ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇತಿ ಹುಡುಕಾಟದ ಕೊನೆಯ ಕಂತು

Last Updated 9 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಇದೆಲ್ಲ ಶುರುವಾಗಿದ್ದು 1951ರಲ್ಲಿ. ಎರಿಕ್ ಶಿಂಟನ್ ಎಂಬ ಬ್ರಿಟಿಷ್ ಪರ್ವತಾರೋಹಿಯೊಬ್ಬ ತನ್ನ ಸ್ನೇಹಿತ ಮೈಕೆಲ್ ವಾರ್ಡ್‌ನೊಡನೆ ನೇಪಾಳ ಮತ್ತು ಟಿಬೆಟ್‌ನ ಅಂಚಿನಲ್ಲಿರುವ ಮೆನ್ಲುಂಗ್ ಎಂಬ ಪರ್ವತ ಶ್ರೇಣಿಗಳ ಮುಖಾಂತರ ಮೌಂಟ್ ಎವರೆಸ್ಟ್ ತಲುಪಲು ಹೊಸ ದಾರಿ ಹುಡುಕುತ್ತಿದ್ದ. ಮೌಂಟ್‌ ಎವರೆಸ್ಟ್‌ನ ಪಶ್ಚಿಮಕ್ಕಿರುವ ಈ ಪ್ರದೇಶದಿಂದ ಹಾದುಹೋಗುತ್ತಿದ್ದ ಎರಿಕ್‍ಗೆ ಗಟ್ಟಿ ಹಿಮದ ಮಧ್ಯೆ ಮಾನವನ ಪಾದವನ್ನು ಹೋಲುವ ಭಾರಿ ಗಾತ್ರದ ಹೆಜ್ಜೆ ಗುರುತೊಂದು ಕಾಣಿಸಿತು. ಸುಮಾರು ಹದಿಮೂರು ಇಂಚಿನಷ್ಟು ಉದ್ದವಿದ್ದ ಆ ಹೆಜ್ಜೆ ಗುರುತಿನ ಭಾವಚಿತ್ರವನ್ನು ತೆಗೆದ ಎರಿಕ್‌ಗೆ ಮುಂದೆ ಆ ಚಿತ್ರ ಜಗತ್ತಿನಾದ್ಯಂತ ಸಂಚಲನವನ್ನೇ ಸೃಷ್ಟಿಸಬಹುದೆಂಬ ಊಹೆಯೂ ಬಂದಿರಲಾರದು.

ಆ ವರೆಗೆ ಯೇತಿಗಳ ಇರುವಿಕೆಯ ಬಗ್ಗೆ ವದಂತಿಗಳು ಕೇಳಿಬರುತ್ತಿದ್ದರೂ ಹೇಳಿಕೊಳ್ಳುವಂತಹ ಪುರಾವೆಗಳೇನೂ ಸಿಕ್ಕಿರಲಿಲ್ಲ. ಎರಿಕ್‍ ತೆಗೆದ ಆ ಚಿತ್ರವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದೇ ತಡ, ಸ್ಥಳಿಯ ಶೆರ್ಪಾಗಳಲ್ಲಿ ಹಿಮಮಾನವ ಯೇತಿಯ ಬಗ್ಗೆ ಪ್ರಚಲಿತವಿದ್ದ ಕಥೆಗಳಿಗೆ ಇದು ಸಾಕ್ಷ್ಯ ಎಂಬಂತಾಗಿ ಭಾರಿ ಚರ್ಚೆಗೆ ಗ್ರಾಸವಾಯಿತು. ಇಂಥದ್ದೊಂದು ಬ್ರೇಕಿಂಗ್‌ ನ್ಯೂಸ್‍ಗೆ ಕಾಯುತ್ತಿದ್ದ ಪತ್ರಿಕೆಗಳು ಯೇತಿಗಳಿಗೆ ರೆಕ್ಕೆಪುಕ್ಕ ಅಂಟಿಸಿ ಪುಟಗಟ್ಟಲೆ ಸುದ್ದಿ ಪ್ರಕಟಿಸಿದವು. ಮತ್ತೊಂದೆಡೆ ಈ ಯೇತಿಯನ್ನು ಜೀವಂತ ಸೆರೆಹಿಡಿದು ಸ್ಟಾರ್‌ ಎನಿಸಬೇಕೆಂಬ ಹಂಬಲದಿಂದ ಜಗತ್ತಿನ ವಿವಿಧ ಭಾಗಗಳಿಂದ ಪರ್ವತಾರೋಹಿಗಳ ತಂಡಗಳು ಬಂದು ಈ ಪ್ರದೇಶದ ಗಿರಿಶಿಖರಗಳನ್ನು ಜಾಲಾಡಿದರು. ಟಾಮ್‌ ಸ್ಲಿಕ್ ಎಂಬ ಪರ್ವತಾರೋಹಿಯಂತೂ ಇದಕ್ಕಾಗಿಯೇ ಹಲವು ಬಾರಿ ಯಾತ್ರೆ ಕೈಗೊಂಡ. 500 ಸದಸ್ಯರು ಮತ್ತು ಬೇಟೆ ಬೇಟೆನಾಯಿಗಳ ತಂಡದ ಜೊತೆಗೆ ಅಲ್ಲಿಗೆ ಬಂದು ಆರು ತಿಂಗಳು ಅಲ್ಲಿಯೇ ಠಿಕಾಣಿ ಹೂಡಿದ. ಇಂತಹ ಎಲ್ಲ ಚಟುವಟಿಕೆಗಳು, ಆನ್ವೇಷಕರಿಗೆ ಅಲ್ಲಲ್ಲಿ ದೊರೆತ ಕೆಲವು ಪುರಾವೆಗಳು ಮತ್ತು ಅಲ್ಲಿ ಆದ ಅನುಭವಗಳು ಯೇತಿಗಳು ಇರುವ ಸಾಧ್ಯತೆಗಳ ಬಗ್ಗೆ ಜನರಲ್ಲಿದ್ದ ನಂಬಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದವು.

1953ರಲ್ಲಿ ಮೊದಲ ಬಾರಿಗೆ ಎವರೆಸ್ಟ್‌ನ ತುತ್ತ ತುದಿಯನ್ನು ಏರಿದ ಸರ್ ಎಡ್ಮಂಡ್‌ ಹಿಲರಿ ಮತ್ತು ತೇನ್‌ಸಿಂಗ್‌ ಅವರೂ ಸುಮಾರು 19ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ತಾವು ಇಂಥ ಹೆಜ್ಜೆ ಗುರುತುಗಳನ್ನು ಗಮನಿಸಿದ್ದಾಗಿ ಹೇಳಿಕೊಂಡರು. ಆನಂತರದ ದಿನಗಳಲ್ಲಿ ಇವರಿಬ್ಬರೂ ಯೇತಿಗಳ ಇರುವಿಕೆಯಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಹೇಳಿಕೊಂಡರೂ, ಆ ಹೇಳಿಕೆಗೆ ಅಷ್ಟು ಮಹತ್ವ ಸಿಕ್ಕಿಲ್ಲ.

1954ರಲ್ಲಿ ಯೇತಿಯ ಹುಡುಕಾಟದಲ್ಲಿ ನಡೆದ ಪರ್ವತಾರೋಹಣವೊಂದರಲ್ಲಿ ಜಾನ್ ಏಂಜಲೋ ಎಂಬಾತ ಈಶಾನ್ಯ ನೇಪಾಳದ ತ್ಯಾಂಗಬೋಚೆ ಎಂಬಲ್ಲಿ ಯೇತಿಗಳ ಹೆಜ್ಜೆ ಗುರುತುಗಳನ್ನು ಕಂಡು ಅವುಗಳ ಚಿತ್ರಗಳನ್ನು ತೆಗೆದು ಪ್ರಕಟಿಸಿದ. ಆತ ತೆಗೆದ ಚಿತ್ರಗಳಲ್ಲಿ ಹೆಜ್ಜೆ ಗುರುತುಗಳು ತುಂಬ ದೊಡ್ಡದಾಗಿದ್ದವು. ‘ಸಾಮಾನ್ಯ ಗಾತ್ರದಲ್ಲಿದ್ದ ಹೆಜ್ಜೆ ಗುರುತುಗಳು ಗಾಳಿಯಿಂದಾಗಿ ಹಿಗ್ಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಇವೂ ಯೇತಿಗಳ ಬಗ್ಗೆ ಜನರಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಲು ಕಾರಣವಾದವು. ಹೀಗೆ ಹಲವಾರು ವರ್ಷಗಳ ಕಾಲ ನಡೆದ ಸರಣಿ ಹುಡುಕಾಟದಲ್ಲಿ ಅನ್ವೇಷಕರು ಕಲೆಹಾಕಿದ ವಸ್ತುಗಳು ಹಾಗೂ ಶೋಧಕರಿಗೆ ಆದ ಅನುಭವಗಳು ಯೇತಿಗಳ ಬಗ್ಗೆ ಒಂದು ಪಕ್ಕಾ ನಿರ್ಣಯಕ್ಕೆ ಬರಲಾಗದೇ ಇನ್ನಷ್ಟು ಗೊಂದಲ, ಕುತೂಹಲಗಳನ್ನು ಸೃಷ್ಟಿಸುವಲ್ಲಿಗೆ ಸೀಮಿತವಾದವು. 1966ರಲ್ಲಿ ಭೂತಾನ್‌ ಸರ್ಕಾರವು ಯೇತಿಗಳ ಹೆಸರಿನಲ್ಲಿ ಸ್ಟ್ಯಾಂಪ್ ಒಂದನ್ನು ಬಿಡುಗಡೆಗೊಳಿಸಿತು.

ಬಹುಕಾಲದವರೆಗೂ ಕುತೂಹಲಕ್ಕೆ ಕಾರಣವಾಗಿದ್ದ, ಯೇತಿಯ ಹೆಜ್ಜೆಗುರುತು ಎನ್ನಲಾದ ಚಿತ್ರ
ಬಹುಕಾಲದವರೆಗೂ ಕುತೂಹಲಕ್ಕೆ ಕಾರಣವಾಗಿದ್ದ, ಯೇತಿಯ ಹೆಜ್ಜೆಗುರುತು ಎನ್ನಲಾದ ಚಿತ್ರ

ಯೇತಿಗಳ ಬಗ್ಗೆ ಸೃಷ್ಟಿಯಾಗಿದ್ದ ಕುತೂಹಲವು ಇಪ್ಪತ್ತನೆಯ ಶತಮಾನದ ಅಂತ್ಯದ ವೇಳೆಗೆ ತಣ್ಣಗಾಗುತ್ತಾ ಬಂತು. ಈ ಕಥೆಗೆ ಮರುಜೀವ ಸಿಕ್ಕಿದ್ದು 2007ರಲ್ಲಿ. ಅಮೆರಿಕ ಮೂಲದ ಟೆಲಿವಿಷನ್ ಸಂಸ್ಥೆಯೊಂದು ‘ನೇಪಾಳದಲ್ಲಿ ಯೇತಿಗಳ ಪಾದಗಳ ಗುರುತು ಕಂಡುಬಂದಿದೆ’ ಎಂದು ವರದಿ ಮಾಡಿತು. ಆ ವರದಿಯ ಆಧಾರದಲ್ಲಿ ಅದರ ಅಧ್ಯಯನಕ್ಕಾಗಿ ಒಂದು ತಂಡವನ್ನೂ ರಚಿಸಲಾಯಿತು. 2010ರಲ್ಲಿ ಚೀನಾದ ವಿಜ್ಞಾನಿಗಳ ತಂಡವೊಂದು ಎಪ್ಪತ್ತರ ದಶಕದಲ್ಲಿ ಯೇತಿಗಳ ಕುರುಹುಗಳು ಸಿಕ್ಕಿದ್ದ ಸ್ಥಳದಲ್ಲೇ ಅವುಗಳ ಇರುವಿಕೆಯ ಹುಡುಕಾಟವನ್ನು ಮತ್ತೊಮ್ಮೆ ಆರಂಭಿಸಿತು. ಈ ಎಲ್ಲ ಬೆಳವಣಿಗೆಗಳ ನಡುವೆ 2011ರ ಡಿಸೆಂಬರ್‌ನಲ್ಲಿ ರಷ್ಯಾದಲ್ಲಿ ಯೇತಿಯನ್ನು ಜೀವಂತ ಸೆರೆ ಹಿಡಿಯಲಾಗಿದೆಯೆಂಬ ಗುಲ್ಲು ಹಬ್ಬಿತು. ಆದರೆ ಆ ಬಗ್ಗೆ ಪರಿಶೀಲನೆ ನಡೆಸಿದಾಗ, ಆಡನ್ನು ಹಿಡಿಯಲು ಬಂದಿದ್ದ ಕರಡಿಯಂಥ ಪ್ರಾಣಿಯೊಂದಕ್ಕೆ ಆಡಿನ ಮಾಲೀಕನು ಗುಂಡು ಹಾರಿಸಿದಾಗ ಆ ಪ್ರಾಣಿ ಎರಡು ಕಾಲಿನಲ್ಲಿ ಓಡಲಾರಂಭಿಸಿತ್ತು. ಅದನ್ನು ಕಂಡಿದ್ದ ಸ್ಥಳೀಯನೊಬ್ಬ ಅದನ್ನೇ ಯೇತಿ ಎಂದು ಹಬ್ಬಿಸಿ, ಪುಕ್ಕಟೆ ಪ್ರಚಾರ ಪಡೆದಿದ್ದ ಎಂಬುದು ಜಾಹೀರಾಯಿತು.

ಆದರೆ ಈ ವರ್ಷ ಜರುಗಿದ ಕೆಲ ವಿದ್ಯಮಾನಗಳು ಯೇತಿಯ ಈ ಮೆಗಾ ಸೀರಿಯಲ್‍ಗೆ ತಾರ್ಕಿಕ ಅಂತ್ಯ ನೀಡುವಂತಿವೆ. ಈ ಪ್ರಾಣಿಯ ಅಸ್ತಿತ್ವದ ಬಗ್ಗೆ ಅರಿಯಲು ಹಿಮಾಲಯದ ಭಾಗದಲ್ಲೇ ಬಿಡಾರ ಹೂಡಿ, ಸ್ಥಳೀಯ ಬುಡಕಟ್ಟಿನವರ ಜ್ಞಾನವನ್ನೂ ಬಳಸಿ ಅಲ್ಲಿನ ಪ್ರದೇಶಗಳನ್ನೆಲ್ಲಾ ಜಾಲಾಡಿದ ಡೇನಿಯಲ್ ಸಿ. ಟೇಲರ್‌ ಎಂಬ ಸಂಶೋಧಕ, ‘ದಿ ಎಕಾಲಜಿ ಆಫ್‌ ಎ ಮಿಸ್ಟರಿ’ ಎಂಬ ಪುಸ್ತಕ ಬರೆದಿದ್ದಾನೆ. ‘ಆತನ ಪ್ರಕಾರ ಯೇತಿಗಳೆಂದರೆ ಹಿಮಾಲಯದ ಭಾಗದಲ್ಲಿ ಕಂಡುಬರುವ ಏಷ್ಯನ್ ಕಪ್ಪು ಕರಡಿಗಳು. ಈ ಪ್ರದೇಶದಲ್ಲಿ ಅವುಗಳು ಮರವನ್ನು ಹತ್ತಿ ಕುಳಿತು ಅಲ್ಲಿ ಹೆಚ್ಚು ಸಮಯ ಕಳೆಯುತ್ತವೆ. ಅದರಿಂದಾಗಿ ಮರಗಳ ಕೊಂಬೆಗಳನ್ನು ಹಿಡಿದುಕೊಳ್ಳಲು ಅನುವಾಗುವಂತೆ ಅವುಗಳು ತಮ್ಮ ಕೊನೆಯ ಬೆರಳುಗಳನ್ನು ಹಿಮ್ಮುಖವಾಗಿ ಮಡಚಬಲ್ಲವು. ಹೀಗಾಗಿ ಹಿಮದ ಮೇಲೆ ಅವುಗಳ ಹೆಜ್ಜೆ ಗುರುತು ಮೂಡಿದಾಗ ಮಾನವನ ಪಾದದಂತೆ ಕಾಣುತ್ತದೆ.

ಯೇತಿಯದ್ದು ಎನ್ನಲಾಗಿದ್ದ ಎಲುಬು
ಯೇತಿಯದ್ದು ಎನ್ನಲಾಗಿದ್ದ ಎಲುಬು

ಟೇಲರ್‌ನ ಅನುಭವಗಳು ಒಂದೆಡೆ. ಇನ್ನೊಂದೆಡೆ ಐಕಾನ್ ಫಿಲಂಸ್‌ ಎಂಬ ಸಂಸ್ಥೆಯೊಂದು ಯೇತಿಯ ರಹಸ್ಯ ಕುರಿತು ಒಂದು ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಯಿತು. ಈ ಚಿತ್ರ ತಂಡವು ಯೇತಿಗಳನ್ನು ಕುರಿತ ಅಧ್ಯಯನಕ್ಕಾಗಿ ಬಫೆಲೊ ವಿಶ್ವವಿದ್ಯಾಲಯದ ಜೀವಶಾಸ್ತ್ರದ ವಿಭಾಗದ ವಿಜ್ಞಾನಿಗಳನ್ನು ಸಂಪರ್ಕಿಸಿತು. ಆ ವಿಜ್ಞಾನಿಗಳ ತಂಡವು ಇಷ್ಟೆಲ್ಲ ವರ್ಷಗಳ ಕಾಲ ನಡೆದ ಅನ್ವೇಷಣೆಗಳಲ್ಲಿ ದೊರೆತಿದ್ದ ಹಿಮಮಾನವನದ್ದೆನ್ನಲಾದ ಮತ್ತು ಜಗತ್ತಿನ ವಿವಿಧ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದ್ದ ದೇಹದ ಭಾಗಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿತು. ಕೆಲವು ತಿಂಗಳ ಹಿಂದೆಯಷ್ಟೇ ಈ ವಿಜ್ಞಾನಿಗಳು ವರದಿಯೊಂದನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ, ‘ಹಿಮಮಾನವರದ್ದು’ ಎಂದು ಸಂಗ್ರಹಿಸಿಟ್ಟಿದ್ದ ವಸ್ತುಗಳಲ್ಲಿ ಹೆಚ್ಚಿನವು ಹಿಮಾಲಯದ ಕಪ್ಪು ಕರಡಿ ಮತ್ತು ಕಂದುಕರಡಿಗಳ ದೇಹದ ಭಾಗಗಳು.

ಅಲ್ಲಿಗೆ, ಕಳೆದ ಹಲವು ವರ್ಷಗಳಿಂದ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಸವಾಲಾಗಿದ್ದ ಹಿಮಮಾನವನ ಮೆಗಾ ಸರಣಿಯೊಂದು ಕೊನೆಯ ಕಂತಿಗೆ ಬಂದು, ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿದೆ. ಬಹುಶಃ ಮುಂದೊಂದು ದಿನ ಹಿಮಾಲಯದಲ್ಲಿ ಸುತ್ತಾಡುವ ಪರ್ವತಾರೋಹಿಯೊಬ್ಬನಿಗೆ ಮಗದೊಂದು ದೊಡ್ಡ ಹೆಜ್ಜೆಗುರುತು ಕಾಣುವವರೆಗೂ...

ಯೇತಿಯ ಹುಟ್ಟು
ಯೇತಿಯ ಕಥೆ ಜನಪ್ರಿಯವಾಗುತ್ತಿದ್ದಂತೆ ‘ಯೇತಿ’ ಎಂದರೆ ಹಿಮಮಾನವನ ಹೆಸರು ಎಂದೇ ಬಿಂಬಿಸಲಾಯಿತು. ಆದರೆ ಅಸಲಿ ವಿಷಯವೇ ಬೇರೆ. ಸ್ಥಳೀಯ ಶೇರ್ಪಾ ಭಾಷೆಯಲ್ಲಿ ಯೇತಿ ಎಂದರೆ ‘ಅಗೋ ಅಲ್ಲಿ ಕಾಣುವ ಆಕಾರ’ ಎಂದಂರ್ಥ. ಹಿಮಾಲಯದ ಬುಡಕಟ್ಟು ಶೇರ್ಪಾ ಜನಾಂಗದಲ್ಲಿ ಈ ಕುರಿತು ಒಂದು ಕಥೆ ಚಾಲ್ತಿಯಲ್ಲಿತ್ತು. ಸುಮಾರು 400 ವರ್ಷಗಳ ಹಿಂದೆ ಸಂಗ್ವಾ ದೊರ್ಜೆ ಎಂಬ ಸಾಧುವೊಬ್ಬ ಗೌರಿಶಂಕರದ ತಪ್ಪಲಿನಲ್ಲಿರುವ ಪಾಂಗಬೋಚೆ ಎಂಬ ಪುಟ್ಟ ಹಳ್ಳಿಯ ಗುಹೆಯೊಂದರಲ್ಲಿ ಧ್ಯಾನಕ್ಕೆ ಕುಳಿತ. ಒಬ್ಬಂಟಿಯಾಗಿದ್ದ ಆತನಿಗೆ ಅಲ್ಲಿದ್ದ ಯೇತಿಗಳು ಸ್ನೇಹ ಸಂಪಾದಿಸಿ ಉಪಚಾರ ಮಾಡುತ್ತಿದ್ದವು. ಹೀಗೆ ಒಂದು ದಿನ ಅವುಗಳಲ್ಲಿನ ಯೇತಿಯೊಂದು ಮರಣ ಹೊಂದಿದಾಗ ಸಂಗ್ವಾ ಅಲ್ಲಿಯೇ ಆ ಪ್ರಾಣಿಯ ತಲೆಬುರುಡೆಯನ್ನು ಹೂತು ಒಂದು ಗುಡಿ ಕಟ್ಟಿಸಿದ. ಆದರೆ ಈ ಕಥೆಗೆ ಪ್ರಚಾರ ದೊರೆತಿದ್ದು ಎರಿಕ್ ಶಿಂಟನ್ ಚಿತ್ರ ಪ್ರಕಟಗೊಂಡ ನಂತರವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT