ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ವಿ.ರಾಜಲಕ್ಷ್ಮಿ ಅವರು ಬರೆದ ಕಥೆ: ಸಂಗಮ

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

‘ರಂಜೀ, ನಿನಗೊಂದು ಪ್ರೊಫೈಲ್ ಕಳಿಸಿದ್ದೀನಿ ನೋಡು, ರಾತ್ರಿಹೊತ್ತಿಗೆ ನಿನ್ನ ಅಭಿಪ್ರಾಯ ಹೇಳು’

ಸುರಭಿಯ ಸಂದೇಶ, ಜೊತೆಗೊಂದು ಅಟ್ಯಾಚ್ಮೆಂಟ್.

ಇವತ್ತು ಒಂದು ದಿನನಿರ್ಬಂಧಿತ ರಜೆ ಹಾಕಿದರೆ ಎರಡು ದಿನ ಸಾರ್ವತ್ರಿಕ ರಜೆ.

ಕಚೇರಿಯಲ್ಲಿ ಗೈರು ಹೆಚ್ಚಿತ್ತು. ರಜೆ ತೆಗೆದುಕೊಂಡು ಮನೆಯಲ್ಲಿ ಕಡಿದು ಹಾಕುವುದಕ್ಕೆ ಏನಿಲ್ಲ. ವಾರದ ರಜೆ ಒಂದೇ ಸಾಕು, ಆರು ದಿನಗಳ ಬೇಸರ, ಯಾಂತ್ರಿಕತೆ ಕಳೆದು ರಿಫ್ರೆಶ್ ಆಗಲು. ಎರಡು ದಿನ ರಜೆ ಬಂದರೆ ಚಡಪಡಿಸುವಂತಾಗುತ್ತೆ. ಮಾಡಲು ಬೇರೇನಾದರೂ ಕೆಲಸವಿದ್ದರೆ ತಾನೇ? ಮನೆಗೆಲಸವನ್ನು ಪ್ರತ್ಯೇಕವಾಗಿ ಕೆಲಸ ಅಂತ ಭಾವಿಸೆಯೇ ಇಲ್ಲ. ಇಷ್ಟು ದಿನ ಅಮ್ಮ ಇದ್ರು. ಅವಳು ಹೋಗಿ ವರ್ಷಕ್ಕೆ ಹತ್ತಿರ. ಅವಳಿರುವ ತನಕ ಏನೋ ಮಾತುಕತೆ ಅಂತ ಅವಳು ಹೇಳಿದ್ದನ್ನೆಲ್ಲ ಹೆಚ್ಚು ಪ್ರತಿಕ್ರಿಯಿಸದೆ ಕೇಳಿಸಿಕೊಂಡಿದ್ದೆ. ಈಗ ಹೇಳುವವರೂ ಇಲ್ಲ.

ಯಾಕಿಲ್ಲ ಅಂದ್ಕೊಬೇಕು? ಸುರಭಿ ಇದ್ದಾಳಲ್ಲ ? ಇನ್ನೂ ನನ್ನ ಜೀವನದ ಮೇಲೆ ಕಾಳಜಿ ಇರೋವ್ಳು ಅಂದ್ರೆ ಅವಳೊಬ್ಬಳೆ.

*****

ಮನಸ್ಸು ಯಾಕೋ ಮತ್ತೆ ಗತವನ್ನು ನೆನೆಯಿತು

‘ಬ್ಯಾಂಕ್ ನೌಕರಿ, ರಂಜನಿ ರೂಪ ಗುಣಕ್ಕೆ ಹೇಳಿ ಮಾಡಿಸಿದಂತೆ ಹುಡುಗ ಇದ್ದಾನೆ’ ಎಂದಿದ್ದ ದಲ್ಲಾಳಿ ಉಮಾಪತಿ ಮಾತನ್ನು ನಂಬದೇ ಇರೋಕ್ಕಾಗಿರಲಿಲ್ಲ, ತಿಂಗಳೊಪ್ಪತ್ತಿಗೆ ಜಗದೀಶನೊಂದಿಗೆ ಮದುವೆಯಾಗಿತ್ತು. ಊಟಿಯಲ್ಲಿ ನಾಲ್ಕು ದಿನ ಠಿಕಾಣಿ ಹಾಕಿ ಮನಸೋಯಿಚ್ಛೆ ನಲಿದಿದ್ದು ಆಗಿತ್ತು. ಆರು ತಿಂಗಳೂ ಕಳೆಯಲಿಲ್ಲ, ಆಷಾಡಕ್ಕೆ ಅಮ್ಮನ ಮನೆಗೆ ಬಂದವಳು ಮತ್ತೆ ಮೊದಲ ದೀಪಾವಳಿಗೆ ಅಮ್ಮನ ಮನೆಗೆ ಹೋಗುವ ಕನಸು ಈಡೇರಲೇ ಇಲ್ಲ. ಹೊಟ್ಟೆ ನೋವು ಅವರನ್ನು ನುಂಗಿತ್ತು. ‘ರೋಗ ಮುಚ್ಚಿಟ್ಟು ಮದುವೆ ಮಾಡಿದಿರಿ’ ಎಂದು ನನ್ನ ‌‌‌ಮನೆಯವರೂ, ‘ಇವಳನ್ನ ಕಟ್ಕೊಂಡ ಮೇಲೆ ರೋಗ ಬಂತು’ ಅಂತ‌ ಅತ್ತೆಯ ಮನೆಯಲ್ಲಿ; ಆರೋಪ ಪ್ರತ್ಯಾರೋಪಗಳ ನಡುವೆ ನಾನು ಬಸವಳಿದಿದ್ದೆ.

ಹಾಗೆ ನೋಡಿದರೆ ಜಗದೀಶರೊಂದಿಗಿನ ಬಾಳ್ವೆ ಆರಕ್ಕೇರದ ಮೂರಕ್ಕಿಳಿಯದ ಎನ್ನುವ ಮಟ್ಟಿಗೆ ತೃಪ್ತಿದಾಯಕವೇ. ಅತ್ತೆ ಮಾವ, ಮೈದುನ ನಾದಿನಿಯರೊಟ್ಟಿಗಿದ್ದ ಕೂಡು ಕುಟುಂಬ. ಮದುವೆಯಾದ ಮೇಲೂ ಎರಡು ಬಾರಿ ಹೊಟ್ಟೆನೋವಿನಲ್ಲಿ ನರಳಿದ್ದರೂ ಹಾಸಿಗೆ ಹಿಡಿಯುವ ಮಟ್ಟಕ್ಕೆ ಹೋಗಿರಲಿಲ್ಲ. ವಿಧಿ, ದೀಪಾವಳಿಗೆ ಮೊದಲು ಕಾಣಿಸಿಕೊಂಡ ಬೇನೆ ಅವರನ್ನು ಕಬಳಿಸಿಬಿಟ್ಟಿತ್ತು. ಬೆಳಕಿಲ್ಲದ ಹಬ್ಬ ನನ್ನ ಪಾಲಿಗೆ. ಈ ನೋವಿನ ನಡುವೆ ಅವರ ಆಫೀಸಿನ ದಾಖಲೆಗಳಲ್ಲಿ ನನ್ನ ಹೆಸರೇ ನಾಮನಿರ್ದೇಶನ. ‘ಕೆಲಸವನ್ನಾದರೂ ಬಿಟ್ಟುಕೊಡಬಹುದಿತ್ತು’ ಮೈದುನನಿಗೆ ಆದೀತು ಎಂಬ ಹಿರಿದಾಸೆ ಅತ್ತೆಮನೆಯವರಿಗೆ. ‘ಆ ಪ್ರಸಕ್ತಿಯೇ ಇಲ್ಲ’ ಎಂದು ಅಣ್ಣನೇ ಮುಂದೆ ನಿಂತು ನೌಕರಿ, ಪರಿಹಾರ ಕೊಡಿಸುವಲ್ಲಿ ಜೊತೆಯಾಗಿದ್ದ. ಅನುಕಂಪದ ಆಧಾರದ ಮೇಲೆ ಕೆಲಸ ಮೊದಲುಗೊಂಡು ಮೃತ ನೌಕರನ ಕುಟುಂಬಕ್ಕೆ ಸಿಗುವ ಅಂತಿಮ ಪರಿಹಾರದ ಮೊತ್ತ ನನ್ನ ಹೆಸರಿಗೇ ಬಂದಾಗ ಅತ್ತೆ ಮನೆಯವರ ಸಂಬಂಧ ಸಂಪೂರ್ಣವಾಗಿ ಕಳಚಿತ್ತು. ಹೊಸ ಊರಿನಲ್ಲಿ ಕೆಲಸ. ಅಮ್ಮ ಅಪ್ಪ ಜೊತೆಗೆ ಬಂದಿದ್ದರು. ‘ನಿನ್ನ ಬದುಕಿಗೆ ನಾನೇ ಕೊಳ್ಳಿ ಇಟ್ಟೆ ಮಗು ನನಗೆ ಬದುಕೋಕ್ಕೆ ಅರ್ಹತೆ ಇಲ್ಲ’ ಅಂತ ಅಪ್ಪ ಕೊರಗುತ್ತಲೇ ಕಣ್ಮುಚ್ಚಿದ್ದರು.

*****

ರಾತ್ರಿ ಮನೆಗೆಲಸವನ್ನೆಲ್ಲ ಮುಗಿಸಿ ಮೊಬೈಲ್ ತೆರೆದು ಸುರಭಿ ಕಳುಹಿಸಿದ್ದ ಅಡಕ ನೋಡಿದೆ. ಹುಡುಗ...ಛೇ, ಹುಡುಗನೇನೂ ಬಂದು ನಲವತ್ತೆರಡು ವರ್ಷ, ವರ ಅನ್ನಬಹುದು, ಅನುದಾನಿತ ಶಾಲೆಯ ಪ್ರಾಂಶುಪಾಲರು, ಕಾರಣಾಂತರಗಳಿಂದ ಮದುವೆಯಾಗಿಲ್ಲ, ವಿವಾಹಿತ, ವಿಚ್ಛೇದಿತೆ ಆದರೂ ಪರವಾಗಿಲ್ಲ ಅಂದಿದ್ದಾರೆ. ಮದುವೆಯಾಗದ ತಮ್ಮ ಜೊತೆಯಲ್ಲೇ ಇದ್ದಾನೆ. ವಯಸ್ಸಾದ ಅಮ್ಮ, ಅಪ್ಪ ಹಳ್ಳಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ವಾಸ. ಯಾಕೋ ಬೇಡವೆನಿಸಿತು.

ಸುಮಾರು ಹನ್ನೆರಡು ವರ್ಷಗಳಿಂದ- ಈ ತಾಲೂಕಿಗೆ ಬಂದವಳು, ಇಲ್ಲಿಗೇ ಹೊಂದಿಕೊಂಡಿರುವೆ. ಇಪ್ಪತ್ತು ಕಿಲೋಮೀಟರ್ ವರ್ತುಲದಲ್ಲಿ ನಾಲ್ಕು ತಾಲೂಕುಗಳು. ವರ್ಗದ ನೆಪದಲ್ಲಿ ಎರಡು ತಾಲೂಕುಗಳಲ್ಲಿ ಸೇವೆ ಸಲ್ಲಿಸಿಯಾಯ್ತು. ಅಂತಹ ಪ್ರದೇಶಕ್ಕೆ ಒಗ್ಗಿಕೊಂಡಿದ್ದವಳಿಗೆ ಮಹಾನಗರದ ಗೊಂದಲವೇ ಬೇಡ ಇಲ್ಲೇ ಹಾಯಾಗಿದೆ ಅನ್ನಿಸಿಬಿಟ್ಟಿತ್ತು. ಅಮ್ಮನ ಕಡೆಯ ಬಂಧು, ಕುಮುದ ಆಂಟಿ ಮನೆ, ಮೊದಲ ಮಹಡಿಯಲ್ಲಿ ನಮ್ಮ ಹೊಸ ವಿಳಾಸ; ಯಾವುದೇ ತಕರಾರಿಲ್ಲ. ಅವರ ಮಗಳೇ ಸುರಭಿ. ನನಗಿಂತ ಐದು ವರ್ಷಕ್ಕೆ ದೊಡ್ಡವಳು. ಮದುವೆಯಾಗಿ ಬೆಂಗಳೂರಿನಲ್ಲಿ ಇದ್ದಾಳೆ. ವಿಧವೆಯಾಗಿ ಮೂರು ವರ್ಷಗಳು ಕಳೆಯುವುದರೊಳಗೆ, ಹಿರಿಯರ ಸಮ್ಮತಿಯೊಂದಿಗೆ,ಇತ್ತೀಚಿಗೆ ಅವಳ ನಾದಿನಿ ಸ್ನೇಹಳ ಮದುವೆಯಾಗಿತ್ತು. ಅವಾಗಿಲಿನಿಂದ ನನಗೂ ಒತ್ತಡ ಹಾಕತೊಡಗಿದ್ದಳು. ‘ಇವತ್ತೆಲ್ಲಾ ಮೂವತ್ತೈದು ವರ್ಷ ಎಷ್ಟೋ ಹೆಣ್ಣುಮಕ್ಕಳಿಗೆ ಕಂಕಣಬಲವೇ ಕೂಡಿರೋಲ್ಲ. ಈಗ ಕಾಲ ಬದಲಾಗಿದೆ ಸೂಕ್ತ ಜೊತೆ ಸಿಕ್ಕರೆ ಮಾಡಿಕೋ’ ಎಂದು ತಲೆ ತಿನ್ನುತ್ತಿದ್ದಳು.ಇದಕ್ಕೆ ಅವರಮ್ಮನ ಸಾಥ್. ‘ಈಗಲೇ ತಡವಾಗಿದೆ, ಮಕ್ಕಳು ಮರಿಯಿಲ್ಲ, ಒಳ್ಳೆ ವರ ಸಿಕ್ಕರೆ ಯೋಚನೆ ಮಾಡು, ಜೀವನದಲ್ಲಿ ತುಂಬಾ ದೂರಕ್ಕೆ ಸಾಗಬೇಕು ರಂಜು’ ಎಂದು ಅಕ್ಕರೆ ತೋರುವಾಗ ಗೋಣಾಡಿಸಿದ್ದೆ. ಮೂರ್ನಾಲ್ಕು ಪ್ರೊಫೈಲ್‌ಗಳು ಬಂದಿದ್ದವು,ನನಗೆ ಯಾಕೋ ಸರಿಹೋಗಿರಲಿಲ್ಲ. ಫಕ್ಕನೆ ಸೆಳೆಯಲೂ ಋಣವಿರಬೇಕೇನೋ ಅನ್ನಿಸುತ್ತಿತ್ತು.

ಮಲಗುವ ಮುನ್ನ ಸುರಭಿಗೆ ಕರೆ ಮಾಡಿ ‘ಹಿಡಿಸಲಿಲ್ಲ’ ಎಂದುಬಿಟ್ಟೆ.

‘ಹೋಗಲಿಬಿಡು, ಬೇರೆ ನೋಡಿದರಾಯ್ತು, ಹಾಂ, ನಾಳೆ ಮಧ್ಯಾಹ್ನ ಅಲ್ಲಿಗೆ ಬರ್ತಿದ್ದೀವಿ. ನಾಡಿದ್ದು ಬೆಳಿಗ್ಗೆ ಅಂಬಾಪುರಕ್ಕೆ, ಅಲ್ಲಿಂದ ಸಂಗಮಕ್ಕೆ ಹೋಗುವ ಉದ್ದೇಶ. ಅಮ್ಮನೂ ಬರ್ತೀನಿ ಅಂದ್ಳು, ನೀನೂ ಬಾ, ಆಯ್ತಾ ನಾಳೆ ಸಿಗೋಣ’ ಎಂದು ಕರೆ ಮುಗಿಸಿದ್ದಳು.

*****

ಸುರಭಿ ಮನೆಗೆ ಬಂದಿಳಿದಾಗ ಗಂಟೆ ಮೂರು. ‘ಹೊರಡೋದೇ ಲೇಟಾಯ್ತು ಕೊನೇ ಗಳಿಗೇಲಿ ಮಕ್ಕಳು ಬರೋಲ್ಲ ಅಂದ್ಬಿಟ್ರು, ಹೀಗಾಗಿ ನಾನು ಧನಂಜಯ್ ಇಬ್ರೇ ಬಂದ್ವಿ. ಕಾರಲ್ಲಿ ಇವರ ಜೊತೆ ಅಪ್ಪ ಮುಂದೆ ಕೂರ್ತಾರೆ, ಹಿಂದಕ್ಕೆ ನಾನು, ನೀನು, ಅಮ್ಮ ಏನೂ ತೊಂದರೆಯಿಲ್ಲ ಆಯ್ತಾ? ನಾಳೆ ಬೆಳಿಗ್ಗೆ ಸ್ನೇಹನ ಕುಟುಂಬದವರೂ ನೇರ ಅಂಬಾಪುರಕ್ಕೇ ಬರ್ತಾರೆ. ಅವರ ಮನೆ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸಂಗಮಕ್ಕೆ ಹೋಗೋದು ಅಂತ. ಊಟೋಪಚಾರ ಎಲ್ಲಕ್ಕೂ ವ್ಯವಸ್ಥೆ ಆಗಿದೆ ಯೋಚನೆ ಇಲ್ಲ’ ಎಂದಾಗ ಮತ್ತೆ ಯೋಚನೆ ಶುರುವಾಯಿತು

‘ಅವರೆಲ್ಲ ಬರ್ತಾರೆ ಅಂದರೆ ನನಗೆ ಬರೋಕ್ಕೆ ಸಂಕೋಚ...’ ದನಿ ತಗ್ಗಿತ್ತು.

‘ಎಂಥದ್ದೂ ಇಲ್ಲ, ನೀನೂ ಬಾ, ಯಾರು ಕಂಡರು? ಆ ಗುಂಪಲ್ಲಿ ಯಾರಾದ್ರೂ ಕಣ್ಣಿಗೆ ಬಿದ್ರೂ ಬೀಳಬಹುದು’ ಕಣ್ಣು ಮಿಟುಕಿಸಿದಾಗ ನಾಚಿದ್ದೆ.

ಸಂಜೆ ಪೇಟೆ ಕಡೆ ಹೋಗಿ ತಿರುಗಾಡಿ ಬರುವ ಹೊತ್ತಿಗೆ ಎಂಟರ ಸಮೀಪ. ‘ಬೆಳಿಗ್ಗೆ ಏಳೂವರೆಗೆ ಇಲ್ಲಿಂದ ಹೊರಡೋದು. ಅಂಬಾಪುರ ತಲುಪೋ ಹೊತ್ತಿಗೆ ಒಂಬತ್ತಾಗಿರುತ್ತೆ. ದೇವಸ್ಥಾನಕ್ಕೆ ಹೋಗ್ತಿರೋದು ಒಳ್ಳೆಯ ರೇಷ್ಮೆ ಸೀರೆನೇ ಉಟ್ಕೋ’ ಸುರಭಿಯ ಮಾತು ನೆನಪಾಗಿ ಬೀರುವಿನಿಂದ ಗೌರಿ ಹಬ್ಬಕ್ಕೆ ಖರೀದಿಸಿದ್ದ ನಶ್ಯದ ಬಣ್ಣದ ಒಡಲಿಗೆ ಕೆಂಪು ಅಂಚಿದ್ದ ಸೀರೆಯನ್ನು ತೆಗೆದಿರಿಸಿಕೊಂಡೆ.

*****

ಬೆಳಿಗ್ಗೆ ನಿಗದಿತ ಸಮಯಕ್ಕೆ ಕೆಳಗಿನ ಸುರಭಿ ಮನೆಗೆ ಹೋದೆ. ‘ಬಾ ಇನ್ನೇನು ಹೊರಡೋದೆ’ ಸುರಭಿ ಆಹ್ವಾನಿಸಿದಾಗ ‘ತೊಗೋ, ಹೆರಳಿಗೆ ಇದನ್ನು ಮುಡ್ಕೊ’ ಎಂದು ಪ್ರೀತಿಯಿಂದ ಕುಮುದಾ ಆಂಟಿ, ನನಗೆ ಅತ್ಯಂತ ಪ್ರಿಯವಾದ ಮಲ್ಲಿಗೆ ಹೂವನ್ನು ಕೈಗಿಟ್ಟಾಗ ಕಣ್ತುಂಬಿತ್ತು. ‘ಬೇಸರ ಯಾಕೆ?ಕುಂಕುಮ, ಹೂವು ಹುಟ್ಟಿನಿಂದ ಹೆಣ್ಣಿನ ಒಡವೆ ಯಾರೂ ಕಿತ್ಕೊಳ್ಳೋಕ್ಕಾಗೋಲ್ಲ, ಕಾಲ ಬದಲಾದ ಹಾಗೆ ನಾವೂ ಬದಲಾಗದಿದ್ದರೆ ನಮ್ಮನ್ನು ಮನುಷ್ಯರು ಅಂತಾರೇನು?’ ನನ್ನ ಮನದಾಳವನ್ನು ಗಮನಿಸಿ ಸಂತೈಸಿದಾಗ ಗತಿಸಿದ ಅಮ್ಮನ ನೆನಪಾಯಿತು. ಗಟ್ಟಿಯಾಗಿ ಹೆಣೆದರೂ ಸೊಂಟದವರೆಗೂ ಇಳಿದಿದ್ದ ಜಡೆಗೆ, ಮಲ್ಲಿಗೆ ಮುಡಿದೆ.

ಪ್ರಯಾಣದುದ್ದಕ್ಕೂ ಹಿಂದೆ ಕುಳಿತಿದ್ದ ನಾನು ಸುರಭಿ ಹರಟುತ್ತಲೇ ಇದ್ದೆವು. ನೋಡನೋಡುತ್ತಿದ್ದಂತೆ ಅಂಬಾಪುರ ತಲುಪಿದ್ದೆವು.

‘ಬನ್ನಿ, ನಾವು ಬಂದು ಹತ್ತು ನಿಮಿಷವಾಯಿತು’ ಎಂದು ಸ್ನೇಹಳ ಮಾವ ಅತ್ತೆ ನಮ್ಮನ್ನು ಸ್ವಾಗತಿಸಿದಾಗ ಎಷ್ಟು ಒಳ್ಳೆಯ ಕುಟುಂಬ, ಸ್ನೇಹ ಅದೃಷ್ಟವಂತೆ ಅನ್ನಿಸಿತು. ‘ಮೊದಲು ಕಾಫಿ ತಿಂಡಿ ಆಗಲಿ ಆಮೇಲೆ ದೇವಸ್ಥಾನಕ್ಕೆ ಹೋಗೋಣವಂತೆ’ ಎನ್ನುತ್ತಾ ದೇವಸ್ಥಾನಕ್ಕೆ ಅನತಿ ದೂರದಲ್ಲಿದ್ದ ಮನೆಯತ್ತ ಹೆಜ್ಜೆ ಹಾಕಿದರು. ನಾವು ಹಿಂಬಾಲಿಸಿದೆವು. ಮುಂಬಾಗಿಲಿನಲ್ಲಿದ್ದ ಬಾವಿಯ ಬಳಿ ಬಕೇಟಿನಲ್ಲಿ ತುಂಬಿದ್ದ ನೀರಿನಿಂದ ಕಾಲನ್ನು ತೊಳೆದು ಮನೆಯೊಳಗೆ ಇಟ್ಟೆವು. ನಾವು ಐದು ಮಂದಿ, ಸ್ನೇಹ ಅವಳ ಯಜಮಾನರು ಅತ್ತೆ ಮಾವ, ಒಟ್ಟು ಹತ್ತು ಜನ.

‘ನನ್ನ ಚಿಕ್ಕ ಮಗ ಬರಲಿಲ್ಲ ಏನೋ ಕೆಲಸ ಇದೆ ಅಂದ’ ಸ್ನೇಹಳ ಮಾವ ಅಯಾಚಿತವಾಗಿ ಹೇಳಿದರು. ‘ಇದು ನಾನು ಹುಟ್ಟಿದ ಬೆಳೆದ ಜಾಗ, ಪ್ರೈಮರಿ ತನಕ ಇಲ್ಲೇ ಓದಿದ್ದು. ಆಮೇಲೆ ಪಟ್ಟಣ ಸೇರಿದ್ದು. ಆದರೂ ವರ್ಷಕ್ಕೊಮ್ಮೆ ಬರದೇ ಹೋದ್ರೆ ಸಮಾಧಾನವಿಲ್ಲ. ಈ ಮನೇಲಿ ನಮ್ಮ ದೊಡ್ಡಮ್ಮನ ಮಗ, ಸದಾಶಿವ ಶಾಸ್ತ್ರಿಗಳು, ವಾಸವಿದ್ದಾರೆ. ಇಲ್ಲಿಯ ದೇವಸ್ಥಾನದ ಪ್ರಧಾನ ಅರ್ಚಕರು, ‘ಇವರು ನಮ್ಮ ಭವಾನಿ ಅತ್ತಿಗೆ’ ಎಂದು ಮನೆಯಾಕೆಯನ್ನು ಪರಿಚಯಿಸಿದರು.

‘ನೀವು ಬಂದ ವಿಷಯ ತಿಳಿಸಿದ್ದೀನಿ, ಇನ್ನೇನು ಬರ್ತಾರೆ, ಎಲ್ಲರು ಬನ್ನಿ’ ಎನ್ನುತ್ತಾ ಭವಾನಿಯವರು ಬರಮಾಡಿಕೊಂಡರು.

‘ಅತ್ತಿಗೆ, ಇಕೋ ಇವರ ಪರಿಚಯ ಮಾಡಿಕೊಡ್ತೀನಿ, ಬನ್ನಿ’ ಎಂದು ಎಲ್ಲರ ಹೆಸರು, ಸಂಬಂಧ ಹೇಳಿ, ನನ್ನತ್ತ ಬಂದಾಗ ನಿಂತರು. ‘ಇವಳು ರಂಜನಿ ಅಂತ ನನ್ನ ಡಿಸ್ಟನ್ಟ್ ರಿಲೇಟಿವ್, ಬ್ಯಾಂಕ್‌ನಲ್ಲಿ ಕೆಲಸ ನಮ್ಮ ಅಮ್ಮನ ಮನೆ ಮೇಲ್ಗಡೆ ಇದ್ದಾರೆ’ ಸುರಭಿ ನನ್ನ ಹೆಗಲ ಮೇಲೆ ಕೈ ಹಾಕಿದಳು.

‘ಇನ್ನೂ ಮದುವೆ ಆಗಿಲ್ಲ?’ ಕರಿಮಣಿಯಿರದ ಕೊರಳು, ಉಂಗುರ ರಹಿತ ಕಾಲ್ಬೆರಳುಗಳಿಂದ ಅಳೆದಿದ್ದರು.

‘ಹುಡುಕ್ತಿದ್ದೀವಿ’ ಎಂದಷ್ಟೇ ಹೇಳಿ ನಕ್ಕಳು ಸುರಭಿ. ನಾನು ಒಂದು ಕ್ಷಣ ಪೆಚ್ಚಾದೆ. ಅಷ್ಟರಲ್ಲಿ ಸದೃಢ ವ್ಯಕ್ತಿಯೊಬ್ಬರು ಬಾಳೆ ಎಲೆಗಳನ್ನು ಕೈಯಲ್ಲೇ ಹೊತ್ತು ತಂದರು. ‘ಓಹ್ ಸೋಮು’ ಇವನು ಸೋಮಶೇಖರ, ಅಣ್ಣನ ಒಬ್ಬನೇ ಮಗ’ ಚಿಕ್ಕಪ್ಪನ ಪರಿಚಯಕ್ಕೆ ಎಲ್ಲರತ್ತ ಮುಗುಳ್ನಗೆ ಬೀರಿ ಅಡುಗೆ ಮನೆಯತ್ತ ಹೊರಟರು.

‘ಇವನಿಗೂ ಯಾವುದೂ ಸೆಟ್ಟಾಗಿಲ್ಲ, ವಯಸ್ಸು ಮೂವತ್ತೆಂಟು, ಅಪ್ಪನಿಗೆ ಸಹಾಯಕನಾಗಿ ಇರೋದು ಅಂತ ಹೊರಗಡೆ ಕೆಲಸಕ್ಕೆ ಹೋಗ್ತಿಲ್ಲ, ಪೌರೋಹಿತ್ಯದ ಸಣ್ಣ ಪುಟ್ಟ ಸಮಾರಂಭಗಳನ್ನು ಸ್ವಯಂ ನಡೆಸಿಕೊಡುವಷ್ಟು ವಿಧಿ ವಿಧಾನ ಕಲ್ತಿದ್ದಾನೆ ಹಾಗಂತ ಏನೂ ಓದಿಲ್ಲ ಅಂದ್ಕೋಬಾರ್ದು ಬಿ.ಕಾಂ ಪದವೀಧರ’

‘ಹುಡುಗ ಗುಣವಂತ, ತಂಗಿನೂ ಒಳ್ಳೆ ಕಡೆ ಮದುವೆ ಮಾಡಿಕೊಟ್ಟ. ಅಪ್ಪನ ಆಸೆಯಂತೆ ಪೌರೋಹಿತ್ಯದಲ್ಲೂ ತೊಡಗಿಸಿಕೊಂಡಿದ್ದಾನೆ, ಜೊತೆಗೆ ಸ್ವಲ್ಪ ಕೃಷಿನೂ ಮಾಡ್ತಾನೆ. ಎರಡು ಎಕರೆ ಭೂಮಿ ಇದೆ, ಅದ್ಯಾಕೋಪೇಟೆ ಹೆಣ್ಮಕ್ಕಳು ಈ ಹಳ್ಳಿಗೆ ಬರೋಕ್ಕೆ ಒಪ್ಪಲ್ಲ’ ಸೋಮಶೇಖರನ ಕುರಿತಾದ ಪ್ರವರ ನನ್ನ ಕಿವಿಗೆ ಬೀಳುತ್ತಿತ್ತು.

‘ಏಳಿ, ತಿಂಡಿ ತಿನ್ನುವಿರಂತೆ, ಈಗಾಗಲೇ ತಡವಾಗಿದೆ’ ಸ್ವತಃ ಶಾಸ್ತ್ರಿಗಳು ಮನೆಯೊಳಗೆ ಕಾಲಿಡುತ್ತಾ ನಮ್ಮನ್ನೆಲ್ಲ ಎಬ್ಬಿಸಿದರು.

*****

ಬೆಳಗಿನ ಉಪಹಾರಕ್ಕೆ ತಯಾರಿಸಿದ್ದ ಉಪ್ಪಿಟ್ಟು, ಚಟ್ನಿ ಜೊತೆಗೆ ಸಿಹಿ ಹುಗ್ಗಿ-ಹಸಿದ ಹೊಟ್ಟೆಗೆ ರುಚಿಯಾಗಿತ್ತು. ಆ ನಂತರ ಪುರಾತನವಾದ ದೇವಸ್ಥಾನಕ್ಕೆ ತಲುಪಿದೆವು. ದೇವಸ್ಥಾನದ ಪ್ರಾಕಾರ, ಶಿಲ್ಪಕಲೆ ನೋಡಲು ಕಣ್ಣೆರಡು ಸಾಲದು.ಅಂಬಿಕಾಪತಿದೇವರಿಗೆ ಎಲ್ಲರ ಹೆಸರಲ್ಲೂ ಅರ್ಚನೆ ಪೂಜೆಯಾಯ್ತು. ಮಂಗಳಾರತಿ ತೀರ್ಥ ಪ್ರಸಾದ ಸೇವಿಸಿ, ಮುಂದೆ ಸಂಗಮಕ್ಕೆ ಪ್ರಯಾಣ. ಸೋಮಶೇಖರನ ಬೈಕನ್ನು ನಾವು ಹಿಂಬಾಲಿಸಿದ್ದೆವು. ಸ್ಥಳಪುರಾಣಗಳನ್ನು ಅವನೇ ತಿಳಿಸುತ್ತಿದ್ದ. ಸಂಗಮದ ತೀರದಲ್ಲಿದ್ದ ಶಶಿಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನದಿಯತ್ತ ಹೆಜ್ಜೆ ಹಾಕಿದೆವು.

‘ಇದೇ ಸಂಗಮ ಕ್ಷೇತ್ರ ಬಲಗಡೆಯಿಂದ ಹರಿತಿರೋದು ಸ್ವರ್ಣಾ ನದಿ, ಎಡಗಡೆಯಿಂದ ಬರ್ತಿರೋದು ವಜ್ರಾ ನದಿ. ಎರಡೂ ಇಲ್ಲಿ ಸೇರಿ ಸಂಪೂರ್ಣಾ ಅನ್ನೋ ಹೆಸರಲ್ಲಿ ಮುಂದಕ್ಕೆ ಸಾಗುತ್ತದೆ...’ ನೀರಿನ ಸಂಗಮದ ಕತೆ ಕೇಳುತ್ತ ಆ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ನನ್ನನ್ನೇ ನಾನು ಮರೆತಿದ್ದೆ.

ನಮ್ಮನ್ನು ಬೀಳ್ಕೊಡುವ ಮುನ್ನ ‘ಇಲ್ಲಿ ವಿಶೇಷ ಕಾರ್ಯಕ್ರಮಗಳಿದ್ದಾಗ ಮಾಹಿತಿ ಕೊಡ್ತೀವಿ, ಖಂಡಿತ ಪಾಲ್ಗೊಳ್ಳಬೇಕು, ‘ಸೋಮು ಇವರ ನಂಬರ್ ತೊಗೊಂಡು ಗ್ರೂಪ್ ಮಾಡಿಬಿಡು ಒಮ್ಮೆ ಹಾಕಿದರೆ ಸಾಕು, ಎಲ್ಲರಿಗೂ ತಿಳಿಯುತ್ತೆ’ ಎನ್ನುತ್ತಾ ಶಾಸ್ತ್ರಿಗಳುಮಗನತ್ತ ನೋಡಿದರು.

ಮುಂದಿನ ಹತ್ತು ನಿಮಿಷದಲ್ಲಿಅಂಬಾಪುರ ಫ್ಯಾಮಿಲಿ ಹೆಸರಿನಲ್ಲಿವಾಟ್ಸಾಪ್ಪ್ ಗ್ರೂಪ್ ರೆಡಿಯಾಯಿತು. ನನ್ನನ್ನೂ ಸೇರಿಸಿಕೊಂಡಿದ್ದು ಸಂತಸ ನೀಡಿತ್ತು.

‘ಮುಂದಿನ ಸಲ ಬರೋ ಹೊತ್ತಿಗೆ ನಿನ್ನ ಮದುವೆಯಾಗಿರಬೇಕು’ ಭವಾನಿಯವರು ಹೇಳಿದಾಗ ಸುಮ್ಮನೆ ನಕ್ಕೆ.

ಅಂಬಾಪುರದ ಭೇಟಿ, ಮನಸ್ಸಿಗೆ ಹಿತವಾಗಿತ್ತು.

ಕಣ್ಮುಚ್ಚಿದರೆ ಸಂಗಮದ ದೃಶ್ಯವೇ ನರ್ತಿಸುತಿತ್ತು.

*****

ಮರುದಿನ ಬೆಳಿಗ್ಗೆ ಕಣ್ಬಿಡುತ್ತಲೇ ಮೊಬೈಲಿನಲ್ಲಿ ಅಂಬಿಕಾಪತಿ ದೇವರ ದರ್ಶನ. ವೈಯಕ್ತಿಕವಾಗಿ ಶುಭೋದಯ ಹೇಳಿದ್ದ ಸೋಮು.

ಬೆಳಗಿನ ದಿನಪತ್ರಿಕೆ ಓದುವ ಸಮಯದಲ್ಲಿ ಅವನಿಗೆ ಉತ್ತರಿಸಿದೆ

‘ನಿನ್ನೆ ನೀವು ಬಂದದ್ದು ಬಹಳ ಸಂತೋಷವೆನಿಸಿತು’

‘ನನಗೂ, ರಾತ್ರಿಯಿಡೀ ಸಂಗಮದ ಸುತ್ತೆಲ್ಲ ಓಡಾಡುತ್ತಿದ್ದ ಹಾಗೆ ಅನ್ನಿಸಿತ್ತು, ಕನಸಿನಲ್ಲೂ ಝುಳುಝುಳು ನಾದ’

ಹೀಗೆ ಶುರುವಾಗಿತ್ತು ನಮ್ಮ ಸಂವಾದ. ಬೆಳಿಗ್ಗೆ ಹತ್ತು ನಿಮಿಷ ರಾತ್ರಿ ಸುಮಾರು ಒಂದರಿಂದ ಒಂದೂವರೆ ಗಂಟೆ ಸಂದೇಶ.ರಜಾ ದಿನಗಳು, ಸೋಮವಾರ ಅಮಾವಾಸ್ಯೆ, ಪೌರ್ಣಮಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ ಇರುತ್ತದೆ. ಅಂಥಾ ವಿಶೇಷ ದಿನಗಳಲ್ಲಿ ವಿಡಿಯೊ ಮಾಡಿ ಹಂಚಿಕೊಳ್ಳುತ್ತಿದ್ದ. ಒಮ್ಮೊಮ್ಮೆ ವಿಡಿಯೊ ಕಾಲ್‌ನಲ್ಲಿ ನೇರವಾಗಿ ಆ ದೃಶ್ಯಕಾವ್ಯವನ್ನು ಉಣಿಸುತ್ತಿದ್ದ.

ಸಂಗಮ... ಅಂಬಾಪುರದ ಪೂರ್ವಕ್ಕೆ ಹರಿವ ತಾಯಿ ಸ್ವರ್ಣಾ ನದಿ... ಶಾಂತ ಸ್ವರೂಪಿ, ಅದರ ನೀರು ಸ್ವಚ್ಛ, ತಿಳಿ. ನಿಧಾನವಾಗಿ ಕೆಳಗೆ,ದಕ್ಷಿಣಮುಖಿಯಾಗಿ ಇಳಿದರೆ,ಪಶ್ಚಿಮದಿಂದ ವಜ್ರಾ ನದಿ, ಬಣ್ಣ ತುಸುಗಪ್ಪು, ನೋಟಕ್ಕೂ ಗಡಸು, ಭೋರ್ಗರೆಯುತ್ತಾ ರಭಸವಾಗಿ ಕೆಳಮುಖವಾಗಿ ಹರಿದು ಬರುವಳು. ಎರಡೂ ಸೇರುವ ಸ್ಥಳವೇ ಸಂಗಮ. ಅಲ್ಲಿಂದ ಸಂಪೂರ್ಣಾ ಎನ್ನುವ ಹೆಸರಿನಲ್ಲಿ, ಹೊಸ ಹುರುಪಿನಿಂದ ಮುಂದೆ ಸಾಗುತ್ತಾಳೆ. ಸಂಗಮದಲ್ಲಿ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ನೋಡುವಾಗ ಸ್ವರ್ಣೆ, ವಜ್ರೆಯರ ಸಮ್ಮಿಲನದ ಬಿರುಸಿನ ಸುಳಿ ಕೊಂಚ ಭಯಹುಟ್ಟಿಸಿದರೂ ಮುಂದೆ ಸೌಮ್ಯ ಲಹರಿಯೊಂದಿಗೆ ಹೊಮ್ಮುವ ಸಂಪೂರ್ಣಾ ಯಾನವನ್ನು ನೋಡಲು ಕಣ್ಣೆರಡು ಸಾಲದು. ಅಲ್ಲಿನ ನೀರನ್ನು ಪ್ರೋಕ್ಷಿಸಿಕೊಂಡರೂ ಸಾಕು ಪಾಪಕಳೆಯುತ್ತೆ ಎನ್ನುವ ನಂಬಿಕೆ.

‘ನಮ್ಮ ಊರು ಒಂದು ರೀತಿ ಪರ್ಯಾಯ ದ್ವೀಪದ ಹಾಗೆ ಅನ್ನಬಹುದು. ಊರಿನ ಮೂರೂ ಕಡೆ ನೀರು ಮಧ್ಯೆ ಭೂಮಿ, ವಜ್ರೆಯ ರಭಸಕ್ಕೆ ಎಷ್ಟೋ ಮನೆ, ಜಮೀನು ಕೊಚ್ಚಿಹೋಗಿತ್ತು. ತಮ್ಮ ಹಿರೀಕರ ಮನೆಯ ಭಾಗವೂ ಸೇರಿತ್ತಂತೆ. ಅದಾದ ಮೇಲೆ ಈಗ ನಾವಿರುವ ಕಲ್ಲಿನ ಮಾಳಿಗೆಮನೆಯನ್ನು ಕಟ್ಟಿಕೊಂಡಿದ್ದು, ದೇವಸ್ಥಾನಕ್ಕೆ ಹತ್ತಿರವಾದ ಜಾಗ ದಾನವಾಗಿ ಬಂದದ್ದು ಅಂತ ನಮ್ಮ ಅಜ್ಜನ ನೆನೆಸಿಕೊಳ್ತಿದ್ರು’ ಸೋಮು ಎದೆಯುಬ್ಬಿಸಿ ಹೇಳುತ್ತಿದ್ದ ‘ಲಕ್ಷ ಕೊಟ್ಟರೂ ನನ್ನೂರು ಬಿಟ್ಟು ಎಲ್ಲೂ ಹೋಗಲು ಮನಸ್ಸಿಲ್ಲ. ಇಂಥ ಸ್ವಚ್ಛ ನೀರು, ಗಾಳಿ, ಬೆಳಕು ಸಿಕ್ಕಿತೇ? ದೇವರ ಸೇವೆಗೆ ಸಿಕ್ಕ ಪ್ರತಿಫಲ...ನಾವಿರುವ ಮನೆ ಎಷ್ಟು ದೊಡ್ಡದು! ಎಷ್ಟೇ ಕಷ್ಟಕಾಲದಲ್ಲೂ ಊಟ, ಬಟ್ಟೆಗೆ ಕೊರತೆಯಿಟ್ಟಿಲ್ಲ. ಮೂರು ತಲೆಮಾರಿನಿಂದ ಅಲ್ಲಿ ಎಷ್ಟು ಶುಭ ಸಮಯಗಳು ನಡೆದಿವೆ, ಲೆಕ್ಕವಿಟ್ಟವರ್ಯಾರು? ಮನೆಗೆ ಹಿಂಭಾಗಕ್ಕೆ ಬೆಳೆದಿರುವ ತೋಟದಲ್ಲಿ ಹೂವು, ತರಕಾರಿ, ಹಣ್ಣು ಧಾರಾಳವಾಗಿ ಸಿಗುತ್ತೆ. ಸಣ್ಣವನಿದ್ದಾಗ ಮಾವಿನ ಮರಕ್ಕೆ ಜೋಕಾಲಿ ಕಟ್ಟಿ ನಾವು ಗೆಳೆಯರೆಲ್ಲ ಆಡ್ತಿದ್ವಿ. ಈಗ್ಲೂ ರಜಕ್ಕೆ ತಂಗಿ ಮಕ್ಕಳು, ಕಸಿನ್ಸ್ ಬಂದಾಗ ಉಯ್ಯಾಲೆ ಕಟ್ಟಿ ಬಾಲ್ಯವನ್ನು ನೆನಪಿಸಿಕೊಳ್ತೀವಿ’ ಅವುಗಳ ದರ್ಶನವನ್ನು ಮೊಬೈಲಿನಲ್ಲಿ ಮಾಡಿಸುತ್ತಿದ್ದ. ಕೃಷಿ ಕುರಿತು ತಾನು ಪಟ್ಟ ಕಷ್ಟ ನಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದ. ನನ್ನ ಸ್ಪಂದನೆ, ಅವನು ಪರಿಚಯಿಸುವ ಹೊಸ ವಿಷಯಗಳ ಕುರಿತಾದ ಆಸಕ್ತಿ ಇಬ್ಬರನ್ನೂ ಪರಸ್ಪರ ನಿರೀಕ್ಷಿಸುವಂತೆ ಮಾಡಿತ್ತು.

ಒಂದು ನಿಮಿಷವೂ ಸುಮ್ಮನೆ ಕೂರದ ಉತ್ಸಾಹದ ಚಿಲುಮೆ-ಕೃಷಿಗೆ ಸಂಬಂಧಿಸಿದಂತೆ ಪೇಟೆಗೆ ಓಡಾಡುವುದು, ಒಕ್ಕಲಿನಲ್ಲಿ ಸಿಕ್ಕ ಹಳ್ಳಿಗಳಿಗೆ ಪೂಜೆಗೆ ಹೋಗುವುದು, ಸಾಮಾಜಿಕ ಸಮಾರಂಭಗಳಲ್ಲಿ ಸ್ವಯಂ ಸೇವಕನಾಗಿ ಗೆಳೆಯರೊಂದಿಗೆ ಸೇರಿ ಭಾಗವಹಿಸುವುದು, ಏತನ್ಮಧ್ಯೆ ಬಂಧುಗಳು ಬಂದರೆ ಮನೆಯಲ್ಲಿ ಅವರ ಉಪಚಾರ ಇತ್ಯಾದಿ. ಇವನು ಅಸಾಮಾನ್ಯ ಎಂಬ ನಿರ್ಧಾರಕ್ಕೆ ಬಂದಿದ್ದೆ. ನನಗರಿಯದಂತೆ ನಾನು ಅವನನ್ನು ಹಚ್ಚಿಕೊಂಡಿದ್ದೆ. ಮಾಮೂಲಿ ಶುಭೋದಯದ ಹೊರತು ಬೇರೆ ಸಂದೇಶವಿಲ್ಲದಾಗ ಚಡಪಡಿಸುತ್ತಿದ್ದೆ. ನೋಡಿರುವ ಜಾಗಗಳನ್ನೇ ತೋರಿಸುವ, ತಿಳಿದ ಸಂಗತಿಗಳನ್ನೇ ಚರ್ಚಿಸುವಯಾವ ನೆಪವಾದರೂ ಸರಿ, ಅವನ ದನಿಗಾಗಿ ಹಂಬಲಿಸುತ್ತಿದ್ದೆ. ಸರಿಯಿಲ್ಲದಿರಬಹುದು ಆದರೆ ತಪ್ಪಲ್ಲ ಎಂಬ ಅಂತರಾಳದ ಸಮರ್ಥನೆ. ಅವನ ಮೇಲೆ ಪ್ರೀತಿ ಹುಟ್ಟಿದೆಯೋ ಎಂಬ ಅನುಮಾನ ಕಾಡುತ್ತಿದ್ದುದು ಸುಳ್ಳಲ್ಲ. ಆದರೆ ಎಂದೂ ಗಾಂಭೀರ್ಯದ ಎಲ್ಲೆಯನ್ನು ಇಬ್ಬರೂ ದಾಟಿರಲಿಲ್ಲ. ಎಡವಟ್ಟು ಮಾತಾಡಿ ಇರುವ ಮೈತ್ರಿಗೆ ಪೆಟ್ಟಾಗಬಾರದೆಂಬ ಜಾಗ್ರತೆ. ‘ನಿಮಗೆ ಯಾವುದಾದರೂ ಒಳ್ಳೆಯ ಸಂಬಂಧ ಸಿಕ್ತಾ?’ ಒಮ್ಮೆ ಕೇಳಿದ್ದ

‘ಇಲ್ಲ’ ಎಂದಷ್ಟೇ ಉತ್ತರಿಸಿ ‘ನಿಮಗೆ’ ಎಂದು ಮರುಪ್ರಶ್ನೆ ಎಸೆದಿದ್ದೆ.

‘ನನ್ನನ್ನು ಯಾರು ಮಾಡ್ಕೋತಾರೆ ಬಿಡಿ’ ಎಂದಿದ್ದ.

ಇವನನ್ನು ಮಾಡಿಕೊಳ್ಳುವವಳು ಪುಣ್ಯ ಮಾಡಿರಬೇಕು. ವೈವಾಹಿಕ ಸಂಬಂಧದ ಬಗ್ಗೆ ಗೌರವ, ಆಸಕ್ತಿ ಎರಡೂ ಇದೆ.ವೃತ್ತಿಯಲ್ಲಿನ ಶ್ರದ್ದೆ ಭಕ್ತಿ ನೋಡಿದಾಗ ತಿಳಿಯದೆ? ಯಾವುದೇ ಸಮಸ್ಯೆಯನ್ನೂ ತಾಳ್ಮೆಯಿಂದ ನಿಭಾಯಿಸುವ ಚಾಕಚಕ್ಯತೆಯೂ ಇದೆ. ಇವನ ಕೌಶಲ್ಯಕ್ಕೆ ಇವತ್ತಿಲ್ಲ ನಾಳೆ ಬೆಲೆ ಸಿಕ್ಕೇ ಸಿಗುತ್ತದೆ. ಅದ್ಯಾಕೆ ಇವನನ್ನು ನಿರಾಕರಿಸ್ತಾರೋ! ಥಳುಕು ಬಳುಕಿನ ಜೀವನ ಬಯಸುವವರಿಗೆ ಇವನಂಥವರು ಅಪಥ್ಯವೇ ಸರಿ.

ನನ್ನ ವಿಷಯ ಇವನಿಗೆ ತಿಳಿದಿರಬಹುದೆ ಎಂಬ ಗೊಂದಲವಂತೂ ಮನದ ಮೂಲೆಯಲ್ಲಿ ಇತ್ತು.

*****

‘ಸೋಮು ಬಗ್ಗೆ ನಿನ್ನ ಅಭಿಪ್ರಾಯ ಏನು?’ ಅನಿರೀಕ್ಷಿತವಾಗಿ ಅಮ್ಮನ ಮನೆಗೆ ಬಂದಿದ್ದ ಸುರಭಿ,ಅಂದು ಸಂಜೆನಮ್ಮ ಮನೆಗೂ ಬಂದು ಕೇಳಿದ್ದಳು.

ಏಕಾಏಕಿ ಹೀಗೆ ಪ್ರಶ್ನಿಸಿದಾಗ ಕೊಂಚ ತಡವರಿಸುವಂತಾಗಿತ್ತು.

‘ಒಳ್ಳೆಯವರು, ನಾವಿಬ್ಬರೂ ಸಾಕಷ್ಟು ವಿಚಾರ ವಿನಿಮಯ ಮಾಡ್ಕೊಳ್ತಿರ್ತೀವಿ’ ಸಂಕೋಚದ ದನಿಯಲ್ಲೇ ಅರುಹಿದ್ದೆ

‘ಅವನನ್ನು ಮದುವೆ ಮಾಡ್ಕೊಳ್ತೀಯಾ?’

ಒಂದುಕ್ಷಣ ಗಲಿಬಿಲಿಗೊಂಡೆ, ಹೇಗೆ ಉತ್ತರಿಸಬೇಕೋ ತಿಳಿಯದೆ.

‘ಸೋಮುಗೆ ನೀನು ಇಷ್ಟವಾಗಿದ್ದಿಯ, ಇದನ್ನು ನನಗೇ ಮೊದಲು ತಿಳಿಸಿದ. ನಾನು ನಿನ್ನ ಹಿನ್ನೆಲೆ ಹೇಳಿದೆ. ಅಲ್ಲಿಂದ ಸ್ನೇಹಾಳ ಮಾವನವರಲ್ಲಿ ತಾನೇ ಹೇಳಿಕೊಂಡಿದ್ದಾನೆ. ಅವರು ಮುತುವರ್ಜಿ ವಹಿಸಿ ಶಾಸ್ತ್ರಿಗಳ ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಮಗನ ಆಯ್ಕೆಗೆ ತಮ್ಮ ಸಹಮತವಿದೆ ಅಂದಿದ್ದಾರೆ. ಮುಖ್ಯವಾಗಿ ನಿನ್ನ ಒಪ್ಪಿಗೆ ಮುಖ್ಯ. ಚೆನ್ನಾಗಿ ಯೋಚನೆ ಮಾಡಿ ಹೇಳು, ಯಾವುದಕ್ಕೂ ಬಲವಂತವಿಲ್ಲ’ ಎಂದಾಗ ನಾನು ಬಯಸಿದವನೇ ನನ್ನನ್ನು ಮೆಚ್ಚಿದ್ದಾಗ, ಮುಖ್ಯವಾಗಿ ಆ ಕುಟುಂಬದವರೆಲ್ಲ ನನ್ನನ್ನು ಸ್ವಾಗತಿಸಲು ಸಿದ್ಧವಿರುವಾಗಅದಕ್ಕಿಂತ ಅದೃಷ್ಟವೇ?ಹೆಚ್ಚು ಸಮಯ ತೆಗೆದುಕೊಳ್ಳದೆ ‘ಒಪ್ಪಿಗೆ’ ಎಂದೆ.

‘ಗುಡ್ ಚಾಯ್ಸ್ ರಂಜೀ’, ಎಂದು ನನ್ನನ್ನು ಅಪ್ಪಿ, ‘ಈಗಲೇ ಸೋಮು ಮತ್ತು ಸ್ನೇಹನಿಗೆ ತಿಳಿಸ್ತೀನಿ’ ಎಂದು ಕೆಳಗಿಳಿದು ಹೋದಳು.

*****

‘ಅಭಿನಂದನೆಗಳು ಗಂಡು ಗೊತ್ತಾಗಿದ್ದಕ್ಕೆ, ಧನ್ಯವಾದ ನನ್ನ ಆಶಯ ಅರಿತು ಗೌರವಿಸಿದಕ್ಕೆ’ ಸೋಮುವಿನ ಸಂದೇಶ

‘ನಿಮಗೂ ... ಸಂಗಮಕ್ಕೆ ಹೋಗ್ಬೇಕು ಅನ್ನಿಸ್ತಿದೆ’ ನಾನು ಉತ್ತರಿಸಿದೆ

‘ಅದಕ್ಕೇನಂತೆ? ಸದ್ಯಕ್ಕೆ ಈ ದೃಶ್ಯ ನೋಡಿ’ ಎಂದು ‘ವಜ್ರೆ ಎಷ್ಟು ಕಠೋರವಾದರೂ ಸ್ವರ್ಣೆಯನ್ನು ಕೂಡುತ್ತಲೇ ಮೃದುವಾಗಿ ಸಂಪೂರ್ಣೆಯಾಗುತ್ತಾಳೆ’ ಎನ್ನುವ ಅಡಿಬರಹವಿದ್ದವಿಡಿಯೋ ಕಳುಹಿಸಿದ್ದ.

ಈ ಬಾರಿ ಸಂಗಮ ಮೊದಲಿಗಿಂತ ಹೆಚ್ಚು ಸುಂದರವಾಗಿ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT