ಲಿ...

7

ಲಿ...

Published:
Updated:
Deccan Herald

‘ಕರೆಂಟಿದ್ದೂ ಕತ್ತಲು...’

ರಮೇಶ ಸಂದಿನತ್ತ ಮತ್ತೆ ಮೇಲೆ ನೋಡಿದ. ಅದೇ ನಾಡ ಹೆಂಚು. ಯಾವುದೋ ಪುಣ್ಯಾತ್ಮ ಬಡಗಿ ಬೆವರು ಇಳಿಸಿ ಕತ್ತರಿಸಿ ಕೂರಿಸಿದ ರೀಪು ಪಕ್ಕಾಸುಗಳು. ಕನಿಷ್ಠ ನಲ್ವತ್ತು ವರ್ಷಗಳ ಹಿಂದಿನ ಮಾಡು ಎಂದರೂ ಆ ಕಾಲಕ್ಕೆ ಮುನ್ನೂರು ರೂಪಾಯಿ ಸಂಬಳ ಪಡೆದಿರಬಹುದು. ಆ ಹಣ ಅವನ ಮನೆ ಖರ್ಚಿಗೋ, ಮಕ್ಕಳ ಬಟ್ಟೆಗೋ, ತೊಟ್ಟೆ ಹೆಂಡಕ್ಕೋ ಖಾಲಿಯಾಗಿ ಮಲ– ಮೂತ್ರ ರೂಪದಲ್ಲಿ ಹೊರಬಿದ್ದಿರಬಹುದು. ಅವನು ಈ ಲೋಕವನ್ನೇ ಬಿಟ್ಟು ಬೇರೆಡೆ ಹೋಗಿರಲೂಬಹುದು. ಆದರೆ, ಅವನ ಸ್ಥಾಪನೆ ಮಾತ್ರ ರಮೇಶನ ತಲೆಯ ಮೇಲೆ ಬಾಡಿಗೆ ಮನೆಯ ಮಾಡಿನ ರೂಪದಲ್ಲಿ ನಿಂತಿದೆ.

ರೂಮ್ ಓನರ್ ಕಳೆದ ವರ್ಷ ಹರ್ಷಾಚಾರಿಯಿಂದ ಮಾಡಿಸಿದ ಅಡುಗೆ ಮನೆಯ ಮಾಡು ನೋಡಿ, ‘ಈಗಲೇ ಗಲಗಲ ಅಂತಿದೆ ಮಾರಾಯ. ನಿನ್ನ ರೂಮಿನ ಮಾಡು ಮಾಡಿದ ನರಸಿಂಹಾಚಾರಿಯ ಕೈಗುಣ ಈ ದರಿದ್ರವುಗಳಿಗೆ ಎಲ್ಲಿ ಬರಬೇಕು’ ಎಂದು ದಿನಕ್ಕೆ ಹತ್ತು ಬಾರಿಯಂತೆ ಹೇಳುತ್ತಾರೆ. ‘ಆಗಿನ ಕಾಲದ ಮರ ಈಗೆಲ್ಲಿ ಬರಬೇಕಕ್ಕಾ’ ಎಂದು ರಮೇಶ ಕೇಳಬೇಕೆಂದು ಬಾಯ್ತೆರೆದರೂ ಸುಮ್ಮನಾಗುತ್ತಾನೆ. ಕಣ್ಣೋಟದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತದೆ- ಮಾಡಿನ ಎಡಮೂಲೆಯ ಸಂದು ಒಂದನ್ನು ಬಿಟ್ಟು. ಅಲ್ಲಿಂದಲೇ ರಮೇಶನೆಂಬ ಸಾಮಾನ್ಯ ನರಮನುಷ್ಯನ ಜೀವನ ಹಾಳಾಗಿದ್ದೋ; ಹಳತಾಗಿದ್ದೋ! ನರಸಿಂಹಾಚಾರಿ ಉಳಿಸಿದ ಆ ಸಣ್ಣ ಸಂದಿನೆಡೆಗೆ ರಮೇಶ ಮತ್ತೆ ಕತ್ತೆತ್ತಿ ನೋಡಿದ.

ನಾಕಂಕಿಯೋ- ಐದಂಕಿಯೋ, ಯಾವುದೋ ಸುಡುಗಾಡು ಸಂಬಳದಲ್ಲಿ ದಿನಕ್ಕೆ ಆಫೀಸು ಎಂಬೋ ಸ್ವರ್ಗ ಸದೃಶ ನರಕದಲ್ಲಿ ಎಂಟು ಗಂಟೆ ದುಡಿಯುವಾಗ ರಮೇಶನಿಗೆ ಈ ಕೋಣೆ, ಈ ಗೋಡೆ, ಸಾಯಲಿ ಈ ಮಾಡು ಯಾವುದೂ ನೆನಪಿಗೆ ಬರುವುದಿಲ್ಲ. ಆದರೆ, ಈ ಸಂದನ್ನು ಮಾತ್ರ ಒಂದು ಕ್ಷಣಕ್ಕೂ ಮರೆಯುವುದೇ ಇಲ್ಲ. ಇಪ್ಪತ್ತಾರಕ್ಕೆ ಕೆಲಸ ಸಿಕ್ಕಿ ಕ್ಲಾಸ್‍ಮೇಟ್‍ಗಳೆಲ್ಲಾ ಅಸೂಯೆ ಪಡುವಂತಾಗಿ ಮೂರೇ ವರ್ಷಕ್ಕೆ ಪ್ರಮೋಷನ್‌ ಎನ್ನುವ ಹೊಸ ಕುರ್ಚಿ ಆಳೆತ್ತರದ ಫೈಲುದೇಖವಾನಿ ದೊರೆತು ಹಾಯ್ ಹೊಸ ಜೀವನ ಸಿಕ್ಕಿತೆನಗೆ ಎಂದುಕೊಳ್ಳುವಾಗ ಕಾಲೇಜಿನಲ್ಲಿ ‘ಗಾಂಧಿ’ ಎಂದು ತನ್ನನ್ನು ಚುಡಾಯಿಸುತ್ತಿದ್ದವರಲ್ಲಿ ಹಲವರು ‘ಎಲ್ಲೂ ಕೆಲಸ ಸಿಗ್ತಿಲ್ಲ ಕಣೋ, ಒಂದು ಉಪಕಾರ ಮಾಡೋ’ ಎಂದು ಸಾವಿರ ಅಕ್ಷರಗಳ ಫೈಲುಗಳೆದುರಿಗಿನ- ತನ್ನ ಮೇಜಿನೆದುರಿಗೆ ಹಾಕಿದ ನಾಕು ಕಾಲಿನ ಸ್ಟೂಲಿನ ತುದಿಯಲ್ಲಿ ಅಂಡೂರಿಸಿಯೂ ಊರಿಸದಂತೆ ಕುಳಿತು ಗೋಗೆರೆಯುವಾಗ, ಆಫೀಸಿನಲ್ಲಿ ಇರುವಷ್ಟು ಹೊತ್ತು ತಾನೆಷ್ಟು ಲಕ್ಕಿ ಎನಿಸುತ್ತದೆ.

ಆದರೆ, ಮೂವತ್ತೆಂಟು ದಾಟಿದರೂ ಒಂದು ಹೆಣ್ಣೂ ತನ್ನನ್ನು ಮೂಸದಿದ್ದಾಗ ರಮೇಶನಿಗೆ ಕಳವಳವಾಗುತ್ತದೆ. ಹೆಣ್ಣುಗಳಿಗೆ ಕೊರತೆಯೇನಿಲ್ಲ. ಕೈಗಷ್ಟು ಸಂಬಳ, ಫೈಲಿನಡಿ ಬೀಳುವ ಗಿಂಬಳ ಲೆಕ್ಕ ಹಾಕಿದರೆ ರಮೇಶನ ಕಿಸೆಯಲ್ಲಿ ಗಾಂಧಿ ತಲೆಯ ದೊಡ್ಡ ನೋಟುಗಳು ಬೆಚ್ಚಗೆ ಮಲಗದ ದಿನವೇ ಇಲ್ಲ. ಆದರೆ, ಅವನ ರಾಜವೋ, ಗೌಡವೋ ಜಾತಿಯಿಂದಾಗಿ ಹೆಣ್ಣುಗಳು ಸಿಗುತ್ತಿಲ್ಲ ಅಷ್ಟೆ. ಬಾಯ್ತೆರೆದರೆ ಡಾಕ್ಟರ್, ಸಾಫ್ಟ್‌ವೇರ್‌ ಎಂತಾರೆ ಹಾಳಾದೋರು ಎಂದು ತನ್ನ ಆಯ್ಕೆಯನ್ನು ತಾನೇ ಬೈದುಕೊಳ್ಳುತ್ತ ಮತ್ತೆ ಕತ್ತೆತ್ತಿ ಸಂದಿನತ್ತ ನೋಡಿದ.

ರಾತ್ರಿ ಎಂಟು ಆಗುತ್ತಿದ್ದಂತೆ ಗಣಗಣ ಎನ್ನುವ ಮೊಬೈಲ್ ನೋಡಿದ ಕೂಡಲೇ ಇದು ಅಮ್ಮನ ಫೋನ್ ಎಂಬುದು ರಮೇಶನಿಗೆ ಖಾತ್ರಿಯಾಗಿ ಸೈಲೆಂಟ್ ಮಾಡಿದ. ತಾನು ಹೇಳುವ ಹೆಣ್ಣು ಅವಳಿಗೂ, ಅವಳ ಆಯ್ಕೆಯ ಹೆಣ್ಣು ತನಗೂ ಬಾರದೇ ವಾರಗಟ್ಟಲೆ ಮಾತು ಬಿಡದೆಯೂ ಬಿಟ್ಟಾಗಿತ್ತು. ಅವಳು ಹೇಳುವ ಯಾವುದೋ ನರಸಿಂಹನಾಯಕರ ಪಿಯುಸಿ ದಾಟಿರುವ ಮಗಳ ಫೋಟೊ ನೋಡಿ- ಅವಳ ವಕ್ರ ಕಣ್ಣುಗಳನ್ನು ಮರೆಮಾಚಲು ಮುಖದ ತುಂಬ ಮೆತ್ತಿರುವ ತರೇಹವಾರಿ ಬಣ್ಣಗಳೋ- ವ್ಯಾಕ್ ಎನಿಸಿ, ಆದರೆ ಏನೂ ಹೇಳದೇ ಸುಮ್ಮನಾಗುತ್ತಾನೆ. ಬ್ರೋಕರ್ ಸೀತಾರಾಮ ಬೆಳಿಗ್ಗೆ ತನಗೆ ತೋರಿಸಿದ ಪರವಾಗಿಲ್ಲ ಅನಿಸುವ ಪುಷ್ಪಾಳ ಫೋಟೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಅಮ್ಮನಿಗೆ ಸೆಂಡ್ ಮಾಡಿದಾಗ, ‘ಪರವಾಗಿಲ್ಲ ಕಣೋ, ಯಾವೂರವರಂತೆ’ ಎಂಬ ಪ್ರಶ್ನೆಗೆ, ‘ಒಕ್ಕಲಿಗರು ಅಮ್ಮ’ ಎಂದು ಟೈಪಿಸಿ ಬಾಣದ ಗುರುತು ಒತ್ತಿ ಅಮ್ಮನ ಉತ್ತರಕ್ಕೆ ಕಾದ.

ಆ ಕಡೆಯಿಂದ ಟೈಪಿಂಗ್... ಟೈಪಿಂಗ್... ನಂತರ ಆನ್‍ಲೈನ್... ಮತ್ತೆ ಟೈಪಿಂಗ್... ಕೊನೆಗೆ ಲಾಸ್ಟ್ ಸೀನ್ 8:32 ಪಿಎಂ ಬಂದಾಗ ಅಮ್ಮನ ಉತ್ತರ ಅರ್ಥವಾಗಿ ಥತ್ತೆನಿಸಿದರೂ, ಮನಸ್ಸಲ್ಲೂ ತೋರಿಸದೇ ‘ಗುಡ್‍ನೈಟ್ ಅಮ್ಮಾ, ಲವ್‌ ಯು...’ ಎಂದು ಕಳುಹಿಸಿದ.

ಆಚೆ ಕಡೆಯಿಂದ ಎರಡು ನೀಲಿ ರೈಟ್‍ಮಾರ್ಕ್‌ಗಳು ಕಾಣಿಸಿ ಅಮ್ಮನ ಉತ್ತರಕ್ಕೆ ಕಾದು ಐದಾರು ಸೆಕೆಂಡುಗಳಲ್ಲೇ ಅಮ್ಮನ ಲಾಸ್ಟ್‌ಸೀನ್ ಪರದೆ ಮೇಲೆ ಸತ್ತಾಗ, ಸೀತಾರಾಮ ನೀಡಿದ ಪುಷ್ಪಾಳ ಫೋಟೊ, ಆತನ ಅಕೌಂಟ್‍ಗಳಿಗೆ ಆಲ್‌ಕ್ಲಿಯರ್ ಕೊಟ್ಟು, ಪುಪ್ಪಾಳ ಫೋಟೊವನ್ನು ಡಿಲೀಟ್ ಮಾಡಿ, ಅಂಗಾತ ಮಲಗಿದ್ದುಕೊಂಡೇ ಕುತ್ತಿಗೆಗೆ ಚುಚ್ಚುವ ತಲೆದಿಂಬನ್ನು ಸರಿಮಾಡಿಕೊಂಡು ಬೆಡ್‍ಶೀಟನ್ನು ಎದೆಮಟ್ಟ ಎಳೆದು, ಈ ಜೀವನವೇ ಖಾಲಿಯೆನಿಸಿ ಬಲಭುಜಕ್ಕೆ ತಾಕುವ ಬೆಡ್‍ಸ್ವಿಚ್ಚನ್ನು ಆಫ್ ಮಾಡಲು ಕೈಎತ್ತಿದವ, ಹಾಗೇ ಮಾಡಿನಲ್ಲಿ ನರಸಿಂಹಾಚಾರಿ ಬಿಟ್ಟ ಸಂದನ್ನು ನೋಡಿದ.

ಬಣ್ಣಗೆಟ್ಟ ಬೂದು ಗೋಡೆಯ ಸದ್ದುಗದ್ದಲವಿಲ್ಲದ ಆ ಸಂದಿನೊಳಗಿನಿಂದ ಹೊಸ ಅವಕಾಶಗಳು ಸೃಷ್ಟಿಯಾಗಿ ರಮೇಶನನ್ನು ಕರೆದಂತಾಯಿತು. ನುಸುಳಿಕೊಂಡು ಹೋಗಬಹುದಾದಷ್ಟು ದೊಡ್ಡಗಿನ ಈ ಗುಹೆಯು ನಮ್ಮೂರಿನಿಂದ ನೇರವಾಗಿ ಕಾಶಿ ವಿಶ್ವನಾಥ ದೇವಸ್ಥಾನದ ಎಡಬದಿಗಲ್ಲಿಗೆ ತಲುಪುತ್ತದೆ ಎಂದು ಬಡಬಡಿಸುತ್ತಿದ್ದ. ಕಳೆದ ವಾರ ನೋಡಿದ ಯೂಟ್ಯೂಬ್ ವಿಡಿಯೊ ನೆನಪಾಗಿ, ಇದೆಲ್ಲ ಸಾಧ್ಯವೆ, ಡೋಂಗಿ ಹಲ್ಕಾಗಳು ಅಂದುಕೊಂಡರೂ, ರಮೇಶನಿಗೆ ಆಚಾರಿ ಬಿಟ್ಟ ಈ ಸಂದು ವಿಶ್ವದರ್ಶನವನ್ನು ತೋರಿಸುತ್ತೇನೆ ಎನ್ನುವಂತೆ ಬಾಯ್ತೆರೆದು ಮತ್ತೆ ಮತ್ತೆ ಬಾ... ಬಾ... ಅನ್ನುತ್ತದೆ.

ಈ ಮಾಡಿನ ಸಂದನ್ನು ಗುಹೆ ಮಾಡಬೇಕಾದರೆ ಗೋಡೆಯನ್ನಂತೂ ಒಡೆಯಬೇಕಾಗುತ್ತದೆ. ಅಕ್ಕ ಬಿಟ್ಟಾರೆಯೆ ಎಂದುಕೊಳ್ಳುವಷ್ಟರಲ್ಲಿ ಆಚೆ ಕೋಣೆಯಿಂದ ‘ಈ ರಮೇಶ್‌ಗೆ ಏನು ನಿದ್ದೆ ಬರಲ್ವೇನ್ರೀ?’ ಎಂಬ ಪಿಸುಗೊಣಗಾಟವೂ, ‘ರಮೇಸಾ ಇನ್ನೂ ಮಲ್ಗಿಲ್ವೇನಪ್ಪಾ’ ಎಂಬೋ ಅಕ್ಕನ ರೂಮ್ ಓನರ್ ಅಧಿಕಾರದ ಮಾತೂ ಕೇಳಿ, ‘ಗಂಟೆ ಇನ್ನೂ ಒಂಬತ್ತೂ ಆಗಿಲ್ವಲ್ಲಕ್ಕ’ ಎನ್ನಲು ಬಾಯ್ತೆರೆದು, ಮೊಬೈಲ್ ಒತ್ತಿ ಆಗಲೇ ಹನ್ನೊಂದು ನಲವತ್ತೈದು ಅಂಕಿಗಳು ಕಾಣಿಸಿ, ತೆರೆದ ಬಾಯನ್ನು- ಮೊಬೈಲನ್ನು ಎರಡನ್ನೂ ಮುಚ್ಚಿ ಬೆಡ್‍ಸ್ವಿಚ್ ಆಫ್ ಮಾಡಿ ಮುಸುಕೆಳೆದುಕೊಂಡ.

ರಮೇಶನಿಗೆ ಥಟ್ಟನೆ ನೆನಪಾದಂತೆ ಕತ್ತಲೆಯಲ್ಲೆ ಮತ್ತೆ ಸಂದಿನತ್ತ ನೋಡಿದ. ಇಷ್ಟು ಹೊತ್ತಿಗಾಗಲೇ ಐದಾರು ಬಾರಿಯಾದರೂ ಕಾಣಿಸಬೇಕಾದ ‘ಲಿ’ ಇಂದು ಕಾಣಿಸಲೇ ಇಲ್ಲ. ತನ್ನೀ ಹಾಳು ಮದುವೆಯ ಯೋಚನೆಯಿಂದಾಗಿ ಈ ಮಟ್ಟಕ್ಕೆ ಮೆರಗುಳಿಯಾಗುವಷ್ಟು ಸ್ವಾರ್ಥಿಯಾಗಿಬಿಟ್ಟೆನೆ ಎಂದು ಖೇದವೆನಿಸಿ, ದಡಕ್ಕನೆ ಮಂಚದಿಂದೆದ್ದು ಬೆಡ್‍ಸ್ವಿಚ್ ಹಾಕಿದಾಗ ಕವಿದಿದ್ದ ಕತ್ತಲೆ ಫಳ್ಳನೆ ಹರಿದುಹೋಗಿ ಬೆಳಕು ರಾಚಿತು. ಮಧ್ಯೆಯಿರುವ ಗೋಡೆಯನ್ನು ದಾಟಿ ಪಕ್ಕದ ಕೋಣೆಯಿಂದ ಮತ್ತೊಮ್ಮೆ ಅಕ್ಕನ ಗೊಣಗಾಟ ಮಂದವಾಗಿ ಕೇಳಿದರೂ ತಲೆಗೆ ತೆಗೆದುಕೊಳ್ಳದೆ ಸಂದಿನೊಳಗಿನಿಂದ ಎಂದಿನಂತೆ ಮುಖ ಹೊರಬಿಟ್ಟು ಕುಳಿತಿರುವ ‘ಲಿ’ಗಾಗಿ ದೃಷ್ಟಿಹರಿಸಿದ. ಅಚ್ಚರಿಯೆಂಬಂತೆ ‘ಲಿ’ಯ ಜಾಗದಲ್ಲಿ ಶೂನ್ಯ ತುಂಬಿಕೊಂಡಿತ್ತು.

ಕೆಳಗೆ ನೋಡಿದ. ಕಂಪ್ಯೂಟರ್ ಟೇಬಲ್ ಮೇಲೆ ಮೌಸ್ ಪಕ್ಕದಲ್ಲಿ ‘ಲಿ’ಯ ಇಷ್ಟದ ಆ್ಯಪಲ್‌ಕೇಕ್‌ ಇಲ್ಲದಿರುವುದನ್ನು ಗಮನಿಸಿ, ತಾನಿನ್ನೂ ಇಟ್ಟೇ ಇಲ್ಲ ಎಂಬುದು ನೆನಪಾಗಿ ತನ್ನ ಹಾಳು ನೆನಪಿಗೆ ತಾನೇ ಥೂ... ಎಂದುಕೊಂಡು ಆಫೀಸ್ ಬ್ಯಾಗ್‍ನ ಹೊರಮೈಯ ಜಿಪ್ಪೆಳೆದು, ಅಯ್ಯಂಗಾರ್ ಬೇಕರಿಯಲ್ಲಿ ಕಾಳಜಿಯಿಂದ ಕಟ್ಟಿಸಿಕೊಂಡು ಬಂದಿದ್ದ ಪ್ಯಾಕನ್ನು ಬಹಳ ಆಪ್ತತೆಯಿಂದ ಸವರಿ, ಹಾಕಿದ್ದ ಸ್ಟೆಪ್ಲರ್ ಪಿನ್ನನ್ನು ಹಿಡಿದೆಳೆದು ಜತನದಿಂದ ಕೇಕ್ ಎತ್ತಿಕೊಂಡು ಬೆಳಿಗ್ಗೆ ತೊಳೆದು ಶುದ್ಧ ಮಾಡಿಟ್ಟಿದ್ದ ‘ಲಿ’ನ ಆರೆಂಜ್ ಕಲರ್ ಪ್ಲೇಟನ್ನೆತ್ತಿಕೊಂಡು ಅದರೊಳಗೆ ಅವನ ಹೊಟ್ಟೆಯೊಳಗೆ ಹೋಗಬೇಕಾಗಿರುವ ಕೇಕನ್ನಿಟ್ಟು, ತುಟಿಯನ್ನು ಚುಳ್ಳಿ ಮಾಡಿ ತನ್ನ ಎಂದಿನ ‘ಚುಂಯ್ ಚುಂಯ್’ ಸದ್ದು ಮಾಡಿದ.

ಸದ್ದು ಮಾಡುವುದೇ ತಡ, ಮುದ್ದಾಗಿ ಹೊಳೆವ ಕಪ್ಪು ಮೂತಿ, ಕುಣಿಯುವ ಮೀಸೆಗಳನ್ನು ಆಡಿಸುತ್ತಾ ತುಂಬು ಶೃಂಗಾರದಿಂದಲೋ ಎಂಬಂತೆ ಯಾವ ಭಯವೂ ಇಲ್ಲದೆ ಸಂದಿನಿಂದಿಳಿದು, ವಾಲ್‍ಫೀಟ್‍ನ ಗುಂಟ ಬಂದು, ಅಲ್ಲಿಂದ ನಾಲ್ಕಡಿ ದೂರದಲ್ಲಿ ಸಾಲಾಗಿ ಹಾಕಿರುವ ಹನ್ನೊಂದು ಬಟ್ಟೆಯ ಹ್ಯಾಂಗರ್‌ಗಳಲ್ಲಿ ಮೂರನೇ ಹ್ಯಾಂಗರ್‌ಗೆ ಕಾಲು ಇಳಿಬಿಟ್ಟು, ತಾನು ಅವನಿಗೋಸ್ಕರವೇ ನೇತುಬಿಟ್ಟ ಬೆಲ್ಟ್‌ನಲ್ಲಿ ತಲೆಕೆಳಗಾಗಿ ಬಾಲವೆತ್ತಿಕೊಂಡು ಇಳಿದು, ಅಲ್ಲೇ ಗೋಡೆಗೆ ತಾಗಿಕೊಂಡಿರುವ ಟೇಬಲ್‍ನ ಎಡಬದಿಯಲ್ಲಿ ಘಮಘಮಿಸುವ ಕೇಕ್‍ನತ್ತ ಪುಟ್ಟಪುಟ್ಟ ಹೆಜ್ಜೆಯಿಡುತ್ತಾ, ಅಲ್ಲಿಂದ ಕೇವಲ ಆರೂವರೆಯಡಿ ದೂರದಲ್ಲಿ ಮಂಚದ ಮೇಲೆ ಗೋಡೆಗೊರಗಿ ಕಾಲುಚಾಚಿ ತೊಡೆಮೇಲೆ ಲ್ಯಾಪ್‍ಟಾಪಿಟ್ಟುಕೊಂಡು ಟೈಪಿಸುವ ತನ್ನನ್ನು ಕಕ್ಕುಲಾತಿಯಿಂದ ಕಂಡು, ಯಾವ ಆತುರವೂ ಇಲ್ಲದೆ- ಆದರೆ ಕ್ಷಣಕ್ಕೊಮ್ಮೆ ಬಾಗಿಲೆಡೆಗೆ ನೋಡುತ್ತಾ ಕೇಕಿನ ಚಿಕ್ಕಚಿಕ್ಕ ಚೂರುಗಳನ್ನು ತುಂಡರಿಸಿ, ಎದುರಿಗೆ ಕಾಣುವ ಎರಡು ಹಲ್ಲುಗಳನ್ನು ಮಿಕ್ಕಿಮೌಸ್ ಕಾರ್ಟೂನಿನಂತೆ ತೋರಿಸುತ್ತಾ ತಿನ್ನುವುದು ಅವನ ಪ್ರತಿನಿತ್ಯದ ಅಭ್ಯಾಸ.

ಕಳೆದ ಏಳೂವರೆ ತಿಂಗಳಿಂದ ಒಂದು ದಿನವೂ ತಪ್ಪದೆ ನಡೆಯುತ್ತಿರುವ ದಿನಚರಿಯಿದು. ‘ಲಿ’ಯ ಕಾರಣಕ್ಕಾಗಿಯೇ ತಾನು ಒಂದು ರಾತ್ರಿಯೂ ರೂಮನ್ನು ಬಿಟ್ಟು ಉಳಿಯುವುದಿಲ್ಲ. ಯಾವ ಗೆಳೆಯರನ್ನೂ ರಾತ್ರಿ ರೂಮಿನಲ್ಲಿ ಉಳಿಸಿಕೊಳ್ಳುವುದಿಲ್ಲ. ಮನೆಗೆ ಹೋದರೂ ಅಮ್ಮನಿಗೆ ಏನಾದರೊಂದು ಸಬೂಬು ನೀಡಿ ಸಂಜೆಯೊಳಗೇ ಧಾವಿಸಿ ಬರುತ್ತಿದ್ದ.

‘ಅದ್ಯಾಕೆ ಸರ್, ದಿನಾಲೂ ಆ್ಯಪಲ್ ಕೇಕ್ ಮಾತ್ರವೇ ಪಾರ್ಸೆಲ್ ಮಾಡ್ಕೊಂಡೋಗ್ತೀರಿ? ಬೇರೆ ಕೇಕ್‍ಗಳ ಟೇಸ್ಟ್ ಕೂಡ ಮಾಡಿ ಸರ್...’ ಎಂಬ ಬೇಕರಿಯವನ ಮಾತಿಗೆ, ‘ಬೇಡ ಆ್ಯಪಲ್ ಕೇಕ್ ಮಾತ್ರ ನನಗಿಷ್ಟ’ ಎನ್ನುತ್ತಾನೆ.

‘ಎಷ್ಟೊಂದು ತರೇಹವಾರಿ ಕೇಕ್‍ಗಳು ಇವೆ ಸರ್, ಒಂದು ದಿನ ಡಿಫರೆಂಟಾಗಿರಲಿ’ ಎನ್ನುವ ಮಾತನ್ನು ಅರ್ಧಲ್ಲೇ ನಿಲ್ಲಿಸಿ, ‘ತಿನ್ನೋ ನಾಲಗೆ ನನ್ನದೋ ನಿಮ್ಮದೋ?’ ಎಂದು ಹತ್ತು ರೂಪಾಯಿ ನೋಟನ್ನು ಚಾಕೊಲೇಟ್ ಭರಣಿಯ ಮೇಲೆ ಕುಕ್ಕಿ ಅಧಿಕಪ್ರಸಂಗಿ ಎಂದು ಮನಸ್ಸಿನೊಳಗೆ ಬೈದುಕೊಂಡು ಹೊರಡುತ್ತಾನೆ. ಈ ಕೇಕ್‌ ತನಗಲ್ಲ, ‘ಲಿ’ಗೆ ಎಂದರೆ ಬೇಕರಿಯವನ ಮೂತಿ ಹೇಗಿರಬಹುದು ಎಂದು ಕಲ್ಪಿಸಿಕೊಂಡು ತನ್ನಷ್ಟಕ್ಕೆ ತಾನೇ ನಗುತ್ತಾ ಗಾಡಿ ಹತ್ತುತ್ತಾನೆ. ಸಂಜೆ ರೂಮು ಸೇರಿದರೆ ಮತ್ತೆ ಬೆಳಿಗ್ಗೆವರೆಗೆ ಕೋಣೆಯಿಂದ ಹೊರಗೆ ತಲೆಹಾಕದ ತಾನು ಹೀಗೆ ‘ಲಿ’ಯೊಂದಿಗಿರುವುದು ತಿಳಿದರೆ ಜನ ಏನೆಂದುಕೊಳ್ಳುತ್ತಾರೆ ಎಂದು ರಮೇಶನಿಗೆ ಅನಿಸಿದರೂ, ಜನಗಳಿಗೇನು ಏನಿದ್ದರೂ ಏನಿಲ್ಲದಿದ್ದರೂ ಏನಾದರೊಂದು ಹೇಳುತ್ತಲೇ ಇರುತ್ತಾರೆ ಎಂದುಕೊಂಡು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾನೆ.

ಅರ್ಧಗಂಟೆ ಕಾದು ಲೆಕ್ಕವಿಲ್ಲದಷ್ಟು ಚುಂಯ್ ಚುಂಯ್ ಮಾಡಿದರೂ, ಸಂದಿನೊಳಗಿನಿಂದಿಳಿಯಬೇಕಿದ್ದ ‘ಲಿ’ ಇಳಿದುಬಂದು ಕೇಕ್ ತಿನ್ನಲೇ ಇಲ್ಲ. ಸಂದಿನ ಬಳಿ ಹೋಗಿ ನೋಡೋಣವೆಂದರೆ ಇಂದಿನವರೆಗೆ ತಾನು ಆ ರೀತಿ ಮಾಡಿಲ್ಲ, ಬೇಡ ಎನಿಸಿತು. ಇಂದು ಕೇಕ್ ತಿನ್ನಲು ಅವನಿಗಿಷ್ಟವಿಲ್ಲದಿರಬಹುದು. ಅಷ್ಟು ಸ್ವಾತಂತ್ರ್ಯವೂ ಅವನಿಗಿಲ್ಲವೆ ಎಂದುಕೊಳ್ಳುವಾಗ ಮೊಬೈಲ್ ಪರದೆ ಮೇಲೆ ಬ್ರೋಕರ್ ಸೀತಾರಾಮನ ಕಾಲ್‍ ಹೊತ್ತು ಗಣಗಣ ಎಂದಿತು. ಥತ್ ಎನಿಸಿ, ಕಟ್ ಮಾಡಿದ. ಬೆನ್ನಿಗೇ ಮತ್ತೊಮ್ಮೆ ಗಣಗಣ ಎಂದಿತು.

‘ಯೋ ಕಟ್‍ ಮಾಡಿದ್ದು ಗೊತ್ತಾಗಲ್ವೇನಯ್ಯಾ. ಇಡು ಫೋನು’

‘ಅಲ್ಲಾ ಸಾ... ಅದೂ ಪುಸ್‍ಪಾ... ನಾನು... ಸೀತ್ರಾಮ...’ ಕುಡಿದಿದ್ದ ಅಂತ ಕಾಣುತ್ತೆ.

‘ನೋಡಯ್ಯ, ಇನ್ಮೇಲೆ ನಿನ್ನ ಬ್ರೋಕರ್‌ಶಿಪ್‌ ಅಗತ್ಯವಿಲ್ಲ. ಮತ್ತೆ ಇಷ್ಟೊತ್ತಿಗೆಲ್ಲ ಫೋನ್ ಮಾಡಿದ್ರೆ ನೋಡು’ ಎಂದು ಆ ಕಡೆಯ ಉತ್ತರಕ್ಕೂ ಕಾಯದೆ ಮೊಬೈಲ್ ಮೂಲೆಗೆಸೆದ.

ಅದೆಷ್ಟು ಹೊತ್ತಿಗೆ ನಿದ್ದೆ ಹತ್ತಿತೋ, ರಾತ್ರಿಯಿಡೀ ಕನಸು. ತಾನು ಪುಷ್ಪಾ ಮದುವೆಯಾದಂತೆ, ತಮಗೆ ‘ಲಿ’ ಮಗನಾಗಿ ಹುಟ್ಟಿದಂತೆ. ಪುಷ್ಪಾ ತಾನು ಹೆತ್ತ ಮಗುವನ್ನೇ ವ್ಯಾಕ್ ಎಂದುಕೊಂಡು ಅವಳ ಮುದ್ದಿನ ಬೆಕ್ಕಿನ ಬಾಯಿಗೆ ಎಸೆದಂತೆ, ಇನ್ನೇನು ಬೆಕ್ಕು ತನ್ನ ಹಲ್ಲುಗಳಿಂದ ‘ಲಿ’ಯನ್ನು ಸಿಗಿಯಬೇಕು ಅಷ್ಟರಲ್ಲಿ ತಾನು ಬೆಕ್ಕಿನ ಮುಂದೆ ಕೈಯ್ಯೊಡ್ಡಿ ನಿನ್ನ ಎರಡುಪಾಲು ಮಾಂಸವನ್ನು ನನ್ನ ತೊಡೆಯಿಂದ ಕೊಡುತ್ತೇನೆ. ದಯವಿಟ್ಟು ಬಿಡೋ ಎಂದು ಗೋಗೆರದಂತೆ, ತೆರೆದಿದ್ದ ಬೆಕ್ಕಿನ ಬಾಯಿ ಕಚಕ್ಕನೆ ಅಗಿದಂತೆ... ದಢಾರನೆ ಎದ್ದವನ ಎದೆ ಹೊರಗೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಕತ್ತಲೆಯಲ್ಲೇ ಬಳಚಿ ಮೊಬೈಲ್ ತೆಗೆದುಕೊಂಡು ಬ್ರೋಕರ್ ಸೀತಾರಾಮ ಕಾಂಟಾಕ್ಟ್‌ ಅನ್ನು ಡಿಲೀಟ್ ಮಾಡಿದ. ಸ್ವಲ್ಪ ಸಮಾಧಾನವೆನಿಸಿತು. ‘ಲಿ’ ಬಂದಿರಬಹುದೇ, ಲೈಟ್ ಹಾಕಿದ, ಕೇಕ್ ತಪಸ್ಸು ಮಾಡುತ್ತಿತ್ತು.

ಬೆಳಿಗ್ಗೆ ಎದ್ದಾಗ ಎಣ್ಣೆ ಹಾಕಿದಂತೆ ತಲೆಹಿಡಿದಿತ್ತು. ಬೆಳಿಗ್ಗೆ ಎಂಟೂಕಾಲಿಗೆ ಹೊರಡಬೇಕಾದವನು ‘ಲಿ’ ಹಗಲಲ್ಲಿಳಿದು ಬಂದಾನೆಂದು- ಅವನು ಯಾವತ್ತೂ ಹಾಗೆ ಬಂದಿಲ್ಲವೆಂದು ತಿಳಿದೂ ಒಂಬತ್ತೂವರೆವರೆಗೆ ಕಾದದ್ದು ವ್ಯರ್ಥವಾಯಿತು. ಆಫೀಸಿನಲ್ಲಿ ಯಾರೊಂದಿಗೂ ಮನಸ್ಸಿಟ್ಟು ಮಾತಾಡಲಾಗಲಿಲ್ಲ. ಸದಾ ಇದ್ದಬದ್ದವರ ಗುಸುಗುಸು ತರುವ ಜ್ಯೋತ್ಸ್ನಾಳ ಮಾತನ್ನಂತೂ ಇಂದು ಅವಳಿಗೆ ಬೇಸರ ಆಗಲಿಯೆಂದೇ ಅರ್ಧದಲ್ಲೇ ನಿಲ್ಲಿಸಿ ಎದ್ದುಬಂದ. ‘ಲಿ’ಗೆ ಏನಾಯ್ತೇನೋ ಗಾಬರಿಬಿದ್ದು ಇಡೀ ದಿನ ಆಫೀಸಿನಲ್ಲಿ ಎಲ್ಲರ ಮೇಲೂ ಸಿಡಿಮಿಡಿಗೊಂಡದ್ದೂ, ಒಂದಷ್ಟು ಬೈಸಿಕೊಂಡದ್ದೂ, ಆರೋಗ್ಯ ಸರಿಯಿಲ್ಲವೆಂದು ನಾಲ್ಕಕ್ಕೇ ಹೊರಟದ್ದೂ ಆಯ್ತು.

ಬೇಕರಿಯವನು ಮಾತಾಡದೇ ಆ್ಯಪಲ್ ಕೇಕ್ ಕಟ್ಟಿಕೊಟ್ಟ. ಯಾರೊಂದಿಗೂ ಹೇಳಿಕೊಳ್ಳಲಾಗದ ಸಂಕಟ ರಮೇಶನೊಳಗೆ ಹುಟ್ಟಿ, ಯಾವುದೋ ಗ್ಯಾನದಲ್ಲಿ ರೂಮಿನ ಹತ್ತಿರ ಬರುವುದಕ್ಕೂ, ಅಕ್ಕ ಬಲಗೈಲಿ ರಕ್ತ ಮೆತ್ತಿದ ಒಂದು ದೊಣ್ಣೆ, ಎಡಗೈಲಿ ಬಾಲದ ತುದಿಯನ್ನು ಕಾಗದದಿಂದ ಸುತ್ತಿಸಿಕೊಂಡು ನೇಣುಬಿದ್ದು ಮೂಗು, ಕಿವಿಗಳಲ್ಲಿ ರಕ್ತಸೋರುತ್ತಾ ನೇತಾಡುತ್ತಿದ್ದ ಇಲಿಯೊಂದನ್ನು ನೇತಾಡಿಸಿಕೊಂಡು ಬರುವುದಕ್ಕೂ ಸರಿಯಾಯಿತು. ರಮೇಶ ಆಚೆಕೋಣೆಯ ಬಾಡಿಗೆ ಹುಡುಗರು ತಿಂದೆಸೆದ ಬಾಳೆಹಣ್ಣು ಸಿಪ್ಪೆಮೇಲೆ ಕಾಲಿಟ್ಟು ಜಾರಿದ.

‘ಏ ಜಾಗ್ರತೆ ಕಣೋ ರಮೇಸಾ, ನೋಡಿಲ್ಲಿ, ಗುಳ್ಳೆನರಿ ವಂಸದ್ದು, ತಿಂಗಳಿಂದ ಆಟಾಡುಸ್ತಿತ್ತು. ಔಸ್ತಿಯಿಟ್ರೆ ಒಂದ್ಕಿತಾನೂ ಮುಟ್ತಾನೇ ಇರ್ನಿಲ್ಲ. ಈಗ ಸರ್‍ಹೊತ್ನಾಗೆ ಬಾಗಲ್ಮೂಲೇಲಿ ಅಟಕಾಯ್ಸ್ಕೊಂತು... ಇಟ್ಟೆ ನೋಡು ತಲಿಗೆ...’

ರಕ್ತದ ಹನಿಗಳು ತೊಟ್ಟಿಕ್ಕುತ್ತಲೇ ಇದ್ದವು. ಇನ್ನೂ ಪೂರ್ತಿ ಪ್ರಾಣ ಹೋಗಿರಲಿಲ್ಲ, ರಕ್ತವಿಳಿಯುತ್ತಿದ್ದ ಮೂಗಿನ ಹೊಳ್ಳೆಗಳಲ್ಲಿ ಗುಳ್ಳೆಗಳು ಹೊರಬಂದು ಮತ್ತೆ ಒಳಹೋಗುತ್ತಿದ್ದವು. ರಮೇಶನಿಗೆ ಬವಳಿಬಂದಂತಾಯ್ತು. ಕಳ್ಳಗಣ್ಣಿನಲ್ಲಿ ಗಮನವಿಟ್ಟು ಮತ್ತೊಮ್ಮೆ ಅಕ್ಕನ ಎಡಗೈ ನೋಡಿದ. ಸದ್ಯ ‘ಲಿ’ ಅಲ್ಲ!  ಚಪ್ಪಲಿಗೆ ಹತ್ತಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ನೆಲಕ್ಕೊರೆಸಿ ಆತುರಾತರವಾಗಿ ಒಳಬಂದು ‘ಲಿ’ಯ ಮುಖ ಕಾಣಿಸೀತೆಂದು ಸಂದಿನತ್ತ ನೋಡಿದ. ಭಣಗುಡುತಿತ್ತು.

‘ನಿರುತ್ತರ...’

ಅಮ್ಮನ ಒತ್ತಾಯದಲ್ಲಿ ಬಾಡಿಗೆ ರೂಮನ್ನು ಬಿಟ್ಟು, ಮನೆಯಿಂದಲೇ ಆಫೀಸಿಗೆ ಓಡಾಡಲು ಆರಂಭಿಸಿ ಎರಡೂವರೆ ತಿಂಗಳಾದರೂ ರಮೇಶ ಇಂದಿಗೂ ಅಕ್ಕನಿಗೆ ಬಾಡಿಗೆ ಕಟ್ಟುತ್ತಾನೆ. ವಾರಕ್ಕೊಮ್ಮೆ ಹೋಗಿ ರೂಮು ಚೊಕ್ಕಮಾಡುತ್ತಾನೆ. ಒಂದು ವ್ಯತ್ಯಾಸ. ಆ್ಯಪಲ್‍ ಕೇಕ್ ಬದಲಾಗಿ ಬೇಕರಿಯವನು ದಿನಕ್ಕೊಂದು ಹೇಳುವ ಹೊಸ ಹೊಸ ಕೇಕ್‍ಗಳನ್ನು ಒಮ್ಮೆಗೆ ಖರೀದಿಸುತ್ತಾನೆ ಮತ್ತು ಕಳೆದ ವಾರವಿಟ್ಟಿದ್ದ ವಾಸನೆ ಹೊಡೆಯುತ್ತಿರುವ ಕೇಕ್‌ಗಳನ್ನು ಬೇಸರದಿಂದ ತೆಗೆದು, ಹೊಸ ಕೇಕ್‌ಗಳನ್ನು ಸಾಲಾಗಿ ಜೋಡಿಸಿಡುತ್ತಾನೆ.

ಆದರೆ, ಸತ್ತ ಇಲಿ ಕಂಡನೆಂದರೆ ಅದು ಆಫೀಸು, ರಸ್ತೆ, ಟ್ರಾಫಿಕ್‌ ಎಂಬ ಭೇದವಿಲ್ಲದೆ ನೆಗೆದು ಓಡಿಹೋಗಿ ನೋಡುತ್ತಾನೆ. ಅಂಗಡಿಯಲ್ಲಿ ಯಾರಾದರೂ ಇಲಿ ಪಾಷಾಣ ತೆಗೆದುಕೊಳ್ಳುತ್ತಿದ್ದರೆ ಅವರನ್ನು ಅಂಗಲಾಚುತ್ತಾನೆ. ಆಫೀಸಿನ ಟೇಬಲ್ ಕೆಳಗೆ ತಾನೇ ಕೊರೆದು ಮಾಡಿದ ಸಂದನ್ನು ಯಾರೂ ಕಾಣಬಾರದೆಂದು ಆನ್‍ಲೈನ್‍ನಿಂದ ತರಿಸಿದ ಮ್ಯಾಟ್ ಹೊದೆಸಿಟ್ಟಿದ್ದಾನೆ.

ಈಗೀಗ ಅಕ್ಕ ರಮೇಶನನ್ನು ಒಂದುತರಹ ನೋಡುತ್ತಾರೆ. ಅದು ಅವನಿಗೂ ಗೊತ್ತಿದೆ. ಆಫೀಸಿನಲ್ಲಿ ಯಾರೂ ಮೊದಲಿನಂತೆ ರಮೇಶನೊಂದಿಗೆ ಆಪ್ತವಾಗಿ ಬೆರೆಯುವುದಿಲ್ಲ. ರಮೇಶನಿಗೆ ಅದು ಬೇಕಾಗಿರುವಂತೆಯೂ ಕಾಣಿಸುವುದಿಲ್ಲ. ಆಫೀಸು ಹಾಗೂ ಮನೆಯಲ್ಲಿ ಏನೂ ಮಾಡಲು ಕೆಲಸವಿಲ್ಲದಾಗ ಮೂರು ತಿಂಗಳಿಂದ ಬದಲಿಸದೇ ಮೊಬೈಲ್ ವಾಲ್‍ಪೇಪರ್‌ನಲ್ಲಿರುವ ‘ಲಿ’ಯ ಫೋಟೊವನ್ನು ಗಂಟೆಗೊಂದಾವರ್ತಿ ನೋಡುತ್ತಿರುತ್ತಾನೆ.

ಬೆಳಿಗ್ಗೆ ಎದ್ದು ಮಾಡು ನೋಡುತ್ತಿದ್ದವನಿಗೆ ಅಮ್ಮ ಅಡುಗೆ ಮನೆಯಿಂದಲೇ ಕೂಗಿ ಹೇಳಿದರು. ‘ರಮೇಶಾ, ನಾಳೆ ಆಫೀಸಿಗೆ ರಜೆ ಹಾಕಿ ಬಾ. ಗಣೇಶ್ ಭವನ ಕಡೆಯಿಂದ ಒಂದು ಸಂಬಂಧ ಬಂದಿದೆ. ಹುಡುಗಿ ಚೆನ್ನಾಗಿದ್ದಾಳಂತೆ. ನಾಳೆ ಹುಡುಗಿ ನೋಡ್ಕಂಡು ಮಾತುಕತೆ ಮುಗಿಸ್ಕೊಂಡು ಬರೋಣ. ನೀನು ಮತ್ತೆ ಕಂಯ್ಯಪಿಂಯ್ಯ ಅಂತ ಅದೇ ಹಳೇರಾಗ ತೆಗೀಬೇಡ’.

ಇಲಿ ಕಚ್ಚಿದ ಟೊಮೆಟೊವನ್ನು ಹಿಡಿದುಕೊಂಡು ಹೊರಬಂದು ರಮೇಶನ ಮುಖಕ್ಕೆ ಹಿಡಿದ ಅಮ್ಮ, ‘ಹಾಳಾದ ದರಿದ್ರ ಇಲಿಗಳು! ಇವತ್ತು ಆಫೀಸಿಂದ ಬರುವಾಗ ಮರೀದೇ ಇಲಿ ಕೇಕ್ ಇಲ್ದಿದ್ರೆ ಟೊಮೆಟೊಗೆ ಹಾಕಿಡೋ ಪೇಸ್ಟ್ ತಗೊಂಡ್‍ ಬಾ. ಸಾವಿರ ಬಿಲ ಕೊರೆದಿದ್ದಾವೆ ಶನಿಮುಂಡೇವು, ನಂಗಂತೂ ಸಾಕಾಗಿ ಹೋಗಿದೆ. ನೋಡಲ್ಲಿ...’ ಎಂದು ಮಾಡಿನೆಡೆಗೆ ಕೈತೋರಿದರು. ಅಮ್ಮ ಕೈತೋರಿಸಿದ ಕಡೆಗೆ ರಮೇಶ ಮತ್ತೆ ಮೇಲೆ ನೋಡಿದ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !