ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಕುಂಟುನಾಯಿ

Last Updated 27 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಸಂಜೆಯ ಕತ್ತಲು ನಿಧಾನವಾಗಿ ಎಲ್ಲೆಡೆ ಆವರಿಸಿಕೊಳ್ಳುತಿತ್ತು. ದೊಡ್ಡಸಿದ್ದವ್ವನಹಳ್ಳಿಯ ಹನುಮನ ತೇರನ್ನು ನೋಡಿಕೊಂಡು ಕಣುಮಣ್ಣ, ತನ್ ನಕುಟುಂಬದೊಂದಿಗೆ ಕರೆಮಟ್ಟಿ ಬಳಿಗೆ ಬರುವ ವೇಳೆಗೆ ಪೂರ್ಣ ಕತ್ತಲಾಯಿತು. ದೂರದಿಂದ ಬರುತ್ತಿದ್ದ ನಾಯಿ ಮರಿಯೊಂದರ ಕುಂಯಿ...ಕುಂಯಿ ಎನ್ನುವ ಶಬ್ದ ಕಿವಿಗೆ ಬಿದ್ದೊಡನೆ ತಾಯಿಯ ಮಡಿಲಲ್ಲಿ ತಲೆ ಇಟ್ಟುಕೊಂಡು ಜಾತ್ರೆಯಲ್ಲಿ ತಂದ ಗಿರಗಿಟ್ಟಲೆಯನ್ನು ಕತ್ತಲಲ್ಲೇ ಸವರುತ್ತಿದ್ದ ಕೃಷ್ಣನ ಕಿವಿಗಳು ನಿಮಿರಿದವು, ಚಕ್ಕಡಿ ನಾಯಿಯ ಮರಿಯ ಸಮೀಪ ಬಂದಾಗ ಅದರ ನರಳಾಟ ಮುಗಿಲು ಮುಟ್ಟುತ್ತಿತ್ತು, ಕಣುಮಣ್ಣ... ಯಾರೋ ಜಾತ್ರೆಯ ಜನಗಳ ಹಿಂದೆ ನಾಯಿ ಮರಿ ಬಂದಿದೆ, ಅವರು ಹಿಂದಕ್ಕೆ ಹೊಡೆದಿರಬೇಕು... ತಾಯಿಯಿಂದ ಅಗಲಿದ ಅದು ಕೂಗ್ತಾ ಇದೆ ಎಂದನು. ತಕ್ಷಣ ಕೃಷ್ಣ...ಅಪ್ಪ ಗಾಡಿ ನಿಲ್ಲಿಸು.., ಅದನ್ನು ಇಡುಕೊಡು ಎಂದಾಗ ಕೃಷ್ಣನ ಹಠ ನೋಡಿ ಚಕ್ಕಡಿ ನಿಲ್ಲಿಸಿ ಅದರ ಬಳಿ ಹೋದಾಗ ಅದು ತಪ್ಪಿಸಿಕೊಳ್ಳಲು ಅತ್ತ ಇತ್ತ ಕುಂಟುತ್ತ. ಕುಯ್ಯೋ ಎನ್ನುತ್ತ ಸರಿದಾಡುತಿತ್ತು. ಯಾವುದೊ ಚಕ್ಕಡಿಯ ಗಾಲಿ ಹರಿದು ಅದರ ಕಾಲಿನ ತುದಿ ಪೂರ್ಣ ತುಂಡಾಗಿತ್ತು. ಆಗ ಕಣುಮಣ್ಣ ಥೂ... ನಾಯಿ ಕಾಲು ಇಲ್ಲ ಕಿಷ್ಟ. ಈಗಲೋ ಆಗಲೋ... ಸಾಯುತ್ತೆ ಬೇಡ ಎಂದಾಗ, ಕೃಷ್ಣನು ಅಳಲು ಶುರು ಮಾಡಿದ್ದನ್ನು ನೋಡಿ... ಅದನ್ನು ಹಿಡಿದುಕೊಂಡು ಬಂದು ಗಾಡಿಯಲ್ಲಿ ಹಾಕಿಕೊಂಡು ಮನೆ ತಲುಪಿದರು.

ಕಣುಮಣ್ಣ, ಕೃಷ್ಣ ಸೇರಿ ಅರಿಷಿಣ ಪುಡಿ ಹಾಕಿ ಅದರ ಕಾಲಿಗೆ ಬಟ್ಟೆಯ ಪಟ್ಟಿಕಟ್ಟಿದರು, ಯಾವಾಗಲೂ ಕುಯಿ...ಕುಯಿ...ಎನ್ನುತಿತ್ತು. ಶಾಲೆಗೆ ರಜೆ ದಿನಗಳಾಗಿದ್ದರಿಂದ ಕೃಷ್ಣ ಆ ನಾಯಿಮರಿಯನ್ನು ಎದೆಗೆ ಅವುಚಿಕೊಂಡೆ ಓಡಾಡುತ್ತಿದ್ದ, ಕೆಲವು ದಿನಗಳಲ್ಲಿ ಗಾಯ ಮಾಯಿತು. ನಾಯಿ ಕುಂಟುತ್ತ ಓಡಾಡುತ್ತಿದ್ದರಿಂದ ಕುಂಟೀರಾ ಎಂದು ಕೃಷ್ಣ ಕರೆಯುತ್ತಿದ್ದನು. ಅವನು ಕರೆದ ತಕ್ಷಣ ಬಾಲ ಅಲುಗಾಡಿಸುತ್ತಾ ಓಡೋಡಿ ಬರುತ್ತಿತ್ತು.

ಬೇಸಿಗೆಯ ದಿನಗಳು ಪ್ರಾರಂಭವಾದವು. ಒಳಗಿನ ಧಗೆ ತಾಳಲಾರದೆ ಊರಿನ ಜನರೆಲ್ಲಾ ಮನೆಯ ಅಂಗಳಗಳಲ್ಲಿ ಮಲಗುತ್ತಿದ್ದರು. ಒಂದು ರಾತ್ರಿ ಕೃಷ್ಣ ತಮ್ಮ ಗುಡಿಸಿಲಿನ ಅಂಗಳದಲ್ಲಿ ಮಲಗಿ, ‘ಒಂದು...ಎರಡು ಬಾಳೆಲೆ ಹರಡು...’ ಹಾಡನ್ನು ಗುನುಗುತ್ತ ಚಾಪೆಯ ಮೇಲೆ ಮಲಗಿದ್ದನು.ನಾಯಿ ಅವನ ಸನಿಹವೇ ಮಲಗಿತ್ತು. ಅಡಿಕೆಯ ಮರದದಬ್ಬೆ ಬಳಸಿ ಮನೆಯ ಮುಂದೆ ಅಡ್ಡ ಮಾಡನ್ನು ಅವರ ತಂದೆ ಕಟ್ಟಿದ್ದರು. ಕೃಷ್ಣನ ತಾಯಿ ಕಣುಮಕ್ಕ ಆ ಅಡ್ಡಲಿಗೆ ಹೀರೆಬಳ್ಳಿ, ಹಾಗಲಬಳ್ಳಿ ಹಬ್ಬಿಸಿದ್ದಳು. ಆ ಪೊದೆ ಒಳಗೆ ಅವಿತಿದ್ದ ಮಂಡರಗಪ್ಪೆಯು ನಿಧಾನವಾಗಿ ಇವನ ಚಾಪೆ ಕಡೆ ಹೊರಳಿ ಬಂದಿತು. ತಕ್ಷಣ ಅಲ್ಲೇ ಮಲಗಿದ್ದ ಕುಂಟೀರ ಗುರ್ರು ಗುರ್ರು ಎಂದು ಬೊಗಳುತ್ತ, ಅದರ ಸನಿಹ ಬಂದು ಮೋಟುಗಾಲಲ್ಲೇ ಅದನ್ನು ಸ್ವಲ್ಪ ದೂರ ತಳ್ಳಿತು. ಮಂಡರಗಪ್ಪೆ ತನ್ನ ಬಾಲದಲ್ಲಿ ನಾಯಿಯನ್ನು ಕುಟುಕಿತು. ಅದನ್ನು ಲೆಕ್ಕಿಸದೆ ಅದರ ಮುಂದೆ ನಿಂತಿತು. ಅದನ್ನು ನೋಡಿದ ಕೃಷ್ಣ ಅಪ್ಪ...ಅಪ್ಪ... ಎಂದು ಕೂಗಿದಾಗ ಹೊರಬಂದ ಕಣುಮಣ್ಣ ಮಂಡರಗಪ್ಪೆಯನ್ನು ಅಲ್ಲೇ ಇದ್ದ ಕೋಲಲ್ಲಿ ಜಜ್ಜಿದನು, ಕುಂಟೀರ ಕುಂಯಿಗುಡತೊಡಗಿತು. ಕೃಷ್ಣನು ಅಳತೊಡಗಿದನು. ಇವನ ಅರಚಾಟ ನೋಡಿ ಮಗಳನ್ನು ನೋಡಿಕೊಂಡು ಹೋಗಲು ಬಂದಿದ್ದ ಕಲ್ಲಪ್ಪ ಊಟದ ಶಾಸ್ತ್ರ ಬೇಗ ಮುಗಿಸಿ, ಮನೆಯಿಂದ ಹೊರಗಡೆ ಹೋಗಿ ಹೆಸರು ಹೊಡೆಸದ ಸೊಪ್ಪನ್ನು ತಂದು ಅರೆದುಕೊಟ್ಟನು, ಕಣುಮಣ್ಣ ಕಲ್ಲಪ್ಪನ ಸಹಾಯದಿಂದ ದನಗಳಿಗೆ ಔಷಧಿ ಕುಡಿಸುವ ಗೊಟ್ಟದಲ್ಲೇ ನಾಯಿ ಬಾಯಿ ಹಿಡಿದುಕೊಂಡು ಆ ಸೊಪ್ಪಿನರಸವನ್ನು ಎತ್ತಿದನು. ಸ್ವಲ್ಪ ಹೊತ್ತಿನ ನಂತರ ಔಷಧಿ ನಾಯಿಗೆ ಒಗ್ಗಿತು. ನಾಯಿ ತನ್ನ ಅರಚಾಟ ನಿಲ್ಲಿಸಿ ಅಲ್ಲೇ ಬಂಡೆಯ ಮೇಲೆ ಹಾಕಿದ್ದ ಅನ್ನ ತಿನ್ನತೊಡಗಿತು, ಅದನ್ನೇ ನೋಡುತ್ತಿದ್ದ ಕೃಷ್ಣ ಸಂತಸದ ನಿಟ್ಟುಸಿರುಬಿಟ್ಟನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT