ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತರಿಯ ಕ್ಯಾತೆ

Last Updated 11 ಮೇ 2019, 19:30 IST
ಅಕ್ಷರ ಗಾತ್ರ

ಕತ್ತರಿ ಯಾವತ್ತಿಗೂ ಸೂಜಿಯ ಸಂಗಡ ಸುಮ್ಮಸುಮ್ಮನೆ ಜಗಳ ತೆಗೆಯುತ್ತಿತ್ತು. ಬೇಸತ್ತ ಸೂಜಿ ‘ಆಯ್ತಪ್ಪ, ನೀನೇ ದೊಡ್ಡವ, ಶ್ರೇಷ್ಠ. ಎಲ್ಲಾ ಕಾರ್ಯಗಳಿಗೂ ನೀನು ಅನಿವಾರ್ಯ. ದೊಡ್ಡದೊಡ್ಡವರೆಲ್ಲ ಉದ್ಘಾಟನೆಗಾಗಿ ನಿನ್ನನ್ನು ಬಳಸ್ತಾರೆ. ನೀನೇ ಗ್ರೇಟು’ ಅಂದಿತು.

‘ಅಷ್ಟೆ ಅಲ್ಲಲೇ, ಆಪರೇಷನ್ ಮಾಡಕ, ಬಟ್ಟೆ, ಕೂದಲ ಕತ್ತರಸಾಕ, ಡಿಸೈನ್ ಮಾಡಾಕ, ನರ್ಸರಿಯಲ್ಲಿ... ಒಂದ ಎರಡ..? ನೀನು..? ಯೂಸ್‌ಲೆಸ್‌ ಫೆಲೊ’ ಎಂದು ಸೂಜಿಗೆ ಹೇಳಿತು ಕತ್ತರಿ.

‘ಹೌದಣ್ಣ, ನಾನು ಯೂಸ್‌ಲೆಸ್ಸು. ಆದರ ನನ್ನಿಂದ ಎಷ್ಟು ಆಗುತ್ತೋ ಅಷ್ಟು ಕೆಲಸ ಮಾಡ್ತೀನಿ’ ಎಂದು ಸೂಜಿ ಹೇಳಿತು.

‘ಹಾಂ! ಮತ್ತ ಎದುರು ಉತ್ತರ ಕೊಡತೀದಿ, ಚೋಟ ನನ್ಮಗನೆ. ಪಂಚಾಯತಿ ಸೇರಸ್ತೀನಿ. ಯಾರು ಶ್ರೇಷ್ಠ ಅಂತ ಜನ ನಿರ್ಣಯಿಸಿ ಮುಖಕ್ಕ ಉಗಿಯೊ ಹಾಂಗ ಮಾಡ್ತೀನಿ’ ಎಂದು ಕತ್ತರಿ ಸವಾಲು ಹಾಕಿತು.

‘ಬೇಡಣ್ಣ, ಯಾಕ ಹಾಗೆಲ್ಲ ಮಾಡ್ತಿ. ನೀನೇ ದೊಡ್ಡವ ಅಂತ ಹೇಳೀನಲ್ಲ. ಕೈಮುಗಿತೀನಿ! ಬದುಕಾಕ ಬಿಡಪ ನನ್ನ’ ಎಂದು ಸೂಜಿ ಕೇಳಿಕೊಂಡಿತು.

‘ಮತ್ತ ಎದುರಾಡತಿ. ಬದುಕಾಕ ಬಿಡು ಅಂತ ಲೇವಡಿ ಮಾಡ್ತಿ? ಇಲ್ಲ, ನಿನ್ನ ಹಾಂಗ ಬಿಡಲ್ಲ. ತಿರುಗಿ ಮಾತೆತ್ತಬಾರದು ಹಾಂಗ ಮಾಡತೀನಿ’ ಎಂದು ಹೇಳಿದ ಕತ್ತರಿ, ಪಂಚಾಯತಿ ಸೇರಿಸಿತು.

ದೈವದ ಕಟ್ಟೆ ಮೇಲೆ ಪಂಚರು ಕುಳಿತಿದ್ದರು. ಸುತ್ತಲೂ ಜನ ಸೇರಿದ್ದರು. ಒಂದು ಕಡೆ ಕತ್ತರಿ ದರ್ಪದಿಂದ ನಿಂತಿತ್ತು. ಮೂಲೆಯಲ್ಲಿ ಸಪ್ಪೆ ಮೊರೆ ಹಾಕಿ ಸೂಜಿ ನಿಂತಿತ್ತು, ಅಪರಾಧ ಮಾಡಿದವರು ನಿಲ್ಲುವಂತೆ. ಕತ್ತರಿ ಸೊಕ್ಕಿನಿಂದ ‘ಚೋಟ ಸೂಜಿ, ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡಿ ನನ್ನ ಮಾನ ತೆಗಿತಿದ್ದಾನೆ’ ಎಂದಿತು. ತಾನು ಹೇಗೆ ಶ್ರೇಷ್ಠ ಅಂತ ಉದ್ದವಾಗಿ ಬಡಾಯಿ ಕೊಚ್ಚಿಕೊಂಡಿತು. ‘ನನಗೆ ನ್ಯಾಯ ಕೊಡಿಸಿ’ ಎಂದು ಸುಳ್ಳು ಅಹವಾಲು ಸಲ್ಲಿಸಿತು.

ಪಂಚರು ಸೂಜಿ ಕಡೆ ತಿರುಗಿ ‘ನಿನ್ನ ಮೇಲೆ ಆರೋಪ ಮಾಡುತ್ತಿದ್ದಾನೆ ಕತ್ತರಿ. ನೀನು ಏನು ಹೇಳ್ತಿಯಪ್ಪಾ?’ ಎಂದು ಕೇಳಿದರು.

‘ನಾನು ಹೇಳೊದೇನದರಿ, ಎಲ್ಲಾ ನಿಮಗ ಗೊತ್ತಿದ್ದ ಅದ. ನಾನು ಕತ್ತರಿಗೆ ಏನೂ ಅಂದಿಲ್ಲ. ಅವರss ಜಗಳಾ ತೆಗೆದಾರ. ಅವರೇ ಶ್ರೇಷ್ಠ ಅಂತ ಒಪ್ಪಿಕೊಂಡೀನಿ. ನಾನು ಎಷ್ಟಾದ್ರೂ ಸಣ್ಣವ. ನನ್ನ ಕೈಲಾದ ಕೆಲಸ ಮಾಡ್ತೀನಿ. ಅದನ್ನ ಒಳ್ಳೆ ಕೆಲಸ ಅಂತ ಭಾವಿಸೀನಿ’ ಎಂದು ಸೌಮ್ಯವಾಗಿ ಸೂಜಿ ಹೇಳಿತು.

ಪಂಚರೆಲ್ಲ ದೀರ್ಘ ಚರ್ಚೆ ನಡೆಸಿ, ಸಮಾಲೋಚಿಸಿ, ಅಳೆದು ತೂಗಿ ಸೂಜಿಯೇ ಶ್ರೇಷ್ಠ ಎಂದು ತೀರ್ಪು ಕೊಟ್ಟರು. ಇದನ್ನು ಕೇಳಿ ಕತ್ತರಿ ಕೆಂಡಾಮಂಡಲವಾಯಿತು. ‘ಅನ್ಯಾಯ, ಇದು ಅನ್ಯಾಯ’ ಎಂದು ಬೊಬ್ಬೆ ಹಾಕಿತು. ಮತ್ತೊಮ್ಮೆ ಆತ್ಮರತಿ ಮಾಡಿಕೊಂಡು ‘ಸೂಜಿ ಅದ್ಹೇಗೆ ಶ್ರೇಷ್ಠ ಆಗುತ್ತೆ? ನಾನೇ ಶ್ರೇಷ್ಠ’ ಅಂದಿತು.

‘ನೋಡು ಕತ್ತರಿಯಣ್ಣ, ನೀನು ಕತ್ತರಿಸೋ ಕೆಲಸ ಮಾಡತಿ. ಆದರೆ ಸೂಜಿ ಜೋಡಿಸೊ ಕೆಲಸ ಮಾಡತಾನ. ನೀನು ದೊಡ್ಡ ಕಾರ್ಯಕ್ರಮಗಳನ್ನು ಉದ್ಘಾಟಿಸಬಹುದು, ನಿನ್ನನ್ನು ಎಲ್ಲಾ ಕಡೆ ಬಳಸಬಹುದು. ಆದರ ನೀನು ಕತ್ತರಿಸಿದ್ದನ್ನು ಸೂಜಿ ಜೋಡಿಸಿ ಉಪಕಾರ ಮಾಡ್ತಾನ. ಸೂಜಿ ಇದ್ದುದ್ದಕ್ಕಾಗಿಯೇ ನಿನಗೆ ಬೆಲೆ ಇದೆ. ಕತ್ತರಿಸುವುದು ದೊಡ್ಡದಲ್ಲ. ಅದಕ್ಕಿಂತಲೂ ಶ್ರೇಷ್ಠ ಕೆಲಸ ಜೋಡಿಸುವುದು. ಆ ಕಾರ್ಯ ಸೂಜಿಯಿಂದ ಮಾತ್ರ ಸಾಧ್ಯ’ ಎಂದಾಗ ಜನ ಚಪ್ಪಾಳೆ ತಟ್ಟಿದರು. ಖಾಲಿ ಕೂಡಲಾರದೆ ಕ್ಯಾತೆ ತೆಗೆದ ಕತ್ತರಿ ಮಂಗಳಾರತಿ ಮಾಡಿಸಿಕೊಂಡು ತಲೆತಗ್ಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT