ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯ ತೊಟ್ಟಿಲಲ್ಲಿ ಪ್ರಕೃತಿಪ್ರೇಮ

ಪರಿಸರ ಕಾಳಜಿ
Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಪರಿಸರದ ಬಗ್ಗೆ ಕಾಳಜಿ, ಪರಿಸರಪ್ರೇಮ – ಆಧುನಿಕ ಕಾಲದ ಸಂವೇದನಗಳು ಎಂದೆನಿಸಿವೆ. ಆದರೆ ಸಾವಿರಾರು ವರ್ಷಗಳ ಮೊದಲೇ ಭಾರತೀಯ ಸಂಸ್ಕೃತಿಯಲ್ಲಿ ಪರಿಸರಪ್ರೇಮವೂ ಕಾಳಜಿಯೂ ಗಾಢವಾಗಿತ್ತು ಎನ್ನುವುದು ಎದ್ದುಕಾಣುತ್ತದೆ. ಇಲ್ಲಿಯ ಜನಜೀವನದ ಭಾಗವಾಗಿಯೇ ಪರಿಸರಪ್ರಜ್ಞೆ ಎಚ್ಚರವಾಗಿತ್ತು. ಈಗಿನಂತೆ ಆಗ ಕಾಡಿನ ನಾಶ, ಪರಿಸರಮಾಲಿನ್ಯ ಮುಂತಾದ ಸಮಸ್ಯೆಗಳು ಉದ್ಭವವಾಗಿರಲಿಲ್ಲ. ಆದರೆ ಪ್ರಕೃತಿಯ ಮೇಲಿದ್ದ ಗೌರವ–ಪ್ರೀತಿಗಳು ಆ ಕಾಲದ ಸಹಜಧರ್ಮವಾಗಿತ್ತು. ಪ್ರಕೃತಿ ಇರುವುದು ಮನುಷ್ಯನ ಆಸೆಗಳನ್ನು ಪೂರೈಸಲು ಮಾತ್ರವೇ ಎಂಬಂಧ ಸ್ವಾರ್ಥಬುದ್ಧಿ ಆಗ ಇರಲಿಲ್ಲ; ‘ಮನುಷ್ಯ ಕೂಡ ಈ ಸೃಷ್ಟಿಯ ಒಂದು ಭಾಗವೇ ಹೊರತು ಅವನೇ ಇದರ ಅಧಿಪತಿಯಲ್ಲ’ ಎನ್ನುವುದು ಆ ಯುಗದ ಆದರ್ಶವಾಗಿತ್ತು.

ಪ್ರಾಚೀನ ಭಾರತೀಯರ ಪ್ರಕೃತಿಪ್ರೇಮವನ್ನು ವೇದಗಳು, ಮಹಾಕಾವ್ಯಗಳು, ಶಾಸ್ತ್ರಗ್ರಂಥಗಳು, ಪುರಾಣಗಳು ನಿರೂಪಿಸಿವೆ. ಹಲವರು ವಿದ್ವಾಂಸರು ಈ ಬಗ್ಗೆ ಗ್ರಂಥಗಳ ಮೂಲಕ, ಲೇಖನ–ಪ್ರಬಂಧಗಳ ಮೂಲಕ ಈ ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ನಮ್ಮ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾದ ಸಾ.ಕೃ. ರಾಮಚಂದ್ರರಾವ್‌ ಅವರು ‘ವೇದವಾಙ್ಮಯದಲ್ಲಿ ಪರಿಸರ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಅಲ್ಲಿಯ ಕೆಲವೊಂದು ಮಾತುಗಳನ್ನು ಇಲ್ಲಿ ಮೆಲುಕು ಹಾಕಿದರೆ ಭಾರತೀಯರ ಪರಿಸರಪ್ರಜ್ಞೆಯ ಸಣ್ಣ ಪರಿಚಯವಾದರೂ ಸಿಗಬಹುದು ಎನಿಸುತ್ತದೆ:

‘ನಮ್ಮ ಸಂಸ್ಕೃತಿಯ ಮೂಲಸ್ತರದಲ್ಲೇ ಪರಿಸರಪ್ರಜ್ಞೆಯ ಅಗತ್ಯವನ್ನು ಒಪ್ಪಿಕೊಂಡಿದ್ದಿದೆ. ಸುತ್ತಮುತ್ತಣ ಎಲ್ಲ ವಿವರಗಳನ್ನು ಮನುಷ್ಯರ ಬದುಕು ಅವಲಂಬಿಸಿರುವುದು ಮಾತ್ರವಲ್ಲ, ಒಳಗೊಂಡಿದೆಯೆಂಬ ಅರಿವು ಆರಂಭ ಕಾಲದಿಂದಲೂ ಇದ್ದಂತೆ ತೋರುತ್ತದೆ. ವೈದಿಕ ಸಾಹಿತ್ಯದಲ್ಲೇ ಇದನ್ನು ಕಾಣುತ್ತೇವೆ; ಜಾನಪದ ನೆಲೆಯಿಂದ ಎದ್ದುನಿಂತ ತಂತ್ರವಾಙ್ಮಯದಲ್ಲೂ ಇದು ಹಾಸುಹೊಕ್ಕಾಗಿದೆ. ಇನ್ನು ಸಂಸ್ಕೃತ–ಪ್ರಾಕೃತ ಕಾವ್ಯನಾಟಕಗಳಲ್ಲಿಯೂ, ದೇಶಭಾಷಾ ಕಾವ್ಯನಾಟಕಗಳಲ್ಲಿಯೂ ಈ ಮನೋಧರ್ಮ ಎದ್ದುಕಾಣುತ್ತದೆ... ಪರಿಸರವನ್ನು ಅಸಡ್ಡೆಯಿಂದ ಕಾಣುವುದಾಗಲಿ, ಪರಿಸರದೊಂದಿಗೆ ಹೋರಾಟದಲ್ಲಿ ತೊಡಗುವುದಾಗಲಿ, ಪರಿಸರದ ಮೇಲೆ ಮನುಷ್ಯ ತನ್ನ ಒಡೆತನವನ್ನು ಸ್ಥಾಪಿಸಿಕೊಳ್ಳಬೇಕೆಂಬ ಬಯಕೆಯಾಗಲಿ ನಮ್ಮ ಸಂಸ್ಕೃತಿಗೆ ಸಹಜವಾದುದಲ್ಲ. ಪರಿಸರದ ಹಂಗಿರದೆ ಮನುಷ್ಯ ಬಾಳಬಲ್ಲನೆಂದು ನಮ್ಮ ಸಂಸ್ಕೃತಿ ಎಂದಾದರೂ ನಂಬಿದ್ದಿತೆನ್ನಲು ಪುರಾವೆಯಿಲ್ಲ.

‘ಋತವೆಂಬ ಕಲ್ಪನೆ ವೈದಿಕ ಸಾಹಿತ್ಯದಲ್ಲಿ ತುಂಬ ಮುಖ್ಯವಾದುದು. ದೇವತೆಗಳೆಲ್ಲ ಋತದ ಮಕ್ಕಳೇ; ಋತವನ್ನು ಎತ್ತಿಹಿಡಿಯುವುದೇ ಅವರ ಕೆಲಸ. ಋತದ ಕಲ್ಪನೆ ಮೈದಳೆದದ್ದು ವಿಶ್ವವ್ಯವಸ್ಥೆಯನ್ನು ಕುರಿತು ಆಲೋಚನೆ ಮಾಡಿದಾಗ. ಋತ ಎನ್ನುವ ಮಾತಿಗೆ ಸರಿಯಾದುದು, ನೇರವಾದುದು, ಯೋಗ್ಯವಾದುದು, ಪೂಜ್ಯವಾದುದು ಎಂಬರ್ಥಗಳಿವೆ... ನದಿಗಳು ಬೆಟ್ಟದಲ್ಲಿ ಹುಟ್ಟಿ, ಎಲ್ಲೂ ನಿಲ್ಲದೆ, ಹಿಸಿದ ದಾರಿ ಬದಲಿಸಿದೆ, ಸಮುದ್ರದ ಕಡೆ ಹರಿಯವುದು ಋತ. ಮಳೆನೀರು ಮೇಲಿಂದ ಕೆಳಗೆ ಬೀಳುವುದು, ಗಿಡ ಮರಗಳು ಕೆಳಗಿನಿಂದ ಮುಗಿಲ ಕಡೆ ಬೆಳೆಯುವುದು; ಹಗಲು ಇರುಳುಗಳು ಒಂದಾದ ಮೇಲೊಂದು ಕ್ರಮ ತಪ್ಪಿಸದೆ ಬಂದೊದಗುವುದು; ಸೂರ್ಯನು ಪೂರ್ವದಲ್ಲಿ ಕಾಣಿಸಿಕೊಂಡು ಪಶ್ಚಿಮದಲ್ಲಿ ಮರೆಯಾಗುವುದು: ಆಯಾ ಕಾಲದಲ್ಲಿ ಮಂಜು, ಬಿಸಿಲು, ಮಳೆ, ಗಾಳಿಗಳು ಕೆಲಸ ಮಾಡುವುದು; ಗಿಡ ಬೆಳೆಯುವಾಗ ಅನುಸರಿಸುವ ಕ್ರಮ; ಬೀಜಕ್ಕೆ ಅನುರೂಪವಾಗಿಯೇ ವೃಕ್ಷ ಇರುವುದು; ಪ್ರಾಣಿಗಳ ಬದುಕಿನಲ್ಲಿ ಕಾಣುವ ವ್ಯವಸ್ಥೆ; ಮೃಗ, ಪಕ್ಷಿ, ವೃಕ್ಷ, ನೆಲ, ಮುಗಿಲು ಇವುಗಳಲ್ಲಿರುವ ಅನ್ಯೋನ್ಯಾಶ್ರಯ; ಗಾಳಿಗಾಗಲಿ, ನೀರಿಗಾಗಲಿ ಇರುವ ಸ್ವಭಾವ – ಇವೆಲ್ಲ ಋತದ ನಿದರ್ಶನಗಳೇ.

‘ವಿಶ್ವದಲ್ಲೆಲ್ಲ ವ್ಯಾಪಕವಾಗಿರುವ ಈ ಋತವನ್ನು ‘ಋತಂ ಬೃಹತ್‌’ ಎಂದು ನಿರ್ದೇಶಿಸಿದ್ದಾರೆ. ಇದರಲ್ಲೇ ಇಡೀ ವಿಶ್ವವು ಹಕ್ಕಿಗಳು ಗೋಡಿನಲ್ಲಿ ಸೇರಿಕೊಂಡಂತೆ ಸೇರಿಕೊಳ್ಳುತ್ತದೆ (‘ಯತ್ರ ವಿಶ್ವಂ ಭವತ್ಯೇಕನೀಡಂ’)... ಅಂತೂ ವೈದಿಕ ವಾಙ್ಮಯದಲ್ಲಿ ಋತವೆಂದರೆ ನಮ್ಮ ಈಗಿನ ಕಲ್ಪನೆಯ ಪರಿಸರವೇ. ಅದರ ಪ್ರಜ್ಞೆ ಇರುವುದು ಸತ್ಯ; ಈ ಪ್ರಜ್ಞೆಯಿಂದ ಪರಿಸರದ ರಕ್ಷಣೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಧರ್ಮ. ಋಷಿಯೊಬ್ಬ ಕಳಕಳಿಯಿಂದ ಹೇಳುತ್ತಾನೆ: ‘ ನದಿಗಳು ತಮಗೆ ಇಷ್ಟ ಬಂದಂತೆ ಹರಿಯಲು ಬಿಡಿ, ಗಾಳಿಯನ್ನು ಕೆಡಿಸಬೇಡಿ, ತಿಳಿಯಾಗಿ ಬೀಸಲು ಬಿಡಿ, ಹಕ್ಕಿಗಳು ಹೇಗೆ ಬೇಕೋ ಹಾಗೆ ಎಲ್ಲಿ ಬೇಕೋ ಅಲ್ಲಿ ಹಾರಲು ಬಿಡಿ’.

(ಕೃಪೆ: ‘ಪರಿಸರ: ಮುಂದೇನು?’)

**

ಭೂತಾಯಿಯನ್ನು ನೋಯಿಸಬೇಡಿ

ಮನೆಯನ್ನು ಕಟ್ಟಲೋ, ಬೇಸಾಯವನ್ನು ಮಾಡಲೋ, ಯಾವುದಾದರೂ ಕಾರಣಕ್ಕೆ ಭೂಮಿಯನ್ನು ಅಗೆಯಬೇಕಾದಾಗ, ಅಗೆದ ಭೂಮಿಯ ಭಾಗ ಬೇಗನೆ ಕೂಡಿಕೊಳ್ಳಲಿ ಎಂಬ ಒಳ್ಳೆಯ ಭಾವನೆ ಇರಬೇಕೆಂದು ವೈದಿಕ ಋಷಿ ಹೇಳುತ್ತಾನೆ. ಅಗೆಯುವಾಗ ಭೂಮಿಯ ಮರ್ಮಸ್ಥಾನಗಳನ್ನು ಗಾಸಿ ಮಾಡಬಾರದಂತೆ, ಭುಮಿಯ ಒಡಲಿಗೆ ಗಾಯ ಮಾಡಬಾರದಂತೆ. ಏಕೆಂದರೆ ನಮ್ಮ ಏಳಿಗೆಗೆ ಕಾರಣವಾಗುವುದೇ ಈ ಭೂಮಿತಾಯಿ.

ತನ್ನ ಕೆಲಸಕ್ಕೆಂದು ಮರವನ್ನು ಕಡಿಯಬೇಕಾದಾಗ ತನಗೆ ಅಗತ್ಯವಿದ್ದಷ್ಟೇ ಭಾಗವನ್ನು ಕಡಿದುಕೊಳ್ಳಬೇಕೆಂದೂ, ಮರ ಮತ್ತೆ ಬೆಳೆಯಲು ಅನುಕೂಲವಾಗಿಯೆ ಉಳಿಸಿಕೊಳ್ಳಬೇಕೆಂದೂ ಶಾಸ್ತ್ರವಿದೆ. ಕಡಿಯುವ ಮುನ್ನ ಮರಕ್ಕೆ ಪ್ರಾರ್ಥನೆಯನ್ನು ಸಲ್ಲಿಸಿ, ಅದರ ಕ್ಷಮೆಯನ್ನು ಕೋರಬೇಕೆಂದು ಬೃಹತ್ಸಂಹಿತೆ ವಿಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT