ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಳು ವಿಜ್ಞಾನಿ ಹಾಜ್ಕಿನ್‌

Last Updated 26 ಜನವರಿ 2019, 19:30 IST
ಅಕ್ಷರ ಗಾತ್ರ

ಡೊರೊಥಿ ಹಾಜ್ಕಿನ್‌ (1910–1994) ವಿಜ್ಞಾನ ಕ್ಷೇತ್ರದ ನೊಬೆಲ್‌ ಪುರಸ್ಕಾರ ಪಡೆದ ಮೊದಲ ಬ್ರಿಟಿಷ್‌ ಮಹಿಳೆ.

ಹತ್ತು ವರ್ಷ ವಯಸ್ಸಿನಲ್ಲೇ ಹಾಜ್ಕಿನ್‌ಗೆ ರಸಾಯನ ವಿಜ್ಞಾನ ಮತ್ತು ಹರಳುಗಳ ಬಗ್ಗೆ ಇನ್ನಿಲ್ಲದ ಆಸಕ್ತಿ. ಈಕೆಯ ಆಸಕ್ತಿಯನ್ನು ನೋಡಿ ಹಲವರು ಗೇಲಿ ಮಾಡಿದ್ದಿದೆ. ಆದರೆ ತಾಯಿಯು ಆಕೆಯ ಆಸಕ್ತಿಗೆ ನೀರೆರೆದರು.

ಪದವಿ ಅಧ್ಯಯನ ನಡೆಸುತ್ತಿದ್ದಾಗಲೇ ಎಕ್ಸ್‌ರೇ ಕ್ರಿಸ್ಟಲೊಗ್ರಫಿ ಬಳಸಿ ಸಾವಯವ ಸಂಯುಕ್ತ ವಸ್ತುವಿನ ರಾಸಾಯನಿಕ ಸಂರಚನೆ ಅಧ್ಯಯನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಹಾಜ್ಕಿನ್‌ ಪಾತ್ರರಾದರು.

ಎಕ್ಸ್‌ರೇ ಕ್ರಿಸ್ಟಲೊಗ್ರಫಿ ತಂತ್ರಜ್ಞಾನದಲ್ಲಿ ಹರಳುಗಳ ಮೇಲೆ ಕ್ಷ ಕಿರಣಗಳನ್ನು ಹಾಯಿಸುವ ಮೂಲಕ ಅವುಗಳ ಪರಮಾಣು ರಚನೆ ಮತ್ತು ಕಿರಣಗಳ ಚದರುವಿಕೆಯನ್ನು ಅಧ್ಯಯನ ಮಾಡಲಾಗುತ್ತದೆ.

ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಹಾಜ್ಕಿನ್‌, ಇನ್ಸುಲಿನ್‌ ರಚನೆ ಕುರಿತು ಅಧ್ಯಯನ ಆರಂಭಿಸಿದ್ದರು. ಆದರೆ ಅದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ರೋಗಪತ್ತೆ ಶಾಸ್ತ್ರಜ್ಞರಾದ ಹೋವರ್ಡ್‌ ಫ್ಲೋರೆ ಅವರು ಪೆನ್ಸಿಲಿನ್‌ ರಾಸಾಯನಿಕ ಸಂರಚನೆ ಕುರಿತು ಅಧ್ಯಯನ ಮಾಡುವಂತೆ ಸಲಹೆ ಮಾಡಿದರು.

ಇನ್ಸುಲಿನ್‌ ಕುರಿತ ಅಧ್ಯಯನ ಬದಿಗಿಟ್ಟ ಹಾಜ್ಕಿನ್‌, ಪೆನ್ಸಿಲಿನ್‌ ರಚನೆ ಕುರಿತು ಅಧ್ಯಯನ ಆರಂಭಿಸಿದರು. 1945ರಲ್ಲಿ ಪೆನ್ಸಿಲಿನ್‌ ಮತ್ತು 1950ರ ವೇಳೆಗೆ ‘ವಿಟಮಿನ್‌ ಬಿ12’ ರಾಸಾಯನಿಕ ಸಂರಚನೆ ಭೇದಿಸುವಲ್ಲಿ ಅವರು ಯಶಸ್ವಿಯೂ ಆದರು. ಈ ಸಂಶೋಧನೆ ಅವರಿಗೆ ನೊಬೆಲ್‌ ಪ್ರಶಸ್ತಿಯನ್ನು ತಂದುಕೊಟ್ಟಿತು.

ಇದಾದ ನಾಲ್ಕು ವರ್ಷಗಳ ಬಳಿಕ ಇತರ ಸಂಶೋಧಕರ ಜತೆಗೂಡಿ ಇನ್ಸುಲಿನ್‌ ರಾಸಾಯನಿಕ ಸಂರಚನೆ ಕಂಡುಹಿಡಿದರು. ಇದಲ್ಲದೆ ‘ಕೊಲೆಸ್ಟರಾಲ್‌’ ಹಾಗೂ ‘ವಿಟಮಿನ್‌ ಡಿ’ಗಳ ರಾಸಾಯನಿಕ ಸಂರಚನೆಯನ್ನೂ ಅವರು ಪತ್ತೆ ಮಾಡಿದರು.

ಡೊರೊಥಿ ಹಾಜ್ಕಿನ್‌, ತನಗೆ ಎದುರಾದ ಎಲ್ಲ ಸಮಸ್ಯೆಗಳನ್ನೂ ನಿರ್ಭಯವಾಗಿ ಎದುರಿಸಿ ಗೆಲ್ಲುವ ಗುರಿಹೊಂದಿದ್ದ ಉಕ್ಕಿನ ಮಹಿಳೆಯಾಗಿದ್ದರು. ಆದರೆ, ಆಕೆ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ತೀವ್ರವಾದ ಸಂಧಿವಾತಕ್ಕೆ ಒಳಗಾದರು. ಆಗ ಅವರಿಗೆ 28 ವರ್ಷ ವಯಸ್ಸು. ಸಂಧಿವಾತದಿಂದಾಗಿ ಅವರ ಕೈಗಳು ಊದಿಕೊಂಡು ವಿರೂಪಗೊಂಡಿದ್ದವು. ಆದರೂ ಅತಿ ಸೂಕ್ಷ್ಮತೆಯನ್ನು ಬಯಸುವಂಥ ಹರಳುಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಆ ಮೂಲಕ ತನ್ನ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT