ಡಬಲ್ ಎಂಜಿನ್

7

ಡಬಲ್ ಎಂಜಿನ್

Published:
Updated:

ಜೀವನ ಎಂಬುದು ಜಾತ್ರೆಯಲ್ಲಿ ಹೂಡುವ ರಂಕಲ್ ರಾಟೆ ಆಟದಂತೆ – ಮೇಲಿದ್ದವರು ಕೆಳಗೆ ಹೋಗುತ್ತಾರೆ, ಕೆಳಗಿದ್ದವರು ಮೇಲೆ ಬರುತ್ತಾರೆ. ನಾಳೆ ನಮ್ಮದು ಎಂಬ ನಂಬಿಕೆಯೊಂದಿಗೆ ಈ ದಿನದ ಇರುಳಲ್ಲಿ ಭವಿಷ್ಯದ ಕನಸುಗಳನ್ನು ಹೊಸೆಯುತ್ತ ರಾಟೆ ಆಟ ಆಡುತ್ತಿರುತ್ತೇವೆ. ಇದು ಎಲ್ಲರ ಬದುಕಿಗೂ ಅನ್ವಯಿಸುತ್ತದೆ.

ಅಂದ ಹಾಗೆ ನಾನೊಬ್ಬ ಕಥಾಲೇಖಕ... ಒಬ್ಬಳೇ ಹೆಂಡತಿ, ಇಬ್ಬರು ಮಕ್ಕಳು ನನ್ನ ಆಸ್ತಿ. ಏರಿಳಿತಗಳ ನನ್ನ ಬದುಕಿನ ಪಯಣ ಸಾಗಿತ್ತು. 

ಪ್ರಸ್ತುತ, ತೆಲುಗಿನ ನಿರ್ಮಾಪಕ ನಿರ್ಮಿಸಿದ ಧಾರಾವಾಹಿಯೊಂದಕ್ಕೆ ಕತೆ–ಸಂಭಾಷಣೆ ಬರೆಯುತ್ತಿದ್ದೆ. ಅದು ಕನ್ನಡದ ವಾಹಿನಿಯೊಂದರಲ್ಲಿ ಮುಕ್ತಾಯಗೊಂಡು ಎರಡು ತಿಂಗಳಾಗಿತ್ತು. ಆ ಪ್ರಾಜೆಕ್ಟ್‌ನಲ್ಲಿ ಎರಡು ವರ್ಷದಿಂದ ಕೆಲಸ ಮಾಡಿ ಆ ತಂಡದೊಂದಿಗೆ ಒಂದು ರೀತಿಯ ಸಂಬಂಧ ಬೆಳೆದಿತ್ತು. ಪ್ರಾಜೆಕ್ಟ್‌ ಮುಕ್ತಾಯದ ದಿನ ಜೊತೆಗೆ ಕೆಲಸ ಮಾಡಿದವರನ್ನು ಬೇಸರದಿಂದಲೇ ಬೀಳ್ಕೊಟ್ಟಿದ್ದೆವು. ದುಡಿಯುವ ವರ್ಗದವರೆಲ್ಲ ಇಲ್ಲಿನವರು, ಹಣ ಹೂಡಿ ಲಾಭ ಮಾಡುವ ಧಣಿ ನಮ್ಮ ಪಕ್ಕದ ರಾಜ್ಯದವ. ಆ ಧಾರಾವಾಹಿಯ ನಿರ್ಮಾಪಕ ಪ್ರತಿಷ್ಠಿತ ಬ್ಯಾನರ್ ಒಂದರ ಯಜಮಾನ. ಆತ ಆರು ತಿಂಗಳಿಗೋ ವರ್ಷಕ್ಕೋ ಇಲ್ಲಿಗೆ ಬರುತ್ತಿದ್ದ. ಅಲ್ಲಿಂದ ಕಂಪನಿಯ ಪರವಾಗಿ ಬಂದು ಇಲ್ಲಿ ಕೆಲಸ ಮಾಡುತ್ತಿದ್ದವರು ಕ್ಯಾಷಿಯರ್, ಅವನ ಸಹಾಯಕ, ಆಫೀಸ್‌ಬಾಯ್. ಇಷ್ಟೇ ಅವರ ಸ್ಟಾಫ್. ಅವರೆಲ್ಲರೂ ತಮ್ಮ ತಮ್ಮ ಲಗೇಜ್‌ಗಳನ್ನು ಹೆಗಲಿಗೇರಿಸಿಕೊಂಡು ಆಫೀಸ್ ಖಾಲಿ ಮಾಡಿ ಹೊರಟುಹೋಗಿದ್ದರು. 

ಕೆಲಸ ಮುಗಿಯಿತೆಂದು ಕೂರುವಂತಿಲ್ಲ, ಬೇರೆ ಪ್ರಾಜೆಕ್ಟ್‌ನ ಹುಡುಕಾಟ, ಬೇರೆ ಬೇರೆ ವಾಹಿನಿಗಳಲ್ಲಿ ಅವಕಾಶಕ್ಕಾಗಿ ತಲಾಶ್ ನಡೆದಿತ್ತು. ಪ್ರಾಜೆಕ್ಟ್ ಓಕೆ ಅನಿಸಿದರೆ ಸಂಭಾವನೆ ಹೊಂದಿಕೆಯಾಗುತ್ತಿರಲಿಲ್ಲ. ಸಂಭಾವನೆ ಸರಿಯಾಗಿದ್ದರೆ ಹೊಸ ಕಂಪನಿಗಳು ಹಾಗೂ ಚಾನಲ್‌ಗಳಿಂದ ಒಪ್ಪಿಕೊಂಡ ಕೂಲಿ ಸಿಗುತ್ತದೋ ಇಲ್ಲವೋ ಖಾತ್ರಿ ಇರಲಿಲ್ಲ. ಈ ಗೊಂದಲದಲ್ಲೇ ನಿರುದ್ಯೋಗಿಯಾಗಿ ಎರಡು ತಿಂಗಳಾಗಿತ್ತು. ಅನಿಶ್ಚಿತ ಉದ್ಯೋಗ ತನ್ನ ಅಸಲಿ ಮುಖವನ್ನು ಕ್ರಮೇಣ ತೋರಿಸಲು ಶುರುಮಾಡಿತ್ತು. ಮನೆ ಬಾಡಿಗೆ ಕೊಡುವ ಅವಧಿ ಮುಗಿದು ಐದಾರು ದಿನವಾಗಿತ್ತು. ಕೆಲಸವಿದ್ದಾಗ ವಾರ ಮುಂಚೆಯೇ ಪ್ರತಿತಿಂಗಳು ಬಾಡಿಗೆ ಪಾವತಿಸುತ್ತಿದ್ದುದರಿಂದ ಮತ್ತು ಮನೆ ಮಾಲೀಕ ದೂರದಲ್ಲಿದ್ದರಿಂದ ಬಾಡಿಗೆ ವಿಚಾರದಲ್ಲಿ ಅವರು ಫೋನ್ ಮಾಡಿ ಕಿರಿಕಿರಿ ಮಾಡಿರಲಿಲ್ಲ. ಆದರೂ ಸುಮ್ಮನಿರುವ ಹಾಗಿಲ್ಲ. ಈಗ ಸುಮ್ಮನಿರುವ ಅವರು ಮತ್ತೊಂದು ವಾರದ ಹೊತ್ತಿಗೆ ಸುಮ್ಮನಿರುತ್ತಾರೆಂಬ ಖಾತ್ರಿ ಇರಲಿಲ್ಲ. 

ಈ ಚಿಂತೆಗಳಲ್ಲೇ ಮುಳುಗಿ ಯೋಚಿಸುತ್ತ ರಾತ್ರಿ ಮಲಗಿದವನಿಗೆ ಯಾವಾಗ ನಿದ್ದೆ ಆವರಿಸಿತೋ ಗೊತ್ತಿಲ್ಲ. ಬೆಳಗ್ಗೆ ಮೊಬೈಲ್ ಕರೆಯೊಂದು ಅಲರಾಮ್‌ನಂತೆ ಎಬ್ಬಿಸಿತು. ‘ಇದ್ಯಾರಪ್ಪ ಬೆಳಗ್ಗೆ ಬೆಳಗ್ಗೆ’ ಎಂದುಕೊಂಡು ಮೊಬೈಲ್ ಡಿಸ್‌ಪ್ಲೇ ನೋಡಿದವನಿಗೆ ಬಿರು ಬೇಸಿಗೆಯ ಬಿರುಕುಬಿಟ್ಟ ನೆಲದಲ್ಲಿ ಅಂತರ್ಜಲ ಉಕ್ಕಿದಷ್ಟು ಸಂತೋಷವಾಯಿತು. ಹೈದರಾಬಾದ್‌ನಿಂದ ಶೇಷಾಚಲಂರಾಜು ಫೋನ್ ಮಾಡಿದ್ದ. ಈ ಶೇಷಾಚಲಂರಾಜು ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅವನು ನಾನು ಈ ಹಿಂದೆ ಹೈದರಾಬಾದ್ ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡಿದ್ದ ಕ್ಯಾಷಿಯರ್ ಕಮ್ ಇನ್‌ಚಾರ್ಜ್. ಅವನ ಫೋನ್ ಕಾಲ್ ನೋಡಿದೊಡನೆ ನಿಜಕ್ಕೂ ನನ್ನಲ್ಲಿ ಹೊಸ ಚೈತನ್ಯ ಮೂಡಿತು. ಅದಕ್ಕೆ ಕಾರಣವೂ ಇದೆ. ಪರ ರಾಜ್ಯದ ನಿರ್ಮಾಪಕರ ಆ ಪ್ರಾಜೆಕ್ಟ್‌ನಲ್ಲಿ ಅದನ್ನು ಒಪ್ಪಿಕೊಳ್ಳುವಾಗ ನಿರ್ಮಾಪಕರನ್ನು ಒಮ್ಮೆ ಮಾತಾಡಿಸಿ ನನ್ನ ಸಂಬಳ, ನನ್ನ ಮೂಲಭೂತ ಕೆಲ ಅಗತ್ಯಗಳನ್ನು ಚರ್ಚೆ ಮಾಡಲಾಗಿತ್ತು. ಅದಾದ ಬಳಿಕ ಆ ನಿರ್ಮಾಪಕನೊಂದಿಗೆ, ಆ ಕಂಪನಿಯವರೊಂದಿಗೆ ನಮ್ಮ ಬಳಕೆ ಅಷ್ಟಾಗಿ ಇರಲಿಲ್ಲ. ಪ್ರಾಜೆಕ್ಟ್ ನಡೆಯುವಾಗ ನಮ್ಮ ಹಾಗೂ ಕಂಪನಿಯ ನಡುವೆ ಸೇತುವೆಯಾಗಿದ್ದವನು ಈ ಕ್ಯಾಷಿಯರ್ ಶೇಷಾಚಲಂರಾಜು ಮಾತ್ರ. ಕೆಲಸಕ್ಕೂ ಮೀರಿ ನನಗೂ ಅವನಿಗೂ ಸ್ನೇಹ ಬೆಳೆದಿತ್ತು. ಕೆಲಸ ನಡೆಯುತ್ತಿದ್ದಾಗ ಕನಿಷ್ಠ ವಾರಕ್ಕೊಮ್ಮೆ ನಾನೂ ಅವನೂ ಮೈಸೂರು ರಸ್ತೆಯಲ್ಲಿರುವ ಒಂದು ರೆಸಾರ್ಟ್‌ನಲ್ಲಿ ಗುಂಡು ಹಾಕಲು ಸೇರುತ್ತಿದ್ದೆವು.

ಇನ್ನೂ ಮದುವೆಯಾಗದ, ಮೇಲು ಸಂಪಾದನೆ ತಕ್ಕಮಟ್ಟಿಗೆ ಇದ್ದ ಅವನೇ ಹೆಚ್ಚು ಬಾರಿ ಬಾರಿನ ಬಿಲ್ ಪಾವತಿ ಮಾಡುತ್ತಿದ್ದ. ಅದಕ್ಕಿಂತ ಹೆಚ್ಚಾಗಿ ಒಡಹುಟ್ಟಿದ ಸೋದರನಿಗಿಂತಲೂ ಮಿಗಿಲಾಗಿ ನನ್ನನ್ನು ಕಾಣುತ್ತಿದ್ದ. ಹೀಗಾಗಿ ಅವನೆಂದರೆ ನನಗೂ ಅಚ್ಚುಮೆಚ್ಚು. ಪ್ರಾಜೆಕ್ಟ್ ಮುಗಿದ ದಿನ ಎಲ್ಲರಿಗಿಂತ ಹೆಚ್ಚಾಗಿ ನನ್ನ ಬಗ್ಗೆ ಮರುಕ ವ್ಯಕ್ತಪಡಿಸಿ, ‘‘ಸಾರ್, ನಾನು ಬ್ಯಾಚುಲರ್ರು... ನನಗೇ ಒಂದು ಹದಿನೈದು ದಿನ ಕೆಲಸ ಇಲ್ಲಾಂದ್ರೆ, ತುಂಬಾ ಕಷ್ಟ ಆಗುತ್ತೆ, ಅಂತಾದ್ರಲ್ಲಿ ನೀವು ಫ್ಯಾಮಿಲಿ ಮ್ಯಾನ್... ನೀವು ಹೇಗ್ ಮಾಡ್ತೀರ ಸಾರ್? ನಮ್ಮ ಇಂಡಸ್ಟ್ರಿ ಸರಿ ಇಲ್ಲ ಸಾರ್... ಜಾಬ್ ಸೆಕ್ಯೂರಿಟಿ ಇಲ್ಲ... ನೀವೇನು ಯೋಚ್ನೆ ಮಾಡಬೇಡಿ, ನಿಮಗೆ ತೆಲುಗು ಸಹ ಚೆನ್ನಾಗಿ ಬರುತ್ತೆ; ನಾನೇ ನಿಮಗೆ ಅಲ್ಲೇನಾದ್ರೂ ಪ್ರಾಜೆಕ್ಟ್ ಸಿಗುತ್ತೇನೋ ನೋಡ್ತೀನಿ’’ ಎಂದು ಹೋಗುವ ದಿನ ಹೇಳಿದ್ದ. ಆ ವಿಚಾರ ನೆನಪಾಗಿ ನನಗಾದ ಸಂತೋಷ ಅಷ್ಟಿಷ್ಟಿಲ್ಲ. ಬಹುಶಃ ರಾಜು ನನಗೋಸ್ಕರ ಯಾವುದೋ ತೆಲುಗು ಪ್ರಾಜೆಕ್ಟ್ ಹಿಡಿದಿರಬೇಕು ಎಂಬ ಆಸೆಯಿಂದ, ‘‘ಹಲೋ’’ ಎಂದು ಫೋನ್ ಕಿವಿಗಿಟ್ಟೆ.

‘‘ನಮಸ್ಕಾರ ಸಾರ್, ಹೇಗಿದೀರ... ಯಾವುದಾದರೂ ಪ್ರಾಜೆಕ್ಟ್ ಕನ್‌ಫರ್ಮ್ ಆಯ್ತಾ ಸಾರ್’’ ಎಂದು ವಿಚಾರಿಸಿಕೊಂಡ. ‘ಇನ್ನೂ ಇಲ್ಲ’ ಎಂದೊಡನೆ, ‘‘ಒಳ್ಳೇದೇ ಆಯ್ತು ಬಿಡಿ, ನಮ್ಮ ಹಣೇಲಿ ಅದೃಷ್ಟದ ರೇಖೆ ಬರೆದಿರೋದು ಕನ್‌ಫರ್ಮ್ ಆಯ್ತು’’ ಎಂದ. ಅವನ ಮಾತು ಕೇಳಿದಾಗ ಶೇಷು ನನಗಾಗಿ ಒಳ್ಳೆಯ ಪ್ರಾಜೆಕ್ಟ್ ಒಂದನ್ನು ಕೊಡಿಸ್ತಿದಾನೆ ಎಂಬ ನಂಬಿಕೆ ಬರತೊಡಗಿತು.

ಆ ಬಗ್ಗೆ ಪ್ರಸ್ತಾಪಿಸಲು, ‘‘ನೀವ್ಯಾಕೆ ಸಾರ್ ಇನ್ನೊಬ್ಬನ ಕೈ ಕೆಳಗೆ ದುಡೀಬೇಕು? ನೀವು ಮನಸ್ಸು ಮಾಡಿ... ಸ್ವಲ್ಪ ಕಷ್ಟ ಪಟ್ರೆ, ನಿಮ್ಮ ಕೈಕೆಳಗೆ ನೂರು ಜನ ದುಡೀತಾರೆ... ನೀವು- ನಾನು ಪ್ರೊಡ್ಯೂಸರ್ ಆಗ್ತೀವಿ. ಸೀರಿಯಲ್ ಬೇಡ ಅಂದ್ರೆ ಸಿನಿಮಾ ಮಾಡೋಣ. ಕನ್ನಡದಲ್ಲಿ ಮೂರು ಕೋಟಿಯಿದ್ರೆ ಒಳ್ಳೇ ಸಿನಿಮಾ ಮಾಡಬಹುದು ಅಲ್ವ? ಅದು ನಿಮ್ಮಿಷ್ಟ, ನೀವು ನಿರ್ಧಾರ ಮಾಡಿ ಸೀರಿಯಲ್ಲಾ, ಸಿನಿಮಾನ ಎಂದು’’ ಒಮ್ಮೆಲೇ ಬಡಬಡಿಸಿದಾಗ ನನಗೆ ತಲೆಬುಡ ಅರ್ಥವಾಗಲಿಲ್ಲ. ಇದೇನಪ್ಪ ಬೆಳಗ್ಗೆ ಬೆಳಗ್ಗೆ ಕನಸು ಕಾಣ್ತಿದೀನೋ? ಅಥವಾ ಬೆಳ್ಳಂಬೆಳಗ್ಗೆ ಫೋನ್ ಮಾಡಿರೋ ಈ ಶೇಷಾಚಲಂರಾಜುಗೆ ಗ್ರಹಚಾರ ಕೆಟ್ಟು ಹುಚ್ಚು ಗಿಚ್ಚು ಹಿಡಿಯಿತೋ ಎಂಬ ಆತಂಕ ಶುರುವಾಯಿತು.

‘‘ಇದೇನು ಶೇಷು, ಹೀಗೆ ತಮಾಷೆ ಮಾಡ್ತಿದೀಯ? ಬಾಡಿಗೆ, ಮಕ್ಕಳ ಸ್ಕೂಲ್ ಫೀಸ್ ಬ್ಯಾಲೆನ್ಸ್ ಇದೆ. ಮನೆಗೆ ರೇಷನ್ ತರಬೇಕು... ಕೈಯ್ಯಲ್ಲಿ ದುಡ್ಡಿಲ್ಲ, ಕೆಲಸ ಇಲ್ಲ ಅನ್ನೋ ಚಿಂತೇಲಿ ನಾನಿದ್ರೆ ನೀನು ಒಳ್ಳೇ ಕುಶಾಲು ಮಾಡ್ತಿದೀಯಲ್ಲ’’ ಎಂದೆ.
‘‘ಇದು ಕುಶಾಲಲ್ಲ ಸಾರ್, ನಿಮ್ಮ ಚಿಂತೆಗಳೆಲ್ಲ ಇವತ್ತಿಗೆ ಮುಗೀತು ಅಂದಕೊಳ್ಳಿ. ಒಳ್ಳೇ ಪಾರ್ಟಿ ಸಿಕ್ಕಿದಾನೆ, ನೀವು ಬಾಡಿಗೆ ಮನೆ ಖಾಲಿ ಮಾಡಿ ಹದಿನೈದೇ ದಿನದಲ್ಲಿ ಸ್ವಂತ ಬಂಗಲೆಗೆ ಶಿಫ್ಟ್ ಆಗೋ ಯೋಗ ನಿಮಗಿದೆ. ಅದೃಷ್ಟ ನಿಮ್ಮ ಮುಂದೆ ಹಾಸ್ಕೊಂಡು ಹೊದ್ಕೊಂಡು ಮಲಗಿದೆ, ನೀವು ಅದನ್ನು ಗುರ್ತಿಸಬೇಕಷ್ಟೇ. ನಿಮ್ಮಿಂದ ನನ್ನ ಬದುಕು ಬೆಳಗುತ್ತೆ ಸಾರ್, ಈ ಜುಜುಬಿ ಕೆಲಸ ಬಿಟ್ಟು ನಾನು ಸಹ ನಿಮ್ಮ ಜೊತೆ ಲೈಫಲ್ಲಿ ಸೆಟ್ಲ್ ಆಗಿಬಿಡ್ತೀನಿ ಸಾರ್...’’ ಎಂದ ಶೇಷು ಮತ್ತಷ್ಟು ಗೊಂದಲ ಹುಟ್ಟಿಸಿದ. ಕೊಂಚ ಅಸಹನೆಯಿಂದಲೇ, ‘‘ನಿಂಗೇನು ತಲೆಕೆಟ್ಟಿದ್ಯಾ... ಬೆಳಗ್ಗೆ ಬೆಳಗ್ಗೆ ನಾನೇನಾ ಸಿಕ್ಕಿದ್ದು’’ ಎಂದೊಡನೆ ಅವನು, ‘‘ನಾನು ಸೀರಿಯೆಸ್ಸಾಗೇ ಮಾತಾಡ್ತಿದೀನಿ. ನಿಮಗೆ ಡಬಲ್‌ ಎಂಜಿನ್ ಗೊತ್ತಾ ಸಾರ್’’ ಎಂದು ಕೇಳಿದ. ನನಗೆ ರೈಲ್ ಎಂಜಿನ್ ಗೊತ್ತಿತ್ತು. ಇದ್ಯಾವುದು ‘ಡಬಲ್ ಎಂಜಿನ್’ ಎಂಬ ಗೊಂದಲಕ್ಕೀಡಾದೆ. ಮತ್ತೆ ಅವನೇ ಮಾತು ಮುಂದುವರೆಸಿದ.

‘‘ಸಾರ್, ನೀವು ಹೇಳಿದ್ರಿ... ನೀವು ಹುಟ್ಟಿದ್ದು ಗುಂಜೂರಲ್ಲಿ ಅಂತ. ಅದು ವೈಟ್‌ಫೀಲ್ಡ್‌ಗೆ ಐದಾರು ಕಿಲೋಮೀಟರ್ ದೂರವಿದೆ, ತಮಿಳುನಾಡು ಬಾರ್ಡರ್‌ಗೆ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ... ನಿಜಾನ ಸಾರ್’’ ಎಂದಾಗ ನಾನು ದಂಗಾದೆ. ನನ್ನ ಊರಿನ ಹೆಸರನ್ನಷ್ಟೇ ಯಾವಾಗಲೋ ಒಮ್ಮೆ ಅವನಿಗೆ ಹೇಳಿದ ನೆನಪು. ಆದರೆ ಅವನು ನನ್ನ ಊರನ್ನು ಅಳೆದು ತೂಗಿದವನ ರೀತಿ ಊರಿನ ಚೆಕ್ಕುಬಂದಿ ಹೇಳುತ್ತಿರುವುದನ್ನು ಕೇಳಿ ಬೆರಗಾದೆ. ನನ್ನ ಮೌನ ಕಂಡು ಮತ್ತೆ ಮುಂದುವರಿದ ಅವನು, ‘‘ಅಷ್ಟೇ ಅಲ್ಲ ಸಾರ್, ನಿಮ್ಮ ತಂಗೀನ ನೀವು ಬಾಗೇಪಲ್ಲಿ ಸಮೀಪದ ಒಂದು ಹಳ್ಳಿಗೆ ಮದ್ವೆ ಮಾಡಿ ಕೊಟ್ಟಿದೀರ ಅಲ್ವಾ?’’ ಎಂದ. ನಾನು ಮತ್ತಷ್ಟು ಗೊಂದಲಕ್ಕೊಳಗಾದೆ. ನನ್ನ ತಂಗೀನ ಕೊಟ್ಟಿರುವುದು ಬಾಗೇಪಲ್ಲಿ ಹತ್ತಿರದ ಒಂದು ಹಳ್ಳಿಗೇನೇ. ಆದ್ರೆ ನನ್ನ ತಂಗಿ, ಅವಳ ಗಂಡ ಇಬ್ಬರೂ ನಾನು ಹುಟ್ಟಿ ಬೆಳೆದ ಗುಂಜೂರಿನಲ್ಲೇ ಬದುಕನ್ನ ಕಟ್ಟಿಕೊಂಡಿದಾರೆ, ಅವರಿಗೂ ನನ್ನ ಭವಿಷ್ಯಕ್ಕೂ ಏನು ಸಂಬಂಧ? ಅವನ ಮಾತಿನ ಹಿಂದುಮುಂದು ಗೊತ್ತಾಗಲಿಲ್ಲ. 

‘‘ಸಾರ್, ನಿಮ್ಮೂರು ಬಂಗಾರದ ನೆಲ. ಆದ್ರೆ, ನಿಮ್ಮ ತಂಗಿಯನ್ನು ಕೊಟ್ಟಿರೋ ಊರು ವಜ್ರದ ನೆಲ ಸಾರ್, ನಮ್ಮ ಆಪರೇಷನ್‌ಗೆ’’ ಎಂದಾಗ ನನಗೆ ಮತ್ತಷ್ಟು ದಿಕ್ಕುತಪ್ಪಿದಂತಾಯ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಹಿಂದುಳಿದ, ಬರ ಪೀಡಿತ ತಾಲ್ಲೂಕು ಬಾಗೇಪಲ್ಲಿ ಇವನ ದೃಷ್ಟಿಯಲ್ಲಿ ಅದು ಹೇಗೆ ವಜ್ರದ ನೆಲವಾಯ್ತ? ‘‘ಅದೇನು ನೇರವಾಗಿ ವಿಷಯಕ್ಕೆ ಬಾರಪ್ಪ’’ ಎಂದೆ. ಅವನ ಬಳಸು ದಾರಿ ನನ್ನ ಯೋಚನೆಗಳ ದಿಕ್ಕು ತಪ್ಪಿಸಿತ್ತು. 

‘‘ಸಾರ್, ನಿಮ್ಮ ಊರು ಸುತ್ತಮುತ್ತ, ನೀಲಿಗಿರಿ ತೋಪುಗಳಲ್ಲಿ, ಬೀಡು ಬಿಟ್ಟಿರೋ ಜಮೀನುಗಳಲ್ಲಿ ಮಣ್ಣಲ್ಲಿ ಇರುತ್ತೆ ಸಾರ್, ‘ಡಬಲ್‌ ಎಂಜಿನ್’ ಹಾವು. ಡಬಲ್‌ ಎಂಜಿನ್ ಅಂದ್ರೆ, ಎರಡು ತಲೆ ಹಾವು ಅಂತ. ಅದನ್ನ ಒಂದು ಕಡೆ ತಡೆದ್ರೆ... ವಿರುದ್ಧ ದಿಕ್ಕಲ್ಲಿ ಚಲಿಸುತ್ತೆ. ನಿಷ್ಪಾಪಿ ಜೀವಿ. ನೋಡೋಕೆ ಭಯ ಹುಟ್ಟಿಸೋ ಹಾಗಿದ್ರೂ ಅದರಿಂದ ಯಾವುದೇ ಹಾನಿ ಇಲ್ಲ. ಎರೇ ಹುಳದ ಥರ ಉಪಕಾರ ಮಾಡುತ್ತೆ ಹೊರತು ಹಾನಿ ಮಾಡೋದಿಲ್ಲ. ಅಂಥ ಒಂದು ಹಾವನ್ನ ನೀವು ಹಿಡಿದು ತಂದಿದ್ದೇ ಆದ್ರೆ... ಐದು ಕೋಟಿಗೆ ಪಾರ್ಟಿ ಇದಾನೆ’’ ಎಂದು ಅಸಲು ವಿಷಯ ಒಪ್ಪಿಸಿದ. ಅದನ್ನು ಕೇಳುತ್ತಿದ್ದಂತೆ ನನ್ನ ತಲೆ ದಿಮ್ಮೆಂದಿತು. ಇವನು ಹೊಸ ಸಿನಿಮಾದ ಕತೆ ಹೇಳುತ್ತಿದ್ದಾನೋ, ನಿಜವನ್ನೋ? 

ಇಂತಹದ್ದೇ ಕತೆಯಿದ್ದ ತಮಿಳು ಸಿನಿಮಾ ಒಂದನ್ನು ನೋಡಿದ್ದೆ. ಆಗಲೂ ಇದೇ ಗೊಂದಲ. ಈಗ ನೋಡಿದರೆ ಶೇಷಾಚಲಂ ಹಾವನ್ನು ಕೊಳ್ಳಲು ಪಾರ್ಟಿ ಇದಾನೆ, ಅದೂ ಸಹ ನಮ್ಮ ಊರು ಸುತ್ತಮುತ್ತ ಆ ಹಾವುಗಳು ಹೇರಳವಾಗಿವೆ ಎಂದು ಹೇಳುತ್ತಿದ್ದಾನೆ. ನಾನಂತೂ ಒಂದು ದಿನವೂ ಅಂತಹ ಹಾವನ್ನು ಈ ಹಿಂದೆ ಕಂಡಿರಲಿಲ್ಲ. 

‘‘ಅಲ್ಲ, ಶೇಷು... ಇದೆಲ್ಲ ನಿಜಾನ? ಅಂಥ ನಿಷ್ಪಾಪಿ ಹಾವಿಗೆ ಐದು ಕೋಟಿ ಕೊಟ್ಟು ಅದನ್ನು ಅವ್ರೇನು ಮಾಡ್ಕೊತಾರೆ? ಅದರಿಂದ ಏನು ಉಪಯೋಗ?’’
‘‘ಸಾರ್, ಅದನ್ನ ಫಾರಿನ್ನಿಗೆ ಎಕ್ಸ್‌ಪೋರ್ಟ್ ಮಾಡ್ತಾರಂತೆ’’ ಎಂದ, ತಾನೇ ಎಕ್ಸ್‌ಪೋರ್ಟ್ ಮಾಡುವವನಂತೆ. ನನಗೆ ಮತ್ತದೇ ಬಗೆಹರಿಯದ ಗೊಂದಲದಿಂದ, ‘‘ಅಲ್ಲಪ್ಪ, ಫಾರಿನ್ನವ್ರು ಅದನ್ನ ತಗೊಂಡು ಏನ್ ಮಾಡ್ತಾರೆ?’’ ಎಂದೆ. ನನ್ನ ಅಮಾಯಕ ಪ್ರಶ್ನೆಗಳಿಂದ ಅವನಲ್ಲೂ ಅಸಹನೆ ಶುರುವಾಗಿರಬೇಕು! 

‘‘ಸಾರ್, ಅವ್ರು ತಗೊಂಡು ಕಬಾಬ್ ಮಾಡ್ಕೊಂಡು ತಿನ್ಕೊಳ್ಳಿ, ನಮಗೆ ಆಗಬೇಕಾದ್ದೇನು? ಐದು ಕೋಟಿ ಬರುತ್ತೆ ಅಂತ ಹೇಳ್ತಿದೀನಲ್ಲ... ಹಾವು ಹುಡುಕಿ... ಹಾವು ಸಿಕ್ಕಿದ ತಕ್ಷಣ, ಸಿನಿಮಾ ಪ್ಲಾನಿಂಗ್ ಮಾಡೋಣ’’ ಎಂದು ನನ್ನ ಗೊಂದಲಗಳಿಗೆ ಫುಲ್‌ಸ್ಟಾಪಿಟ್ಟ. ನನಗೆ ಗೊತ್ತಿರುವ ಹಾಗೆ ಶೇಷಾಚಲಂ ಬುದ್ಧಿನೆಟ್ಟಗಿರುವ ಚಾಣಾಕ್ಷ ಅಕೌಂಟೆಂಟ್. ಅವನಿಗೆ ತಲೆಕೆಟ್ಟಿದೆ ಎಂದು ಒಪ್ಪಿಕೊಳ್ಳಲು ನನ್ನ ಮನಸ್ಸು ತಯಾರಿರಲಿಲ್ಲ. ಹಾಗಿದ್ದರೆ ಇಂತಹದೊಂದು ದಂಧೆ ಇರುವುದು ನಿಜವೇ? ಇಲ್ಲದಿದ್ದಲ್ಲಿ ಶೇಷಾಚಲಂ ಇಷ್ಟು ಖಚಿತವಾಗಿ ಹೇಳಲು ಹೇಗೆ ಸಾಧ್ಯ? ಅವನು ಹೇಳುವುದು ನಿಜವೇ ಆಗಿದ್ದರೆ, ನನ್ನ ಕಷ್ಟಗಳೆಲ್ಲ ದೂರವಾಗಿ, ನಾನೇ ನಿರ್ಮಾಪಕನಾಗಿ, ನಿರ್ದೇಶಕನಾಗಿ ಹತ್ತು ಜನಕ್ಕೆ ಕೆಲಸ ಕೊಡುವ ಅದೃಷ್ಟ ಹಾವಿನಿಂದಾಗಿ ಕೈಗೂಡುವುದಿದ್ದರೆ ನಾನ್ಯಾಕೆ ಬೇಡ ಎನ್ನಲಿ? ಎಷ್ಟಾದರೂ ನಾನೂ ಮನುಷ್ಯನೇ ಅಲ್ಲವೇ... ಎಂದು ಒಂದು ನಿರ್ಧಾರಕ್ಕೆ ಬಂದೆ.

‘‘ಆಯ್ತಪ್ಪ, ನಾಳೆಯಿಂದಾನೇ ಎಲ್ಲ ಕೆಲಸ ಬಿಟ್ಟು ಹಾವು ಹುಡುಕೋದಕ್ಕೆ ಹೋಗ್ತೀನಿ, ಮಕ್ಕಳನ್ನ ಸ್ಕೂಲಿಗೆ ಕಳಿಸಿ, ಅಡಿಗೆ ಕೆಲಸ ಮುಗಿದ ಮೇಲೆ ನನ್ನ ಹೆಂಡ್ತೀನೂ ಬಿಡುವಾಗಿರ್ತಾಳೆ... ಅವಳನ್ನೂ ಜೊತೆಗೆ ಕರ್ಕೊಂಡೋಗ್ತೀನಿ. ಯಾಕೆ ಅಂದ್ರೆ ಮನೇಲಿ ಜರೀಗಳನ್ನ, ಜಿರಲೆಗಳನ್ನ ನಿರ್ಭಯವಾಗಿ ಬಟ್ಟೇಲಿ ಸುತ್ತಿಕೊಂಡು ಎತ್ತಿ ಹೊರಗೆ ಬಿಸಾಡೋದು ಅವಳಿಗೆ ಅಂಗೈಯಲ್ಲಿ ನೆಲ್ಲಿಕಾಯಿಯಷ್ಟೇ ಸುಲಭವಾಗಿ ಸಿದ್ಧಿಸಿದ ಕಲೆ. ನನ್ನ ಸಹಾಯಕ್ಕೆ ಬರ್ತಾಳೆ’’ ಎಂದೆ. ಒಮ್ಮೆಲೆ ಜೋರು ದನಿಯಲ್ಲಿ ಶೇಷಾಚಲಂ, ‘‘ಸಾರ್, ಅಕ್ಕಾವ್ರು ಯಾಕೆ, ನೀವು ಕೆಲಸ ಕೆಡಿಸೋ ಹಾಗೆ ಕಾಣ್ತಿದೀರ, ಮೊದಲು ಅಕ್ಕಾವ್ರಹತ್ರ ಭಾಷೆ ತಗೋಳ್ಳಿ... ನಾನು ಒಂದು ಅಮೂಲ್ಯವಾದ ವಸ್ತು ತರ್ತೀನಿ, ಅದರ ಬಗ್ಗೆ ಅಕ್ಕಪಕ್ಕದವರತ್ರ ಬಾಯಿ ಬಿಟ್ಟರೆ ನಾನು ಸತ್ತ ಹಾಗೆ ಅಂತ. ಇದು ತುಂಬಾ ಕಾನ್ಫಿಡೆನ್ಷಿಯಲ್... ಮೂರನೇಯವರ ಕಿವೀಗೆ ಬೀಳಬಾರ್ದು. ಐದು ಕೋಟಿ ನಿಧಿ ನಿಮ್ಮನೇಲಿಟ್ಕೊಂಡಿದೀರ ಅಂದ್ರೆ... ಅಕ್ಕಪಕ್ಕದವ್ರು ಸುಮ್ನಿರ್ತಾರ? ನೀವೇ ಯೋಚ್ನೆ ಮಾಡಿ’’ ಎಂದು ಈ ಯೋಜನೆಯನ್ನು ನಿಗೂಢವಾಗಿಸಿದ. ನನಗೆ ಅವನ ಮಾತಲ್ಲೂ ಸತ್ಯ ಇದೆ ಎನ್ನಿಸಿತು. ಐವತ್ತು ಸಾವಿರ ಮನೇಲಿದೆ ಅಂದ್ರೇನೆ ಜೀವ ಪುಕಪುಕ ಎನ್ನುವಾಗ ಇನ್ನು ಐದು ಕೋಟಿ... ಸುಮ್ಮನೆ ಮಾತೆ? ಮತ್ತೆ ಮಾತು ಮುಂದುವರೆಸಿದ ಶೇಷಾಚಲಂ, ‘‘ಇನ್ನೊಂದು ವಿಚಾರ, ಈ ಹಾವು ನಿಮ್ಮ ಮನೇಲಿರೋವಾಗ ಪೊಲೀಸರಿಗೆ ಸಿಕ್ಕಿಬಿದ್ರೆ... ನಾನ್ ಬೇಲಬಲ್ ಅಫೆನ್ಸ್, ಹದಿಮೂರು ವರ್ಷ ಒಳಗಾಕ್ತಾರೆ...’’ ಅವನು ಮಾತು ಕೇಳುತ್ತಿದ್ದಂತೆ ಕೈಕಾಲು ನಡುಕ ಉಂಟಾಯಿತು. ‘‘ಇದೇನೋ ಹೊಸ ಗ್ರಹಚಾರ?’’ ಎಂದೆ. ಅವನು ಎಲ್ಲದಕ್ಕೂ ಸಜ್ಜಾದವನಂತೆ, ‘‘ಅಲ್ಲ ಸಾರ್, ಐದು ಕೋಟಿ ಬರುತ್ತೆ ಅಂದ್ರೆ, ಇಷ್ಟೂ ರಿಸ್ಕ್ ಇಲ್ದೆ ಇರೋಕೆ ಸಾಧ್ಯಾನ?’’ ಎಂದ. ಅವನ ಮಾತು ನನಗೂ ಸರಿ ಎನಿಸಿತು. 

ಒಳಗೊಳಗೆ ಹೆದರಿಕೆಯಾದರೂ ‘ಒನ್ ಶಾಟ್ ಲೈಫ್ ಸೆಟ್ಲ್’ ಎಂಬ ತತ್ತ್ವಕ್ಕೆ ಬದ್ಧನಾದೆ. ಅವನು ಮಾತು ಮುಂದುವರೆಸುತ್ತ, ‘‘ಸಾರ್, ಬಹಳ ಇಂಪಾರ್ಟೆಂಟ್... ನೀವು ಮೈಯೆಲ್ಲ ಕಣ್ಣಾಗಿರಿ... ಇಷ್ಟು ದಿನ ಸಾಮಾನ್ಯರಾಗಿದ್ರಿ... ಯಾರಿಂದಾನೂ ನಿಮಗೆ ಹಾನಿ ಇರಲಿಲ್ಲ. ಆದ್ರೆ ಈಗ ಡಬಲ್ ಎಂಜಿನ್ ಹುಡುಕೋಕೆ ಹೋಗ್ತಿದೀರ ಅಂತ ಗೊತ್ತಾದ್ರೆ... ನಿಮ್ಮನ್ನ ಏನೂ ಮಾಡೋದಕ್ಕೆ ಹೇಸದ ಜನ ನಿಮ್ಮ ಬೆನ್ನ ಹಿಂದೆ ಇರ್ತಾರೆ...’’ ಇದ್ಯಾವುದೋ ಮೆಕಾನಸ್ ಗೋಲ್ಡ್ ಸಿನಿಮಾದ ಕತೆ ಹೇಳುತ್ತಿದ್ದಾನಲ್ಲ ಎನಿಸಿತು. ಆದರೂ, ‘‘ಅಲ್ಲಯ್ಯ ಅವ್ರಿಗೆ ಹೇಗ್ ಗೊತ್ತಾಗಬೇಕು ನಾನು ಹಾವನ್ನ ಹುಡುಕ್ತಿದೀನಿ ಅಂತ?’’ ಎಂದೆ ಕಂಪಿಸುವ ದನಿಯಲ್ಲಿ. ಆಗಲೇ ನಾಲ್ಕಾರು ಜನ ನನ್ನ ಹಿಂದೆ ಬಿದ್ದಿರುವ ಅನುಭವವಾಯ್ತು! ಅವನು ಬಹು ಅನುಭವಿಯಂತೆ, ‘‘ಸಾರ್, ನಾವು ಅಲ್ಲೇ ಎಡವೋದು, ಹತ್ತಾರು ಕೋಟಿ ಮಾಲು ಅಂದ್ರೆ ಯಾರಾದ್ರೂ ಬಿಡ್ತಾರ? ಅವ್ರೂ ನಮ್ಮ ಹಾಗೇ ಹುಡುಕ್ತಿರ್ತಾರೆ. ಇವ್ನು ಎದುರಾಳಿ ಅಂದ್ರೆ ಉಡಾಯಿಸಿಬಿಡ್ತಾರೆ’’ ಎಂದ ಸಹಜ ದನಿಯಲ್ಲಿ. ನನ್ನ ಕೈಕಾಲು ತಣ್ಣಗಾಗತೊಡಗಿದವು. ‘‘ಇಷ್ಟು ರಿಸ್ಕ್‌ನ ಅಗತ್ಯ ಇದೆಯೇ ಶೇಷು...’’ ಎಂದೆ. ದನಿ ಗೊತ್ತಿಲ್ಲದೆ ತಗ್ಗಿತ್ತು. 

‘‘ಸಾರ್ ಎಚ್ಚರವಾಗಿರಲಿ ಅಂತ ಸೇಫರ್‌ಸೈಡ್‌ಗೆ ಅಂತ ಹೇಳಿದೆ. ನೀವು ಅಲ್ಲಿ ಹೇಳಿ ಕೇಳಿ ಲೋಕಲ್ಲು. ನಿಮ್ಮನ್ನ ಅಲ್ಲಿ ಯಾರು ಕೇಳ್ತಾರೆ ಸಾರ್?’’ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದ. 

ಇದಾದ ಮಾರನೆಯ ದಿನವೇ ನಾನು ಜಾಗ್ರತೆಯಿಂದ ನಿರ್ಜನ ತೋಪುಗಳಲ್ಲಿ, ಬೀಡು ಬಿಟ್ಟ ಜಮೀನುಗಳಲ್ಲಿ ಹುಡುಕಲು ಶುರುಮಾಡಿದೆ. ಹೊಸ ಮುಖಗಳನ್ನು, ಗೊತ್ತು ಗುರಿಯಿಲ್ಲದೆ ನಿರ್ಜನ ಪ್ರದೇಶಗಳಲ್ಲಿ ಓಡಾಡುತ್ತಿರುವವರನ್ನು ಎಚ್ಚರಿಕೆಯಿಂದ ಗಮನಿಸಿದೆ. ಎಲ್ಲಿ ನನ್ನನ್ನು ಉಡಾಯಿಸಿಬಿಡುತ್ತಾರೋ ಎಂಬ ಆತಂಕ ಬೇರೆ! ಕೆಲವೆಡೆ ಜಮೀನುಗಳನ್ನು ಕೊಂಡಿದ್ದ ಬಿಲ್ಡರ್‌ಗಳು ತಾವು ಕೊಂಡ ಜಮೀನಿಗೆ ಕಾಂಪೌಂಡ್ ಹಾಕಿಸುವ ಕೆಲಸ ಶುರುಮಾಡಿದ್ದರು. ಕಾಂಪೌಂಡ್‌ಗೆ ಪಾಯ ಅಗೆಯುತ್ತಿದ್ದ ಬೋವಿಗಳನ್ನು ಪರಿಚಯ ಮಾಡಿಕೊಂಡು ಅಗೆದ ಕಡೆ ಡಬಲ್ ಎಂಜಿನ್ ಸಿಗಬಹುದೇನೋ ಎಂದು ಬಹು ಕಾತುರದಿಂದ ನಿರೀಕ್ಷಿಸಿದೆ. ಉಪಯೋಗವಿಲ್ಲ. ಶೇಷು ಹೇಳಿದಂತಹ ಹಾವಿರಲಿ ಒಂದು ಹುಳವೂ ಕಣ್ಣಿಗೆ ಬೀಳಲಿಲ್ಲ. ಒಂದು ಪ್ರಾಜೆಕ್ಟ್ ಮುಗಿದರೆ ಸಾಕು, ಹೊಸ ಕೆಲಸದ ಶೋಧಕ್ಕಿಳಿಯುತ್ತಿದ್ದ ನಾನು ಒಂದು ವಾರವಾದರೂ ಮನೆಯಲ್ಲೂ ಕೂರದೆ ನಮ್ಮ ಊರಲ್ಲಿ ಗಿರಕಿ ಹೊಡೆಯುತ್ತಿರುವುದರ ಬಗ್ಗೆ ನನ್ನಾಕೆಗೂ ಅನುಮಾನ ಶುರುವಾಗಿತ್ತು. ಅವಳು ಇನ್ನಿಲ್ಲದ ಹಾಗೆ ಬಾಯಿ ಬಿಡಿಸಲು ಪ್ರಯತ್ನಿಸಿದಳು. ಅವಳಿಗೆ ಹೊಸಕತೆಯ ತಲಾಶಿನಲ್ಲಿರುವುದಾಗಿ ಹೇಳಿ ನಂಬಿಸಿದೆ. ಹುಡುಕಾಡಿದ್ದೇ ಬಂತು. ನಮ್ಮೂರನ್ನು ಪೂರ್ತಿಯಾಗಿ ಸರ್ವೆ ಮಾಡಿ ಮುಗಿಸಿದೆ. ನಮ್ಮ ಊರಿನ ಮೂಲೆ ಮೂಲೆಗಳು ಮೊದಲ ಬಾರಿಗೆ ಪರಿಚಯವಾದವು. ಅಕ್ಕಪಕ್ಕದ ಊರುಗಳಲ್ಲೂ ಮತ್ತೊಂದು ವಾರ ಅಲೆದೆ. ಏನು ಮಾಡಲಿ? ಅವನು ಹುಟ್ಟಿಸಿದ ಆಸೆಯೇನು ಕಡಿಮೆಯೇ? ಐದು ಕೋಟಿ! ಮತ್ತೆ ಮತ್ತೆ ಹುಡುಕಿದರೂ ಏನೂ ಪ್ರಯೋಜನವಾಗಲಿಲ್ಲ. ಅವನು ಪೋನ್ ಮಾಡಿದಾಗ ಊರಿನ ಹೊರವಲಯದ ಇಂಚಿಂಚೂ ಶೋಧಿಸಿದ್ದನ್ನ ಹೇಳಿದೆ. ವಾರದ ಹಿಂದೆ ನಿಮ್ಮೂರಿನ ಚರ್ಚ್ ಬಳಿಯಿಂದ ಒಬ್ಬ ಒಂದು ಹಾವನ್ನ ತಂದು ನಮ್ಮ ಪಾರ್ಟಿಗೆ ಸೇಲ್ ಮಾಡಿದಾನೆ ಎಂದು ಹೇಳಿ ನನ್ನನ್ನು ಬೇಸ್ತು ಬೀಳಿಸಿದ. 

ಮತ್ತೆ ಅವನೇ ನಿಮಗೆ ನಿಮ್ಮ ಊರಲ್ಲಿ ಲಕ್ ಇದ್ದ ಹಾಗಿಲ್ಲ ನಿಮ್ಮ ತಂಗಿಯನ್ನು ಕೊಟ್ಟಿರೋ ಊರಲ್ಲಿ ಈ ಹಾವುಗಳು ಹೇರಳವಾಗಿ ಸಿಗುತ್ತವೆ, ಅಲ್ಲಿ ಪ್ರಯತ್ನಿಸಿ ಎಂದು ಸಲಹೆ ಕೊಟ್ಟ. ನಾನು ನೇರವಾಗಿ ಆ ಊರಗೆ ಹೋಗಿ ಹುಡುಕುವ ಹಾಗಿಲ್ಲ... ನಮ್ಮ ಭಾವನ ಸಹಾಯ ಬೇಕೇ ಬೇಕೆಂದು ಕೊನೆಗೂ ಅಳೆದೂ ತೂಗಿ ನನ್ನ ತಂಗಿಯ ಗಂಡ ಏನಾದರೂ ಅಂದುಕೊಳ್ಳಲಿ ಎಂದು ನಿರ್ಧರಿಸಿ ಆತನೊಂದಿಗೆ ವಿಷಯದ ಪ್ರಸ್ತಾಪ ಮಾಡಿದೆ. ಆತ ತಮಾಷೆ ಮಾಡುತ್ತಾನೋ? ಈ ಕಾಲದಲ್ಲಿ ಇದು ಸಾಧ್ಯವೇ ಎಂದು ನನ್ನ ಬುದ್ಧಿಯ ಸ್ತಿಮಿತವನ್ನೇ ಅಳೆದುನೋಡುತ್ತಾನೋ? ಎಂಬ ಅನುಮಾನಗಳೆಲ್ಲ ಮನದಲ್ಲಿ ಸುಳಿದವು. ಆದರೆ ಅಂತಹದೇನೂ ಆಗದೆ, ಆತ ನೇರವಾಗಿ, ‘‘ಆಯ್ತು ಭಾವ ನಾನು ಇವತ್ತೆ ನನ್ನ ತಮ್ಮ ಗಂಗಿ ರೆಡ್ಡಿಗೆ ಹೇಳುತ್ತೇನೆ, ಆದ್ರೆ ಹಾವು ಸಿಕ್ಕಿದೊಡನೆ ನನಗೆ ಮೂರನೇ ಒಂದು ಭಾಗ ಬಂದು ಬಿಡಬೇಕು’’ ಎಂದು ನೇರವಾಗಿ ವ್ಯವಹಾರಕ್ಕಿಳಿದ! ಈಗಿನ ಕಾಲದ ಹುಡುಗರಲ್ಲವೆ! ನನಗೆ ಶೇಷು ಏನೆಂದುಕೊಳ್ಳುತ್ತಾನೋ ಎಂಬ ಮುಜುಗರ. ಭಾವ-ಭಾವಂದಿರು ಒಂದಾಗಿ ಬೇಕೆಂದೇ ಎರಡು ಪಾಲನ್ನು ಮೂರು ಪಾಲು ಮಾಡ್ತಿದಾರೆ ಎಂಬ ಸಂದೇಹ ಅವನ ಮನಸ್ಸಲ್ಲಿ ಬಂದುಬಿಟ್ಟರೆ ಹೇಗಪ್ಪ ಎಂಬ ಯೋಚನೆ ಶುರುವಾಯ್ತು. ತಡಮಾಡದೆ ಆಗಿದ್ದಾಗಲಿ ಎಂದು ಅವನಿಗೆ ಫೋನ್ ಮಾಡಿದೆ. ‘‘ತಲೆ ಕೆಡಿಸ್ಕೊಳೋದು ಬೇಡ ಬಿಡಿ ಸಾರ್, ಅವ್ರಿಗೂ ಒಂದು ಶೇರ್ ಕೊಟ್ರಾಯ್ತು, ಒಂದ್ವೆಳೆ ನಾವು ತೆಗೆಯೋ ಸಿನಿಮಾಗೆ ಫೈನಾನ್ಸ್ ಪ್ರಾಬ್ಲಮ್ ಆದ್ರೆ ಅವ್ರನ್ನೇ ಫೈನಾನ್ಶಿಯರ್ ಆಗಿ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಿದ್ರಾಯ್ತು...’’ ಎಂದು ಸರಳವಾಗಿ ಪರಿಹಾರ ಹೇಳಿದ. 

ಕೋಟಿಗಳೆಂದರೆ ಯಾರಿಗೆ ಬೇಡ? ನಮ್ಮ ಭಾವನೂ ಸಹ ಬಹು ಅಕ್ಕರಾಸ್ತೆಯಿಂದ ದಿನಕ್ಕೆ ಆರೇಳು ಸಲ ಫೋನ್ ಮಾಡಿ, ಊರಲ್ಲಿರುವ ತಮ್ಮನಿಗೆ ‘ಊಟ ಬೇಕಾದ್ರೆ ಹೊಲದತ್ರಾನೇ ತಗೊಂಡೋಗು, ಅಲ್ಲೇ ಸುತ್ತಮುತ್ತ ಇರೋ ಪಾಳು ಜಾಗ, ಗೋಮಾಳ ಇಲ್ಲೆಲ್ಲ ಹುಡುಕು’ ಎಂದು ತಾಕೀತು ಮಾಡುತ್ತಿದ್ದ. ಇತ್ತ ಶೇಷು ದಿನಕ್ಕೆ ಐದಾರು ಸಲವಾದರೂ ಫೋನ್ ಮಾಡಿ, ‘‘ಸಿಕ್ತಾ ಸಿಕ್ತಾ ಎಂದು ತಲೆ ತಿನ್ನುತ್ತಿದ್ದ. ಇನ್ನೂ ಸಿಗಲಿಲ್ಲ, ಸಿಗಬಹುದು, ಹುಡುಕಾಟ ನಡೆದಿದೆ ಎಂದು ಹೇಳುತ್ತಿದ್ದೆ. ಮಾರನೇ ದಿನ ಫೋನ್ ರಿಂಗಾದೊಡನೆ ಬಹುಶಃ ಹಾವು ಸಿಕ್ಕಿರುವ ಸುದ್ದಿ ಇರಬಹುದೇನೋ ಎಂದು ನೋಡಿದರೆ ಬೆಳಗ್ಗೆಯೇ ಶೇಷು ಮಾಡಿದ್ದ. ನಾನು ಸ್ವಲ್ಪ ಅಸಹನೆಯಿಂದಲೇ, ‘‘ಏನಪ್ಪ ಶೇಷು, ಬೆಳಗ್ಗೆನೇ...’’ ಎಂದೆ. ‘‘ಸಾರ್ ತುಂಬಾ ಮುಖ್ಯವಾದ ವಿಷ್ಯ, ಒಂದ್ವೇಳೆ ಹಾವು ಸಿಕ್ಕಿದ ಕೂಡ್ಲೇ, ಅದನ್ನ ಬರೀ ಕೈಯಲ್ಲಿ ಮುಟ್ಟೋದು ಬೇಡ, ಗ್ಲೌಸ್ ಹಾಕ್ಕೊಂಡು ಅದನ್ನ ಹಿಡ್ಕೊಬೇಕು. ಆ ಹಾವು ತುಂಬ ಸೂಕ್ಷ್ಮ ಸಾರ್, ಬರೀ ಕೈ ಶಾಖಕ್ಕೆ ಅದರ ತೂಕ ಕಡಿಮೆ ಆಗೋಗುತ್ತಂತೆ. ಅಷ್ಟೇ ಅಲ್ಲ, ಅದು ಸಿಕ್ಕಿದ ಕೂಡ್ಲೇ ಅದನ್ನ ತೂಕ ಹಾಕಿ, ಒಂದು ಸೂಟ್‌ಕೇಸಲ್ಲಿ ಹಾಕಿಡಕ್ಕೆ ಹೇಳಿ, ಅದು ಎಷ್ಟೇ ನಿರುಪದ್ರವಿ ಜೀವಿ ಆಗಿದ್ರೂ ಚೀಲದಲ್ಲಿ ಹಾಕಿಟ್ರೆ ಆ ಹಾವು ತನ್ನ ಮೂತೀಲೇ ಎಂಥ ಚೀಲನಾದ್ರೂ ಕೊರೆದು ತೂತು ಮಾಡಿ ಓಡೋಗುತ್ತಂತೆ...’’ ನಾನು ಇದನ್ನು ಪ್ರಪಂಚದ ಎಂಟನೇ ಅದ್ಭುತವೆಂಬಂತೆ ಕೇಳಿಸಿಕೊಳ್ಳತೊಡಗಿದೆ. ಮತ್ತೆ ಮಾತು ಮುಂದುವರೆಸಿದ ಅವನು, ‘‘ಇನ್ನೊಂದು ವಿಚಾರ... ಹಾವು ಕೊನೇ ಪಕ್ಷ ಮೂರೂವರೆ ಕೇಜಿ ತೂಕ ಬರಬೇಕು, ಇಲ್ಲ ಅಂದ್ರೆ ಬೈಯರ್ಸ್ ಇಂಟ್ರಸ್ಟ್ ತೋರಿಸಲ್ಲ’’ ಎಂದು ಹೊಸ ಬಾಂಬ್ ಹಾಕಿದ! ಅದು ಕೊಂಚ ಶಕ್ತಿಶಾಲಿಯಾದ ಬಾಂಬ್‌ ಆಗಿತ್ತು.

ನಾನು ಗಾಬರಿಯಿಂದ, ‘‘ಅಲ್ಲಯ್ಯ ನೀನು ಇದನ್ನೆಲ್ಲ ಮೊದಲು ನಂಗೆ ಹೇಳಿರಲೇ ಇಲ್ಲ’’ ಎಂದು ರಾಗ ಎಳೆದೆ. ‘‘ಸ್ಪೆಷಲ್ ಇನ್‌ಸ್ಟ್ರಕ್ಷನ್ಸ್ ಅಂತ ಅವ್ರು ನಂಗೂ ಈವಾಗಲೇ ಹೇಳಿದ್ರು ಸಾರ್’’ ಎಂದ ನಯವಾಗಿ ತಪ್ಪಿಸಿಕೊಂಡ. ‘‘ಒಂದ್ವೇಳೆ, ಮೂರೂವರೆ ಕೇಜಿಗಿಂತ ಜಾಸ್ತಿ ಇದ್ರೆ ಏನು ಕತೆ?’’ ಎನ್ನಲು, ಉತ್ಸಾಹಿತನಾಗಿ ‘‘ಜಾಕ್‌ಪಾಟ್ ಮೇಲೆ ಜಾಕ್‌ಪಾಟ್ ಹೊಡೀತು ಅಂದ್ಕೊಳಿ ಸಾರ್, ಮೂರೂವರೆ ಕೇಜಿ ಮೇಲೆ ಪ್ರತಿ ನೂರು ಗ್ರಾಮ್‌ಗೆ ಇಪ್ಪತ್ತು ಲಕ್ಷ ಎಕ್ಸ್‌ಟ್ರಾ ಕೊಡ್ತಾರಂತೆ’’ ಎಂದು ನನ್ನನ್ನು ದಂಗು ಬಡಿಸಿದ. ಅದನ್ನು ಕೇಳುತ್ತಿದ್ದಂತೆ ನನಗೂ ಹೊಸ ಕನಸಿನಲೋಕವೊಂದು ಕಾಣತೊಡಗಿತು. ಶೇಷು ಏನು ಹೇಳಿದನೋ ಯಥಾವತ್ತಾಗಿ ಎಲ್ಲವನ್ನೂ ನಮ್ಮ ಭಾವನಿಗೆ ಹೇಳಿ ಅದು ಆತನ ತಮ್ಮನ ಕಿವಿಗೆ ತಲುಪುವಂತೆ ಮಾಡಿದೆ. 

ಮುಂದಿನ ಎರಡು ದಿನ, ಇದೆಲ್ಲ ನಿಜವೇ, ಇಷ್ಟು ಸುಲಭವಾಗಿ ದುಡ್ಡು ಸಿಗುವುದು ಸಾಧ್ಯವೇ? ಇದು ಭ್ರಮೆಯೋ ನಿಜವೋ ಎಂಬ ಗೊಂದಲದಲ್ಲಿರುವಾಗ ನಮ್ಮ ಭಾವನಿಂದ ಫೋನ್ ಬಂತು. ಆ ಬದಿಯಿಂದ ಉದ್ವೇಗದಿಂದ ಆತ, ‘‘ಭಾವ, ಹಾವು ಸಿಕ್ಕಿ ಬಿಡ್ತಂತೆ...’’ ಎಂದ. ಮೈ ಜುಮ್ ಎನಿಸಿತು. ಒಂದು ಕ್ಷಣ ನನ್ನಿಂದ ಪ್ರತಿಕ್ರಿಯೆ ಬಾರದಿದ್ದುದು ನೋಡಿ ಆತ ಮತ್ತೊಮ್ಮೆ, ‘‘ಗ್ಲೌಸ್ ಸಿಗಲಿಲ್ಲ ಅಂತ ಅಂತ ಅವ್ನು ಕೈಗೆ ಪ್ಲಾಸ್ಟಿಕ್ ಕವರ್ ಹಾಕ್ಕೊಂಡು ಹಾವು ಹಿಡಿದ್ನಂತೆ, ಆ ಹಳ್ಳೀಲಿ ಅಂಗಡಿ ಇಲ್ಲ, ಮನೇಲೂ ಸೂಟ್‌ಕೇಸ್ ಇಲ್ಲ, ಅದಕ್ಕೆ ಅವನು ಮೂರು ಚೀಲ ತಗೊಂಡು ಒಂದರೊಳಗೆ ಇನ್ನೊಂದು ಹಾಕಿ ಭದ್ರವಾಗಿ ಹಾವನ್ನ ಹಿಡಿದುಹಾಕಿದಾನೆ... ನೋಡೋದಕ್ಕೆ ಎರಡೂವರೆ ಇಂಚು ದಪ್ಪ, ನಾಲ್ಕಡಿ ಉದ್ದ ಇದ್ಯಂತೆ. ಕಡಿಮೆ ಅಂದ್ರೂ ಐದು ಕೇಜಿ ಬರುತ್ತೆ ಅಂತ ಅವನು ಪಡವಲ ಕಾಯಿಗಳನ್ನ ತೂಕ ಹಾಕಿರೋ ತನ್ನ ಅನುಭವದಲ್ಲಿ ಹೇಳಿದ’’ ಎಂದು ಒಂದೇ ಸಮನೆ ಉಸುರಿದ. ನನಗೋ ಕೈಕಾಲು ತಣ್ಣಗಾಗಿ ಹೋಯ್ತು. ‘‘ತಕ್ಷಣ ಬಾಗೇಪಲ್ಲಿಗೆ ಹೋಗಿ ಯಾವುದೋ ಒಂದು ಸೂಟ್‌ಕೇಸ್ ತಗೊಂಡು ಬಂದು ಅದ್ರಲ್ಲಿ ಹಾವನ್ನ ಹಾಕಿಡಲು ಹೇಳಿ, ಬೇಕಿದ್ರೆ ನನ್ನ ಪಾಲಿನ ದುಡ್ಡಲ್ಲೇ ಸೂಟ್‌ಕೇಸ್ ದುಡ್ಡನ್ನ ಕೊಡ್ತೀನಿ’’ ಎಂದೆ. ಆತನೂ ‘ಆಯ್ತು’ ಅಂದ. ಸಂಭ್ರಮದಿಂದ ಶೇಷುಗೆ ಫೋನ್ ಮಾಡಿ ನಮ್ಮ ಭಾವ ಹೇಳಿದ್ದನ್ನೆಲ್ಲ ಯಥಾವತ್ತಾಗಿ ಹೇಳಿದೆ. ಅವ ಅಷ್ಟೇ ಕೂಲಾಗಿ ಹಾವು ಹತ್ತು ಕೇಜಿ ಬಂದರೂ ಪರವಾಗಿಲ್ಲ. ಮೊದಲು ಒಂದು ತಕ್ಕಡಿ ತಂದು ತೂಕ ಮಾಡಿ ಮೂರೂವರೆ ಕೇಜಿ ಇದೆ ಅಂತ ಹೇಳಿದರೆ ಸಾಕು, ನಾನು ಬೈಯ್ಯರ್‌ನ ಕರ್ಕೊಂಡು ಇಲ್ಲಿಂದ ಹೊರಡ್ತೀನಿ ಅಂದ. 

ತಡ ಮಾಡದೆ, ಹಿಂಗಿಂಗೆ ಎಂದು ನನ್ನ ಭಾವನಿಗೆ ಹೇಳಿದೆ. ಆತನೂ ಕೂಡ ತನ್ನ ತಮ್ಮನಿಗೆ ‘ಹೇಗ್ ಮಾಡ್ತೀಯೋ ಗೊತ್ತಿಲ್ಲ... ಎಲ್ಲಾದ್ರೂ ಒಂದು ತಕ್ಕಡಿ ತಂದು ತೂಕ ಹಾಕು’ ಎಂದು ತಾಕೀತು ಮಾಡಿದ. ಗಂಗಿರೆಡ್ಡಿಯೊಂದಿಗೆ ನಾನೂ ಮಾತಾಡಿದೆ. ಅವನು, ‘‘ಖಂಡಿತ, ನಾಲ್ಕು ನಾಲ್ಕೂವರೆ ಕೇಜಿಗೆ ಮೋಸ ಇಲ್ಲ’’ ಎಂದದ್ದು ನನ್ನ ಕಿವಿಯಲ್ಲಿ ರಿಂಗಣಿಸುತ್ತಿತ್ತು. ರಾತ್ರಿ ಮಲಗಿದಾಗ ಜಪ್ಪಯ್ಯ ಅಂದ್ರೂ ನಿದ್ರೆ ಹತ್ತಲೊಲ್ಲದು. ದುಡ್ಡು ಕೈಗೆ ಬರ್ತಿದ್ದ ಹಾಗೆ ಸಿನಿಮಾ ಶುರು! ಮೊದಲೇ ಮಾಡಿಟ್ಟುಕೊಂಡಿದ್ದ ಕತೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ಪ್ರೀ ಪ್ರೊಡಕ್ಷನ್ ಹೇಗಿರಬೇಕು? ಪಾತ್ರಕ್ಕೆ ಯಾರನ್ನ ಆರಿಸಿಕೊಳ್ಳಬೇಕು? ಹೀಗೆ ಮೇಲಿಂದ ಮೇಲೆ ಭವಿಷ್ಯದ ಕನಸುಗಳು ಮೆರವಣಿಗೆ ನಡೆಸಿದ್ದವು. ಬೆಳಗಿನ ಜಾವ ಅದ್ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ. ಬೆಳಗೆದ್ದು ಶುಭಸುದ್ದಿ ನಿರೀಕ್ಷಿಸುತ್ತಿದ್ದವನಿಗೆ ಗಂಗಿರೆಡ್ಡಿ ಹಳ್ಳಿಯಿಂದ ಫೋನ್ ಮಾಡಿ, ‘‘ಹಾವು ಒಂದೂ ಕಾಲು ಕೇಜಿ ಇದೆ’’ ಎಂದ! ಆಕಾಶದಲ್ಲಿ ತೇಲಾಡುತ್ತಿದ್ದವನನ್ನು ಯಾರೋ ಕಾಲುಹಿಡಿದು ನೆಲಕ್ಕೆ ಎಳೆದು ಅಪ್ಪಳಿಸಿದಂತಾಯಿತು. ‘‘ನಿಜ ಹೇಳು ಗಂಗಿರೆಡ್ಡಿ, ನೀನೇ ನಾಲ್ಕೂವರೆ ಕೇಜಿ ಬರುತ್ತೆ ಅಂದಿದ್ದೆ, ತಕ್ಕಡಿ ಸರಿ ಇಲ್ವೇನೋ ನೋಡು’’ ಎಂದೆ. ನನ್ನ ಭಾವನ ತಮ್ಮ, ‘‘ಇಲ್ಲ ಭಾವ, ನೋಡೋದಕ್ಕೆ ಹಂಗೇ ಕಾಣಿಸ್ತು, ಮನೇಲಿದ್ದ ಒಂದು ಕೇಜಿ ಉಪ್ಪಿನ ಪ್ಯಾಕೇಟ್, ಜೊತೆಗೆ ಕಾಲು ಕೇಜಿ ಟೀ ಸೊಪ್ಪು ಪ್ಯಾಕೇಟ್ ಎರಡನ್ನೂ ಒಂದ್ಕಡೆ ತೂಗಿ ನೋಡಿದೆ. ಎರಡೂ ಒಂದೇ ಸಮ ಅಯ್ತೆ’’ ಎಂದು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಹೇಳಿಬಿಟ್ಟ. ಹಾವು ಮೂರೂವರೆ ಕೇಜಿಗಿಂತ ಜಾಸ್ತಿ ತೂಗಿದರೆ ಜಾಕ್‌ಪಾಟ್ ಹೊಡೆದಂತೆ ಎಂದು ಹೇಳಿದ್ದ ಶೇಷು. ಕಡಿಮೆ ಬಂದರೆ ಮುಂದಿನ ಕತೆಯೇನು? ಅದನ್ನು ತಿಳಿಸಿರಲಿಲ್ಲ. ಶೇಷು ಬಗ್ಗೆ ಯೋಚಿಸುತ್ತಿದ್ದಂತೆ ಅವನೇ ಫೋನ್ ಮಾಡಿದ. ಅವನಿಗೆ ವಿಷಯ ಅರುಹಿದೆ. ಅವನೂ ಇದನ್ನು ಊಹಿಸಿರಲಿಲ್ಲವೇನೋ. ಸ್ವಲ್ಪ ಸಮಯ ತೆಗೆದುಕೊಂಡು ಮತ್ತೊಂದು ಅರ್ಧ ಗಂಟೆಗೆ ಫೋನ್ ಮಾಡಿ, ‘‘ಸಾರ್, ಒಂದೂಕಾಲು ಕೇಜಿ ಅಂದ್ರೆ ಬೈಯರ್ಸ್ ಇನ್ನೂ ಮರಿ ಅಂತಿದಾರೆ ಸಾರ್, ನನ್ನದೊಂದು ಸಜೆಷನ್ ಇದೆ. ನೀವು ಮನಸ್ಸು ಮಾಡಿದ್ರೆ ಆಗುತ್ತೆ’’ ಎಂದು ರಾಗ ಎಳೆದ. ಅವನು ಹೇಳುವುದರ ಅಂದಾಜು ಇರದ, ಆತಂಕದಲ್ಲಿದ್ದ ನಾನು, ‘‘ಅದೇನು ಹೇಳಪ್ಪ, ಅದೂ ಆಗಿಹೋಗಲಿ’’ ಎಂದು ನಿರಾಶೆಯಿಂದ ಹೇಳಿದೆ.

‘‘ಸಾರ್, ಒಂದು ದೊಡ್ಡ ಮರದ ಪೆಟ್ಟಿಗೆ ಮಾಡಿಸಿ ಅದರ ತುಂಬಾ ಮಣ್ಣು ತುಂಬಿಸಿಬಿಡಿ. ಆ ಹಾವನ್ನು ಅದ್ರಲ್ಲಿ ಹಾಕಿ ನಿಮ್ಮ ಬೆಡ್‌ರೂಮಲ್ಲಿ ಒಂದು ಆರು ತಿಂಗಳು ಸಾಕಿ. ಅಷ್ಟರಲ್ಲಿ ಅದು ಮೂರೂವರೆ ಕೇಜಿ ರೀಚ್ ಆಗಬಹುದು’’ ಇನ್ನೂ ಏನು ಹೇಳುತ್ತಿದ್ದ. ಹಾವನ್ನು ಬೆಕ್ಕು ಸಾಕಿದಂತೆ ಸಾಕಲು ಸಾಧ್ಯವೆ? ನನಗೆ ಒಮ್ಮೆಲೇ ಮೈ ಉರಿಯಿತು. ‘‘ಏನಯ್ಯ ತಮಾಷೆ ಮಾಡ್ತಿದೀಯ?’’ ಜೋರು ದನಿಯಲ್ಲಿ ಕೇಳಿದೆ. ಅವನು ಅಷ್ಟೇ ತಣ್ಣಗೆ, ‘‘ಇಲ್ಲ ಸಾರ್, ಸೀರಿಯೆಸ್ಸಾಗೇ ಹೇಳ್ತಿದೀನಿ, ಈ ಹಾವಿಗೆ ಮೊಟ್ಟೆ ಹಾಲು ಏನೂ ಬೇಕಾಗಿಲ್ಲ. ಬರೀ ಮಣ್ಣು ತಿಂದ್ಕೊಂಡೇ ಬೆಳೆಯುತ್ತಂತೆ... ನೀವು ತಿಂಗಳಿಗೊಂದು ಸಲ ಮಣ್ಣನ್ನ ಬದಲಾಯಿಸಿ, ದಿನಕ್ಕೆ ಒಂದೆರಡು ಗಂಟೆ ಪೆಟ್ಟಿಗೆಯಿಂದ ಹೊರಗೆ ಬಿಡಿ, ಹಾಗೇ ಓಡಾಡ್ಕೊಂಡಿರುತ್ತೆ... ನಾವಾಗಿ ಮುಟ್ಟಿದ್ರೆ ಅದರ ತೂಕ ಕಮ್ಮಿಯಾಗುತ್ತೆ ಸಾರ್, ಅದಾಗೇ ನಮ್ಮ ಮೈಮೇಲೆ ಓಡಾಡಿದ್ರೆ ಪ್ರಾಬ್ಲಂ ಏನಿಲ್ಲ...’’ ನನ್ನ ಸಿಟ್ಟು ಮೇರೆ ಮೀರಿತ್ತು. ಇಷ್ಟು ಕಾಲ ಎಲ್ಲ ಕೆಲಸಗಳನ್ನು ಬದಿಗಿಟ್ಟು ಈ ಆಟ ಆಡಿಸುವ ಹಾವಿನ ಹಿಂದೆ ಹೋಗಿದ್ದು ನನಗೆ ತಲೆಚಿಟ್ಟು ಹಿಡಿಸಿತ್ತು. ಅದು ಸಿಕ್ಕಮೇಲೂ ಆಸಾಮಿ ಹೀಗೆನ್ನುತ್ತಿದ್ದಾನೆ. ಅದೇ ಸಿಟ್ಟಿನಲ್ಲಿ, ‘‘ನಿಂಗೇನಾದ್ರೂ ತಲೆ ಕೆಟ್ಟಿದ್ಯಾ? ಹಾವನ್ನ ಬೆಡ್‌ರೂಮಲ್ಲಿ ಸಾಕ್ಕೋಳೋದೂ ಅಲ್ದೆ ಮೈಮೇಲೆ ಬಿಟ್ಕೊಬೇಕಾ?’’ ಎಂದೆ. ನನ್ನ ಸಿಟ್ಟು ತನಗೆ ತಾಕೇ ಇಲ್ಲ ಎನ್ನುವಂತೆ ಅವನು ತಣ್ಣಗೆ, ‘‘ಸಾರ್, ಅದು ಹಸುಗೂಸಿನ ಥರ ನಿರುಪದ್ರವಿ ಜೀವಿ ಸಾರ್, ಒಂದು ನಾಲ್ಕು ದಿನ ರೂಢಿ ಆದ್ರೆ ನೀವೇ ಅದನ್ನ ಬಿಟ್ಟಿರೋದಿಲ್ಲ ಅಂತೀರಿ. ಸ್ವಲ್ಪ ದಿನ ಬಳಕೆ ಆಗಬೇಕು ಅಷ್ಟೇ. ಹೊರಗಡೆ ಯಾರ್‍ಗೂ ನೀವು ಡಬಲ್ ಎಂಜಿನ್ ಸಾಕ್ತಿದೀನಿ ಅನ್ನೋದು ಗೊತ್ತಾಗಬಾರ್ದು. ಒಂದಾರು ತಿಂಗಳು ಅಷ್ಟೇ’’ ಎಂದು ಪುಸಲಾಯಿಸುತ್ತಿದ್ದ. ಬದುಕಿನ ಬವಣೆಗೆ ಬೇಸತ್ತು, ಏನೋ ನನಗೂ ಅದೃಷ್ಟ ಬಂತೇನೋ ಎಂಬ ನಂಬಿಕೆಯಿಂದಲೇ ಈ ಕೆಲಸಕ್ಕೆ ಕೈ ಹಾಕಿದ್ದೆ. ಆದರೀಗ ಅದೃಷ್ಟ ಅದರಿಷ್ಟ ಎಂಬಂತಾಗಿತ್ತು. ಏನಾದ್ರೂ ಮಾಡಿ ಈಗ ಸಿಕ್ಕಿರೋ ಹಾವನ್ನ ಶೇಷುಗೆ ದಾಟಿಸಿ ಅದೆಷ್ಟು ಸಿಗುತ್ತೋ ಅಷ್ಟರಲ್ಲೇ ಸದ್ಯದ ಭವ ಬಂಧನಗಳಿಗೆ ಒಂದಷ್ಟಾದರೂ ಶಾಂತಿ ಮಾಡೋಣ ಎನಿಸಿ ಅವನಲ್ಲಿ ಅದನ್ನೇ ಅರುಹಿದೆ. ‘‘ಸರಿ ಒಂದ್ಹತ್ತು ನಿಮಿಷ ಇರಿ, ನಾನೇ ಫೋನ್ ಮಾಡ್ತೀನಿ’’ ಎಂದವನು ಅರ್ಧಗಂಟೆ ನಂತರ ಫೋನ್ ಮಾಡಿ, ‘‘ಸಾರ್, ಮಿನಿಮಮ್ ಮೂರು ಕೇಜಿ ಮೇಲಿದ್ರೆ ಮಾತ್ರ ವ್ಯವಹಾರ ಕೋಟಿಗಳ ಲೆಕ್ಕದಲ್ಲಿರುತ್ತಂತೆ, ಅದಕ್ಕಿಂತ ಕಡಿಮೆ ಇದ್ರೆ ಬರೀ ಲಕ್ಷಗಳಲ್ಲಿ ವ್ಯವಹಾರ ಮುಗಿದುಹೋಗುತ್ತೆ. ಈಗ್ಲೂ ಕಾಲ ಮಿಂಚಿಲ್ಲ, ಆರೇ ಆರು ತಿಂಗಳು ಆರೈಕೆ ಮಾಡಿ. ಇಲ್ಲ ಅಂದ್ರೆ ನಿಮ್ಮಿಷ್ಟ...’’ ಎಂದ. ನನ್ನನ್ನೇ ನಾನು ಸಾಕಿಕೊಳ್ಳುವುದು ಕಷ್ಟವಿತ್ತು. ಹಾಗಿರುವಾಗ ಸಂಸಾರದ ಜೊತೆಗೆ ಹಾವನ್ನು ಸಾಕುವುದು ಹೇಗೆ? ಅದೂ ಗುಟ್ಟಾಗಿ? ಬಂದಷ್ಟು ಬರಲಿ. ಬಂದದ್ದರಲ್ಲಿ ಕೊನೇ ಪಕ್ಷ ಮೂರು ತಿಂಗಳ ರೇಷನ್, ಬೈಕ್‌ಗೆ ಹೊಸ ಟೈರ್ ಹಾಕಿಸಿ, ಮಕ್ಕಳ ಸ್ಕೂಲ್ ಈ ವರ್ಷದ ಸ್ಕೂಲ್ ಫೀಸ್ ಕಟ್ಟಿ ಮಿಕ್ಕಿದರೆ ಒಂದಾರು ತಿಂಗಳು ಚಿಂತೆಯಿರುವುದಿಲ್ಲ. ‘‘ಸರಿನಪ್ಪ, ಅದೇನು ಕೊಡ್ತಾರೋ ಕೊಡಲಿ. ಬರಲಿಕ್ಕೆ ಹೇಳು, ನೀವು ಬಾಗೇಪಲ್ಲಿಗೆ ಬರುವ ಮುಂಚೆಯೇ ನಾನಲ್ಲಿ ಕಾಯ್ತಿರ್ತೀನಿ’’ ಎಂದೆ.

ಅವನು ಕರುಣೆ ತೋರಿಸುವ ದನಿಯಲ್ಲಿ, ‘‘ಸಾರ್, ಕೋಟಿಗಳ ವ್ಯವಹಾರ ಆದ್ರೆ ಅವರೇ ಬರ್ತಾರೆ, ಲಕ್ಷಗಳು ಅಂದ್ರೆ ಅವರಿಗೆ ಅಲಕ್ಷ. ನೀವೇ ರಿಸ್ಕು ತಗೊಂಡು ಹುಷಾರಾಗಿ ಹಾವನ್ನ ತಗೊಂಡು ಬರಬೇಕು’’ ಎಂದು ಚೆಂಡನ್ನು ನನ್ನ ಅಂಗಳಕ್ಕೇ ದಾಟಿಸಿದ. ಕೋಟಿಗಳ ವ್ಯವಹಾರ ಈಗ ಲಕ್ಷಗಳಿಗೆ ಇಳಿದಿತ್ತು. ಇದು ಗೊತ್ತಾದರೆ ನಮ್ಮ ಭಾವ ಏನು ತಪ್ಪು ತಿಳಿದುಕೊಳ್ಳುತ್ತಾನೋ ಎಂಬ ಸಂಕಟ ಬೇರೆ! ಸದ್ಯಕ್ಕೆ ಇದ್ಯಾವುದನ್ನೂ ಈಗ ಹೇಳುವುದು ಬೇಡ, ಸೀದಾ ಬಾಗೇಪಲ್ಲಿಗೆ ಹೋಗಿ ಹಾವನ್ನು ಸುಪರ್ದಿಗೆ ತಗೊಂಡು ಆನಂತರ ನಿರ್ಧರಿಸೋಣ ಎಂದು ಯೋಚಿಸಿದೆ. ನಮ್ಮ ಭಾವನಿಗೆ ವಿಷಯ ಅರುಹಿದೆ. ಅದಕ್ಕೆ ಅವನು, ‘ನನಗೆ ಅರ್ಜೆಂಟ್ ಕೆಲಸ ಇದೆ, ನೀವೇ ಹೋಗಿ. ಹಾಗೇನಾದ್ರೂ ಹೈದರಾಬಾದ್‌ಗೆ ಹೋಗೋದಾದ್ರೆ ನನ್ನ ತಮ್ಮ ಗಂಗಿರೆಡ್ಡೀನ ಜೊತೆಗೆ ಕರ್ಕೊಂಡೋಗಿ’ ಎಂದು ಸೂಚಿಸಿದ. ನಾನು ಮೆಜೆಸ್ಟಿಕ್‌ಗೆ ಬಂದು ಬಾಗೇಪಲ್ಲಿ ಬಸ್ ಹತ್ತಿದೆ. ಪ್ರಯಾಣದುದ್ದಕ್ಕೂ ಶೇಷು ಲಕ್ಷಗಳಲ್ಲಿ ವ್ಯವಹಾರ ಎಂದಿದ್ದಾನೆ... ಎಷ್ಟು ಲಕ್ಷ ಕೊಡಬಹುದು? ಅದರಲ್ಲಿ ನನಗೆಷ್ಟು ಸಿಗಬಹುದು? ಕಿತ್ತು ತಿನ್ನುತ್ತಿರುವ ನನ್ನ ಮೂಲಭೂತ ಅಗತ್ಯಗಳನ್ನು ನಿವಾರಿಸಿಕೊಳ್ಳಬೇಕು, ಮುಂದಿನ ವರ್ಷದ ಮಕ್ಕಳ ಫೀಸ್‌ಗೆ ಇದರಲ್ಲೇ ಒಂದಷ್ಟು ತೆಗೆದಿಡಬೇಕು, ಅದಾದ ನಂತರ ಉಳಿದ ದುಡ್ಡಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳಲು ಟ್ರೈ ಮಾಡಬೇಕು... ಹೀಗೆ ಸಾಗುತ್ತಿತ್ತು ನನ್ನ ಯೋಚನಾ ಲಹರಿ. ಕೆಳಮಧ್ಯಮವರ್ಗದವರ ಯೋಚನೆಗಳು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿರಲಿಲ್ಲ. ಕೋಟಿಗಳು ಬರುವ ಕನಸು ನುಚ್ಚು ನೂರಾಗುತ್ತಿದ್ದಂತೆ ಲಕ್ಷಗಳು ಬಂದರೂ ಸರಿಯೇ ಅದರಲ್ಲಿ ಏನು ಮಾಡಬಹುದು ಎಂದು ಯೋಚಿಸುತ್ತದೆ ಎಲ್ಲದಕ್ಕೂ ರಾಜಿಯಾಗುವ ಮನಸ್ಸು. ನೂರು ಕಿಲೋಮೀಟರ್ ಪ್ರಯಾಣದುದ್ದಕ್ಕೂ ಏನು ಬೇಕು ಏನು ಬೇಡ, ಅವುಗಳನ್ನು ಪಡೆದಾಗ ಆಗುವ ಸಂತಸ ಹೀಗೆ ಇಂತವೇ ಪುಳಕಗಳು. ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಬಾಗೇಪಲ್ಲಿಯಲ್ಲಿ ಇಳಿದು ತಲೆಗೆ ಇಪ್ಪತ್ತು ರೂಪಾಯಿ ಎಂದು ಕೂಗುತ್ತಿದ್ದ, ಅದಾಗಲೇ ಹತ್ತು ಜನ ಕೂತಿದ್ದ ಆಟೊ ಒಂದರಲ್ಲಿ ನಾನೂ ಪ್ರಯಾಸದಿಂದ ತೂರಿಕೊಂಡೆ. ನನ್ನ ಅದೃಷ್ಟ ದೇವತೆ ಡಬಲ್ ಎಂಜಿನ್ ಹಾವಿದ್ದ ಹಳ್ಳಿಗೆ ಕಾಲಿರಿಸಿದೆ. 

ಇದಕ್ಕೆ ಮುಂಚೆ ಒಂದೆರಡು ಸಲ ಆ ಊರಿಗೆ ಬಂದಿದ್ದರೂ ನನಗೆ ಆ ಹಳ್ಳಿಯ ಅವ್ಯವಸ್ಥೆಗಳೇ ಕಣ್ಣಿಗೆ ರಾಚುತ್ತಿದ್ದವು. ಇಲ್ಲಿ ಹೇಗಪ್ಪ ಸಮಯ ಕಳೆಯೋದು ಎಂಬ ಚಿಂತೆಯಲ್ಲಿಯೇ ಆ ಹಳ್ಳಿಗೆ ಬಂದಮೇಲೆ ಹೋಗುವ ತನಕವೂ ಚಡಪಡಿಸುತ್ತಿದ್ದೆ. ಈ ದಿನ ಆ ಊರು ನನ್ನ ಪಾಲಿಗೆ ಅದೃಷ್ಟದ ಬಾಗಿಲು ತೆರೆಯುವ ಭಾಗ್ಯನಗರಿಯಂತೆ ಭಾಸವಾಯಿತು. ಸೀದಾ ಹಾವಿದ್ದ ಸ್ಥಳಕ್ಕೆ ಹೋಗಬೇಕೆನಿಸಿದರೂ ಹಾಗೇ ಹೋಗುವುದರಿಂದ ಈ ಹಳ್ಳಿಗರ ಮನಸ್ಸಿನಲ್ಲಿ ಅನುಮಾನ ಮೂಡುವುದಕ್ಕೆ ನಾನೇ ಕಾರಣನಾಗುತ್ತೇನೆ ಎಂಬ ಆತಂಕದಿಂದ ನೇರ ಭಾವನ ಮನೆಗೆ ಹೋದೆ. ಗಂಗಿರೆಡ್ಡಿ ಅಲ್ಲಿಯೇ ಇದ್ದ. ಅಲ್ಲಿ ಅವನು ಅದೆಷ್ಟು ನೆಮ್ಮದಿಯಿಂದ ಹರಟೆ ಹೊಡೆಯುತ್ತಿದ್ದಾನೆಂದರೆ... ಅದನ್ನು ಕಂಡು ನನ್ನ ತಲೆಕೆಡಲು ಶುರುವಾಯಿತು. ‘ಈ ಮಂಕುದಿಣ್ಣೆಗೆ ಏನಂದ್ರೆ ಏನೂ ಯೋಚನೆ ಇಲ್ವಲ್ಲ... ನಿಧೀನ ಕಾಯೋದು ಬಿಟ್ಟು ಇಲ್ಲಿ ಹೀಗೆ ಕೂತಿದಾನಲ್ಲ’ ಎಂದು ಅನಿಸಿತು. 

ಮನೆಯವರನ್ನು ಮಾತಾಡಿಸಿ, ಕಾಫಿ ಕುಡಿದು ಗಂಗಿರೆಡ್ಡಿಗೆ ಸನ್ನೆ ಮಾಡಿ, ಅವನು ಹೊರಡುತ್ತಿದ್ದಂತೆ ನಾನು ಮನೆಯವರಿಗೆ, ‘‘ಗಂಗಿರೆಡ್ಡಿ ಜೊತೆ ನಾನೂ ಹಾಗೇ ಅಡ್ಡಾಡಿಕೊಂಡು ಬರ್ತೀನಿ’’ ಎಂದು ಹೇಳಿ ಅಲ್ಲಿಂದ ಹೊರಬಿದ್ದೆ. ದಾರಿಯುದ್ದಕ್ಕೂ ಹಾವಿನ ಬಗ್ಗೆ ಅವನಲ್ಲಿ ವಿಚಾರಿಸುತ್ತಿದ್ದೆ. ‘‘ನೀನು ಹೊಲದಲ್ಲಿರೋದು ಬಿಟ್ಟು ಇಲ್ಯಾಕೆ ಬಂದೆ? ಮನೇಗೆ ಹೋಗಿ ನಾನೇ ಬರತಿದ್ದೆ’’ ಎಂದು ಅಸಮಾಧಾನವನ್ನು ಸಣ್ಣಗೆ ಹೊರಹಾಕಿದೆ. ಗಂಗಿರೆಡ್ಡಿ, ‘‘ನೀವೇನು ಯೋಚನೆ ಮಾಡಬೇಡಿ, ಪಕಡ್‌ಬಂದಿಯಾಗಿ ಇಟ್ಟಿದೀನಿ. ಯಾರಿಗೂ ಅನುಮಾನ ಬರದ ಹಾಗೆ’’ ಎಂದು ಧೈರ್ಯ ಹೇಳಿದ. 

ಅದುವರೆಗೂ ಎರಡು ತಲೆ ಹಾವನ್ನು ಅದರ ಅಕ್ರಮ ಮಾರಾಟಗಾರರೊಂದಿಗೆ ಪತ್ರಿಕೆಗಳಲ್ಲಿ ಅಚ್ಚಾಗಿರುವ ಫೋಟೊಗಳಲ್ಲಿ ಕಂಡಿದ್ದೆ. ಅದು ನೋಡಲು ಹೇಗಿರಬಹುದು? ಆ ಹಾವಿನ ಸ್ವಭಾವ ಹೇಗೆ? ಶೇಷು ಹೇಳಿದ ಹಾಗೆ ಕೇವಲ ಮಣ್ಣನ್ನೇ ತಿಂದು ಅದು ಬೆಳೆಯುವುದು ನಿಜವೇ? ಹೀಗೆ ನನ್ನ ಮನಸ್ಸಿನ ತುಂಬಾ ಆ ಹಾವೇ ತುಂಬಿಕೊಂಡಿತ್ತು. ದೂರದಲ್ಲಿ ಕುರುಚಲು ಪೊದೆಗಳ ನಡುವೆ ಇದ್ದ ಮರವೊಂದನ್ನು ತೋರಿಸಿದ ಗಂಗಿರೆಡ್ಡಿ, ‘‘ನೋಡಿ ಭಾವ, ಹಾವನ್ನ ಆ ಮರದ ಬುಡದಲ್ಲಿ ಬಚ್ಚಿಟ್ಟಿದೀನಿ...’’ ಎಂದು ಒಂದು ದಿಕ್ಕಿನ ಕಡೆಗೆ ಬೆರಳು ತೋರಿಸಿದ. ಒಂದು ಕ್ಷಣ ಮೈ ಜುಮ್ ಎಂದಿತು. ಮೂರ್ನಾಲ್ಕು ದಿನದ ಹಿಂದಿನವರೆಗೂ ಯಾವ ನಿರೀಕ್ಷೆಯೂ ಇಲ್ಲದ ಆದಾಯ ಈಗ ನನ್ನದಾಗಲಿದೆ. ಅದನ್ನ ತಂದು ಕೊಡುವ ಭಾಗ್ಯನಿಧಿ ಆ ಮರದ ಬುಡದಲ್ಲಿದೆ. ಮರದತ್ತ ಒಂದೊಂದೇ ಹೆಜ್ಜೆ ಹಾಕುತ್ತ ಹಾಕುತ್ತ ಒಂದು ರೀತಿಯ ಥ್ರಿಲ್ ಅನುಭವಿಸಿದೆ. ಮರದ ಬಳಿ ಕರೆದೊಯ್ದ ಗಂಗಿರೆಡ್ಡಿ ಮರದ ಬುಡಕ್ಕೆ ಹೋಗಿ ಚೀಲ ಹಿಡಿದೆತ್ತಿದವನು ಗರಬಡಿದವನಂತೆ ಹಗುರವಾದ ಚೀಲ ಒದರುತ್ತ, ‘‘ಅಯ್ಯೋ ದೇವ್ರೇ... ಇದ್ರಲ್ಲೇ ಹಾವಿಟ್ಟಿದ್ದೆ... ಈಗ ಹಾವಿಲ್ಲ’’ ಎಂದ. ಆ ಚೀಲವನ್ನು ಅವನಿಂದ ತಕ್ಷಣ ಕಸಿದುಕೊಂಡು ನಾನೂ ಒಮ್ಮೆ ಅದನ್ನು ಒದರಿದೆ. ಹಾವಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ನನ್ನ ಉತ್ಸಾಹವೆಲ್ಲ ಒಮ್ಮೆಗೇ ಆವಿಯಾದಂತಾಗಿ ನಿಲ್ಲಲೂ ಶಕ್ತಿಯಿಲ್ಲದವನಂತೆ ಅಲ್ಲೇ ಕುಸಿದು ಕೂತೆ. ಗಂಗಿರೆಡ್ಡಿ ಹಾವಿಲ್ಲದ ಚೀಲವನ್ನು ವಿವಿಧ ಬಗೆಯಲ್ಲಿ ಕೊಡವುತ್ತಲೇ ಇದ್ದ. ‘‘ಬೆಳಿಗ್ಗೆ ತಾನೇ ನೋಡ್ಕೊಂಡು ಹೋಗಿದ್ದೆ, ಈಗೆಲ್ಲಿ ಹೋಯ್ತು?’’ ಎನ್ನುತ್ತ ಅವನು ಸುತ್ತಲಿನ ಪೊದೆಗಳನ್ನು ಸರಿಸಿ ಹುಡುಕುತ್ತಿದ್ದ. ಕಟ್ಟಿದ ಆಸೆಯ ಗೋಪುರ ನೆಲಕ್ಕುರುಳಿತ್ತು. ದುಡ್ಡು ಬಂದೊಡನೆ ತೀರಿಸಬೇಕೆಂದಿದ್ದ ಒಂದೊಂದೇ ಬೇಡಿಕೆಗಳು ಒಂದೊಂದು ಆಕಾರ ಪಡೆದು ಕೇಕೆ ಹಾಕಿ ನಗುತ್ತ ಮತ್ತಷ್ಟು ಬೃಹದಾಕಾರವಾಗಿ ಬೆಳೆಯುತ್ತ, ನನ್ನನ್ನು ಅಣಕಿಸಿದಂತಾಯ್ತು.

***
ಇದೆಲ್ಲ ಆಗಿ ಇಪ್ಪತ್ತು ದಿನಗಳು ಕಳೆದಿದ್ದವು. ಹಾವಿನ ಬೆನ್ನುಹತ್ತಿ ಎಲ್ಲ ಕೆಲಸಗಳು ಹಿಂದುಮುಂದಾಗಿದ್ದವು. ತಿಂಗಳಿಗೆ ಒಂದು ವಾರ ಮಾತ್ರ ಕೆಲಸವಿರುವ ಒಂದು ಟೀವಿ ಧಾರಾವಾಹಿಗೆ ಚಿತ್ರಕತೆ ಬರೆಯುವುದರಲ್ಲಿ ನಿರತನಾಗಿದ್ದೆ. ಮೊಬೈಲ್ ರಿಂಗಾಯಿತು. ಮೊಬೈಲ್ ಡಿಸ್‌ಪ್ಲೇ ಮೇಲೆ ಶೇಷಾಚಲಂರಾಜು ಎಂಬ ಹೆಸರು ಕಣ್ಣಿಗೆ ರಾಚುತ್ತಿದ್ದ ಹಾಗೆ ಕೊಂಚ ಕಸಿವಿಸಿಯಾದರೂ ಕಾಲ್ ರಿಸೀವ್ ಮಾಡಿದೆ. ಆ ಬದಿಯಿಂದ ಶೇಷು, ‘‘ಸಾರ್, ಹೇಗಿದ್ದೀರಿ? ಏನೋ ಆಗಿದ್ದು ಆಗೋಯ್ತು. ‘ರೈಸ್‌ಪುಲ್ಲರ್’ ಹೆಸರು ಕೇಳಿದೀರ? ಸಿಡಿಲು ಬಡಿದಿರೋ ದೇವಸ್ಥಾನದ ಕಳಸ, ಅಥವಾ ಸಿಡಿಲು ಬಡಿದಿರೋ ಕಲ್ಲು... ನೂರುಕೋಟಿ ಡೀಲ್ ಸಾರ್...’’ ಎಂದೊಡನೆ ನಖಶಿಖಾಂತ ಉರಿದುಹೋಗಿ, ‘‘ಒಳ್ಳೇ ಮಾತಲ್ಲಿ ಫೋನ್ ಇಟ್ರೆ ಒಳ್ಳೇದು ಶೇಷು... ಪ್ಲೀಸ್...’’ ಎಂದು ಕಿರುಚಿದೆ. ಮರುಕ್ಷಣವೇ... ಅತ್ತ ಲೈನ್ ಡಿಸ್‌ಕನೆಕ್ಟ್ ಮಾಡಿದ ಬೀಪ್ ಸೌಂಡ್ ಕೇಳಿಸತೊಡಗಿತು...

***
ಗಜೇಂದ್ರ ಗುಂಜೂರ್
ಲೇಖಕರು ಬೆಂಗಳೂರಿನ ಹೊರವಲಯದ ಗುಂಜೂರಿನವರು. ಸಿನಿಮಾ ಹಾಗೂ ಧಾರಾವಾಹಿಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದು ವೃತ್ತಿ ಮತ್ತು ಪ್ರವೃತ್ತಿ. ಪ್ರಬಂಧ, ಕತೆಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ‘ಅನು’, ‘ಮಡಿವಾಳ ಮಾಚಿದೇವ’ ಸಿನಿಮಾಗಳಿಗೆ ಸಂಭಾಷಣೆ, ಗೀತೆಗಳನ್ನು ಬರೆದಿದ್ದಾರೆ.

ಮಯೂರ: ಜುಲೈ 2018

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !