ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗೆ ಪಟ್ಟೆ ಹೇಗೆ ಬಂತು?

Last Updated 29 ಜೂನ್ 2019, 19:30 IST
ಅಕ್ಷರ ಗಾತ್ರ

ಬಹಳ ವರ್ಷಗಳ ಹಿಂದೆ ಒಂದು ಕಾಡು ಇನ್ನೂ ಚಿಗುರುತ್ತಿತ್ತು. ಹುಲಿ ತಾನು ಇಡೀ ಕಾಡಿಗೆ ರಾಜ, ತನ್ನನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಎಂದು ಬೀಗುತ್ತಿತ್ತು. ಅದರ ಅಹಂಕಾರ ವಿಪರೀತವಾಗಿತ್ತು. ತನ್ನಂತೆ ಶಕ್ತಿಯುತ ಕೋರೆ ಹಲ್ಲುಗಳು, ಮೊನಚು ಉಗುರುಗಳು, ಬಲಿಷ್ಠ ಮುಂಗಾಲುಗಳು ಯಾವ ಪ್ರಾಣಿಗಿವೆ? ಕಾಡಿಗೆ ಕಾಡೇ ತನ್ನನ್ನು ಕಂಡರೆ ನಡುಗುತ್ತದೆ, ತನ್ನ ಮೈ ಬಣ್ಣ ಚಿನ್ನದಂತೆ ಹೊಳೆಯುತ್ತದೆ ಎಂದೆಲ್ಲ ಅದು ಜಂಭ ಪಡುತ್ತಿತ್ತು. ಅದರ ಜಂಭ ಎಷ್ಟು ಎಂಬುದನ್ನು ಹೇಳಿತೀರಲು ಸಾಧ್ಯವಿಲ್ಲವಾಗಿತ್ತು.

ಒಂದು ದಿನ ಹುಲಿರಾಯ ದೂರದಲ್ಲಿನ ಒಂದು ಹೊಲದಲ್ಲಿ ಎತ್ತು ಉಳುಮೆಯಲ್ಲಿ ತೊಡಗಿರುವುದನ್ನು ಗಮನಿಸಿತು. ‘ಅರೆ! ಎತ್ತೇನೋ ಉಳುಮೆ ಮಾಡುತ್ತಿದೆ ಸರಿ. ಆದರೆ ಅದ್ಯಾವುದಪ್ಪ ಎತ್ತನ್ನು ದುಡಿಸಿಕೊಳ್ಳುತ್ತಿರುವ ಆ ಪ್ರಾಣಿ?’ ಎಂದು ಹುಲಿಗೆ ಏಕಕಾಲಕ್ಕೆ ಕುತೂಹಲ ಹಾಗೂ ಕೀಳರಿಮೆ ಮೂಡಿತು. ಸಂಜೆಯ ನಂತರ ಎತ್ತನ್ನೇ ವಿಚಾರಿಸಿದರಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡಿತು.

ಮುಸ್ಸಂಜೆ ಹೊತ್ತಿನಲ್ಲಿ ಎತ್ತು ಕೊಟ್ಟಿಗೆಯಲ್ಲಿ ಮೇಯುತ್ತಿತ್ತು. ಹುಲಿ ಮೆಲ್ಲನೆ ಅದರ ಬಳಿ ಬಂದಿತು. ಎತ್ತಿಗೆ ಗಾಬರಿಯಾಯಿತು.

‘ಹೆದರಬೇಡ ಎತ್ತಣ್ಣ, ನಾನು ನಿನಗೆ ಏನೂ ಮಾಡುವುದಿಲ್ಲ. ನಿನ್ನನ್ನು ನೇಗಿಲಿಗೆ ಕಟ್ಟಿ ಉಳುಮೆ ಮಾಡಿಸಿಕೊಳ್ಳುತ್ತಿದ್ದ ಆ ಪ್ರಾಣಿ ಯಾವುದು’ ಎಂದು ಪ್ರಶ್ನಿಸಿತು ಹುಲಿ.

‘ಓ ಅದಾ? ಅದು ಪ್ರಾಣಿಯಲ್ಲ ಹುಲಿರಾಯ... ಮನುಷ್ಯ. ಬುದ್ಧಿವಂತಿಕೆಯುಳ್ಳ ಮುನುಷ್ಯ. ಅವನನ್ನು ರೈತ ಅನ್ನು’ ಎಂದಿತು ಎತ್ತು.

‘ಹೌದಾ? ಹಾಗಾದರೆ ನಿನ್ನಿಂದ ನನಗೊಂದು ಉಪಕಾರವಾಗಬೇಕಿದೆ. ಮನುಷ್ಯನಿಂದ ನನಗೆ ಬುದ್ಧಿವಂತಿಕೆಯನ್ನು ಕೊಡಿಸುತ್ತೀಯಾ’ ಎಂದು ಕೇಳಿಕೊಂಡಿತು ಹುಲಿ.

‘ಅಯ್ಯೋ ನನ್ನ ಮಾತು ಅವನು ಕೇಳುತ್ತಾನೆಯೇ ಹೇಳು ಹುಲಿಯಪ್ಪ? ನೀನೇ ಉಪಾಯವಾಗಿ ಕೇಳಿ ಪಡೆ’ ಎಂದು ಎತ್ತು ಉತ್ತರಿಸಿತು. ನೇರವಾಗಿ ಮನುಷ್ಯನನ್ನೇ ಕೇಳೋಣವೆಂದು ಹುಲಿ ನಿರ್ಧರಿಸಿತು.

ಮಾರನೇ ದಿನ ಬೆಳಗ್ಗೆ ರೈತ ಎಂದಿನಂತೆ ಹೊಲ ಉಳುಮೆ ಮಾಡುತ್ತಿದ್ದ. ಹುಲಿ ದಿಢೀರನೆ ತನ್ನನ್ನು ಸಮೀಪಿಸಿದಾಗ ರೈತನಿಗೆ ಹೆದರಿಕೆಯಾಗದಿರಲು ಸಾಧ್ಯವೇ? ಆತ ಅಲ್ಲಿಂದ ಓಡಿ ಹೋಗಲು ಮುಂದಾದ.

ಆಗ ಹುಲಿಯು, ‘ಭಯ ಬೇಡ ಮನುಷ್ಯಣ್ಣ, ನನಗೆ ಬೇಕಾದದ್ದು ನಿನ್ನ ಪ್ರಾಣವಲ್ಲ, ನಿನ್ನಲ್ಲಿರುವ ಬುದ್ಧಿವಂತಿಕೆಯನ್ನು ನನಗೆ ಕೊಟ್ಟರಾಯಿತು’ ಎಂದಿತು ಹುಲಿ. ಸದ್ಯ ಬದುಕಿದೆ ಎಂದು ರೈತ ನಿಟ್ಟುಸಿರುಬಿಟ್ಟ. ಒಂದು ಗಳಿಗೆ ಯೋಚಿಸಿದ.

‘ಹುಲಿಯಪ್ಪ, ನನ್ನ ಬುದ್ಧಿವಂತಿಕೆಯನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಇದೋ ಈಗಲೇ ಹೋಗಿ ತರುವೆ. ನಾನು ವಾಪಸ್ಸು ಬರುವಷ್ಟರಲ್ಲಿ ನೀನು ನನ್ನ ಎತ್ತನ್ನು ಕೊಂದು ಭಕ್ಷಿಸುವುದಿಲ್ಲ ತಾನೆ?’ ಎಂದು ಕೇಳಿದ.

‘ಖಂಡಿತ ಇಲ್ಲಪ್ಪ. ಬೇಕಾದರೆ ನೀನು ದಪ್ಪ ಹಗ್ಗದಿಂದ ನನ್ನ ಮೈ ಬಿಗಿದು ಇದೋ ಈ ಮರಕ್ಕೆ ಕಟ್ಟಿಹಾಕಿಬಿಡು’ ಎಂದು ಹೇಳಿತು ಹುಲಿ. ಮನುಷ್ಯನಲ್ಲಿರುವ ಬುದ್ಧಿವಂತಿಕೆ ತನಗೆ ಸಿಗುತ್ತದೆ ಎಂಬ ಆಸೆ ಹುಲಿಯಲ್ಲಿ ಇತ್ತು.

ರೈತನು ಹುಲಿ ಹೇಳಿದಂತೆಯೇ ಮಾಡಿದ. ಮನೆಯತ್ತ ದಾಪುಗಾಲಿಟ್ಟ. ಬಹಳ ಹೊತ್ತಾದರೂ ರೈತ ಮರಳಿ ಬರಲೇ ಇಲ್ಲ. ಹುಲಿ ಎತ್ತಿನತ್ತ ಗುಟುರು ಹಾಕಿ ‘ಇದೇನಿದು, ಸೂರ್ಯ ನೆತ್ತಿ ದಾಟಿಯಾಯಿತು. ಎಲ್ಲಿ ನಿನ್ನ ಯಜಮಾನ? ಅವನು ಬಂದು ನನಗೆ ಬುದ್ಧಿವಂತಿಕೆ ಕೊಡದಿದ್ದರೆ ನಿನ್ನನ್ನು ತಿನ್ನುವೆ, ನನಗೆ ಹಸಿವಾಗುತ್ತಿದೆ’ ಎಂದು ಎಚ್ಚರಿಸಿತು.

‘ಸರಿ ಹುಲಿಯಣ್ಣ, ನಾನೇ ಮನೆಗೆ ಹೋಗಿ ಅವನನ್ನು ಕರೆತರುವೆ’ ಎಂದಿತು ಎತ್ತು. ಎತ್ತು ಹೋಗಿ ಬಹಳ ಸಮಯವಾದರೂ ಹುಲಿಗೆ ಅದೇ ಪಾಡು. ಮರಕ್ಕೆ ಕಟ್ಟಿಸಿಕೊಂಡಿದ್ದ ಹುಲಿಯನ್ನು ಕಂಡು ಅಲ್ಲಿ ಓಡಾಡುತ್ತಿದ್ದ ಮುಳ್ಳುಹಂದಿ, ಕರಡಿ, ಹಾವು, ಚಿರತೆ, ಉಷ್ಟ್ರಪಕ್ಷಿ, ಕಾಡೆಮ್ಮೆ, ಜಿಂಕೆ, ಚಿಂಪಾಂಜಿ ಎಲ್ಲಕ್ಕೂ ಅಚ್ಚರಿಯೋ ಅಚ್ಚರಿ. ಮಂಗಗಳಂತೂ ‘ದರ್ಪದ ಹುಲಿಯೇ, ನಿನಗೆ ಹೀಗಾಗಬೇಕು’ ಅಂತ ಕೇಕೆ ಹಾಕಿ ಕುಪ್ಪಳಿಸಿದವು.

ಸೂರ್ಯ ಮುಳುಗಿ ಕತ್ತಲು ಕವಿದಿತ್ತು. ಹುಲಿಗೆ ಸಿಟ್ಟು ನೆತ್ತಿಗೇರಿ ತನ್ನ ಬಲವನ್ನೆಲ್ಲ ಪ್ರಯೋಗಿಸಿ ಪ್ರಯಾಸದಿಂದ ಹಗ್ಗವನ್ನು ಬಿಡಿಸಿಕೊಂಡಿತು. ಆಯಾಸಗೊಂಡು ನೀರು ಕುಡಿಯಲೆಂದು ಹತ್ತಿರದ ಕೊಳದ ಬಳಿ ಬಂತು. ಆದರೆ, ಚಂದಿರನ ಬೆಳದಿಂಗಳಿನಲ್ಲಿ ಅದು ಅಲ್ಲಿ ಕಂಡಿದ್ದೇನು? ತನ್ನದೇ ಪ್ರತಿಬಿಂಬ... ‘ಛೇ! ಇದೇನಿದು? ಮೈಮೇಲೆಲ್ಲ ಕಪ್ಪು ಪಟ್ಟೆಗಳು... ಹಗ್ಗದ ಬಿಗಿತದ ಗುರುತುಗಳು! ಚಿನ್ನದ ಬಣ್ಣಕ್ಕೆ ಮಸಿ... ಇನ್ನು ಮುಂದೆ ನನ್ನ ಜಂಭ ಬಿಡುತ್ತೇನೆ, ನನ್ನಷ್ಟಕ್ಕೆ ನಾನಿರುತ್ತೇನೆ’ ಅಂತ ಹುಲಿ ನಿಶ್ಚಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT