ಶನಿವಾರ, ಮಾರ್ಚ್ 25, 2023
22 °C
ದೀಪಾವಳಿ ಕಥಾಸ್ಪರ್ಧೆ 2021: ತೀರ್ಪುಗಾರರ ಮೆಚ್ಚುಗೆ ಪಡೆದ

ಹಸಿಬೆ: ಅಮರೇಶ್‌ ಗಿಣಿವಾರ ಅವರ ಕಥೆ

ಅಮರೇಶ ಗಿಣಿವಾರ Updated:

ಅಕ್ಷರ ಗಾತ್ರ : | |

Prajavani

ಅತ್ತ ಊರ‍್ಮಗ್ಲ ಯುರೇನಿಯಂ ಘಟಕದ ಫ್ಯಾಕ್ಟರಿ ಮುಗಿಯುವ ಹಂತಕ್ಕೆ ಬಂದಿತ್ತು. ಇತ್ತ ಬಾಬಣ್ಣನ ಗಡ್ಡಕ್ಕೆ ಸಾಬೂನು ಹಚ್ಚಿ ಹದಮಾಡಿ ನೀವುತ್ತಾ ಕತ್ತಿ ಸರಿಮಾಡಿಕೊಂಡು ‘ಈ ಗೋರ್ಮೆಂಟು ಸರಿಗಿಲ್ಲಾ, ಇಲ್ದೋರು ಬಗ್ಗೆ ಕಾಳಜಿ ಇಲ್ಲಾ. ಉರಾಗ ಫ್ಯಾಕ್ಟರಿ ಬಂತು’ ಅದು ಹಂಗಿಲ್ಲಾ, ಇದು ಹೀಂಗಿಲ್ಲಾ ಅಂತ ದೇಶಾವರಿ ಹರಟುತ್ತಾ ಕುಳಿತಿದ್ದ ಹಜಾಮ್ರ ಅಯ್ಯಪ್ಪ. ‘ಯಾವೋದನ್ನ ಹೆಂಗನ್ನಿರಲಿ, ನೀನು ಚನ್ನಾಗಿ ಮಾಡಪ್ಪ ಶಿವ ಎಲ್ಲೆನ್ನಾ ಕತ್ತಿ ಬೀಳಿಸಿಯಾ!’ ಅಂತ ಬಾಬು ತನ್ನ ದೇಹ ರಕ್ಷಣೆಗೆ ಮಾತಿನ ಗುರಾಣಿ ಹಿಡಿದ. ಇನ್ನೂ ಬಹಳ ಹುಡುಗರು ಕಟಿಂಗ್, ದೊಡ್ಡವರು ಗಡ್ಡ ಮಾಡಿಕೊಳ್ಳಲು ಕಾಯುತ್ತಿದ್ದರು. ಕೈಯಲ್ಲಿರುವ ಕತ್ತಿ ನಡುಗುತ್ತಾ ಮತ್ತೆ ಯಾರಿಗನ್ನ ಬೀಳುತ್ತಾ ಅಂತ ಲೆಕ್ಕ ಹಾಕಿ ಬಾಬಣ್ಣನ ಗಡ್ಡ ಮುಗಿದ ಮೇಲೆ ‘ಇಲ್ಲೇ ಕುಂರ‍್ರೀ, ನಾನು ಕಾಲಮಡ್ದು ಬರತೀನಿ’ ಅಂತೇಳಿ ಸರಾಯಿ ಅಂಗಡಿ ಕಡೆ ನಡೆಯಲು ಸಿದ್ದಾದ. ಪಂಪ ‘ಅಯ್ಯಯ್ಯ ಮಾವ ನೀನು ಎಲ್ಲಿಗೊಂಟಿದ್ದಿ ಅಂತ ಗೊತ್ತೈತಿ ತಗ ನಡಗೋ ಕೈಯಿನ ನಿಂದ್ರಸಾಕ ಹೊಂಟಿದ್ದಿ. ಸುಮ್ಮ ಸುಮ್ಮನೆ ಕಾಲಮಡಿಯಾಕ ಅಂತ ಹೇಳತಿದ್ದಿ.’ ಅಂದಾಗ ಅಲ್ಲೇ ಕುಂತೋರೆಲ್ಲಾ ಕೊಕಾಸಿ ನಕ್ಕವು. ಬಚ್ಚು ಬಾಯಿಯೊಳಗ ಬೀಡಿ ಇಟಗೊಂಡು ಒಳಗೊಳಗ ನಕ್ಕಾಂತ ಹೊಂಟ ಅಯ್ಯಪ್ಪ.

ಕುಡ್ದ ಕಟಿಂಗ್ ಮಾಡಬೇಡ ಅಂತ ಬಹಳಷ್ಟು ಜನ ಬೇಡಿಕೊಂಡ್ರು ಅಯ್ಯಪ್ಪ ‘ನಾನೇನ್ ಮಾಡ್ಲಪ್ಪ ನಾನು ಕುಡಿಲಿಲ್ಲಂದ್ರ, ನಿಮ್ಮ ಮಖದ ತುಂಬ ಗೀಚ ಬೀಳತಾವ, ಆವಾಗ ನೀವು ನಮ್ಮ ಬೈಯ್ತೀರಿ’ ಅಂತ ಎಲ್ಲರಿಗೆ ಒಂದೇ ಉತ್ತರ ಕೊಡ್ತಿದ್ದ. ಕುಡ್ದು ಬಂದು ಮತ್ತೆ ಪಂಪನ ಗಡ್ಡ ಮಾಡಲು ಸುರುಮಾಡಿದಾಗ, ನಡುಕ ಭೀಮಣ್ಣ ಬಂದು ‘ಹೇ ಅಯ್ಯಪ್ಪ ತೊಡೆಗತ್ತಿ ಕೊಡು’ ಅಂದ. ಅಲ್ಲಿದ್ದ ಮೀಸೆ ಮೂಡಲಾರದ ಹುಡುಗರೆಲ್ಲಾ ತೊಡೆಗತ್ತಿ ಅಂತ ಕಿವ್ಯಾಗ ಬಿದ್ದ ತಕ್ಷಣ ಗಳಗಳನೆ ಹೊಟ್ಟೆ ಹುಣ್ಣಾಗಂಗ ನಕ್ಕವು. ‘ಅಲ್ರಲೇ ನಗ್ತೀರಿ ಮುಂದ ನಿಮಿಗಿ ವಯಸ್ಸಾಗಂಗಲ್ಲೇನ್ರಲೇ?’ ಅಂದು ತೊಡೆಗತ್ತಿ ಅಡ್ಡ ಬನಿಯನ್ನಿನಾಗ ಇಟಗೊಂಡು ಭೀಮಣ್ಣ ವಟವಟ ಅನಕೋಂತ ಹೋದ.

ಪಂಪನ ಗಡ್ಡ ಮಾಡಿದ ಮೇಲೆ ಅಯ್ಯಪ್ಪನ ತಲೆಯಲ್ಲಿ ಬರುತ್ತಿದ್ದ ಕೆಟ್ಟ ಕೆಟ್ಟ ಯೋಚನೆಗಳನ್ನು ಬದಿಗೊತ್ತಿ, ಹೇನು ಬಿದ್ದ ಸಣ್ಣ ಹುಡುಗರ ತಲೆಗಳನ್ನು ನುಣ್ಣಗೆ ಬೋಳಿಸುತ್ತಿದ್ದ. ಸುಕುಮುನಿ ನಿನ್ನೆ ಬೆದರಿಕೆ ಹಾಕಿ ಹೋಗಿದ್ದು ಅಯ್ಯಪ್ಪನನ್ನು ಚಿಂತೆಗೀಡು ಮಾಡಿತ್ತು. ಮನ್ಯಾಗ ಮಕ್ಕಂಡಿದ್ದ ಹೆಂಡತಿ ಶ್ಯಾವಮ್ಮ ‘ಬಂದರಕ್ಕೆಲ್ಲಾ ಸರಾಯಿದಂಗಡಿಗೆ ಬಡಿಬ್ಯಾಡ, ಒಂದು ಸ್ವಲ್ಪ ಗುಳಿಗೆ ತರಾಕ ಉಳಸು’ ಅಂದದ್ದು ಅಯ್ಯಪ್ಪನ ಕಿವಿಗೆ ಬಿತ್ತು.

ಅಯ್ಯಪ್ಪ ಗಡ್ಡ-ಕಟಿಂಗ್ ಮಾಡಿದರೆ ನಗದಿ ರಕ್ಕ ಕೊಡೋರು ಅಪರೂಪ. ಎಲ್ಲರೂ ಒಂದು ಬೆಳೆ ಬಂದ ಮೇಲೆ ಸ್ವಲ್ಪ ಕಾಳು-ಕಡಿ ಕೊಡುತ್ತಿದ್ದರು. ದೀಪಾವಳಿ-ಉಗಾದಿ ಹಬ್ಬಕ್ಕೆ ಕೆಲವರು ಹಳೆ ಬಟ್ಟೆ ಕೊಡುತ್ತಿದ್ದರು. ಅದರಲ್ಲೇ ಜೀವನ ನಡೆಯುತ್ತಿತ್ತು. ಒಂದೊಂದು ಸಲ ಕುಡಿಯಾಕ ಕಡಿಮೆ ಬಿದ್ರ ಕಾಳುಗಳನ್ನ ಅಂಗಡಿಗೆ ಮಾರಿ ಕುಡಿಯುತ್ತಿದ್ದ.

ಎಲ್ಲಾ ಗಿರಾಕಿಗಳು ಹೋದ ಮೇಲೆ ಅಯ್ಯಪ್ಪ ಹಸಿಬೆ ತಗಂಡು ಮನ್ಯಾಕ ಬಂದ. ತಲಿಗಿ ಕೈ ಇಟಗೊಂಡು ಬಾರಲ ಬಗ್ಗಿ ಮಕ್ಕಂಡಿದ್ದ ಹೆಂಡತಿಯನ್ನ ನೋಡಿ ಯೋಚಿಸುತ್ತಾ ಕುಳಿತ. ಅಯ್ಯಪ್ಪ ಕಟಿಂಗ್ ಮಾಡುತ್ತಾ ಸರಳವಾಗಿ ಕಾಲವನ್ನು ನೂಕುತ್ತಿದ್ದ. ಅದೇನೋ ಮಕ್ಕಳ ಫಲ ದೊರೆಯಲಿಲ್ಲ. ಅವತ್ತು ದುಡಿದಿದ್ದು ಅವತ್ತೇ ತಿಂದು ಬಿಡುತ್ತಿದ್ದರು. ಗಳಿಸಿ ಕೂಡಿಡುವ ಚಿಂತೆ ಇಬ್ಬರಿಗೂ ಇದ್ದಿಲ್ಲ. ಹೆಂಡತಿ ರೋಗಿಷ್ಠೆ.

ಆರು ತಿಂಗಳ ಹಿಂದೆ ಶ್ಯಾವಮ್ಮ ಕೀರಲು ಧ್ವನಿಯಲ್ಲಿ ‘ಯಪ್ಪೋ ಬೆನ್ನು, ಯಪ್ಪೋ ಹೊಟ್ಟೆ, ಮಕ್ಕಳಕೊಡಲಾರದ ನನ್ನ ಹೊಟ್ಟೆ ಮೇಲೆ ನನಗಿ ಸಿಟ್ಟು ಬಂದ್ರ, ಅದೇ ಹೊಟ್ಟೆಗೆ ಬ್ಯಾನಿ ತಂದು ತ್ರಾಸು ಕೊಡಾಕತ್ತೀಯಾ? ಈಸಬೀರ’ ಅನ್ನೋದು ಕೇಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕ ಕರಕೊಂಡು ಹೋಗಿ ತೋರಿಸಿದ. ಡಾಕ್ಟರ್ ಗೋವರ್ಧನ ಎಲ್ಲಾ ಪರೀಕ್ಷೆ ಮಾಡಿ ‘ಇದು ದೊಡ್ಡ ಸಮಸ್ಯೆ ನೀವು ಬಳ್ಳಾರಿ ಓಪಿಡಿಗೆ ತೋರಿಸ್ಬೇಕು, ಅಲ್ಲೇ ಆಪ್ರೇಶನ್ ಮಾಡ್ತಾರ’ ಅಂತೇಳಿದ. ‘ಸರ್ ಅಷ್ಟೊಂದು ರಕ್ಕ ನಮತಾಕ ಇಲ್ಲಾ, ನೀವೆ ಇಲ್ಲಿ ಒಂದು ಸೂಜಿ ಚುಚ್ಚಿ ಸ್ವಲ್ಪ ಗುಳಿಗಿ ಕೊಡ್ರಿ’ ಅಂತ ಅಯ್ಯಪ್ಪ ಅಂದಾಗ, ಡಾಕ್ಟ್ರ ಸಿಟ್ಟಿಗೇರಿ ‘ಲೇ ಬಸ್ಸಿನ ಚಾರ್ಜ ಇದ್ರ ಸಾಕು. ಎಲ್ಲಾ ಫ್ರೀ ಮಾಡ್ತಾರ’ ಅಂತ ಹೇಳಿ ಕಳಿಸಿದ.

ಅವರಿವರ ತಗ ಸಾಲ ಮಾಡಿ ಬಳ್ಳಾರಿ ದವಾಖಾನಿಗಿ ಕರಕೊಂಡು ಹೋಗಿ ಒಂದು ವಾರ ಇದ್ದು ಆಪ್ರೀಶನ್ ಮಾಡಿಸಿಗೊಂಡು ಬಂದಿದ್ದ. ಬರೋವತ್ತಿನ್ಯಾಗ ಆಪ್ರೇಶನ್ ಮಾಡಿದ ಡಾಕ್ಟ್ರು ‘ನಿನ್ನೇಣ್ತಿಗಿ ಪಕ್ಕೆಗೆ ಮತ್ತು ಬೆನ್ನಿಗೆ ಎರಡು ಕಡೆ ಆಪ್ರೇಶನ್ ಆಗ್ಯಾವ, ಹಂಗಾಗಿ ಒಂದು ವರ್ಷದ ತನಕ ಅಂಗಾತ ಮಲಗಬಾರದು ಮತ್ತೆ ಹೊಟ್ಟೆ ಮೇಲೇನೂ ಮಲಗಬಾರದು’ ಅಂತೇಳುವಾಗ ಇನ್ನ ಡಾಕ್ಟ್ರ ಮಾತು ಮುಗಿದಿದ್ದಿಲ್ಲ, ‘ಮತೆ ನಿದ್ದಿ ಬಂದ್ರ ಯಂಗ ಮಾಡಬೇಕ್ರೀ ಸಾರ್?’ ಅಂದ ಅಯ್ಯಪ್ಪ. ಡಾಕ್ಟ್ರ ಪಿತ್ತ ನೆತ್ತಿಗೇರಿ ‘ಹೇಳತಾನ ಪೂರ್ತಿ ಕೇಳು ನಡುವ ಅಡ್ಡಡ್ಡ ಮಾತಾಡಬೇಡ. ಯಂಗ ಮಲಗಬೇಕಂದ್ರ ಬಗ್ಗಿ ನಮಸ್ಕಾರ ಮಾಡತರಲ್ಲಾ, ಆ ರೀತಿ ಮಲಗಬೇಕು ಒಂದು ವರುಷ’ ಅಂದಾಗ, ಅಯ್ಯಪ್ಪ ಮುಂದಿನ ತಿಪ್ಲೆಲ್ಲಾ ಒಂದೇ ಸಲ ಎಣಿಸಿಗೊಂಡು ‘ಸಾರ ಅಂತ ಹೈರಾಣ ಯಾಕ್ರೀ, ನೀವೆ ಯಾವದನ್ನ ಒಂದು ಸೂಜಿ ಚುಚ್ಚಿ ಕೊಲ್ಲಿಬಿಡ್ರಿ’ ಅಂದಾಗ ಮತ್ತೆ ಡಾಕ್ಟ್ರಿಗೆ ಬಿಸಿನೀರು ಉಗ್ಗಿದಂಗಾತಿ ‘ಲೇ ಅಂತ ಪಾಪ ನಾನ್ಯಾಕ ಮಾಡ್ಲಿ? ಡಿಸ್ಚಾರ್ಜ್ ಮಾಡ್ತೀವಿ ಹಾಳಾಗ್ಯೋಗ್ರಿ’ ಅಂದು ಕಳುಹಿಸಿದ್ದರು.

ಆವತ್ತಿನಿಂದ ಇವತ್ತಿನವರೆಗೆ ಅದೇ ರೀತಿ ಮಲಗುವದು ನೋಡಿ ನೋಡಿ ಅಯ್ಯಪ್ಪ ಬೇಸತ್ತು ಹೋಗಿದ್ದ. ಏನಾದ್ರೂ ಊಟಕ್ಕಿಟ್ಟರೆ ಶ್ಯಾವಮ್ಮ ಕುಂತಗೊಂಡು ಉಣ್ಣೋದು ಬಾಳಹೊತ್ತು ಆಗ್ತಿದ್ದಿಲ್ಲ. ಒಂದು ಕೈ ನೆಲಕ್ಕೆ ಊರಿ, ಒಂದೇ ಕೈಯಿಂದ ಬಗ್ಗಿ ಉಣ್ಣುತ್ತಿದ್ದಳು. ಬಗ್ಗಿ ಉಣ್ಣುವಾಗ ನಾಯಿ ತಟ್ಟೆಯೊಳಗೆ ಮುಸುಡಿ ಇಟ್ಟ ಹಾಗೆ ಕಾಣುತ್ತಿದ್ದಳು. ಒಮ್ಮೆ ಜೋಲಿ ತಾಳದೆ ಬಿದ್ದು ಮೂತಿಯನ್ನು ಗಂಗಳದಲ್ಲಿ ಅದ್ದಿಸಿದ್ದಳು. ಅಛೇ ಅನ್ನಾಕ ಸಗುತಿ ಇಲ್ಲದೇ ಒಂದು ಸಲ ನಾಯಿನ ಜೊತಿ ಮಾಡಿಕೊಂಡು ಉಂಡಿದ್ದಳು. ತಾ ಉಣ್ಣುವಾಗ ನಡುನಡುವೆ ‘ನನ್ನಂತಹ ಕಷ್ಟ ಭೂಮಿ ಮ್ಯಾಲಿ ಯಾರಿಗಿ ಕೊಡಬೇಡಪ್ಪ ಈಸಬೀರಾ’ ಅನ್ನುತ್ತಿದ್ದಳು.

***

ಹೊಲದ ಮುಟೇಶನ್‌ಗೆ ಅಂತ ಅರ್ಜಿ ಹಾಕಿದ್ದ ಸುಕುಮುನಿ, ಮುಂಜಾನೆ ಅಯ್ಯಪ್ಪನ ಮುಖ ನೋಡಿ ಪೇಚಾಡಕ್ಯಾಂತ ಹೋಗಿದ್ದ. ಹೋಗೋವತ್ತಿನ್ಯಾಗ ಅನುಮಾನ ಮಾಡಿ ಹೋಗಿದ್ದ ಸುಕುಮುನಿಗೆ ತಹಶೀಲ್ ಆಫೀಸಿನ್ಯಾಗ ಕೆಲಸಾಗಲಾರದ್ದು ಕೆಬ್ಬಣಚೇಳು ಕಡಿದಂಗಾಗಿತ್ತು. ಅದೇ ಸಿಟ್ಟು ತಗಂಡು ಸೀದ ಅಯ್ಯಪ್ಪನ ಮನಿಗೆ ಬಂದ ಸುಕುಮುನಿ ‘ಹೇ ಅಯ್ಯಗ್ಯಾ ನೀನು ಊರಾಗ ಮುಂಜಮುಂಜೇಲಿ ಅಡ್ಡಾಡಬೇಡ, ನಿನ್ನ ಹರಿಷ್ಠ ಮಖ ನೋಡಿದದಕ ನನ್ನ ಹೊಲದ ಕೆಲಸ ಆಗಲಿಲ್ಲ ದರಿದ್ರ ಸೂಳೇಮಗ! ಯಾವಾಗ ನಿನ್ನ ಮಖ ನೋಡ್ತೀವಿ, ಆವತ್ತು ನಮ್ಮ ಕೆಲಸಾನೇ ಆಗಂಗಿಲ್ಲ. ಅಡ್ಡಾಡಂಗನಿಸಿದ್ರ ರಾತ್ರಿ ಅಡ್ಡಾಡು. ಮುಂಜಮುಂಜೇಲಿ ಅಡ್ಡಾಡಬೇಡ ಬಾಳ ತಿಪ್ಲಾಗುತ್ತ ನೋಡು’ ಅಂತ ಅಯ್ಯಪ್ಪನ ವಯಸ್ಸಿನ ಲೆಕ್ಕ ಹಿಡಿಯದೇ ಬಾಯಿಗೆ ಬಂದಂಗ ಬೈದು ಬೆದರಿಸಿ ಹೋಗಿದ್ದ.

ಊರಾಗ ಅಯ್ಯಪ್ಪನ ಮೇಲೆ ಇದೇ ರಿತಿ ಪುಕಾರು ಎಬ್ಬಿಸಿಬಿಟ್ಟಿದ್ರು. ಉರುಕುಂದುಪ್ಪಗ ಅಯ್ಯಪ್ಪನ ಮಖ ನೋಡಿದದಕ ಮಗಳ ಲಗ್ನ ಕ್ಯಾನ್ಸಲ್ ಆಯ್ತಂತ, ಸಾವಿಂತ್ರೆಮ್ಮ ಸಾಹುಕಾರ್ತಿಗಿ ಅರೇವತ್ಲೆ ಅಯ್ಯಪ್ಪ ಎದುರಾದದಕ ಅವತ್ತು ಆಕಿನ ಹೊಲಕ ಕೂಲಿ ಆಳುಗಳು ಸಿಗಲಿಲ್ಲಂತ, ದೊಡ್ಡಪ್ಳಿಗೆ ಅಯ್ಯಪ್ಪ ಕಂಡದಕ ದೊಡ್ಡುಪ್ಳಿ ಮಗ ಮೂರು ದಿನ ಹಠ ಮಾಡಿ ಕೊನಿಗೆ ತಾತನತಕ ತಾಯತ ಕಟಿಗೆಂಡು ಬಂದಮೇಲೆ ಸುಮ್ಮನಾಯ್ತಂತ, ಇನ್ನು ಕೆಲವರಿಗೆ ಅಯ್ಯಪ್ಪನ ಮುಖ ನೋಡಿ ಗಳೇವು ಸಿಗಲಾರದ್ದು, ಪಂಪ್ ಸಿಗಲಾರದ್ದು, ಕಾಲೇವುಕ ನೀರು ಬರಲಾರದ್ದು ಹೀಗೆ ವಿಫಲವಾದ ಅನೇಕ ಕೆಲಸ-ಕಾರ್ಯಗಳು ಅಯ್ಯಪ್ಪನ ಮುಖ ನೋಡಿದ್ದರಿಂದಲೇ ಆಗಿವೆ ಅಂದು ಊರಿನಲ್ಲಿ ರೈಲಿನಂತೆ ಸುದ್ದಿ ಹರಿಬಿಟ್ಟಿದ್ದರು. ಒಟ್ಟಿನಲ್ಲಿ ಅಯ್ಯಪ್ಪ ಕಂಡರೆ ಮುಖ ಮುಚ್ಚಿಕೊಂಡು ಓಡಾಡುವಂತೆ ಆಗಿಬಿಟ್ಟಿದ್ದರು. ಅದಕ್ಕಾಗಿ ಅಯ್ಯಪ್ಪ ಇತ್ತೀಚಿಗೆ ಕಟಿಂಗ್ ಮಾಡಿದ ತಕ್ಷಣ ಮನೆಯಲ್ಲಿ ಹೆಂಡತಿಯನ್ನು ನೋಡುತ್ತಾ, ಉಳಿಸಿಟ್ಟಿದ್ದ ಪಾಕೀಟನ್ನು ಕುಡಿಯುತ್ತಾ ಕುಳಿತುಬಿಡುತ್ತಿದ್ದ.

‘ಸುಕುಮುನಿ ಹಂಗಂದನಲ್ಲಾ ಅವನು ನಾನಿಲ್ಲಂದ್ರ ಈ ಮಕ್ಕಳ ಕೂದಲ ಕಾಲಿನತನ ಬೆಳಿತಾವ, ನನಿಗಿ ಹೇಣ್ತಿ ಇದ್ದಿಲ್ಲಂದ್ರ ಊರು ಬಿಟ್ಟು ಹೋಗ್ತಿದ್ದೆ. ಇದೊಂದು ಮೂಲ ಆಗ್ಯಾದ’ ಅಂದು ಬೀಡಿ ಹಚ್ಚಿ ಕುಳಿತ. ಹೆಂಡತಿಯ ಧ್ವನಿ ‘ಯೋಯ್ ಏನಾರು ಸ್ವಲ್ಪ ಗುಳಿಗಿಗಿ ಎಣ್ಣಿಗಿ ಉಳಸಾ ವೋಟು ಹಾಳಮಾಡಬ್ಯಾಡ, ಬ್ಯಾನಿ ತಡ್ಯಾಕ ಆಗವಲ್ದು’ ಅಂದು ನಿಧಾನಕ ಕುಂಡೆ ಹಚ್ಚಿ ಕುಂದ್ರಾಕ ಪ್ರಯತ್ನ ಮಾಡಿ ಮಾಡಿ ಬೀಳುತ್ತಿದ್ದಳು. ‘ಲೇ ಹಂಗಾ ವದರಲೇ ಸೂಳೆ! ಎಷ್ಟು ಉರಿದೆಲ್ಲ್ಯಲೇ ಒಂದು ವಯಸ್ಸಿನ್ಯಾಗ, ವದರಲೇ ಆಕಾಸಕ್ಕ ಕೇಳಂಗ ವದರಲೇ ನನಿಗಿ ಸಾಕಾಗಿಬಿಟ್ಟೈತಿ’ ಅಂದು ಮತ್ತೊಂದು ಝುರಿ ಬೀಡಿ ಎಳದ. ‘ಲೋ ಬಾಡಕಾವ್‌ನಿಂದ ಕುಡೇ ಚಟಕ್ಕ ಮಂದಿನ ಮನಿಸಿ ಮನಿಸಿ ನನ್ನ ಹಾಳಮಾಡಿದ್ಯೆಲೋ’ ಅಂತ ಮತ್ತೆ ಕಿರುಚಿದಳು. ‘ಸುಮ್ಮನೆ ಮಕ್ಕಂತ ಗ್ವಾಡಿಗಿ ಅಂಟಿಗೊಳ್ಳಂಗ ವದಿಲ್ಯಾ?’ ಅಂದು ಸುಮ್ಮನಾಗಿಸಿದ. ಮತ್ತದೇ ನೋವಿನ ಜೋಗುಳದ ನಡುವೆ ನಿದ್ದೆ ಹೋದಳು ಶ್ಯಾವಮ್ಮ. ಅಯ್ಯಪ್ಪ ಅದೇ ಬೀಡಿಯ ಹೊಗೆಯಲಿ ಮುಣುಗಿ ಸಾಧುವಿನಂತೆ ಕಾಣುತ್ತಿದ್ದ.

***

ಯುರೇನಿಯಂ ಗಣಿಗಾರಿಕೆ ಘಟಕದ ಫ್ಯಾಕ್ಟರಿ ಸಂಪೂರ್ಣ ಕಟ್ಟಿ ಫ್ಯಾಕ್ಟರಿ ಮಾಲಿಕ, ಮುಖ್ಯಮಂತ್ರಿ, ಇಂಧನ ಸಚಿವ, ಅರಣ್ಯ ಸಚಿವ ಮುಂತಾದ ದೊಡ್ಡ ದೊಡ್ಡ ರಾಜಕಾರಣಿಗಳು, ಗೂಟದ ಕಾರಿನ ಮೂಲಕ ಹಳ್ಳಿಯಲ್ಲಿ ಬಂದು ಉದ್ಘಾಟನೆ ಮಾಡಿ ಅಭಿವೃದ್ಧಿ ಮಾತಾನಾಡಿ ತಿರುಗಿ ಹೊರಟಾಗ, ಕಾರಿಗೆ ಅಡ್ಡಲಾಗಿ ದ್ಯಾವಣ್ಣ ಮೂಲಿಮನಿ ನಾಯಕತ್ವದ ರೈತ ಸಂಘದ ಕೆಲವು ಹುಡುಗರು ಘಟಕ ಸ್ಥಾಪನೆ ವಿರೋಧಿಸಿ ಕಪ್ಪು ಭಾವುಟ ತೋರಿಸಿದ್ದರು. ಅಂತಹವರನ್ನೆಲ್ಲಾ ಕೆಲವು ದಿನ ಬಂಧಿಸಿ ಬಿಡುಗಡೆ ಮಾಡಿದ್ದರು.

ಫ್ಯಾಕ್ಟರಿ ಸುರುವಾದ ಮೊದಲ ದಿನದಿಂದಲೇ ಗಣಿಗಾರಿಕೆ ಮಾಡಲು ಭೂಮಿಯಿಂದ ನೀಕ್ಷೇಪ ತೆಗೆಯಲು ಫ್ಯಾಕ್ಟರಿಯ ಗುಮಾಸ್ತರು ಊರಲ್ಲಿ ಹಲಗೆ ಢಂಗುರದ ಮೂಲಕ ಕರೆಕೊಟ್ಟರು. ಫ್ಯಾಕ್ಟರಿಯ ಮಾಲಿಕ ಕಿಶನ್‌ರಾವ್ ಎಲ್ಲೋ ಬೆಂಗಳೂರಿನಲ್ಲಿ ಕುಳಿತು ಅಲ್ಲಿಯಿಂದಲೇ ಗುಮಾಸ್ತರ ಮೂಲಕ ಫ್ಯಾಕ್ಟರಿ ನಡೆಸುತ್ತಿದ್ದ. ಢಂಗುರ ಹೊಡೆಸಿದ ಮ್ಯಾಲೆ ರೈತ ಸಂಘದ ದ್ಯಾವಣ್ಣ ತನ್ನ ಪಟ್ಟು ಬಿಡದೇ ಊರಿನಲ್ಲಿ ಮನೆಮನೆಗೆ ಅಡ್ಡಾಡಿ ‘ನಾವು ಆ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗದೆ ಇರೋಣ. ಆಮೇಲೆ ತಾನೇ ಸಾಕಾಗಿ ಮುಚ್ಚಿ ಹೋಗುತ್ತೆ. ಇಲ್ಲಂದ್ರ ಇದರಿಂದ ಮುಂದ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತ ನೋಡ್ರೀ’ ಅಂತ ಹೇಳಿದ್ದ. ಊರಲ್ಲಿ ಆವಾಗಿನ ಕಾಲಕ್ಕ ಮೆಟ್ರಿಕ್ ಪಾಸು ಮಾಡಿದಾತ ದ್ಯಾವಣ್ಣ ಒಬ್ಬಾತ. ಮೊದಮೊದಲು ಕಮ್ಯುನಿಷ್ಟ ಪಕ್ಷದಾಗ ಇದ್ದ ಅಲ್ಲಿ ಭಿನ್ನಭಿಪ್ರಾಯ ಮೂಡಿ ತಾನು ರೈತ ಸಂಘ ಕಟ್ಟಿ ಹೋಬಳಿ ಘಟಕದ ಅಧ್ಯಕ್ಷಾಗಿದ್ದ. ಊರಾಗಿನ ಮಂದೆಲ್ಲಾ ದ್ಯಾವಣ್ಣಗ ಬಾರಿ ನಾಲೇಜು ಐತೆ, ಬಾರಿ ನಾಲೇಜು ಐತೆ ಅಂತ ಮಾತಾಡ್ತಿದ್ರು. ಕೆಲವರು ಒಪ್ಪಲಿಲ್ಲ. ಕೆಲವರು ದ್ಯಾವಣ್ಣನ ಮಾತಿಗೆ ಒಪ್ಪಿದರೂ ಹೊಲದಾಗ ಕೊಡೋ ಕೂಲಿಗಿಂತ ಫ್ಯಾಕ್ಟರಿ ಕೊಡೋ ಕೂಲಿ ಬಹಳ ಇದ್ದಿದ್ದರಿಂದ ಒಳಗೊಳಗೆ ಮನಸ್ಸು ಮಾಡಿದ್ದರು. ಕೂಲಿ ಕೆಲಸಕ್ಕೆ ಹೋದ ಜನ ಮೊದಲನೇ ಬಾರಿ ಫ್ಯಾಕ್ಟರಿ ಕೆಲಸಕ್ಕೆ ಹೊರಟಾಗ ಮುಜುಗರಕ್ಕೆ ಒಳಗಾದರು. ಮೊದಮೊದಲು ಗೋಸಿ ಹಾಕುತ್ತಿದ್ದ ತಮ್ಮ ಗಂಡಂದಿರು ಫ್ಯಾಕ್ಟರಿ ಬಂದ ಮೇಲೆ ಪ್ಯಾಂಟು ತೊಡುವದು ನೋಡಿ ಹೆಂಗಸರು ನಾಚಿ ನೀರಾದರು. ಆರು ತಿಂಗಳ ಆಯಿತು ಫ್ಯಾಕ್ಟರಿಗೆ ಹೋಗುವದು ಜನರಿಗೆ ರೂಢಿಯಾಯಿತು. ಈಗ ಕುರಿ ಮಂದೆಯಂತೆ ತಲೆತಗ್ಗಿಸಿ ಸಾಲಾಗಿ ಫ್ಯಾಕ್ಟರಿಗೆ ತಲುಪಿಸುವ ದಾರಿ ಹಿಡಿಯುತ್ತಿದ್ದರು. ನೆಲದಲ್ಲಿ ಅದಿರು ತೋಡಿ ತೋಡಿ ಸಂಜೆ ಮನೆಗೆ ಬರುವಾಗ ಧೂಳು ಮೆತ್ತಿಕೊಂಡು ಒಬ್ಬರ ಮುಖ ಒಬ್ಬರಿಗೆ ಗುರುತು ಸಿಗುತ್ತಿದ್ದಿಲ್ಲ. ಧ್ವನಿಯ ಮೂಲಕ ಅವರನ್ನು ಪತ್ತೆ ಹಚ್ಚಿ ಪರಸ್ಪರ ಮಾತಿಗಿಳಿಯುತ್ತಿದ್ದರು. ‘ದ್ಯಾವಣ್ಣ ಮೊದಲು ಶ್ಯಾಣ ಇದ್ದ ಬರುಬರುತ್ತಾ ಹುಚ್ಚಾಗಿಬಿಟ್ಟ. ಕುನೆಮ್ಮನಂತಹ ಫ್ಯಾಕ್ಟರಿನ ಮುಚ್ಚಸ್ತಾನಂತ. ಇತನೊಬ್ಬತನ ಕೈಲಿಂದ ಅಂತ ದೊಡ್ಡ ನೆಲ ತೋಡೋ ಫ್ಯಾಕ್ಟರಿನ ಮುಚ್ಚಕಾಗುತ್ತೇನು? ಸುಮ್ಮನೆ ತಾನು ಕೆಲಸಕ್ಕ ಬರಬಾರದೇನು?’ ಅಂತ ಸುಕುಮುನಿ ಪಂಪಗ ಅಂದ. ಪಂಪ ಸುಕುಮುನಿ ಮಾತಿಗೆ ತಲೆಯಾಡಿಸಿದ. ಹೀಗೆ ಸುಮಾರು ಆರುತಿಂಗಳವರೆಗೂ ಕೆಲಸಕ್ಕೋಗರೆಲ್ಲಾ ದ್ಯಾವಣ್ಣ ಹುಚ್ಚ ಅನ್ನೋ ರೀತಿಯಲ್ಲಿ ಬಗೆ ಬಗೆಯಲ್ಲಿ ಮಾತಾಡುತ್ತಿದ್ದರು.

ದ್ಯಾವಣ್ಣ ರೈತ ಸಂಘದ ಲೆಟರ್ ಫ್ಯಾಡ್ ಇಟಗೊಂಡು ಪರಿಸರ ಮಾಲಿನ್ಯ ಮಂಡಳಿ, ವಾಯುಮಾಲಿನ್ಯ ಮಂಡಳಿಗೆ ಪತ್ರ ಬರೆದ. ವಾಯುಮಾಲಿನ್ಯ ಮಂಡಳಿಯವರು ನಿಮ್ಮೂರಿಗೆ ನಾವು ಬಂದು ಸಭೆ ಮಾಡ್ತೀವಿ ಅಂತ ಪತ್ರದ ಮೂಲಕ ದ್ಯಾವಣ್ಣನಿಗೆ ಉತ್ತರ ಕೊಟ್ಟಿದ್ದರು. ಈ ಪತ್ರ ಇಷ್ಟು ದಿನ ದ್ಯಾವಣ್ಣನ ನಿರಂತರ ಏಕಾಂಗಿ ಹೋರಾಟಕ್ಕೆ ಸ್ವಲ್ಪ ಸಮಾಧಾನ ಕೊಟ್ಟಿತ್ತು. ಆ ಕಡೆ ಫ್ಯಾಕ್ಟರಿ ಮುಂಜಾನೆಯಿಂದ ಸಂಜೆತನ ವದರುತ್ತಿತ್ತು. ಎರಡು ವರ್ಷವಾದ ನಂತರ ಕೆಲಸಕ್ಕೋಗುವಂತಹ ಎಲ್ಲರಿಗೂ ದೇಹದಲ್ಲಿ ಏರುಪೇರುಗತ್ತಾ ಬಂತು. ಕೆಲವರಿಗೆ ಕಿವಿ ಕೇಳಿಸದಾದವು. ಫ್ಯಾಕ್ಟರಿ ಬಂದ ಮೇಲೆ ಮದುವೆಯಾದವರಿಗೆ ಮಕ್ಕಳಾಗದಾದವು. ಸುಕುಮುನಿ ಕ್ಯಾನ್ಸರ್ ಬಂದು ತೀರಿಕೊಂಡ. ನಂತರ ಬರುಬರುತ್ತಾ ಕೆಲಸಕ್ಕ ಹೋಗುವ ಗಂಡಸರಿಗೆ ಹೆಂಗಸರಿಗೆ ಮುಂಜಾನೆ ತಮ್ಮ ತಮ್ಮ ಹಾಸಿಗೆಯಲ್ಲಿ ಕೂದಲುಗಳು ಉದುರುತ್ತಾ ಬಂದವು ಈಗ ಜನ ಸಂಪೂರ್ಣ ಆತಂಕಗೊಂಡರು. ಸಂಪೂರ್ಣ ಬೋಳಾದ ಮೇಲೂ ಜನ ಕೆಲಸ ಬಿಡಲಿಲ್ಲ. ಹೆಂಗಸರು ಸೆರಗಿಲೇ ತಮ್ಮ ಬೋಳು ತಲೆಯನ್ನು ಮುಚ್ಚಿಕೊಂಡು ಫ್ಯಾಕ್ಟರಿಗೆ ಕೆಲಸಕ್ಕೆ ಹೋದರು. ಗಂಡಸರು ಟವಲ್ ಸುತ್ತಿಕೊಂಡು ಹೊರಟರು. ಜನಕ್ಕೆ ತಮಗೆ ಇಂತಹ ದುರ್ಗತಿ ಯಾವುದರಿಂದ ಬಂತು ಅಂತ ತಿಳಿಯದೇ ಹೋದರು. ಫ್ಯಾಕ್ಟರಿಯ ಗುಮಾಸ್ತ ಮತ್ತೆ ಜನ ಕೆಲಸ ಬೀಡ್ತಾರಂತ ತಿಳದು ‘ನಿಮ್ಮೂರಿಗೆ ಬರುವ ಕಾಲೇವು ನೀರು ಫಾಲ್ಟ್ ಐದಾವ. ನೀವೇನು ಚಿಂತೆ ಮಾಡಬ್ಯಾಡ್ರೀ ನಮ್ಮ ಫ್ಯಾಕ್ಟರಿ ಕಡೆಯಿಂದ ಉಚಿತವಾಗಿ ಎಲ್ಲರಿಗೆ ರೆಡಿಮೇಡ್ ಕೂದಲು ತರಿಸಿ ಕೊಡ್ತೀವಿ’ ಅಂತ ಹೇಳಿ ನಂಬಿಸಿದ್ದ. ಜನ ಅಲ್ಲೋಲ ಕಲ್ಲೋಲ ಆದ್ರೂ ಫ್ಯಾಕ್ಟರಿ ಅವರಿಗೆ ಅಫೀಮು ಅಂಟಿಗೊಂಡಂಗ ಅಂಟಿಗೊಂಡುಬಿಟ್ಟಿತ್ತು.

ದ್ಯಾವಣ್ಣನಿಗೆ ವಾಯು ಮಾಲಿನ್ಯ ಮಂಡಳಿಯವರು ಪತ್ರದ ಮೂಲಕ ಅವರು ಬರುವ ದಿನಾಂಕ ತಿಳಿಸಿದ್ದರು. ಸ್ವತ ದ್ಯಾವಣ್ಣನೇ ಮಂಡಳಿಯವರು ರವಿವಾರ ಸಭೆ ನಡೆಸುವ ವಿಚಾರವನ್ನ ಊರಲ್ಲಿ ಢಂಗುರ ಹಾಕಿಸಿ ತಿಳಿಸಿದ್ದ. ರೈತ ಸಂಘದ ಹುಡುಗುರು ಮನೆಮನೆಗೆ ಅಡ್ಡಾಡಿ ತಿಳಿಸಿದರು. ಸಭೆ ನಡೆಯುವ ವಿಷಯ ಗುಮಾಸ್ತನಿಗೆ ತಿಳಿದಿತ್ತು. ಗುಮಾಸ್ತ ತಮ್ಮ ಮಾಲಿಕನಿಗೆ ಫೋನು ಮಾಡಿ ತಿಳಿಸಿದ. ಇದರಿಂದ ಕಿಶನ್‌ರಾವ್‌ಗೆ ಚಿಂತೆ ಹತ್ತಿತ್ತು. ‘ಕೋಟಿಗಟ್ಟಲೇ ಬಂಡವಾಳ ಹಾಕೀನಿ. ಫ್ಯಾಕ್ಟರಿ ಮುಚ್ಚಿದ್ರ ನಾನು ವಿದೇಶದವರಿಗೆ ಏನು ಉತ್ತರ ಕೊಡ್ಲಿ?’ ಅಂತ ಸಿಗರೇಟ್‌ನ ಹೊಗೆ ಬಿಡುತ್ತಾ ತೂಗುಮಂಚದ ಮೇಲೆ ಯೋಚಿಸುತ್ತಾ ಕುಳಿತ. ತಡಮಾಡಬಾರ್ದು ಅಂತ ಕಾರ್ ತೆಗೆದು ಸೀದ ಮಂಡಳಿ ಡೈರೆಕ್ಟರ್ ಮನೆಗೆ ಹೋಗಿ ಮಾತಿಗಿಳಿದ. ಮೊದಲೇ ಕಿಶನ್‌ರಾವ್‌ ವರ್ಚಸ್ಸು ಗೊತ್ತಿದ್ದ ಡೈರೆಕ್ಟರ್ ಗೌರವದಿಂದ ಸ್ವಾಗತಿಸಿದ. ‘ಸರ್ ಫಾಕ್ಟರಿ ವಿಷಯ ಮಾತಾಡಬೇಕಂತ ಬಂದೆ. ರವಿವಾರ ಸಭೆ ನಡೆಸುತ್ತೀರಂತೆ?’ ಅಂತ ನೋಟಿನ ಕಂತೆ ಟೇಬಲ್ ಮೇಲೆ ಇಟ್ಟು ‘ಸರ್ ನಿಯಮದ ಪ್ರಕಾರ ನಡಸ್ರೀ ಬ್ಯಾಡ ಅಂದಿಲ್ಲಾ, ಒಟ್ಟಿನಲ್ಲಿ ನಮ್ಮ ಫ್ಯಾಕ್ಟರಿ ಮ್ಯಾಲ ಬರಬರ‍್ದು, ಹಂಗ ಮ್ಯಾನೇಜ್ ಮಾಡ್ರೀ ನಾವು ಇನ್ನೂ ಭೂಮಿ ಅಗದು ಟನ್ನಗಟ್ಟಲೇ ಅದಿರನ್ನ ಮೇಲಕ್ಕೆತ್ತಬೇಕು ಸರ್’ ಅಂದಾಗ ಡೈರೆಕ್ಟರ್ ಗಂಟಲು ಸರಿಮಾಡಿಕೊಂಡು ‘ಅವರ ಗ್ರಾಮದಿಂದ ಬಂದ ಪತ್ರದಲ್ಲಿ ಕ್ಯಾನ್ಸರ್‌ಗೆ ಒಬ್ಬ ಬಲಿಯಾಗಿದ್ದಾನೆ, ಕೆಲಸಕ್ಕೆ ಹೋಗುವವರ ಕೂದಲೆಲ್ಲಾ ಉದುರಿವೆ, ಫ್ಯಾಕ್ಟರಿ ಬಂದ ಮೇಲೆ ಮುದುವೆಯಾದವರಿಗೆ ಮಕ್ಕಳೇ ಆಗಿಲ್ಲಂತೆ, ಅನೇಕ ಸಮಸ್ಯೆಗಳಿದ್ದಾವೆ ನಾನೇನು ಉತ್ತರ ಕೊಡ್ಲಿ ಸಭೆಯೊಳಗ?’ ಅಂದರು. ಆದ್ರೂ ಡೈರೆಕ್ಟರ್ ಕಣ್ಣು ನೋಟಿನ ಕಂತೆಯ ಮೇಲೆ ನೆಟ್ಟಿದ್ದವು. ಕಿಶನ್‌ರಾವ್ ‘ಸರ್ ಯಾವನೋ ಒಬ್ಬನ ಸಾವಿಗೆ ನಾವು ಅಷ್ಟು ತಲೆಕೆಡಿಸೋಬೇಕಾಗಿಲ್ಲ. ಕೂದ್ಲು ಉದರೋದ್ರಿಂದ ನಾನು ವಿದೇಶದಿಂದ ರೆಡಿಮೇಡ್ ಕೂದ್ಲ ತರಸ್ತೀನಿ, ಮಕ್ಕಳು ಇವತ್ತಲ್ಲ ನಾಳೆ ಆಗ್ತಾವ ಅದ್ರ ಚಿಂತೆ ಬಿಡಿ, ಒಟ್ಟಿನಲ್ಲಿ ಮ್ಯಾನೇಜ್ ಮಾಡಿ. ಜೊತೆಗೆ ಸ್ವಲ್ಪ ಪೋಲಿಸರನ್ನು ಕರಕೊಂಡು ಹೋಗಿ’ ಅಂದರು. ‘ಆಯ್ತು ಪ್ರಯತ್ನ ಮಾಡ್ತೇನೆ’ ಅಂತ ಡೈರೆಕ್ಟರ್ ಮುಗುಳ್ನಕ್ಕರು. ಇಬ್ಬರೂ ಪಾರ್ಟಿ ಮಾಡಿದರು. ಕಿಶನ್‌ರಾವ್ ಡೈರೆಕ್ಟರ್ ಕೈಕಲುಕಿ ಕಾರು ಹತ್ತಿ ಹೋದ.

ರವಿವಾರ ಡೈರೆಕ್ಟರ್ ಬಂದರು. ಜೊತೆಗೆ ಪೋಲಿಸರನ್ನು ಕರೆದುಕೊಂಡು ಬಂದಿದ್ದರು. ದ್ಯಾವಣ್ಣ ಕುರ್ಚಿ ಹಾಕಿದ. ಜನರಿಗೆಲ್ಲಾ ತಾಡುಪಾಲು ಹಾಸಿದ್ದ. ಜನರೆಲ್ಲಾ ಡೈರೆಕ್ಟರ್ ಮಾತು ಕೇಳಲು ಕಾತುರರಾಗಿದ್ದರು. ಊರಿನ ಚಿಕ್ಕ ಚಿಕ್ಕ ಮಕ್ಕಳಿಗೆ ಯಾರಾದರೂ ಹೊಸಬರು ಊರಿಗೆ ಬಂದರೆ ಸಂಭ್ರಮವೋ ಸಂಭ್ರಮ. ಮಕ್ಕಳು ಕೇಕೆ ಹಾಕುವುದು, ಕಿರುಚುವದು ಅಲ್ಲೇ ಕುಂಟಾಬಿಲ್ಲಿ, ಲಗೋರಿ ಆಡುವದು, ಕೆಲವು ಮಕ್ಕಳು ಅಲ್ಲಲ್ಲಿ ಬಿದ್ದ ಖಾಲಿ ಸಾರಾಯಿ ಪಾಕೀಟನ್ನು ಬಾಯಿಲೇ ಊದಿ ಎಡಗಾಲಿಲೇ ಬಾಯಿಯ ತುದಿಯನ್ನು ಮುಚ್ಚಿ ಬಲಗಾಲಿಲೇ ಒದ್ದು ಟಫ್ ಅನಿಸಿ ಖುಷಿ ಪಡುತ್ತಿದ್ದವು. ಅಯ್ಯಪ್ಪ ಆ ಮಕ್ಕಳಿಗಿ ‘ಆ ಕಡೆ ನಡ್ರಿ ಇಲ್ಲಿ ಮೀಟಿಂಗ್ ನಡೆಯುತ್ತಾ’ ಅಂತ ಗದರಿಸಿದ. ಊರಿನವರಿಗೆ ಕಾಣಬಾರದೆಂದು ಒಂದು ಗೋಡೆಯ ಮರೆಯಲ್ಲಿ ಸಭೆಯ ಮಾತುಗಳನ್ನು ಕೇಳಿಸಿಕೊಳ್ಳಲು ನಿಂತಿದ್ದ. ತನ್ನನ್ನು ಯಾರಾದರೂ ನೋಡಿದರೆ ಊರಿಗೆ ಇಂತಹ ದುರ್ಗತಿ ಬರಲು ನಿನ್ನ ಮುಖಾನೇ ಕಾರಣ ಅನ್ನುತ್ತಾರೆ ಎನ್ನುವ ಭಯ ಅಯ್ಯಪ್ಪನಿಗೆ ಇತ್ತು. ಗೋಡೆಯ ಮರೆಯಿಂದ ಇಣುಕಿ ಸಭೆಯನ್ನು ನೋಡಿದ. ತಾಡಪಾಲಿನಲ್ಲಿ ಸಾಲಾಗಿ ಕುಂತಿದ್ದವರ ತಲೆಗಳು ಕುಂಬಾಂ ಈಗ ಮಡಿಕೆ ಮಾಡಿ ಬಿಸಿಲಿಗೆ ಒಣಗಿಸಲು ಇಟ್ಟಿದ್ದಾನೇನೋ? ಅನ್ನುವಂತೆ ಕಾಣುತ್ತಿದ್ದವು. ಅದನ್ನೋಡಿ ಅಯ್ಯಪ್ಪ ‘ಊರಿಗೆ ಏನು ಕರ್ಮ ಬಂತಪ್ಪ’ ಅಂದ. ಡೈರೆಕ್ಟರ್ ಮಾತಾನಾಡಲು ಸುರು ಮಾಡಿದರು. ‘ಊರಿನ ಹಿರಿಯರೇ, ಯಾವುದೇ ಆತಂಕ ಪಡಬೇಡಿ. ನಿಮ್ಮ ಕಾಲುವೆಗೆ ಬರುವ ನೀರಿನಿಂದಾಗಿ ನಿಮ್ಮ ಕೂದಲುಗಳು ಉದುರುತ್ತವೆ. ಕೆಲವರಿಗೆ ಅದು ವಂಶಾವಳಿಯಿಂದ ಹಾರ್ಮೋನು ಸಮಸ್ಯೆಯಿಂದ ಉದುರುತ್ತವೆ. ಅದಕ್ಕೆ ನಾವು ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ. ನಿಮಗೆ ರೆಡಿಮೇಡ್ ಕೂದಲುಗಳನ್ನು ತರಿಸುವ ವ್ಯವಸ್ಥೆ ಮಾಡುತ್ತೇವೆ. ನಿಮಗೆ ಫ್ಯಾಕ್ಟರಿಯಿಂದ ಆದ ಸಮಸ್ಯೆಯಲ್ಲ. ಮಕ್ಕಳಾಗಲಾರದ್ದಕ್ಕೂ, ಕ್ಯಾನ್ಸರಿಗೆ ಯಾರೋ ಸತ್ತಿದ್ದಕ್ಕೂ ಎಲ್ಲದಕ್ಕೂ ಫ್ಯಾಕ್ಟರಿನೇ ಕಾರಣಲ್ಲ. ನೀವು ಚಿಂತೆ ಮಾಡಬೇಡಿ ಸರಕಾರ ಯಾವಗಲೂ ನಿಮ್ಮ ಬೆನ್ನಿಂದಿರುತ್ತೆ’ ಅಂತ ಡೈರೆಕ್ಟರ್ ಮಾತು ಮುಗಿಸಿದರು. ಅಯ್ಯಪ್ಪ ನಿಂತಲ್ಲೇ ‘ಆಯ್ತಪೋ ಫ್ಯಾಕ್ಟರಿ ಮುಚ್ಚಂಗ ಕಾಣೋದಿಲ್ಲ’ ಅಂದು ಮನೆಕಡೆ ನಡೆದ. ಡೈರೆಕ್ಟರ್ ಮಾತಿನಿಂದ ಕೆಂಡದುಂಡೆಗಳಾದ ರೈತ ಸಂಘದ ಹುಡುಗರು ಅದರ ನಾಯಕ ದ್ಯಾವಣ್ಣ ಹಸಿರು ಟಾವೆಲ್ಲನ್ನು ಆಕಾಶಕ್ಕೆ ಗರಗರನೆ ತಿರುಗಿಸಿ ಹಲ್ಲು ಕಡಿದು ‘ಬಂಡವಾಳ ಶಾಹಿಗಳಿಗೆ ಧಿಕ್ಕಾರ, ಕಾರ್ಪೊರೇಟ್ ಕಂಪನಿಗಳ ಮಾಲಕರಿಗೆ ಧಿಕ್ಕಾರ, ಅದರ ಎಜೆಂಟುರಗಳಾದ ಅಧಿಕಾರಿಗಳಿಗೆ ಧಿಕ್ಕಾರ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ಯುರೇನಿಯಂ ಘಟಕದ ಫ್ಯಾಕ್ಟರಿಗೆ ಧಿಕ್ಕಾರ, ಮುಚ್ಚಲೇಬೇಕು ಮುಚ್ಚಲೇಬೇಕು’ ಅಂತ ಗಲಾಟೆ ಮಾಡಿದಾಗ, ಡೈರೆಕ್ಟರ್ ಪೋಲಿಸರಿಗೆ ಕಣ್ಣು ಸನ್ನೆ ಮಾಡಿದ. ಪೋಲಿಸರು ದ್ಯಾವಣ್ಣನನ್ನು, ಸಂಘದ ಐದು ಹುಡಗರನ್ನು ಅರೆಸ್ಟ ಮಾಡಿಕೊಂಡು ಹೋದರು. ಡೈರೆಕ್ಟರ್ ಅವರು ಹಿಂದೇನೆ ಊರಿನವರತ್ತ ಕೈ ಬೀಸಿ ನಡೆದ.

***

ಸಭೆ ನಡೆದು ಒಂದು ತಿಂಗಳಾಯ್ತು ಎಂದಿನಂತೆ ಫ್ಯಾಕ್ಟರಿ ಗುಂಯ್‌ಗುಡುತ್ತಿತ್ತು. ಜನರು ಅದರತ್ತ ಮುಖಮಾಡಿ ಓಡುತ್ತಿದ್ದರು. ಅಯ್ಯಪ್ಪ ‘ಶಿವನೇ ಜನರಿಗೆ ಕೂದ್ಲ ಬೆಳಸಪ್ಪಾ’ ಅಂತ ಕರೆಕೊಟ್ಟ. ‘ಈಸಬೀರಾ ಮಂದಿಗಿ ಕೂದ್ಲನ್ನ ಬೆಳಸಪ್ಪಾ ಇಲ್ಲಾ, ನಮ್ಮಿಬ್ಬರನನ್ನ ಒಂದೇ ಬಾರಿ ಮ್ಯಾಕ ಹೊಯ್ಯಪ್ಪ’ ಅಂತ ದೇಖುತ್ತಾ ದೇಖುತ್ತಾ ಅಂದಳು. ಅಯ್ಯಪ್ಪ ಅದೇ ಯೋಚನೆಯಲ್ಲಿ ಎರಡು ಕಾಲಿನ ನಡುವೆ ತಲೆ ಬಗ್ಗಿಸಿ ನಿದ್ದೆ ಮಾಡಿದ. ರಾತ್ರಿಯಾಯ್ತು, ಫ್ಯಾಕ್ಟರಿಯಿಂದ ಬಂದ ಜನ ಕತ್ತಲಲ್ಲಿ ತಮ್ಮ ತಲೆ ಸವರಿಕೊಳ್ಳುತ್ತಾ ಮನೆಯತ್ತ ಓಡುತ್ತಿದ್ದರು. ಅಯ್ಯಪ್ಪ ಕಣ್ಣು ತೆರೆದು ಹೆಂಡತಿಯನ್ನು ನೋಡಿದ. ಅಂಗಾತ ಮಲಗಿದ್ದಳು ‘ಪರವಿಲ್ಲ ನನ್ನ ಹೆಂಡತಿ ಡುಬ್ಬದ ಮ್ಯಾಲೆ ಮಲಗೋದು ಕಲತಾಳ ಬೇಸಾಯ್ತೋ ಮಾರಾಯಾ’ ಅಂತ ನಿಟ್ಟುಸಿರು ಬಿಟ್ಟ. ಸ್ವಲೊತ್ತು ಆದಮೇಲೆ ಇವತ್ತು ಒಂದು ಸ್ವಲ್ಪಾದರೂ ಕೂಗಿಲ್ಲ ಅಂತ ಆಶ್ಚರ್ಯವಾಗಿ ಮಾತಾಡಿಸಿದ, ಉತ್ತರಿಲ್ಲ. ಅಲ್ಲಾಡಿಸಿದ ಅದಕ್ಕೂ ಉತ್ತರಿಲ್ಲ. ಮೇಲೆ ಎತ್ತಿ ನೋಡಿ ‘ಇವಳು ಸವದು ಸವದು ಹೆಂಗಾಗ್ಯಾಳ, ಒಂದು ಹದಿನೈದು ಕೆಜಿ ಇರಬಹುದೇನೊ?’ ಅಂತ ಅಂದಾಜು ಮಾಡಿದ. ಶ್ಯಾವಮ್ಮ ಅತಿದೊಡ್ಡ ಉಸುರು ಆಗಲೇ ಎಳದುಬಿಟ್ಟಿದ್ದಳು. ಮೂಗಿಗೆ ಕೈಯಿಟ್ಟು ‘ಅಲೆಲೆಲೇ ಹೋಗ್ಯದಲೇ ಕಾಯಿ!’ ಅಂದ. ತನ್ನ ಹಸಿಬೆಯನ್ನ ಶ್ಯಾವಮ್ಮನ ಎದೆಮೇಲೆ ಇಟ್ಟು ಒಂದು ಗೋಣಿಚೀಲದಲ್ಲಿ ಅವಳನ್ನು ಹಾಕಿ ಮುದುರಿಕೊಂಡು ನಡೆದ. ಸುಡುಗಾಡಿಯಲ್ಲಿ ಕಳೇಬರವನ್ನು ಇಳಿಸಿ ‘ಯಾವನ್ನ ಕತ್ತೆಗೆರಕ ಹತ್ತು ನಿಮಿಷದಾಗ ಎಳದು ತಿಂತಾವ’ ಅಂತ ಮನಸ್ಸಿನಲ್ಲಿ ಅಂದುಕೊಂಡು, ಅವಳ ಎದೆಮೇಲೆ ಇದ್ದ ಹಸಿಬೆಯನ್ನ ತೆಗದುಕೊಂಡು ಫ್ಯಾಕ್ಟರಿ ಕಡೆ ಮುಖ ಮಾಡಿ ‘ಥೂ’ ಅಂತ ಕ್ಯಾಕರಿಸಿ ಉಗುಳಿ ಊರು ದಾಟಿ ನಡೆದ.

*ಹಸಿಬೆ: ಕ್ಷೌರಿಕರು ಕ್ಷೌರ ಮಾಡಲು ಬಳಸುವ ಸಾಮಾನುಗಳನ್ನು ಇಡುವ ಬಟ್ಟೆ ಚೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.