ಶನಿವಾರ, ಸೆಪ್ಟೆಂಬರ್ 19, 2020
22 °C

ಗೊಂಬೆ ಮಾರುವವನು ಚಿಂದಿ ಆರಿಸುವವನು

ಮತ್ತೂರು ಸುಬ್ಬಣ್ಣ Updated:

ಅಕ್ಷರ ಗಾತ್ರ : | |

Prajavani

ಅದೊಂದು ದೊಡ್ಡ ಗೃಹ ಸಮುಚ್ಚಯ. ಸಂಜೆ ಐದರ ಸಮಯ. ಮಕ್ಕಳು ಗುಂಪು ಗುಂಪಾಗಿ ತಮ್ಮ ವಯೋಮಾನದವರ ಜೊತೆ ಆಡಿಕೊಳ್ಳುತ್ತಿದ್ದರು. ಆ ಗೃಹ ಸಮುಚ್ಚಯದ ಕಾಂಪೌಂಡಿನ ಬಳಿ ಒಬ್ಬ ಗೊಂಬೆ ಮಾರುವವ ಬಂದ. ತನ್ನ ದೊಡ್ಡ ಗಂಟನ್ನು ಬಿಚ್ಚಿದ. ಅದರಲ್ಲಿದ್ದ ಗೊಂಬೆಗಳನ್ನೆಲ್ಲ ತೆಗೆದು ಒಪ್ಪವಾಗಿ ಜೋಡಿಸಿದ. ಬಣ್ಣ ಬಣ್ಣದ ಗೊಂಬೆಗಳನ್ನು ಕಂಡು ಗೃಹ ಸಮುಚ್ಚಯದ ಮಕ್ಕಳು ಅವನ ಸುತ್ತ ಮುಗಿಬಿದ್ದರು.

‘ಆ ಗೊಂಬೆ ಏನು? ಅದನ್ನು ತೋರಿಸಿ ಅಂಕಲ್... ಈ ಗೊಂಬೆ ನಡೆಯುತ್ತೆ...’ ಎನ್ನುತ್ತ ಖುಷಿಯಿಂದ ಕುಪ್ಪಳಿಸಿದರು. ಅದೇ ಹೊತ್ತಿಗೆ ಹತ್ತರಿಂದ ಹನ್ನರೆಡು ವರ್ಷ ವಯಸ್ಸಿನ, ಕಸ ಆರಿಸುವ ಬಾಲಕನೊಬ್ಬ ಅಲ್ಲಿ ಕಾಣಿಸಿಕೊಂಡ. ದೊಗಲೆ ಪ್ಯಾಂಟು, ಗುಂಡಿ ಇಲ್ಲದ ಕಪ್ಪು ಕೋಟನ್ನು ಧರಿಸಿದ್ದ ಆತ, ತಲೆಯ ಮೇಲೊಂದು ಮಾಸಿದ ಟೋಪಿ ಹಾಕಿಕೊಂಡಿದ್ದ. ಅವನ ಕಣ್ಣುಗಳು ಗುಳಿಬಿದ್ದಿದ್ದವು. ಕಾಲಲ್ಲಿ ಸವೆದ ಚಪ್ಪಲಿ ಇತ್ತು. ಬಾಲಕ ಗೊಂಬೆ ಮಾರುವವನ ಬಳಿ ಬಂದ. ಆಸೆ ತುಂಬಿದ ಕಣ್ಣುಗಳಿಂದ ಗೊಂಬೆಗಳನ್ನು ನೋಡಿದ. ಗೃಹ ಸಮುಚ್ಚಯದ ಮಕ್ಕಳೂ ಗೊಂಬೆ ಮಾರುವವನ ಸುತ್ತ ನೆರೆದಿದ್ದರು. ಒಮ್ಮೊಮ್ಮೆ ಜೋರಾಗಿ ಚಪ್ಪಾಳೆ ತಟ್ಟುತ್ತ ಮಕ್ಕಳು ಖುಷಿ ಪಡುತ್ತಿದ್ದರು.

ಮಕ್ಕಳ ಗುಂಪಿನಲ್ಲಿದ್ದ ಒಬ್ಬಳು ಬಾಲಕಿ ಕಸ ಆರಿಸುವ ಹುಡುಗನತ್ತ ಕೈ ಮಾಡಿ ಜೋರಾದ ದನಿಯಲ್ಲಿ ಹೇಳಿದಳು: ‘ಕಳ್ಳ... ಕಳ್ಳ... ನೋಡಿ, ನಮ್ಮ ಸಾಮಾನುಗಳನ್ನು ಕದಿಯಲು ಬಂದಿದ್ದಾನೆ.’

‘ಛಿ, ಅವನ ಡ್ರೆಸ್ಸು ನೋಡು, ಎಷ್ಟು ಕೊಳಕಾಗಿದೆ! ಎಷ್ಟು ದಿವಸದಿಂದ ಸ್ನಾನ ಮಾಡಿಲ್ಲವೊ.’ ಎಂದು ಇನ್ನೊಬ್ಬ ಹೇಳಿದ. ‘ಏಯ್, ಯಾಕೊ ಇಲ್ಲಿ ಬಂದೆ? ಹೋಗೊ ಆಚೆ’ ಎಂದು ಮತ್ತೊಬ್ಬ ಹೇಳಿದ. ‘ನಮ್ಮ ಸೆಕ್ಯುರಿಟಿಗೆ ಹೇಳಿ ನಿನ್ನನ್ನ ಓಡಿಸ್ತೇವೆ. ಪೊಲೀಸರಿಗೆ ನಿನ್ನನ್ನು ಹಿಡಿದು ಕೊಡ್ತೇವೆ’ ಎಂದು ಇನ್ನು ಕೆಲವರು ಆ ಬಾಲಕನ ಮೇಲೆ ಹರಿಹಾಯ್ದರು. ಕಸ ಆರಿಸುವ ಆ ಬಾಲಕ ದೈನ್ಯದಿಂದ ಅವರತ್ತ ನೋಡಿದ.

ಸಮುಚ್ಚಯದ ಮಕ್ಕಳು ಗೊಂಬೆ ಮಾರುವವನ ಬಳಿ ಹೇಳಿದರು: ‘ಅಂಕಲ್ ಈ ಹುಡುಗನನ್ನು ಓಡಿಸಿ.’

‘ಏಯ್ ಹುಡುಗ, ಇಲ್ಲಿಗ್ಯಾಕೆ ಬಂದೆ? ಹುಡುಗರನ್ನ ಹೆದರಿಸ್ತೀಯಾ? ಕಳ್ಳತನ ಮಾಡೋಕೆ ಬಂದಿದೀಯಾ? ಹೋಗಾಚೆ’ ಎಂದು ಗೊಂಬೆ ಮಾರುವಾತ ಗದರಿಸುತ್ತ ಹೇಳಿದ. ‘ಇಲ್ಲಣ್ಣ, ನಾ ಏನೂ ಮಾಡೋಲ್ಲ. ಗೊಂಬೆ ನೋಡ್ತಾ ಇದೀನಿ, ಅಷ್ಟೆ’ ಎಂದ ಆ ಬಾಲಕ. ಅಷ್ಟರಲ್ಲಿ, ಯಾರೋ ಅವನ ಪ್ಲಾಸ್ಟಿಕ್ ಚೀಲ ಎಳೆದರು. ಟೋಪಿ ಬೀಳಿಸಿದರು. ಹೊಡೆಯುವ ಹಾಗೆ ಕೈ ಮಾಡಿದರು. ಕಸ ಆರಿಸುವ ಹುಡುಗನನ್ನು ರಸ್ತೆಯಿಂದ ಆಚೆ ಕಳಿಸಿದರು. ಮತ್ತೆ ಗೊಂಬೆ ಮಾರುವವನ ಸುತ್ತ ಮಕ್ಕಳು ನೆರೆದರು.

ರಸ್ತೆಯ ಆ ಬದಿಯಿಂದ, ತಿಪ್ಪೆ ಆರಿಸುವ ಬಾಲಕ ಮರದ ಮರೆಯಿಂದ ಗೊಂಬೆ ಮಾರುವವನತ್ತಲೇ ನೋಡುತ್ತಿದ್ದ. ಗೊಂಬೆ ಮಾರುವವ ಅನುಮಾನದಿಂದ ಸುತ್ತಲೂ ನೋಡುತ್ತಿದ್ದ. ಒಂದೆಡೆ ಮಕ್ಕಳನ್ನು ಮಾತಾಡಿಸುತ್ತಿದ್ದರೂ, ಇನ್ನೊಂದೆಡೆ ಅತ್ತಿತ್ತ ನೋಡುತ್ತಿದ್ದ. ಮುಗ್ಧ ಮಕ್ಕಳು ಗೊಂಬೆಗಳನ್ನು ವೀಕ್ಷಿಸುತ್ತಿದ್ದರು.

ತಿಪ್ಪೆ ಆಯುವ ಹುಡುಗ ಗೊಂಬೆ ಮಾರುತ್ತಿರುವ ವ್ಯಕ್ತಿಯತ್ತ ಒಮ್ಮೆ ನೋಡಿದ. ಗೊಂಬೆ ಮಾರುವಾತ ಒಂದು ಸುಂದರ ಬಿಳಿ ಕರಡಿಯ ಗೊಂಬೆ ತೆಗೆದುಕೊಂಡು ಸ್ಕ್ರೂ ಡ್ರೈವರ್‌ ಬಳಸಿ ಅದರ ಹಿಂದಿನ ಸೆಲ್ ತೆಗೆದ. ಅದರ ಜಾಗದಲ್ಲಿ ಇನ್ನೇನೋ ಇಟ್ಟ. ಸೆಲ್ಲನ್ನು ಇಟ್ಟು ಸ್ಕ್ರೂ ಹಾಕಿದ. ಅದನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಸುತ್ತಲೂ ಸೂಕ್ಷ್ಮವಾಗಿ ನೋಡುತ್ತಿದ್ದ. ‘ಆ ಹಿಮಕರಡಿ ಗೊಂಬೆ ತೋರಿಸಿ’ ಅಂದರು ಮಕ್ಕಳು. ‘ಇದನ್ನು ನಿಮಗೇ ಕೊಡುತ್ತೇನೆ. ಒಳಗೆ ಹೋಗಿ ಆಡಿಕೊಳ್ಳಿ’ ಎನ್ನುತ್ತ ಹಿಮಕರಡಿಯ ಗೊಂಬೆಯನ್ನು ಮಕ್ಕಳ ಕೈಗೆ ಕೊಟ್ಟ.

ಸಮುಚ್ಚಯದ ಮಕ್ಕಳೆಲ್ಲ ಖುಷಿಯಿಂದ ಆ ಗೊಂಬೆಯನ್ನು ಎತ್ತಿಕೊಂಡು ಸಮುಚ್ಚಯದ ಒಳಗೆ ಓಡಿದರು. ಇದೆಲ್ಲವನ್ನೂ ಚಿಂದಿ ಆರಿಸುವ ಬಾಲಕ ರಸ್ತೆಯ ಆ ಬದಿಯ ಮರದ ಮರೆಯಿಂದ ನೋಡುತ್ತಿದ್ದ. ಅನುಮಾನ ಬಂತು ಅವನಿಗೆ. ಆಟವಾಡುತ್ತಿದ್ದ ಮಕ್ಕಳೆಲ್ಲ ಕಾಂಪೌಂಡ್‍ನ ಒಳಗೆ ಹೋಗುತ್ತಿದ್ದಂತೆ ಗೊಂಬೆ ಮಾರುವಾತ ತನ್ನ ಗೊಂಬೆಗಳನ್ನೆಲ್ಲ ಆತುರ ಆತುರವಾಗಿ ಗಂಟು ಕಟ್ಟಿಕೊಂಡ. ಆಟೊ ಒಂದನ್ನು ಕರೆದು ನಿಲ್ಲಿಸಿದ. ಆಟೊ ಹತ್ತಿ ಹೊರಟುಹೋದ. ಚಿಂದಿ ಆರಿಸುವ ಬಾಲಕ ಇನ್ನು ಹೆಚ್ಚು ಸಮಯ ಕಾಯಲಿಲ್ಲ. ರಸ್ತೆ ದಾಟಿ ಗೃಹ ಸಮುಚ್ಚಯದೊಳಗೆ ಓಡಿದ. ಸೆಕ್ಯುರಿಟಿ ಅವನನ್ನು ತಡೆಯಲು ಪ್ರಯತ್ನಿಸಿದ.

ಗೊಂಬೆ ಮಾರುವವನಿಂದ ಹಿಮಕರಡಿಯನ್ನು ಉಚಿತವಾಗಿ ಪಡೆದಿದ್ದ ಮಕ್ಕಳು ತನಗೆ ಬೇಕು ಗೊಂಬೆ ಎನ್ನುತ್ತ ಓಡುತ್ತಿದ್ದರು. ಚಿಂದಿ ಆರಿಸುವ ಬಾಲಕ ಮತ್ತೆ ಬಂದಿದ್ದನ್ನು ಕಂಡು ಎಲ್ಲರೂ ಸಿಟ್ಟಾದರು. ಯಾವುದನ್ನೂ ಲೆಕ್ಕಿಸದೆ ಆ ಬಾಲಕ, ಮಕ್ಕಳ ಮಧ್ಯಕ್ಕೆ ಓಡಿದ. ಮಕ್ಕಳು ಪ್ರತಿರೋಧ ತೋರಿದರೂ ಪ್ರಯಾಸದಿಂದ ಹಿಮಕರಡಿ ಗೊಂಬೆಯನ್ನು ಕಸಿದುಕೊಂಡ. ಕಿವಿಯ ಬಳಿ ಇಟ್ಟುಕೊಂಡ. ಗೊಂಬೆ ‘ಟಿಕ್ ಟಿಕ್ ಟಿಕ್’ ಎಂದು ಸದ್ದು ಮಾಡುತ್ತಿತ್ತು. ಗುಂಪಿನ ಮಕ್ಕಳೆಲ್ಲ ‘ಕಳ್ಳ ಹುಡುಗ’ ಎನ್ನುತ್ತ ಆತನಿಂದ ಗೊಂಬೆಯನ್ನು ಕಸಿದುಕೊಳ್ಳಲು ಯತ್ನಿಸಿದರು. ಯಾವುದನ್ನೂ ಲೆಕ್ಕಿಸದೆ ಚಿಂದಿ ಆರಿಸುವ ಬಾಲಕ ಸಮುಚ್ಚಯದ ಗೇಟಿನ ಬಳಿ ಓಡಿದ.

ಕೆಲವರು ‘ಕಳ್ಳನನ್ನು ಹಿಡಿಯಿರಿ ಅಂಕಲ್’ ಎನ್ನುತ್ತ ಸೆಕ್ಯುರಿಟಿ ಗಾರ್ಡ್ ಬಳಿ ಓಡಿದರು. ಎಲ್ಲರಿಂದಲೂ ತಪ್ಪಿಸಿಕೊಂಡ ಆ ಬಾಲಕ ಸಮುಚ್ಚಯದ ಗೇಟನ್ನು ದಾಟಿ ರಸ್ತೆಯ ಆಚೆ ಬದಿ ತಲುಪಿದ. ಹತ್ತಿರದಲ್ಲೇ ಒಂದು ಬಯಲಿತ್ತು. ಹಿಮಕರಡಿ ಗೊಂಬೆಯನ್ನು ಜೋರಾಗಿ, ತನ್ನ ಶಕ್ತಿಯನ್ನೆಲ್ಲ ಬಳಸಿ ಎಸೆದ. ಆ ಬಾಲಕ ನಿರೀಕ್ಷೆ ಮಾಡಿದ್ದಂತೆ ಗೊಂಬೆ ಸ್ಫೋಟಗೊಂಡಿತು! ಚಿಂದಿ ಆರಿಸುವ ಬಾಲಕ ತಾನಿದ್ದಲ್ಲಿಯೇ ಬೋರಲಾಗಿ ಮಲಗಿಬಿಟ್ಟ. ಗೊಂಬೆಯಿಂದ ಹಾರಿದ ಬೆಂಕಿಯ ಕಿಡಿಗಳು ಅವನ ಮುಖ, ಕೈ, ಕಾಲುಗಳನ್ನು ಗಾಸಿಗೊಳಿಸಿದವು. ಏನೂ ಆರ್ಥವಾಗದೆ ಗೃಹ ಸಮುಚ್ಚಯದ ಮಕ್ಕಳು ಗೇಟಿನಲ್ಲೇ ನಿಂತು ಇವೆಲ್ಲವನ್ನೂ ನೋಡುತ್ತಿದ್ದರು. ಪರಿಸ್ಥಿತಿ ಅರಿತು ಸೆಕ್ಯುರಿಟಿ ಗಾರ್ಡ್ ಮಕ್ಕಳನ್ನು ಅಲ್ಲೇ ತಡೆದ.

ಚಿಂದಿ ಆರಿಸುವ ಬಾಲಕ ನೋವಿನಿಂದ ನರಳುತ್ತ ತನ್ನ ಪ್ಲಾಸ್ಟಿಕ್ ಚೀಲದತ್ತ ತೆವಳಿದ. ಅದೇ ವೇಳೆಗೆ ಪೊಲೀಸ್ ಜೀಪೊಂದು ಗೃಹ ಸಮುಚ್ಚಯದ ಬಳಿ ಬಂದು ನಿಂತಿತು. ಇಬ್ಬರು ಪೊಲೀಸರು ಗೊಂಬೆ ಮಾರುವವನನ್ನು ಜೀಪಿನಿಂದ ಇಳಿಸಿದರು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.