ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥರೂಪಿಣಿ ಕಾವೇರಿ...

Last Updated 15 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಪ್ರತಿವರ್ಷ ಈ ವೇಳೆಗೆ ಕೊಡಗಿನಲ್ಲಿ ಹಬ್ಬಗಳ ಸಂಭ್ರಮವೇ ಮೇಳೈಸುತ್ತಿತ್ತು. ಅದರಲ್ಲೂ ದಸರಾ, ಕಾವೇರಿ ತೀರ್ಥೋದ್ಭವಕ್ಕೆ ವಿಶೇಷ ಸ್ಥಾನ. ಈ ಬಾರಿ ಎರಡು ಹಬ್ಬಗಳೂ ಒಟ್ಟಿಗೆ ಬಂದಿವೆ. ಆದರೆ, ಜಲಪ್ರಳಯ, ಭೂಕುಸಿತದಿಂದ ತತ್ತರಿಸಿರುವ ಜಿಲ್ಲೆಯ ಜನರಲ್ಲಿ ಹಬ್ಬವನ್ನು ಸಂಭ್ರಮಿಸುವ ಮನಸ್ಸಿಲ್ಲ. ಆದರೂ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಬ್ಬ, ಉತ್ಸವ ಕೈಬಿಡಬಾರದೆಂದು ನೋವಿನ ನಡುವೆಯೂ ಪ್ರಕೃತಿ ಆರಾಧಕರ ಊರಲ್ಲಿ ಸರಳ ದಸರಾ ನಡೆಯುತ್ತಿದೆ. ಮತ್ತೊಂದೆಡೆ ಕಾವೇರಿಯ ತೀರ್ಥೋದ್ಭವಕ್ಕೂ ಸಿದ್ಧತೆಗಳು ಪೂರ್ಣಗೊಂಡಿವೆ.

ಆಗಸ್ಟ್‌ ನಲ್ಲಿ ಪ್ರವಾಹದ ರೂಪದಲ್ಲಿ ಉಕ್ಕೇರಿದ್ದ ಕಾವೇರಿಯು ಇದೇ 17ರಂದು (ಬುಧವಾರ) ಸಂಜೆ 6.43ಕ್ಕೆ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ. 2016ರಲ್ಲಿ ಬೆಳಿಗ್ಗೆ 6.28ಕ್ಕೆ, 2017ರಲ್ಲಿ ಮಧ್ಯಾಹ್ನ 12.33ಕ್ಕೆ ತೀರ್ಥೋದ್ಭವ ನಡೆದಿತ್ತು.

ಕಾವೇರಿ ಎಲ್ಲರ ಪಾಲಿನ ಜೀವನದಿ. ಪ್ರತಿವರ್ಷ ಅಕ್ಟೋಬರ್‌ನಲ್ಲಿ ಭಕ್ತರ ನಂಬಿಕೆಯ ತೀರ್ಥೋದ್ಭವ ನಡೆಯುತ್ತದೆ. ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯ ಬೆಟ್ಟದ ತಪ್ಪಲಿನಲ್ಲಿ ವನರಾಶಿಯ ನಡುವೆ ಕಾವೇರಿ ನದಿಯು ಜನಿಸಿ ಮುಂದೆ ಸಾಗಿ ಲಕ್ಷಾಂತರ ಎಕರೆ ಜಮೀನಿಗೆ ನೀರು ಉಣಿಸುತ್ತದೆ. ಜನ ಹಾಗೂ ಜಾನುವಾರುಗಳಿಗೂ ಆಸರೆ ಆಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಕ್ಷೇತ್ರದ ಪುಟ್ಟ ಕುಂಡಿಕೆಯಲ್ಲಿ ಕಾವೇರಿ ಉಕ್ಕಿ ಭಕ್ತರಿಗೆ ಕಾಣಿಸುತ್ತಾಳೆ. ಆಗ ನೆರೆದಿದ್ದವರು ಜಯ ಘೋಷದೊಂದಿಗೆ ಕುಂಡಿಕೆಯ ಬಳಿಯ ಕೊಳದಲ್ಲಿ ಧುಮ್ಮಿಕ್ಕಿ ಕಾವೇರಿ ನೀರಿನಲ್ಲಿ ಮಿಂದೇಳುತ್ತಾರೆ. ತಂದಿದ್ದ ಕೊಡ, ಬಾಟಲಿಯಲ್ಲಿ ತೀರ್ಥ ಕೊಂಡೊಯ್ದು ಮನೆಯಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಅರ್ಚಕರು ಸಹ ಭಕ್ತ ಸಮೂಹದ ಮೇಲೆ ತೀರ್ಥವನ್ನು ಪ್ರೋಕ್ಷಿಸುತ್ತಾರೆ. ಈ ಅಪರೂಪದ ಸನ್ನಿವೇಶ ಕಣ್ತುಂಬಿಕೊಳ್ಳಲು ನಾಡಿನ ಮೂಲೆಗಳಿಂದ ಜನರು ಕೊಡಗಿಗೆ ಆಗಮಿಸುತ್ತಾರೆ. ಅದಕ್ಕಾಗಿ ಕಾದು ಕುಳಿತಿರುತ್ತಾರೆ.

ಆದರೆ, ಈ ಬಾರಿ ಸ್ಥಳೀಯರಲ್ಲಿ ಕೆಲವರು ತೀರ್ಥೋದ್ಭವದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ಆಸಕ್ತಿ ತೋರಿದರೆ, ಇನ್ನು ಕೆಲವರು ‘ಇನ್ನೆಲ್ಲಿಯ ಸಂಭ್ರಮ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಸಂಭ್ರಮಿಸಬೇಕಿದ್ದ ಸಮಯದಲ್ಲಿ ಸೂತಕದ ಛಾಯೆ ಆವರಿಸಿದೆ. ಆದರೆ, ಇಂಥ ಸಂಕಷ್ಟ ಭವಿಷ್ಯದಲ್ಲಿ ಬಾರದಿರಲಿ ಎಂದು ಕಾವೇರಿಯಲ್ಲಿ ಪ್ರಾರ್ಥಿಸುತ್ತೇನೆ’ ಎನ್ನುತ್ತಾರೆ ಹಟ್ಟಿಹೊಳೆಯ ವಿನೋದ್.

‘ತೀರ್ಥೋದ್ಭವ ಎಂದರೆ ಒಂದು ವಾರ ಸಡಗರ ಇರುತ್ತಿತ್ತು. ಆದರೆ, ಭೂಕುಸಿತದ ಕಹಿ ಘಟನೆ ಇನ್ನೂ ಮಾಸಿಲ್ಲ. ಜಿಲ್ಲೆಯ ಸಂತ್ರಸ್ತರದ್ದು ಅಲೆಮಾರಿ ಜೀವನವಾಗಿದೆ. ಇನ್ನೆಲ್ಲಿ ಸಂಭ್ರಮಪಡೋದು’ ಎಂದು ಇಗ್ಗೋಡ್ಲುವಿನ ಡೇನಿಲ್‌ ಮೇದೂರ ಬೇಸರ ವ್ಯಕ್ತಪಡಿಸುತ್ತಾರೆ.

ನೆರೆ ರಾಜ್ಯದ ಭಕ್ತರ ದಂಡು
ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಜೊತೆಗೆ, ಕೊಡಗಿನ ನಾನಾ ಮೂಲೆಗಳ ಭಕ್ತರು ತೀರ್ಥ ಕೊಂಡೊಯ್ದು, ಗ್ರಾಮದ ಜನರಿಗೆ ವಿತರಿಸುವುದು ಹತ್ತಾರು ವರ್ಷಗಳಿಂದ ನಡೆದುಬಂದಿರುವ ಪದ್ಧತಿ. ಆದರೆ, ಈ ವರ್ಷ ಭಕ್ತರ ಸಂಖ್ಯೆ ಕಡಿಮೆಯಾಗುವ ಆತಂಕ ಎದುರಾಗಿದೆ.

ತಲಕಾವೇರಿ ದೇವಸ್ಥಾನದ ಮುಖ್ಯಸ್ಥರು ಕೋಡಿ ಕುಟುಂಬದವರು. ಅವರ ನೇತೃತ್ವದಲ್ಲಿ ಜಾತ್ರೆ ನಡೆಯುತ್ತದೆ. ಕಾವೇರಿ ದೇವಿಯ ಅಭರಣಗಳು ಮುಜರಾಯಿ ಇಲಾಖೆ ಸುಪರ್ದಿಯಲ್ಲಿದ್ದರೂ, ಕೋಡಿ ಕುಟುಂಬದವರೇ ನಿರ್ವಹಿಸುತ್ತಾರೆ. ಜಾತ್ರೆಯ ದಿನ ಆ ಕುಟುಂಬಸ್ಥರು ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರಕ್ಕೆ ಪೂಜಾ ಸಾಮಗ್ರಿ, ಬಾಳೆ ದಿಂಡು ಹೊತ್ತು ತರುತ್ತಾರೆ. ಅಂದು ಚಿನ್ನದ ಪತಾಕೆ, ಚಿನ್ನದ ಸೂರ್ಯಪಾನ, ಚಂದ್ರಪಾನ, ಬೆಳ್ಳಿ ಪ್ರಭಾವಳಿ, ಹೂವಿನ ಮಾಲೆ ತೊಟ್ಟು ಕಾವೇರಿ ತಾಯಿ ಕಂಗೊಳಿಸುತ್ತಾಳೆ.

ಕೊಡಗಿನ ಪ್ರಮುಖ ಪ್ರೇಕ್ಷಣೀಯ ಸ್ಥಳ ಭಾಗಮಂಡಲ. ತೀರ್ಥೋದ್ಭವದ ವೇಳೆಗೆ ಭಗಂಡೇಶ್ವರ ದೇಗುಲವೂ ಭಕ್ತರಿಂದ ತುಂಬಿರುತ್ತದೆ. ಇಲ್ಲಿನ ಸಂಗಮದಲ್ಲಿ ಭಕ್ತರು ತುಲಾ ಸಂಕ್ರಮಣ ಸ್ನಾನ ಮಾಡುತ್ತಾರೆ. ಪಿಂಡ ಪ್ರದಾನವೂ ನಡೆಯುತ್ತದೆ.

ದಕ್ಷಿಣ ಪ್ರಯಾಗ ಭಾಗಮಂಡಲದಲ್ಲಿ ಮೂರು ನದಿಗಳು ಸಂಗಮವಿದೆ. ಹಸಿರು ಹೊದ್ದು ಬೆಟ್ಟಗಳ ನಡುವೆ ಕಾವೇರಿ, ಕನ್ನಿಕೆಯರ ಸಂಗಮ ಆಗುತ್ತದೆ. ಸುಜ್ಯೋತಿ ಗುಪ್ತಗಾಮಿನಿಯಾಗಿ ಬಂದು ಈ ಎರಡು ನದಿಗಳ ಜೊತೆಗೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT