ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗಲ ಗುಡಿ

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮ ಧ್ಯಾಹ್ನಕ್ಕೇ ಮಳೆಯ ಮೋಡಗಳು ಮುಪ್ಪಿರಿದಿದ್ದವು. ಬೆಳಗಿನಿಂದ ಬಿರುವಾಗಿದ್ದ ಬಿಸಿಲು ಮಂಕಾಗಿತ್ತು. ಮುಗಿಲಂಥ ಮುಗಿಲೆಲ್ಲಾ ಕಪ್ಪುಗಟ್ಟಿತ್ತು. ಹಿಂದೆಯೇ ದಡಿ ಮಳೆಗಿಟ್ಟುಕೊಂಡಿತ್ತು. ಹಳ್ಳಿಗೆ ಹಳ್ಳಿಯೇ ಹುರುಪಿನಲ್ಲಿತ್ತು. ಆದರದು ಬುದ್ಧೇಶನ ಗೆಣೆಕಾರರನ್ನು ನಿರಾಸೆಯಲ್ಲಿ ನಿಲ್ಲಿಸಿತ್ತು. ‘ಮಳೆಗಿಳೆ ಬಂತೂಂದ್ರೆ...ಅಜ್ಜಿ ಅದಾವ ಘಳಿಗೇಲಿ ಹಂಗಂತೋ’, ಅಂತ ಬುದ್ಧೇಶನನ್ನೂ ಗೊಣಗಾಟದಲ್ಲಿಟ್ಟಿತ್ತು. ಸುಮಾರು ಹೊತ್ತು ತಡೆದು ಹೊಡೆದ ಮಳೆ ಚಕ್ಕನೆ ನಿಂತು ಮತ್ತೆ ಹೊಳವಾಯ್ತು. ಒಂದೇ ಉಸುರಿಗೆ ಅವರೆಲ್ಲಾ ಊರಾಚೆಯ ಜಾಡಿಗಿಳಿದಾಗ ಸೂರ್ಯ ಮತ್ತೆ ಕಳೆಗಟ್ಟುತ್ತಿದ್ದ.

ಅದೊಂದು ಎಡವುಗಲ್ಲುಗಳ ಕಾಡು ಜಾಡು. ಕಾಲ್ದಾರಿಗಿಂತ ಒಂಚೂರು ಹರವಾಗಿತ್ತು. ಇಕ್ಕೆಲಗಳಲ್ಲೂ ಯಾಚಾಕೋಚ ಬೆಳೆದಿದ್ದ ಚೂಪನೆಯ ಮುಳ್ಳುಗಳಿದ್ದ ಕತ್ತಾಳೆ. ಕೊರಕಲುಗಳಲ್ಲಿ ಹರಿಯುತ್ತಿದ್ದ ಕೆಂಪು ನೀರು. ಅಡ್ಡಾದಿಡ್ಡಿ ಅಡ್ಡಾಡಿದ್ದ ದನಕರು ಮೇಕೆಗಳ ಹೆಜ್ಜೆಗಳೊಳಗೆ ನಿಂತಿದ್ದ ನೀರು. ಅದರೊಳಗೆ ಪಿಳುಗುಡುತ್ತಿದ್ದ ಸೂರ್ಯ. ಎದುರು ಮಲ್ಟಿಯಿಂದ ತೀಡುತ್ತಿದ್ದ ಕುಳಿರ್ಗಾಳಿ. ಕಿವಿತುಂಬಿಕೊಳ್ಳುತ್ತಿದ್ದ ಥರಾವರಿ ಸದ್ದುಗಳು.

ಅವರು ಗೊತ್ತುಮಾಡಿಕೊಂಡಿದ್ದ ತಾವನ್ನು ತಲುಪುವಾಗಲೇ ಸೂರ್ಯ ಮೆತ್ತಗಾಗಿದ್ದ. ಮುದಿ ಮರಗಳೊಂದಿಗೆ ಹೊಸ ಮರಗಳು ಒಕ್ಕಾಡಿದ್ದ ಅದೊಂದು ಗುಂಡು ತೋಪು. ಮಳೆಯಿಂದಾಗಿ ತೇವದಿಂದ ತೇಗುತ್ತಿತ್ತು. ಬ್ಯಾಗುಗಳನ್ನೆಲ್ಲಾ ಮರದ ಮೋಟು ಕೊಂಬೆಗಳಿಗೆ ನೇತಾಕಿ, ಇದ್ದುದರಲ್ಲಿ ಒಣಪಡಿಯಾಗಿದ್ದಲ್ಲಿ ಚಾಪೆಯನ್ನು ಬಿಡಿಸಿ ಗುಡಾರವನ್ನೆತ್ತಿ ನಿಲ್ಲಿಸುವ ಹೊತ್ತಿಗೆ ಪೂರಾ ಕತ್ತಲಾಯ್ತು. ಕೈ ಬ್ಯಾಟರಿಯೊಂದನ್ನು ಹತ್ತಿಸಿ ಗುಡಾರದೊಳಗೆ ನೇತಾಕಲಾಯ್ತು. ಅದು ಕತ್ತಲ ಎದೆಯ ಮೇಲೆ ಮಿಣುಕಿಸುವುದನ್ನೇ ಮರೆತಂತಿದ್ದ ಮಿಂಚುಳುವಿನಂತೆ ಏಕೈಕ ಬೆಳಕಾಗಿ ಬೀಗುತ್ತಿತ್ತು.

ತೋಪಿನೆದುರಿಗೆ ಒಂದಷ್ಟು ದೂರದಲ್ಲಿ ಕಾಡುಗಲ್ಲುಗಳಿಂದ ಕಟ್ಟಿದ್ದ ಗುಡಿಯೊಂದಿತ್ತು. ಅದನ್ನು ಸುತ್ತುಗಟ್ಟಿದ್ದ ಪೌಳಿ ಅಲ್ಲಲ್ಲಿ ಕುಸಿದಿತ್ತು. ಮುದಿ ಆಲದ ಮರದ ಕೊಂಬೆಯೊಂದು ಅದನ್ನು ಕವುಕೊಂಡಿತ್ತು. ಗುಡಿಯೆದುರಿಗೆ ಸುತ್ತಲೂ ಕಲ್ಲು ಚಪ್ಪಡಿಗಳನ್ನು ನೆಟ್ಟಿದ್ದ ಮಾಡಿಲ್ಲದ ಭೂತಪ್ಪನ ಗುಡಿ ಬುಳ್ಳಗೆ ನಿಂತಿತ್ತು. ಅದರ ವಾರಾಸಿಗೆ ಮಾಮೇರಿ ಜಿಡ್ಡುಗಟ್ಟಿದ್ದ ಮಣ್ಣಿನ ದೀಪವೊಂದಿತ್ತು. ಅದರೊಳಗೆ ನೀರು ತುಳುಕಾಡುತ್ತಿತ್ತು. ಗುಡಿಗಳೆರಡರ ನಡುವೆ ಛತ್ರಿಯಂತೆ ಚೆಲ್ಲಿಕೊಂಡಿದ್ದ ಎರಡಾಳುದ್ದದ ದೀಪಕಣಿಗಲೆ ಗಿಡ. ಕತ್ತಲ ಗೋಡೆಗೆ ಮೆತ್ತಿದ ಹತ್ತಿಯ ಕುಪ್ಪೆಗಳಂತಿದ್ದ ಅದರ ಬಿಳಿಯ ಹೂಗಳು. ಎಲ್ಲದೂ ಮೌನದ ಸುಪರ್ದಿಗೊಳಪಟ್ಟಿತ್ತು. ಕ್ರಿಮಿಕೀಟಗಳ ಕೂಗಾಟ ಅದನ್ನು ಆದಷ್ಟೂ ಕೆಣಕುತ್ತಿತ್ತು.
ಗುಡಾರದೊಳಕ್ಕೆ ಸೇರಿಕೊಳ್ಳುವುದಕ್ಕೂ ಮುನ್ನ ಸುಬ್ಬ ಗುಡಿಯ ಅಂಗಳದಲ್ಲಿದ್ದ ದೀಪವನ್ನು ಹತ್ತಿಸಿದ. ಅದು ಕತ್ತಲಿನಲ್ಲಿ ಧಮ್ಕಟ್ಟುತ್ತಿತ್ತು. ಅಲ್ಲಿ ಅಮವಾಸ್ಯೆ ಪೌರ್ಣಮಿಗಳಲ್ಲಿ ಭಜನೆ ನಡೆಯುತ್ತಿತ್ತು. ಆಗ `ಕಟ್ಳೆ’ಗಳನ್ನು ಕಟ್ಟಿಕೊಡಲಾಗುತ್ತಿತ್ತು. `ಕಟ್ನೀಟು’ ದೇವರಾಗಿದ್ದ ಅದಕ್ಕೆ ಜಾತ್ರೆ ಅಂತ ನಡೆಯದಿದ್ದರೂ ವರ್ಷಕ್ಕೊಮ್ಮೆ ಸುತ್ತೇಳು ಹಳ್ಳಿಗಳೂ ಕೂಡಿ ಪರೇವು ಮಾಡುತ್ತಿದ್ದವು. ಕಾಡಿನ ನಡುವಿದ್ದ ಅದಕ್ಕೆ ವಾರಕ್ಕೊಮ್ಮೆ ಪೂಜೆಯಾಗುತ್ತಿತ್ತು. ಹೊಸದಾಗಿ ಕೊಳವೆಬಾವಿ ಕೊರೆಸಲು, ಮದುವೆಗಳಿಗೆ ಅಪ್ಪಣೆ ಕೇಳಲು, ಸಕಲ ತಾಪತ್ರಯಗಳ ತಮಣೆಗಾಗಿ ಅವತ್ತು ಭಕ್ತರು ಜಮಾಯಿಸುತ್ತಿದ್ದರು. ಎಮ್ಮೆಯೋ, ಹಸುವೋ ಕರು ಹಾಕಿದ್ದರೆ ಗಿಣ್ಣಾಲನ್ನೂ ತರುತ್ತಿದ್ದರು. ಬುದ್ಧೇಶನಿಗೆ ಇದೆಲ್ಲಾ ಹೊಸದಾದರೂ ಗೆಣೆಕಾರರ ನಡೆನುಡಿಗಳು, ಹೊರಡುವಾಗ`ಲೇ ಮಗ, ಅಲ್ಲಿ ಗುಡಿ ಇದೆ ಜ್ವಾಪಾನ’, ಒತ್ತಿ ಒತ್ತಿ ಹೇಳಿದ್ದ ಅಜ್ಜಿಯ ಮಾತುಗಳು ಅವನನ್ನು ಸಣ್ಣದೊಂದು ಭಯಕ್ಕೂ ಗೊಂದಲಕ್ಕೂ ತಳ್ಳಿದ್ದವು.

***

ಪಟ್ಟಣದಲ್ಲಿ ಬೆಳೆಯುತ್ತಿದ್ದ ಬುದ್ಧೇಶ ರಜೆ ಬಂತೆಂದರೆ ಹಳ್ಳಿಯಲ್ಲಿದ್ದ ಅಜ್ಜಿಯ ಮನೆಗೆ ದೌಡಾಯಿಸುತ್ತಿದ್ದ. ಹಾಗಾಗಿ ಅಲ್ಲಿನ ವಾರಿಗೆಯವರೊಂದಿಗೆ ನಂಟು ಅಂಟಿತ್ತು. ಅದೊಂದು ಬಟಾಬಯಲುಸೀಮೆಯ ಹಳ್ಳಿ. ತಲೇಣಿಸಿದರೆ ನೂರನ್ನೂ ಮೀರದ ಮನೆಗಳು. ಅದರ ಕೂಗಳತೆಯಲ್ಲಿ ಕೂರಗೆ ಕೂತಿದ್ದ ಕಾಲೋನಿ. ಅಲ್ಲಿನ ಬೆರಳೆಣಿಕೆಯ ಮನೆಗಳಲ್ಲಿ ಬಸಜ್ಜಿಯ ಗ್ರ್ಯಾಂಟಿನ ಮನೆಯಿತ್ತು. ಹಳ್ಳಿಗೆ ಬರುತ್ತಿದ್ದಂತೆ ಅಜ್ಜಿಯ ಮನೆಯನ್ನು ಹೊಕ್ಕಂತೆ ಮಾಡಿ ಗೆಣೆಕಾರರತ್ತ ಕಾಲ್ಕಿತ್ತುಬಿಡುತ್ತಿದ್ದ. ಒಂಟಿ ಜೀವ ಬಸಜ್ಜಿಗದು ಬೇಸರದ ಸಂಗತಿಯಾಗಿದ್ದರೂ, ತಾನಾಗಲಿ ತನ್ನ ಗಂಡನಾಗಲಿ, ಅಷ್ಟೇ ಯಾಕೆ ತನ್ನ ಮಗ ದೇವನಾಗಲಿ ಹೀಗೆ ಎಂದೂ ಊರೊಡನೆ ಹೊಕ್ಕಾಡಲಾಗದ್ದನ್ನು ಮೊಮ್ಮಗ ಮಾಡುತ್ತಿದ್ದಾನೆ ಅನ್ನುವ ಅಭಿಮಾನವಿತ್ತು. ಆದರೂ,`ಮಗ ನಿನ್ ಹುಷಾರು ನಿಂಗಿರ್ಲಿ,’ ಅಂತ ಆಗಾಗ ಬಸಜ್ಜಿ ಬಾಯ್ತಪ್ಪಿ ಅಂದುಬಿಡುತ್ತಿದ್ದಳು. ಬುದ್ಧೇಶ ಸಮಜಾಯಿಷಿ ಮಾತುಗಳಾಡುತ್ತಿದ್ದ. ತಲೆಬುಡ ತಿಳಿಯದಿದ್ದರೂ ಅವುಗಳ ನೆರಳಲ್ಲಿ ನಡೆದು ಬರುತ್ತಿದ್ದ ಗಂಡನ ನೆನಪು ಮುದಿ ಜೀವವನ್ನು ಬಿಡದೇ ಮುಕ್ಕುತ್ತಿತ್ತು.

ಆಗಿನ್ನೂ ಮರ ಕುಯ್ಯುವ ಮಿಲ್ಲುಗಳಿರಲಿಲ್ಲ. ಕರ‍್ರಂಗಪ್ಪ ಊರಿನ ಕುಳುವಾಡಿಕೆ, ತಟ್ಟಿ ಬುಟ್ಟಿಗಳ ಎಣಿಗೆಯೊಂದಿಗೆ ಬಿಡುವಿನಲ್ಲಿ ಮರ ಕುಯ್ಯುವ ಕೆಲಸಕ್ಕೂ ಹೋಗುತ್ತಿದ್ದ. ಒಂದಿನ ಗುಂಡಿಯೊಳಗೆ ನಿಂತು ಗರಗಸವನ್ನಾಡಿಸುತ್ತಿದ್ದಾಗ ದಿಮ್ಮಿಯೊಂದು ತಲೆಗಪ್ಪಳಿಸಿತ್ತು. ಕುಂಟುಸಿರುಯ್ಯುತ್ತಿದ್ದವನನ್ನು ಮೇಲೆತ್ತುವಷ್ಟರಲ್ಲಿ ಪ್ರಾಣಪಕ್ಷಿ ಹಾರಿತ್ತು. ಮಿಲ್ಲಿನ ಯಜಮಾನ ಮೀಸೆ ರುದ್ರಪ್ಪ ಪುಡಿಗಾಸನ್ನು ಬಸಜ್ಜಿಯ ಕೈಗಿಕ್ಕಿ ಕೇಸಾಗದಂತೆ ಮುಚ್ಚಾಕಿದ್ದ. ಊರಿನ ಯಾವೊಂದು ಬಾಯಿಯೂ ರುದ್ರಪ್ಪನ ವಿರುದ್ಧ ಚಕಾರವೆತ್ತದ್ದರಿಂದ ಅದು ಬಸಜ್ಜಿಯನ್ನೂ ಗಪ್ಪಾಗಿಸಿತ್ತು. ಆಗ ಮಗ ಕದರಯ್ಯ ಐದನೇ ಕ್ಲಾಸಿನಲ್ಲಿದ್ದ. ಆರನೇ ಕ್ಲಾಸಿಗೆ ಅವನನ್ನು ಬಸಜ್ಜಿಯ ತಮ್ಮ ಶಿವಪ್ಪ ತಾನಿದ್ದಲ್ಲಗೇ ಕರೆದೊಯ್ದಿದ್ದ.
ಹೀಗೆ ಪಟ್ಟಣವಾಸಿಯಾಗಿದ್ದ ಮಗ ಡಿಗ್ರಿ ಮುಗಿಸಿ ಸರ್ಕಾರಿ ನೌಕರಿಯೊಂದನ್ನು ಹಿಡಿದಾಗ ಬಸಜ್ಜಿಗೆ ಕೊಂಬು ಬಂದಿದ್ದವು. ಮಗ ಬೇರೊಂದು ಧರ್ಮದವಳನ್ನು ಕಟ್ಟಿಕೊಂಡಾಗ, ಕದರಯ್ಯ`ದೇವಕುಮಾರ’ನಾದಾಗ, ಮೊಮ್ಮಗನಿಗೆ`ಬುದ್ಧೇಶ’ ಅಂತ ಹೆಸರಿಟ್ಟಾಗ ಆ ಕೊಂಬುಗಳು ಹಂಗೇ ಇಂಗಿಹೋಗಿದ್ದವು. ಆ ಕಾರಣಕ್ಕೇ ಅವಕಾಶ ಸಿಕ್ಕಾಗಲೆಲ್ಲಾ, ‘ಅದೇನ್ ಪಸಂದಾಗೈತೇಂತ ದೇವಾಂತ ಹೆಸ್ರು ಇಟ್ಕಂಡಿದೀಯ, ನಂಗದು ದೆವ್ವ ಅಂದಂಗೆ ಕೇಳ್ಸುತ್ತೆ,’ ಅಂತ ಅಸಹನೆಗೊಳ್ಳುತ್ತಿದ್ದಳು.`ನಿಂಗಿದೆಲ್ಲಾ ತಿಳ್ಯಾಕಿಲ್ಲ ಬಿಡವ್ವ’, ಅನ್ನುತ್ತಿದ್ದ ಮಗನ ಮಾತುಗಳನ್ನು ಆಕಡೆ ಕಿವೀಲಿ ಕೇಳಿ ಈಕಡೆ ಕಿವೀಲಿ ಬಿಡಲಾಗದೆ ಆ ಬಗ್ಗೆ ಅವರಿವರನ್ನು ತಲಾಷ್ ಮಾಡುತ್ತಿದ್ದಳು.`ಕುಲ್ಕೇ ಎಳ್ಳೂನೀರೂ ಬಿಟ್ಟವ್ನೆ ಅಂದ್ಮೇಲೆ ಹೆಸ್ರು ತಗಂಡು ಉಪ್ಪು ಹುಳಿ ಹಾಕ್ಕೆಂಡು ನೆಕ್ಕೆಣ್ತೀಯ,’ ಅನ್ನುತ್ತಿದ್ದವರ ಮಾತುಗಳಿಂದ ಸೀದಾ ಎದೆಗೇ ಇರಿಸಿಕೊಂಡವಳಂತೆ ನಿತ್ರಾಣಳಾಗಿಬಿಡುತ್ತಿದ್ದಳು. ಆದರದನ್ನು ಮೊಮ್ಮಗನ ಒಡನಾಟ ರವಷ್ಟು ತಮಣೆಮಾಡುತ್ತಿತ್ತು.

***

ಇರುಳೊಂದನ್ನು ಕಾಡಿನಲ್ಲಿ ಕಳೆಯಬೇಕೆಂಬ ಮೊಮ್ಮಗನ ಇರಾದೆಯನ್ನು ಕೇಳುತ್ತಲೇ ಬೆಚ್ಚಿದ್ದ ಬಸಜ್ಜಿ,`ಇದೇನು ಐಲಾಟಾಂತೀನಿ ಹೇಳಿಕೇಳಿ ಮಳೆಗಾಲ ಮಳೆಗಿಳೆ ಬಂತೂಂದ್ರೆ...,’ ಅಂತ ತನಗೆ ಸುತ್ರಾಂ ಇಷ್ಟವಿಲ್ಲದ್ದನ್ನು ಮಳೆಯ ಮೇಲೆ ಎತ್ತಾಕಿದ್ದಳು. ಆದರೆ ಆಂತರ್ಯದಲ್ಲಿ ಅವರು ಆರಿಸಿಕೊಂಡಿದ್ದ ಜಾಗ, ಅಲ್ಲೇ ಫಾಸಲೆಯಲ್ಲಿದ್ದ ಗುಡಿ ಅವಳನ್ನು ನಡುಗಿಸಿಬಿಟ್ಟಿತ್ತು. ಆ ತಾವಿನಿಂದಾಗಿ ಆ ದಿನ ಗಂಡ ಅನುಭವಿಸಿದ ಅವಮಾನ, ನೋವು ಮರೆಯಲಾಗದ ಬರೆಯಂತೆ ಬಸಜ್ಜಿಯೆದುರು ಧುತ್ತನೆ ಕೂತುಬಿಟ್ಟಿತ್ತು.
ಗಂಡ ಕರ‍್ರಂಗಪ್ಪ ಮರ ಕುಯ್ಯವ ಕೆಲಸದ ಜೊತೆಗೆ ತಟ್ಟಿ, ಬುಟ್ಟಿ, ಮಂಕರಿಗಳನ್ನು ವೈನಾಗಿ ಎಣೆಯುತ್ತಿದ್ದ. ಅವತ್ತೊಂದು ದಿನ ಈಚಲಗರಿಗಾಗಿ ಕಾಡಿಗೆ ಹೋಗಿದ್ದ. ಗುಡಿಯ ಆಸುಪಾಸಿನಲ್ಲಿ ಈಚಲು ಗರಿಗಳನ್ನು ಕುಯ್ದುಕೊಂಡು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಹಿಡಿದುಕೊಂಡಿತ್ತು.

ಸಾಲದ್ದಕ್ಕೆ ವಿಪರೀತ ಗಾಳಿಗಿಟ್ಟುಕೊಂಡಿತ್ತು. ಹೊತ್ತಾಗಲೇ ಇಳಿದಾಗಿತ್ತು. ದನಕರುಗಳಿಗಾಗಿ ಬಂದಿದ್ದವರು ಊರ ದಾರಿ ಹಿಡಿದಿದ್ದರು. ಆಸರಿಸಿದ್ದ ಮರ ಗಾಳಿಯ ತಾಳಕ್ಕೆ ಯದ್ವಾತದ್ವ ತೊನೆಯುತ್ತಿತ್ತು. ಅಷ್ಟೊತ್ತಿಗಾಗಲೇ ಪೂರಾ ನೆಂದಿದ್ದರೂ ದಿಗಿಲುಗೊಂಡಿದ್ದ ಕರ‍್ರಂಗಪ್ಪ ಗುಡಿಯ ಪಕ್ಕದಲ್ಲಿ ಪಾಳು ಬಿದ್ದಿದ್ದ ತಳಿಗೆ ಮನೆಯನ್ನು ಹೊಕ್ಕಿದ್ದ. ಅದೊಬ್ಬನ ಕಣ್ಣಿಗೆ ಬಿದ್ದು ಅವನಿಗದು ಕರ‍್ರಂಗಪ್ಪ ಬೇಕಂತಲೇ ಮಾಡಿದ `ಮೈಲಿಗೆ’ಯಂತೆ ಕಂಡು, ಆ ಘನ ಸುದ್ದಿಯನ್ನು ಊರಲ್ಲೆಲ್ಲಾ ಭುಗಿಲೆಬ್ಬಿಸಿದ್ದ.`ಅಷ್ಟಕ್ಕೂ ನಿಂತ್ಕಂಡಿದ್ದು ಬಿದ್ದೋಗಿರೋ ಪೌಳಿಯೊಳಗೆ ತಾನೆ ಗುಡಿಯೊಳಗೆ ಅಲ್ವಲ್ಲ,’ ಪಡ್ಡೆ ಹೈಕಳ ಕ್ಯಾತೆಗೆ ಕ್ಯಾರೆ ಕ್ಯತ್ತ ಅನ್ನದ ಬಕಧ್ಯಾನಿಗಳು,`ಇದನ್ನ ಹಿಂಗೇ ಬಿಟ್ರೆ ಕತೆ ಮುಗೀತು’, ಅನ್ನುವುದರೊಂದಿಗೆ ಸುಡುವ ಪಂಚಾಯ್ತಿಯಾಗಿ ಕರ‍್ರಂಗಪ್ಪನಿಗೆ ಹೊರಲಾಗದ ದಂಡ ಹಾಕಿ ಬಹಿಷ್ಕಾರದ ಬೆದರಿಕೆಯೊಂದಿಗೆ ಬರ್ಕಾಸ್ತಾಗಿತ್ತು. ಅದಾದ ಮೇಲೆ ಪಾಳು ಪೌಳಿಯನ್ನೂ ಗುಡಿಯನ್ನೂ ತೊಳೆದು ದೇವರಿಗೂ ಪುಣ್ಯ ಮಾಡಿಸಲಾಗಿತ್ತು. ಅದೊಂದು ಅತೀವ ಅವಮಾನದ ದೊಂದಿಯಾಗಿ ಸೂಡಾಡತೊಡಗಿದ್ದರಿಂದ ಕರ‍್ರಂಗಪ್ಪ ಮತ್ತೆ ಮಾಮೂಲಿ ಮನುಷ್ಯನಾಗಲೇ ಇಲ್ಲ. ಅವನು ಸತ್ತಾಗ ಆ ಸಾವನ್ನೂ ಅದಕ್ಕೇ ತಳುಕಾಕಿ,`ದೇವ್ರುದಿಂಡ್ರೂನ ಕಾಲ್ಕಸ ಮಾಡ್ಕಂಡ್ರೆ ಹಿಂಗೇ ಆಗೋದು,’ ಅನ್ನುವ ಮಾತುಗಳೆದ್ದಾಡಿದ್ದವು. ಅವು ಬಸಜ್ಜಿಯನ್ನು ಕುಸಿದುಹೋಗುವಂತೆ ಮಾಡಿದ್ದವು. ಅಂಥಾ ಕಡೀಕೇ ಮೊಮ್ಮಗ ಹೊರಟು ನಿಂತದ್ದು ಬಸಜ್ಜಿಯನ್ನು ಸಂಕಷ್ಟಕ್ಕೆ ಸಿಕ್ಕಿಸಿತ್ತು. ಒತ್ತಾಯಕ್ಕೆ ಒಲ್ಲೆ ಅನ್ನಲಾಗದೆ ಒಪ್ಪಿಕೊಂಡಿದ್ದರೂ,`ಲೇ ಮಗ ಅಲ್ಲಿ ಗುಡಿ ಇದೆ ಜ್ವಾಪಾನ ಕಣಪ್ಪ’, ಅಂತ ಮತ್ತೆ ಮತ್ತೆ ಎಚ್ಚರಿಸಿದ್ದಳು.

***

ರಾತ್ರಿಯಿಡೀ ಬೆಂಕಿಯ ಸುತ್ತಲೂ ಕೂತು ಕಾಲಹಾಕಬೇಕೆಂದಿದ್ದ ಆಸೆಗೆ ಮಳೆ ತಣ್ಣೀರೆರಚಿದ್ದರಿಂದ ಅವರೆಲ್ಲಾ ಗುಡಾರದೊಳಗೇ ಕೂತು ಬುತ್ತಿ ಬಿಚ್ಚಿಕೊಂಡರು. ಬುದ್ಧೇಶನೂ ಅಜ್ಜಿ ಕಟ್ಟಿಕೊಟ್ಟಿದ್ದ ರೊಟ್ಟಿಗಳೆರಡನ್ನೂ ಜೋಡಿಸಿಕೊಂಡು ಚಟ್ನಿ, ಉಪ್ಪಿನಕಾಯಿ ನೆಂಚಿಕೊಂಡು ಇನ್ನೇನು ಬಾಯಿಗಿಕ್ಕಿಕೊಳ್ಳಬೇಕು ಅನ್ನುವಷ್ಟರಲ್ಲಿ ಸಿಡಿಲೊಂದು ಸಿಡಿಯಿತು. ಹಿಂದ್ಗುಟ್ಟೇ ಮಿಂಚೊಂದು ಫಳಾರಿಸಿತು. ಬೆಚ್ಚಿಬಿದ್ದ ಬುದ್ಧೇಶ ರೊಟ್ಟಿಯನ್ನು ಕೆಳಕ್ಕಿಟ್ಟು ಗೆಣೆಕಾರರತ್ತ ದಿಟ್ಟಿಸಿದ. ‘ಈ ನನ್ಮಗಂದು ಇವತ್ತೇ ಅಟಕಾಯಿಸಿಕೊಳ್ಳಬೇಕಾಗಿತ್ತ,’ ಅನ್ನುವ ಬೇಸರ ಅವರನ್ನೆಲ್ಲಾ ದಿಕ್ಕೆಡಿಸಿತ್ತು.

`ಇದ್ಕೆಲ್ಲಾ ಹೇತ್ಲಾಡಿಗಳಂಗೆ ಹೆದ್ರಿಕಂಡ್ರಾಗುತ್ತಾ,’ ಅಂತ ಧೈರ್ಯ ತುಂಬಲೆತ್ನಿಸಿದ ಭದ್ರನ ಮುಖದಲ್ಲೂ ದೆವ್ವಕಳೆಯಾಡುತ್ತಿತ್ತು. ಈ ನಡುವೆ ತನ್ನಾಳ್ತಕ್ಕೆ ತಾನು ಗುಡುಗು ಆರ್ಭಟಿಸತೊಡಗಿತು. ತಾನೇನು ಕಮ್ಮಿ ಎಂಬಂತೆ ಮಿಂಚೂ ಜೊತೆಗೂಡಿತು.`ಅಯ್ಯೋ ಇವರಿಬ್ಬರೇ ಈನಾಡಿ ಆಡ್ತಾವ್ರೆ ಅಂದ್ರೆ ತೆಪ್ಪಗಿದ್ರೆ ತಪ್ಪಾಗುತ್ತೆ,’ ಅನ್ನುವಂತೆ ದಡಿ ಹನಿಗಳೊಂದಿಗೆ ಮಳೆಗಿಟ್ಟುಕೊಂಡಿತು. ಗಾಳಿಯೂ ಪೈಪೋಟಿಗಿಳಿಯಿತು.

ಹೀಗೆ ಗುಡುಗು ಮಿಂಚು ಮಳೆ ಗಾಳಿಗಳೆಲ್ಲಾ ತಾಮೇಲು ತಾಮೇಲು ಅನ್ನುವಂಥ ಮೇಲಾಟಕ್ಕೆ ಬಿದ್ದದ್ದೇ ಎಲ್ಲರೊಳಗೂ ಪುಕ್ಕಲಾಟಕ್ಕಿಟ್ಟುಕೊಂಡಿತು. ಅವರೊಳಗಿನ ಭಯವನ್ನರಿತಂತೆ ಗುಡಾರಕ್ಕೆ ಇಳಿಬಿಟ್ಟಿದ್ದ ಬ್ಯಾಟರಿಯೂ ಅಲುಗಾಡತೊಡಗಿತು. ಅದರ ಬೆಳಕು ಅವರೊಳಗೆ ಮತ್ತಷ್ಟು ಭಯವನ್ನು ದೂಡುತಿರಲು ಗಾಳಿ ತನ್ನ ವೇಗವನ್ನು ದುಪ್ಪಟ್ಟು ಮಾಡಿಕೊಂಡು ಬೋರಿಡತೊಡಗಿತು. ಇಂಥ ದೆವ್ವ ಗಾಳಿಯನ್ನು ಕಂಡಿದ್ದ ಬುದ್ಧೇಶನನ್ನುಳಿದು ಮಿಕ್ಕ ನಾಲ್ವರೂ ಗುಡಾರದ ಒಂದೊಂದು ಮೂಲೆಗೆ ಕೂತು ಕೊಸರಾಡದಂತೆ ಅದುಮಿಡಿಯಲೆತ್ನಿಸಿದರು.`ರಂಗನ ಮುಂದೆ ಸಿಂಗನ’ ಅನ್ನುವಂತೆ ಗಾಳಿ ಒಮ್ಮೆಗೇ ಇಡೀ ಗುಡಾರವನ್ನು ಪತರಗುಟ್ಟಿಸಿತು. ಇನ್ನಿದು ಆಗದ ಮಾತು ಅನಿಸುತ್ತಿದ್ದಂತೆ ಎಲ್ಲರೂ ಒಮ್ಮೆಗೇ ಆಚೆ ಓಡಿದರು. ಅದಕ್ಕಾಗೇ ಕಾಯುತ್ತಿದ್ದೆ ಎಂಬಂತೆ ಮರುಕ್ಷಣವೇ ಗುಡಾರ ಗಾಳಿಯೊಡನೆ ಸಲಿಗೆಗಿಳಿದು ಮಂಗಮಾಯವಾಯ್ತು. ಅಷ್ಟರಲ್ಲಾಗಲೇ ಗುಡಿಯಲ್ಲಚ್ಚಿದ್ದ ದೀಪವೂ ಕತ್ತಲೆಗೆ ಶರಣಾಗಿತ್ತು. ಮರಗಳ ಮೈಯ್ಯಲ್ಲಿ ಗಾಳಿಯ ಶಿಳ್ಳೆಯಾಟವಾಡುತ್ತಿತ್ತು.

ಕತ್ತಲೊಳಕ್ಕೆ ಕತ್ತಲಿಳಿದು ಗೌವ್ಗತ್ತಲೆಯಾಗಿತ್ತು. ಕಣ್ಣುಯ್ದರೆ ಕಣ್ಕಾಣದ ಆ ಕತ್ತಲಲ್ಲೇ ಅಂದಾಜಿನಲ್ಲಿ ಮಿಕ್ಕವರೆಲ್ಲಾ ಬುದ್ಧೇಶನನ್ನು ಕೂಗುತ್ತಾ ಗುಡಿಯತ್ತ ಓಡಿದರು. ಕಕ್ಕಾಬಿಕ್ಕಿಯಾದ ಬುದ್ಧೇಶನಿಗೆ ಏನೊಂದೂ ತೋಚದೇ ನಿಂತಲ್ಲೇ ನಿಂತುಬಿಟ್ಟ. ಮಳೆ ಗುಡುಗು ಸಿಡಿಲುಗಳ ಆಟ ಇನ್ನೂ ನಡೆದಿತ್ತು. ಅವನ ತೊಯ್ದು ತೊಪ್ಪೆಯಾಗಿದ್ದ ಮೈಯನ್ನು ಅಗಾಧ ಚಳಿ ತಡವಿಕೊಂಡಿತ್ತು.`ಲೇ ಮಗ ಅಲ್ಲಿ ಗುಡಿ ಇದೆ ಜ್ವಾಪಾನ ಕಣಪ್ಪ’ ಅಜ್ಜಿಯ ಮಾತುಗಳು ಬಿಡದೆ ಜಗ್ಗಾಟಕ್ಕಿಟ್ಟುಕೊಂಡವು. ಮೊದಲೇ ಇದ್ದ ಭಯಕ್ಕೆ ಮತ್ತಷ್ಟು ಭಯ ಇಳುಕೊಂಡು ಅದು ಇದ್ದೊಂಚೂರು ಧೈರ್ಯವನ್ನೂ ನುಂಗಿಕೊಂಡು ಮಹಾಭಯಕ್ಕೆ ತಿರುಗುತ್ತಲೇ ಅಜ್ಜಿ ಅಪ್ಪ ಅಮ್ಮ ಎಲ್ಲರೂ ಒಟ್ಟೊಟ್ಟಿಗೇ ನೆನಪಾಗಿ ಮೆಲ್ಲಗೆ ಕುಸುಗತೊಡಗಿದ. ಕ್ರಮೇಣ ಆ ಕುಸುಗು ಅದುಮಿಡಲಾಗದ ದೊಡ್ಡ ಅಳುವಾಗುತ್ತಾ ಅದು ಕತ್ತಲೆದೆಯೂ ಬೆಚ್ಚುವಂತೆ ಗಾರಾಡುತ್ತಿರಲು ಅವನ ಕಣ್ಣೀರಿನೊಂದಿಗೆ ಮಳೆಯ ನೀರು ಕೂಡಾಡುತ್ತಾ ತಟಾಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT