ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿಗೆ ಹೆಚ್ಚಿದ ಬೇಡಿಕೆ

Last Updated 14 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ತಂಪು ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ನೀಡುವ ಖಾದಿ ಬಟ್ಟೆಗಳು ಉದ್ಯಾನನಗರಿಯ ಯುವ ಪೀಳಿಗೆಯನ್ನೂ ಆಕರ್ಷಿಸುತ್ತಿವೆ. ಸ್ವದೇಶಿ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧೀಜಿ ಪ್ರಮುಖ ಅಸ್ತ್ರವಾಗಿ ಬಳಸಿದ್ದ ಖಾದಿಗೆ ಬೆಂಗಳೂರಿಗರು ಫಿದಾ ಆಗುತ್ತಿದ್ದಾರೆ. ಯುವ ಜನರ ಆಸಕ್ತಿಗೆ ತಕ್ಕಂತೆ ಖಾದಿಯಲ್ಲೂ ಹೊಸ ಟ್ರೆಂಡ್‌ನ ಡಿಸೈನ್‌ಗಳನ್ನು ಪರಿಚಯಿಸಿದ ಮೇಲೆ ಅವುಗಳನ್ನು ಕೊಳ್ಳುವವರೂ ಹೆಚ್ಚಾಗಿದ್ದಾರೆ.

ನಗರದ ಕುಮಾರಕೃಪ ರಸ್ತೆಯಲ್ಲಿರುವ ‘ಖಾದಿ ಎಂಪೋರಿಯಂ’ನಲ್ಲಿ 12 ದಿನಗಳಿಂದ ನಡೆಯುತ್ತಿರುವ ವಹಿವಾಟು ಗಮನಿಸಿದರೆ ಸಾಕು, ಜನರು ಖಾದಿ ಬಟ್ಟೆ ಖರೀದಿಗೂ ಆದ್ಯತೆ ನೀಡಿರುವುದು ಗೋಚರಿಸುತ್ತದೆ.

ಗಾಂಧಿ ಜಯಂತಿ ಪ್ರಯುಕ್ತ ಖಾದಿ ಎಂಪೋರಿಯಂ ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್‌ 2ರಿಂದ ಡಿಸೆಂಬರ್‌ 7ರವರೆಗೆ (55 ದಿನಗಳು) ವಿಶೇಷ ರಿಯಾಯಿತಿ ಘೋಷಿಸಿದೆ. ರಿಯಾಯಿತಿ ದರದಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದು, ಮೊದಲ 10 ದಿನಗಳಲ್ಲಿ ಮಳಿಗೆ ₹ 42.85 ಲಕ್ಷ ವಹಿವಾಟು ನಡೆಸಿದೆ (ಕಳೆದ ವರ್ಷಕ್ಕಿಂತ ₹ 5 ಲಕ್ಷ ಹೆಚ್ಚಾಗಿದೆ). ಗಾಂಧಿ ಜಯಂತಿ ದಿನ ₹ 16 ಲಕ್ಷ ವಹಿವಾಟು ನಡೆದಿತ್ತು! ಕಳೆದ ವರ್ಷ ಗಾಂಧಿ ಜಯಂತಿಯಂದು ₹12.48 ಲಕ್ಷ ವಹಿವಾಟಾಗಿತ್ತು.

‘ಕಳೆದ ವರ್ಷದಲ್ಲಿ ಮಳಿಗೆ ಒಟ್ಟಾರೆ ₹ 2.40 ಕೋಟಿ ವಹಿವಾಟು ನಡೆಸಿತ್ತು. ಈ ಬಾರಿ ಇನ್ನೂ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಖಾದಿ ಎಂಪೋರಿಯಂನ ವ್ಯವಸ್ಥಾಪಕ ವಿ.ಪಿ. ಸಂಗಮೇಶ್ವರಮಠ.

ಗಾಂಧಿ ಜಯಂತಿ ಬಳಿಕ ನವರಾತ್ರಿ, ದೀಪಾವಳಿ ಹಬ್ಬಗಳ ಸರಣಿಯೇ ಇರುವುದರಿಂದ ನಗರದ ನಿವಾಸಿಗಳು ಹೊಸ ಬಟ್ಟೆಗಳನ್ನು ಖರೀದಿಸುವ ವೇಳೆ ಖಾದಿಗೂ ಆದ್ಯತೆ ನೀಡುತ್ತಿದ್ದಾರೆ. ಇದು ಮಳಿಗೆಯ ವಹಿವಾಟು ಹೆಚ್ಚಿಸುತ್ತಿದೆ ಎಂದು ಹೇಳುತ್ತಾರೆ ಅವರು.

ಜುಬ್ಬದಲ್ಲಿ ಹೊಸ ಪ್ರಯೋಗ: ಪುರುಷರ ಉಡುಗೆಯಾದ ಜುಬ್ಬವನ್ನು ಹೊಸ ಟ್ರೆಂಡ್‌ಗೆ ತಕ್ಕಂತೆ ಈ ವರ್ಷ ರೂಪಿಸಿದ್ದೇವೆ. ಜುಬ್ಬದ ಫುಲ್‌ ಸ್ಲೀವ್‌ಗೆ ಬಟನ್‌ ಅಳವಡಿಸಿ ಆಕರ್ಷಣೀಯವಾಗಿಸಲಾಗಿದೆ. ಅದೇ ರೀತಿ ಹಾಫ್‌ ಕಾಲರ್‌ ಜುಬ್ಬವನ್ನೂ ಪರಿಚಯಿಸಿದ್ದೇವೆ. ಇವು ಯುವ ಸಮುದಾಯವನ್ನು ಆಕರ್ಷಿಸುತ್ತಿವೆ. ಅಲ್ಲದೆ ಫುಲ್‌ ಸ್ಲೀವ್‌, ಹಾಫ್‌ ಸ್ಲೀವ್‌, ಶರ್ಟ್‌ ಲೆನ್ತ್‌ ಜುಬ್ಬಗಳೂ ಜನರನ್ನು ಮೊದಲಿನಿಂದಲೂ ಸೆಳೆಯುತ್ತಿವೆ. ನೆಹರೂ ಜುಬ್ಬ, ಮೋದಿ ಜುಬ್ಬ ಮಾದರಿ ಉಡುಪುಗಳಿಗೆ ಯುವ ಜನರಿಂದ ಹೆಚ್ಚಿನ ಬೇಡಿಕೆಯಿದೆ ಎಂದು ಅವರು ವಿವರಿಸುತ್ತಾರೆ.

ಟಾಪ್‌ನಲ್ಲಿ ಹೊಸದು: ಮಹಿಳೆಯರು ಇಷ್ಟಪಟ್ಟುಕೊಳ್ಳುವ ಖಾದಿ ‘ಟಾಪ್‌’ ಬಟ್ಟೆಗಳ ವಿನ್ಯಾಸವನ್ನೂ ಸುಧಾರಿಸಿ ಇನ್ನಷ್ಟು ಆಕರ್ಷಿಸುವಂತೆ ಸಿದ್ಧಪಡಿಸಿದ್ದೇವೆ. ಈಗಾಗಲೇ ಟಾಪ್‌ನಲ್ಲಿ ಫುಲ್‌ ಮತ್ತು ಹಾಫ್‌ ಸ್ಲೀವ್‌, ಸ್ಲೀವ್‌ಲೆಸ್‌ಗಳನ್ನು ಪರಿಚಯಿಸಿದ್ದೇವೆ. ಇತ್ತೀಚೆಗೆ 3/4 ಸ್ಲೀವ್‌ ಟಾಪ್‌ಗಳತ್ತ ಯುವತಿಯರು ಆಕರ್ಷಿತರಾಗುತ್ತಿರುವುದನ್ನು ಗಮನಿಸಿ, ಆ ಪ್ರಯೋಗವನ್ನು ಖಾದಿಯಲ್ಲೂ ಮಾಡಿದ್ದೇವೆ ಎಂದು ಹೇಳುತ್ತಾರೆ ಖಾದಿ ಎಂಪೋರಿಯಂನ ಸಹಾಯಕ ವ್ಯವಸ್ಥಾಪಕಿ ವಿಜಯಕುಮಾರಿ.

ಕಾರ್ಪೋರೇಟ್‌ ಕಂಪನಿಗಳ ಉದ್ಯೋಗಿಗಳು, ಕಾಲೇಜು ಯುವತಿಯರು, ಉಪನ್ಯಾಸಕರು ಖಾದಿ ಬಟ್ಟೆಗಳನ್ನು ತೊಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಸ್ಲಿನ್‌ ಖಾದಿ ಶರ್ಟ್‌ಗಳು, ಜುಬ್ಬ ಸೆಟ್‌, ಚೂಡಿದಾರ್‌ ಸೆಟ್‌, ಖಾದಿ ಸೀರೆಗಳು, ಕೋಲ್ಕತ್ತ ಮತ್ತು ಒಡಿಶಾದ ಖಾದಿ ಉಡುಪುಗಳಿಗೆ ಭಾರಿ ಬೇಡಿಕೆ ಇದೆ. ಹುಬ್ಬಳ್ಳಿ ಸೀರೆಗಳಿಗೂ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಅವರು.

ಬೆಂಗಳೂರಿನ ಶೇಷಾದ್ರಿಪುರ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರವಾಗಿ ಖಾದಿ ವಸ್ತ್ರಗಳನ್ನೇ ಧರಿಸುತ್ತಿದ್ದಾರೆ. ಅದೇ ರೀತಿ ಬಿಇಎಸ್‌ ಸ್ಕೂಲ್‌ನ ವಿದ್ಯಾರ್ಥಿಗಳು ಶನಿವಾರ ಖಾದಿ ಸಮವಸ್ತ್ರ ತೊಡುತ್ತಾರೆ. ಈ ಎರಡೂ ಶಿಕ್ಷಣ ಸಂಸ್ಥೆಗಳು ನಮ್ಮಿಂದಲೇ ಖಾದಿ ಬಟ್ಟೆಗಳನ್ನು ಖರೀದಿಸುತ್ತವೆ.

ಏನೆಲ್ಲಾ ಲಭ್ಯ: ಪುರುಷ ಮತ್ತು ಮಹಿಳೆಯರ ಜುಬ್ಬ, ಪೈಜಾಮ, ಫುಲ್‌ ಶರ್ಟ್‌, ಹಾಫ್‌ ಶರ್ಟ್‌, ನಿಕ್ಕರ್‌, ಪ್ಯಾಂಟ್‌, ಚೂಡಿದಾರ್ ಸೆಟ್‌, ಟಾಪ್‌ಗಳು, ಖಾದಿ ಸೀರೆ, ರೇಷ್ಮೆ ಸೀರೆ, ಶಾಲುಗಳು, ಡ್ರಸ್‌ ಮೆಟೀರಿಯಲ್‌ಗಳು, ಪಾಲಿವಸ್ತ್ರ ಶರ್ಟಿಂಗ್‌, ಪ್ಯಾಂಟಿಂಗ್‌, ಉಣ್ಣೆಯ ಶಾಲು, ಬ್ಲಾಂಕೆಟ್‌, ಕಾಟನ್‌ ಖಾದಿ ಕಾರ್ಪೆಟ್‌, ಬೆಡ್‌ಶೀಟ್‌, ಟವೆಲ್‌, ಲುಂಗಿ, ಕಾಟನ್‌ ಸೀರೆ, ಯೋಗಾ ಮ್ಯಾಟ್‌, ವಿವಿಧ ಬಗೆಯ ಮಾಲೆ (ಹಾರ)ಗಳು, ಗಿಡಮೂಲಿಕೆಗಳ ಸೋಪು, ಶಾಂಪು, ಪೂಜಾ ಸಾಮಗ್ರಿಗಳು, ಅಗರಬತ್ತಿ, ಜೇನುತುಪ್ಪ, ಅಲೊವೆರಾ ಉತ್ಪನ್ನಗಳು ಲಭ್ಯ. ಖಾದಿ ಎಂಪೋರಿಯಂ ಡಿ.7ರವರೆಗೆ ಖಾದಿ ವಸ್ತ್ರಗಳ ದರದ ಮೇಲೆ ಶೇ 35ರಷ್ಟು ಹಾಗೂ ರೇಷ್ಮೆ ವಸ್ತ್ರಗಳ ಮೇಲೆ ಶೇ 20ರಷ್ಟು ರಿಯಾಯಿತಿ ನಿಗದಿಪಡಿಸಿದೆ. ಅಲ್ಲದೆ ಖಾದಿ ಎಂಪೋರಿಯಂ ಅಕ್ಟೋಬರ್‌ನಲ್ಲಿ ಎಲ್ಲ ಭಾನುವಾರಗಳಂದು ಕಾರ್ಯ ನಿರ್ವಹಿಸಲಿದೆ.

*
ಸಾಮಾನ್ಯವಾಗಿ ದಿನಕ್ಕೆ ₹50 ಸಾವಿರದಿಂದ ₹ 60 ಸಾವಿರದವರೆಗೆ ನಡೆಯುವ ವಹಿವಾಟು ಇತ್ತೀಚೆಗೆ ಹೆಚ್ಚಾಗಿದೆ. ಗಾಂಧಿ ಜಯಂತಿ ದಿನದಂದೇ ₹ 16 ಲಕ್ಷ ವಹಿವಾಟು ನಡೆದಿತ್ತು. ಹತ್ತು ದಿನಗಳಲ್ಲಿ ₹ 42 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ. ಹಿರಿಯರು, ಕಿರಿಯರು, ಯುವಕರು, ಯುವತಿಯರನ್ನು ಖಾದಿ ಆಕರ್ಷಿಸುತ್ತಿದೆ.
–ವಿಜಯಕುಮಾರಿ, ಸಹಾಯಕ ವ್ಯವಸ್ಥಾಪಕಿ, ಖಾದಿ ಎಂಪೋರಿಯಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT