೀಪಾವಳಿ ಅಮಾವಾಸ್ಯೆ. ‘ಅಣ್ಣಾ... ಸಂಜೆ ಎಲ್ಲಿಗೂ ಹೋಗಬೇಡ... ಲಕ್ಷ್ಮೀಪೂಜೆ ಮಾಡತೇವೆ...ಬಾ’ ಎಂದು ಆಗ್ರಹಿಸಿದ್ದ ತಮ್ಮ ಷಣ್ಮುಖ. ಸಂಜೆಯಾಗುತ್ತಲೇ ಷಣ್ಮುಖನ ಮನೆ ಸೇರಿಕೊಂಡಿದ್ದೆ. ಅವನ ಹೆಂಡತಿ ವರಾಂಡದಲ್ಲಿ ಲಕ್ಷ್ಮಿ ಫೋಟೋ ಇಟ್ಟು ಅಲಂಕಾರ ಮಾಡುವ ಹೊತ್ತಿಗೆ ಓಣಿಯ ಜನ, ಗೆಳೆಯರು, ಹಿತೈಷಿಗಳು ಕರೆ ಮನ್ನಿಸಿ ಪೂಜೆಗೆ ಬಂದಿದ್ದರು. ಗಂಡ– ಹೆಂಡತಿ ಪೂಜೆ ಮಾಡಿ ಬಂದವರಿಗೆಲ್ಲ ಪ್ರಸಾದ ಹಂಚಿದರು.

ಕೊನೆಗೆ ವಸ್ತ್ರದಾನಕ್ಕೆ ಮುಂದಾದರು. ಮೊದಲು ಲಾರಿ ಚಾಲಕನಾಗಿದ್ದ ಷಣ್ಮುಖ ಒಂದು ಸ್ವಂತ ಲಾರಿ ಖರೀದಿಸಿದ ಮೇಲೆ ಪ್ರತಿ ದೀಪಾವಳಿಯಲ್ಲಿ ತಪ್ಪದೆ ಲಕ್ಷ್ಮೀಪೂಜೆ ಮಾಡಿ ಐದು ಜನ ಬಡವರಿಗೆ ವಸ್ತ್ರದಾನ ಮಾಡುವ ಪದ್ಧತಿ ಬೆಳೆಸಿಕೊಂಡು ಬಂದಿದ್ದ. ಹೆಂಗಸರಿಗೆ ಪಲಕಿಪೀಸು, ಗಂಡಸರಿಗೆ ಷರ್ಟ್‌ಪೀಸು ಕೊಡುತ್ತಿದ್ದ.

ಮೊದಲು ಮೂಲೆಮನೆ ಕೂಲಿ ಹೆಂಗಸು ಮಾಳವ್ವನಿಗೆ ಪಲಕಿ ಪೀಸು ಕೊಟ್ಟು ಕಾಲಿಗೆ ಬಿದ್ದ. ಎರಡನೆಯದಾಗಿ ಕಾಲು ಮುರಿದುಕೊಂಡು ಕೂಲಿಗೆ ಹೋಗದೆ ಪರದಾಡುತ್ತಿದ್ದ ನಾಗಪ್ಪನಿಗೆ, ಮೂರನೆಯದಾಗಿ ಬೆಲ್ದಾರರ ಯಮುನ, ನಾಲ್ಕನೆಯದಾಗಿ ಚಮಗಾರ ಪದ್ಮಾಳಿಗೆ ವಸ್ತ್ರದಾನ ಮಾಡಿ ನಮಸ್ಕರಿಸಿದ. ನಂತರ ಕೊನೆಯ ವಸ್ತ್ರ ಕೈಗೆ ತೆಗೆದುಕೊಂಡು, ‘ಅಣ್ಣಾ ನೀನು ಮುಂದೆ ಬಾ...ತಗೋ’ ಎಂದು ನನ್ನನ್ನು ಕರೆದ.

‘ಏಯ್! ಹಾಗೆಲ್ಲ ಮನೆಯವರಿಗೇ ದಾನ ಕೊಡೂದಲ್ಲ... ಬೇರೆಯವರಿಗೆ ಕೊಡಬೇಕು... ನಂಗೆ ಬೇಡ...’ ಎಂದು ನಾನು ತಡವರಿಸಿದೆ.

‘ಏನಾಗೂದಿಲ್ಲ... ಹಿಡಿ...’ ಎಂದು ಷರ್ಟ್‌ಪೀಸನ್ನು ನನ್ನ ಕೈಗೆ ತುರುಕಿದ ಷಣ್ಮುಖ, ಕಾಲಿಗೆ ಬಿದ್ದು ನಮಸ್ಕಾರವನ್ನೂ ಮಾಡಿದ! ಚಿಕ್ಕಂದಿನಿಂದಲೂ ನನ್ನೊಂದಿಗೆ ಸ್ಪರ್ಧಿಸುತ್ತಲೇ ಬಂದರೂ, ಒಮ್ಮೆಯೂ ಮುಂದೆ ಹೋಗದ ಅಂವ, ಇವತ್ತು ನನ್ನನ್ನು ಹಿಂದೆ ಹಾಕಿದನೆಂಬುದು ತನಗಿಂತ ಹೆಚ್ಚು ನನಗೇ ಮನವರಿಕೆ ಮಾಡಿಕೊಟ್ಟಿದ್ದ.

ಈ ಅನಿರೀಕ್ಷಿತತೆಯಿಂದ ಕುತೂಹಲಗೊಂಡ ಅಲ್ಲಿದ್ದವರೆಲ್ಲ ನನ್ನ ಮುಖವನ್ನೇ ದಿಟ್ಟಿಸಿ ಭಾವವನ್ನು ಅಳೆಯುತ್ತಿದ್ದರು. ಅವರ ನೋಟಗಳೆಲ್ಲ ಬಾಣವಾಗಿ ನನ್ನೆದೆಯನ್ನು ಇರಿಯುತ್ತಿದ್ದಂತೆ, ನಾನು ಅವಮಾನದ ನೋವಿನಿಂದ ಪಾರಾಗಲು ಏನು ಮಾಡಬೇಕೆಂಬುದೇ ತಿಳಿಯದೆ ಚಡಪಡಿಸುತ್ತ ಮುಖ ಕೆಳಗೆ ಹಾಕಿ ನಿಂತುಬಿಟ್ಟೆ. ತಕ್ಷಣ ನನ್ನ ಕಣ್ಣಿಂದ ಒಂದು ಹನಿ ಜಾರಿ ಪಾದದ ಮೇಲೆ ಬಿದ್ದು, ನಂತರ ನಿಧಾನವಾಗಿ ನೆಲಕ್ಕಿಳಿಯಿತು!

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !