ಗಡಿಗೆ ಅಲ್ಯೋಷ

ಬುಧವಾರ, ಏಪ್ರಿಲ್ 24, 2019
27 °C
ಲಿಯೋ ಟಾಲ್ಸ್‌ಟಾಯ್ ಅವರ ಸಣ್ಣ ಕತೆ

ಗಡಿಗೆ ಅಲ್ಯೋಷ

Published:
Updated:
Prajavani

ಅಲ್ಯೋಷ ಮನೆಯ ಕಿರಿಯ ಮಗ. ಅವನನ್ನು ಎಲ್ಲರೂ ‘ಗಡಿಗೆ’ ಅನ್ನುವ ಅಡ್ಡಹೆಸರಿನಿಂದ ಕರೆಯುತ್ತಿದ್ದರು. ಅದಕ್ಕೆ ಕಾರಣ ಅಂದರೆ, ಒಂದು ಸಲ ಅವನ ತಾಯಿ ಒಂದು ಗಡಿಗೆ ಹಾಲನ್ನು ಧರ್ಮಾಧಿಕಾರಿಯ ಹೆಂಡತಿಗೆ ಕೊಡು ಅಂತ ಕಳಿಸಿಕೊಟ್ಟಿದ್ದಳು. ಆದರೆ ಇವನು ದಾರಿಯಲ್ಲಿ ಎಡವಿ ಬಿದ್ದು ಗಡಿಗೆ ಒಡೆದಿತ್ತು, ಹಾಲು ನೆಲದ ಪಾಲಾಗಿತ್ತು. ಅವರ ಅಮ್ಮ ಅವನಿಗೆ ಚೆನ್ನಾಗಿ ಒದೆ ಕೊಟ್ಟಿದ್ದಳು; ಆಗಿನಿಂದ ಹಳ್ಳಿಯ ಹುಡುಗರೆಲ್ಲ ಅವನನ್ನು ‘ಗಡಿಗೆ’ ಅಂತ ಅಡ್ಡಹೆಸರಿನಿಂದ ಚುಡಾಯಿಸುತ್ತಿದ್ದರು. ‘ಗಡಿಗೆ ಅಲ್ಯೋಷ’ ಅನ್ನೋ ಹೆಸರು ಅವನಿಗೆ ಅಂಟಿಕೊಂಡಿದ್ದು ಹೀಗೆ.

ಅಲ್ಯೋಷನದು ಪುಟ್ಟ ಹುಟ್ಟು, ಜೊತೆಗೆ ಸಣ್ಣಗೆ ಬೇರೆ ಇದ್ದ. ಅವನ ಕಿವಿಯ ಹಾಲೆಗಳು ನೀಳವಾಗಿದ್ದು ಓಡಾಡುವಾಗ ಆ ಕಡೆ ಈ ಕಡೆ ರೆಕ್ಕೆಗಳ ಥರ ಹಾರಾಡುತ್ತಿದ್ದವು; ಜೊತೆಗೆ, ಅವನದು ದೊಡ್ಡ ಮೂಗು ಬೇರೆ. ಊರ ಹುಡುಗರೆಲ್ಲ ಇದರಿಂದಾಗಿ ಅವನನ್ನು ನೋಡಿ, ‘ಅಲ್ಯೋಷ ಮೂಗು ಸೋರೆಕಾಯಿ!’ ಅಂತ ಗೇಲಿ ಮಾಡುತ್ತಿದ್ದರು.

ಅಲ್ಯೋಷನ ಊರಲ್ಲಿ ಒಂದು ಶಾಲೆ ಇತ್ತು; ಆದರೆ ಓದೋದು ಬರೆಯೋದು ಅವನ ಹತ್ತಿರ ಸುಳಿದಾಡಲಿಲ್ಲ; ಜೊತೆಗೆ ಅವನಿಗೆ ಶಾಲೆಗೆ ಹೋಗಕ್ಕೆ ಸಮಯ ಎಲ್ಲಿತ್ತು? ಅವರ ಅಣ್ಣ ಹತ್ತಿರದ ಪಟ್ಟಣದಲ್ಲಿ ಒಬ್ಬ ವ್ಯಾಪಾರಿಯ ಮನೇಲಿದ್ದುಕೊಂಡು ಕೆಲಸಕ್ಕಿದ್ದರೆ, ಇಲ್ಲಿ ಅಲ್ಯೋಷ ಚಿಕ್ಕಂದಿನಿಂದಲೇ ತಂದೆಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಅವನಿಗೆ ಆರು ವರ್ಷವಾಗಿದ್ದಾಗಿನಿಂದಲೇ ತಂಗಿ ಜೊತೆ ಸೇರಿ ಮನೆಯ ಹಸು ಮತ್ತು ಕುರಿಗಳನ್ನು ಮೇಯಿಸುವ ಕೆಲಸ ನೋಡಿಕೊಳ್ಳುತ್ತಿದ್ದ. ಮುಂದೆ, ಇನ್ನೂ ದೊಡ್ಡವನಾಗೋದಕ್ಕೆ ಮುಂಚಿನಿಂದಲೇ ಹಗಲು ರಾತ್ರಿ ಮನೆಯ ಕುದುರೆಗಳ ಪರಿಚಾರಿಕೆ ಮಾಡಬೇಕಾಗಿತ್ತು. ಹನ್ನೆರಡು ವರ್ಷವಾಗಿದ್ದಾಗಿನಿಂದ ಅವನು ಗಾಡಿ ಹೋಡೆಯೋದು, ಹೊಲ ಉಳೋದು – ಇವುಗಳನ್ನೂ ಮಾಡತೊಡಗಿದ್ದ. ಈ ಕೆಲಸಗಳನ್ನು ಮಾಡೋದಕ್ಕೆ ಅವನಿಗೆ ಸಾಕಷ್ಟು ಶಕ್ತಿ ಇರಲಿಲ್ಲ, ಆದರೂ ಅವನು ಸದಾ ಹಸನ್ಮುಖಿಯಾಗಿರುತ್ತಿದ್ದ. ಪ್ರಸನ್ನತೆ ಅವನ ಹುಟ್ಟುಗುಣ. ಗೆಳೆಯರು ತನ್ನ ನೋಡಿ ಗೇಲಿ ಮಾಡಿ ನಕ್ಕರೆ ಸುಮ್ಮನಿರುತ್ತಿದ್ದ, ಇಲ್ಲ ತಾನೂ ಅವರ ಜೊತೆ ನಗುತ್ತಿದ್ದ. ಅವರಪ್ಪ ಸಿಟ್ಟಿನಿಂದ ಬಯ್ಯುತ್ತ ಇದ್ದರೆ ಕೇಳಿಸಿಕೊಂಡು ಸುಮ್ಮನೆ ನಿಂತಿರುತ್ತಿದ್ದ. ಆಡುವುದು ಮಾಡಿ ಸುಮ್ಮನಾದ ಮೇಲೆ ಅವನು ನಸುನಗುತ್ತ ತಾನೇನು ಕೆಲಸ ಮಾಡುತ್ತಿದ್ದನೋ ಅದರ ಕಡೆ ಗಮನ ಕೊಡುತ್ತಿದ್ದ.
ಅಲ್ಯೋಷನಿಗೆ ಹತ್ತೊಂಬತ್ತು ವರ್ಷವಾಗಿದ್ದಾಗ, ಅವರ ಅಣ್ಣ ಸೈನ್ಯ ಸೇರಿದ. ಆಗ ಅವರಪ್ಪ ಅವನಿದ್ದ ಜಾಗದಲ್ಲಿ ಅಲ್ಯೋಷನನ್ನು ಪಟ್ಟಣದ ವ್ಯಾಪಾರಿಯ ಹತ್ತಿರ ಜೀತಕ್ಕೆ ಸೇರಿಸಿದ. ಅಣ್ಣನ ಹಳೆಯ ಬೂಟುಗಳನ್ನು ಹಾಕಿಕೊಂಡು ಅಪ್ಪನ ಟೋಪಿ–ಕೋಟುಗಳನ್ನು ಧರಿಸಿ ಅಪ್ಪನ ಜೊತೆ ಪಟ್ಟಣಕ್ಕೆ ಹೋದ. ತನ್ನ ಹೊಸ ದಿರಿಸು ಅಲ್ಯೋಷನಿಗೆ ಖುಷಿ ತಂದುವು, ಆದರೆ ವ್ಯಾಪಾರಿ ಅವನ ಪೀಚು ದೇಹ ನೋಡಿ ತಲೆ ಅಲ್ಲಾಡಿಸಿ, ‘ಸೈಮೊನ್ ಥರದ ಒಬ್ಬ ಯುವಕನನ್ನು ಕರಕೊಂಡು ಬರ‍್ತೀಯ ಅಂತಿದ್ದೆ, ನೀನು ನೋಡಿದ್ರೆ ಈ ಅಳುಬುರುಕನನ್ನು ಕರ್ಕೊಂಡು ಬಂದಿದ್ದೀಯ; ಇವನು ಯಾವ ಕೆಲಸಕ್ಕೆ ಬಂದಾನು’ ಅಂತ ಗೊಣಗಿದ್ದ.

‘ಇಲ್ಲ ಧಣಿ, ಇವನು ಯಾವ ಕೆಲಸ ಬೇಕಾದ್ರೂ ಮಾಡ್ತಾನೆ... ಕುದುರೆ ಸಿದ್ಧ ಮಾಡಿ ಎಲ್ಲಿಗೆ ಬೇಕಾದರೂ ಕರಕೊಂಡು ಹೋಗ್ತಾನೆ. ಇವನೊಬ್ಬ ಕೆಲಸಬುರುಕ, ನೋಡಕ್ಕೆ ಕಡ್ಡಿ, ಅಷ್ಟೆ. ಆದರೆ ನಾರಿನ ಹುರಿ ಥರ ಗಟ್ಟಿ.’

‘ನೋಡಾಣ, ಹೇಗಿರ್ತಾನೋ.’

‘ಎಲ್ಲಕ್ಕಿಂತ ಹೆಚ್ಚಾಗಿ ಇವನು ತುಂಬ ವಿನಯವಂತ, ಕೆಲಸ ಮಾಡೋದು ಅಂದ್ರೆ ಅವನಿಗಿಷ್ಟ.’

‘ಇನ್ನೇನು ಮಾಡೋದು; ಬಿಟ್ಟು ಹೋಗು ಅವನ್ನ.’

ಹೀಗೆ ಅಲ್ಯೋಷ ವ್ಯಾಪಾರಿ ಮನೆಯಲ್ಲಿ ಜೀತಕ್ಕೆ ಸೇರಿಕೊಂಡ.

ವ್ಯಾಪಾರಿ ಕುಟುಂಬವೇನೂ ದೊಡ್ಡದಾಗಿರಲಿಲ್ಲ: ಮನೆಯಲ್ಲಿದ್ದುದು ವ್ಯಾಪಾರಿ, ಅವನ ಹೆಂಡತಿ, ಅವನ ಮುದುಕಿ ತಾಯಿ, ಮತ್ತು ಮೂವರು ಮಕ್ಕಳು. ಬರಿ ಗ್ರಾಮರ್ ಸ್ಕೂಲನ್ನಷ್ಟೇ ಪೂರೈಸಿದ್ದ ಅವನ ಹಿರಿಯ ಮಗ ಮದುವೆಯಾಗಿ ತಂದೆಯ ಜೊತೆಯೇ ವ್ಯಾಪಾರದಲ್ಲಿ ತೊಡಗಿದ್ದ. ಇನ್ನೊಬ್ಬ ಮಗ ಬುದ್ಧಿವಂತ, ಹೈಸ್ಕೂಲು ಮುಗಿಸಿ, ಸ್ವಲ್ಪ ಕಾಲ ವಿಶ್ವವಿದ್ಯಾನಿಲಯದಲ್ಲಿದ್ದ; ಅಲ್ಲಿಂದ ವಜಾಗೊಂಡು ಈಗ ತಂದೆಯ ಜೊತೆಯೇ ಇದ್ದ. ಕೊನೆಯವಳು ಮಗಳು, ಹೈಸ್ಕೂಲಿನಲ್ಲಿ ಓದುತ್ತಿದ್ದಳು.

ಮೊದಮೊದಲು ಅವರಾರಿಗೂ ಅಲ್ಯೋಷ ಇಷ್ಟವಾಗಿರಲಿಲ್ಲ. ಅವನು ತೀರ ಹಳ್ಳಿಗಾಡಿನವನಂತಿದ್ದು, ಕಳಪೆ ಉಡುಪು ಧರಿಸುತ್ತಿದ್ದ. ಅವನಿಗೆ ಶಿಷ್ಟಾಚಾರವೇ ತಿಳಿಯದು; ತನ್ನ ಹಳ್ಳಿಯಲ್ಲಿದ್ದಂತೆಯೇ ಎಲ್ಲರನ್ನೂ ಸಲುಗೆಯಿಂದಲೇ ಮಾತಾಡಿಸುತ್ತಿದ್ದ. ಆದರೆ ಕೊಂಚ ಕಾಲದಲ್ಲಿಯೇ ಅವನ ನಡವಳಿಕೆಗೆ ಎಲ್ಲರೂ ಹೊಂದಿಕೊಂಡರು. ಅವನು ತನ್ನಣ್ಣನಿಗಿಂತ ಒಳ್ಳೆಯ ಸೇವಕ; ಹೇಳಿದ ಕೆಲಸಕ್ಕೆ ಸದಾ ಸಿದ್ಧವಾಗಿರುತ್ತಿದ್ದ. ಮನೆಯವರು ಯಾರೇ ಏನು ಹೇಳಿದರೂ ತಕ್ಷಣವೇ ಸಮಾಧಾನದಿಂದ ಮಾಡಿ ಮುಗಿಸುತ್ತಿದ್ದ. ಒಂದಾದ ಮೇಲೊಂದರಂತೆ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ. ಅಂಗಡಿಯಲ್ಲಿಯೂ ಮನೆಯಲ್ಲಿನಂತೆಯೇ ಎಲ್ಲ ಕೆಲಸಗಳನ್ನೂ ಅಲ್ಯೋಷನಿಗೇ ಒಪ್ಪಿಸುತ್ತಿದ್ದರು. ಹೇಳಿದ ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಇನ್ನೊಂದು ಕೆಲಸ ಹೇಳಿರುತ್ತಿದ್ದರು. ಮನೆಯ ಯಜಮಾನಿತಿ ಹಾಗೂ ಅವಳ ಅತ್ತೆ ಮತ್ತು ಮಗಳು, ಕಿರಿಯ ಮಗ, ಅಷ್ಟೇಕೆ ವ್ಯಾಪಾರಿಯ ಕಾರಕೂನ, ಅಡುಗೆಯವಳು ಕೂಡ – ಅವನನ್ನು ಅಲ್ಲಿ ಇಲ್ಲಿಗೆ ಕಳಿಸುತ್ತಿದ್ದರು, ತಲೆಗೆ ಬಂದ ಕೆಲಸವನ್ನೆಲ್ಲ ಅವನಿಗೆ ಹೇಳುತ್ತಿದ್ದರು. ಅಲ್ಯೋಷನಿಗೆ ಕೇಳಿಸುತ್ತಿದ್ದುದೆಂದರೆ, ‘ಅಲ್ಯೋಷ ಇಲ್ಲಿಗೆ ಹೋಗು, ಅಲ್ಲಿಗೆ ಹೋಗು’ ಅನ್ನುವ, ‘ಅಲ್ಯೋಷ, ಇದನ್ನ ಸ್ವಲ್ಪ ಬಗೆಹರಿಸು’ ಅನ್ನುವ, ‘ಅಲ್ಯೋಷ, ಮರೆತುಬಿಟ್ಯಾ? ನೋಡು ಈ ಕೆಲಸ ಮರೆಯೋ ಹಂಗಿಲ್ಲ’ ಅನ್ನುವ ಮಾತುಗಳೇ. ಅಲ್ಯೋಷ, ಹೇಳಿದ ಕಡೆ ಹೋಗುತ್ತಿದ್ದ, ಸಮಸ್ಯೆ ಬಗೆಹರಿಸುತ್ತಿದ್ದ, ಯಾವುದನ್ನೂ ಮರೀತಿರಲಿಲ್ಲ, ಎಲ್ಲವನ್ನೂ ಮುಗುಳುನಗುತ್ತಲೇ ಮಾಡಿ ಮುಗಿಸುತ್ತಿದ್ದ.

ಅಲ್ಯೋಷ ಧರಿಸುತ್ತಿದ್ದ ಬೂಟುಗಳು ಬಹು ಬೇಗ ಸವೆದುಹೋದುವು. ಕಿತ್ತುಹೋದ ಬೂಟುಗಳಲ್ಲೇ ಓಡಾಡುತ್ತ ಇದ್ದ ಅವನನ್ನು ನೋಡಿ ಯಜಮಾನ ಚೆನ್ನಾಗಿ ಬೈದು, ಹೊಸದೊಂದು ಜೊತೆ ಬೂಟುಗಳನ್ನು ಕೊಂಡುಕೊಳ್ಳುವಂತೆ ಹೇಳಿದ. ಈ ಬೂಟುಗಳು ಅಸಲಿಯಾಗಿ ಹೊಸವು, ಅವನ್ನು ಧರಿಸಿದ ಅಲ್ಯೋಷನಿಗೆ ತುಂಬ ಸಂತೋಷವಾಯಿತು. ಆದರೆ ಅವನ ಪಾದಗಳು ಮಾತ್ರ ಹಳೆಯವೇ ಆದ್ದರಿಂದ ಓಡಾಡಿ ಓಡಾಡಿ ಸಂಜೆ ಹೊತ್ತಿಗೆ ನೋಯತೊಡಗಿದವು. ಜೊತೆಗೆ, ತಂದೆ ಯಜಮಾನರಿಂದ ಸಂಬಳ ವಸೂಲಿಗೆಂದು ಬಂದವನು ಅದರಲ್ಲಿ ಬೂಟುಗಳ ಬೆಲೆಯನ್ನು ಉತ್ತಾರ ಹಾಕಿಕೊಂಡಿರೋದನ್ನು ನೋಡಿ ಕಸಿವಿಸಿಗೊಳ್ಳಬಹುದೆಂಬ ಆತಂಕ ಬೇರೆ ಉಂಟಾಯಿತು.

ಚಳಿಗಾಲದಲ್ಲಿ ಅಲ್ಯೋಷ ಹೊತ್ತು ಹುಟ್ಟುವ ಮುಂಚೆಯೇ ಏಳುತ್ತಿದ್ದ: ಸೌದೆ ಸೀಳಿ, ಅಂಗಳವನ್ನೆಲ್ಲ ಸಾರಿಸಿ, ದನ ಮತ್ತು ಕುದುರೆಗಳಿಗೆ ಮೇವು–ನೀರು ಹಾಕುತ್ತಿದ್ದ. ಆಮೇಲೆ, ಒಲೆಗಳನ್ನು ಹೊತ್ತಿಸಿ, ಮನೆಯಲ್ಲಿದ್ದವರದೆಲ್ಲ ಕೋಟು–ಬೂಟುಗಳನ್ನು ಒರೆಸಿ, ಚಹಾ ಪಾತ್ರೆಗಳನ್ನು ಹೊರತೆಗೆದು ಮೆರುಗು ಕೊಡುತ್ತಿದ್ದ. ಅಷ್ಟು ಹೊತ್ತಿಗೆ ಕಾರಕೂನ ಅಂಗಡಿಯಲ್ಲಿ ಸಾಮಾನು ತೆಗೆದುಕೊಡಲು ಕೂಗುತ್ತಿದ್ದ, ಅಥವಾ ಅಡುಗೆಯವಳು ಕಣಕ ನಾದುವುದಕ್ಕೆಂದೋ ಪಾತ್ರಗಳನ್ನು ತೊಳೆಯಲೆಂದೋ ಕರೆಯುತ್ತಿದ್ದಳು. ಕೊಂಚ ಕಾಲದ ಮೇಲೆ, ಏನೋ ವಿಷಯ ತಿಳಿಸಿ ಅವನನ್ನು ಊರಲ್ಲಿನ ಯಾವುದೋ ಸ್ಥಳಕ್ಕೋ ಮಗಳನ್ನು ಕರೆತರಲು ಶಾಲೆಗೋ ಕಳಿಸುತ್ತಿದ್ದರು. ಅಥವಾ ಯಜಮಾನರ ಮುದಿ ತಾಯಿಗೆ ದೀಪದ ಎಣ್ಣೆ ತರುವುದಕ್ಕೋ ಇನ್ನು ಯಾತಕ್ಕೋ ಹೋಗಬೇಕಾದ ಕೆಲಸ ಕಾದಿರುತ್ತಿತ್ತು. ‘ಎಲ್ಲಿ ಅಲೀತಾ ಇದ್ಯೋ, ಕೆಲಸಕ್ಕೆ ಬಾರದೋನೇ?’ ಅಂತ ಬೈಯಲು ಒಬ್ಬರಲ್ಲ ಒಬ್ಬರು ಕಾದಿರುತ್ತಿದ್ದರು. ಇಲ್ಲದಿದ್ದರೆ, ‘ನೀನೇ ಯಾಕೆ ಹೋಗ್ತೀ? ಅಲ್ಯೋಷ ಇದಾನಲ್ಲ, ಅವನನ್ನ ಕಳಿಸು’, ಅಂತಲೋ ತಮ್ಮತಮ್ಮೊಳಗೆ ಮಾತಾಡಿಕೊಂಡು ಅವನನ್ನು ಅಟ್ಟುತ್ತಿದ್ದರು.

ಅಲ್ಯೋಷ ಬೆಳಗ್ಗೆ ತಿಂಡಿ ತಿನ್ನುತ್ತಿದ್ದುದು ಈ ಓಡಾಟದ ಮಧ್ಯದಲ್ಲೇ, ಜೊತೆಗೆ ಊಟದ ಸಮಯಕ್ಕೂ ಮನೆಯಲ್ಲಿರುತ್ತಿದ್ದುದೇ ಅಪರೂಪ. ಇತರರ ಜೊತೆ ಊಟಮಾಡಲು ಯಾವತ್ತೂ ಮನೆಯಲ್ಲಿ ಇರದಿರುತ್ತಿದ್ದ ಅವನನ್ನು ಅಡುಗೆಯವಳಂತೂ ಸದಾ ಛೇಡಿಸುತ್ತಿದ್ದಳು. ಅವನ ಬಗ್ಗೆ ಅವಳಿಗೆ ಕಕ್ಕುಲತೆ ಜಾಸ್ತಿ, ಎರಡು ಹೊತ್ತೂ ಊಟಕ್ಕೆ ಅವನಿಗಾಗಿ ಒಂದಷ್ಟು ಬಿಸಿಬಿಸಿಯಾದ ಅಡುಗೆಯನ್ನು ಉಳಿಸಿರುತ್ತಿದ್ದಳು.

ರಜೆ ಮತ್ತದರ ಹಿಂಚುಮುಂಚಿನ ದಿನಗಳಲ್ಲಿ ಅಲ್ಯೋಷನಿಗೆ ಹೆಚ್ಚು ಕೆಲಸ ಬೀಳುತ್ತಿತ್ತು, ಆದರೂ ರಜೆಯ ದಿನಗಳಲ್ಲಿ ಅವನಿಗೆ ಖುಷಿ ಹೆಚ್ಚು, ಯಾಕಂದರೆ ಕೆಲಸ ಹೇಳಿದವರೆಲ್ಲ ಅವನಿಗೊಂದಷ್ಟು ಬಕ್ಷೀಸು ಕೊಡುತ್ತಿದ್ದರು, ಹೆಚ್ಚೇನಲ್ಲ, ಸಾಮಾನ್ಯವಾಗಿ ಸುಮಾರು ಅರುವತ್ತು ಕೊಪೆಕ್‌ಗಳಷ್ಟು. ಅದು ಅವನದೇ ದುಡ್ಡು, ತನಗೆ ಬೇಕಾದಂತೆ ಅದನ್ನವನು ಖರ್ಚುಮಾಡಬಹುದಿತ್ತು. ತನ್ನ ಸಂಬಳದ ಮೇಲಂತೂ ಅವನು ಕಣ್ಣು ಹಾಕುವಂತಿರಲಿಲ್ಲ, ಯಾಕಂದರೆ ಅವರಪ್ಪ ಬಂದು ಅಲ್ಯೋಷನ ಸಂಬಳವನ್ನು ನೇರವಾಗಿ ವ್ಯಾಪಾರಿಯಿಂದ ಪಡೆದು ಹೋಗುತ್ತಿದ್ದ; ಇವನಿಗೆ ಸಿಕ್ಕುತ್ತಿದ್ದುದು ತನ್ನಣ್ಣನ ಬೂಟುಗಳನ್ನು ಬೇಗ ಸವೆಸಿದ್ದಕ್ಕಾಗಿ ಒಂದಷ್ಟು ಬಿಸಿಬಿಸಿ ಬೈಗುಳ, ಅಷ್ಟೆ. ತನಗೆ ಸಿಕ್ಕಿದ್ದ ಬಕ್ಷೀಸು ಎರಡು ರೂಬಲ್‌ಗಳಷ್ಟಾದಾಗ, ಅಡುಗೆಯವಳ ಸಲಹೆಯಂತೆ ಅಲ್ಯೋಷ ಒಂದು ಕೆಂಪು ಸ್ವೆಟರನ್ನು ಕೊಂಡುಕೊಂಡಿದ್ದ. ಅವನದನ್ನು ಮೊದಲ ಬಾರಿಗೆ ಹಾಕಿಕೊಂಡು ನೋಡಿಕೊಂಡಾಗ, ಅಡುಗೆಮನೆಯಲ್ಲಿ ಬೆರಗುಗಣ್ಣುಗಳಿಂದ ನಿಂತುಬಿಟ್ಟಿದ್ದ.

ಅಲ್ಯೋಷ ಮಾತಾಡುತ್ತಿದ್ದುದೇ ಕಡಿಮೆ; ಆಡುತ್ತಿದ್ದುದು ಆವಶ್ಯಕವಾದದ್ದನ್ನು ಮಾತ್ರ, ಅದೂ ಸಂಕ್ಷಿಪ್ತವಾಗಿ ಮತ್ತು ಬೇಗ. ಅವನಿಗೆ ಅದೂ ಇದೂ ಕೆಲಸ ಹೇಳಿದಾಗ ಅಥವಾ ಅವನದನ್ನು ಮಾಡಲು ಸಾಧ್ಯವೇ ಅಂತ ಕೇಳಿದಾಗ, ಅವನು ಕೊಂಚವೂ ಹಿಂದುಮುಂದು ನೋಡದೆ ‘ಓ, ಮಾಡ್ತೀನಿ’ ಅಂತಲೇ ಹೇಳುತ್ತಿದ್ದ. ಜೊತೆಗೆ ಆ ಕೆಲಸ ಮಾಡಲು ತಕ್ಷಣವೇ ತೊಡಗಿಬಿಡುತ್ತಿದ್ದ.

ಅಲ್ಯೋಷನಿಗೆ ದೇವರ ಪ್ರಾರ್ಥನೆ ಹೇಗೆ ಮಾಡಬೇಕೆಂಬುದು ಸ್ವಲ್ಪವೂ ಗೊತ್ತಿರಲಿಲ್ಲ. ಅವರಮ್ಮ ಒಮ್ಮೆ ಪ್ರಾರ್ಥನೆಯ ಶ್ಲೋಕಗಳನ್ನು ಹೇಳಿಕೊಟ್ಟಿದ್ದಳು, ಆದರೆ ಅವಳು ಹೇಳಿಕೊಟ್ಟಂತೆಲ್ಲ ಇವನಿಗದು ಮರೆತೇ ಹೋಗಿತ್ತು. ಆದರೂ ಅವನು ಎರಡು ಹೊತ್ತೂ ಪ್ರಾರ್ಥನೆ ಮಾಡುತ್ತಿದ್ದ. ಆದರೆ ಸರಳವಾಗಿ, ಕೈಗಳನ್ನು ಶಿಲುಬೆಯಾಕಾರದಲ್ಲಿ ಎದೆಯ ಮೇಲೆ ಸರಿಸಿಕೊಳ್ಳುವುದರ ಮೂಲಕ.

ಅಲ್ಯೋಷ ಹೀಗೆ ಒಂದೂವರೆ ವರ್ಷ ಕಳೆದ; ಎರಡನೇ ವರ್ಷದ ಕೊನೆಯಲ್ಲಿ ಬದುಕಿನ ಅತ್ಯಂತ ಅಪರೂಪದ ಅನುಭವ ಅವನಿಗಾಯಿತು. ಇದು ಅವನೇ ಇದ್ದಕ್ಕಿದ್ದಂತೆ ಕಂಡುಕೊಂಡ ಅನುಭವ. ಅದು ಅವನಿಗೆ ಅತೀವ ಅಚ್ಚರಿಯುಂಟುಮಾಡಿತು; ಜನರ ನಡುವೆ ಅವಶ್ಯಕತೆಗನುಗುಣವಾಗಿ ಉಂಟಾಗುವ ಅನಿವಾರ್ಯ ಸಂಬಂಧವಲ್ಲದೆ, ಅದಕ್ಕಿಂತ ಸಂಪೂರ್ಣ ಭಿನ್ನವಾದ ಸಂಬಂಧಗಳೂ ಉಂಟಾಗಬಹುದು; ಇಂತಹ ಸಂಬಂಧ ಯಾರದೋ ಬೂಟುಗಳನ್ನು ಶುಭ್ರಗೊಳಿಸುವುದೋ, ಹೇಳಿದ ಸಂದೇಶವನ್ನು ಎಲ್ಲಿಗೋ ಒಯ್ಯುವುದೋ ಆಗಿರದೆ, ಆವಶ್ಯಕತೆಯಿಲ್ಲದಿದ್ದರೂ ಒಬ್ಬರಿಗೆ ಸಹಾಯ ಮಾಡುವುದೋ ಅವರಿಗೆ ಪ್ರಿಯವಾಗುವುದೋ ಆದ ಸಂಬಂಧ ಇದು. ಅವನು ಕಂಡುಕೊಂಡ ಇನ್ನೊಂದು ಅಂಶವೆಂದರೆ, ತಾನು ಅಲ್ಯೋಷ ಎಂಬ ಒಬ್ಬ ವ್ಯಕ್ತಿ ಎಂಬ ಪ್ರಜ್ಞೆ. ಇದೆಲ್ಲ ಅವನ ಅನುಭವಕ್ಕೆ ಬಂದದ್ದು ಅಡುಗೆಯವಳಾದ ಉಷ್ಟಿಂಜಳಿಂದ. ಅವಳೊಬ್ಬ ಅನಾಥೆ, ಇನ್ನೂ ಚಿಕ್ಕ ವಯಸ್ಸಿನವಳಾದರೂ ಅಲ್ಯೋಷನಂತೆಯೇ ಕಷ್ಟಜೀವಿ. ಅವಳಿಗೆ ಅಲ್ಯೋಷನ ಬಗ್ಗೆ ಸಹಾನುಭೂತಿ; ಸೇವೆ ಮಾಡಲಲ್ಲ, ಒಬ್ಬ ವ್ಯಕ್ತಿಯಾಗಿ ತಾನು ಬೇರೊಂದು ವ್ಯಕ್ತಿಗೆ ಬೇಕಾದವನು ಎಂಬ ಅರಿವು ಅವನಿಗೆ ಮೊದಲ ಬಾರಿ ಉಂಟಾಯಿತು. ತನ್ನ ತಾಯಿ ಕಕ್ಕುಲತೆ ತೋರಿಸಿದಾಗಲೋ, ಅನುಕಂಪೆ ತೋರಿದಾಗಲೋ ಅದು ಅವನ ಗಮನಕ್ಕೇ ಬರುತ್ತಿರಲಿಲ್ಲ, ಏಕೆಂದರೆ ಅದು ತನ್ನ ಬಗ್ಗೆ ತನಗೆ ಸಹಾನುಭೂತಿ ಇರುವಷ್ಟೇ ಸಹಜ ಎಂದವನಿಗೆ ಅನ್ನಿಸುತ್ತಿತ್ತು. ಆದರೆ ಉಷ್ಟಿಂಜ ತನಗೆ ಪೂರ್ತಿ ಅಪರಿಚಿತಳಾದರೂ, ಅವಳಿಗೆ ತನ್ನ ಬಗ್ಗೆ ಕಕ್ಕುಲತೆ ಇದೆ ಎಂದವನಿಗೆ ಇದ್ದಕ್ಕಿದ್ದಂತೆಯೇ ಅನುಭವಕ್ಕೆ ಬಂದಿತ್ತು. ಅವಳು ಇವನಿಗಾಗಿ ಒಂದು ಮಡಕೆಯಲ್ಲಿ ಕಾಷಾ ಜೊತೆ ಒಂದಷ್ಟು ಬೆಣ್ಣೆ ತೆಗೆದಿರಿಸುತ್ತಿದ್ದಳು; ಇವನು ಅದನ್ನು ತಿನ್ನುವಾಗ ಅವನ ಪಕ್ಕದಲ್ಲಿಯೇ ಕೂತಿರುತ್ತಿದ್ದಳು, ತನ್ನ ಕೈಮೇಲೆ ಗದ್ದವನ್ನಿರಿಸಿಕೊಂಡು ಅವನು ತಿನ್ನುವುದನ್ನೇ ನೋಡುತ್ತಿದ್ದಳು. ಕತ್ತೆತ್ತಿ ಅವನು ಅವಳೆಡೆಗೆ ನೋಡಿದಾಗ ಅವಳು ಮುಗುಳ್ನಗುತ್ತಿದ್ದಳು, ಇವನೂ ನಸುನಗುತ್ತಿದ್ದ.

ಇದೆಲ್ಲ ಹೊಸ ಅನುಭವವಷ್ಟೇ ಅಲ್ಲ, ವಿಚಿತ್ರವೂ ಅನ್ನಿಸಿತ್ತು, ಜೊತೆಗೆ ಮೊದಮೊದಲು ಅವನಿಗೆ ಭಯವೂ ಆಗಿತ್ತು. ಇದೆಲ್ಲ ತನ್ನ ಕೆಲಸಕ್ಕೆ ತೊಡಕು ಅನ್ನಿಸಿತ್ತು. ಆದರೂ ಅವನಿಗೆ ಅದರಿಂದ ಎಂಥದೋ ಸಂತೋಷ ಉಂಟಾಗುತ್ತಿತ್ತು. ಯಾವಾಗಲಾದರೂ ಕತ್ತು ಬಾಗಿಸಿ ಉಷ್ಟಿಂಜ ಹೊಲಿದದ್ದ ತನ್ನ ಷರಾಯಿಯನ್ನು ನೋಡಿಕೊಂಡಾಗ, ತನ್ನ ತಲೆಯಾಡಿಸುತ್ತ ಅವನು ಮುಗುಳ್ನಗುತ್ತಿದ್ದ. ಕೆಲವೊಮ್ಮೆ ಕೆಲಸದಲ್ಲಿ ತೊಡಗಿರುವಾಗಲೋ ಸಂದೇಶ ಹೊತ್ತು ಹೋಗುತ್ತಿರುವಾಗಲೋ ಅವನಿಗೆ ಉಷ್ಟಿಂಜಳ ನೆನಪು ಬರುತ್ತಿತ್ತು, ಮಾತ್ರವಲ್ಲ ಆ, ಉಷ್ಟಿಂಜ! ಎಂಬ ಹಿತಕರ ಉದ್ಗಾರ ಹೊಮ್ಮುತ್ತಿತ್ತು. ಉಷ್ಟಿಂಜಳೂ ಅವನಿಗೆ ತನಗಾದ ಸಹಾಯವನ್ನೆಲ್ಲ ಮಾಡುತ್ತಿದ್ದಳು, ಇವನೂ ಅವಳಿಗೆ ಸಹಾಯ ಮಾಡುತ್ತಿದ್ದ. ಅವಳು ತನ್ನ ಬದುಕಿನ ಹಿನ್ನೆಲೆಯನ್ನೆಲ್ಲ ಹೇಳಿಕೊಂಡಿದ್ದಳು: ತೀರ ಚಿಕ್ಕಂದಿನಲ್ಲೇ ಅನಾಥೆಯಾದದ್ದು, ವಯಸ್ಸಾದ ತನ್ನ ಸೋದರತ್ತೆ ತನ್ನನ್ನು ಸಾಕಿದ್ದು, ಆನಂತರ ಅವಳೇ ದುಡಿಮೆಗೆಂದು ತನ್ನನ್ನು ಪಟ್ಟಣಕ್ಕೆ ಕಳಿಸಿದ್ದು, ವ್ಯಾಪಾರಿಯ ಮಗ ತನ್ನನ್ನು ಬಲೆಗೆ ಹಾಕಿಕೊಳ್ಳುವ ಮೂರ್ಖ ಪ್ರಯತ್ನ ಮಾಡಿದ್ದು, ತಾನು ಅವನನ್ನು ಎಲ್ಲಿಡಬೇಕೋ ಅಲ್ಲಿಟ್ಟದ್ದು – ಎಲ್ಲ. ಇದನ್ನೆಲ್ಲ ಅವನ ಮುಂದೆ ಹೇಳಿಕೊಳ್ಳುವುದಕ್ಕೆ ಅವಳಿಗೆ ಇಷ್ಟ, ಕೇಳುವುದರಲ್ಲಿ ಇವನಿಗೆ ಸಂತೋಷ. ಎಷ್ಟೋ ಜನ ರೈತಾಪಿ ಹುಡುಗರು ಪಟ್ಟಣದಲ್ಲಿ ಮನೆಗೆಲಸಕ್ಕೆಂದು ಬಂದು ಅಲ್ಲಿನ ಅಡುಗೆ ಹುಡುಗಿಯರನ್ನು ಮದುವೆಯಾದ ವಿಷಯವೂ ಇತರ ವಿಷಯಗಳ ಜೊತೆ ಅವನ ಕಿವಿಗೆ ಬಿದ್ದಿತ್ತು. ‘ನಿಮ್ಮ ತಂದೆ ತಾಯಿಯರು ಬೇಗ ನಿನ್ನ ಮದುವೆ ಮಾಡ್ತಾರಾ’ ಎಂದು ಅವಳೊಮ್ಮೆ ಅಲ್ಯೋಷನನ್ನು ಕೇಳಿದ್ದಳು; ಆಗ ತನಗೇನೂ ಗೊತ್ತಿಲ್ಲವೆಂದಿದ್ದ, ಜೊತೆಗೆ ತಮ್ಮ ಹಳ್ಳಿಯಲ್ಲಿ ತಾನು ಇಷ್ಟಪಡುವ ಯಾರೂ ಇಲ್ಲವೆಂದೂ ಸೇರಿಸಿದ್ದ.

‘ಅಂದ್ರೆ, ನೀನು ಬೇರೆ ಯಾರನ್ನಾದ್ರೂ ಆರಿಸಿಕೊಂಡಿದ್ದೀಯೋ ಹ್ಯಾಗೆ?’ ಅಂತ ಕೇಳಿದ್ದಳು.

‘ಹೌದು, ನಿನ್ನ ಮದುವೆ ಆಗ್ತೀನಿ, ನಿಂಗೆ ಒಪ್ಪಿಗೇನಾ?’

‘ಅಯ್ಯೋ ಗಡಿಗೆ, ನನ್ನ ಗಡಿಗೆ, ಎಷ್ಟು ಜಾಣತನದಿಂದ ನನ್ನ ಕೇಳಿದೆ!’ ಅಂದಿದ್ದಳು, ತನ್ನ ಕೈಲಿದ್ದ ಸೌಟಿಂದ ಅವನ ಬೆನ್ನ ಮೇಲೆ ನವಿರಾಗಿ ಹೊಡೆದು.

ಶ್ರೋವೆಟೈಡ್ ಅವಧಿಯಲ್ಲಿ ಒಂದು ದಿನ ಅಲ್ಯೋಷನ ತಂದೆ ಯಥಾಪ್ರಕಾರ ಮಗನ ಸಂಬಳ ವಸೂಲು ಮಾಡಲೆಂದು ಪಟ್ಟಣಕ್ಕೆ ಬಂದ. ಅಲ್ಯೋಷ ಉಷ್ಟಿಂಜಳನ್ನು ಮದುವೆಯಾಗೋ ಹವಣಿಕೆಯಲ್ಲಿದ್ದಾನೆ ಅನ್ನುವುದನ್ನು ವ್ಯಾಪಾರಿಯ ಹೆಂಡತಿ ಇಷ್ಟು ಹೊತ್ತಿಗೆ ಪತ್ತೆಹಚ್ಚಿದ್ದಳು; ಅವಳಿಗದು ಇಷ್ಟವಿರಲಿಲ್ಲ. ಅವಳು ಬಸುರಾಗ್ತಾಳೆ, ಆಮೇಲೆ ಅವಳು ಏನು ತಾನೆ ಕೆಲಸ ಮಾಡಬಲ್ಲಳು! ಅನ್ನುವ ತನ್ನ ಯೋಚನೆಯನ್ನು ಗಂಡನ ಬಳಿ ಹೇಳಿದ್ದಳು.
ವ್ಯಾಪಾರಿ ಅಲ್ಯೋಷನ ಸಂಬಳದ ದುಡ್ಡನ್ನು ಅವರಪ್ಪನಿಗೆ ಎಣಿಸಿ ಕೊಟ್ಟ. ಆಗ ತಂದೆ, ‘ನನ್ನ ಮಗ ಸರಿಯಾಗಿ ಕೆಲಸ ಮಾಡ್ತಾ ಇದಾನೆ ತಾನೆ?’ ಎಂದು ವ್ಯಾಪಾರಿಯನ್ನು ಕೇಳಿದ. ‘ನಾನು ಹಿಂದೆಯೇ ಹೇಳಿದ್ನೆಲ್ಲ, ಅವನೊಬ್ಬ ಸಾಧು ಹುಡುಗ, ಹೇಳಿದ ಕೆಲಸ ಮಾಡ್ತಾನೆ’ ಅಂತ ಸೇರಿಸಿದ.

‘ಸಾಧುನೋ ಏನೋ, ಆದ್ರೆ ಅವನೊಂದು ಮೂರ್ಖ ಕೆಲಸ ಮಾಡಿದಾನೆ. ಅವನಿಗೆ ಅಂಥದ್ದು ಹೇಗೆ ಹೊಳೀತೂಂತ! ಅವನಿಗೆ ನಮ್ಮನೆ ಅಡುಗೆ ಹುಡುಗೀನ ಮದುವೆಯಾಗೋ ಆಲೋಚನೆ ಬಂದಿದೆ. ನಾನಂತೂ ಮದುವೆಯಾದೋರನ್ನ ಕೆಲಸಕ್ಕೆ ಇಟ್ಟುಕೊಳ್ಳಲ್ಲ; ನನಗದು ಸರಿ ಹೋಗಲ್ಲ.’

‘ಹೌದಾ! ಅಯ್ಯೋ ಮೂರ್ಖ ಹುಡುಗ! ಅವನ ತಲೆಗೆ ಅಂಥ ಹಡಬೆ ಯೋಚನೆ ಹ್ಯಾಗೆ ಹೊಕ್ಕಿತು? ಧಣಿ, ತಾವು ಅದರ ಬಗ್ಗೆ ತಲೆ ಕೆಡಿಸ್ಕಾಬ್ಯಾಡಿ. ಅವನು ಅವನ್ನೆಲ್ಲ ಮರೆತುಬಿಡೋ ಹಾಗೆ ನಾನು ಮಾಡ್ತೀನಿ.’

ಹೀಗಂದವನೇ ಅವನು ನೇರವಾಗಿ ಅಡುಗೆ ಮನೆಗೆ ಹೋಗಿ, ಮಗನಿಗಾಗಿ ಮೇಜಿನ ಬಳಿ ಕೂತ. ಸ್ವಲ್ಪ ಹೊತ್ತಲ್ಲಿ, ಯಥಾಪ್ರಕಾರ ಎಂಥದೋ ಸಂದೇಶ ಹೊತ್ತು ಎಲ್ಲೋ ಹೋಗಿದ್ದ ಅಲ್ಯೋಷ ಏದುಸಿರು ಬಿಡುತ್ತ ಬಂದ.

‘ನೀನು ಒಳ್ಳೆ ಸಭ್ಯಸ್ಥ ಅಂತ ಮಾಡಿದ್ದೆ, ಆದರೆ ನಿನ್ನ ತಲೇಲಿ ಇಂಥ ಕೆಟ್ಟ ಯೋಚನೆ ಹ್ಯಾಗೆ ಬಂತೂಂತ’ ಅನ್ನುವ ಮಾತುಗಳಿಂದ ತಂದೆ ಅಲ್ಯೋಷನನ್ನು ಬರಮಾಡಿಕೊಂಡ.

‘ನಾನೇನೂ ಅಂಥದ್ದನ್ನ ಮಾಡಿಲ್ಲವಲ್ಲ!’

‘ಏನೂ ಮಾಡಿಲ್ಲವಾ? ಮದುವೆಯಾಗಕ್ಕೆ ನಿರ್ಧಾರ ಮಾಡಿಬಿಟ್ಯಾ? ಸಮಯ ಬಂದಾಗ ನನಗೆ ಇಷ್ಟವಾಗೋ ಹುಡುಗಿ ಜೊತೇಲಿ ನಾನೇ ನಿನ್ನ ಮದುವೆ ಮಾಡ್ತೀನಿ, ಆದ್ರೆ ಪಟ್ಟಣದ ಕುಲಗೆಟ್ಟೋಳ ಜೊತೆ ಅಲ್ಲ.’ ಜೊತೇಲಿ ಇಂಥದೇ ಇನ್ನೂ ಏನೇನೋ ಹೇಳಿದ. ಅಲ್ಯೋಷ ಮಾತಾಡದೆ ನಿಂತು ನಿಟ್ಟುಸಿರು ಬಿಟ್ಟ. ತಂದೆ ಮಾತು ನಿಲ್ಲಿಸಿದಾಗ ಇವನು ಅವನ ಕಡೆ ನೋಡಿ ಮುಗುಳ್ನಕ್ಕ. ‘ನಾನು ಅದನ್ನೆಲ್ಲ ಮರ್ತುಬಿಡ್ತೀನಿ ಬಿಡಪ್ಪ!’ ಅಂದ.
‘ಸರಿಯಾದ್ದನ್ನೇ ಮಾಡು’ ಎಂದು ಚಿಕ್ಕದಾಗಿ ಹೇಳಿ ತಂದೆ ಊರ ಕಡೆ ಹೊರಟ.

ತಂದೆ ಹೋದ ಮೇಲೆ, ಮರೆಯಲ್ಲಿ ನಿಂತು ಅಪ್ಪಮಗನ ಮಧ್ಯದ ಮಾತುಗಳನ್ನು ಕೇಳಿಸಿಕೊಳ್ತಿದ್ದ ಉಷ್ಟಿಂಜಳ ಜೊತೆ ಒಬ್ಬನೇ ಇದ್ದಾಗ ಅಲ್ಯೋಷ ಅವಳಿಗೆ ಹೇಳಿದ: ‘ನಮ್ಮ ಯೋಚನೆ ನಡೆಯೋದಿಲ್ಲ. ಕೇಳಿಸ್ತಾ? ಅಪ್ಪನಿಗೆ ಭಾರಿ ಕೋಪ, ನಮ್ಮನ್ನು ಮದುವೆ ಆಗಕ್ಕೆ ಬಿಡಲ್ಲ.’

ಉಷ್ಟಿಂಜ ತನ್ನ ಏಪ್ರನ್‌ನಿಂದ ಬಾಯಿ ಮುಚ್ಚಿಕೊಂಡು ನಿಶ್ಶಬ್ದವಾಗಿ ಅಳತೊಡಗಿದಳು. ಅಲ್ಯೋಷ ಲೊಚಗುಟ್ಟುತ್ತ, ‘ಅಪ್ಪನ ಮಾತನ್ನ ನಾನು ಹ್ಯಾಗೆ ಮೀರ‍್ಲಿ? ಇಲ್ನೋಡು, ನಾವಿದನ್ನೆಲ್ಲ ಮರ‍್ತುಬಿಡೋಣ.’

ಸಾಯಂಕಾಲ ವ್ಯಾಪಾರಿಯ ಹೆಂಡತಿ ಅಂಗಡಿ ಬಾಗಿಲು ಮುಚ್ಚೋದಕ್ಕೆ ಕರೆದಾಗ ಅವಳು ಹೇಳಿದಳು: ‘ನೀನು ನಿಮ್ಮಪ್ಪ ಹೇಳಿದ ಹ್ಯಾಗೆ ಮದುವೆ ಗಿದುವೆ ಯೋಚ್ನೇನೆಲ್ಲ ಬಿಟ್ಬಿಡ್ತೀ ತಾನೇ?’

‘ಖಂಡಿತ, ಅದನ್ನಾಗ್ಲೇ ನಾನು ಮರೆತೆ!’ ಎಂದು ಅಲ್ಯೋಷ ತಟ್ಟನೆ ಹೇಳಿದ. ಹಾಗಂದು ಮುಗುಳ್ನಕ್ಕ, ಆದರೆ ಆಮೇಲೆ ಮುಸುಮುಸು ಅಳತೊಡಗಿದ.

ಆ ಹೊತ್ತಿನಿಂದ ಅಲ್ಯೋಷ ಮತ್ತೆ ಉಷ್ಟಿಂಜಳ ಜೊತೆ ಮದುವೆಯ ಬಗ್ಗೆ ಎಂದೂ ಮಾತಾಡಲಿಲ್ಲ, ಆ ಹಿಂದಿನಂತೆಯೇ ಇರತೊಡಗಿದ.

ಲೆಂಟ್ ಅವಧಿಯಲ್ಲಿ ಒಂದು ದಿನ ಬೆಳಿಗ್ಗೆ ವ್ಯಾಪಾರಿಯ ಕಾರಕೂನ ಮಾಳಿಗೆ ಮೇಲಿನ ಹಿಮವನ್ನು ಗುಡಿಸಿ ಹಾಕಲು ಅಲ್ಯೋಷನನ್ನು ಕಳಿಸಿದ. ಅವನು ಮೇಲಕ್ಕೆ ತೆವಳುತ್ತ ಹತ್ತಿದ, ಸಲಿಕೆಯಿಂದ ಹಿಮವನ್ನೆಲ್ಲ ತೆಗೆದುಹಾಕಿ, ಚರಂಡಿಯ ಹತ್ತಿರದಲ್ಲಿ ಹೆಪ್ಪುಗಟ್ಟಿದ್ದ ಹಿಮವನ್ನು ಒಡೆಯಲು ತೊಡಗಿದ. ಅಲ್ಲಿ ಕಾಲುಜಾರಿದ ಅಲ್ಯೋಷ ಸಲಿಕೆಯ ಜೊತೆಗೆ ಕೆಳಕ್ಕೆ ದೊಪ್ಪನೆ ಬಿದ್ದ. ಅವನ ದುರದೃಷ್ಟ, ಅವನು ಬಿದ್ದದ್ದು ಹಿಮದ ಮೇಲಲ್ಲ, ಕಬ್ಬಿಣದ ಕಂಬಿಗಳಿದ್ದ ಮೋರಿಯ ಬಾಯಲ್ಲಿ. ಉಷ್ಟಿಂಜ ಅವನ ಬಳಿಗೆ ಓಡಿ ಹೋದಳು, ಅವಳ ಹಿಂದೆ ವ್ಯಾಪಾರಿಯ ಮಗಳೂ ಓಡಿದಳು.

‘ಅಲ್ಯೋಷ, ತುಂಬ ಪೆಟ್ಟಾಯಿತಾ?’

‘ಹ್ಞೂ, ಆದ್ರೂ ಪರವಾಯಿಲ್ಲ ಅದೇನು ಮಹಾ.’

ಅವನೇನೋ ಮೇಲೇಳಲು ಬಯಸಿದ, ಆದರೆ ಅವನಿಂದಾಗಲಿಲ್ಲ, ಬರೀ ಮುಗುಳ್ನಕ್ಕ. ಬೇರೆಯವರೂ ಬಂದು ಅವನನ್ನು ಅನಾಮತ್ತಾಗಿ ಮನೆಯಂಗಳಕ್ಕೆ ಹೊತ್ತು ಸಾಗಿಸಿದರು. ಆಸ್ಪತ್ರೆಯಿಂದ ಒಬ್ಬ ಆರ್ಡರ್ಲಿಯೂ ಬಂದು ಅವನನ್ನು ಪರೀಕ್ಷಿಸಿ ಎಲ್ಲಿ ಪೆಟ್ಟಾಗಿದೆಯೆಂದು ವಿಚಾರಿಸಿದ. ‘ಎಲ್ಲ ಕಡೆ ನೋಯ್ತಿದೆ’ ಎಂದುತ್ತರಿಸಿದ ಅಲ್ಯೋಷ. ‘ಆದರೆ ಅದೇನು ಮಹಾ ಬಿಡಿ, ಯಜಮಾನರಿಗೆ ತುಂಬ ಕಸಿವಿಸಿ ಆಗತ್ತೆ, ಅಪ್ಪನಿಗೆ ವಿಷಯ ತಿಳಿಸಬೇಕು.’

ಅವನು ಎರಡು ದಿನ ಪೂರ್ತಿ ಮಲಗಿರಬೇಕಾಯಿತು. ಮೂರನೆಯ ದಿನ ಪುರೋಹಿತರಿಗೆ ಹೇಳಿಕಳಿಸುವ ಏರ್ಪಾಟಾಯಿತು.

‘ನೀನು ಸತ್ತೇ ಹೋಗ್ತೀಯಾ?’ ಎಂದು ಕಳವಳದಿಂದ ಉಷ್ಟಿಂಜ ಕೇಳಿದಳು.

‘ಯಾರೂ ಯಾವಾಗ್ಲೂ ಬದುಕಿರಲ್ಲವಲ್ಲ. ಯಾವಾತ್ತಾದರ್ರೂ ಸಾಯಬೇಕಲ್ಲ’ ಅಂದ ತಕ್ಷಣವೇ ಎಂದಿನಂತೆ. ‘ಥ್ಯಾಂಕ್ಯು, ಉಷ್ಟಿಂಜ. ನಂಗೋಸ್ಕರ ದುಃಖ ಪಡ್ತಿರೋದಕ್ಕೆ. ನಮ್ಮ ಮದುವೆಗೆ ಯಾರೂ ಒಪ್ಪದೇ ಇದ್ದದ್ದೇ ಒಳ್ಳೇದಾಯ್ತು; ಮದುವೆ ಆಗಿದ್ರೂ ಏನೂ ಪ್ರಯೋಜನವಾಗ್ತಾ ಇರ್ಲಿಲ್ಲ. ಈಗೆಲ್ಲ ಸರಿಯಾಯ್ತು.’

ಪುರೋಹಿತರ ಜೊತೆಗೆ ಅವನು ಪ್ರಾರ್ಥನೆ ಸಲ್ಲಿಸಿದ, ಆದರೆ ಕೈಜೋಡಿಸಿ ಮನಸ್ಸಿನಲ್ಲೇ. ಇಲ್ಲಿ ತಾನು ಒಳ್ಳೆಯವನಾಗಿದ್ದಿದ್ರೆ, ವಿಧೇಯನಾಗಿದ್ದುಕೊಂಡು ಯಾರಿಗೂ ನೋವುಂಟುಮಾಡದೇ ಇದ್ದಿದ್ರೆ, ಅಲ್ಲಿಯೂ ಒಳ್ಳೇದೇ ಆಗತ್ತೆ ಎಂದು ಅವನ ಮನದಾಳ ನುಡಿಯುತ್ತಿತ್ತು. ಹೆಚ್ಚು ಮಾತಾಡಲಿಲ್ಲ. ‘ಕುಡಿಯುವುದಕ್ಕೆ ಏನಾದರೂ ಬೇಕು’ ಅಂತ ಕೇಳಿದ, ಆಮೇಲೆ ಆಶ್ಚರ್ಯಕರವಾಗಿ ಮುಗುಳ್ನಕ್ಕ. ಅವನಿಗೆ ಯಾವುದರ ಬಗ್ಗೆಯೋ ವಿಸ್ಮಯ ಉಂಟಾದಂತೆ ತೋರಿತು, ಕೈಚಾಚಿದ, ಪ್ರಾಣ ಹಾರಿಹೋಗಿತ್ತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !