ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಪ್ಪ ಕರೇಣ್ಣನವರ ಬರೆದ ಕಥೆ: ಆಹುತಿ...

Last Updated 26 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಊರ ಹೊರಗಿನ ದೇವಾಲಯ, ದೇವಾಲಯದ ಆಜು-ಬಾಜು ಯಾವ ಮನೆಗಳಿರಲಿಲ್ಲ. ದೇವಸ್ಥಾನದ ಮುಂದೆ ಹಾದು ಹೋಗಿರುವ ರಸ್ತೆ ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಾಗಿತ್ತು. ಕೆಲಸಕ್ಕಾಗಿ ಪಕ್ಕದ ಊರುಗಳಗೆ ಹೋಗುತ್ತಿದ್ದ ಜನರು ಕೆಸರಲ್ಲಿ ಕಾಲಿಡುತ್ತಾ ಪಿಚಕ್ ಪಿಚಕ್ ಅನಿಸುತ್ತಾ, ಚಪ್ಪಲಿಗೆ ಹತ್ತಿದ ಕೆಸರು ಹಿಂದಿನಿಂದ ಅವರ ಬೆನ್ನಿಗೆ ವಿವಿಧ ಗಾತ್ರದ ಒಂದೇ ಬಗೆಯ ಬಣ್ಣ ಬಳಿದಿತ್ತು. ಜಿಟಿ ಜಿಟಿ ಮಳೆಗೆ ಗಿಡಮರಗಳು ತೋಯಿಸಿಕೊಂಡು, ಸುಳಿಗಾಳಿಗೂ ಮಿಸುಕಾಡದೇ, ಗುಬ್ಬಚ್ಚಿಯಂತೆ ನಿಂತಿದ್ದವು. ಈ ಮಳೆಯ ಹರ್ಷಕ್ಕೆ ಗಿಡದ ಮೇಲಿರುತ್ತಿದ್ದ ಪಕ್ಷಿಗಳು ಗೂಡುಸೇರಿಕೊಂಡು ತಮ್ಮ ಪರಿವಾರದ ಜೊತೆ ಕುಟುಂ ಕುಟುಂ ಶಬ್ದ ಮಾಡುತ್ತಾ ಕಾಳುಗಳನ್ನು ತಿನ್ನುತ್ತಾ ಕುಳಿತುಕೊಂಡಿದ್ದವು. ಕೆಲವೊಂದು ಪಕ್ಷಿಗಳು ಪಕ್ಕದಲ್ಲಿ ಇದ್ದ ಕೆರೆಗೆ ಇಣಿಕಿ ಹಾಕಿ ಮೀನುಗಳ ಬೇಟೆಗಾಗಿ ಹೋಗಿ ಬರುತ್ತಿದ್ದವು. ಊರಲ್ಲಿ ಜಿಟಿ-ಜಿಟಿ ಮಳೆಯಾಗುತ್ತಿದ್ದರೆ ಅತ್ತ ಊರಿನ ಪಶ್ಚಿಮಕ್ಕಿರುವ ಕಾಡಿನಲ್ಲಿ ಜೋರಾಗಿ ಮಳೆಯಾಗಿದ್ದರಿಂದ ಮಳೆಯ ನೀರು ಕೆಂಪು ಮಣ್ಣಿನ ಹೊಲದಲ್ಲಿ ಹಾಯ್ದು ವೇಗವಾಗಿ ಹರಿದು ಬರುತಿತ್ತು. ಈ ರಭಸಕ್ಕೂ ಕಾರಣವಿತ್ತೆನ್ನಿ, ತನ್ನೊಡಲಾದ ಕೆರೆ ತಲುಪುವ ಧಾವಂತ ‘ಜಕ್ನ ಸರ’ದ ಹಳ್ಳಕ್ಕೆ ಇತ್ತು. ಕೆಂಪಾದ ನೀರು ಊರಿನ ಜನರ ಹಳ್ಕೆರಿ (ಹಳೆಕರೆ) ತಲುಪುತ್ತಲೇ ಕೆರೆಗೆ ರಂಗೇರುತಿತ್ತು. ಗಾತ್ರದಲ್ಲಿ ಕೆರೆ ಚಿಕ್ಕದಾಗಿದ್ರು, ಅಲ್ಲಲ್ಲಿ ಮಡುವಿನಂತಹ ಗುಂಡಿಗಳನ್ನು ಹೊಂದಿತ್ತು. ಇಂತಹ ಗುಂಡಿಗಳಿಗೆ ಹಳ್ಳದ ನೀರು ಬಿದ್ದಾಗ ಭೂಮಿ ತಿರುಗುವಂತೆ, ನೀರು ಬರ-ಬರ ತಿರುಗುತ್ತಿತ್ತು. ಇಂತಹ ಕೆರೆಯನ್ನು ಆರೇಳು ದಶಕಗಳ ಹಿಂದೆ ಕಟ್ಟಿಸಿದ್ದರವೆನ್ನಬಹುದು, ಆರೇಳು ದಶಕಗಳಾದರು ಕೆರೆಯ ಒಡ್ಡು ಬಿಗಿಯಾಗಿತ್ತು. ವಯಸ್ಸಾದ ಆಲದಮರ, ಅರಳಿಮರ ಬೇವಿನಮರದ ಜೊತೆಗೆ ಪೀಕ್ಜಾಲಿ ಮರಗಳು ಹೆಚ್ಚಾಗಿದ್ವು.

ಹಳೆಕರೆ ಇದ್ರೆ, ಹೊಸಕೆರೆಯೂ ಇದ್ದೆ ಇರುತ್ತದೆ. ಹಾಗೆ ಈ ಊರಿಗೆ ಹೊಸ್ಕೆರೆಯೂ ಇತ್ತು. ಈ ಊರಿನ ಹಳೆಕೆರೆ ಒಂದು ಸಲ ತುಂಬಿದರೆ, ಬರಿದಾಗದೋ ಅಪರೂಪ. ಎಂತಹ ಬಿರು ಬೇಸಿಗೆ, ಬರಗಾಲ ಬಂದರೂ ತನ್ನ ಒಡಲನ್ನು ಬರಿದುಮಾಡಿಕೊಂಡಿದ್ದು ವಿರಳವೆನ್ನಬಹುದು. ಮಳೆಗಾಲದಲ್ಲಿ ಪೂರ್ತಿಯಾಗಿ ಕೆರೆ ತುಂಬಿದರೆ, ‘ಆಹುತಿ’ ತೆಗೆದುಕೊಳ್ಳುತ್ತದೆಂಬುದು ಊರ ಜನರ ಬಾಯಲ್ಲಿ ಬರುತಿತ್ತು. ಜನರು ಕಂಡುಂಡ ಮತ್ತು ನೋಡಿದ ಅನುಭವದಂತೆ ಹತ್ತಾರು ಮಕ್ಕಳ ಜೀವವನ್ನು ಮುರಿದು ತನ್ನ ಒಡಲಲ್ಲಿ ಕೆರೆ ಹಾಕಿಕೊಂಡಿತ್ತು. ಹೀಗೆ ಕೆರೆತುಂಬಿದಾಗ ಕೆರೆಯ ಪಕ್ಕದಲ್ಲಿ ಇದ್ದ ಪಾಲಕರು ಮಕ್ಕಳಿಗೆ ಹುಷಾರಾಗಿ ಇರಲು ಹೇಳುತ್ತಿದ್ದರು.

ಕೆರೆ ತುಂಬಿದಾಗ, ಕೆರೆ ಕಡೆ ಹೋಗದಂತೆ ಮಕ್ಕಳನ್ನು ಬೆದರಿಸಲು ದೊಡ್ಡಪ್ಪ, ಮುರವಣ್ಣನಂತವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ತಾವು ಹೆಗಲಮೇಲೆ ಹಾಕಿಕೊಂಡ ಬಾರಿ ಕೋಲಿನಿಂದ ಬಡದು ಆದರೂ ಕೆರೆಯ ದಂಡೆಯಿಂದ ಓಡಿಸುತ್ತಿದ್ದರು. ಇಷ್ಟೆಲ್ಲಾ ಭಯದ ವಾತಾವರಣ ಇದ್ರು ಯಾವ ಮಾಯೆಯಿಂದಲಾದರೂ, ಎಡಹೊತ್ತಿನಲ್ಲಿ ಒಂದೆರಡು ಮಕ್ಕಳು ಕೆರೆ ಇಣುಕಿ ಹಾಕಲು ಬಂದೇ ಬರುತ್ತಿದ್ದರು. ಹೀಗಾಗಿ ಊರವರ ಪಾಲಿನ ಮಕ್ಕಳ ರಕ್ಷಕರಾಗಿದ್ದ ದೊಡ್ಡಪ್ಪ ಮತ್ತು ಮುರವಣ್ಣರಂತವರಿಗೆ ಆತಂಕ ಇದ್ದೇ ಇತ್ತು.
* * *

ಕೆರೆಯ ಪಕ್ಕದ ಓಣಿಯ ಸೋಗೇರ ನಾಗಪ್ಪ ಮತ್ತು ರಕ್ಷ್ಮವ್ವ ಪ್ರತಿದಿನವೂ ಊರಿನ ಪಶ್ಚಿಮಕ್ಕಿದ್ದ ತಾಂಡಾ ಗುಡ್ಡದ ಕಡೆಗೆ ಕಲ್ಲು ಒಡೆಯಲು ಹೋಗುತ್ತಿದ್ದರು. ಚೊಚ್ಚಲ ಮಚ್ಚಲ ಗಂಡುಡ್ರಿಗೆ ಜನ್ಮ ನೀಡಿದ್ದ ರಕ್ಷ್ಮವ್ವ ತನ್ನಿಬ್ಬರ ಮಕ್ಕಳ ಬಗ್ಗೆ ಬಾಳ ಪ್ರೀತಿ ಇಟ್ಕೊಂಡಿದ್ದಳು. ದಿನ ದಿನಕ್ಕೆ ಬೆಳೆದು ದೊಡ್ಡವರಾಗುತ್ತಿದ್ದ ಮಕ್ಕಳನ್ನು ನೋಡಿ ತಮ್ಮ ಆಸರ- ಬ್ಯಾಸರ, ಕಷ್ಟವನ್ನು ಮರೆಯುತ್ತಿದ್ದರು.

ಹೊಟ್ಟೆಪಾಡಿಗಾಗಿ ಕಲ್ಲು ಒಡೆಯಲು ಖಣಿಗೆ ಹೋಗುವಾಗ ತಮ್ಮ ಮಕ್ಕಳಾದ ಸುರಗ ಮತ್ತು ಗಾಮನಿಗೆ ‘ಒಣ್ಯಾನ ಹುಡ್ರು ಜ್ಯತೆ ಸೇರಿ ಕೆರಿ ಕಡೆ ಆಟ ಆಡೋಕ ವೋಗಬ್ಯಾಡ್ರಿ, ಅದರಲ್ಲೂ ಆ ಸಾಬರ ಹುಡುಗ ರುಬಾನಿ ಜ್ಯತೆ ಸೇರಿ ಆಟ ಆಡಬೇಡ್ರಿ. ಆ ಹುಡುಗ ಸರಿಯಿಲ್ಲ. ಅವರ ಅಪ್ಪ ಸರಿಯಿಲ್ಲ. ಮಧ್ಯಾಹ್ನ ಊಟಕ್ಕೆ ರೊಟ್ಟಿ, ನವಣಕ್ಕಿ, ಅನ್ನ ಮೊಸರು ಪಕ್ಕದ ಮನೆ ಬಸಪ್ಪ ದ್ವಾಡಪ್ಪರ ಕಟ್ಟಿ ಮ್ಯಾಲೆ ಇಟೈತಿ, ಮಧ್ಯಾಹ್ನದಾಗ ಊಟ ಮಾಡಿ, ಮನಿ ಮುಂದೆ ಆಟ ಆಡಿಕೆಂತ ಇಲ್ಲೆ ಇರ್ರಿ, ಯಾತ್ಲೂಗೂ ವೋಗಬೇಡಿ’ ಅಂತಾ ಹೇಳುತ್ತಿದ್ದರು.....ಹೀಗೆ ಆ ಸಾಬರ ಹುಡುಗ ಜೊತೆ ಆಡಬೇಡಿ ಅನ್ನೋದಕ್ಕೂ ಒಂದು ಕಾರಣವಿತ್ತು. ಸಾಬರ ರುಬಾನಿ ಅಪ್ಪ ಚಕ್ಕೀರಪ್ಪ ಪ್ರತಿದಿನ ಊರ ಪಕ್ಕದ ಮಣಕಾರ ಜನಬಸಪ್ಪರ ತೋಟದ ಕೆಲಸಕ್ಕೆ ಹೋಗುತ್ತಿದ್ದನು. ಸಾಯಂಕಾಲ ತೋಟದಲ್ಲಿನ ಸೊಪ್ಪು ತಗೊಂಡು ಬರೋನು. ತಾನು ಸಾಕಿದ್ದ ಕುರಿಮರಿಗೆ ಆ ಸೊಪ್ಪನ್ನು ಕಟ್ಟುತ್ತಿದ್ದಳು. ಆ ಚೊಗಚಿ, ನುಗ್ಗೆ ಮತ್ತು ಹಾಲ್ವಾಣ ಸೊಪ್ಪನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿತ್ತು. ಸಾಬರ ಮನೆಯ ಪಕ್ಕದಲ್ಲಿದ್ದ ರಾಗಪ್ಪನು ಸಹ ಕುರಿಮರಿಯೊಂದನ್ನು ಸಾಕಿದ್ದನು. ಅವರ ಮರಿಗೆ ತೋಟದ ಸೊಪ್ಪು ಸಿಗದೇ ಬಡಕಲಾಗಿಯೇ ಬೆಳೆಯುತ್ತಿತ್ತು. ಸಾಬರ ಮರಿ ಸಪ್ಪು ತಿನ್ನೋದ್ ನೋಡಿ ಒಂದು ದಿನ ರಾಗಪ್ಪನು ‘ಚಕ್ಕೀರಪ್ಪ ಮಾವ ನಮ್ಮ ಮರಿಗೂ ಒಂದು ಹಿಡಿ ಸಪ್ಪೋ ಕೊಡೊ’ ಅಂತಾ ರಾಗಪ್ಪ ಕೇಳಿದ. ಅದುಕೆ ಸಾಬರ ಚಕ್ಕೀರಪ್ಪ ‘ಅಳಿಯ ಇವತ್ತು ಎಲಿಕೊದ್ವಿ, ಬಳ್ಳಿ ಕಟ್ಟಲಿಲ್ಲ ಹಂಗಾಗಿ ಸಪ್ಪು ಸಲ್ಪ ತಂದನೀ, ಇನ್ನು ಎರ್ಡ್ ಮೇವ ನಮ್ಮ ಮರಿಗೆ ಕಟ್ಟಬೇಕು. ಇದು ಸಾಲಲ್ಲ.ನಾಳೆ ಕೊಡ್ತಿನಿ ತಗಾ’ ಅಂತೇಳಿದ. ಇದುಕ ಸಿಟ್ಟು ಮಾಡ್ಕೊಂಡ ರಾಗಪ್ಪನು ಒಂದಿಷ್ಟು ಬಿರುಸಿನಿಂದ ಮಾತಾಡ್ತಾನೆ. ಅದುಕೆ ಚಕ್ಕೀರಪ್ಪನು ತಿರುಗಿ ಮಾತಾಡ್ತಾನೆ. ಹೀಗೆ ಮಾತಿಗೆ ಮಾತು ಬೆಳೆದು ಇಬ್ರಿಗೂ ಜಗಳವೂ ಆಗುತ್ತದೆ. ಆವತ್ತಿನಿಂದ ರಾಗಪ್ಪನೂ ಮತ್ತು ಚಕ್ಕೀರಪ್ಪನು ಹಾವು-ಮುಂಗುಸಿಯಂತಾದರು. ಈ ವೈಮನಸ್ಸು ಹಲವು ವರ್ಷಗಳಿಂದ ಮುಂದುವರೆದಿತ್ತು.

ರಾಗಪ್ಪ ತನ್ನ ಮಕ್ಕಳನ್ನು ಚಕ್ಕೀರಪ್ಪನ ಮಗನ ಜೊತೆ ಆಟವಾಡಲು ಇರಲಿ, ಮಾತಾಡದಂತೆ ತಾಕೀತು ಮಾಡ್ತಾನೆ. ಹಾಗಾಗಿ ಪ್ರತಿ ದಿನವೂ ಕೆಲಸಕ್ಕೆ ಹೋಗುವಾಗ ಆ ಹುಡುಗನ ಜೊತೆ ಆಟವಾಡದಂತೆ ಹೇಳುತ್ತಿದ್ದರು. ಊರ ಹನುಮಪ್ಪನ ಮೂರ್ತಿಗೆ ಹೂವು ತಪ್ಪಿದ್ರು, ರಾಗಪ್ಪ ತನ್ನ ಮಕ್ಕಳಿಗೆ ಹೇಳೊದ್ ಮಾತ್ರ ಮರೆಯುತ್ತಿರಲಿಲ್ಲ. ಹೀಗೆ ರಾಗಪ್ಪ ಹೇಳುತ್ತಿದ್ದರೆ, ಸುರಗ ಮತ್ತು ಗಾಮ ಅಪ್ಪ ಹೇಳಿದ ಮಾತುಗಳಿಗೆ ಹೂಗುಡುತ್ತಾ ‘ಕೆರಿ ಕಡೆ ವೋಗಲ್ಲ, ಹುಡ್ರು ಜೊತೆ ಸೇರಿ ಓಣಿ ಓಣಿ ಹಿಡ್ದು ತಿರ್ಗಲ್ಲ, ಮತ್ತೆ ಪೇಪರ್ಮೆಂಟು ತಿನ್ನಾಕ ನಾಲ್ಕಾಣೆ ಕೊಡು’ ಅಂತಾ ಅಪ್ಪನ ಕೇಳುತ್ತಿದ್ದರು. ಆಗ ‌ರಾಗಪ್ಪ ತಾನು ಸುತ್ತಿದ್ದ ಬಿಳಿ ಪಂಚೆಯನ್ನು ಮ್ಯಾಕ್ ಎತ್ತಿ, ಪಂಚಿಯೊಳಗಿದ್ದ ಪಟಪಟಿ ಚೊಣ್ಣದ ಬಕ್ಣಕ್ಕೆ ಕೈಹಾಕುತ್ತಿದ್ದ. ಆ ಬಕ್ಣದಲ್ಲಿರುವ ಎಲೆ-ಅಡಿಕೆ-ತಂಬಾಕು ಮತ್ತು ಸುಣ್ಣದಲ್ಲಿ ಬಚ್ಚಿಟ್ಟುಕೊಂಡಿದ್ದ ಎಂಟಾಣಿಯನ್ನು, ಇಲಿಯನ್ನು ಬೇಟೆಯಾಡುವ ಬೆಕ್ಕಿನಂತೆ ತನ್ನ ಕೈ ಬೆರಳುಗಳಿಂದ ನಾಲ್ಕಾಣೆಯನ್ನು ಹುಡುಕಿ ಹುಡುಕಿ ಗಾಮನಿಗೆ ಕೊಡುತ್ತಿದ್ದ. ಪಕ್ಕದಲ್ಲಿ ಹಿರಿಯ ಮಗ ಸುರಗ ಇದ್ರು ಅವನ ಕೈಯಲ್ಲಿ ಕೊಡದೇ, ಗಾಮನಿಗೆ ಕೊಡುತ್ತಿದ್ದ. ಗಾಮನ ಮೇಲೆ ಒಂದಿಷ್ಟು ಜಾಸ್ತಿನೇ ಪ್ರೀತಿ ರಾಗಪ್ಪನಿಗೆ. ಗಾಮನು ಅಪ್ಪನ ಆಸೆಯಂತೆ ದಿಂಡಾಗಿ ಬೆಳೆಯುತ್ತಿದ್ದ. ಮಾತಿನಲ್ಲಿ ಚುರುಕು ಇದ್ದ. ಆದರೆ ಸುರಗ ಕ್ವಳತು ಕ್ವಳತು ಬೆಳೆತಿದ್ದ. ಹೀಗಿದ್ದರೂ ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ರು ಇರುತ್ತಿರಲಿಲ್ಲ. ನಾಲ್ಕಾಣಿಯನ್ನು ಮಕ್ಕಳಿಗೆ ಕೊಟ್ಟು ರಾಗಪ್ಪ ಮತ್ತು ರಕ್ಷ್ಮವ್ವ ಕಲ್ಲು ಒಡೆಯಲು ಖಣಿ ಕಡೆ ಹೋಗುತ್ತಿದ್ದರು. ಇತ್ತ ಸುರಗ ಮತ್ತು ಗಾಮ ಮನೆ ಹತ್ರ ಆಟ ಆಡ್ಕೊಂಡು ಇರ್ತಾರೆ.

ಹಿಂದಿನ ರಾತ್ರಿ ಕೋಳಿ ತಿಂದು ಅಜೀರ್ಣವಾಗಿದ್ದ ಸುರಗನಿಗೆ ಹೆಲಾಕ ಪದೇ ಪದೇ ಬರತೈತಿ. ಕೆರೆ ಕಡೆ ಹೇಲಾಕ ಹೋಗುವಾಗ ತಮ್ಮ ಗಾಮನನ್ನು ಸುರಗ ಕರ್ಕೊಂಡು ಹೋಕ್ತಾನೆ. ಕೆರೆಯೇರಿ ಮೇಲೆ ಚೊಣ್ಣ ಬಿಚ್ಚಿ ಹೆಲಬೇಕಾದ್ರೆ, ಇವನ ಪಕ್ಕದಲ್ಲಿ ನಾಲ್ಕೈದು ಹುಡ್ರು ಹೇಲ್ತಾಯಿರ್ತಾರೆ, ಹೊಟ್ಟಿ ಖಾಲಿ ಮಾಡಿಕೊಂಡು ಮುಕುಳಿ ತೊಳೆಯಲು ಕೆರೆಗೆ ಹೋದಾಗ ಕಾಲು ಜಾರಿ ಸುರಗ ಕೆರೆಯ ಗುಂಡಿಯೊಳಗೆ ಬೀಳ್ತಾನೆ. ಅಣ್ಣ ಕಣ್ಣೇದುರಲ್ಲಿ ಕೆರೆಯ ಗುಂಡಿಯಲ್ಲಿ ಬಿದ್ದದ್ದನ್ನು ನೋಡಿದ ತಮ್ಮ ಗಾಮ ಅಣ್ಣನನ್ನು ಉಳಿಸಲು ಕೆರೆಯ ಗುಂಡಿಗೆ ಹಾರಿದ. ಈಜಲು ಬಾರದ ಗಾಮ ಕರುಳ ಸಂಬಂಧದ ಕಿಚ್ಚೋ, ಅಣ್ಣನ ಮೇಲಿನ ಮಮತೆಯೋ ಒಮ್ಮೆಲೆ ಅಣ್ಣನ ತಲೆಯನ್ನು ಹಿಡಿದುಕೊಂಡು ತನ್ನ ಶಕ್ತಿಯಿಂದ ದಂಡೆಗೆ ಎಳೆಯಲು ನೋಡಿದ. ಆದರೆ ಈಜುಬಾರದ ಗಾಮ ಅಣ್ಣನ ಜೀವಚಡಪಡಿಕೆ ಎದುರಿಸಲಾರದೇ ಅಣ್ಣನ ಜೊತೆ ಗಾಮನು ಕೆರೆಯ ತಳ ಸೇರಲು ಪ್ರಾರಂಭಿಸಿದ. ಇದನ್ನು ದಂಡೆಯ ಮೇಲೆ ಕುಳಿತುಕೊಂಡು ಹೇಲುತ್ತಿದ್ದ ಸಾಬರ ಹುಡುಗ ರುಬಾನಿ ನೋಡಿ ಕೆರೆಯ ಗುಂಡಿಗೆ ಹಾರಿದ ಇಬ್ಬರನ್ನು ಹಿಡಿದು ತರಲಾರದೇ ಗಾಮನ ಜುಟ್ಟಲ ಹಿಡಿದುಕೊಂಡು ಕೆರೆಯ ದಡಕ್ಕೆ ತರಲು ಪ್ರಾರಂಭಿಸಿದ. ಕೆರೆಯ ಮೇಲೆ ಬೆಳೆದು ಹಣ್ಣು ಹಣ್ಣಾಗಿದ್ದ ಆಲದಮರ ಕೆಳಗೆ ಹೇಲುತ್ತಾ ಕುಳಿತಿದ್ದ ಹುಡುಗರು ಚೊಣ್ಣ ಮುಕುಳಿಗೇರಿಸಿಕೊಂಡು ಓಡಿಹೋಗಿ ತಮ್ಮೊಣಿಯ ಜನರ ಕಿವಿಗೆ ಬೀರುಗಾಳಿ ಬೀಸಿದಂತೆ ಸುದ್ದಿ ಹೇಳಿದರು. ಸಮುದ್ರದಲ್ಲಿ ಹುಟ್ಟಿ ಮೊದಲು ಸಮುದ್ರದಂಡೆಗೆ ಅಪ್ಪಳಿಸುವ ಚಂಡಮಾರುತದಂತೆ ಓಣಿಯ ಜನರಿಗೆ ಈ ಸುದ್ದಿ ಅಪ್ಪಳಿಸಿತು. ಹುಡುಗರ ಕಿರುಚಾಟದ ಧ್ವನಿ ಕೇಳಿ ಹಿರಿಯರು, ಯುವಕರು ಕೆರೆದಂಡೆಗೆ ಶರವೇಗದಲ್ಲಿ ಬಂದ್ರು. ಅದರಲ್ಲಿ ಈಜು ಬರುವ ನೀಲಪ್ಪ, ದೊಡ್ಡಪ್ಪ, ಮುರುಗಣ್ಣ ಕೆರೆಯ ಗುಂಡಿಗೆ ಹಾರಿದರು. ಅಷ್ಟರಲ್ಲಾಗಲೇ ರುಬಾನಿ ಗಾಮನನ್ನು ದಂಡೆಗೆ ತಂದು ಹಾಕಿದ್ದ. ಗಾಮನನ್ನು ಹಿಡಿದುಕೊಂಡು ಬರುವಾಗ ರುಬಾನಿಯೂ ಸ್ವಲ್ಪ ನೀರು ಕುಡಿದಿದ್ದ. ಇವನಿಗಿಂತಲೂ ಜಾಸ್ತಿ ನೀರನ್ನು ಗಾಮ ಕುಡಿದಿದ್ದ. ಇತ್ತ ಸುರಗನಿಗಾಗಿ ಮುಳುಗಿ - ಮುಳುಗಿ ಏಳುತ್ತಾ, ಒಂದೆರಡು ನಿಮಿಷಗಳಲ್ಲಿ ಸುರಗನನ್ನು ಪತ್ತೆ ಹಚ್ಚಿ ಕೆರೆಯ ಗುಂಡಿಯಿಂದ ಎತ್ತಿಕೊಂಡು ಬಂದರು. ಆಗಲೇ ಸುರಗ ಕೆರೆಯ ನೀರನ್ನು ಪೂರ್ತಿಯಾಗಿ ಕುಡಿದಿದ್ದ. ಅಷ್ಟರಲ್ಲಾಗಲೇ ಸುರಗನ ಪ್ರಾಣವನ್ನು ಕೆರೆ ತೆಗೆದುಕೊಂಡಿತ್ತು. ಗಾಮನು ಬಹಳ ನೀರು ಕುಡಿದಿದ್ದರಿಂದ ಊರ ಜನರು ತಲೆಗೆ ಕಟ್ಟಿಕೊಂಡಿದ್ದ ಟವೆಲ್‌ನಿಂದ ಹೆಣ್ಮಕ್ಕಳು ಸೀರೆ ಸೆರಗಿನಿಂದ ಗಾಳಿ ಬೀಸಿದರು. ನಿಧಾನವಾಗಿ ಗಾಮ ಕಣ್ತೆರೆದನು. ಇತ್ತ ರುಬಾನಿ ತನ್ನ ವಾರಿಗೆಯ ಗೆಳೆಯ ಸುರಗನ ದೇಹವನ್ನು ನೋಡಿ ಅಳಲು ಪ್ರಾರಂಭಿಸುತ್ತಾನೆ. ಈ ದೃಶ್ಯವನ್ನು ದಂಡೆಯುದ್ದಕ್ಕೂ ನಿಂತ್ಕಡು ನೋಡುತ್ತಿದ್ದ ಊರವರ ಕಣ್ಣಾಲೆಗಳು ತೋಯ್ದು ಗೋಳೊ ಎಂದು ಅಳತೊಡಗಿದರು.

ಇಷ್ಟರಲ್ಲಾಗಲೇ ಗಣಿಯಲ್ಲಿ ಕಲ್ಲು ಕೆಲಸಕ್ಕೆ ಹೋಗಿದ್ದ ರಾಗಪ್ಪನಿಗೆ ಮಕ್ಕಳಿಗೆ ಆರಾಮ ಇಲ್ಲ ‘ಜಲ್ದಿ’ ಮನೆಗೆ ಬಾ ಅಂತಾ ಸಂಬಂಧಿಕರಾದ ಕರಿಯ ಕರದನು. ಆರಾಮ ಇಲ್ಲವೆಂಬ ಶಬ್ದ ಬೀಳುತ್ತಲೇ ಹೆಗಲ ಮೇಲಿದ್ದ ಕಲ್ಲು ಒಡೆಯುವ ಚಾನವನ್ನು ಹೆಗಲ್ಮೇಲೆ ಏರಿಸಿಕೊಂಡು ಊರತ್ತ ಬಂದರು. ಅಷ್ಟರಲ್ಲಾಗಲೇ ಊರವರ ಕಿರುಚಾಟ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗಂಡ ರಾಗಪ್ಪನೊಂದಿಗೆ ಕೆಲಸಕ್ಕೆ ಹೋಗಿದ್ದ ರಕ್ಷ್ಮವ್ವಳು ಗಂಡನ ಹಿಂದೆ ಓಡೋಡಿ ಬಂದಳು. ಕೆರೆದಂಡೆಗೆ ಬಂದು ಎದೆ ಬಡಿದುಕೊಂಡು ಉರುಳಾಡಿ ಅಳತೊಡಗಿದರು. ನೆರೆದ ನೂರಾರು ಜನರು ಗೋಳೋ ಎಂದು ಅಳತೊಡಗಿದರು. ‘ಸಾಬರ ರುಬಾನಿಯಿಂದ ಗಾಮ ಬದುಕಿದನು. ಇಲ್ಲಂದ್ರೆ ಗಾಮನು ಕೆರೆಯ ಪಾಲಾಗುತ್ತಿದ್ದನು’ ಅಂತಾ ಜನರು ಮಾತನಾಡುತ್ತಿದ್ದರು. ಚಚ್ಚಲ-ಮಚ್ಚಲ ಗಂಡುಡ್ರನ್ನು ಕಂಡಿದ್ದ ರಕ್ಷ್ಮವ್ವ ಹಾಡ್ಯಾಡಿ ಅಳುತ್ತಾ ‘ಅಯ್ಯೋ! ದೇವರ ನಿನ್ನ ಮಾರಿಗೆ ಮಣ್ಣಾಕ, ನನ್ಮಕ್ಳ ಬೇಕಾಗಿದ್ವೇನು ನಿನಗ? ಹಾಳಾದವನ. ದಿನಕ್ಕೊಂದು ಛಂದ್ವಾಗಿ ಬೆಳಿತಿದ್ದ ನನ್ನ ಬಳ್ಳಿ ಕಿತಂಗು ಬಿಟ್ಕಿಯಲ್ಲೋ! ಸುರಗನನ್ನು ಕಂಡ ದೇವರಿಗೆ ಹರಕೆ ಹೊತ್ತು ಹಡೆದಿದ್ನಲ್ಲೋ, ಹರಕೆ ಹನ್ನೇರಡು ವರ್ಷ ಅಂದು, ಭೀರಪ್ಪನ ಹರಕೆ ಇನ್ನು ತೀರ್ಸಿರಿಲಿಲ್ಲ. ಅಷ್ಟರೊಳಗೆ ಕಿತ್ಗಂಡು ಬಿಟ್ಟಿಯಲ್ಲೋ, ಬೆವರು ಸುರಿಸಿ ಬ್ಯಾಳಿಸಿದ್ವಲ್ಲೋ. ಕೋಳಿ ಮ್ಯಾಲೆ ಪ್ರೀತಿ ಅಂದು, ವಾರಕ್ಕೊಮ್ಮೆ ಕೋಳಿ ತಿನ್ನಸತ್ತದ್ನೋಲ್ಲೋ..... ಇನ್ಯಾರಿಗೆ ಕೈ ತುತ್ತು ಮಾಡಿ ತಿನ್ಸಲೋ ಆನ್ವೇರಿ ಭೀರಪ್ಪ ಚನಾಪುರ ದುರ್ಗಮ್ಮ’ ಅಂತಾ ಎದೆಬಡಿದುಕೊಂಡು, ಕೆರೆಗೆ ಮಣ್ಣು ತೂರುತ್ತಾ ಅಳುತಿದ್ಲು. ಇತ್ತ ಗಂಡ ರಾಗಪ್ಪ ‘ರಾಮ- ಲಕ್ಷ್ಮಣ, ಇದ್ದಂಗೆ ಇದ್ರಲ್ಲೋ, ದಿನಾ ಯಾರ್ಡು ಟ್ಯಾಕ್ಟ್ರಿ ಕಲ್ವಡದು ನಿಮ್ನ ಜ್ವಾಪಾನ ಮಾಡಿದ್ನಲ್ಲೋ, ನಿನ್ನ ಕಣ್ಗೆ ನನ್ನ ಮಕ್ಳು ಒತ್ತಿದ್ರನೋ ದೇವಾ’ ಅಂತಾ ಅಳ್ತಿದ್ದ. ಈ ಸಂಕಟ ಮತ್ತು ಆಕ್ರಂದನ ಕಾಳ್ಗಿಚ್ಚನಂತೆ ಹಬ್ಬಿ ಊರಿಗೆ ಊರೇ ಮುಸಲಧಾರೆಯಂತೆ ಕಣ್ಣೀರು ಹಾಕುತ್ತಿತ್ತು. ಇದರ ನಡುವೆ ಸಾಬರ ಚಕ್ಕೀರಪ್ಪ ‘ನನ್ಮಗ ವೋಗಿ, ರಾಗಪ್ಪನ ಮಗ ಉಳಿಬೇಕಿತ್ತೋ ಅಂತಾ ಬೊರಲಾಗಿ ಬಿದ್ದು’ ಅಳುತಿದ್ದನು. ಹೀಗೆ ಆವತ್ತು ಸುರಗನನ್ನು ಬಲಿ ತೆಗೆದುಕೊಂಡ ಹಳೆಕೆರೆ ಶಾಂತವಾಗಿತ್ತು. ಅದಕ್ಕೂ ಮಿಗಿಲು ಸಂತೃಪ್ತ ಆಗುತ್ತೆ ಅನಿಸುತ್ತೆ. ಮಗುವನ್ನು ‘ಆಹುತಿ’ ಪಡ್ಕೊಂಡ ಸಂತೋಷಕ್ಕಿಂತ ಮಗನನ್ನು ಕಳಕೊಂಡ ರಕ್ಷ್ಮವ್ವ ಮತ್ತು ರಾಗಪ್ಪರ ನೋವು, ಸಂಕಟ, ಆಕ್ರೋಶ-ಆಕ್ರಂದನ. ಒಂದು ಹಿಡಿ ಸೊಪ್ಪಿಗಾಗಿ ಮಾತಿಗೆ ಮಾತು ಬೆಳೆದು ಮಾತ್ಬಿಟ್ಟಿದ್ದ ಚಕ್ಕೀರಪ್ಪನ ಹೆಗಲಿಗೆ ಜೋತುಬಿದ್ದು ಅಳುತ್ತಿದ್ದನು ರಾಗಪ್ಪ. ‘ಮಾವ, ಅಕ್ಕಪಕ್ಕದ ಮನೆಯಲ್ಲಿದ್ರು ನಿನ್ನ ಮಗ ರುಬಾನಿ ಜ್ವತೆ ಬೆರಿಬ್ಮಾಡ್ರಿ, ಮಾತಾಡ್ಸಬೇಡಿ, ಕೂಡಿ ಆಡಬ್ಯಾಡ್ರಿ ಅಂತಾ ನನ್ಮಕ್ಳಿಗೆ ಹೇಳುತ್ತಿದ್ದೆ. ಇವತ್ತು ರುಬಾನಿ ಗಾಮನನ್ನು ಬದುಕಿಸಿದ್ದಾನೆ’ ಅಂತಾ ಗೋಳೊ ಅಂತಾ ಅಳುತ್ತಿದ್ದ. ರಾಗಪ್ಪ ಮತ್ತು ರಕ್ಷ್ಮವ್ವ ದೇವರಿಗೆ ಬೈಯ್ಯುತ್ತಾ, ಇನ್ನೊಂದು ಕಡೆ ತನ್ನ ಒಡಲ ಕುಡಿಗಾಗಿ ನ್ಯಾಯ ಕೇಳಲು ಬಳಸುತ್ತಿದ್ದ ಶಬ್ದಗಳ ಆಕ್ರೋಶಕ್ಕೆ ಬೆದರಿ, ಹಳೆಕೆರಿ ಗಂಗವ್ವ ಮೌನಕ್ಕೆ ಶರಣಾಗಿದ್ಲು. ತನ್ನ ಒಡಲಲ್ಲಿ ಒಂದಿಷ್ಟು ಮಿಸುಕಾಡದೇ ತನಗೂ ವತ್ತರಿಸಿ ಬರುತ್ತಿದ್ದ ದುಃಖವನ್ನು ಹಳೆಕೆರ ಗಂಗವ್ವ ಅದ್ಮಿಟ್ಟುಕೊಂಡಿದ್ಳು. ಇತ್ತ ಚಕ್ಕೀರಪ್ಪನ ಹೆಂಡತಿ ‘ನನ್ಮಗ ರುಬಾನಿನ ನೀ ಆಹುತಿ ತಗೊಂಡ್ ನಮ್ಮ ಅಳಿಯ ಸುರಗನನ್ನು ಉಳಿಬೇಕಿತ್ತು’ ಅಂತಾ ನೆಲ ಗೆಬರಿ ಅಳುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT