ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದಂತೆ ಬದುಕಿದ ಗಾಂಧೀಜಿ

Last Updated 26 ಜನವರಿ 2019, 20:00 IST
ಅಕ್ಷರ ಗಾತ್ರ

ಗಾಂಧೀಜಿಯವರನ್ನು ನಾವೆಲ್ಲ ಒಬ್ಬ ಮಹಾತ್ಮರನ್ನಾಗಿ ಅರಿತಿದ್ದೇವೆ. ಅಂದರೆ ಸತ್ಯಾನ್ವೇಷಕರಾಗಿ, ಅಹಿಂಸಾ ತತ್ವದ ಪರಿಶೋಧಕರಾಗಿ, ಸಂತರಾಗಿ, ಒಬ್ಬ ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಹಾಗೂ ಮಾನವ ಜನಾಂಗ, ಸಮಾಜ ಮತ್ತು ದೇಶದ ಬಗ್ಗೆ ಅಸಾಧ್ಯ ಕಾಳಜಿಯಿರುವ ಒಂದು ದಿವ್ಯಾತ್ಮವಾಗಿ ಕಂಡಿದ್ದೇವೆ. ಆದರೆ ಅವರೊಬ್ಬ ವಿಶಿಷ್ಟ ಸಂಗೀತಗಾರರೆಂಬುದು ಅನೇಕರಿಗೆ ತಿಳಿದಿಲ್ಲ!

ಸಂಗೀತದ ಒಲವು
ಗಾಂಧೀಜಿಯವರಿಗೆ ಸಂಗೀತ ಮತ್ತು ಲಲಿತ ಕಲೆಗಳೆಂದರೆ ತುಂಬಾ ಒಲವು. ಸಂಗೀತ ಅವರ ಬದುಕಿನ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು. ಭಗವದ್ಗೀತೆ, ರಾಮಾಯಣದ ವಾಚನವನ್ನು ಅವರು ಚಿಕ್ಕಂದಿನಿಂದ ಕೇಳಿದ್ದರ ಪ್ರಭಾವ ವರ್ಷಗಳ ನಂತರವೂ ಕಡಿಮೆಯಾಗಲಿಲ್ಲ.

‘ಸಂಗೀತ ಗಂಟಲಿನಿಂದ ಮಾತ್ರ ಹೊರಡುವಂಥದ್ದಲ್ಲ; ಪಂಚೇಂದ್ರಿಯಗಳಲ್ಲೂ, ಹೃದಯದಲ್ಲೂ ಸಂಗೀತವಿದೆ.’

‘ನನ್ನ ಬದುಕಿನಲ್ಲಿ ಸಂಗೀತ, ಹಾಸ್ಯ ಇಲ್ಲದೇ ಹೋಗಿದ್ದರೆ, ನನ್ನೀ ಕೆಲಸದ ಹೊರೆಯಲ್ಲಿ ನಾನೆಂದೋ ಸತ್ತು ಹೋಗುತ್ತಿದ್ದೆ.’

‘ಶುದ್ಧ ಜೀವನಕ್ಕೆ ಶ್ರುತಿ ಸೇರಿಸಿ ಸಂಗೀತವೆಂಬ ಕಲೆಯನ್ನು ಹೊರ ತರುವುದು ಅತ್ಯಲ್ಪ ಜನರಿಂದ ಮಾತ್ರ ಸಾಧ್ಯ.’

‘ಸಂಗೀತ ನನ್ನಲ್ಲಿ ಶಾಂತಿ ತಂದಿದೆ. ನಾನು ತುಂಬಾ ಉದ್ರಿಕ್ತನಾಗಿದ್ದಾಗ, ಸಂಗೀತ ನನ್ನನ್ನು ಅತಿ ಬೇಗನೆ ಶಾಂತವಾಗಿಸಿದ ಸಂದರ್ಭಗಳು ನನಗೆ ನೆನಪಿವೆ. ಕ್ರೋಧವನ್ನು ಗೆಲ್ಲಲು ಸಂಗೀತ ನನಗೆ ನೆರವು ನೀಡಿದೆ.’

ಮೇಲಿನವೆಲ್ಲ ಗಾಂಧೀಜಿ ಆಡಿದ ಸಂಗೀತಪರ ನುಡಿಗಳು. ಅವರು ಪಂಡಿತ್ ನಾರಾಯಣ ಖರೆ ಅವರಿಗೆ ಅಕ್ಟೋಬರ್ 7, 1924ರಲ್ಲಿ ಬರೆದ ಪತ್ರವಿದು - ‘ಕಾಲಕ್ರಮದಲಿ ನಾನು ಸಂಗೀತವನ್ನು ಆತ್ಮೋದ್ಧಾರದ ಸಾಧನವಾಗಿ ನೋಡಲಾರಂಭಿಸಿದ್ದೇನೆ. ಭಜನ್‌ ಹಾಡುವಾಗ ದಯವಿಟ್ಟು ಎಲ್ಲರೂ ಅದರ ಸರಿಯಾದ ಅರ್ಥ ಅರಿತು ಹಾಡಲು ಪ್ರಯತ್ನಿಸಿ. ಹಾಗೆ ಮಾಡಿದಾಗ ನನಗಾಗುವ ಆನಂದ ವರ್ಣನಾತೀತ. ಸಂಗೀತವು ಆತ್ಮದ ಉನ್ನತಿಗೆ ಒಂದು ಸಕಾರಾತ್ಮಕ ಕ್ರಿಯೆ.’

ಗಾಂಧೀಜಿಯವರು ಸಂಗೀತ ಕಲೆಯನ್ನು ಉಳಿಸಿ, ಬೆಳೆಸಲು ಬಹಳ ಶ್ರಮಿಸಿದರು. ಅಹಮದಾಬಾದ್‌ನಲ್ಲಿ ‘ಯಂಗ್ ಇಂಡಿಯಾ’ದವರನ್ನು ಉದ್ದೇಶಿಸಿ ಮಾಡಿದ ಏಪ್ರಿಲ್ 15, 1929ರ ಭಾಷಣ ಹೀಗಿದೆ: ‘ವಿಶಾಲ ದೃಷ್ಟಿಯಲ್ಲಿ ಅರ್ಥೈಸಿದರೆ, ಸಂಗೀತವೆಂದರೆ ಸಂಗಮ, ಹೊಂದಾಣಿಕೆ, ಸಹಕಾರ. ಬದುಕಿನ ಯಾವ ಭಾಗದಲ್ಲೂ ಸಂಗೀತವನ್ನು ಮೂಲೆಗೊತ್ತುವಂತಿಲ್ಲ. ಆದ್ದರಿಂದ ಹೆಚ್ಚು ಹೆಚ್ಚು ಜನ ತಮ್ಮ ಮಕ್ಕಳನ್ನು ಸಂಗೀತ ಶಾಲೆಗೆ ಕಳುಹಿಸಿದರೆ ದೇಶದ ಉದ್ಧಾರಕ್ಕೆ ಒಂದು ದೊಡ್ಡ ಕಾಣಿಕೆ ಆದೀತು.’

ಮಹಾತ್ಮ ಗಾಂಧೀಜಿಯವರ ನುಡಿಗಳಲ್ಲಿ ‘ನಿಜವಾದ ಸಂಗೀತದಲ್ಲಿ ಮತಗಳ ನಡುವಿನ ಭೇದವಿಲ್ಲ; ಘರ್ಷಣೆಯಿಲ್ಲ, ತಾತ್ಸಾರವಿಲ್ಲ. ಸಂಗೀತವು ರಾಷ್ಟ್ರೀಯ ಭಾವೈಕ್ಯಕ್ಕೆ ಉತ್ತಮ ಉದಾಹರಣೆ. ಹಿಂದೂಗಳು, ಮುಸಲ್ಮಾನರು ಭೇದವಿಲ್ಲದೆ ಒಟ್ಟಿಗೆ, ಒಂದೇ ವೇದಿಕೆಯ ಮೇಲೆ ಕುಳಿತು ಕಛೇರಿಗಳನ್ನು ಇಲ್ಲಿ ಮಾತ್ರ ನಡೆಸುತ್ತಾರೆ.’

ಅವರು ಆಗಾಗ ಹೇಳುತ್ತಿದ್ದ ಇನ್ನೊಂದು ಮಾತು ಇದೆ. ‘ನಾವು ಸಂಗೀತವನ್ನು ಸಂಕುಚಿತ ದೃಷ್ಟಿಕೋನದಲ್ಲಿ, ಅಂದರೆ ಹಾಡುವ ಅಥವಾ ವಾದ್ಯವನ್ನು ನುಡಿಸುವ ಸಾಮರ್ಥ್ಯ ಎಂದಷ್ಟೇ ಪರಿಗಣಿಸಿದ್ದೇವೆ. ಆದರೆ ವಿಶಾಲವಾದ ಅರ್ಥದಲ್ಲಿ, ನಿಜವಾದ ಸಂಗೀತ ಹುಟ್ಟುವುದು ನಮ್ಮ ಜೀವನದ ಶ್ರುತಿ ಸೇರಿದಾಗ: ಹೃದಯದ ತಂತಿಗಳು ಒಂದೇ ಶ್ರುತಿಯಲ್ಲಿ ಅಪಸ್ವರವಿಲ್ಲದೆ ಮಿಡಿದಾಗ.’

‘ನಮ್ಮ ಇಡೀ ಬದುಕು ಒಂದು ಮಧುರ ಗಾನದಂತಿರಬೇಕು. ಸತ್ಯ, ಧರ್ಮಗಳೆಂಬ ಶೀಲಗಳಲ್ಲದೆ ಇದನ್ನು ಸಾಧಿಸಲು ಸಾಧ್ಯವಿಲ್ಲ. ಜೀವನ ಸಂಗೀತಮಯ ಆಗಬೇಕಾದರೆ ನಾವು ದೇವರಲ್ಲಿ ಒಂದಾಗಬೇಕು. ಈ ದಿವ್ಯಕಲೆಯ ಆಳವಾದ ಅರ್ಥವನ್ನು ಅರಿಯದ ಪಕ್ಷದಲ್ಲಿ, ನಾನು ಅಂತಹ ವಿದ್ಯೆಗೆ ಬೆಲೆ ಕೊಡುವುದಿಲ್ಲ.’

ಗಾಂಧಿಯವರು ಸಂಗೀತವನ್ನು ಒಂದು ಪವಿತ್ರ, ಶಕ್ತ ಕಲೆಯಾಗಿ ಪರಿಗಣಿಸಿದ್ದರು. ಭಾವನೆಗಳನ್ನು ಹತೋಟಿಯಲ್ಲಿಡುವ ಹಾಗೂ ಬದಲಿಸುವ ಶಕ್ತಿ ಅದಕ್ಕಿದೆ ಎಂದು ನಂಬಿದ್ದರು.

ಅಕ್ಟೋಬರ್ 20, 1917ರಲ್ಲಿ ಬ್ರೋಚ್‌ನಲ್ಲಿ ನಡೆದ ದ್ವಿತೀಯ ಗುಜರಾತಿ ಶಿಕ್ಷಣ ಸಮ್ಮೇಳನದಲ್ಲಿ ಮಾತನಾಡುತ್ತಾ, ‘ಅನೇಕ ವೇಳೆ ಒಂದು ದೊಡ್ಡ ಒಕ್ಕೂಟದಲ್ಲಿ ಗಲಭೆ, ಅಶಾಂತಿಯನ್ನು ಕಾಣುತ್ತೇವೆ. ಒಂದು ರಾಷ್ಟ್ರಗೀತೆಯನ್ನು ಒಟ್ಟಿಗೆ ಹಾಡಿದರೆ ಇದನ್ನು ಹತೋಟಿಗೆ ತರಬಹುದು. ಅಂಬಿಗರು ಹಾಗೂ ಇತರ ಕೆಲಸಗಾರರು ಹರಹರ ಮಹಾದೇವ ಅಲಬೇಲಾ ಎಂದೆಲ್ಲಾ ಹಾಡುವಾಗ ಅವರಿಗೆ ಕೆಲಸ ಮಾಡುವ ಹುಮ್ಮಸ್ಸು ದೊರೆಯುತ್ತದೆ. ಇಲ್ಲಿ ನಾವು ಸಂಗೀತದ ಶಕ್ತಿಯನ್ನು ಕಾಣುತ್ತೇವೆ’ ಎಂದಿದ್ದರು.

ಒಮ್ಮೊಮ್ಮೆ ಅವರು ‘ಸಂಗೀತವೆಂದರೆ ಲಯ, ಶಿಸ್ತು; ಇದರ ಪ್ರಭಾವ ಎರಡು ವಿಧ. ವಿದ್ಯುಚ್ಛಕ್ತಿಯಂತೆ ಚುರುಕು ಹಾಗೂ ಹಿತವೂ ಕೂಡ. ಆದರೆ ದುಃಖವಶಾತ್ ಇದನ್ನು ನಾವು ಮೂಲೆಗೊತ್ತಿದ್ದೇವೆ. ಇದಕ್ಕೆ ದೊರಕಲೇಬೇಕಾದ ರಾಷ್ಟ್ರೀಯ ಸ್ಥಾನ ನಿಜವಾದ ಅರ್ಥದಲ್ಲಿ ದೊರೆತಿಲ್ಲ’ ಎನ್ನುತ್ತಿದ್ದರು.

ಡಿಸೆಂಬರ್ 22, 1945ರಂದು ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರಿಗೆ ಬರೆದ ಪತ್ರದಲ್ಲಿ ಒಂದು ಸಲಹೆ ನೀಡಿದ್ದರು. ಬಂಗಾಲಿ ಸಂಗೀತದೊಂದಿಗೆ ಹಿಂದೂಸ್ತಾನಿ ಸಂಗೀತವನ್ನೂ, ಪಾಶ್ಚಾತ್ಯ ಸಂಗೀತವನ್ನೂ ಶಾಂತಿನಿಕೇತನದಲ್ಲಿ ಕಲಿಸಿಕೊಡುವಂತೆ ಸೂಚಿಸಿದ್ದರು. ಇದರಿಂದ ಗಾಂಧೀಜಿಯವರಿಗೆ ಸಂಗೀತ ವಿವಿಧ ಶಾಖೆಗಳ ಬಗ್ಗೆ ಇದ್ದ ಜ್ಞಾನ ಅರಿವಾಗುತ್ತದೆ.

ಬೆಳಗಾವಿಯಲ್ಲಿ 1924ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಚರಕದ ಹಜಾರದ ಬಳಿಯೇ ಒಂದು ಸಂಗೀತದ ಹಜಾರವನ್ನೂ ನಿರ್ಮಿಸಲಾಗಿತ್ತು. ವಿಶೇಷವಾಗಿ ಸಂಗೀತ ಕಛೇರಿಗಳನ್ನು ನಡೆಸಲಿಕ್ಕಾಗಿಯೇ ಇದನ್ನು ನಿರ್ಮಿಸಿದ್ದರು ಗಾಂಧೀಜಿ. ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿಯಿತ್ತೆಂಬುದು ಇದೇ ವೇದಿಕೆಯಲ್ಲಿ ಮೈಸೂರಿನ ವೀಣೆ ಶೇಷಣ್ಣ ಹಾಗೂ ಅವರಂತಹ ಪ್ರಸಿದ್ಧ ವಿದ್ವಾಂಸರ ಕಛೇರಿಯನ್ನು ಏರ್ಪಡಿಸಿ ಗೌರವಿಸಿದ್ದರಿಂದ ವೇದ್ಯವಾಗುತ್ತದೆ.

ಗಾಂಧೀಜಿಯವರು ಸಬರಮತಿಯ ಸತ್ಯಾಗ್ರಹ ಆಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಭಜನಾವಳಿ ಏರ್ಪಡಿಸುತ್ತಿದ್ದರು. ಆ ಭಜನಾವಳಿಯನ್ನು ‘ನಿತಿವಂ ಕಾವ್ಯೋ’ ಎಂಬ ಪುಸ್ತಕವಾಗಿ ಪ್ರಕಟಿಸಿದ್ದರು. ರಾಮಧುನ್ ಕೂಡ ನಿತ್ಯ ಪ್ರಾರ್ಥನೆಯಲ್ಲಿ ಸೇರಿತ್ತು. ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಾದ ಪಂಡಿತ್ ನಾರಾಯಣ ಖರೆ, ಮಾಮಾ ಫಡ್ಕೆ, ವಿನೋಬಾ ಭಾವೆ ಮತ್ತು ಬಾಲ್ಕೋಬಾ ಭಾವೆ ಸಬರ್‌ಮತಿ ಆಶ್ರಮದಲ್ಲಿದ್ದರು. ಅವರ ಆಶ್ರಮದ ಭಜನಾವಳಿಯಲ್ಲಿ ಮತ, ಪ್ರಾಂತ, ಭಾಷೆ, ಜಾತಿಗಳ ಭೇದವೇ ಇರಲಿಲ್ಲ. ಪ್ರೀತಿ, ಮಾನವೀಯತೆ, ಶ್ರದ್ಧೆ, ನಂಬಿಕೆಗಳೆಂಬ ವಿವಿಧ ವರ್ಣ, ಸುವಾಸನೆಗಳುಳ್ಳ ಪುಷ್ಪಗಳ ಸುಂದರ ಹೂಗುಚ್ಛವೇ ಆಗಿತ್ತು ಅವರ ಈ ಸಂಗೀತ ಗುಚ್ಛ.

ಗಾಂಧೀಜಿಯವರಿಗೆ ಬಲು ಪ್ರಿಯವಾದವು ಮೀರಾಬಾಯಿಯ ಭಜನ್‌ಗಳು. ಅದರಲ್ಲೂ ಚಾಕರ್ ರಾಕೋಜಿ ಎಂಬುದನ್ನು 1924ರಲ್ಲಿ ದಿಲೀಪ್‌ ಕುಮಾರ್ ರಾಯ್‌ರವರು ಸಬರಮತಿ ಆಶ್ರಮದಲ್ಲಿ ಸಿತಾರ್‌ನಲ್ಲಿ ನುಡಿಸಿದರೆಂದು ಮಹದೇವ ದೇಸಾಯಿಯವರು ತಮ್ಮ ದಿನಚರಿ ಪುಸ್ತಕದಲ್ಲಿ ಬರೆದಿದ್ದಾರೆ.

ಎಂ.ಎಸ್.ಸುಬ್ಬುಲಕ್ಷ್ಮಿಯವರು ದರ್ಬಾರಿ ಕಾನಡದಲ್ಲಿ ‘ಹರೀ ತುಮ್ ಹರೋ’ ಎಂಬ ಮೀರಾ ಭಜನೆಯನ್ನು ಗಾಂಧೀಜಿಯವರಿಗಾಗಿಯೇ ಹಾಡಿದ್ದರು. ಇಂದಿರಾ ದೇವಿಯವರ ರಚನೆ ‘ಗುಂಗುರು ಬಾಂದ್ ಪಗ್ ಆಯಿ ಮೀರಾ’ ಎಂಬ ಸಿಂಧುಭೈರವಿ ರಾಗದ ಭಜನ್‌ನ್ನು ಗಾಂಧಿಯವರಿಗಾಗಿ ಹಾಡಿದರು. ಅಲ್ಲದೆ ತುಲಸೀದಾಸರ ‘ತೂ ದಯಾಲು ದೀನ ಬಂಧು’, ‘ದೀನ್ ದಯಾಲ್ ಗೋಪಾಲ್’, ‘ರಘುಪತಿ ರಾಘವ ರಾಜಾರಾಮ್’, ‘ವೈಷ್ಣವ ಜನತೋ’ ಮುಂತಾದವು ಗಾಂಧೀಜಿಯವರು ಪ್ರೀತಿಯಿಂದ ಪದೇ ಪದೇ ಕೇಳುತ್ತಿದ್ದ ಭಜನ್‌ಗಳು.

ಮೀರಾ ಭಜನ್‌ಗಳ ಬಗ್ಗೆ ಹೇಳುತ್ತಾ ಗಾಂಧೀಜಿಯವರು ದಿಲೀಪ್‌ರಾಯ್‌ ಅವರೊಂದಿಗಿನ ಸಂದರ್ಶನದಲ್ಲಿ ಹೀಗೆ ಮಾತನಾಡಿದ್ದಾರೆ. ‘ಆಕೆಯ ಭಜನ್‌ಗಳು ಸುಂದರವಾಗಿ ಇರದಿರಲು ಹೇಗೆ ಸಾಧ್ಯ? ಅವರ ಅನೇಕ ಭಜನ್‌ಗಳು ನನಗೆ ತುಂಬಾ ಪರಿಚಿತ. ನನ್ನ ಆಶ್ರಮದಲ್ಲಿ ಅದನ್ನು ಭಕ್ತಿ-ಪ್ರೀತಿಗಳಿಂದ ಪದೇ ಪದೇ ಹಾಡುತ್ತಾರೆ. ಒಂದು ಅನನ್ಯ ಆನಂದವನ್ನು ನಾನು ಆಕೆಯ ಭಜನ್‌ಗಳ ಶ್ರವಣದಿಂದ ಅನುಭವಿಸಿದ್ದೇನೆ. ಸನ್ಯಾಸತ್ವವು ಕಲೆಗಳಲ್ಲಿಯೇ ಅತ್ಯಂತ ಉನ್ನತವಾದದ್ದು. ಭಾರತೀಯ ಧಾರ್ಮಿಕ ಜೀವನ ಮೀರಾಬಾಯಿಯ ಸಂಗೀತವಿಲ್ಲದೆ ಅಭ್ಯುದಯವಾಗಿರಲು ಸಾಧ್ಯವೇ ಇಲ್ಲ. ಒಂದು ಕಲೆಯನ್ನು ಪ್ರಶಂಸಿಸಲು ಅದರ ತಾಂತ್ರಿಕತೆಯ ಅರಿವು, ತರಬೇತಿಯ ಅಗತ್ಯವಿಲ್ಲ. ಅದನ್ನು ಅನುಭವಿಸುವ ಹೃದಯವಿರಬೇಕಷ್ಟೆ. ಕಲೆಗೆ ಬದುಕಿನಲ್ಲಿ ಒಂದು ಸ್ಥಾನವಿದೆ. ಆದರೆ ಕಲೆಯೇ ಜೀವನವಲ್ಲ, ಬದಲಿಗೆ ಜೀವನವೆಂಬುದು ಒಂದು ಕಲೆ’. ಇದು ಗಾಂಧಿಯವರ ನಿಲುವು.

ಇಂದಿನ ಸಂಘರ್ಷಮಯ ಯುಗದಲ್ಲಿ ಮನುಜನ ಉಳಿವು ಹಾಗೂ ಬೆಳವಣಿಗೆಗೆ ಗಾಂಧಿ ತತ್ವ ಸೂಕ್ತ ಮಾರ್ಗ. ಕಲೆ ಮತ್ತು ಸಂಗೀತದ ಕುರಿತಾದ ಅವರ ನಿಲುವು, ಮಾನವ ಜೀವನದ ಅಭ್ಯುದಯಕ್ಕೆ ಅತ್ಯಂತ ಪ್ರಸ್ತುತ. ಅವರು ತಮ್ಮ ಆತ್ಮಚರಿತ್ರೆಯಲ್ಲಿ ‘ನನ್ನ ಬದುಕೇ ನನ್ನ ಸಂದೇಶ’ ಎಂದಿದ್ದಾರೆ. ಅಷ್ಟಕ್ಕೂ ಅವರ ಇಡೀ ಬದುಕೇ ಒಂದು ಲಯಬದ್ಧ, ಶ್ರುತಿಬದ್ಧ ಸಂಗೀತವಾಗಿತ್ತಲ್ಲವೆ?!

ಗಾಂಧಿತತ್ವವೂ ಸಂಗೀತವೂ
ಗಾಂಧೀಜಿಯವರ ಜೀವನ, ಜನತೆಯ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಕಲ್ಕಿಯವರು (ಕಲ್ಯಾಣಸುಂದರಂ ಕೃಷ್ಣಮೂರ್ತಿ) ತ್ಯಾಗಭೂಮಿ ಎಂಬ ದೇಶಭಕ್ತಿಯುಳ್ಳ ಕಾದಂಬರಿ ರಚಿಸಿದರು. ಕೆ. ಸುಬ್ರಹ್ಮಣ್ಯಂ ಅವರು 1939ರಲ್ಲಿ ಅದನ್ನು ಚಲನಚಿತ್ರವಾಗಿಸಿದರು. ಅದಕ್ಕೆ ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸರೂ ವಾಗ್ಗೇಯಕಾರರೂ ಆಗಿದ್ದ ಪಾಪನಾಶಂ ಶಿವನ್‌ರವರು ಸಂಗೀತ ನಿರ್ದೇಶನ ಮಾಡಿದ್ದೇ ಅಲ್ಲದೆ ಶಂಭುಶಾಸ್ತ್ರಿ ಎಂಬ ಪಾತ್ರ ನಿರ್ವಹಿಸಿದರು.

ಆ ಪಾತ್ರ ಬೇರಾವುದೂ ಅಲ್ಲದೆ ಚರಕದಲ್ಲಿ ನೂಲುವ ಗಾಂಧಿಯ ತದ್ರೂಪು. ಇದಕ್ಕಾಗಿಯೇ ಶಿವನ್ ಅವರಿಗೆ ತಮಿಳುನಾಟ್ಬ್ ಗಾಂಧಿ ಎಂಬ ಅಡ್ಡ ಹೆಸರೂ ಬಂದಿತು. ಈ ಚಿತ್ರದಲ್ಲಿ ಝಂಝಾಟಿ ರಾಗದಲ್ಲಿ, ಆದಿತಾಳದಲ್ಲಿ ಗಾಂಧೀಜಿಯವರ ಕುರಿತು ಹಾಡು ಇದೆ. ಅದು ಗಾಂಧಿ ಕುರಿತಪ್ರಥಮ ರಚನೆ. ಆಗಾಗ ಮಧುರೈಮಣಿ ಅಯ್ಯರ್ ಇದನ್ನು ತಮ್ಮ ಕಛೇರಿಗಳಲ್ಲಿ ಹಾಡುತ್ತಿದ್ದರು. ವಿದುಷಿ ಡಿ.ಕೆ.ಪಟ್ಟಮ್ಮಾಳ್ ತಮ್ಮ ದೇಶಭಕ್ತಿಗೀತೆಗಳ ಧ್ವನಿಸುರುಳಿಯಲ್ಲಿ ಇದನ್ನೇ ಹಾಡಿದ್ದಾರೆ.

ಇತ್ತೀಚೆಗೆ ಪೂರ್ಣತ್ರಯಿ ಜಯಪ್ರಕಾಶ್ ಎಂಬ ವಾಗ್ಗೇಯಕಾರರು ಗಾಂಧೀಜಿ ಹಾಗೂ ಅವರ ತತ್ವಗಳನ್ನು ಆಧರಿಸಿ ಐದು ಕೃತಿಗಳನ್ನು ರಚಿಸಿ, ಕರ್ನಾಟಕ ಸಂಗೀತದ ರಾಗ-ತಾಳಗಳನ್ನು ಅಳವಡಿಸಿದ್ದಾರೆ. ಅದನ್ನು ‘ಗಾಂಧಿ ಸಂದೇಶ ಗೀತಾಂಜಲಿ’ ಎಂಬ ಧ್ವನಿಸುರುಳಿಯಲ್ಲಿ ಮಾವೆಲ್ಲಿಕರ ಪಿ. ಸುಬ್ರಹ್ಮಣ್ಯನ್ ಮತ್ತು ಅವರ ಆರು ವಿದ್ಯಾರ್ಥಿಗಳು ಹಾಡಿದ್ದಾರೆ.

ಗಾಂಧೀಜಿ ಅವರ ಮೇಣದ ಪ್ರತಿಮೆ
ಗಾಂಧೀಜಿ ಅವರ ಮೇಣದ ಪ್ರತಿಮೆ

ಸಂಗೀತದೊಲುಮೆ– ನಿಲುಮೆ
ಬದುಕಿಗೆ ಸಂಗೀತವನ್ನು ಅಳವಡಿಸುತ್ತಾ ‘ನಿಜವಾದ ಸಂಗೀತ ಖಾದಿಯಲ್ಲೂ, ಚರಕದಲ್ಲೂ ಅಡಗಿದೆ’ ಎಂದರು ಮಹಾತ್ಮ. ನಮ್ಮ ದೇಶದ ಕೋಟ್ಯಂತರ ಜನ ಒಂದೇ ದನಿಯಲ್ಲಿ ಮಾತನಾಡಲು ತೊಡಗಿದಾಗ ಮಾತ್ರ ನಮ್ಮ ಸಂಗೀತ ಸಂಶೋಧನೆಗೆ ಗೆಲುವು. ಮಹಾತ್ಮ ಗಾಂಧಿಯವರ ಪ್ರಿಯ ರಾಗಗಳು ಸತ್ಯ ಮತ್ತು ಅಹಿಂಸೆ. ಅವರ ಆಲೋಚನೆಗಳು ಸ್ವದೇಶಿ ಹಾಗೂ ಖಾದಿ. ಅವರ ವಾದಿ-ಸಂವಾದಿ ಸ್ವರಗಳು ಬ್ರಹ್ಮಚರ್ಯ ಮತ್ತು ನಿಸ್ವಾರ್ಥ; ಅಸತ್ಯ ಮತ್ತು ಹಿಂಸೆ ಅವರ ವರ್ಜ್ಯಸ್ವರಗಳು. ಚರಕದೊಂದಿಗಿನ ರಿಯಾಜ್ (ಸಂಗೀತಾಭ್ಯಾಸ) ಅವರು ಒಂದು ದಿನವೂ ತಪ್ಪಿಸುತ್ತಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT