ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು

ಕಥೆ
Last Updated 20 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

‘ನೆಲ್ಲಿಕೆರೆಯಿಂದ ಏನಾದ್ರೂ ಕಾಗದ ಬಂದಿತ್ತೇ ಅಂತ ಕೇಳ್ಕಂಡು ಬರಬೇಕಿತ್ತು, ಆಗ್ಲೇ ಗಂಟೆ ಹನ್ನೊಂದು ಆಗಿದೆ. ಪೋಸ್ಟ್ ಬಸ್ ಇಷ್ಟ್ ಹೊತ್ಗೆ ಬಂದಿರುತ್ತೆ...’

‘ಸ್ವಲ್ಪ ಬಾಯಿ ಮುಚ್ಚುತ್ತೀಯಾ... ಬೆಳಗಾಗಿ ಎದ್ರೆ ನನ್ಗೆ ಅದೇ ಕೆಲ್ಸ ಅನ್ಕಂಡಿದಿಯಾ... ಆ ನಿಮ್ಮಪ್ಪ ಒಂದೂ ಕಾಗದ ಬರಯಲ್ಲ, ನೀನು ನನ್ ಪ್ರಾಣ ತಿನ್ನದು ಬಿಡಲ್ಲ...’

‘ಹೆತ್ತಪ್ಪ ಹೇಗಿದಾನೆ ಅನ್ನೋ ಸಂಕಟ ನಿಮ್ಗೆ ಹೇಗೆ ಅರ್ಥವಾಗಬೇಕು. ಅಮ್ಮ ಸತ್ತಾಗ ನೆಲ್ಲಿಕೆರೆಗೆ ಹೋಗಿದ್ದು, ನಾಲ್ಕು ತಿಂಗಳು ಆಗ್ತಾ ಬಂತು. ಅಳಿಯ ಅನ್ನಿಸಿಕೊಂಡೋರು ಒಂದು ತಪನಾದ್ರೂ ಹೋಗಿಬರಲಿಲ್ಲ. ನನ್ನನ್ನು ಹೋಗಲಾಡಿಸಲಿಲ್ಲ...’ ಆಗಷ್ಟೆ ತುಳಸಿ ಪೂಜೆ ಮುಗಿಸಿಕೊಂಡು ಮನೆಯೊಳಗೆ ಬರುತ್ತಿದ್ದ ಗಾಯತ್ರಿ ಅಳಹತ್ತಿದ್ದಳು.

‘ಮನೆ ಮಗ ಅನ್ನಿಸಿಕೊಂಡೋನು, ಅದೇ ನಿಮ್ಮ ಅಣ್ಣ, ಮನೆಯಾಳ್ ತನಕ್ಕೆ ಹೋಗ್ಲಿ, ನಾನು ನಿಮ್ಮಪ್ಪನ ಯೋಗಕ್ಷೇಮ ನೋಡ್ಕಂಡು ಕೂತ್ತಿರುತ್ತೀನಿ, ಅಲ್ವಾ...’

‘ನೀವು ಹೋಗ್ಬೇಡಿ ಆಯ್ತಾ... ಆದ್ರೆ ನನ್ನನ್ನಾದ್ರೂ ಹೋಗೋದಕ್ಕೆ ಬಿಡಿ... ಬೆಳಗಿನ ಬಸ್ಸಿಗೆ ಹೋಗಿ ಸಂಜೆಗೆ ಬಂದುಬಿಡ್ತೀನಿ...’

‘ಆದ್ರೆ ನೀನು ಬೆಳಿಗ್ಗೆ ಹೋಗಿ ಸಂಜೆ ಬರೊ ಜಾಯಮಾನದವಳಲ್ಲವಲ್ಲ, ಇವಾಗ್ ಏನ್ ಬೇಡ, ನಾನೇನಾದ್ರೂ ತಿಪಟೂರು ಕಡೆ ಹೋದ್ರೆ ಹಾಗೆ ಹೋಗಿಬರ್ತಿನಿ...’

‘ವಾರಗಟ್ಲೆ ಕೂರೋದಕ್ಕೆ ನಮ್ಮಮ್ಮ ಏನ್ ಇದಾಳಾ... ಅಮ್ಮ ಇದ್ದಿದ್ರೆ, ಇವತ್ ಒಂದ್ ದಿನ ಇದ್ದೋಗೆ ಮಗು’ ಅನ್ನೋಳು... ಒಂದು ಸತಿ ಹೋಗಿಬರ್ತಿನಿ... ಅಣ್ಣುನ್ನ ನೋಡ್ಕಂಡು ಬರ್ತಿನಿ...’

‘ಬೆಳಿಗ್ಗೆ ಹೋಗಿ ಸಂಜೆ ಬರೋ ಹಾಗಿದ್ರೆ, ಯಾವಾತ್ತಾದ್ರೂ ಹೋಗಿ ಬಾ, ನನ್ನನ್ನ ಮಾತ್ರ ಕರೀಬೇಡ’ ಸ್ವಲ್ಪ ಸಮಾಧಾನಗೊಂಡಂತೆ ಕಂಡ ಅನಂತಣ್ಣ ಹೇಳಿದ.

‘ನಾಳೆ ಶುಕ್ರವಾರ ಹೋಗಿಬರಲಾ... ಆಷಾಢ ಶುಕ್ರವಾರ, ನಮ್ಮೂರಮ್ಮಂಗೂ ಒಂದು ಅಡ್ ಬಿದ್ ಬರಬೋದು...’

***

‘ನೆಲ್ಲಿಕೆರೆ ಗೇಟು... ನೆಲ್ಲಿಕೆರೆ ಗೇಟು...’ ಎಂದು ಬಸ್ ಕ್ಲೀನರ್ ಕಿರುಚುವ ಮುನ್ನವೇ ಗಾಯತ್ರಮ್ಮ ಒಳಗಿನಿಂದ ದಾರಿ ಮಾಡಿಕೊಂಡು ಬಸ್ ಡೋರ್ ಹತ್ತಿರ ಬಂದು ನಿಂತಿದ್ದಳು... ತಿಪಟೂರಿಗೆ ಕಾನ್ವೆಂಟ್‌ಗೆ ಹೋಗುವ ಮಕ್ಕಳು, ತಹಶೀಲ್ದಾರ್ ಅಫೀಸ್‌ನಲ್ಲಿ ಕೆಲಸ ಇರೋರು, ಗಾರೆ ಕೆಲಸಕ್ಕೆ ಹೋಗುವವರು, ಬಸ್ಸನ್ನು ಏರಹತ್ತಿದ್ದರು. ಕೆಲವು ಪರಿಚಯಸ್ಥರು ‘ಚೆನ್ನಾಗಿದ್ದಿಯಾ ಗಾಯತ್ರಮ್ಮ’ ಎಂದು ಕೇಳಿದರು. ಊರ ದಾರಿ ಎಷ್ಟು ಚೆನ್ನಾಗಿದೆ. ಗೇಟಿನಿಂದ ಊರೊಳಗೆ ಎರಡು ಮೈಲಿ ನಡೆದರೂ ಆಯಾಸವಾಗದಂತ ವಾತಾವರಣ, ಸುತ್ತ ಎಲ್ಲಿ ಕಣ್ಣು ಹೊರಳಿಸಿದರೂ ಹೆಸರು ಗಿಡ ಹುಲುಸಾಗಿ ಬೆಳೆದಿದೆ. ಕೆಲವರು ಆಗಲೇ ಹೆಸರು ಗಿಡ ಕೀಳುತ್ತಿದ್ದಾರೆ. ಕೆಲವು ಮಂದಿ ಆಗಲೇ ರಾಗಿ ಒಟ್ಲುಗಳನ್ನೂ ನಿರ್ಮಿಸುತ್ತಿದ್ದರು. ಈ ಹಚ್ಚಹಸಿರಾಗಿದ್ದ ಕಂಗೊಳಿಸುತ್ತಿದ್ದ ಹೊಲಗಳನ್ನು ನೋಡುತ್ತಾ ಬಂದ ಗಾಯತ್ರಿ ಊರ ಹೆಬ್ಬಾಗಿಲಿನ ಚೆನ್ನಕೇಶವನ ದೇವಸ್ಥಾನ ಬಂದಾಗ ತನ್ನ ನಡಿಗೆ ಅದರ ಪಾಡಿಗೆ ಬಲಕ್ಕೆ ತಿರುಗಿ ಮೂರನೆಯ ಮನೆಯ ಬಂದಿದ್ದು ಸೋಜಿಗವೆನಿಸಲಿಲ್ಲ.

ಮನೆಯ ಬಳಿ ಬಂದಾಗ ಬಾಗಿಲಿಗೆ ಒಳಗಿನಿಂದ ಚಿಲಕ ಸೇರಿಸಿ ಬೀಗ ಹಾಕಿತ್ತು. ಅಲ್ಲೇ ಯಾರೋ ಬಂದಂತೆ ಆಯಿತು ಎಂದು ಆಚೆ ಬಂದ ಎದುರುಮನೆ ಸುಲೋಚನಾ, ‘ಗಾಯತ್ರಿ, ಯಾವಾಗ ಬಂದ್ಯೇ... ಬೀಗ ನಮ್ಮನ್ಲೇ ಇದೆ... ಕೇಶವ ಯಾವಾಗ್ಲೂ ತೋಟದಲ್ಲೇ ಇರ್ತನೆ.. ಬಾ, ಇಲ್ಲೇ...’ ಅಂತ ಕರೆದರು.

‘ಹೌದೇ... ಬೀಗದ ಕೈ ಕೊಡ್ತೀರಾ... ನೀವೇನಾದ್ರೂ ತೋಟುದ್ ಕಡೆ ಹೋದ್ರೆ ಅಣ್ಣುನ್ನ ಬರಕ್ಕೆ ಹೇಳ್ತಿರಾ...’

ಮನೆಯ ಬೀಗದ ಕೈಯನ್ನು ಸುಲೋಚನಾಳ ಕೈಯಿಂದ ತೆಗೆದುಕೊಂಡು ಬಾಗಿಲನ್ನು ತೆಗೆದಾಗಲೇ ಏನೋ ಒಂದು ಶೂನ್ಯ ಭಾವ ಆವರಿಸಿತ್ತು. ತಂದ ಲಗೇಜ್ ಬ್ಯಾಗನ್ನು ಅಡುಗೆಮನೆಯಲ್ಲಿ ಇಟ್ಟು ಮನೆಯನ್ನೆಲ್ಲ ಓಡಾಡ ಹತ್ತಿದಳು. ಮನಸ್ಸಿನಲ್ಲಿ ಅಡಗಿದ್ದ ದುಗುಡ ಆಚೆಯೂ ಬರುತ್ತಿಲ್ಲ, ಒಳಗೆ ನುಂಗಲೂ ಆಗುತ್ತಿಲ್ಲ. ‘ಮಗು, ಕಡುಬು ಮಾಡ್ಲೇನೆ...’ ಅನ್ನೋ ಅಮ್ಮನ ಮಾತು ಕೇಳಿಸುತ್ತಿಲ್ಲ.

ಹಿತ್ತಲಿನಿಂದ ಮನೆಯ ತಾಯಿಬಾಗಿಲಿಗೆ, ತಾಯಿಬಾಗಿಲಿನಿಂದ ಬೀದಿ ಬಾಗಿಲಿಗೆ ಅಮ್ಮ ಹೋಗುತ್ತಿದ್ದಾಗ, ಕೇಳಿಸುತ್ತಿದ್ದ ಗೆಜ್ಜೆ ಶಬ್ದ ಕೇಳಿಸುತ್ತಿಲ್ಲ. ಅಡುಗೆ ಮನೆಯಲ್ಲಿ ಒಂದೆರೆಡು ವೀಳ್ಯದೆಲೆ ಹಾಕಿ ಬೆಣ್ಣೆ ಕಾಯಿಸುತ್ತಿದ್ದ ವಾಸನೆ ಇರಲಿಲ್ಲ.
‘ಗಂಟೆ ಹನ್ನೆರೆಡು ಆಯ್ತು, ದನ ಹಿಡ್ಕಂಡು ಹೋಗಣೇನೆ ಮಗು...’ ಅನ್ನೋ ಮಾತೂ ಕೇಳಿಸಲಿಲ್ಲ. ಒಮ್ಮೆಲೇ ಜೋರಾಗಿ ಅತ್ತಳು, ಬಿಕ್ಕಬಿಕ್ಕಳಿಸಿ ಅತ್ತಳು. ಅವಳ ಅಳುವ ಕೇಳಿ ಸಮಾಧಾನಮಾಡಬೇಕೆಂದು ಮುಂದೆ ಬಂದ ಮನೆಯ ಕಂಬಗಳೂ ಅತ್ತವು.

‘ಗಾಯತ್ರಿ, ಒಂದು ತೊಟ್ಟು ಕಾಫಿನಾದ್ರೂ ಕುಡಿ’ ಎಂದು ಸುಲೋಚನಾ ಬಾಗಿಲು ಸರಿಸಿ ಒಳಗೆ ಬಂದಾಗಲೇ ಗಾಯತ್ರಿ ವಾಸ್ತವ ಲೋಕಕ್ಕೆ ಇಳಿದದ್ದು.

‘ಊಟಕ್ಕೆ ಅಲ್ಲೇ ಬಾ... ನಿಮ್ಮಪ್ಪನ್ನೂ ಅಲ್ಲೇ ಬರಕ್ಕೆ ಹೇಳ್ತೀನಿ... ಊರ ಹೆಣ್ಣುಮಗಳು ತವರಿಗೆ ಬಂದಾಗ, ಉಪವಾಸ ಕಳಿಸೋದಕ್ಕೆ ಆಗುತ್ತಾ...’ ಎಂದು ಹೇಳಿ ಹೊರಟರು.

‘ಸಾಕಷ್ಟು ಅತ್ತಿದ್ದೆ, ಮತ್ತೇಕೆ ಅಳಬೇಕು’ ಎಂದು ಕಾಫಿ ಹೀರಿ ಕಸಬರಿಕೆ ಹಿಡಿದಳು.

ಮನೆಯ ಮುಂದಿನ ಜಗಲಿಯ ಮೇಲಿನ ದೂಳನ್ನು ಗುಡಿಸಿದಳು, ಬಾಗಿಲಿಗೆ ದೊಡ್ಡ ರಂಗವಲ್ಲಿಯ ಹಾಸು, ಅಡುಗೆಯ ಮನೆಯ ಒಲೆಗಳಿಗೆ ಸಾರಣೆ, ತುಳಸಿ ಕಟ್ಟೆಗೆ ಶಂಖ, ಪದ್ಮ, ದನದ ಕೊಟ್ಟಿಗೆಗೆ ಸಾಂಬ್ರಾಣಿ, ಬಚ್ಚಲಿನ ಪಾಚಿ ಎಲ್ಲವೂ ಆಯಿತು.

ಎಷ್ಟೋ ದಿನದಿಂದ ಬೆಳಗದೇ ಇದ್ದ ತಾಮ್ರದ ಬಿಂದಿಗೆ ಬೆಳ್ಳಗಾಯಿತು. ಹುಳು ಹಿಡಿದಿದ್ದ ಅವಲಕ್ಕಿ, ಕಡ್ಲೆ ಹಕ್ಕಿಗಳಿಗೆ ಆಹಾರವಾಯಿತು. ದೇವರ ಮನೆಗೆ ಪಾರಿಜಾತ, ಮಲ್ಲೆ ಹೂವಿನ ಅಲಂಕಾರವಾಯಿತು.

‘ಪುಟ್ಟಿ, ಯಾವಾಗ ಬಂದ್ಯಮ್ಮಾ. ಒಂದ್ ಕಾಗದ ಹಾಕಿದಿದ್ದ್ರೆ, ಬಸ್‌ಸ್ಟ್ಯಾಂಡ್‌ಗೆ ಬರ್ತಿರಲಿಲ್ಲವೇ...’ ಎನ್ನುತ್ತಾ ಕೇಶವ ಕೆಮ್ಮುತ್ತಾ ಒಳಗೆ ಬಂದ.

‘ಇದ್ಯಾಕೆ ಕೆಮ್ಮುತಿದ್ಯಾ ಅಣ್ಣಾ... ತಿಪಟೂರಿಗೆ ಹೋಗಿ ಡಾಕ್ಟ್ರು ಹತ್ರ ತೋರಿಸಿಕೊಂಡು ಬರಬೇಕಿತ್ತು’

‘ಅಯ್ಯೋ, ಆಷಾಢದ ಗಾಳಿ ಅಲ್ವಾ... ಪ್ರತಿ ವರುಷ ಬರದೆಯಾ...’

‘ಶ್ರಾವಣಕ್ಕೆ ಹೋಗಿಬಿಡುತ್ತೆ ಅಲ್ವಾ...’ ಎಂದು ಜೋರಾಗಿ ಅಪ್ಪ, ಮಗಳು ಇಬ್ಬರೂ ನಕ್ಕರು.

ಅಪ್ಪ, ಮಗಳ ಮಾತು ಸಾಕಷ್ಟು ಆಯಿತು. ಆರೋಗ್ಯದ ಬಗೆಗಿನ ಮಾತೂ ಸಾಕಷ್ಟು ಆಯಿತು. ತಂದೆಯನ್ನು ತನ್ನೂರಿಗೆ ಬರಬೇಕೆಂದೂ ಹಟಹಿಡಿದಳು. ಸುಲೋಚನಾ ಅವರ ಮನೆಯ ಊಟವನ್ನು ಸವಿದು, ಮಧ್ಯಾಹ್ನವೇ ಅಮ್ಮನ ಗುಡಿಗೆ ಹೋಗಿ, ತವರಿನ ನೆನಪಿನ ಪುಸ್ತಕಕ್ಕೆ ಮತ್ತಷ್ಟು ಪುಟಗಳನ್ನು ಸೇರಿಸಿಕೊಂಡು ತನ್ನೂರಿಗೆ ಮರಳಿದಳು ತವರಿನಿಂದ ಗಾಯತ್ರಿ.

***

ಸುಮಾರು ಆರು ತಿಂಗಳು ಕಳೆದಿರಬಹುದು. ಬೆಳಗಿನ ಜಾವ ಮನೆಯ ಮುಂದೆ ಗಾಯತ್ರಿ ರಂಗೋಲಿ ಹಾಕುತ್ತಿದ್ದಳು. ದಾಯಾದಿಗಳ ಪೈಕಿಯ ನರಸಿಂಹ ಬೈಕ್‌ನಲ್ಲಿ ನೆಲ್ಲಿಕೆರೆಯಿಂದ ಬಂದ.

‘ಒಳಗೆ ಬಾ ನರಸಿಂಹಣ್ಣ, ಏನ್ ಹಿರಿಯೂರಿಗೆ ಹೋಗಿದ್ಯಾ...’

‘ಇಲ್ಲ ಕಣ್ಣವ್ವ, ನಾನು ಒಳಗೆ ಬರೋ ಹಾಗಿಲ್ಲ’

‘ಅದೂ... ನಿನ್ಗೆ ಕೇಶವ ಮಾವ ಅತ್ತೆ ಸತ್ತಾಗ್ಲಿಂದ ತೋಟುದ ಗುಡ್ಲಲ್ಲೇ ಇರತ್ತಿದಿದ್ದು ನಿನ್ಗೆ ಗೊತ್ತೇ ಐತೆ ಅಲ್ವೇನವ್ವ...’

‘ಅಪ್ಪಯ್ಯಂಗೆ ಏನಾಯ್ತು... ಹಾವಿಗೀವ್ ಏನಾದ್ರೂ ಕಚ್ಚೀತೆ...’ ಕಂಪಿಸುವ ಧ್ವನಿಯಲ್ಲೇ ಕೇಳಿದಳು.

‘ಏನೋ ಒಂಥರಾ ವಾಸನೆ, ಒಂದ್ ವಾರದಿಂದ, ಊರೊಳೆಗೆಲ್ಲ ರಾಚಿಕೊಂಡು ಬಿಟ್ಟಿತ್ತು. ದಿನೆ ದಿನೇ ಜಾಸ್ತಿ ಆಗ್ತಾ ಹೋಯ್ತು... ಸತ್ತು ಎಷ್ಟು ದಿನ ಆಗಿದ್ಯೋ ಗೊತ್ತಿಲ್ಲ, ಮುಟ್ಟಕ್ಕೂ ಆಗಕಿಲ್ಲ...’

ಕೈಯಲ್ಲಿ ಹಿಡಿದಿದ್ದ ರಂಗೋಲಿ ಬಟ್ಟಲು ಕೈಯಿಂದ ಜಾರಿ ನೆಲ ಸೇರಿತ್ತು.

‘ನಾನು ಗಾಯತ್ರಿಗಾದ್ರೂ ಒಂದ್ ಮಾತು ತಿಳಿಸೋಣ. ಮಗ ಅಂತೂ ಬರಕ್ಕಿಲ್ಲ ಅಂದ್ರೂ ಜನ ಕೇಳಲಿಲ್ಲ. ಈಗ್ಲೇ ವಾಸನೆ ತಡೆಯಾಕೆ ಆಗ್ತೀಲ್ಲ... ಆಮ್ಯಾಕೆ ಹದ್ದು, ಗೂಬೆಗಳು ತಿಂದ್ ಬಿಡ್ತಾವೆ... ಅಂತ ಹೇಳಿ ಗುಡಿಸಲಿಗೆಯಾ ಬೆಂಕಿ ಹಚ್ಚಿಬಿಟ್ರು...

‘ಸದ್ಯ ಇವಳ ತವರು ಮನೆ ಪೀಡೆಗಳೆಲ್ಲ ತೊಲಗಿದವು...’ ಎಂದು ಅಲ್ಲೇ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಗಾಯತ್ರಿ ಗಂಡ ತನ್ನಲ್ಲೇ ಹೇಳಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT