ಹೂವ ಕೊಯ್ಯೋಣ ಬನ್ನಿ

ಭಾನುವಾರ, ಮೇ 26, 2019
30 °C

ಹೂವ ಕೊಯ್ಯೋಣ ಬನ್ನಿ

Published:
Updated:
Prajavani

‘‘ಬೆಳಗಾಗ ನಾನೆದ್ದು ಎಲ್ಲೆಲ್ಲಿ ಕೊಯ್ಯಾಲಿ, ಯಾರ‍್ಯಾರ ಮನೆಯಾ ಹೂಗಾಳಾ . . . ’’ 

 ಇದ್ಯಾವ ಜನಪದ ಗೀತೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಬೆಳಬೆಳಿಗ್ಗೆ ಬೇಗ ಎದ್ದು ಅವರಿವರ ಮನೆಯ ಕೈತೋಟದ ಹೂಗಳನ್ನು ಕೊಯ್ಯುವ ಕಾಯಕದಲ್ಲಿ ತೊಡಗುವವರನ್ನು ನೋಡಿ ನಾನು ಕಟ್ಟಿದ ಹಾಡಿದು.  ಹಾಗೆಲ್ಲಾ ಬೇರೆಯವರ ಗಿಡದ ಹೂಗಳನ್ನು ಯಾರು ಕೊಯ್ತಾರಪ್ಪಾ ಎಂದು ಕೇಳಬಹುದು ನೀವು.  ನಮ್ಮ ಮನೆಯ ಗಿಡಗಳ ಹೂಗಳಿಗೂ ಈ ಕಾಯಕ ಜೀವಿಗಳ ಕೈ ಚಾಚಿರುವುದರಿಂದಲೇ ನಾನಿಷ್ಟು ಅಧಿಕೃತವಾಗಿ ಹೇಳುತ್ತಿರುವುದು. ಒಬ್ಬರಲ್ಲಾ, ಇಬ್ಬರಲ್ಲಾ, ನಾಲ್ಕಾರು ಮಂದಿ ಹೂ ಕೊಯ್ಯಲು ಬರುವುದರಿಂದ, ನಾನೀಗ ಬೇಗ ಎದ್ದು ಕೆಲ ಹೂಗಳನ್ನಾದರೂ ಕೊಯ್ದಿಡಬೇಕು.  ಇಲ್ಲದಿದ್ದರೆ ನಮ್ಮ ಮನೆಯ ದೇವರುಗಳಿಗೆ ಒಂದಷ್ಟು ಹೂ ಕಡಿಮೆಯಾಗಿಬಿಡುತ್ತದೆ. ನನಗೆ ಹೂಗಳನ್ನು ದೇವರ ತಲೆಯ ಮೇಲಿರಿಸುವ ಅಭ್ಯಾಸವಿಲ್ಲ. ಅದರೆ ಮನೆಯಾಕೆಗಾಗಿ ಈ ಕೆಲಸ ಮಾಡಲೇಬೇಕು. ‘ಪತ್ನಿಯ ಮಾತನ್ನು ಮೀರುವುದು ಘೋರ ಅಪರಾಧ’ ಎಂದು ಅದ್ಯಾವುದೋ ಪುರಾಣದಲ್ಲಿ ಬರೆದಿದ್ದಾರಂತಲ್ಲ!  ಬೆಳಿಗ್ಗೆ ಅವರಿಗೆ ನೂರೆಂಟು ಕೆಲಸ ಕಾರ್ಯಗಳಿರುತ್ತವೆ.  ರಿಟೈರ್ ಆಗಿರೋ ಹಳೆಯ ಟೈರ್ ನಾನು.  ಈಗಾಗಲೇ ಸವಕಲಾಗಿದ್ದರೂ ಇನ್ನೂ ಉಳಿದಿರುವ ಬದುಕನ್ನು ಸವೆಸಬೇಕಿರೋದ್ರಿಂದ ಈ ವಿನಮ್ರತೆಯ ಮುನ್ನೆಚ್ಚರಿಕೆ.  

ನಮ್ಮ ಮನೆಯ ಮುಂದಿನ ರಸ್ತೆಯಂಚಿನಲ್ಲಿ, ಕನ್ನಡದಲ್ಲಿ ‘ಫುಟ್‌ಪಾತ್’ ಅಂತಾರಲ್ಲ ಅಲ್ಲಿ, ಪಾರಿಜಾತದ ಗಿಡವೊಂದನ್ನು ಹಾಕಿದ್ದೇವೆ.  ನಮ್ಮದು ಊರಾಚೆಯ ಬಡಾವಣೆಯಾದ್ದರಿಂದ, ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರವಿರಲಿಲ್ಲ.  ಹಾಗಾಗಿ ಮನೆಯ ಮುಂದಿನ ಫುಟ್‌ಪಾತ್ ಮೇಲೆ ಆಯಾ ಮನೆಯವರಿಗೆ ಹಕ್ಕಿದೆ ಎಂದು ಎಲ್ಲರೂ ಫುಟ್‌ಪಾತ್ ಅತಿಕ್ರಮಿಸಿದವರೇ.  ಆದರೆ ಈಚೀಚೆಗೆ ಹತ್ತಾರು ಶಾಲೆಗಳ ಬಸ್ಸುಗಳು, ವ್ಯಾನುಗಳ ಓಡಾಟ ಶುರುವಾಗಿರುವುದರಿಂದ ನಮ್ಮ ಹಕ್ಕು ಮೊಟಕುಗೊಳ್ಳುತ್ತಿದೆ. ನಾವಾದರೂ ಒಂದೆರಡು ಗಿಡಗಳನ್ನು ಹಾಕಿದ್ದೇವೆ, ಯಾರಿಗೂ ತೊಂದರೆಯಾಗದಂತೆ. ಕೆಲವರಂತೂ ಎಂಟು ಹತ್ತು ಅಡಿಗಳಷ್ಟು, ಅವರ ಸೈಟಿನ ಉದ್ದಕ್ಕೂ, ಬೇಲಿಯನ್ನೇ ಹಾಕಿ ಕೈ ತೋಟ ಮಾಡಿರುವುದುಂಟು. ಇನ್ನು ಕೆಲವರು ತಮ್ಮ ಮನೆಗಳನ್ನು ರಸ್ತೆಯಿಂದ ಬಹಳ ಎತ್ತರಕ್ಕೆ ಕಟ್ಟಿಕೊಂಡು ಫುಟ್‌ಪಾತನ್ನೂ ದಾಟಿ ಅರ್ಧ ರಸ್ತೆಯವರೆಗೆ - ತಮ್ಮ ಕಾರು, ಬೈಕು, ಸ್ಕೂಟರುಗಳನ್ನು ಹತ್ತಿಸಲು - ಇಳಿಜಾರಿನ ಗಾರೆ ಹಾಕಿಕೊಂಡಿದ್ದಾರೆ. ಪಾಪ ಅವರುಗಳು ಈಚೆಗೆ ಲಕ್ಷಾಂತರ ರೂಪಾಯಿ ಕೊಟ್ಟು ನಿವೇಶನ ಕೊಂಡು, ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡವರು.  ತಮ್ಮ ದೊಡ್ದ ದೊಡ್ದ ನಿವೇಶನಗಳ ಒಂದೊಂದು ಅಡಿಯೂ ಅವರಿಗೆ ಅಮೂಲ್ಯ.  ಹಾಗಾಗಿ ಸಣ್ಣ ಸೈಟಿನವರಂತೆ ಅಕ್ಕ ಪಕ್ಕ ಹಿಂದೆ ಮುಂದೆ ಜಾಗ ಬಿಡದೆ ಅಕ್ಕಪಕ್ಕದ ಮನೆಗಳಿಗೇ ಪಿಲ್ಲರ್‌ಗಳನ್ನು ಅಂಟಿಸಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿದ್ದಾರೆ.  ಚರಂಡಿಯ ಮೇಲೆಯೇ ಕಾಂಪೌಂಡ್ ಹಾಕಿದ್ದಾರೆ.  ಫುಟ್‌ಪಾತ್ ಮತ್ತು ರಸ್ತೆಯ ಮೇಲೆ, ಸಣ್ಣ ಸೈಟಿನ ಬಡಪಾಯಿಗಳಿಗಿಂತ ಅವರಿಗೆ ಹೆಚ್ಚಿನ ಹಕ್ಕಿದೆಯಂತೆ.  ಕೆಲವು ಕಡೆಯಂತೂ ಎರಡೂ ಬದಿಯವರು ಈ ರೀತಿ ಮಾಡಿರುವುದರಿಂದ ರಸ್ತೆ ಉಳಿದಿರುವುದು ಕೇವಲ ಹತ್ತು ಹನ್ನೆರಡು ಅಡಿ ಮಾತ್ರ.  ದೊಡ್ಡ ವಾಹನಗಳು, ಅಥವಾ ಎದುರುಬದುರಾಗಿ ವಾಹನಗಳು ಬಂದಾಗ ಆ ಎರಡೂ ಬದಿಯ ಇಳಿಜಾರಿನ ಮೇಲೆ ಸ್ವಲ್ಪವಾದರೂ ಹೋಗಲೇಬೇಕಾಗುತ್ತದೆ.  ಆಗ ಅಲ್ಪ ಸ್ವಲ್ಪ ಗಾರೆ ಒಡೆದುಹೋಗುವುದುಂಟು.  ಈ ಓನರ್‌ಗಳು ಗೊಣಗುತ್ತಾರೆ, ಜಗಳಕ್ಕೇ ನಿಲ್ಲುತ್ತಾರೆ -  ‘‘ಹಾಳಾದವ್ನು ನಮ್ಮನೆ ಗಾರೆ ಒಡೆದುಹಾಕ್ದ’’ ಅಂತ!

 ಇರಲಿ, ವಿಷಯಾಂತರವಾಗೋದು ಬೇಡ, ಹೂವಿನ ವಿಷಯಕ್ಕೇ ಮತ್ತೆ ಬರೋಣ. 

 ‘‘ನೋಡಿ ಮುಂಚೇನೇ ಬಂದು ಎಲ್ಲಾ ಕಿತ್ಗಂಡು ಹೋಗಿದಾರೆ, ಒಂದೂ ಉಳಿಸಿಲ್ಲ’’ ಅಂತ ತಡವಾಗಿ ಬಂದ ‘‘ಹೂಕೊ’’ ಒಬ್ಬರು ನಮ್ಮ ಮುಂದೆಯೇ ಅಂದದ್ದುಂಟು!  ಆನಂತರ ಬೇಗ ಎದ್ದು ಬರುವುದರಲ್ಲಿ ಅವರವರಲ್ಲೇ ಪೈಪೋಟಿ ಶುರುವಾಯ್ತು.  ಇವತ್ತು ಒಬ್ಬರು ಮುಂಚೆ ಬಂದರೆ, ನಾಳೆ ಇನ್ನೊಬ್ಬರು.  ಹಾಗಾಗಿ ಅವರೆಲ್ಲರಿಗಿಂತ ಮುಂಚೆ ಎದ್ದು ಕೆಲವು ಹೂಗಳನ್ನು ನಮ್ಮ ಮನೆ ದೇವರುಗಳ ಸಲುವಾಗಿ ಕೊಯ್ದಿಟ್ಟಿಕೊಳ್ಳುವ ಅನಿವಾರ್ಯತೆ ನನಗೆ.  ನಾನು ಏಳಬೇಕಾದ ಸಮಯ ದಿನ ದಿನಕ್ಕೆ ಹಿಂದು ಹಿಂದಕ್ಕೆ ಹೋಗುತ್ತಿದೆ.  ಹೀಗೆಯೇ ಹಿಂದೆ ಹೋದರೆ ಒಂದಲ್ಲಾ ಒಂದು ದಿನ ನಡು ರಾತ್ರಿಯೇ ಏಳಬೇಕಾದ ಅಥವಾ ಹೂ ಕೊಯ್ದಿಟ್ಟೇ ಮಲಗಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ!  ಮುಂಚೆ ಏಳುವ ಸಲುವಾಗಿ ‘‘ಮಧುಕರ ವೃತ್ತಿ ಎನ್ನದು...’’ ಎನ್ನುವ ಅಲಾರಾಂ ಟೋನ್ ಇಟ್ಟುಕೊಂಡಿದ್ದೇನೆ ಮೊಬೈಲಿನಲ್ಲಿ. 

 ದಾಸರು ಹೇಳಿದ ಹಾಗೆ ಒಂದು ರೀತಿಯ ‘ಮಧುಕರ ವೃತ್ತಿ’ ಇದು.  ಜೇನುಹುಳುಗಳು ಮಕರಂದವನ್ನು ಹೀರಿ ಹೂವನ್ನು ಅಲ್ಲೇ ಬಿಟ್ಟು ಹೋದರೆ, ಈ ಪುಣ್ಯಾತ್ಮರು ಮಕರಂದದೊಡನೆ ಹೂವನ್ನೂ ಕೊಂಡೊಯ್ಯುವವರು.  ಬ್ಯಾಗು, ಪ್ಲಾಸ್ಟಿಕ್ ಕವರ್ ಇತ್ಯಾದಿ ಯಥಾನುಶಕ್ತಿ ಹೊಂದಿಸಿಕೊಂಡು ಬರುವ ಇವರುಗಳು ದಾರಿಯುದ್ದಕ್ಕೂ ಹತ್ತಾರು ಮನೆಗಳ ಗಿಡಗಳಿಂದ ಹೂಗಳನ್ನು ಒಟ್ಟು ಮಾಡುತ್ತಾರೆ.  ಸ್ವಲ್ಪ ಸಂಕೋಚ ಸ್ವಭಾವ ಇರುವವರು ಒಂದೊಂದು ದಿನ ಒಂದೊಂದು ಬೀದಿ ಗುರುತು ಮಾಡಿಕೊಂಡಿರುತ್ತಾರೆ.  ಯಾರಿಗೂ ಸತತವಾಗಿ ನೋವು ಕೊಡಬಾರದೆಂಬ ಒಳ್ಳೆಯ ಮನಸ್ಸು ಅವರದು.  ಅವರ ಒಳ್ಳೆಯತನ ನೋಡಿ ನಮ್ಮ ಮನೆಯ ಸರದಿ ಬಂದಾಗ ನಾವು ನಗುಮೊಗದಿಂದಲೇ ಹೂ ಕೊಯ್ದುಕೊಳ್ಳಲು ಅವಕಾಶ ಮಾಡಿಕೊಟ್ಟುಬಿಡಬೇಕು.   

 ನಾವು ಕಾಂಪೌಂಡಿನಲ್ಲಿ ನಿಂತು ನೋಡುತ್ತಿದ್ದರೂ ಅವರಿಗೇನೂ ಮುಜುಗರವಿಲ್ಲ.  ನೋಡಿದರೂ ನೋಡದವರಂತೆ ತಮ್ಮ ಕೆಲಸ ಮುಂದುವರೆಸುತ್ತಾರೆ.  ಒಮ್ಮೊಮ್ಮೆ ನಾನು ತಡವಾಗಿ ಎದ್ದು ಗೇಟಿನ ಬೀಗ ತೆಗೆಯುವಾಗ  ‘‘ನೀವು ಈಗ ತಾನೇ ಬೀಗ ತೆಗೆಯುತ್ತಿದ್ದೀರಿ, ಒಂದಷ್ಟು ಹೂವು ನೀವೂ ಕೊಯ್ದುಕೊಳ್ಳಿ’’  ಅನ್ನುವ ಉದಾರ ಭಾವವನ್ನು ಅವರಲ್ಲಿ ನಾನೆಂದೂ ಕಂಡಿಲ್ಲ.  ತಡವಾಗಿ ಎದ್ದ ದಿನ ಸ್ಯಾಂಪಲ್ಲಿಗೆ ಬೇಕಂದರೂ ಒಂದು ಹೂ ಕೂಡಾ ಉಳಿದಿರುವುದಿಲ್ಲ. 

ಕಾಂಪೌಂಡಿನ ಆಚೆ ಫುಟ್‌ಪಾತಲ್ಲಿ ಇರುವ ಗಿಡಗಳು, ಕಾಂಪೌಂಡಿನ ಒಳಗಿರುವ ಗಿಡಗಳು ಎಂಬ ಭೇದಭಾವ ಅವರಿಗಿಲ್ಲ.  ಕಾಂಪೌಂಡಿನ ಒಳಗಿರುವ ಗಿಡಗಳಿಂದಲೂ ಹೂ ಕೊಯ್ಯುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾರವರು.  ಸದ್ಯ, ಗೇಟಿನೊಳಗೆ ಬಂದು ಹೂ ಕಿತ್ತುಕೊಳ್ಳುವ ಮಟ್ಟಕ್ಕಿನ್ನೂ ಬಂದಿಲ್ಲ!  ಒಮ್ಮೊಮ್ಮೆ ಹೂ ಕೀಳುವ ಭರದಲ್ಲಿ ಗಿಡಗಳ ರೆಂಬೆ ಕೊಂಬೆಗಳನ್ನು ಮುರಿಯುವವರೂ ಇದ್ದಾರೆ.  ಪಾಪ ಅವರಿಗೆ ಇಲ್ಲಿನ ಕೆಲಸ ಮುಗಿಸಿ ಇನ್ನೂ ನಾಲ್ಕಾರು ಮನೆಗಳಲ್ಲಿ ಹೂ ಕೊಯ್ಯಬೇಕಾಗಿರುತ್ತದೆ. ‘‘ಕಾಂಪೌಂಡಿನ ಹೊರಗೆ ಚಾಚಿರುವ ಗಿಡಗಳ ರೆಂಬೆಗಳನ್ನು ಒಳಕ್ಕೆ ಎಳೆದು ಕಟ್ಟಿ’’  ಅಂತ ನಮ್ಮ ಮನೆಯಾಕೆಯ ಹುಕುಂ. ಧೈರ್ಯಮಾಡಿ ‘‘ಬೇಡ’’ ಅಂದೆ.  ಕಾರಣ ಇಷ್ಟೇ ಹೂ ಕೊಯ್ಯುವ ಭರದಲ್ಲಿ ಚರಂಡಿಯ ಅಂಚಿನಲ್ಲಿ ನಿಂತು ಕಾಂಪೌಂಡ್ ಒಳಗೆ ಕೈ ಚಾಚಲು ಹೋಗಿ ಚರಂಡಿಗೆ ಮಗುಚಿಕೊಂಡರೇನು ಗತಿ ಅಂತ ನನ್ನ ಭಯ.  ಹೂ ಕೊಯ್ಯಲು ಬರುವವರೆಲ್ಲರೂ ಪಾಪ, ಸೀನಿಯರ್ ಸಿಟಿಝನ್ನುಗಳೇ.  ‘‘ನಮ್ಮ ಮನೆಯ ನಾಲ್ಕು ಹೂಗಳು ಅವರ ಮನೆಯ ದೇವರನ್ನು ಅಲಂಕರಿಸಿದ ಪುಣ್ಯದ ಬದಲು ಅವರನ್ನು ಚರಂಡಿಗೆ ಕೆಡವಿದ ಪಾಪ ನಮ್ಮನ್ನು ಕಾಡುವುದು ಬೇಡ’’ ಅನ್ನುವ ನನ್ನ ಅಭಿಪ್ರಾಯವನ್ನು ಹೇಳಿದ ಮೇಲೆ ಮನೆಯಾಕೆಯೂ ಒಪ್ಪಿಕೊಂಡಳು. 

ಗಂಡ ಹೆಂಡತಿಯರಿಬ್ಬರೂ ಒಟ್ಟಿಗೆ ಬರುವ ಒಂದು ಟೀಮ್ ಇದೆ.  ಗಂಡನಿಗೆ ಸ್ವಲ್ಪ ದಾಕ್ಷಿಣ್ಯ, ಕೆಲವು ಹೂಗಳನ್ನು ಮಾತ್ರ ಕೊಯ್ದು, ನಮಗಷ್ಟು ಬಿಟ್ಟುಹೋಗುವ ಉದಾರತನ.  ಆದರೆ ಆತನ ಹೆಂಡತಿಯದು ‘ಜಿಪುಣತನ ಯಾಕೆ ಮಾಡ್ಬೇಕು, ಕಿತ್ಕಳಣ ಅಷ್ಟೂನೂ’ ಅನ್ನೋ ಧಾರಾಳತನ.  ಆಗ ಆತ ಮುಜುಗರದಿಂದ ಸ್ವಲ್ಪ ಮುಂದೆ ಹೋಗಿ ನಿಂತುಕೊಳ್ಳುತ್ತಾರೆ.  ಎಲ್ಲಾದರೂ ಎದುರು ಸಿಕ್ಕರೆ ತಲೆತಗ್ಗಿಸಿ ಸರಸರ ನಡೆದುಬಿಡುತ್ತಾರೆ.  ಆಗ ನನಗೆ ನಿಜಕ್ಕೂ ಪಾಪ ಅನ್ನಿಸಿಬಿಡುತ್ತದೆ.  

‘ಹೂ ಕಿತ್ತುಕೊಳ್ಳೋರಿಗೆಲ್ಲಾ ಒಂದೊಂದು ಚೊಂಬು ನೀರು ಹಾಕೋಕೆ ಹೇಳ್ಬೇಕು’’ ನಾನು ತಮಾಷೆ ಮಾಡುತ್ತೇನೆ.  ‘‘ಪಾಪ, ನಮ್ಮ ಗಿಡದ ಹೂಗಳನ್ನು ಅವರು ದೇವರಿಗೆ ತಾನೆ ಅರ್ಪಿಸೋದು.  ಆ ಪುಣ್ಯ ನಮಗೂ ಬರುತ್ತೆ,  ಹಾಗೆಲ್ಲಾ ಮಾತಾಡ್ಬಾರ್ದು’’  ತಮಾಷೆ ಮಾಡಿದ್ದನ್ನೂ ಸೀರಿಯಸ್ ಆಗಿ ತೆಗೆದುಕೊಂಡ ಹೆಂಡತಿಯ ಹಿತೋಪದೇಶ ನನಗೆ!  ಈಚೀಚೆಗೆ ನನಗೂ ಹಾಗೆಯೇ ಅನ್ನಿಸುತ್ತದೆ.  ಅವರುಗಳ ಮನೆಯಲ್ಲಿ ಗಿಡ ಹಾಕಲು ಜಾಗ ಇಲ್ಲದಿರಬಹುದು.  ಅಥವಾ ನಮ್ಮ ಮನೆಯಲ್ಲಿರುವ ಹೂ ಗಿಡಗಳು ಅವರಲ್ಲಿ ಇಲ್ಲದೆಯೇ ಇರಬಹುದು.  ಅಷ್ಟೊಂದು ತಾಳ್ಮೆಯಿಂದ ಅವರು ಮನೆ ಮನೆ ಸುತ್ತಿ ಹೂ ಕೀಳಬೇಕೆಂದೇನಿಲ್ಲವಲ್ಲ.  ಕೇವಲ ಟೈಂ ಪಾಸ್‌ಗಾಗಿ ಯಾರೂ ಈ ಕೆಲಸ ಮಾಡಲಾರರು.  ದೇವರ ಮೇಲಿನ ಭಕ್ತಿ, ಜತೆಗೆ ತಾವು ಸಂಪಾದಿಸುವ ಪುಣ್ಯದಲ್ಲಿ ಬೇರೊಬ್ಬರೂ ಪಾಲು ಪಡೆಯಲಿ ಎಂಬ ಉದಾತ್ತ ಗುಣ ಅವರದು ಎಂದೇಕೆ ನಾವು ಭಾವಿಸಬಾರದು?  

ಇಲ್ಲಿ ಬರೆದಿರುವುದಷ್ಟೂ ಸುಮ್ಮನೆ ತಮಾಷೆಗೆ.  ಅನ್ಯರ ಮನೆಯ ಹೂ ಕೊಯ್ಯುವವರು ಅನ್ಯತಾ ಭಾವಿಸದೆ ತಮ್ಮ ಕಾಯಕವನ್ನು ಮೊದಲಿನಂತೆಯೇ ಮುಂದುವರೆಸಬೇಕೆಂದು ವಿನಮ್ರನಾಗಿ ಕೇಳಿಕೊಳ್ಳುತ್ತೇನೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !