ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳುಗಳ ಹಿಂದೆ ಬೆವರಿನ ಪರಿಮಳ

Last Updated 26 ಜನವರಿ 2019, 20:00 IST
ಅಕ್ಷರ ಗಾತ್ರ

ನಾನು ಜೈಲಿನಲ್ಲಿದ್ದಾಗ ಬೆವರಿನ ಹಣಕ್ಕಾಗಿ ನಡೆದ ಹೋರಾಟವೊಂದು ನನ್ನ ಬಾಳಿನುದ್ದಕ್ಕೂ ನೆನಪಿಗೆ ಬರುವ ಪಾಠದಂತಿದೆ.24ರ ಹರೆಯದ ಆವೇಶದಲ್ಲಿ ನಡೆದ ಕೊಲೆಯದು. ಕ್ರಿಕೆಟ್‌ ಮೈದಾನದಲ್ಲಿ ಆದ ಸಣ್ಣದೊಂದು ಜಗಳ. ಇಷ್ಟೊಂದು ವಿಪರೀತಕ್ಕೆ ಹೋಗುತ್ತದೆಂದು ನಾನೂ ಅಂದುಕೊಂಡಿರಲಿಲ್ಲ. ಬಸ್‌ ನಿಲ್ದಾಣದಲ್ಲಿ ಎದುರಾಳಿ ತಂಡದ ಸದಸ್ಯ ನನ್ನ ಮೇಲೆ ಮಚ್ಚು ತೆಗೆದುಕೊಂಡು ದಾಳಿಗೆ ಬಂದಾಗ ನಾನು ಆ ಮಚ್ಚನ್ನೇ ಕಿತ್ತುಕೊಂಡೆ, ಬೀಸಿದೆ. ಆತನ ಕೊಲೆ ಮಾಡಬೇಕೆಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಆದರೆ ಅಂದುಕೊಳ್ಳದಿದ್ದುದೇ ನಡೆಯಿತು.

ವಿಚಾರಣಾಧೀನ ಕೈದಿಯಾಗಿ ನಾಲ್ಕು ವರ್ಷ ಜೈಲಿನಲ್ಲಿದ್ದೆ. ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ 2007ರಲ್ಲಿ ನನಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. ತೀರ್ಪು ಕೇಳಿದೊಡನೆಯೇ ನನ್ನೆಲ್ಲ ಕನಸುಗಳೂ ಕಮರಿಹೋದವು. ವಿಚಾರಣಾಧೀನ ಬಂದಿಯಾಗಿದ್ದ ಸಂದರ್ಭದಲ್ಲಿ ಪ್ರತಿದಿನ ಕೊಲೆ, ಸುಲಿಗೆ, ಕಳ್ಳತನ ಮತ್ತು ಇನ್ನಿತರ ಘೋರ ಅಪರಾಧಕ್ಕೆ ಸಂಬಂಧಿಸಿದ ವಿಷಯಗಳನ್ನೇ ಕೇಳುತ್ತಿದ್ದೆ. ಶಿಕ್ಷೆ ಪ್ರಕಟವಾದ ನಂತರ, ಜೈಲಿನಲ್ಲಿದ್ದ ನನ್ನನ್ನು ಶಿಕ್ಷಾಬಂದಿಗಳ ಕೊಠಡಿಗೆ ವರ್ಗಾಯಿಸಿದರು. ಅಲ್ಲಿಯವರೆಗೆ ಬಿಡುಗಡೆಯ ಸಣ್ಣದೊಂದು ನಿರೀಕ್ಷೆ ಇತ್ತು. ಆದರೆ ಇನ್ನೀಗ ನಾನು ಇಲ್ಲೇ ಎಷ್ಟೊಂದು ವರ್ಷಗಳನ್ನು ಕಳೆಯಬೇಕಲ್ಲ ಎಂದು ವ್ಯಥೆಯಾಯಿತು. ಜೈಲಿನಲ್ಲಿಒಬ್ಬೊಬ್ಬರ ದುಃಖ, ಸಂಕಟಗಳ ನೈಜ ಬದುಕುಗಳ ಅರಿವಾಗುತ್ತಿದ್ದಂತೆಯೇ ಮಾನಸಿಕವಾಗಿ ಕುಗ್ಗುತ್ತಾ ಹೋದೆ.

ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಕಾನೂನು ನಿಯಮ. ಈಗ ಚಿಂತಿಸಿ ಫಲವಿಲ್ಲ ಎಂಬ ಪಾಪಪ್ರಜ್ಞೆ ಕಾಡುತ್ತಿದ್ದ ಸಮಯಕ್ಕೆ ಸರಿಯಾಗಿ ಬೆಂಗಳೂರು ವಿಶ್ವವಿದ್ಯಾಲಯ ಬಂದಿಗಳಿಗೆ ಅಂಚೆ ತೆರಪು ಮತ್ತು ದೂರ ಶಿಕ್ಷಣದ ಅಡಿಯಲ್ಲಿ ಉಚಿತವಾಗಿ ಶಿಕ್ಷಣ ನೀಡುವ ನಿರ್ಧಾರ ಪ್ರಕಟಿಸಿತು. ನಾನು ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿದ್ದೆ. ಸ್ನೇಹಿತರ ಸಲಹೆ ಮೇರೆಗೆ ಬಿಎ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದೆ. ಮನಸ್ಸಿಟ್ಟು ಓದಿ ತೇರ್ಗಡೆಯಾದೆ. ನಂತರ ‍‍ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದೆ. ಜ್ಞಾನದ ಹಂಬಲ ಹೆಚ್ಚಾಗಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಪೂರೈಸಿದೆ. ಕೊನೆಗೆ ಅಂಬೇಡ್ಕರ್ ಕುರಿತು ಡಿಪ್ಲೊಮೊ ಮುಗಿಸುವ ಹೊತ್ತಿಗೆ ನಾನು ಜೈಲಿನೊಳಗೇ ಹಲವು ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದೆ.

2006ರಿಂದ 2015ರವರೆಗೂ ಕಾನೂನು ತೊಡಕಿನಿಂದಾಗಿ ರಾಜ್ಯದ ಜೈಲುಗಳಲ್ಲಿದ್ದ ಯಾವೊಬ್ಬ ಬಂದಿಯೂ ಅವಧಿಪೂರ್ವವಾಗಿ ಬಿಡುಗಡೆಗೊಳ್ಳಲಿಲ್ಲ. ಇದರ ಚಿಂತೆಯಲ್ಲಿಯೇ ಹತ್ತಾರು ಬಂದಿಗಳು ಜೈಲಿನಲ್ಲೇ ಅಕಾಲಿಕವಾಗಿ ಸಾವನ್ನಪ್ಪಿದರು. ಈ ಕಾರಣದಿಂದಾಗಿಯೇ ಜೈಲಿನಲ್ಲಿ ಹೋರಾಟ ಶುರುವಾಯಿತು. ಇದೆಲ್ಲವನ್ನು ಒಳಗಿದ್ದೇ ನೋಡುತ್ತಿದ್ದ ನನಗೆ ಆಶ್ಚರ್ಯದ ಜತೆಗೆ ಆತಂಕವೂ ಹೆಚ್ಚಾಯಿತು.

ಜೈಲಿನೊಳಗೆ ಇದ್ದುಕೊಂಡು ಹೋರಾಟ ಮಾಡುವುದು ಸುಲಭದ ಮಾತಲ್ಲ! ಜೈಲಿನಲ್ಲಿ ಬಂದಿಗಳ ಶೋಷಣೆ, ಅನ್ಯಾಯ ಮತ್ತು ಜೈಲು ಅಧಿಕಾರಿಗಳ ದುರಾಡಳಿತದ ವಿರುದ್ಧ ನಡೆದ ಹೋರಾಟದಲ್ಲಿ ನಾನೂ ಭಾಗಿಯಾದೆ. ಒಂದು ದಿನ ಒಬ್ಬ ಶಿಕ್ಷಾಬಂದಿ ಬಂದು, ‘ಸಾವಿರ ರೂಪಾಯಿಗಳ ದಂಡ ಕಟ್ಟಲಾಗದೆ ಎರಡು ತಿಂಗಳಿಂದ ಜೈಲಿನಲ್ಲಿದ್ದೇನೆ. ಪತ್ನಿ ಅಂಗವಿಕಲೆ. ದಯಮಾಡಿ ನನಗೆ ಸಹಾಯ ಮಾಡಿ’ ಎಂದು ಕಣ್ಣೀರು ಹಾಕಿದರು. ಬಂದಿಗಳ ಇಂತಹ ಅನೇಕ ಕರುಣಾಜನಕ ವ್ಯಥೆಗಳನ್ನು ಅಲ್ಲಿ ನಾ ಕಂಡೆ.

ಜೈಲುವಾಸಿಗಳ ಕೆಲಸದ ನೋಟ (ಸಾಂದರ್ಭಿಕ ಚಿತ್ರ)
ಜೈಲುವಾಸಿಗಳ ಕೆಲಸದ ನೋಟ (ಸಾಂದರ್ಭಿಕ ಚಿತ್ರ)

ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವುದು ಹೇಗೆ ಎಂದು ದಾರಿ ಹುಡುಕತೊಡಗಿದೆ. ಆ ಸಮಯದಲ್ಲಿ ಮಾಹಿತಿಯೊಂದು ಸಿಕ್ಕಿತು. ಬಂದಿಗಳ ಕೂಲಿ ಹೆಚ್ಚಳದ ಕುರಿತು ‘ಕೂಲಿ ನಿಗದಿ ಮಂಡಳಿ’ ಆದೇಶ ಹೊರಡಿಸಿದ್ದರೂ ಜೈಲು ಅಧಿಕಾರಿಗಳು ಜಾರಿಗೆ ತಡೆಯೊಡ್ಡಿದ್ದರು. ನಾವು ಕೆಲವು ಸ್ನೇಹಿತರು, ಸಂಬಂಧಪಟ್ಟ ದಾಖಲೆಗಳನ್ನು ಆಡಳಿತಾಧಿಕಾರಿಗಳ ಕಚೇರಿಯಿಂದಲೇ ಗುಪ್ತವಾಗಿ ತರುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದೆವು. ದಾಖಲೆಗಳು ಕೈ ಸೇರಿದ ಮೇಲೆ ’ಬಂದಿಗಳ ಕೆಲಸಕ್ಕೆ ಸಮಾನ ಕೂಲಿ’ ಎಂಬ ಬರವಣಿಗೆ ಹೋರಾಟ ಆರಂಭಿಸಿದೆವು. ಯಾವುದೇ ಅಧಿಕಾರಿಗಳ ಮುಂದೆ ನಿಂತು ಸಮಸ್ಯೆಗಳನ್ನು ಧೈರ್ಯವಾಗಿ ಮಂಡಿಸುವಂತಹ ನಾಯಕತ್ವದ ಗುಣ ಹೊಂದಿದ್ದ ಧರಣೇಶ್, ಒಂದು ಯೋಜನಾಬದ್ಧ ದೂರು ಸಿದ್ಧಪಡಿಸಿದರು. ಅವರು ಹೇಳುತ್ತಾ ಹೋದರು, ನಾನು ಬರೆಯುತ್ತಾ ಹೋದೆ.

ದೂರಿನ ಸಾರಾಂಶ ಹೀಗಿತ್ತು: ‘ಸೆರೆವಾಸಿಗಳಾದ ನಾವು ಪ್ರತಿದಿನ ಅಡುಗೆ ಮನೆಯಲ್ಲಿ 4,000 ಜನರಿಗೆ ಮೂರು ಹೊತ್ತಿನ ತಿಂಡಿ– ಊಟ ತಯಾರಿಸಿ ಎಲ್ಲರಿಗೂ ಬಡಿಸುತ್ತೇವೆ. ಮರಗೆಲಸದಿಂದ ರಾಜ್ಯದ ನೂರಾರು ನ್ಯಾಯಾಲಯಗಳಿಗೆ ಟೇಬಲ್, ಮೇಜು ಇತ್ಯಾದಿ ಮಾಡಿಕೊಡುತ್ತೇವೆ. ರಾಜ್ಯದ ನೂರಾರು ಆಸ್ಪತ್ರೆಗಳಿಗೆ ಮಂಚ, ಬೀರು, ಚೇರುಗಳು ನಮ್ಮಿಂದಲೇ ತಯಾರಾಗುತ್ತವೆ. ನೇಯ್ಗೆಯಿಂದ ಬಟ್ಟೆ, ತೋಟಗಾರಿಕೆಯಿಂದ ವಿವಿಧ ತರಕಾರಿಗಳನ್ನು ಬೆಳೆಯುತ್ತೇವೆ. ಹಂದಿ, ಕುರಿ, ದನಗಳ ಸಾಗಾಣಿಕೆ, ಆಸ್ಪತ್ರೆ ವಿಭಾಗದಲ್ಲಿ ಕೆಲಸ, ನೀರು ಸರಬರಾಜು, ವಿದ್ಯುತ್ ನಿರ್ವಹಣೆ, ಜೈಲಿನ ಸಂಪೂರ್ಣ ಸ್ವಚ್ಛತೆ, ಗ್ರಂಥಾಲಯ ನಿರ್ವಹಣೆ, ಪಾಠಶಾಲೆ, ರಾತ್ರಿ ಸಮಯ ಜೈಲು ಮತ್ತು ಬಂದಿಗಳ ಕಾವಲುಗಾರರಾಗಿ ಕೆಲಸ ಹಾಗೂ ಕಚೇರಿಗಳಲ್ಲಿ ಗುಮಾಸ್ತರಾಗಿ ದುಡಿಯಬೇಕಾಗುತ್ತದೆ.’

‘ರಾಜ್ಯದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶೇ 90ರಷ್ಟು ಬಂದಿಗಳು ದಿನಗೂಲಿಗಳು. ಬಹುತೇಕ ರೈತಾಪಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು. ಕಾನೂನಿನ ಅರಿವು ಹಾಗೂ ಶೈಕ್ಷಣಿಕ ತಿಳಿವಳಿಕೆ ಕೊರತೆಯಿಂದಾಗಿ ಮಾಡಿದ ತಪ್ಪಿಗಾಗಿ ಹತ್ತಾರು ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಮ್ಮ ತಪ್ಪಿನಿಂದಾಗಿ ಕುಟುಂಬಗಳು ಸಾಮಾಜಿಕ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿವೆ. ಎಷ್ಟೋ ಪ್ರಕರಣಗಳ ಮೇಲ್ಮನವಿ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಇದರ ಜೊತೆಗೆ ವಕೀಲರ ಶುಲ್ಕ ದುಬಾರಿಯಾಗಿದ್ದು, ವಕೀಲರ ಲಭ್ಯತೆ ಬಡವರ ಕೈಗೆಟುಕದ ಸ್ಥಿತಿಯಿದೆ. ಜತೆಗೆ ನ್ಯಾಯಾಲಯ ವಿಧಿಸಿದ ದಂಡ ಪಾವತಿಸಬೇಕು. ಈ ದಂಡ ಪಾವತಿಸಲಾಗದೆ ಎಷ್ಟೋ ಬಂದಿಗಳು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ.’

‘ಪ್ರತಿಯೊಂದು ವಿಷಯದಲ್ಲೂ ಹಣದ ಅನಿವಾರ್ಯತೆ ಬಂದಿಗಳಿಗೆ ಎದುರಾಗುತ್ತದೆ. ಪ್ರಾಮಾಣಿಕವಾಗಿ ಜೈಲಿನಲ್ಲಿ ದುಡಿಯುತ್ತಿರುವ ಬಂದಿಗಳು ಹತ್ತು, ಹದಿನೈದು ಇಲ್ಲವೇ ಇಪ್ಪತ್ತು ರೂಪಾಯಿ ಕೂಲಿಗೆ ದಿನದ ಎಂಟು ತಾಸುಗಳ ಕಾಲ ಶ್ರಮ ಪಡಬೇಕಾಗಿದೆ. ಕೆಲಸಕ್ಕೆ ಅನುಗುಣವಾಗಿ ಸಮಾನ ಕೂಲಿ ಕೇಳುವುದು ನ್ಯಾಯದ ಮಾರ್ಗ. ಆದರೆ, ಕಾರಾಗೃಹಗಳಲ್ಲಿ ದುಡಿಯುತ್ತಿರುವ ಶಿಕ್ಷಾ ಬಂದಿಗಳಿಗೆ ಅತ್ಯಂತ ಕಡಿಮೆ ಕೂಲಿ ನೀಡುತ್ತಾ ವಂಚಿಸಿರುವ ರಾಜ್ಯ ಕಾರಾಗೃಹ ಇಲಾಖೆ, ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ.’

–ಹೀಗೆ ವಿವರವಾದ ಹನ್ನೆರಡು ಪುಟಗಳ ದೂರನ್ನು ಸುಪ್ರೀಂಕೋರ್ಟ್‌, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಳುಹಿಸಿದೆವು.

ದೂರನ್ನು ತುಂಬ ಗಂಭೀರವಾಗಿ ಪರಿಗಣಿಸಿದ ಆಯೋಗ, ಸಂಖ್ಯೆ, ಮಾ.ಹ.ಆ/ವ.ಸ/ 8515/ 2010(ಬಿ-2) ಅಡಿ ದೂರು ದಾಖಲಿಸಿಕೊಂಡಿತು. ದೂರು ಪತ್ರವನ್ನು ಕಾರಾಗೃಹಗಳ ಮಹಾನಿರೀಕ್ಷಕರಿಗೆ ರವಾನಿಸಿ ಶೀಘ್ರ ಕ್ರಮ ಜರುಗಿಸಿ, ಕ್ರಮ ಜರುಗಿಸಿದ್ದರ ಬಗ್ಗೆ ಆರು ವಾರಗಳಲ್ಲಿ ವಿವರವಾದ ವರದಿ ಆಯೋಗಕ್ಕೆ ಸಲ್ಲಿಸಲು ಆದೇಶಿಸಿತು.

ಈ ಸಂದರ್ಭದಲ್ಲೇ ನನ್ನ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 15 ದಿಗಳ ಕಾಲ ಪೆರೋಲ್ ಸೌಲಭ್ಯ ಪಡೆದು ಊರಿಗೆ ಬಂದೆ. ದೊಡ್ಡಬಳ್ಳಾಪುರದಲ್ಲಿ ರೈತಪರ ಹೋರಾಟಗಾರ ಡಾ.ಎನ್. ವೆಂಕಟರೆಡ್ಡಿ ಅವರೊಂದಿಗೆ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಾ, ಬಂದಿಗಳ ಕೂಲಿ ಹೆಚ್ಚಳದ ಬಗ್ಗೆಯೂ ಮಾತುಕತೆ ನಡೆಸಿದೆ.

ಒಂದು ವಾರದ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿದ್ದ ಎಸ್.ಆರ್. ನಾಯಕ್ ಅವರನ್ನು ಖುದ್ದಾಗಿ ಭೇಟಿ ಮಾಡಲು ವ್ಯವಸ್ಥೆ ಮಾಡಿಸಿದರು. ಬಂದಿಗಳ ಕೂಲಿಯಲ್ಲಿ ಅನ್ಯಾಯದ ಕುರಿತು ವಿವರಿಸಿದೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಮುಖ್ಯಸ್ಥರು ಶೀಘ್ರವಾಗಿ ಇತ್ಯರ್ಥಪಡಿಸಿ ಮೂವತ್ತು, ನಲವತ್ತು ಮತ್ತು ಐವತ್ತು ರೂಪಾಯಿವರೆಗೆ ಬಂದಿಗಳಿಗೆ ಕೂಲಿ ಹೆಚ್ಚಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಕಾರಾಗೃಹಗಳ ಇಲಾಖೆಗೆ ಆದೇಶ ಹೊರಡಿಸಿದರು.

ಇದರಿಂದ ಸಹಜವಾಗಿಯೇ ಜೈಲು ಆಡಳಿತಾಧಿಕಾರಿಗಳು ಕುಪಿತರಾದರು. ಹೋರಾಟದ ಮುಂದಾಳತ್ವ ವಹಿಸಿದ್ದ ಧರಣೇಶ್, ರಾಧಾಕೃಷ್ಣ, ವಿಠಲ್‍ರಾವ್, ಬಸವರಾಜ್ ಮತ್ತು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ, ನೂರಾರು ಕಿ.ಮೀ ದೂರದ ಜೈಲುಗಳಿಗೆ ವರ್ಗಾಯಿಸುವ ನಿರ್ಧಾರಕ್ಕೆ ಬಂದರು. 13 ಏಪ್ರಿಲ್‌ 2011ರಂದು ತಂದೆ ನಿಧನರಾದ ಕಾರಣದಿಂದ ಅಂತ್ಯ ಸಂಸ್ಕಾರಕ್ಕಾಗಿ ಊರಿಗೆ ಬರುವಂತಾಯಿತು. ಇದಾದ ನಾಲ್ಕು ದಿನಗಳಿಗೆ ಧರಣೇಶ್, ರಾಧಾಕೃಷ್ಣ, ವಿಠಲ್‍ರಾವ್ ಮತ್ತು ಬಸವರಾಜ್‍ ಅವರನ್ನು ರಾತ್ರೋರಾತ್ರಿ ಹಿಂಸಾತ್ಮಕವಾಗಿ ದೂರದ ಜೈಲಿಗೆ ವರ್ಗಾಯಿಸಿದರು.

ಈ ರೀತಿ ವರ್ಗಾವಣೆಯಾದ ಸ್ನೇಹಿತರ ಜೈಲು ಜೀವನ ಅನೇಕ ದುರಂತಗಳಿಗೆ ಕಾರಣವಾಯಿತು. ಅದರಲ್ಲಿ ರಾಧಾಕೃಷ್ಣ, ಪತ್ನಿ ಮತ್ತು ಮಗುವಿನಿಂದ ಶಾಶ್ವತವಾಗಿ ದೂರವಾಗಬೇಕಾಯಿತು. ಆದರೆ ನಮ್ಮ ಹೋರಾಟ ಫಲ ಕೊಟ್ಟಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಬಂದಿಗಳ ಕೂಲಿ ಪರಿಷ್ಕರಿಸುವ ಆದೇಶ ಜಾರಿಯಾಯಿತು. ತರಬೇತಿ ಕೆಲಸಗಾರನಿಗೆ ₹ 175, ಕುಶಲ ಕೆಲಸಗಾರನಿಗೆ ₹ 200, ಹೆಚ್ಚು ಕುಶಲ ಕೆಲಸಗಾರನಿಗೆ ₹ 225 ಮತ್ತು ಅತಿ ಹೆಚ್ಚು ಕುಶಲಗಾರನಿಗೆ ₹ 250 ರೂಪಾಯಿ ಕೂಲಿ ಹೆಚ್ಚಳ ಮಾಡಲಾಯಿತು. ಈ ನಿಯಮ ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲೂ ಜಾರಿಗೆ ಬಂತು.

ಈಗಲೂ ಜೈಲು ಬಂದಿಗಳು ದುಡಿದ ಹಣದಲ್ಲಿ ಪ್ರತಿ ದಿನವೂ 100 ರೂಪಾಯಿಗಳನ್ನು ಊಟ ಮತ್ತು ಬಟ್ಟೆಗೆ ಕಡಿತಗೊಳಿಸಲಾಗುತ್ತಿದೆ. ಈ ಕಾರಣದಿಂದಲೇ ಕಾರಾಗೃಹಗಳಲ್ಲಿ ಹೆಚ್ಚಿನ ಬಂದಿಗಳು ಕೆಲಸಗಳಿಗೆ ಹೋಗುವುದಿಲ್ಲ. ಇದರಿಂದ ಜೈಲಿನ ಕಾರ್ಖಾನೆ ವಿಭಾಗದಲ್ಲಿರುವ ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರಗಳು ಮೂಲೆ ಸೇರಿವೆ. ಬಂದಿಗಳ ಊಟ ಮತ್ತು ಬಟ್ಟೆಗಳಿಗೆ ವೇತನದಲ್ಲಿ ಕಡಿತಗೊಳಿಸದೆ ಪೂರ್ಣ ಪ್ರಮಾಣದ ಕೂಲಿ ನೀಡಿದರೆ ಬಂದಿ ಕೆಲಸಗಾರರ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ಸರ್ಕಾರದ ಬೊಕ್ಕಸವೂ ತುಂಬುತ್ತದೆ. ವಿಪರ್ಯಾಸ ಎಂದರೆ ಕೆಲಸ ಮಾಡದ ಕೈದಿಗಳಿಗೂ ಜೈಲಿನಲ್ಲಿ ಊಟ, ಬಟ್ಟೆ ಕೊಡಲಾಗುತ್ತದೆ. ಕೆಲಸ ಮಾಡುವವರಿಂದ ದುಡ್ಡು ವಸೂಲಿ ಮಾಡುವ ಜೈಲು ಆಡಳಿತ, ಕೆಲಸ ಮಾಡದವರಿಗೆ ಉಚಿತವಾಗಿ ಊಟ– ಬಟ್ಟೆ ಕೊಡುತ್ತದೆ! ಅಂದರೆ ದುಡಿಯುವುದು ದಂಡಾರ್ಹವೆ? ಇದೂ ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೆ?

ಅಂದ ಹಾಗೆ 2015ರ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಜೈಲುಗಳಲ್ಲಿ 8,815 ಕೈದಿಗಳಿದ್ದರು. ಇವರಲ್ಲಿ 3,883 ಜನರು ಮಾತ್ರ ಶಿಕ್ಷೆ ಅನುಭವಿಸುವವರು. ಉಳಿದವರೆಲ್ಲ ವಿಚಾರಣಾಧೀನ ಕೈದಿಗಳು.

(ಲೇಖಕರು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ, ಪರಿವರ್ತನೆಗೊಳಗಾಗಿ ಕಳೆದ ವರ್ಷ ಬಿಡುಗಡೆ ಆಗಿದ್ದಾರೆ. ಅವರ ಜೈಲು ಅನುಭವಗಳನ್ನು ದಾಖಲಿಸಿರುವ ‘ಜೈಲು ಜೀವಗಳು’ ಎನ್ನುವ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ.)

ಗೋಡೆಗೆ ಬಣ್ಣ ಬಳಿಯುವುದರಲ್ಲಿ ನಿರತರಾಗಿರುವ ಕೈದಿಗಳು. (ಸಾಂದರ್ಭಿಕ ಚಿತ್ರ)
ಗೋಡೆಗೆ ಬಣ್ಣ ಬಳಿಯುವುದರಲ್ಲಿ ನಿರತರಾಗಿರುವ ಕೈದಿಗಳು. (ಸಾಂದರ್ಭಿಕ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT