ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಕಪಲಿ ಬಾವಿ

Last Updated 24 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಗಂಗಯ್ಯ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಒಲಿ ಕೆದರಿ ಬೆಂಕಿ ಮಾಡಿ, ಅಂಬಲಿ ಚಟಿಗಿಗೆ ಹುಳಿ ಹೊಯ್ದು ಒಲಿ ಮ್ಯಾಲಿಟ್ಟು, ಬೆನಕಡ್ಡಿ ಬಾಯಲ್ಲಿ ನುರಿಸುತ್ತ ಕೆರೆಕಡೆ ಹೋದ. ಬಂದವನೇ ಆಗಲೇ ಹೊತ್ತು ಮೀರಿದವನಂತೆ ಗಿಡ್ಡುಗಳನ್ನು ಹಕ್ಕಿಯಿಂದ ಹೊರಗೆ ಕಟ್ಟಿ, ಸಗಣಿ ಹೊಡೆದುರ ಗ್ವಾತ ಮುಗಿದು ಕೈ ಕಾಲು ಮಾರಿ ತೊಳೆದ. ದೇವರಗುಣ್ಣಿಯಲ್ಲಿನ ಈಬತ್ತಿ ಹಣೆಗೆ ಹಚ್ಚಿಕೊಂಡು ಮಂದೇವ್ರು ಗುಡಚಿ ಈರಣ್ಣನಿಗೆ ಅಡ್ಡಬಿದ್ದು ಪಡಸಾಲೆಯ ಕಟ್ಟೆಯ ಮ್ಯಾಲೆ ಬಂದು ಕುಂತ. ಚಾ ಸೋಸಿಕೊಡಲು ಅವ್ನ ಹೆಂಡ್ತಿ ಶೇಷಮ್ಮ ನೆಲಕಟ್ಟಿದ್ದಳು. ಲಕ್ವ ಹೊಡೆದು ಎರಡು ವರ್ಷವಾಗಿತ್ತು. ಕೈಕಾಲು ತಿರಿವಿಕೊಂಡು ಹಾಸಿಗೆಯಲ್ಲೇ ಉಳಿದ ಜೀವ ಕೊನೆ ಸುಖಕ್ಕಾಗಿ ಹೆಣಗಾಡುತ್ತಿತ್ತು. ತನ್ನ ಸಣ್ಣ ಮಗಳು ಸಾಕಮ್ಮ ಮೈ ನೇರತು ಹದಿನೈದು ದಿನ ಆದ್ರು ಎಬ್ಬಿಸೋ ಕಾರ್ಯ ಮಾಡಲಿಲ್ಲ ಅಂತಾ ಗಂಡನ ಮ್ಯಾಲೆ ಸೆಟಗೊಂಡಿದ್ದಳು. ಅರಿಷಣ ಮೈ ಆರದ ಮಗಳು ಹಿತ್ತಲ ಮುಂಚೆಯಲ್ಲಿ ಅಷ್ಟಿಷ್ಟು ಕೆಲಸ ಮಾಡಿಕೊಂಡಿತ್ತು. ಓಲೆಯ ಮೇಲಿನ ಚಾ ಇಳಿವಿ ಗಳಾಸಿಗೆ ಸೋಸಿಕೊಂಡು ಬಂದು ಕೊಟ್ಟಳು. ಗಂಗಯ್ಯ ಕೆರೆಕಡೆ ಹೋಗುವ ಅವರಿವರನ್ನು ನೋಡುತ್ತಾ... ನಗೆ ಚಾಟ್ಲಿ ಮಾಡುತ್ತ... ಚಾ ಹೀರತೊಡಗಿದ. ಕೊನೆ ಗುಟುಕು ಎಗರಿಸಿ ಗಳಾಸ ಕಟ್ಟೆ ಮೇಲಿಟ್ಟು ಕಟಾಂಜನದ ಪಡಿಜಂತಿಗೆ ತೂಗು ಹಾಕಿದ್ದ ಕಲ್ಲಿಗಳನ್ನೊಮ್ಮೆ ನೋಡಿದ. ಅವನ ತೆಲಿಯಲ್ಲಿ ಬಳ್ಳಿ ಹಬ್ಬಿ ಎಳೆಗಳು ಪಿಳಿ ಪಿಳಿ ಕಣ್ಣು ಬಿಡತೊಡಗಿದವು. 'ಇನ್ನೊಂದು ವಾರದಾಗ ಬಳ್ಳಿ ಬಲಿಯುತ್ತೆ, ಅಂಗೈತುಂಬ ಎಲಿ ಕುರತಾವ, ದಿವ್ಸ ಏನಿಲ್ಲಾಂದ್ರೂ ಮೂರ್ನಾಕು ಕಲ್ಲಿ ಇಳ್ಳೇದೆಲಿ ಹೊಂಡುತಾವೆ, ಎಲ್ಲಕಡೆ ಮಳಿ ಇಲ್ದ ತ್ವಾಟ ಒಣಗ್ಯಾವು ಪೇಟೆಯಾಗ ಎಲಿಪೆಂಡಿ ತೇಜಿ ಚೊಲೋ ಐತಿ' ಅಂತಾ ಮನಸಿನಲ್ಲಿ ಮಂಡಿಗಿ ತಿನ್ನತೊಡಗಿದ.

ಎದ್ದು ಮೈಮುರಿದು ಆಕಳಿಸಿಕಂತ ಬಂದ ತನ್ನ ಮಗ ಚಂದ್ರನಿಗೆ ಉಗ್ಗುತ್ತಾ "ಲೇ... ಬೇ... ಬೇ... ಬೇಬರ್ಷಿ...! ಮೈ ಮುರ್ದಿದ್ದು ಸಾಕು ಗಿಡ್ಡುಗಳಿಗೆ ನು... ನು... ನುಗ್ಗಿಸೊಪ್ಪು ಹಾಕು ಬೆಷ್ಯಾಗಿ ಮೇಯ್ಲಿ. ಕಪನಿ ಹಾಯಿಸೋದು ಮಧ್ಯಾಣ ತಿರುಗತೈತಿ, ಹೊಟ್ಟೆ ಅಳ್ಳಿಯಾದ್ರೆ ಬಳ್ಗ ಹೊಗೆಯೋದಿಲ್ಲ. ಏ ತಾಯಿ ಸಾಕಮ್ಮ ತ್ವಾಟಕ ಅಂಬಲಿ ಕಟ್ಟು, ನಾನು ನಿಮ್ಮ ಅಣ್ಣ ಅಲ್ಲೇ ಉಣ್ಣುತಿವಿ" ಎಂದು ಕಪಲಿ ಮಿಣಿ, ಮಟ್ಟದ ಬೆಣಿ, ಹಲಗೆಯ ಮಣಿಯನ್ನು ಜೋಡಿಸಿಕೊಳ್ಳಕಚ್ಚಿದ.

ಗಂಗಯ್ಯನ ವಯಸ್ಸು ಐವತ್ತು ಇರಬೈದು, ನೋಡಾಕ ಮೈ ಕೈ ತುಂಬಿಕೊಂಡು ಗಡದ್ದಾಗಿದ್ದ. ತೆಲೆ ಮಾತ್ರ ಬೋಳಾಗಿದ್ದು ಬೊಕ್ಕೆಯಾಗಿ ಬೆವತಾಗ ಬಿಸಿಲಿಗೆ ಮೀರಿ ಮೀರಿ ಮಿನುಗುತ್ತಿತ್ತು. ಕೆಲಸಕ್ಕೆ ನಿಂತಾಗ ಬೆವರಹನಿಗಳು ತೆಲೆಯಿಂದ ಇಳಿದು ಹಣೆಯ ಸುಕ್ಕುಗಳನ್ನು ದಾಟಿ ಮೂಗಿನಿಂದ ತೊಟ್ಟಿಕ್ಕುತ್ತಿದ್ದವು. ಕೆಲಸಕ್ಕೆ ಕೈ ಹಚ್ಚಿದ ಮೇಲೆ ಬಿಡುವ ಪೈಕಿಯೇ ಅಲ್ಲ ; ಯಡ್ಡು ಮತ್ತೊಂದು ಮಾತು ಅವನ ಬಳಿ ಇಲ್ಲವೇ ಇಲ್ಲ. ಒಂದು ಹೊಡ್ತ ಯಡ್ಡು ತುಂಡು. ರಿಪಿ ರಿಪಿ ಮಾಡುವ ಜಾಯಮಾನ ಅವನದಲ್ಲ; ಅಡ್ಡಪಿಸಿಗಿ ಮಾಡ್ತೇನೆಂದರೆ ಕೇಳುವನಲ್ಲ. ದುಡಿದರೆ ಮಾತ್ರ ಕೂಳು, ಬಿಟ್ಟಿ ಕೂಳು ಯಾರಿಗೂ ಹಾಕತಿರಲಿಲ್ಲ ಹೆಂಡ್ತಿ ಮಕ್ಕಳಿಗೆ ಅಷ್ಟೆ ಅಲ್ಲ ಅಪ್ಪ ಅವ್ವನಿಗೂ ಕೂಡಾ. ತನ್ನ ಅವ್ವನ ಮ್ಯಾಲೆ ಜಗ್ಗು ಪ್ರೀತಿ ಅವನಿಗೆ. ಕಷ್ಟ ಪಟ್ಟು ಸಾಕಿದ್ದರಿಂದ ಇರಬೈದು. ಅಪ್ಪನೆಂದರೆ ಕೂಳು ದಂಡ ಎನ್ನುತ್ತಿದ್ದ. ದುಡಿಮೆಯ ಇಚಾರದಾಗ ರಾಜಿಯಿಲ್ಲ ಹಾಗಾಗಿ ಗಂಗಯ್ಯನ ಹೊಲದ ಕೆಲಸಕ್ಕೆ ಹೋಗಲು ಕೂಲಿಯವರು ಹಿಂದೇಟು ಹಾಕುತ್ತಿದ್ದರು.

ಸಂಗಾಪುರದ ನಾಕೈದು ಕಪಲಿ ಬಾವಿಗಳಲ್ಲಿ ಇನ್ನು ಜೀವ ಇದ್ದದ್ದು ಗಂಗಯ್ಯನ ಬಾವಿಯಲ್ಲಿ ಮಾತ್ರ. ಅವ್ನ ಅಜ್ಜ ಮುತ್ತಜ್ಜರು ಕಪನಿ ಹೊಡೆಯಲೆಂದೇ ತೋಡಿದ ಬಾವಿಯದು. ಆ ಬಾವಿಯ ಕಪಲಿಯಿಂದನೇ ಎಲಿಬಳ್ಳಿ ತೋಟ ಉಸಿರಾಡುತ್ತಿತ್ತು. ಕಪಲಿ ಬಾನಿ ಎಂದರೆ ನೀರನ್ನು ಬಾವಿಯಿಂದ ಮೇಲೆತ್ತಲು ಬಳಸುವ ಚರ್ಮದ ದೊಡ್ಡದಾದ ಬಾನಿ. ಇದನ್ನು ಪರಮಾಷಿ ಕೋಣ ಇಲ್ಲವೆ ಎಮ್ಮೆಯ ಚರ್ಮದಿಂದ ಹೊಲೆದು ಮಾಡಿರುತ್ತಾರೆ. ಗಡಗದ ರಾಟೆಯ ಮುಖಾಂತರ ಕಪಲಿ ಮಿಣಿಯನ್ನು ಬಾನಿಗೆ ಕಟ್ಟಿರುತ್ತಾರೆ ಅದಕ್ಕೆ ಒಂದು ಬಾಲವಿರುತ್ತದೆ ಅದೆ ಕಪಲಿ ಬಾಲ. ನೀರು ನಿಲುಕುವಷ್ಟು ಉದ್ದನೆಯ ಮಿಣಿಯನ್ನು ಬಾನಿಗೆ ಕಟ್ಟಿ ಬಾಲಕ್ಕೆ ಜೋಡಿಸಿ ಎಳೆದು ಎತ್ತುಗಳ ನೊಗಕ್ಕೆ ಬಿಗಿದಿರುತ್ತಾರೆ. ಎತ್ತುಗಳು ಗೊತ್ತು ಮಾಡಿದ ಕಪಲಿ ತಗ್ಗಿನಲ್ಲಿ ನುಗ್ಗುತ್ತವೆ (ಕಪನಿ ತಗ್ಗು ಎಂದರೆ ಎತ್ತುಗಳು ಕಪಲಿ ಎಳೆದುಕೊಂಡು ಹೋಗಲು ತೋಡಿದ ತಗ್ಗಾದ ದಾರಿ, ಬರುಬರುತ್ತ ಈ ದಾರಿ ಕಡಿದಾಗುತ್ತದೆ, ಇದರಿಂದ ಎತ್ತುಗಳ ಹೆಗಲ ಹತ್ತಿ ಎಳೆಯಲು ಹಗುರವಾಗುತ್ತದೆ) ಕಪಲಿ ಹೊಡೆಯುವವ ಮಿಣಿಯ ಮೇಲಿನ ಹಲಗೆ ಮಣೆ ಮೇಲೆ ಕುಳಿತು ಎತ್ತುಗಳನ್ನು ಗದರಿಸುತ್ತಾನೆ. ಗೊತ್ತು ಮಾಡಿದ ಜಾಗವನ್ನು ತಲುಪಿದ ಕೂಡಲೇ ಕಪಲಿಯಾತ ಬೆಣೆ ಹಾಕುತ್ತಾನೆ. ಬಾವಿಯಲ್ಲಿ ನೀರು ತುಂಬಿದ ಚರ್ಮದ ಬಾನಿ ಮೇಲೆ ಬರುತ್ತದೆ. ಬಾಲವನ್ನು ಜಗ್ಗಿದ ಕೂಡಲೇ ನೀರು ಸುರಿಯುತ್ತದೆ. ಸುರಿದ ನೀರು ಕಾಲುವೆಯ ಮುಖಾಂತರ ಹರಿದು ತೋಟಕ್ಕೆ ಹೋಗುತ್ತದೆ. ಮೂವತ್ತು ವರ್ಷಗಳ ಹಿಂದೆ ಬಯಲುಸೀಮೆಯ ಅಲಲ್ಲಿ ಕಪಲಿ ಹೊಡೆಯುತ್ತಿದ್ದರು. ಕೆಟ್ಟ ಬ್ಯಾಸಿಗೆಯಲ್ಲಿ ಕಪಲಿ ಹೊಡೆದ ನೀರೆ ತೋಟ ಹಚ್ಚಗಿರಲು ಕಾರಣವಾಗಿತ್ತು. ಮುಂಡದ ಗಿಡಗಳನ್ನು ಸುತ್ತಿ ಸುತ್ತಿ ಅವಿಚಿಕೊಂಡ ಬೆಳದ ಬಳ್ಳಿಗಳು ಹೃದಯಾಕಾರದ ತನ್ನ ಎಲೆಗಳಿಂದ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದವು. ತೋಟದ ಸುತ್ತಲೂ ಬೆಳದು ನಿಂತ ನುಗ್ಗೆ, ಹಾಲಿವಾಣ ಗಿಡಗಳು ತಂಪೆರಚುತ್ತಿದ್ದವು. ಗುಳಜ್ಜನ ಬಾವಿ, ಮೂಲೇರ ಬಾವಿ, ಗೌಡ್ರು ಬಾವಿಯ ನೀರಿನ ಸೆಲೆಗಳು ಬತ್ತಿ ಅದು ಯಾವಾಗ್ಲೊ ಕಪನಿ ನಿಲ್ಲಿಸಿಬಿಟ್ಟಿದ್ದವು. ಆದ್ರೆ ಗಂಗಯ್ಯನ ಕಪಲಿಬಾವಿ ಮಾತ್ರ ಹಿಗ್ಗಾ ಮುಗ್ಗಾ ನೀರು ತುಂಬುತಿತ್ತು.

ಗಂಗಯ್ಯ"ಏ ತಾಯಿ ನಿಮ್ಮೌವ್ವ ಕಡೆ ನಿಗಾಯಿಡು, ಮನಿಕಡೆ ಜ್ವಾಕಿ ನಾ ಕಪಲಿ ಹೊಡ್ಯಾಕ ಹೊಕ್ಕೇನಿ" ಎಂದು ಗಿಡ್ಡುಗಳ ಕೊಳ್ಳು ಕಟ್ಟಿ, ಅಂಬಲಿ ಚಟಿಗಿ ತೆಲಿಮ್ಯಾಲ ಇಟಗೊಂಡು, ತತ್ರಾಣಿ ಬಗಲಿಗೆ ಹಾಕ್ಕೊಂಡು ಮೂಡುಗಡೆ ಮುಖಮಾಡಿ ಕಪಲಿ ಹಾಯಿಸಲು ಹೊಂಟ. ರಾತ್ರಿಪೂರ್ತಿ ಹಾಲಿವಾಣ, ನುಗ್ಗಿ ಸೊಪ್ಪು ನುಗ್ಗು ಹಾಕಿದ್ದ ಗಿಡ್ಡುಗಳ ಬೆನ್ನು ಮುಟ್ಟುವುದೇ ತಡ ಬುಗಿಲ್ ಬುಗಿಲ್ ಹೆಜ್ಜೆ ಹಾಕತೊಡಗಿದವು. ಊರು ಮುಂದಿನ ಕೊಪ್ಪಲು ಹಾಯ್ದು ಕೇರಿಯೇರಿ ಮೇಲಿಂದ ಚೌಡವ್ವನ ಪಟ್ಟಿ ಸೇರಿ ಇಳಕಲ್ಲುಗುಂಟ ಜಾರಿ ತ್ವಾಟದ ಬಾವಿ ಸೇರಿದವು. ಬಂದ ಕೂಡಲೇ ತಮ್ಮ ಅಭ್ಯಾಸಬಲದಂತೆ ಗಿಡ್ಡುಗಳು ಕಪಲಿ ನೊಗಕ್ಕೆ ಹೆಗಲು ಕೊಟ್ಟವು, ಕೊಳ್ಳಕಣ್ಣಿ ಕಟ್ಟಿ, ಕಪಲಿ ಮಿಣಿಯನ್ನು ಬಿಗಿದು, ಮಣಿ ಸರಿಮಾಡಿಕೊಂಡು, ಕಪಲಿ ಬಾಲವನ್ನು ಎತ್ತಕಟ್ಟಿ, ಗಿಡ್ಡುಗಳ ಬೆನ್ನ ಮುಟ್ಟಿ ಚಾ... ಚಾ... ಬಸವ ಎಂದ. ಗದರಿಸಿದ್ದೆ ತಡ ಗಿಡ್ಡುಗಳು ತಗ್ಗಿನಲ್ಲಿ ನುಗ್ಗಿದವು. ಕಪಲಿ ಬಾನಿ ಕವಚಿಕೊಂಡು ನೀರು ತುಂಬಿಕೊಳ್ಳದೆ ಬಸ್ಸುಗ್ ! ಅಂತಾ ಮೇಲೆ ಬಂದಿತು. ಕವಣೆ ಬೀಸಿದ ಕಲ್ಲಿನಂತೆ ಗಿಡ್ಡುಗಳು ಮುಗ್ಗರಿಸಿ ನಿಂತವು. ಗಂಗಯ್ಯ ಕುಂತ ಮಣೆ ಮೇಲಿಂದ ಹಿಂದಕ್ಕೆ ಜಾರಿ ಬಿದ್ದನು, ಅವನ ಕೈಯಲ್ಲಿ ಗಿಡ್ಡುಗಳ ಹಗ್ಗವಿದ್ದರೂ ಜೋಲಿ ನಿಲ್ಲಲಿಲ್ಲ. ಎದ್ದು ನಿಂತು ನೋಡಿದ. ಅವನಿಗೆ ಆಶ್ಚರ್ಯವಾಯಿತು, ಎಲ್ಲಿಯಾದರೂ ಮಿಣಿ ಕಿತ್ತು ಹೋಯಿತೇ ಎಂದು. ನೋಡಿದ ಮಿಣಿ ಹರಿದಿರಲಿಲ್ಲ ಗಟ್ಟಿಯಾಗಿತ್ತು. ನೊಗಸುತ್ತು ನೋಡಿದ ಸರಿಯಾಗಿತ್ತು, ಅವನಿಗೆ ಒಂದು ತಿಳಿಯಲಿಲ್ಲ. ಬಾವಿಯನ್ನು ಇಣುಕಿ ನೋಡಿದ... ನೋಡಿದರೆ ಚರ್ಮದ ಕಪಲಿ ಬಾನಿ ಕಿತ್ತು ಹೋಗಿದೆ !

ಗಂಗಯ್ಯನಿಗೆ ದಿಗಿಲಾಯ್ತು,ಕೆಟ್ಟ ಸಂಕಟ ಬಾಯಿಗೆ ಬಂತು. 'ಇದ್ಕೇನು ಅತೋ ಯಪ್ಪಾ... ! 'ಹ್ವಾದ ವರ್ಷ ಇನ್ನು ಕೋಣಚಮಡ ಕಟ್ಸಿದ್ದೆ ಇಸ್ಟಬೇಗ ಹ್ಯಾಂಗ ಹರಿದೋತು. ಅವನಿಗೆ ಅನುಮಾನದ ಹುಳ ಹಾರಾಡಿತು. ಬಗ್ಗಿ ನೋಡಿದ ! ಯಾರು ಕೂಡ್ಗೋಲಿನಿಂದ ಕೊಯ್ದಂಗಿತ್ತು. ಇತ್ತು ಏನು ಯಾರೋ ಬೇಕು ಅಂತಾನೆ ಕೊಯ್ದು ಹಾಕಿದ್ರು. "ಕ...ಕ...ಕಳ್ಳ ಮು... ಮು... ಮುಂಡೆ ಮಕ್ಕಳು ಬೇಕಂತಾನೆ ಕೋ... ಕೋ... ಕೊಯ್ದು ಹಾಕ್ಯಾರ, ಕೈಗೆ ಬಂದ ತ್ವಾಟ ಹಾಳುಮಾಡಕ ನಿಂತಾರ" ಎಂದು ತೊದಲುತ್ತ ನಿಂತ. ಅವನ ಬೊಕ್ಕ ತೆಲಿಮ್ಯಾಲೆ ಈರಣ್ಣನ ಶರಭಿ ಗುಗ್ಗಳ ದಿಂಗು ದಿಂಗು ಉರಿಯತೊಡಗಿತು.

ಗಿಡ್ಡುಗಳ ಕೊಳ್ಳು ಹರಿದು ಮಾವಿನ ಮರಕ್ಕೆ ಕಟ್ಟಿ ನುಗ್ಗಿ ಸೊಪ್ಪು ಹಾಕಿ, ಏನನ್ನೋ ಲೆಕ್ಕ ಹಾಕುತ್ತ ಚೌಡವ್ವನ ಗುಡಿ ಕಡಿಗೆ ಹೊಂಟ. ಚೌಡವ್ವನಿಗೆ ಅಡ್ಡಬಿದ್ದು ಪಾದಗಟ್ಟಿ ಬಳಿಬಂದು ಕುಂತು ಸುತ್ತಲಿನ ಹತ್ತಾರು ಹೊಲಗಳನ್ನು ದಿಟ್ಟಿಸಿದ. ಬಿಕೋ ಎಂದು ಬಾಯ್ದೆರೆದು ಮಲಗಿದ್ದವು. ಕೆಂಧೂಳಿ ಕೆದರಿ ಗಾಳಿ ಬಿಸಿಯನ್ನು ಉಗ್ಗುತ್ತಿತ್ತು. ಗಿರಿಂಕೇರಿ ಹೊಲಗಳಿಗೆ ಚೌಡವ್ವನ ಕಾವಲಿತ್ತು. ಗಿರಿಂಕೇರಿ ಚೌಡವ್ವ ನಿನ್ನಾಲ್ಕು ಉಧೋ... ಉಧೋ... ಅಂತಾ ಗಡೆಕಟ್ಟಿ ಹೊಲಗಳ ಕಮ್ಮತಗಾರ ಮಂದಿ ಎಲ್ಲರು ಸೇರಿಕೊಂಡು ಆಷಾಡದ ಕೊನೆ ಶುಕ್ರವಾರ ದೇವಿಗೆ ಪಟ್ಲಿಗಿ ತುಂಬುತ್ತಿದ್ದರು. ಗಂಗಯ್ಯನು ಭಕ್ತಿಯಿಂದ ನೆಡೆದುಕೊಳ್ಳುತ್ತಿದ್ದ. ಬೆಳಗಿನ ಪೂಜೆಗೆಂದು ಜೋಗವ್ವ ಬಂದಳು.
"ಯಾಕ ಗಂಗಣ್ಣ ಜೋಲು ಮಾರಿ ಮಾಡ್ಕೊಂಡು ಗುಡಿ ಕಡೆ ಬಂದಿದಿ"

"ಏನು ಅಂತ ಹೇಳಲಿ ಜೋಗವ್ವ ಯಾವನೋ ನನ್ನ ಕಪಲಿ ಬಾನಿ ಕೊಯ್ದು ಹಾಕ್ಯಾನ, ಅವ್ನ ಮನಿ ಹಾಳಾಗ, ನನ್ನ ಕಂಡ್ರೆ ಉರ್ಕೊಂಡು ಸಾಯು ಮು... ಮುಂಡೆ ಮಕ್ಕಳನ್ನ ಏನು ಮಾಡೋಣ"
"ಅಯ್ಯೋ ದ್ಯಾವ್ರೆ... ದುಡುಕೊಂಡು ತಿನ್ನೋರಿಗೆ ಕಾಲ ಅಲ್ಲಬಿಡು ಗಂಗಣ್ಣ"
"ಆ ನನ್ನ ಮಕ್ಕಳಿಗೆ ಒಂದು ಗತಿ ಕಾಣಿಸದಿದ್ರೆ ಕೇಳು...
ನಾನು ನಮ್ಮ.. ನಮ್ಮಪ್ಪಗೆ ಹುಟ್ಟಿಲ್ಲ"
"ಗಂಗಣ್ಣ ಗಡೆಕಟ್ಟಿ ಚೌಡವ್ವನ ಪವಾಡ ದೊಡ್ಡದೈತಿ. ಅಕಿ ನಂಬಿದವ್ರ ಎಂದು ಕೈ ಬಿಡಾಕಿಲ್ಲ. ಜ್ವಾಳದ ಕಿಚ್ಚಡಿ ಪಟ್ಲಿಗಿ ತುಂಬಿಸು ನೋಡು, ಯಾರು ಮಾಡಿದರ ಅವ್ರು ವಾರದೊಳಗ ಸುತ್ತರಕ್ಕೊಂದು ಬೀಳತಾರ" ಎಂದು ಹುಬ್ಬು ಕುಣಿಸಿದಳು.
"ಅಂಗAತೀಯಾ..."
"ನೀ ಚಿಂತಿ ಮಾಡಬ್ಯಾಡ ಗಂಗಣ್ಣ ಎಲ್ಲ ಸರಿಹೊಕ್ಕೇತಿ. ನಾಳೆ ದೇವಿವಾರ ಐತಿ ಸಂಜಿಮುAದ ಬಂದುಬಿಡು ನಾನೆಲ್ಲ ಅಣಿಮಾಡ್ಕೋತೀನಿ" ಜೋಗವ್ವನ ಮನದೊಳಗೆ ಜೋಳದ ಕಿಚ್ಚಡಿ ಗೊಜಗೊಜನೆ ಬೆಳ್ಳುಸಿರು ಬಿಡುತ್ತಾ ಕುದಿಯತೊಡಗಿತು.
"ಆಯ್ತು ಯವ್ವ. ನಾ ಹೋಲ್ಡತಿನಿ, ಒಳ್ಳೆ ಎಮ್ಮಿದು ಇಲ್ಲ ಕೋಣದ ಚಮಡ ಹುಡ್ಕೆಂದು ಬರಬೇಕು ಇಲ್ಲಾಂದ್ರೆ ತ್ವಾಟ ಕೈ ತಪ್ಪಿ ಹೊಕ್ಕೇತಿ, ಅಡರಿ ನಿಂತ ಬಳ್ಳಿ ಮುದುರಿ ಬೀಳತೇತಿ" ಎಂದು ಉಕ್ಕಡಗಾತ್ರಿ ಕಡೆ ಹೊಂಟ. ಬುಡ್ಡಿಚೀಲದಿಂದ ಅಡಕಿ ಬೆಟ್ಟಿ ತೆಗೆದು ಬಾಯಿಗೆ ಒಕ್ಕೊಂದು, ಒಣಗಿದೆಲೆಗೆ ಡಬ್ಬಿಯ ಒಣಸುಣ್ಣ ಗೀರಿ, ತಂಬಾಕು ನೀವಿ ಸ್ವಾಟಿಗೆ ಒತ್ತಿಕೊಂಡ. ಸ್ವಾಟಿಯಲ್ಲಿನ ಬೆಟ್ಟಿ ಅದೇಕೋ ಇಂದು ನುರಿಯದಾಗಿತ್ತು. ವಯಸ್ಸಿನಲ್ಲಿ ನುಗ್ಗುಹಾಕುತ್ತಿದ್ದ ತನ್ನ ಕಸುವು ಇಂದೇಕೋ ಜೋಲುಬೀಳತೈತಲ್ಲಾ ಅನಿಸಿತು. 'ತ್ವಾಟ ಕೈ ತಪ್ಪಿಹೊಕ್ಕೇತಿ. ಮಗಳ ಕಾರ್ಯ ಬೇರೆ ಮಾಡಬೇಕು, ದೊಡ್ಡ ಮಗಳ ಮಂಜವ್ವನ ಲಗ್ನದ ಸಾಲ ಗುಡ್ಡದಂಗ ಕುಂತತಿ. ಕೈಯಾಗ ಕಾಸಿಲ್ಲ. ಛೆ... ಇವ್ಳು ನೋಡಿದ್ರ ಸೆಟಗೊಂಡು ಕುಂತಾಳ' ಮನಸ್ಸಿನ ಇಚಾರಗಳು ಜೇನುನೊಣಗಳಂತೆ ಮುಕುರಿಕೊಂಡವು. ಮನದಲ್ಲಿನ ಕಾವು ಬೂದಿಯೊಳಗಿನ ಕೆಂಡದಂತಿತ್ತು. ಆ ಕಾವೇ ಅವನಲ್ಲಿ ಬರಬರನೇ ಕಾಲು ಹಾಕುವಂತೆ ಮಾಡಿತ್ತು.

ಗಂಗಯ್ಯ ಉಕ್ಕಡಗಾತ್ರಿಯ ಮಾದರ ಕೇರಿ ತಲುಪಿದಾಗ ಮದ್ಯಾಹ್ನ ತಿರುಗಿ ಬಿಸಿಲು ತದಕುತ್ತಿತ್ತು. ಗಾಳಿ ಗೊತ್ತಿಲ್ಲದಂಗ ಹೋಗಿತ್ತು. ಮಂಜೂರುಪಾಟಿನ ಅಂಗಿ ತೋಳು ಸೇರದೆ ಹೆಗಲ ಮೇಲಿತ್ತು. ತಿಪ್ಪೆ ಕೆದರುತ್ತಿದ್ದ ಕೋಳಿಗಳು ಕತ್ತೆತ್ತಿ ನೋಡಿ ಮತ್ತೆ ಕೆದರುತ್ತಿದ್ದವು. ಹುಂಜವೊಂದು ಬೆದೆಬಂದು ಎಗರಿ ಕೊಕ್ಕಿನಿಂದ ಮೀಟಿತು, ಭುಗಿಲೆದ್ದ ಕೋಳಿಗಳು ಕ್ಷಣದಲ್ಲಿ ಸರಿದೋದವು. ಗಟಾರದ ಕೊಳಚೆ ವಾಸನೆ ಮೂಗಿಗಡರುತ್ತಿತ್ತು. ಆಚೆ ಕೇರಿಯಲ್ಲಿ ಅಳಿದುಳಿದ ಎಲುಬಿನ ತುಂಡುಗಳಿಗೆ ನಾಯಿಗಳು ಗಲಾಟೆಗಿಕ್ಕಿಕೊಂಡಿದ್ದವು. ದ್ಯಾವತಿ ಮುಗಿದು ವಾರವಾಗಿದ್ದರು ಹಬ್ಬದ ಗುಂಗು ಹೋಗಿರಲಿಲ್ಲ. ದ್ಯಾವತಿ ಮಾಡಿದ ಬೀಗರು ಬಿಜ್ಜರು ಇನ್ನು ಕದಲಿರಲಿಲ್ಲ. ಉಪಚಾರ ಎಣ್ಣೆಯಾದಿಗಳು ಮುಗಿದಿದ್ದರೂ ಕೂಲಿ ಹೋಗದೆ ಮೈ ಚೆಲ್ಲಿ ಮಲಗಿದ್ದರು. ಕೇರಿಯ ಕೊನೆಯಲ್ಲಿದ್ದ ಹಂಚಿನಮನಿ ನೀಲಣ್ಣನ ಮನೆ ಹತ್ತಿರವಾಗುತ್ತಲೇ ಹೋಗಾಕ ಮನಸ್ಸು ಹೀಗಳಿಯುತ್ತಿತ್ತು. ಮೈ ಮನಸ್ಸು ಕಾಲು ಕಟ್ಟಿದ ಕುದುರೆಯಾಗಿತ್ತು. ಗಂಗಯ್ಯನ ತೆಲಿಯಲ್ಲಿ ಏನೇನೋ ಇಚಾರಗಳು ಬರುತ್ತಿದ್ದವು. "ಚಮಡ ಹ್ಯಾಂಗ ಕೇಳಬೇಕು, ಕೇಳಿದ್ರೆ ಕೊಡ್ತಾನ, ಹ್ವಾದ ಸಲದ್ದು ರೊಕ್ಕನೆ ಇನ್ನು ಆದ್ರು ಕೊಟ್ಟಿಲ್ಲ, ಕೇಳಿ ಮುಖ ಕೆಡಿಸಿಕೊಳ್ಳದು ಎಷ್ಟು ಸರಿ" ಎಂದು ಕೊಂಡ. ಅಳುಕತ್ತಲೆ ನೀಲಪ್ಪನ ಮನಿ ಮುಂದೆ ಬಂದು ನಿಂತ. ಅವನ ಹೆಂಡ್ತಿ ಕೆಂಚಿ ನೋಡಿದವಳೇ ಒಳ ಹೋಗಿ ಗಂಡನಿಗೆ "ಗಂಗಯ್ಯನರು ಬಂದಾರ, ಅದೇನು ಅಂತ ಹೋಗಿ ಕೇಳು"
"ಅವರು ಇನ್ಯಾಕ ಬರ್ತಾರ ಕಪಲಿ ಬಾನಿಗೆ ಚಮಡ ಕೇಳಾಕ ಬಂದಿರತ್ತಾರ"
"ಕಳೆದ ಸಲ ಕೊಟ್ಟ ಎಮ್ಮಿ ಚಮಡದು ರೊಕ್ಕನೆ ಇನ್ನು ಮುಟ್ಸಿಲ್ಲ ಆಗ್ಲೇ ಮತ್ತೆ ಕೇಳಾಕ ಬಂದಾರ. ರೊಕ್ಕ ಕೈಯಾಗ ಇಟ್ಟು ಮ್ಯಾಲೆನ ಚಮಡ ಅನ್ರಿ" ಅಂದು ಒಲೆ ಚಾಚಿದಳು. ಎದ್ದು ಹೊರಬಂದ ನೀಲಪ್ಪ "ಏನು ಸ್ವಾಮೇರು ತುಂಬಾ ದೂರ ಬಂದಿರಿ"
"ಕಪಲಿ ಕಟ್ಟಾಕ ಎಮ್ಮಿ ಚಮಡ ಬೇಕಿತ್ತು"
"ನನ್ನ ಕಡೆ ಚಮಡಾ ಎಲ್ಲಿ ಐತ್ರಿ ಸ್ವಾಮೇರೆ"
"ನಿನ್ನ ಕಡೆ ಚಮಡಾ ಇಲ್ಲ ಅಂದ್ರ ಹ್ಯಾಂಗಲೇ ನೀಲಾ. ಮೊನ್ನೆ ಮೊನ್ನೆ ಇನ್ನು ದ್ಯಾವತಿ ಆಗೇತಿ ಊರು ಕೋಣದ ಚಮಡ ನಿನ್ನ ಕಡೇ ಐತಿ ಅಂತಾ ದುರ್ಗ್ಯಾರ ಮಾರಪ್ಪ ಹೇಳ್ಯಾನ" ಇವರ ಮಾತಿಗೆ ಅಕ್ಕಪಕ್ಕದ ಮನೆಯವರು ನಿದ್ದೆ ಕೊಡವಿ ಹೊರಗೆ ಇಣುಕಿದರು.
"ನೋಡ್ರಿ ಸ್ವಾಮೇರೆ ಅದ್ಕ ನಾಕು ಮಂದಿ ಪಾಲು ಐತಿ, ದರ್ಗ್ಯಾರ ಮಾರಪ್ಪ ಹೇಳ್ಯಾನ ಅಂತಾ ಚಮಡ ಕೊಡಕಾಗಲ್ಲ" ಎಂದು ಕಡ್ಡಿ ಮುರಿದನು.
"ಕೈಗೆ ಬಂದ ತ್ವಾಟ ಸಾಯಕಚ್ಚಿತಿ, ಪೇಟ್ಯಾಗ ಇಳ್ಳೇದೆಲಿ ತೇಜಿ ಚಲೋ ಐತಿ, ಅಜ್ಜಯ್ಯನ ಆಣೆಗೂ... ನಿನ್ನ ರೊಕ್ಕಾ ಮುಟ್ಟಿಸಿ ಬಿಡ್ತೀನಿ. ಇಲ್ಲ ಅನ್ನಬ್ಯಾಡ" ಅಂತಾ ಗಂಗಯ್ಯ ದಮ್ಮಯ್ಯ ಗುಟ್ಟಿದ.
"ನೋಡ್ರಿ ಸ್ವಾಮೇರ ಧರ್ಮಪ್ಪನ ಎಮ್ಮಿ ಸಾಯಂಗೈತಿ ಅದರ ಚಮಡ ಬೇಕಂದ್ರೆ ಕೊಯ್ದು ಕೊಡ್ತೀನಿ" ಅಂತಾ ಮಾತು ಸುರಿವಿದ.
"ಅಲ್ಲಲೇ ನೀಲಾ ಅವನೆಮ್ಮಿ ಸಾಯೋದು ಯಾವಾಗ ನೀನು ಚಮಡಾ ಸುಲಿಯೋದು ಯಾವಾಗ, ಅಲ್ಲೀಗಂಟ ಹ್ಯಾಂಗ ತೋಟ ಸಲುವೋದು" ಎಂದು ಬಡಬಡಿಸಿದ.
"ಅಂಗಾದ್ರೆ ಒಂದಕೆಲ್ಸ ಮಾಡ್ರಿ. ನಿಮ್ಮ ಮನ್ಯಾಗ ಮುದಿ ಆಕಳ ಐತಲ್ಲ ಅದ್ನ ಹೊಡೆದು ಕಳ್ಸಿ ಚಮಡ ಕೊಯ್ದು ಕೊಡತೀನಿ. ಗೊಡ್ಡು... ಗಬ್ಬು ಕಟ್ಟಂಗಿಲ್ಲ ಹಿಂಡAಗಿಲ್ಲ ಇಟ್ಟುಕೊಂಡು ಏನುಮಾಡಿರಿ" ಗಂಗಯ್ಯನಿಗೆ ತಂಬಾಕ ನೆತ್ತಿಗೆತ್ತಿತು. ಕೊಳ್ಳುಬಿಗದಂಗಾತು. ಗಂಟಲುಬ್ಬಿ ಕೆಮ್ಮಿದ. ಇದು ಆಗೋ ಮಾತಲ್ಲ ತ್ಯಗಿ' ಅಂದ್ಕೊಂಡು ತನ್ನ ಬೋಳ ತೇಲಿ ಸವರಿಕೆಂದು ಮುಂದೆ ಬಂದ.

ಮುದುಕಜ್ಜ ಕಟ್ಟೆಯ ಮ್ಯಾಲೆ ಕುಳಿತು ಬಿಸಿಲಿಗೆ ಮುಖ ಮಾಡಿ ಮುಖ, ಹೊಟ್ಟೆ ಹೊಳ್ಳಿಯಾಗುವಂತೆ ಬೀಡಿ ಜಗ್ಗುತ್ತಿದ್ದ. "ಯಾರಪ್ಪ ತಮ್ಮ ನೀನು ನಂಗಂತೂ ಗೊತ್ತು ಸಿಗಲಿಲ್ಲ" ಅಂತ ಈಕ್ಷಿಸಿದ. "ನಾನು ಗಂಗಯ್ಯ ಕಣಜ್ಜ" ಎಂದು ಮುದುಕನ ಮುಂದೆ ಬಾಗಿದ.
"ಯಾವ ಗಂಗಯ್ಯ ಶಿವಾಲಯ್ಯನ ಮಗ ಗೋದಿಹುಗ್ಗಿ ಗಂಗಯ್ಯ ಅಲ್ವಾ" ಬಾ ಮಗ ಅಂತಾ ಕರೆದು ಕಟ್ಟೆ ಮೇಲೆ ಕೂರಿಸಿಕೊಂಡ. ಇವರ ಮಾತುಗಳನ್ನು ಕೇಳಿಸಿಕೊಂಡಿದ್ದ ಮುದುಕಜ್ಜ ಬೀಡಿ ಜಗ್ಗಿ ಹೋಗೆಬಿಟ್ಟು "ಅಣ್ಣತಮ್ಮಗಳ ಜಗಳ ಅಂದ್ರ ಕುಂಡ್ಯಾಗಿನ ಕುರ ಇದ್ದಾಂಗ, ಯಾರಿಗೂ ಕಾಣಲ್ಲ ಕೀವು ಕಿತ ಕಿತ ಅನ್ನೋದು ಬಿಡಲ್ಲ" ಎಂದು ಬೊಚ್ಚು ಬಾಯಿ ಹಗಲ ಮಾಡಿ ಜೋರಾಗಿ ಉಕ್ಕುರಿಸಿ ಉಕ್ಕುರಿಸಿ ನಕ್ಕ. ಗಂಗಯ್ಯ ಮುದುಕಜ್ಜನ ಗುಟ್ಟನ್ನರಿಯದವನಾಗಿ "ಯಜ್ಜ ಅಣ್ಣತಮ್ಮಗಳು ಜಗಳ... ಅಂದ್ರ... ನಿನ್ನ ಕವಡಿ ಅರ್ಥ ಆಗಲಿಲ್ಲ ನಂಗೆ" ಎಂದು ಎದ್ದು ನಿಂತ. "ಅಯ್ಯೋ ಬೆಳಿಗ್ಗೆ ನಿನ್ನ ತಮ್ಮ ಸಂಗಯ್ಯ ಬಂದಿದ್ದ. ಕೇರಿಯವರಿಗೆಲ್ಲಾ ಯಾರು ಬಂದು ಚಮಡ ಕೇಳಿದ್ರು ಕೊಡಬ್ಯಾಡರಿ ಅಂತಾ ಹೇಳಿ ಹೋಗ್ಯಾನ... ಅದೇನೋ ನಿಮ್ಮ ಜಗಳ ಒಂದು ತಿಳಿವಲ್ದು" ಎಂದು ಬೀಡಿ ಮೂತಿಯನ್ನು ಕಟ್ಟಿಗೆ ತಿಕ್ಕಿದ. ನಿಂತಲ್ಲೇ ಗಂಗಯ್ಯನ ಕಾಲುಗಳು ಉಸುಬಿನಲ್ಲಿ ಹೂತಂತಾಗಿ ಎತ್ತಿಡಲಾಗದಷ್ಟು ಭಾರವಾದವು.

ಗಂಗಯ್ಯನಿಗೆ 'ಗೋಧಿಹುಗ್ಗಿ' ಅನ್ನುವ ಅಡ್ಡೆಸರು ಬರಲು ಅವನು ಮಾಡುತಿದ್ದ ಗಮಾಡುವ ಗೋಧಿಹುಗ್ಗಿಯೇ ಕಾರಣವಾಗಿತ್ತು. ಹುಟ್ಟಿದ ಮಗಿಗೆ ಹೆಸರಿಡುವ ಕಾರ್ಯದಿಂದ ಹಿಡಿದು ಹೊಲೆ ತೆಕ್ಕೊಳ್ಳೋ ತಿಥಿಕಾರ್ಯದವರೆಗೂ ಗಂಗಯ್ಯನದ್ದೆ ಅಡುಗೆ ಉಸ್ತುವಾರಿ. ಸುತ್ತ ನಾಕಾರು ಊರುಗಳಲ್ಲಿ ಒಂದು ಕಾಸು ಹಿಸ್ಕಳದೇ ಹುಗ್ಗಿ ಮಾಡುತ್ತಿದ್ದ. ದಮ್ಮಯ್ಯ ಗುಡ್ಡೆಹಾಕಿ ನಾಕು ರೂಪಾಯಿ ಕೊಟ್ರೆ. 'ತ್ಯಗಿ ತ್ಯಗಿ ನಾನು ದುಡ್ಡಿಗಾಗಿ ಈ ಕ್ಯಾಮೆ ಮಾಡಲ್ಲ. ನಾಕು ಮಂದಿಗೆ ಅನ್ನ ಬೇಸಿಹಾಕಿದ ಪುಣ್ಣ್ಯಾ ಸಿಗತೈತಲ್ಲ ಅಷ್ಟು ಸಾಕು' ಅಂತೇಳಿ ಸಣ್ಣ ಡಬರಿಯಲ್ಲಿ ಹುಗ್ಗಿ ಮನಿಗೆ ಹೊಯಿತ್ತಿದ್ದ. ಅವನ ಹುಗ್ಗಿಗಾಗಿ ಚಿಕ್ಕಮಕ್ಕಳಾದಿಯಾಗಿ ಹಲ್ಲಿಲ್ಲದ ಮುದುಕರ ಬಾಯಲ್ಲಿ ಕೂಡಾ ನೀರೂರತ್ತಿತ್ತು. ಗಂಗಯ್ಯ ಕೊಪ್ಪರಿಗೆ ಸೌಟು ಹಿಡಿದನೆಂದರೆ ತಾಸೊತ್ತಿನಲ್ಲಿ ಹುಗ್ಗಿ ಮಳ್ಳಿ ಗಮಗುಡುವ ವಾಸನೆ ಊರು ತುಂಬಿಹೋಕ್ಕಿತ್ತು. ಹುಗ್ಗಿಯಷ್ಟೇ ಅಲ್ಲ ಅವನು ಮಾಡುವ ಮಾದ್ಲಿ, ಜೋಳದ ಕಿಚ್ಚಡಿ, ಮುಳ್ಳುಗಾಯಿ ಪಲ್ಯ ನಾಲಿಗೆ ಕುಣಿಯುವಂತೆ ಮಾಡುತ್ತಿದ್ದವು. ಹಾಂಗಾಗಿ ಗಂಗಯ್ಯನ ಕೈ ರುಚಿಗೆ ಊರುಮಂದಿ ಬೆರಗಾಗಿ 'ಗೋಧಿಹುಗ್ಗಿ ಗಂಗಯ್ಯ' ಅಂತಾ ಕರೀತಿದ್ರು.

ಗಂಗಯ್ಯ ಮನೆಗೆ ಬಂದಾಗ ಇಳಿಸಂಜೆ. ಮಗಳು ಕಸಗುಡಿಸಿ ಅಂಗಳಕ್ಕೆ ನೀರಿನ ಚಳ ಹೊಡೆಯುತ್ತಿದ್ದಳು. ಬಂದವನೇ ಉಸ್ಸೆಂದು ಕಟ್ಟೆಯ ಮ್ಯಾಲೆ ಕುಂತು ಎಡಗೈ ಹಣೆಗಚ್ಚಿ ಮುಗಿಲನ್ನೊಮ್ಮೆ ಶೂನ್ಯ ದೃಷ್ಟಿಯಿಂದ ನೋಡಿದ. ಸುಡುಗಾಡಮಟ್ಟಿಯ ನೆತ್ತಿಮ್ಯಾಲಿನ ಆ ಮೋಡದೆದೆಯ ಗುಂಡುಗೆಯಲಿ ನಾಕುಹನಿ ನೀರಿಲ್ಲವೇ? ಕೋಲ್ಮಿಂಚು ಸೀಳಿ ಮಳೆ ಸುರಿಯಬಾರದೆ ಅನಿಸಿ ಗೋಣು ಕೆಳ ಹಾಕಿದ. ತಾನು ಕಪನಿ ಹೊಡಿಯಲು ಒಂದು ಜೊತೆ ಗಿಡ್ಡಗಳನ್ನು ತರಲು ಹಾರನಹಳ್ಳಿ ಜಾತ್ರೆಗೆ ಹೋಗಿದ್ದು. ಎತ್ತರದ ದೊಡ್ಡ ಬೆಲೆಯ ಜಾತಿಎತ್ತುಗಳೇ ಜಾಸ್ತಿಯಿದ್ದಾಗ ಎರಡುದಿನ ಉಳಿದು ಆಯನೂರು ಜಾತ್ರೆಯಲ್ಲಿ ಒಂದು ಜೊತೆ ಗಿಡ್ಡುಗಳನ್ನು ಹೊಂದಿಸಿಕೊAಡಿದ್ದು. ಅವುಗಳನ್ನು ತಂದು ಕಪನಿ ಹೊಡೆಯುವಂತೆ ಸಾರು(ರೂಢಿ) ಮಾಡಿದ್ದು. ಬಾವಿ ಹೊಲದಾಗ ಹಾರೆ ಗುದ್ದಲಿ ತಕ್ಕೊಂಡು ಕಾಲುವೆ ತೆಗೆದಿದ್ದು. ಊರಮಂದಿ 'ಬಾವಿ ನೀರು ತಳಸೇರಿದವು, ಕೆಟ್ಟ ಬ್ಯಾಸಿಗಿ ಕವಳಿಗಿ ಇಳ್ಳೇದೆಲಿನೂ ಕೈಗೆ ಹತ್ತೋದಿಲ್ಲ' ಅಂತ ಶಕನು ಹೇಳಿದ್ದರೂ ಕೇಳದಂಗ ಮುಂಡಗಿಡ ನೆಟ್ಟು ತ್ವಾಟ ಕಟ್ಟಿದ್ದು. ನಾಕು ವರ್ಷ ಮೈ ನೆಣ ಸುರಿಸಿದ ಮ್ಯಾಲ ಬಳ್ಳಿ ಹಬ್ಬಿ ಪಿಳಿ ಪಿಳಿ ಕಣ್ಣುಬಿಟ್ಟದ್ದು. ಬಳ್ಳಿ ಹೆಚ್ಚಲಿ ಅಂತ ಆಷಾಡದಾಗ ಚೌಡವ್ವಗ ಪಟ್ಲಿಗಿ ತುಂಬಿಸಿದ್ದು, ಕಾರ್ತೀಕದಾಗ ಎಣ್ಣಿ ಹನ್ಸಿದ್ದು, ಎಲ್ಲವೂ ಸಿವಡು ಸಿವಡಾಗಿ ಬಿಚ್ಚಿಕೊಂಡವು. ಮಗಳು ಕುಡಿಯಲು ನೀರು ತಂದುಕೊಟ್ಟಳು. ದೀರ್ಘಶ್ವಾಸ ಬಿಟ್ಟು ಗಟಗಟನೆ ಚರಿಗೆ ನೀರು ಕುಡಿದ. ಎದೆಯ ಕಾವು ಮಾತ್ರ ತಣ್ಣಗಾಗಲಿಲ್ಲ.

ಮುದುಕಜ್ಜನ ಮಾತು ಹೊಟ್ಟ್ಯಾಗ ಕಾರಮುರುದಂಗಾಗಿ ಅಣ್ಣತಮ್ಮಗಳಂದ್ರ ಕೆಂಡಕ್ಕೆ ನೀರು ಸೋಕಿದಂತಾಗುತ್ತಿತ್ತು. ಪಾಲು ವಿಭಾಗ ಮಾಡಬೇಕಾರ ಬಾವಿ ಹೊಲ ತನಗೆ ಬೇಕು ಅಂತ ಹಠಹಿಡಿದಿದ್ದು. ತಮ್ಮ ಸಂಗಯ್ಯನ ಜೋಡಿ ಬಾಯಿ ಮಾಡಿದ್ದು. ಪಂಚ್ಯಾತಿಯವರ ಮುಂದಾನೆ ಸಣ್ಣತಮ್ಮ ಬಸಯ್ಯನ ಕೊಳ್ಳಪಟ್ಟಿಯಿಡುದು ಗುದ್ದಾಡಿದ್ದು. 'ಏ ಗಂಗಣ್ಣ ತಮ್ಮಗಳು ಬಿಟ್ಟದ್ದ ಅಣ್ಣ ತಗಬೇಕು ಅಂತ ಹಿರಿಯರು ಮಾಡಿದ್ದ ಮಾತೈತಿ ನೀ ಒಪ್ಪಲ್ಲ ಅಂದ್ರ ಹ್ಯಾಂಗೋ ಮಾರಾಯ. ನೀವು ಅಣ್ಣ ತಮ್ಮಗಳು ಹೊಡದಾಡಿಕ್ಕೆಂದು ಸಾಯಿರಿ' ಅಂತ ಹೇಳಿ ಎದ್ದುಹೋಗಿದ್ದು. ಪಂಚ್ಯಾತಿ ಬಗಿಯರಿಯದೆ ಬಾವಿ ಹೊಲ ಉಳಿಮೆಗೆ ಹೋಗಿದ್ದು. ಹೊಲ್ದಾಗ ಕೈ ಕೈ ಮಿಲಾಯಿಸಿ ಮೇಲುಗೈ ಸಾಧಿಸಿದ್ದು. ಒಳಗೊಳಗೇ ಉರುಕ್ಕೊಳ್ಳತಿದ್ದ ತಮ್ಮಂದಿರ ಮುಂದ ದೊಡ್ಡ ಮಗಳ ಲಗ್ನ ಅದ್ದೂರಿಯಾಗಿ ಮಾಡಿದ್ದು. ಇದರಿಂದ ಊರಾಗ ಒಂದಿಷ್ಟು ತೂಕದವನಾಗಿದ್ದು. ಆದ್ರೆ ಮಗಳ ಮದುವಿಮಾಡಿ ಆರು ತಿಂಗಳಿಗೆ ಹೆಂಡ್ತಿ ನೆಲಕಟ್ಟಿದ್ದು. ಕಪಲಿ ಬಾನಿ ಹರಿದಿದ್ದು, ಒಳಗೊಳಗ ತಮ್ಮಂದಿರು ತೊಡೆಗೆ ಕೂಡ್ಗೋಲು ಹಾಕಿದ್ದು ಎಲ್ಲವೂ ಒಣಗಿದ ಗಾಯ ಮತ್ತೆ ಕೀವು ತುಂಬಿಕೊಂಡಗಾಗಿತ್ತು. ಇವೆಲ್ಲಾ ಗಂಗಯ್ಯನನ್ನು ಇನ್ನಿಲ್ಲದಂತೆ ದಣಿಸಿದ್ದವು.

ಮನೆಯ ಹಿರಿಯನಾಗಿ ತನ್ನ ಅವ್ವನ ಜೊತೆ ಕತ್ತೆ ದೋಕಿದಂಗ ದೋಕಿದ್ದು. ಬಂಡಿಗಟ್ಟಲೆ ಕೆಲಸವನ್ನು ತಾನು ಒಬ್ಬನೇ ಮಾಡಿದ್ದು. ಉಂಬಳಿ ಹೊಲ್ದಾಗ ಎಂಟೆತ್ತಿನ ಚಲಾರ ಹೂಡಿ ಕಬ್ಬಿಣ ನೇಗಿಲು ಹೊಡೆದಿದ್ದು. ಹೆಬ್ಬಂಡಿಯಂತ ಎಂಡಿ ಕಿತ್ತದ್ದು, ಬಿಸಿಲುಕಾದು ಮಾಗಿಯಾಗಿದ್ದು, ತಿಂಗಳಗಟ್ಟಲೆ ಒಕ್ಕಲುಮಾಡಿದ್ದು, ಕಣತುಂಬಾ ಬಿಳಿಜೋಳದ ರಾಶಿ ಬಿದ್ದದ್ದು. ಅದೆ ವರ್ಷ ಇಬ್ಬರು ತಮ್ಮಗಳು ಲಗ್ನ ಮಾಡಿದ್ದು. ಎಲ್ಲರೂ ಮೆಚ್ಚುವಂಗ ಮನಿ ಮಂತ್ಯಾನ ನಿಭಾಯಿಸಿದ್ದು. ಅದಕ್ಕೋಸ್ಕರ ಬಾವಿ ಹೊಲ ನನಗೆ ಬೇಕು ಅಂತ ಕೇಳಿದ್ರಲ್ಲಿ ತಪ್ಪೇನು? ಅಷ್ಟು ಅಧಿಕಾರವಿಲ್ಲವೇ? ಕೂಳಿಗೆ ದಂಡವಾಗಿದ್ದ ಅಪ್ಪನ ಕಟ್ಟಿಕೊಂಡು, ಅಡಾಹುಡಿ ಪಾಲ್ತು ತಿರುಗಾಡುವ ತಮ್ಮಗಳ ಕಟ್ಟಿಕೊಂಡು ಸಂಸಾರದ ಬಂಡಿ ಏಗಿದ್ದು ಅದ್ಕೆ ಸಿಕ್ಕಿದ್ದಾದ್ರೂ ಏನು? ಸಂಸಾರ ನೊಗದ ಊಟಿಬಿದ್ದ ಎತ್ತಿನ ಹೆಗಲಬಾವು. ಗಂಗಯ್ಯನ ಒಕ್ಕತನ ಒಮ್ಮೆ ದೀರ್ಘವಾಗಿ ನಿಡುಸುಯ್ಯಿತು.

ಸುಡುಗಾಡಮಟ್ಟಿಯ ಕಡೆಯಿಂದ ಗಾಳಿಧೂಳಿ ಸುತ್ತರಕ್ಕಂದು ಸುತ್ತರಕ್ಕಂದು ಎದ್ದಿತು. ಕೆಮ್ಮುಗಿಲು ನೋಡು ನೋಡುತ್ತಿದ್ದಂತೆ ಕಪ್ಪಾಯಿತು. ಮೋಡದೆದೆಯಿಂದ ಚಿಗರಿ ಕೋಡಿನಂತೆ ಕೋಲ್ಮಿಂಚು ಸೆಳಕು ಹಾಕಿತು. ಬಿಳಿಜೋಳ ಉಗ್ಗಿದಂತೆ ಮಳೆಯ ಹನಿಗಳು ಸುರಿಯತೊಡಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT