ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಸಾವಿತ್ರಿ ಬರೆಯಿಸಿದ ಆತ್ಮಕಥೆ

Last Updated 10 ಜುಲೈ 2022, 2:28 IST
ಅಕ್ಷರ ಗಾತ್ರ

‘ಹೌದು. ಸಾವಿತ್ರಿಯ ಅಪ್ರತಿಮ ಇಚ್ಚಾಶಕ್ತಿಗೆ ಇನ್ನೂ ಸರಿಯಾದ ಪುರಸ್ಕಾರ ಸಿಕ್ಕಿಲ್ಲ. ಎಂತಹ ಸಾಹಸಿ ಹೆಣ್ಣುಮಗಳು ಅವಳು ...’ ಮನಸ್ಸಿನಲ್ಲಿಯೇ ಅಂದುಕೊಂಡೆ.

ಸಾವಿತ್ರಿಯ ಕಥೆ ಓದುತ್ತಾ ಓದುತ್ತಾ, ನನಗೆ ಅವಳೊಬ್ಬ, ವರ್ತಮಾನ ಜಗತ್ತಿನಲ್ಲಿ ಕೂಡ ಇನ್ನೂ ಕಾಣಸಿಗದ ಭವಿಷ್ಯದ ಜಗತ್ತಿನ ಮಹಿಳೆಯಾಗಿ ಕಾಣಿಸಲಾರಂಭಿಸಿದಳು. ಹೀಗೆ ಹೇಳಿದರೆ ಆಶ್ಚರ್ಯವಾದೀತು, ನಿಜ. ಆದರೆ, ನನ್ನನ್ನು ಸಂಪೂರ್ಣವಾಗಿ ಆವರಿಸಿದ ಸಾವಿತ್ರಿ, ‘ಸ್ತ್ರಿಯ ಸಹಜ ವ್ಯಾಖ್ಯಾನವೆಂದರೆ ನಾನು ಹಾಗು ನನ್ನ ಕಟ್ಟಿಕೊಂಡ ಬದುಕು’ ಎಂದು ಹೆಮ್ಮೆಯಿಂದ ಪಿಸುಮಾತು ನುಡಿದಂತೆ ಭಾಸವಾಯಿತು. ಹಲವಾರು ಶತಮಾನಗಳಿಂದ ಮಹಾಸತಿ ಪಟ್ಟದಲ್ಲಿಯೇ ಬಂಧಿಯಾಗಿರುವ ಸಾವಿತ್ರಿಯನ್ನು, ಈಗಲಾದರೂ ಆ ಸ್ಥಾನದಿಂದ ಬಿಡುಗಡೆಗೊಳಿಸಬೇಕೆನಿಸಿತು... ಅಷ್ಟೊಂದು ಹಠ ಸಾಧಿಸಿ, ಎದುರಾದ ಕಷ್ಟಗಳನ್ನೆಲ್ಲಾ ಮೀರಿದ ಒಂಟಿ ಹೋರಾಟಗಾರ್ತಿಗೆ ಕೊನೆಗೆ ಸಿಕ್ಕಿದ್ದು, ಗಂಡನ ಹೆಸರು ಜೋಡಿಸಿಕೊಂಡು ‘ಮಹಾಸತಿ’ ಪಟ್ಟ ಮಾತ್ರ. ಅವಳ ಅನನ್ಯ ಸಾಧನೆಯನ್ನು ಮತ್ತು ವಿಭಿನ್ನ ಸಾಹಸಿ ಜೀವನ ಪಥವನ್ನು ಅಳಿಸಿ ಹಾಕಲಾಯಿತೇಕೆ?... ಇದ್ಯಾವ ಪುರುಷ ರಾಜಕಾರಣದ ಕುತಂತ್ರ?...

ಒಂದಂತೂ ಸ್ಪಷ್ಟ. ಸಮುದ್ರ, ತನ್ನಲ್ಲಿಗೆ ಬಂದು ಸೇರುವ ನದಿಗಳನ್ನೆಲ್ಲಾ ನುಂಗಿ, ತನ್ನಲ್ಲಿ ಐಕ್ಯವಾಗಿಸಿ, ಸಿಹಿನೀರಿನ ತೊರೆಗಳನ್ನು ಉಪ್ಪಾಗಿಸುವಂತೆ, ಹೀಗೊಮ್ಮೆ ಅಪರೂಪಕ್ಕೆ ಕಾಣಿಸಿಕೊಳ್ಳುವ ಸಾಹಸಿ ಮಹಿಳೆಯರನ್ನು ಸತಿಯನ್ನಾಗಿ ಮಾರ್ಪಡಿಸಿ, ಪುರುಷ ಪ್ರಧಾನ ಸಮಾಜ, ಸಮುದ್ರದಂತೆ ತನ್ನೊಳಗೆ ಹುದುಗಿಸಿ ಸದ್ದಡಗಿಸುತ್ತದೆ.

ಸಾವಿತ್ರಿ, ತನ್ನ ಜೀವನವನ್ನು ತನ್ನಿಚ್ಛೆಯಂತೆ ಸ್ವತಂತ್ರವಾಗಿ ರೂಪಿಸಿಕೊಂಡವಳು. ಜೀವನದ ಎಲ್ಲಾ ಸಂಕಟಗಳನ್ನು ಏಕಾಂಗಿಯಾಗಿ ಎದುರಿಸಿದವಳು. ಬಹಳ ಹಠವಾದಿ. ಸಮಾಜದ ಪುಕ್ಕಟೆ ಸಲಹೆಗಳಿಗೆ ತಲೆಕೆಡಿಸಿಕೊಂಡವಳಲ್ಲ. ಅವಳ ಆ ದಿಟ್ಟ ನಡೆ, ಮುಂದೆ ಹಲವಾರು ತಲೆಮಾರುಗಳಲ್ಲಿ ಮೌನವಾಗಿ ಅಸಹಾಯಕರಂತೆ ಜೀವನ ಸಾಗಿಸಿದ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಬೇಕಿತ್ತು. ಆದರೆ, ಹಾಗಾಗಲಿಲ್ಲ.

ತದ್ವಿರುದ್ಧವಾಗಿ, ಆಯಾಯ ಕಾಲದ ವ್ಯವಸ್ಥೆ, ಸೀತೆಯನ್ನು ಸುಲಭವಾಗಿ ಅಗ್ನಿಕುಂಡಕ್ಕೆ ಹಾಕಿದಂತೆ, ದ್ರೌಪದಿಯ ವಸ್ತ್ರಾಪಹರಣ ಮಾಡಿದಂತೆ, ಪ್ರಶ್ನಿಸಿದ ಅಂಬೆಯನ್ನು ಶಿಖಂಡಿ ಮಾಡಿದಂತೆ, ಅಹಲ್ಯೆಯನ್ನು ಕಲ್ಲಾಗಿಸಿದಂತೆ, ಸಾವಿತ್ರಿಯ ಸಾಧನೆಯನ್ನೂ ಕೂಡ ‘ಮಹಾಸತಿ’ಯ ವ್ಯಾಖ್ಯಾನದೊಳಗೆ ಬಂಧಿಸಿತು. ಆದರೆ, ಸಾವಿತ್ರಿಯನ್ನು ಈ ಸರಳ ಸ್ತ್ರೀ ವ್ಯಾಖ್ಯಾನದಲ್ಲಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅಷ್ಟೊಂದು ಪ್ರಖಂಡ ಇಚ್ಚಾಶಕ್ತಿ, ಸ್ವಾಭಿಮಾನ, ಸ್ವತಂತ್ರ ಮನೋಭಾವ ಪ್ರದರ್ಶಿಸಿದವಳು ಸಾವಿತ್ರಿ. ಆದರೆ... ಅವಳ ಸಾಹಸಿ ವೃತ್ತಾಂತವನ್ನು ‘ಮಹಾಸತಿ’ ಕಥೆಯನ್ನಾಗಿಸಿ, ಅವಳನ್ನು ಸಾಮಾನ್ಯ ಗ್ರಹಿಣಿಯನ್ನಾಗಿ ಪರಿವರ್ತಿಸಿದ್ದಂತೂ ನಿಜ. ಈ ರೀತಿ, ಸಾವಿತ್ರಿ ‘ಪತಿಯೇ ಪರದೈವ’ವೆಂದು ಗಂಡನ ಪ್ರಾಣ ಉಳಿಸಿದ ಆದರ್ಶ ಸತಿಯೆನಿಸಿದಳು. ಮುಂದೆ, ಪುರುಷ ಸಂತಾನವೆಲ್ಲಾ ತಮ್ಮ ಮಡದಿಯರಲ್ಲಿ ಸಾವಿತ್ರಿಯ ಛಾಯೆ ಕಾಣಬಯಸಿದರು. ‘ಸಾವಿತ್ರಿಯಂತೆ ಗಂಡನನ್ನು ಪ್ರೀತಿಸುವ ತ್ಯಾಗಮಯಿ ಹೆಣ್ಣುಬೇಕು’ ಎಂದು ಬಡಬಡಿಸುತ್ತಲೇ ಬಂದರು. ಮಹಿಳೆಯರಿಗೆ ಕೂಡ ಆ ಸಾವಿತ್ರಿಯಂತಿರಬೇಕೆಂಬ ಒತ್ತಡವಿತ್ತು. ಈ ಸಾಮಾಜಿಕ ನಿರೀಕ್ಷೆಗಳ ಮಧ್ಯೆ, ಮಸುಕಾಗಿದ್ದು ಮಾತ್ರ, ವಿಸ್ಮಯ ಹುಟ್ಟಿಸುವ ಸಾವಿತ್ರಿಯ ಅಸಲಿ ರೂಪ.

ಒಂದು ವೇಳೆ, ಸಾವಿತ್ರಿಯ ಈ ವಿಶ್ವರೂಪ ನನಗೆ ಬಹಳ ಹಿಂದೆಯೇ ದರ್ಶನವಾಗಿದ್ದರೆ, ನಾನು ಸಾಕಷ್ಟು ಸಾಧಿಸಬಹುದಿತ್ತೇನೋ? ಹಲವು ಬಾರಿ ನೋವಿನ ಭಾರ ತಾಳಲಾರದೆ ಒಂಟಿಯಾಗಿ ಕುಸಿದು ಕುಳಿತಾಗ ಕೈಹಿಡಿದು ಮೇಲೆತ್ತಲು ಸಾವಿತ್ರಿಯೊಬ್ಬಳು ಸಾಕಿತ್ತು. ಅವಳು ಕ್ರಮಿಸಿದ ದಾರಿ ಅಷ್ಟೊಂದು ಅಮೋಘವಾಗಿತ್ತು. ಪುರಾಣದ ಪ್ರಸಿದ್ಧ ಆದರ್ಶಪ್ರಾಯ ಮಹಾಸತಿಯರ ಗೋಳು ಕೇಳಿ ಕೇಳಿ ಸಾಕಾಗಿತ್ತು. ಸತಿಯಲ್ಲದವರ ಹುಡುಕಾಟದಲ್ಲಿದ್ದೆ.

ಬಹುಶಃ, ಸಾವಿತ್ರಿಯಂತೆ ತನ್ನ ಇಡೀ ಬದುಕಿನ ಆಗುಹೋಗುಗಳನ್ನು ಸ್ವತಃ ನಿರ್ಧರಿಸಿ ರೂಪಿಸಿಕೊಂಡವರು ಬೇರೊಬ್ಬರಿರಲಿಕ್ಕಿಲ್ಲ. ಎಂತಹ ಪರಿಪೂರ್ಣ ಜೀವನ...

ಯೋಚಿಸುತ್ತಾ ಮಲಗಿದವಳಿಗೆ, ಹಾಗೆಯೇ, ಕಣ್ಣಿಗೆ ನಿದ್ರೆಯ ಜೋಂಪು ಹತ್ತಿತು.

ನಿಧಾನವಾಗಿ ಕಣ್ಣು ಬಿಡಿಸಿ ಎದ್ದು ಹೊರಗೆ ನೋಡಿದರೆ, ಆಗಲೇ ಸುಡು ಬಿಸಿಲು ಸುತ್ತಲೂ ಆವರಿಸಿತ್ತು. ಛೆ, ಬಹಳ ಲೇಟಾಯಿತು. 11 ಗಂಟೆಯಾಗಿದೆ. ಸದ್ಯ, ಭಾನುವಾರವಾದ್ದರಿಂದ ಪರವಾಗಿಲ್ಲ. ಇಲ್ಲದಿದ್ದರೆ ಆಫೀಸಿಗೆ ರಜೆ ಹಾಕಬೇಕಿತ್ತು. ಯಾಕೆ ನನ್ನ ಅಲಾರಾಂ ಸದ್ದು ಎಚ್ಚರಿಸಲಿಲ್ಲ. ತಲೆ ವಿಪರೀತ ಭಾರವೆನಿಸುತ್ತಿದೆ. ಏನಾಗಿದೆ ನನಗೆ?

ಹೇಗೂ ಕಷ್ಟಪಟ್ಟು ಟೀ ಮಾಡಿ ಕುಡಿಯುತ್ತಾ ಲ್ಯಾಪ್‌ಟಾಪ್ ಓಪನ್ ಮಾಡಿ ನೋಡಿದರೆ, ಏನೋ ಹೊಸ ವರ್ಡ್ ಡಾಕ್ಯುಮೆಂಟ್ ಒಂದು, ಡೆಸ್ಕ್‌ಟಾಪ್‌ನಲ್ಲಿ ಕಾಣಿಸಿತು. ಇದನ್ನು ಯಾವಾಗ ನಾನು ಬರೆದಿದ್ದು? ನೆನಪಾಗುತ್ತಿಲ್ಲವಲ್ಲ. ಕುತೂಹಲದಿಂದ ತಕ್ಷಣ ಓಪನ್ ಮಾಡಿ ಓದತೊಡಗಿದೆ.

-------------

ನಿನಗೆ ನನ್ನ ಕಥೆ ಬಹಳ ಕಾಡಿದೆಯೆಂದು ತಿಳಿದು ಸಂತೋಷ, ಆಶ್ಚರ್ಯ ಎಲ್ಲಾ ಒಟ್ಟಿಗೆ ಆಯಿತು. ಸಂತೋಷ ಏಕೆಂದರೆ, ನನ್ನ ಕಥೆ ನಿನಗೆ ತಟ್ಟಿದ ರೀತಿ. ನಿನಗೆ ನನ್ನ ಕಥೆ ಬೇರೆ ರೂಪದಲ್ಲಿ ಕಾಣಿಸಿತಲ್ಲ, ಆ ಕಾರಣಕ್ಕೆ ಆಶ್ಚರ್ಯ ಕೂಡ ಆಯಿತು. ಈ ಖುಷಿಗಾಗಿ, ನನ್ನ ಕಥೆಯನ್ನು ನಾನೇ ನಿನಗೆ ಹೇಳುತ್ತೇನೆ.

ಮಹಾಭಾರತದಲ್ಲಿ ನನ್ನ ಪ್ರಸ್ತಾಪ ಒಂದು ಸಣ್ಣ ಉಪಕಥೆಯಾಗಿಯಷ್ಟೇ ದೊರಕುತ್ತದೆ. ನನ್ನನ್ನು ಚೆನ್ನಾಗಿ ಅರಿತಿದ್ದ ಮಾರ್ಕಂಡೇಯ ಋಷಿಯ ಮಾತಿನಲ್ಲಿ. ಇಲ್ಲದಿದ್ದರೆ, ನಾನು ಕಾಡಿನಲ್ಲಿ ಅರಳಿದ ಹೂವಿನಂತೆ, ಜನರ ರಸಾಸ್ವಾದನೆಗೆ ಸಿಗದೇ ಕಣ್ಮರೆಯಾಗಿ ಬಿಡುತ್ತಿದ್ದೆ. ಒಂದು ದಿನ ಯುಧಿಷ್ಠಿರ, ಅವರೊಂದಿಗೆ ಮಾತನಾಡುವಾಗ, ದ್ರೌಪದಿಗಿಂತ ಶ್ರೇಷ್ಠ ಸತಿ ಯಾರು ಇರಲಿಕ್ಕಿಲ್ಲವೆಂದು ವಾದಿಸುತ್ತಾನೆ. ನನ್ನ ಜೀವನವನ್ನು ಬಹಳ ಹತ್ತಿರದಿಂದ ಗಮನಿಸಿ ಮೆಚ್ಚಿಕೊಂಡಿದ್ದ ಮಾರ್ಕಂಡೇಯ ಋಷಿಗಳು, ಆಗ ನಗುತ್ತಾ ಹೀಗೆನ್ನುತ್ತಾರೆ- ‘ತಾಳು, ನಿನಗೆ ಸಾವಿತ್ರಿಯ ಕಥೆ ಹೇಳುತ್ತೇನೆ. ಆಮೇಲೆ ನಿರ್ಧರಿಸು’.

ಹೀಗೆ ಮಹಾಭಾರತದಲ್ಲೊಂದು ನನಗೆ ಸ್ಥಾನ ದೊರೆಯಿತು, ಮಾರ್ಕಂಡೇಯ ಋಷಿಗಳ ಕೃಪೆಯಿಂದ.

ಇನ್ನು ನಾನು ನೇರವಾಗಿ ನನ್ನ ಬಾಲ್ಯದ ದಿನಗಳಿಗೆ ನಿನ್ನನ್ನು ಕರೆದೊಯ್ಯುತ್ತೇನೆ...ನನ್ನ ಬದುಕನ್ನು ಸ್ವವಿಮರ್ಶೆ ಮಾಡಿಕೊಂಡರೆ ನನಗೀಗ ಅನ್ನಿಸುತ್ತಿದೆ- ನಾನು ನನ್ನ ಸುತ್ತಲಿನ ಹೆಣ್ಣುಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿ ಬೆಳೆದೆ. ಅದರ ಎಲ್ಲಾ ಶ್ರೇಯಸ್ಸು ನನ್ನ ಅಪ್ಪನಿಗೆ ಸಲ್ಲಬೇಕು. ಎಲ್ಲಾ ಹೆಣ್ಣುಮಕ್ಕಳಿಗೆ ಅಂತಹ ಅಪ್ಪನಿದ್ದಿದ್ದರೆ, ಎಷ್ಟು ಚೆನ್ನಾಗಿತ್ತು...ನನ್ನ ಅಪ್ಪ, ಮಾದ್ರ ಸಂಸ್ಥಾನದ ರಾಜ, ಅಶ್ವಪತಿ. ಅಮ್ಮ ಮಾಳವಿಕಾ. ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ಬೇರೆ ಗಂಡಸಾಗಿದ್ದರೆ, ಸಂತಾನದ ಹೆಸರಲ್ಲಿ ಮರು ವಿವಾಹವಾಗುತ್ತಿದ್ದರು. ಆದರೆ, ನನ್ನಪ್ಪ ಹಾಗೆ ಮಾಡಲಿಲ್ಲ. ಬದಲಾಗಿ ಅವರಿಬ್ಬರೂ ಸಾವಿತ್ರಿದೇವಿಯ ಮೊರೆಹೋಗುತ್ತಾರೆ. ಅವಳ ಆಶೀರ್ವಾದದಿಂದ ಹೆಣ್ಣುಮಗುವೊಂದನ್ನು ಪಡೆಯುತ್ತಾರೆ. ಅವಳ ನೆನಪಿಗಾಗಿ, ಮಗುವಿಗೆ ‘ಸಾವಿತ್ರಿ’ ಎಂದು ಹೆಸರಿಡುತ್ತಾರೆ.

ಬಹಳ ಮುದ್ದಾಗಿ ಬೆಳೆದ ನನಗೆ, ಅಕ್ಕಪಕ್ಕದ ಪ್ರಾಂತ್ಯಗಳಿಂದ ವಿವಾಹ ಪ್ರಸ್ತಾಪಗಳು ಬರಲಾರಂಭಿಸುತ್ತವೆ. ಆದರೆ, ನನ್ನ ಕನಸಿನ ರಾಜ ಮಾತ್ರ ಅಲ್ಲೆಲ್ಲೂ ಸಿಗುವುದಿಲ್ಲ. ಇಷ್ಟವಾಗದ ಗಂಡನ್ನು ಒಪ್ಪಿಕೊಳ್ಳುವ ಜಾಯಮಾನ ನನ್ನದಾಗಿರಲಿಲ್ಲ. ಇದರಿಂದಾಗಿ, ನನಗೆ ‘ದುರಹಂಕಾರಿ’ಯೆನ್ನುವ ಕುಖ್ಯಾತಿ ಸುತ್ತಲೂ ಹರಡಿತು. ಕ್ರಮೇಣ, ಸಂಬಂಧಗಳು ಬರುವುದು ನಿಂತು ಹೋಯಿತು. ಆದರೆ, ನನ್ನಪ್ಪ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಸಂಗಾತಿ ಆಯ್ಕೆ ಸ್ವಾತಂತ್ರ್ಯ ನನ್ನಿಂದ ಕಿತ್ತುಕೊಳ್ಳಲಿಲ್ಲ, ನನ್ನ ಮೇಲೆ ಯಾವುದೇ ಒತ್ತಡ ಹೇರಲಿಲ್ಲ.

ನನಗೆ ಮದುವೆಯಾಗಲು ಗಂಡು ಸಿಗದಿದ್ದುದ್ದಕ್ಕೆ ನನಗೇನೂ ನಿರಾಶೆಯಾಗಿರಲಿಲ್ಲ. ನಾನು ನೆಮ್ಮದಿಯಿಂದಲೇ ಇದ್ದೆ. ಆದರೆ, ಹೆತ್ತವರು ಒಳಗೊಳಗೇ ಸಂಕಟ ಅನುಭವಿಸುತ್ತಿದ್ದುದು ಅರಿವಾಯಿತು. ಅರಮನೆಗೆ ಬರುವ ನೆಂಟರಿಷ್ಟರಿಗೆಲ್ಲಾ ನನ್ನ ವಿವಾಹವೇ ಚರ್ಚಾ ವಿಷಯವಾಗಿತ್ತು. ಇದರಿಂದ ಹೆತ್ತವರಿಗೆ ಇರುಸುಮುರುಸಾಗಬಾರದೆಂದು ನಾನೊಂದು ನಿರ್ಧಾರಕ್ಕೆ ಬಂದೆ.

ಒಂದು ದಿನ ಅಪ್ಪನಲ್ಲಿ ನೇರವಾಗಿ ವಿಷಯ ಪ್ರಸ್ತಾಪಿದೆ.

‘ಅಪ್ಪ...ನನಗೆ ಇಲ್ಲಿಯವರೆಗೆ ಯಾರು ಇಷ್ಟವಾಗಿಲ್ಲ. ನೀವಿಬ್ಬರು ಒಪ್ಪಿದರೆ ನನಗಿಷ್ಟವಾಗುವ ಹುಡುಗನನ್ನು ನಾನೇ ಹುಡುಕಿ ಆರಿಸುತ್ತೇನೆ’.

ನಿನಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಏನು?... ಆ ಕಾಲದಲ್ಲಿ, ಹುಡುಗಿಯೊಬ್ಬಳು, ತಾನು ಮದುವೆಯಾಗುವನನ್ನು ಅವಳೇ ಹುಡುಕುವುದೇ?... ಆದರೆ, ನಾನು ಅಪ್ಪನಲ್ಲಿ ಹಾಗೆಯೇ ಕೇಳಿಕೊಂಡೆ. ಅದು, ನಾನು ಕಂಡುಕೊಂಡ ಮಹಿಳಾ ಸಬಲೀಕರಣದ ಮಾದರಿ.

ಅಪ್ಪ ಸ್ವಲ್ಪ ಹೊತ್ತು ಮೌನವಾಗಿದ್ದ. ನನ್ನ ಧೈರ್ಯಕ್ಕೆ ಅಪ್ಪನ ಮೆಚ್ಚುಗೆ ಹಾಗು ಬೆಂಬಲ ಸದಾ ಇತ್ತು. ನಾನು ಖಂಡಿತವಾಗಿ ಒಳ್ಳೆಯ ಹುಡುಗನನ್ನೇ ಆರಿಸುತ್ತೇನೆ ಎನ್ನುವ ವಿಶ್ವಾಸವಿತ್ತು. ಕೊಟ್ಟ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಳ್ಳದಷ್ಟು ಪ್ರೌಢ ಮನಸ್ಸು ನನಗಿತ್ತು. ಜೊತೆಗೆ, ನಾನು ಶಸ್ತ್ರವಿದ್ಯೆ ಪರಿಣಿತೆ ಕೂಡ. ನಿಶ್ಚಿಂತೆಯಿಂದ ಒಪ್ಪಬಹುದೆನಿಸಿದರೂ, ಅಪ್ಪನಿಗೆ ಪತ್ನಿಯಲ್ಲಿ ಒಂದು ಮಾತು ಕೇಳಬೇಕೆನಿಸಿತು. ಮೊದಲು ಒಪ್ಪದ ಅಮ್ಮ, ಗಂಡನ ಮಾತಿನ ಒತ್ತಡಕ್ಕೆ ಸಿಲುಕಿ ತಾನೂ ಒಪ್ಪಿಗೆ ನೀಡಿದಳು.

ಅರಮನೆಯಿಂದ ಶಸ್ತ್ರಸಜ್ಜಿತೆಯಾಗಿ ಹೊರಗೆ ಕಾಲಿಟ್ಟ ನಾನು ಸುತ್ತಲಿನ ಹಲವಾರು ರಾಜ್ಯಗಳ ಸುತ್ತಿದೆ. ಯಾವ ಯುವಕನೂ ಇಷ್ಟವಾಗಲಿಲ್ಲ. ಕೆಲವು ಕ್ಷಣ, ನಾನು ಹುಡುಕುತ್ತಿರುವುದಾದರೂ ಯಾರನ್ನು… ಎನ್ನುವ ಗೊಂದಲ ಉಂಟಾಯಿತು. ಕೊನೆಗೆ, ಒಂದು ದಿನ ಕಾಡಿನ ದಾರಿಯಲ್ಲಿ ಹೋಗುವಾಗ, ಸುಂದರ ಯುವಕನೊಬ್ಬ ಒಣ ಕಟ್ಟಿಗೆ ಒಡೆಯುತ್ತಿದ್ದುದನ್ನು ನೋಡಿದೆ. ಅವನ ನೋಡುತ್ತಲೇ, ಒಂದು ಕ್ಷಣ ಹಾಗೆಯೇ ನಿಲ್ಲಬೇಕೆನಿಸಿತು, ಕಾಲು ಮುಂದಕ್ಕೆ ಚಲಿಸಲೇ ಇಲ್ಲ. ‘ಯಾರಿವನು, ಸ್ಫುರದ್ರೂಪಿ, ಸರಳ ಹುಡುಗ ಈ ಕಾಡಿನಲ್ಲಿ? ನೋಡಿದರೆ ಶಾಪಗ್ರಸ್ತ ರಾಜಕುಮಾರನಂತೆ ಕಾಣುತ್ತಿದ್ದಾನೆ. ಒಂದು ಸುಂದರ ಹೆಣ್ಣು ಸನಿಹದಲ್ಲಿ ಹಾದು ಹೋಗುತ್ತಿದ್ದರೂ ಲಕ್ಷಿಸದೆ, ಮಾಡುತ್ತಿದ್ದ ಕೆಲಸ ಮುಂದುವರಿಸಿದ ಅವನ ಕಾಯಕ ಶ್ರದ್ಧೆ ನನಗೆ ಬಹಳ ಮೆಚ್ಚುಗೆಯಾಯಿತು.

ನಾನು ಹತ್ತಿರಕ್ಕೆ ಹೋಗಿ ವಿಚಾರಿಸಿದೆ. ಅವನಿಗೆ ನನ್ನ ಕುತೂಹಲ ಮತ್ತು ನೇರ ನಡೆ ಸ್ವಲ್ಪ ವಿಚಿತ್ರವೆನಿಸಿದರೂ, ಅಪಾರ್ಥಮಾಡಿಕೊಳ್ಳದೆ, ಬೇಸರವಿಲ್ಲದೆ ತನ್ನ ಜನ್ಮವೃತ್ತಾಂತ ನನ್ನಲ್ಲಿ ಹೇಳಿಕೊಂಡ. ಅವನ ಹೆಸರು ಸತ್ಯವಾಹನ, ಸಾಲ್ವ ದೇಶದ ರಾಜ ದ್ಯುಮತ್ಸೇನನ ಮಗ. ಅವನ ಬಾಲ್ಯದಲ್ಲಿಯೇ, ಆಕಸ್ಮಿಕವಾಗಿ ಕುರುಡನಾದ ಅಪ್ಪ ದ್ಯುಮತ್ಸೇನನನ್ನು ದಾಯಾದಿಗಳು ಮೋಸದಿಂದ ರಾಜ್ಯ ಕಿತ್ತುಕೊಂಡು ಅರಮನೆಯಿಂದ ಹೊರಗಟ್ಟಿದ್ದರು. ಕಾಡುಸೇರಿದ ಮೇಲೆ, ಅವನ ಅಮ್ಮನೂ ದೃಷ್ಟಿಹೀನಳಾದಳು. ಈಗ, ಮೂವರೂ ಇಲ್ಲಿಯೇ ವಾಸವಾಗಿದ್ದೇವೆಯೆಂದ.

ಮೊದಲ ನೋಟದಲ್ಲಿಯೇ ನನಗೆ ಅವನ ಸರಳತೆ, ಮುಗ್ಧತೆ ಇಷ್ಟವಾಯಿತು. ಸುತ್ತಲಿನ ಪೃಕ್ರತಿ, ನಾಡಿಗಿಂತ ನೆಮ್ಮದಿಯೆನಿಸಿತು. ವಿಷಯ ಮುಂದುವರಿಸಬೇಕೆನಿಸಿತು.

‘ಸತ್ಯವಾಹನ, ಕುಡಿಯಲು ಸ್ವಲ್ಪ ನೀರು ಸಿಗಬಹುದೇ?’

‘ಅಯ್ಯೋ. ಬನ್ನಿ’

ಸತ್ಯವಾಹನ, ಮಾಡುತ್ತಿದ್ದ ಕೆಲಸ ನಿಲ್ಲಿಸಿ ಕುಟೀರಕ್ಕೆ ಕರೆದೊಯ್ದ. ಅವನ ಹೆತ್ತವರು ಜಗುಲಿಯಲ್ಲಿ ಮಾತನಾಡುತ್ತ ಕುಳಿತಿದ್ದರು. ನನಗೆ, ಅವರ ರಾಜಕಳೆ ಇನ್ನೂ ಮಸುಕಾಗಿಲ್ಲವೆನಿಸಿತು. ಸತ್ಯವಾಹನ ತಾನೇ ನೀರು ತಂದುಕೊಟ್ಟ. ಇಷ್ಟೊಂದು ಸುಸಂಸ್ಕ್ರತ ಹುಡುಗ. ನಾಡಿನಲ್ಲಿ ಹೇಗೆ ಸಿಕ್ಕಾನು? ಹೆಚ್ಚು ಯೋಚಿಸದೆ, ಅವನ ಹೆತ್ತವರಿಗೆ ನನ್ನ ಪರಿಚಯ ಮಾಡಿಕೊಟ್ಟು, ಸತ್ಯವಾಹನನನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದೆ.

ಇದನ್ನು ಕೇಳಿದರೆ ನಿನಗೆ ಆಶ್ಚರ್ಯವಾಗುತ್ತದೆಯಲ್ಲವೇ?... ಏನು... ಹುಡುಗಿಯೊಬ್ಬಳು, ಹುಡುಗನ ಮನೆಗೆ ಹೋಗಿ ತನ್ನ ವಿವಾಹ ಪ್ರಸ್ತಾಪ ಮಾಡುವುದು... ಈ ಕಾಲದಲ್ಲಿಯೂ ಯೋಚಿಸಲಾಗದಲ್ಲವೇ?

ನನ್ನ ಮಾತಿನಿಂದ ಅವರಿಗೆ ಅಚ್ಚರಿ, ಸಂತೋಷ, ಒಟ್ಟಿಗೆ ಆಯಿತು. ಸಹೃದಯರು ಅವರು. ಧೈರ್ಯದ ಹೆಣ್ಣಿನ ಚಾರಿತ್ರ್ಯ ಸಂಶಯಿಸಲಿಲ್ಲ. ಒಳ್ಳೆಯ ದಿನಗಳ ಭರವಸೆ ಕಳೆದುಕೊಂಡು ಕಾಡು ಸೇರಿದ್ದವರಿಗೆ, ದೇವರೇ ನನ್ನನ್ನು ವರವಾಗಿ ಕಳುಹಿಸಿದ ಎಂಬಂತೆ ಪ್ರೀತಿಯಿಂದ ಸ್ವೀಕರಿಸಿದರು. ಅವರ ಸಮ್ಮತಿಯೊಂದಿಗೆ ನಾನು, ಸತ್ಯವಾಹನನನ್ನು ನನ್ನ ಅರಮನೆಗೆ ಕರೆತಂದೆ. ಆಗ, ಅಪ್ಪ ಲೋಕಸಂಚಾರಿ ನಾರದನೊಂದಿಗೆ ಮಾತನಾಡುತ್ತಿದ್ದ. ಅಪ್ಪನಿಗೇನೋ, ಹುಡುಗ ಇಷ್ಟವಾದ. ಅವನಿಗೆ ಮಗಳ ಖುಷಿಯಷ್ಟೇ ಬೇಕಿತ್ತು. ಆದರೆ, ನಾರದ ಒಂದು ಆಘಾತಕಾರಿ ವಿಷಯ ಹೇಳಿ ಅಪ್ಪನನ್ನು ವಿಚಲಿತಗೊಳಿಸಿದ. ಅದೇನೆಂದರೆ - ಸತ್ಯವಾಹನ ಇನ್ನೊಂದು ವರ್ಷದಲ್ಲಿ ಸಾಯಲಿದ್ದಾನೆ. ಆಘಾತಗೊಂಡ ಹೆತ್ತವರು, ನನ್ನ ಮನಃಪರಿವರ್ತಿಸಲು ಪ್ರಯತ್ನಿಸಿದರು. ಆದರೆ, ನಾನು ಮಾತ್ರ ಜಗ್ಗಲಿಲ್ಲ. ನಾನು ಇಷ್ಟೇ ಹೇಳಿದೆ-ಮನುಷ್ಯನ ಬದುಕು ಅನಿಶ್ಚಿತ. ಯಾವ ಹೊತ್ತಿನಲ್ಲೂ ಸಾಯಬಹುದು. ಅದಕ್ಕೆ ಅನುಗುಣವಾಗಿ ಸಂಬಂಧ ಬೆಳೆಸಲಾಗದು. ಬಂದದ್ದನ್ನು ಸ್ವೀಕರಿಸುತ್ತೇನೆ. ಸಾಧ್ಯವಾದರೆ, ನನ್ನ ಭವಿಷ್ಯವನ್ನು ನಾನೇ ಬದಲಾಯಿಸುತ್ತೇನೆ.’

ಹೀಗೆ, ನಾನು ಇಷ್ಟಪಟ್ಟ ಗಂಡನ್ನು ಅಗೋಚರ ಶಕ್ತಿಗಳು ಬೇರ್ಪಡಿಸಲು ಬಿಡಲಿಲ್ಲ. ನನ್ನದು ನಿಷ್ಕಲ್ಮಶ ಪ್ರೀತಿಯಾಗಿತ್ತು. ನನ್ನ ಮೊಂಡುತನ ಗೊತ್ತಿದ್ದ ಅಪ್ಪ ಸಮ್ಮತಿ ಸೂಚಿಸಿದ. ಸತ್ಯವಾಹನನ ಹೆತ್ತವರನ್ನು ಅರಮನೆಗೆ ಕರೆಸಿ ಅದ್ಧೂರಿಯಾಗಿ ಮದುವೆ ಮಾಡಿದ.

ಮಾರನೆಯ ದಿನವೇ, ನಾನು ನನ್ನ ಹೊಸ ಸಂಸಾರದೊಂದಿಗೆ ಹೊರಟು ನಿಂತಾಗ, ಅಪ್ಪ ‘ಎಲ್ಲಾ ಇಲ್ಲೇ ಇರಿ.’ ಎಂದು ತಡೆಯಲೆತ್ನಿಸಿದ. ಆದರೆ ನಾನು ಮಾತ್ರ ಒಪ್ಪಲಿಲ್ಲ. ಇದು, ಪುರುಷ ಪ್ರಾಧ್ಯಾನತೆಗೆ ಕಟ್ಟುಬಿದ್ದ ಸಾಂಪ್ರದಾಯಕ ನಿರ್ಧಾರವಾಗಿರಲಿಲ್ಲ. ಬದಲಾಗಿ, ಸ್ವಲ್ಪ ಕಾಲ ನಾಡಿನಿಂದ ದೂರವಿರಬೇಕೆನಿಸಿತ್ತು.

‘ಅಪ್ಪ, ನಾನು ಸತ್ಯವಾಹನನನ್ನು ಇಷ್ಟಪಟ್ಟಿದ್ದೇ ಆ ಕಾಡಿನ ಪರಿಸರದಲ್ಲಿ. ನನಗೆ ಅಲ್ಲಿಯೇ ಹಿತವೆನಿಸುತ್ತಿದೆ. ನಿಮ್ಮ ಯೋಗಕ್ಷೇಮ ವಿಚಾರಿಸಲು ಆಗಾಗ ಬರುತ್ತಿರುತ್ತೇನೆ.’

ಹೀಗೆ, ಹೆತ್ತವರ ಆಶೀರ್ವಾದ ಪಡೆದು ಕಾಡಿನತ್ತ ಹೆಜ್ಜೆ ಹಾಕಿದೆ.

ನನ್ನದು ಸ್ವತಂತ್ರ ನಿರ್ಧಾರವಾಗಿತ್ತು. ಅರಮನೆಯ ಶ್ರೀಮಂತಿಕೆಯನ್ನು ಬಿಟ್ಟು ಕಾಡಿನ ಕುಟೀರಕ್ಕೆ ಹೋಗುವ ನನ್ನ ನಿರ್ಧಾರ ನೋಡಿ, ಸತ್ಯವಾಹನನ ಹೆತ್ತವರು ವಿಸ್ಮಯಗೊಂಡರು. ನನಗೆ, ತನ್ನ ಬದುಕು ಮತ್ತು ಅತಂತ್ರ ಭವಿಷ್ಯವನ್ನು ನಾನೊಬ್ಬಳೇ ಎದುರಿಸುವ ಆತ್ಮವಿಶ್ವಾಸವಿತ್ತು.

ಕಾಡಿನಲ್ಲಿ, ನಮ್ಮ ಸಾಂಸಾರಿಕ ಜೀವನ ಚೆನ್ನಾಗಿಯೇ ನಡೆಯಿತು. ಒಂದು ವರ್ಷವಾಗುತ್ತಿದ್ದಂತೆಯೇ, ಗಂಡನ ಸಾವಿನ ಭಯದಿಂದ, ಸತ್ಯವಾಹನನನ್ನು ಒಂದು ಕ್ಷಣವೂ ಬಿಡದೆ ಕಣ್ಣರೆಪ್ಪೆಯಂತೆ ಜೊತೆಯಾಗಿದ್ದೆ. ಅಂತೂ, ಆ ಕ್ಷಣ ಬಂದೆ ಬಿಟ್ಟಿತು. ಎಂದಿನಂತೆ ಅಂದೂ ಕೂಡ ಸೌದೆ ಆರಿಸಲು ಗಂಡನೊಂದಿಗೆ ಹೋಗಿದ್ದೆ. ಕಟ್ಟಿಗೆ ಒಡೆಯುತ್ತಿದ್ದ ಸತ್ಯವಾಹನ ತಲೆಸುತ್ತಿ ಬಿದ್ದುಬಿಟ್ಟ. ಗಾಬರಿಯಿಂದ ನಾನು ಅವನ ಮೂಗು ಮುಟ್ಟಿದರೆ, ಆಗಲೇ ಉಸಿರಾಟ ನಿಂತಿತ್ತು.

ಕಣ್ಣೀರಿಡುತ್ತಾ, ಆದರೆ, ಧೈರ್ಯವಾಗಿ ಯಮನ ಆಗಮನಕ್ಕಾಗಿ ಕಾದೆ. ಯಮ ಬರಲಿಲ್ಲ, ಬದಲಿಗೆ ಯಮದೂತರು ಪ್ರತ್ಯಕ್ಷರಾದರು. ನಾನು ಅವರನ್ನು ಹತ್ತಿರ ಸುಳಿಯಲೂ ಬಿಡಲಿಲ್ಲ.

‘ಹೋಗಿ, ನಿಮ್ಮ ಯಜಮಾನ ಯಮನನ್ನು ಬರಲು ಹೇಳಿ’

ಅವರನ್ನು ಮಾತಿನಲ್ಲಿಯೇ ಗದರಿಸಿ ಹಿಮ್ಮೆಟ್ಟಿಸಿದೆ. ಮೊದಲ ಬಾರಿಗೆ ಅಸಾಮಾನ್ಯ ಹೆಂಗಸೊಂದನ್ನು ಮುಖಾಮುಖಿಯಾದ ಅವರು ಹೆದರಿ ಯಮನಿಗೆ ವರದಿ ಒಪ್ಪಿಸಿದರು. ಕೋಪಗೊಂಡ ಯಮರಾಜ ಕೋಣನ ಮೇಲೆ ಸವಾರಿ ಮಾಡುತ್ತಾ, ನನ್ನ ಮುಂದೆ ಪ್ರತ್ಯಕ್ಷನಾದ. ನನ್ನ ನೋಡಿದ ತಕ್ಷಣ, ಅವನ ಕೋಪ ಇಳಿದು ನನ್ನ ಮೇಲೆ ಗೌರವ ಮೂಡಿತು. ದುಃಖದಲ್ಲಿದ್ದ ನನ್ನನ್ನು ಸಮಾಧಾನದಿಂದ ಮಾತನಾಡಿಸಿದ.

‘ನೋಡಮ್ಮ, ಸತ್ಯವಾಹನನ ಆಯಸ್ಸು ಮುಗಿದಿದೆ. ಅಡ್ಡಿಪಡಿಸದೆ, ಅವನ ಪ್ರಾಣ ಕೊಂಡೊಯ್ಯಲು ಅನುವು ಮಾಡಿಕೊಡು. ಸಾವಿನಿಂದ ಯಾರು ತಪ್ಪಿಸಿಕೊಳ್ಳಲಾಗದು’.

ನಾನು ಮಾತ್ರ ವಿಚಲಿತಳಾಗಲಿಲ್ಲ. ಚೆನ್ನಾಗಿಯೇ ಮಾನಸಿಕ ತಯಾರಿ ನಡೆಸಿದ್ದೆ.

‘ನಿನ್ನ ಕೆಲಸಕ್ಕೆ ಅಡ್ಡಿಪಡಿಸಲಾರೆ. ಆದರೆ, ಯಮಪುರಿಯ ಹೆಬ್ಬಾಗಿಲಿನವರೆಗೆ ನಿನ್ನೊಂದಿಗೆ ಬರುತ್ತೇನೆ. ಅಲ್ಲಿ, ಸತ್ಯವಾಹನನಿಗೆ ವಿದಾಯ ಹೇಳುತ್ತೇನೆ. ಮದುವೆಯಾಗಿ ಒಂದು ವರ್ಷವಾಯಿತಷ್ಟೆ’.

‘ಪಾಪ, ಚಿಕ್ಕ ವಯಸ್ಸಿಗೆ ವಿಧವೆಯಾಗಿದ್ದಾಳೆ’ ಮರುಕಪಟ್ಟ ಯಮರಾಜ ಸಮ್ಮತಿಸಿದ. ಅವನಿಗಿದೊಂದು ವಿಚಿತ್ರ ಹೊಸ ಅನುಭವ. ಅವನನ್ನು ನೋಡಿದರೆ, ಗಂಡಸರೇ ನಡುಗಿ ಹೋಗುತ್ತಾರೆ. ಆದರೆ, ಭೂಲೋಕದ ಹೆಣ್ಣುಮಗಳೊಬ್ಬಳು ಇಷ್ಟೊಂದು ಧೈರ್ಯದಿಂದ ಸ್ನೇಹಿತನಂತೆ ಜೊತೆಯಾಗಿ ಹೆಜ್ಜೆ ಹಾಕುತ್ತಿರುವುದು, ಮೊದಲ ಸಲ. ನನ್ನ ಧೈರ್ಯಕ್ಕೆ ಮೆಚ್ಚಿ ಪ್ರಸನ್ನನಾದ. ಸ್ವಲ್ಪ ದೂರ ಕ್ರಮಿಸಿದಂತೆ, ನನ್ನಲ್ಲಿ ಕೇಳಿದ.

‘ನಿನಗೆ ಏನಾದರೂ ಇಚ್ಛೆಯಿದ್ದರೆ ತಿಳಿಸು, ವರ ಕೊಡುವೆ.’

ನಾನು ಇದನ್ನೇ ಕಾಯುತ್ತಿದ್ದೆ. ನನಗೆ ಹೀಗೆಯೇ ಆಗುತ್ತದೆಯೆನ್ನುವ ಆತ್ಮವಿಶ್ವಾಸವಿತ್ತು. ನನಗೆ ಬೇಕಿದ್ದುದು ಗಂಡನ ಪ್ರಾಣವೊಂದೇ. ಆದರೆ, ಈಗಲೇ ಪ್ರಸ್ತಾಪಿಸಿದರೆ ಸ್ನೇಹ ಮುಗಿಯಬಹುದೆನಿಸಿತು.

‘ಸಾಧ್ಯವಾದರೆ, ನನ್ನ ಅತ್ತೆಮಾವನಿಗೆ ದೃಷ್ಟಿ ಮರಳಿಸು’

‘ತಥಾಸ್ತು.'

ನಾನು ಅವನನ್ನು ಹಿಂಬಾಲಿಸುವುದನ್ನು ಮುಂದುವರಿಸಿದೆ.

‘ನಿನಗೆ ವರ ಕೊಟ್ಟಾಯಿತಲ್ಲ. ಇನ್ನಾದರೂ ವಾಪಸ್ಸು ಹೋಗು. ನಾನು ಕೋಣವೇರುತ್ತೇನೆ.’

‘ಮುಂದಿರುವುದು ಖಾಲಿ ಬದುಕು. ಈ ವಿದಾಯದ ಕ್ಷಣಗಳ ನೆನಪಿನಲ್ಲಿಯೇ ಉಳಿದಿರುವ ದಿನಗಳ ಕಳೆಯಬೇಕು. ಕ್ಷಮಿಸು. ನಿನ್ನ ಅಭ್ಯಂತರವಿಲ್ಲದಿದ್ದರೆ, ಇನ್ನೂ ಸ್ವಲ್ಪ ದೂರ ಬರುತ್ತೇನೆ.’

ಕನಿಕರವೆನಿಸಿ, ಯಮರಾಜ ಸಮ್ಮತಿಸಿದ. ಮಾತನಾಡುತ್ತಾ ಮಾತನಾಡುತ್ತಾ ನನ್ನ ಬಗ್ಗೆ ಅವನ ಮಮತೆ ಹೆಚ್ಚಾಯಿತು. ಅವನನ್ನು ನೋಡಿ ಅನ್ನಿಸಿತು-ಯಾವತ್ತೂ ಅವನು ಹೆಣ್ಣುಮಕ್ಕಳಲ್ಲಿ ಈ ರೀತಿ ಸಲಿಗೆಯಿಂದ ಮಾತನಾಡಿಸಿರಲಿಕ್ಕಿಲ್ಲ. ಯಮ ನನಗೆ, ಒಬ್ಬ ಸಿಡುಕು ಮೋರೆಯ ಶಿಸ್ತಿನ ಮನುಷ್ಯ ಮೊದಲ ಬಾರಿಗೆ ಸ್ನೇಹವನ್ನು ಅನುಭವಿಸುತ್ತಿರುವಂತೆ ಕಂಡ.

‘ಇನ್ನೊಂದು ವರ ಕೊಡುತ್ತೇನೆ. ಏನಾದರೂ ಬೇಕಿದ್ದರೆ ಕೇಳು’

ನನಗೆ ಇನ್ನೂ ಸಂದರ್ಭ ಕೂಡಿಲ್ಲವೆನಿಸಿತು.

‘ನನ್ನ ಹೆತ್ತವರಿಗೆ ನಾನೊಬ್ಬಳೇ ಮಗಳು. ಅವರ ಇಳಿವಯಸ್ಸಿನಲ್ಲಿ ನೋಡಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕರುಣಿಸು.’

‘ತಥಾಸ್ತು. ಅವರಿಗೆ ನೂರು ಮಕ್ಕಳಾಗಲಿ. ಆದರೆ, ನನಗೆ ನಿನ್ನ ಕೋರಿಕೆ ಕೇಳಿದರೆ ಆಶ್ಚರ್ಯವಾಗುತ್ತದೆ. ನೀನು ಇಲ್ಲಿಯವರೆಗೆ ಕೇಳಿರುವುದೆಲ್ಲ ಬೇರೆಯವರಿಗಾಗಿ. ನಿನ್ನ ಈ ಒಳ್ಳೆಯ ಗುಣಕ್ಕಾಗಿಯೇ ಇನ್ನೊಂದು ವರ ಕೇಳು. ಕೇವಲ ನಿನಗಾಗಿ. ಆಮೇಲೆ ವಾಪಸ್ಸು ಹೋಗು. ಸಾಕಷ್ಟು ಕ್ರಮಿಸಿದ್ದಿ. ಒಳ್ಳೆಯದಾಗಲಿ’.

ನನ್ನ ಮಾನಸಿಕ ತಯಾರಿ ಸಂಪೂರ್ಣವಾಗಿತ್ತು. ಮಾತು ಸ್ಪಷ್ಟವಾಗಿತ್ತು, ಯಾರು ನಿರಾಕರಿಸಲಾಗದಷ್ಟು. ಬಿನ್ನಹವಿತ್ತು. ಹಾಗೆಯೇ, ಎದುರಿನ ವ್ಯಕ್ತಿಯ ವೃತ್ತಿಧರ್ಮದ ಕಾಳಜಿಯೂ ಇತ್ತು. ಒಟ್ಟಿನಲ್ಲಿ, ನನ್ನ ಮಾತಿನಲ್ಲಿ ಸಮಾಲೋಚನಾ ಕೌಶಲ್ಯ ಅಂತರ್ಗತವಾಗಿತ್ತು.

‘ಯಮರಾಜ. ನನಗೆ ಗಂಡನ ಪ್ರಾಣವೊಂದೇ ಬೇಕಿರುವುದು. ನಾವಿಬ್ಬರು ಇಲ್ಲಿಯವರೆಗೆ ಜೊತೆಯಾಗಿ ಹೆಜ್ಜೆ ಹಾಕಿದ್ದೇವೆ. ಶಾಸ್ತ್ರಗಳು ಹೇಳುತ್ತವೆ- ‘ಯಾರಾದರೂ ಜೊತೆಯಾಗಿ ಏಳು ಹೆಜ್ಜೆ ಹಾಕಿದರೆ ಸ್ನೇಹಿತರಂತೆ’. ಹಾಗಾಗಿ, ಸ್ನೇಹದ ಸಲುಗೆಯಿಂದ ನಿನ್ನಲ್ಲಿ ಕೇಳುತ್ತಿದ್ದೇನೆ. ಸಾಧ್ಯವಾದರೆ, ನನ್ನ ಗಂಡನ ಪ್ರಾಣ ಮರಳಿಸು. ಇದರಿಂದ ನಿನ್ನ ಕರ್ತವ್ಯ ಲೋಪವಾಗುತ್ತದೆಂದು ಗೊತ್ತಿದೆ. ಆದರೂ ಕೇಳಿಕೊಳ್ಳುತ್ತಿದ್ದೇನೆ. ಅವನ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಪುತ್ರ ಶೋಕವಾಗಿದೆ. ಮದುವೆಯಾದ ಒಂದು ವರ್ಷದಲ್ಲಿಯೇ ನಾನು ವಿಧವೆಯಾಗಿದ್ದೇನೆ. ಹಾಗಾಗಿ, ಅವನ ಸಾವನ್ನು ಇನ್ನು ಸ್ವಲ್ಪ ವರ್ಷ ಮುಂದೂಡು’.

ನಾನು ಕೈಮುಗಿದು ಯಮನಿಗೆ ಎದುರಾಗಿ ನಿಂತೆ. ನನ್ನ ಸ್ನೇಹದ ಸಂಕೋಲೆಯಲ್ಲಿ ಸಿಲುಕಿದ ಅವನಿಗೆ ಉಭಯ ಸಂಕಟವಾಯಿತು. ಒಂದು ಒಳ್ಳೆಯ ಜೀವ ಕೆಲವು ದಿನ ಹೆಚ್ಚು ಬದುಕಿದರೆ ನಷ್ಟವೇನು? ನನ್ನನ್ನು ನೋಯಿಸಲು ಇಷ್ಟವಾಗಲಿಲ್ಲವೆಂದು ಅನ್ನಿಸುತ್ತದೆ.

‘ಸಾವಿತ್ರಿ, ಇಷ್ಟು ವರ್ಷಗಳಲ್ಲಿ ನನ್ನೊಂದಿಗೆ ಸರಿಸಾಟಿಯಾಗಿ ನಿಂತು ಧೈರ್ಯವಾಗಿ ಮಾತನಾಡಿದ ಮಹಿಳೆ ನೀನೊಬ್ಬಳೇ. ಈ ಸ್ತ್ರೀಶಕ್ತಿಗೆ ಗೌರವಕೊಟ್ಟು ನಿನ್ನ ಗಂಡನ ಪ್ರಾಣ ಮರಳಿಸುತ್ತಿದ್ದೇನೆ’.

ಯಮರಾಜ ಹಾರೈಸಿ ಕಣ್ಮರೆಯಾದ.

ಇದು ನನ್ನ ಕಥೆ. ನಾನು ಕೇವಲ ಸತಿಯಲ್ಲ…ನನ್ನ ಜೀವನದ ಪ್ರತಿ ಹಂತದಲ್ಲಿಯೂ ಸ್ವಂತ ನಿರ್ಧಾರ ತೆಗೆದುಕೊಂಡವಳು-ಮದುವೆಯಾಗಬೇಕಾದವನನ್ನು ನಾನೇ ಆರಿಸಿದೆ… ವರ್ಷದಲ್ಲಿಯೇ ಸಾಯುತ್ತಾನೆಂದು ಗೊತ್ತಿದ್ದರೂ, ಧೈರ್ಯದಿಂದ ಅವನನ್ನೇ ಮದುವೆಯಾದೆ... ಅರಮನೆಯ ಸುಪ್ಪತ್ತಿಗೆ ಬಿಟ್ಟು ಸರಳ ಜೀವನ ಸ್ವೀಕರಿಸಿದೆ... ಆತ್ಮವಿಶ್ವಾಸದ ಬಲದಿಂದ ಯಮನಲ್ಲಿ ಸ್ನೇಹ ಮಾಡಿ ಗಂಡನ ಜೀವ ಉಳಿಸಿದೆ... ಒಟ್ಟಿನಲ್ಲಿ, ನಾನು ತುಳಿದ ಜೀವನ ಪಯಣದ ಬಗ್ಗೆ ನನಗೆ ಹೆಮ್ಮೆಯಿದೆ.

----------------------------------------------------------------------------

ಓದುತ್ತಾ ಓದುತ್ತಾ ಹಾಗೆಯೇ ಒಂದು ಕ್ಷಣ ಆಘಾತವಾದೆಂತೆನಿಸಿತು. ಮೈ ಜುಮ್ಮೆನಿಸಿತು. ಏನಾಗುತ್ತಿದೆ ಇಲ್ಲಿ?... ಇದನ್ನು ನಾನು ನಿದ್ರೆಕಣ್ಣಿನಲ್ಲಿ ಬರೆದೆನೆ? ಏನೂ ನೆನಪಾಗುತ್ತಿಲ್ಲವಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT