‘ಬೆಂಗಳೂರಿನ ಖ್ಯಾತಿಗೆ ಅಭಿವೃದ್ಧಿ ವೇಗ ಸಾಲದು’

7

‘ಬೆಂಗಳೂರಿನ ಖ್ಯಾತಿಗೆ ಅಭಿವೃದ್ಧಿ ವೇಗ ಸಾಲದು’

Published:
Updated:
Deccan Herald

ಗುರುಚರಣ್‌ ದಾಸ್‌ ಅವರು ವಾಗ್ಮಿ, ಚಿಂತಕ, ತತ್ವಶಾಸ್ತ್ರಜ್ಞ, ಅಂಕಣಕಾರ, ನಾಟಕಕಾರ, ಹಲವು ಪುಸ್ತಕಗಳ ಲೇಖಕರಾಗಿ ಹೆಸರಾದವರು. ಪಾಕಿಸ್ತಾನದಲ್ಲಿ ಹುಟ್ಟಿ, ದೇಶ ವಿಭಜನೆ ಬಳಿಕ ಭಾರತಕ್ಕೆ ವಲಸೆ ಬಂದವರು. ಓದಿದ್ದು ಶಿಮ್ಲಾ, ದೆಹಲಿ ಮತ್ತು ಅಮೆರಿಕದಲ್ಲಿ. ಈಗ ಅವರು ದೆಹಲಿ ನಿವಾಸಿ. ಟ್ರೈನಿಯಾಗಿ ಸೇರಿದ್ದ ರಿಚರ್ಡ್‌ಸನ್‌ ಹಿಂದುಸ್ತಾನ್‌ ಲಿಮಿಟೆಡ್‌ ಕಂಪನಿಯಲ್ಲೇ ಸಿಎಂಡಿ ಹುದ್ದೆಗೇರಿದ ಗುರುಚರಣ್‌ ದಾಸ್‌, 1985ರಿಂದ 1992ರವರೆಗೆ ಪ್ರಾಕ್ಟರ್‌ ಆ್ಯಂಡ್‌ ಗ್ಯಾಂಬಲ್‌ ಇಂಡಿಯಾ ಕಂಪನಿಯ ಉಪಾಧ್ಯಕ್ಷರಾಗಿ, ಆಮೇಲೆ ವ್ಯವಸ್ಥಾಪಕ ನಿರ್ದೇಶಕರೂ (ಜಾಗತಿಕ) ಆದರು.

ಮಹಾಭಾರತದ ಒಳನೋಟಗಳನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತಮ್ಮ ಕೃತಿಗಳ ಪಾತ್ರಗಳ ಮೂಲಕ ಚರ್ಚಿಸಿದ್ದಾರೆ. ಬದುಕಿನ ನಾಲ್ಕು ತತ್ವಗಳ ಪೈಕಿ ಅರ್ಥ (ಮೆಟೀರಿಯಲ್‌ ವೆಲ್‌ ಬೀಯಿಂಗ್‌), ಧರ್ಮ (‘ದ ಡಿಫಿಕಲ್ಟಿ ಆಫ್‌ ಬೀಯಿಂಗ್‌ ಗುಡ್‌’) ನಂತರ ಇದೀಗ ‘ಕಾಮ: ದ ರಿಡ್ಲ್‌ ಆಫ್‌ ಡಿಸೈರ್‌’ ಕಾಮದ ಬಗ್ಗೆ ಪುಸ್ತಕ ಬರೆದಿದ್ದಾರೆ. 

‘ಆಲ್ವೇಸ್‌ ಕೂಲ್‌ ಸಿಟಿ’ ಎಂದು ಬೆಂಗಳೂರಿನ ಬಗ್ಗೆ ಆಪ್ತವಾಗಿ ಮಾತನಾಡುವ ಅವರು ಈ ನಗರದ ಬಗ್ಗೆ ಜ್ಞಾನಪೂರ್ಣವಾಗಿ ಮಾತನಾಡುತ್ತಾರೆ.

* ಬೆಂಗಳೂರಿನ ಜೊತೆಗಿನ ನಿಮ್ಮ ನಂಟಿನ ಬಗ್ಗೆ ಹೇಳುವಿರಾ?
ಹೌದು. 1965ರಿಂದಲೂ ಇಲ್ಲಿಗೆ ಭೇಟಿ ಕೊಡುತ್ತಿದ್ದೇನೆ. ಹಾಗಾಗಿ ಹಳೆಯ ಬೆಂಗಳೂರು ಮತ್ತು ಆಧುನಿಕ ಬೆಂಗಳೂರು ನನಗೆ ಚಿರಪರಿಚಿತ. ‌ಪಿ ಆ್ಯಂಡ್‌ ಜಿಯಲ್ಲಿದ್ದಾಗ ಇಲ್ಲಿಗೆ ಆಗಾಗ ಬರುತ್ತಿದ್ದೆ. ಆಗಲೂ, ಈಗಲೂ ನಾನು ಬೆಂಗಳೂರಿಗೆ ಬಂದರೆ ಈ ‘ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌’ನಲ್ಲೇ ಉಳಿದುಕೊಳ್ಳೋದು. ಬೆಂಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ನಿಯಮಿತವಾಗಿ ಹಾಜರಾಗುತ್ತೇನೆ. ಪುಸ್ತಕಗಳ ಬಿಡುಗಡೆಗೂ ಬರುವುದಿದೆ. ಬಹುತೇಕ ಋತುಗಳಲ್ಲಿ ಈ ನಗರ ತಂಪಾಗಿರುತ್ತಿತ್ತು. ಆದರೆ ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವುದನ್ನು ಗಮನಿಸಿದೆ. ಇವತ್ತಿನ ವಾತಾವರಣ ಹಳೆಯ ಬೆಂಗಳೂರನ್ನು ನೆನಪಿಸುವಂತಿದೆ.

* ಬೆಂಗಳೂರು ಈಗ ಸಾಕಷ್ಟು ಬದಲಾಗಿದೆ...
ಹೌದು. ಇತ್ತೀಚಿನ ವರ್ಷಗಳಲ್ಲಿ ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ವಿಮಾನ ನಿಲ್ದಾಣದಿಂದ ವೆಸ್ಟ್‌ ಎಂಡ್‌ಗೆ ಪ್ರಯಾಣಿಸುವಾಗ ನಗರದ ಅಭಿವೃದ್ಧಿಯನ್ನು ಗಮನಿಸುತ್ತಾ ಬರುತ್ತೇನೆ. ಸಂಚಾರ ದಟ್ಟಣೆ ಈ ನಗರಕ್ಕೆ ಶಾಪದಂತೆ ಕಾಣುತ್ತದೆ. ಎತ್ತರಿಸಿದ ರಸ್ತೆಗಳು, ರಿಂಗ್‌ ರಸ್ತೆಗಳು, ಮೇಲ್ಸೇತುವೆಗಳು ಅಭಿವೃದ್ಧಿಯ ದ್ಯೋತಕ ನಿಜ. ಆದರೆ ಅವುಗಳು ಸಂಚಾರ ದಟ್ಟಣೆಗೆ ನಿಜವಾಗಿ ಪರಿಹಾರವಾಗದಿದ್ದರೆ ವಿಫಲವಾದಂತೆಯೇ. ಬೆಂಗಳೂರಿನ ಕೆಲವು ಭಾಗಗಳಲ್ಲಿ ನನಗೆ ಇಂತಹ ಅನುಭವವಾಯಿತು. ಬೆಂಗಳೂರಿನ ಖ್ಯಾತಿಗೆ ಅಭಿವೃದ್ಧಿ ವೇಗ ಸಾಲದು.

* ದೆಹಲಿಯಂತೆ ನಮ್ಮ ನಗರದಲ್ಲೂ ಮೆಟ್ರೊ ರೈಲು ಓಡುತ್ತಿದೆ...
ಹೌದು. ದೆಹಲಿ ಮೆಟ್ರೊ ಯೋಜನೆಯ ರೂವಾರಿ ಶ್ರೀಧರನ್‌ ಅವರೇ ಇಲ್ಲಿಯೂ ಯೋಜನೆ ರೂಪಿಸಿದರು. ಆದರೆ ಮೆಟ್ರೊ ಯೋಜನೆ ದೆಹಲಿಯಷ್ಟು ಇಲ್ಲಿ ಸಫಲವಾದಂತೆ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಮೆಟ್ರೊದಂತಹ ಸಾರ್ವಜನಿಕ ಸಂಪರ್ಕ ಮೂಲಗಳು ಬೆಂಗಳೂರಿನಂತಹ ಸಿಲಿಕಾನ್‌ ಸಿಟಿಗೆ 10 ವರ್ಷಗಳ ಹಿಂದೆಯೇ ಅನುಷ್ಠಾನಗೊಳ್ಳಬೇಕಿತ್ತು. ಮೊದಲು ಮೂಲಸೌಕರ್ಯ ಒದಗಿಸಿ ಆಮೇಲೆ ಹೊಸ ಉದ್ಯಮಗಳನ್ನು ಆಹ್ವಾನಿಸಬೇಕು. ಸಂಚಾರದಲ್ಲೇ ಸಮಯ ವ್ಯರ್ಥ ಮಾಡುವುದೆಂದರೆ ನ್ಯಾಷನಲ್‌ ವೇಸ್ಟ್‌. ಆದರೆ ಮೆಟ್ರೊ ವಿಫಲವಾಗಿದ್ದರೆ ಅದಕ್ಕೆ ಆಡಳಿತದಲ್ಲಿ ರಾಜಕಾರಣದ ಮಧ್ಯಪ್ರವೇಶವೇ ಕಾರಣ ಎಂದು ನಾನು ಊಹಿಸುತ್ತೇನೆ.

*ಇಲ್ಲಿರುವ ನಿಮ್ಮ ಆಪ್ತರು?
ಸಾಹಿತ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಕೆಲವು ಆಯ್ದ ಸ್ನೇಹಿತರಿದ್ದಾರೆ. ನಂದನ್‌ ನೀಲೆಕಣಿ ಮತ್ತು ರೋಹಿಣಿ, ಇನ್ಫೊಸಿಸ್‌ನ ನಾರಾಯಣಮೂರ್ತಿ, ‘ಜನಾಗ್ರಹ’ದ ಸಂಘಟನೆಯ ಸ್ವಾತಿ ಮತ್ತು ರಾಮನಾಥನ್‌ ನನಗೆ ಆಪ್ತರು. ಯು.ಆರ್.ಅನಂತಮೂರ್ತಿ ಅವರೊಂದಿಗೆ ಸಾಹಿತ್ಯದ ಚರ್ಚೆ ನಡೆಸುತ್ತಿದ್ದೆ.

* ನೀವು ಇಷ್ಟಪಡುವ ಬೆಂಗಳೂರಿನ ತಿಂಡಿ ಯಾವುದು?
ಮುಂಬೈನಲ್ಲಿ ಮತ್ತು ಬೆಂಗಳೂರಿಗೆ ಭೇಟಿ ನೀಡಿದಾಗ ಮೈಸೂರು ಮಸಾಲೆದೋಸೆ ತಿನ್ನುವುದನ್ನು ಮರೆಯುವುದಿಲ್ಲ. ಬೇರೆಲ್ಲೂ ಆ ಟೇಸ್ಟ್‌ ಸಿಗೋದಿಲ್ಲ. ಈಗ ಅದನ್ನೇ ತಿಂದು ಬಂದೆ. ಈ ಹೋಟೆಲ್‌ನಲ್ಲಿಯೂ ಮೈಸೂರು ಮಸಾಲೆದೋಸೆ ಚೆನ್ನಾಗಿ ಮಾಡುತ್ತಾರೆ. ಚಟ್ನಿ ಒಳ್ಳೆ ಕಾಂಬಿನೇಷನ್‌.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !