ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಯ್ಯ ದೇವರಮನಿ ಅವರ ಕಥೆ: ‘ಅಗಸಿ ಹೆಣ’

Last Updated 23 ಅಕ್ಟೋಬರ್ 2021, 23:15 IST
ಅಕ್ಷರ ಗಾತ್ರ

‘ಬ್ಯಾಡಲೇ ಮಗನೆ ಬ್ಯಾಡೋ... ದುಡಿಯೋ ಮುಕ್ಕ ನಾನೆಂಬೋರಿಲ್ಲ ಮನ್ಯಾಗ. ನಿಮ್ಮಪ್ಪ ತೀರಿಕ್ಕೆಂದ ಮ್ಯಾಲೆ ನಿನ್ನ ಹ್ಯಾಂಗ ಸಾಕಿದೀನಿ ಅನ್ನೋದು ನನ್ನ ಹಡೆದೊಟ್ಟಿಗೆ ಗೊತ್ತು. ಹೋರಿ ಸುದ್ದಿಗೆ ಹೋಗಬ್ಯಾಡ... ಯಾ... ಮಾಯಕರ ಬಂದು ಗುದ್ದಿದ್ರೆ ಗತಿಯೇನು’ ಹಬ್ಬ ಮಾಡಲು ಹೊಂಟನಿಂತ ಮಗನನ್ನು ಕೇಸಕ್ಕಿ ಕುಸ್ಲೆವ್ವ ಅಡ್ಡಗಟ್ಟಿದಳು. ‘ನಿಂದೊಳ್ಳೆ ಕಾಟ ಕಣವ್ವ, ನಾನೇನು ಸಣ್ಣ ಮಗೀನ. ಊರೆಲ್ಲಾ ಹಬ್ಬ ಮಾಡತೈತಿ ನನ್ನ ಮನ್ಯಾಗ ಕುಂದ್ರು ಅಂದ್ರ ಹ್ಯಾಂಗ’ ಕಾಂತ ಸಿಟ್ಟಿಗೆ ಬಿದ್ದ. ಅಡ್ಡಗಟ್ಟಿದ ಕುಸ್ಲೆವ್ವಳ ಕೈಯನ್ನು ಕೊಸರಕ್ಕೆಂದು ಹೋರಿ ಹಿಡಿಯಲು ಹೊಂಟ. ‘ಲೋ ಮಗ ತಟಗು ಹಡದವ್ವನ ಮಾತು ಕೇಳೋ... ಅಗಸ್ಯಾಗ ನಿಲ್ಲಬ್ಯಾಡೋ...’ ಅಂತ ಕೂಗಿ ಹೇಳಿದಳು. ಕಾಂತ ಕಿವಿಮ್ಯಾಲ ಹಾಕ್ಕೊಳ್ಳದೆ ದುಡು ದುಡು ಹೋಗಿಬಿಟ್ಟ. ಕುಸ್ಲೆವ್ವ ಬಾಯಲ್ಲಿ ಅಕ್ಕಿಕಾಳು ಹಾಕ್ಕೆಂದು ಕುಂತಳು. ನನ್ನ ಪಾಡು ಇವನಿಗೆ ಏಕೆ ಅರ್ಥವಾಗುತ್ತಿಲ್ಲ. ಗಂಡ ಅಖಾಡದಲ್ಲಿ ಹೆಣವಾಗಿದ್ದು ನೆನೆದು ಕುಚ್ಚಿಹೋದಳು.

ಕಾಂತ ಹೋರಿ ಮ್ಯಾಲೆ ಜಿಗಿದರೆ ಬಗ್ಗಿಸದೆ ಬಿಡುತ್ತಿರಲಿಲ್ಲ. ಹಲುವು ಪೈಲ್ವಾನರು ಇದ್ದರಾದರೂ ಅವರ್ಯಾರು ಕಾಂತನಂತೆ ಎತ್ತನ್ನು ಹಿಡಿದು ಬಗ್ಗಿಸುತ್ತಿರಲಿಲ್ಲ. ಅದಕ್ಕೆ ತಾಕತ್ತಿನ ಜೊತೆಗೆ ದನದ ರಭಸ ಮತ್ತು ನುಗ್ಗುವ ಓಣಿಯ ಇಡುವಿರಬೇಕು. ಓಡಿ ಎಡಗೈಯನ್ನು ಡುಬ್ಬದ ಮೇಲೆ; ಬಲಗೈನ್ನು ಕೊಂಬಿನೆಸಳಿಗೆ ಹಾಕಿ ಗೋಣು ಮುರಿಯುವ ಕಲೆ ಗೊತ್ತಿರಬೇಕು ಅಂತವನು ಮಾತ್ರ ಒಳ್ಳೆಯ ಪೈಲ್ವಾನ. ಕುಮ್ಮೂರಿನ ಕಾಂತ ಸೀಮೆಯಲ್ಲಿ ಹಲುವು ಗೂಳಿಗಳ ಸೊಕ್ಕಡಗಿಸಿ ವಾಹಿನಿಯಾಗಿದ್ದ.

ಕುಸ್ಲೆವ್ವಳಿಗೆ ತನ್ನ ಮಗ ಜಾತ್ರಿಲಿ ಗೆದ್ದು ತರುತ್ತಿದ್ದ ಬೆಳ್ಳಿ ಬಂಗಾರದ ಪದಕಗಳನ್ನು ನೋಡಿದಾಗ ಹೆಮ್ಮೆ ಅನ್ನಿಸಿ ಹಿರಿ ಹಿರಿ ಹಿಗ್ಗುತ್ತಿದ್ದಳು. ತಕ್ಕ ಮಟ್ಟಿಗೆ ಅವುಗಳು ಜೀವನಕ್ಕೆ ದಾರಿಯಾಗಿದ್ದವು. ಮಾಸಣಗಿ ಹಬ್ಬದಲ್ಲಿ ಆ ಪೈಲ್ವಾನ ಸತ್ತ. ಬಾಸೂರು ಹಬ್ಬದಲ್ಲಿ ಈ ಪೈಲ್ವಾನಗೆ ಹೋರಿ ತಿವಿತು ಅನ್ನೋ ಸುದ್ದಿ ಕೇಳಿದಾಗ ಬೆಚ್ಚಿಬೀಳುತಿದ್ದಳು. ‘ಕೇಸಕ್ಕಿ ನಿನ್ನ ಮಗ ದೊಡ್ಡ ದೊಡ್ಡ ಹೋರಿಗಳ ಬಗ್ಗಿಸ್ತಾನಂತೆ ಒಂದೋಗಿ ಒಂದು ಮಾಡ್ಕೇಂದ್ರ ಏನು ಅಂತೀನಿ ಬ್ಯಾಡ ಅಂತೇಳ್ಬಾರದ’ ಬಾಜುಮನಿ ಸೀತವ್ವ ಹೇಳಿದಾಗ ಒಳಗೊಳಗೆ ದಸಗುಟ್ಟುತ್ತಿದ್ದಳು.

ಒಂದು ಸಲ ‘ನೀನು ಹೋಗೋದೆ ಕರೆವು ಆದ್ರೆ ನನ್ನ ದಾಟಿಗೆಂದು ಹೋಗು’ ಅಂತ ಹೊಸಲಿನ ಮ್ಯಾಲೆ ಕುಂತು ಬಿಟ್ಟಿದ್ದಳು. ಇದೊಳ್ಳೆ ಪಜೀತಿ ಅಮ್ರಿಕೆಂತಲ್ಲ ‘ಆತು ಇನ್ನಮ್ಯಾಕ ಹಬ್ಬ ಮಾಡೋಕೆ ಹೋಗಲ್ಲ ಬಿಡು’ ಎಂದಾಗ ‘ಹಣುಮಪ್ಪ ಈಗ್ಲಾದ್ರೂ ಒಳ್ಳೆ ಬುದ್ದಿ ಕೊಟ್ಟೆಲ್ಲ’ ಅಂತ ದೇವರಿಗೆ ಕೈ ಮುಗಿದ ಕುಸ್ಲೆವ್ವನ ಹೊಟ್ಟೆ ತಣ್ಣಗಿತ್ತು. ಅವನ ಗೆಣೆಕಾರರು ಅಲ್ಲಿ ಹಬ್ಬ ಇಲ್ಲಿ ಜಾತ್ರಿ ಎಂದಾಗ ಕಾಂತನ ಕಾಲುಗಳು ಕಡಿಯುತ್ತಿದ್ದವು. ಕಾಂತ ಹಿಂಗೇ ಒಂದೆರಡು ತಿಂಗಳು ತಳ್ಳಿದ. ಯಾವ ಹಬ್ಬದ ಸುದ್ದಿಗೆ ಹೋಗಲಿಲ್ಲ. ಸೇರಿದ ಪರಿಷೆ ‘ಯಾಕೋ ಹಬ್ಬ ಸಪ್ಪಗೈತಿ ಪಳಗಿದ ಪೈಲ್ವಾನರಿಲ್ಲ. ಕಾಂತನೆಲ್ಲಿ ಕಾಣೋದಿಲ್ಲ... ಅವ್ನಿದ್ದಿದ್ರೆ ಮೂರ್ನಾಕು ಹೋರಿ ಸೊಕ್ಕು ಮುರಿತಿದ್ದ ನೋಡು’ ಅಂತ ಮಾತಾಡಿಕೊಳ್ಳುತ್ತಿದ್ದರು. ಹಬ್ಬ ನೆಟ್ಟವರು ಸುಖಾ ಸುಮ್ಮನೆ ದೊಡ್ಡ ಬಹುಮಾನ ಕೊಡಬೇಕಲ್ಲ ಅಂತ ಕೈ ಹಿಚಿಗಿಕೊಳ್ಳುತಿದ್ದರು. ಕಾಂತನಿಲ್ಲದ ಹಬ್ಬವನ್ನು ಅವರ್ಯಾರು ಇಷ್ಟಪಡ್ತಿದ್ದಿಲ್ಲ. ಅಂದಿನಿಂದ ಕುಮ್ಮೂರಿಗೆ ಬಂದು ಕಾಂತನಿಗೆ ವೀಳ್ಯ ಕೊಡುತ್ತಿದ್ದರು. ‘ಹಬ್ಬ ಜಾತ್ರಿ ಅಂತ ನನ್ನ ಮಗೀನ ತೇಲಿ ಕೆಡ್ಸಬ್ಯಾಡ್ರಿ ಹೊಕ್ಕೀರಿಲ್ಲ’ ಅಂತ ಕುಸ್ಲೆವ್ವ ಜಾಡಿಸುತ್ತಿದ್ದಳು.

ಗಂಡ ತೀರಿಕೆಂದ ಮೇಲೆ ಕೂಲಿಮಾಡಿ ಜೀವನ ಜೀಕುತಿದ್ದ ಕುಸ್ಲೇವ್ವಳಿಗೆ ಬ್ಯಾಸಗಿಯಲ್ಲಿ ಎಲ್ಲೂ ಕೆಲಸ ದಕ್ಕದೆ ಕೈ ಕಟ್ಟಿದಂಗಾಗಿ ಕಾಳಿಲ್ಲದ ಹಗೇವು ದಬಾಸಿ ಮುಚ್ಚಿದಂಗೆ ಸಂಕಟವಾಗುತ್ತಿತ್ತು. ಬಾಜುಮನಿ ಸೀತವ್ವ ‘ಬ್ಯಾಡಗಿ ಮೆಣಸಿಕಾಯಿ ಮಾರ್ಕೆಟನ್ಯಾಗ ತೊಟ್ಟು ಮುರಿಯೋಕೆ ಹೋತೀವಿ ನೀನು ಬರ್ತಿಯೇನು ಡಬ್ಬಗಂಟಲೇ ಲೆಕ್ಕಾ, ಅವ್ರೆ ಕಠಮಾದಲ್ಲಿ ಕರ್ಕೊಂಡೋಗಿ ವಳ್ಳಿ ಬಿಡ್ತಾರೆ’ ಎಂದು ಕರೆದಾಗ ಕುಸ್ಲೆವ್ವಳಿಗೆ ಹೋಗದೆ ಗತಿಯಿರಲಿಲ್ಲ. ಮೊದಮೊದಲು ಕುಸ್ಲೇವ್ವಳಿಗೆ ಸರಿಯಾಗಿ ತೊಟ್ಟು ಮುರಿಯಲು ಬರುತ್ತಿರಲಿಲ್ಲ. ಕಡಿಮೆ ಕೂಲಿ ಸಿಗುತಿತ್ತು. ದಿನವೊಂದಕ್ಕೆ ಹತ್ತಿಪ್ಪತ್ತು ಡಬ್ಬಗಳನ್ನು ಬಿಡಿಸಾಕತ್ತಿದ ಮ್ಯಾಲ ಕೈಯಾಗ ರೊಕ್ಕಾಡಕಚ್ಚಿದವು. ಇದರಿಂದ ತುಸು ಅನುಕೂಲವಾಗಿ ಕಂಡ ಕಂಡವರ ಕೈಯೋಡ್ಡೋದು ತಪ್ಪಿತು. ಆದ್ರೆ ಮೆಣಸಿನಕಾಯಿಗೆ ಕೈ ಹಾಕಿದ್ರ ಕೆಂಡ ಮುಟ್ಟಿದಂಗಾಗುತಿತ್ತು. ಅಷ್ಟಲ್ಲದೇ ನೆತ್ತಿಮ್ಯಾಲೆ ಬರೆ ಹಾಕುವ ಬಿಸಿಲು, ಮೆಣಸಿನಕಾಯಿ ಘಾಟು ಕುಸ್ಲೆವ್ವಳನ್ನು ಇನ್ನಿಲ್ಲದಂತೆ ಹಣ್ಣು ಮಾಡುತ್ತಿದ್ದವು. ಸಂಜೆಯೊತ್ತಿಗೆ ಅವಳ ಮುಖ ಗುಂಟೂರು ಮೆಣಸಿನಕಾಯಿ ತರ ಕೆಂಪೇರಿ ಕಣ್ಣು ಮೂಗು ಬಾಯಿ ಬುಗ್ಗು ಬುಗ್ಗು ಉರಿಯುತ್ತಿದ್ದವು. ರಾತ್ರಿ ಬಂದು ಮೈಕೈಗೆ ಕೊಬ್ಬರಿ ಎಣ್ಣಿ ಸವರಿಕೊಂಡು ಮಲಗುತಿದ್ದಳಾದರು ನಿದ್ದೆ ಸುಳಿಯುತ್ತಿದ್ದಿಲ್ಲ. ಬೆಳಗಾಗುತ್ತಲೇ ಕಣ್ಣುಗಳು ಊದಿಕೊಂಡು ಗುಪ್ಪೆಯಾಗಿರುತ್ತಿದ್ದವು. ಇತ್ತೀಚಿಗೆ ಕೇಸಕ್ಕಿ ಕುಸ್ಲೆವ್ವಳಿಗೆ ಮೆಣಸಿನಕಾಯಿ ಘಾಟಿಗೆ ದಸುಗತ್ತಿ ಕೆಮ್ಮಿನೊಂದಿಗೆ ದಮ್ಮು ಸುರುವಿಟ್ಟಿಕೊಂಡಿತು.

*******

ಕುಸ್ಲೆವ್ವಳಿಗೆ ‘ಕೇಸಕ್ಕಿ’ ಅನ್ನುವ ಅಡ್ಡೆಸರು ಬರಲು ಅವಳು ಮಾಡುವ ಅನ್ನ ಕಾರಣವಾಗಿತ್ತಂತೆ. ಗಂಡ ಸತ್ತಾಗ ಅವಳು ಧಿಮ್ಮನ್ಸಿ. ದುಡಿಯುವ ಗಂಡ ಹೋರಿ ಬಗ್ಗಿಸಲು ಹೋಗಿ ಹೆಣವಾಗಿದ್ದ. ತಿನ್ನೋ ಕೂಳಿಗೂ ದಿಕ್ಕಿಲ್ಲದಾಗಿತ್ತು. ಊರು ಮುಂದಿನ ಜೋಗೇರ ಹಳ್ಳದ ಬಿದಿರುಪೇಳಿಯಲ್ಲಿ ಸುರಿದ ಕೇಸಕ್ಕಿ ಆಯ್ಕೆಬಂದು ಅನ್ನ ಕುಚ್ಚಿಕೊಂಡು ತಿಂತಿದ್ದಳು. ಬೇಗ ಕುಚ್ಚಿಬೀಳದ ಅರೆಬೆಂದ ಕೇಸಕ್ಕಿ ಅನ್ನ ತಿಂದು ಹೊಟ್ಟೆ ಮುಳ್ಳುಯಿಡಿದು ಬಿದ್ದು ಹೊಳ್ಯಾಡ್ತಿದ್ದಳು ಇವಳ ಕಷ್ಟ ನೋಡಿದ ಜನ ಮೊರಗಟ್ಟಲೆ ಅಕ್ಕಿ ತಂದು ಉಡಿ ತುಂಬಿದ್ರೆ ನಂಗೆ ಕೇಸಕ್ಕಿನೇ ಬೇಕು ಅಂತ ದುಂಬಾಲು ಬಿದ್ದಿದ್ದಳು. ಹುಳ್ಳಮಳ್ಳ ಆದ ಜನ ಬಸುರಿ ಬಯಕೆ ಇರಬೌದು ಅಂತ ಮುಸು ಮುಸು ನಕ್ಕು ಕುಸ್ಲೆವ್ವಳಿಗೆ ಅಂದಿನಿಂದ ‘ಕೇಸಕ್ಕಿ’ ಅನ್ನೋ ಅಡ್ಡೆಸರು ಇಟ್ಟಿದ್ದರು.

ಕುಸ್ಲೆವ್ವನ ಗಂಡ ಬಿದ್ದಾಡೆಪ್ಪ ಹತ್ತು ವರ್ಷದಿಂದ ತಡಸದ ಪುಟ್ಟಾಲಯ್ಯನ ಮನೆಯಲ್ಲಿ ಕೆಲಸಕ್ಕಿದ್ದ. ಪುಟ್ಟಾಲಯ್ಯ ಪಂಚ್ಯಾತಿ ಎಲೆಕ್ಷಣ್ಣಿನ್ಯಾಗ ಗೆದ್ದು ಕೊನೆ ಅವಧಿಗೆ ಚೇರ್ಮನ್ನು ಆಗಿದ್ದವನು. ಪಂಚ್ಯಾತಿ ರುಚಿಯನ್ನು ಗಡದ್ದಾಗೆ ಉಂಡಿದ್ದ ಅಂಗಾಗಿ ಮೈಯಲ್ಲಿ ಸೊಕ್ಕು ಸೆಡವು ಮೂಡಿತ್ತು. ಹೆಚ್ಚಿಗಿ ದರ್ಪ ಬಂದು ಮೀಸೆಯೂ ಚಿಗುರಿತ್ತು. ಆಗಾಗ ಕೊಬ್ಬರಿ ಎಣ್ಣೆ ಸವರಿ ತಿರುವುತಿದ್ದ. ಹೊಲ ಮನಿ ಆಸ್ತಿ ಜೊತೆಗೆ ಅಧಿಕಾರ ಸಿಕ್ಕಾಗ ಸುಮ್ಮನೆ ಕೂತರೆ ಚೇರ್ಮನ್ನಕಿಗೆ ಅವಮಾನವಲ್ಲವೇ? ತಡಸ ಕುಮ್ಮೂರಿನ ಪಕ್ಕದೂರು. ಕುಮ್ಮೂರಿನ ಜನ ಕೂಲಿ ಕೆಲಸಕ್ಕೆಂದು ಪುಟ್ಟಾಲಯ್ಯನ ಮನೆ ಮುಂದೆ ನೆರಿತಿದ್ರು. ದಿನ ಬೆಳಕರೆದ್ರೆ ಮನೆ ಮುಂದೆ ನೆರೆಯೋ ಜನಗಳ ಕಂಡು ಚೇರ್ಮನ್ನರು ಒಳಗೊಳಗೆ ಹಿಗ್ಗುತಿದ್ದರು. ಏನಿಲ್ಲಾಂದ್ರೂ ಹತ್ತತ್ರ ಹತ್ತಿಪ್ಪತ್ತು ಮಂದಿ ಕೆಲಸಕ್ಕೆ ಬಂದು ನಿಲ್ಲುತ್ತಿದ್ರು. ಕಳೆ ಕೀಳೋ, ಹತ್ತಿ ಬಿಡಿಸೋ, ತೆನಿ ಮುರಿಯೋ ಕಾಲಕ್ಕೆ ಹೆಚ್ಚೆ ಅಂದ್ರು ತಪ್ಪಿಲ್ಲ. ಬಿದ್ದಾಡೆಪ್ಪನೆ ಅವರಿಗೆಲ್ಲ ಮೇಸ್ತ್ರಿ ಅವರಿಗೆ ಅಡಕಿ ಹೊಗೆಸೊಪ್ಪು, ಬೀಡಿ ತಂಬಾಕು, ಗುಟ್ಕಾ, ಕೆಲಸ ಕಣ್ಣಿ ಹರಿದಮ್ಯಾಲೆ ಪಾಕೀಟು ವ್ಯವಸ್ಥೆ ಮಾಡ್ತಿದ್ದ. ಒಟ್ಟಿನಲ್ಲಿ ಹೊಲ ಗದ್ದೆ ತೋಟಗಳು ತಟುಗು ಬೇಪಾರಿಯಾಗದಂಗೆ ಕಾಯಕೆಂಡಿದ್ದ. ಪುಟ್ಟಾಲಯ್ಯನಿಗೆ ಬಿದ್ದಾಡಿ ಮ್ಯಾಲ ಬಾಳ ನಂಬಿಕೆ ಇವನನ್ನು ಮನೆಯ ಮಗನಂತೆ ಕಾಣುತ್ತಿದ್ದರು. ಬಿದ್ದಾಡೆಪ್ಪನನ್ನು ಅವರು ಬಿದ್ದಾಡಿ ಅಂತೇಲೆ ಕರೀತಿದ್ರು.

ಚೇರ್ಮನ್ನರ ಹಟ್ಟಿಯಲ್ಲಿ ದನಕರುಗಳು ತುಂಬಿ ಹೋಗಿದ್ದವು. ದನ ಕಾಯೋಕೆ ಕುಮ್ಮೂರಿಂದ ಕುಸ್ಲಿ ಬರ್ತಿದ್ಲು. ಇಂಡೋ ದನಗಳ ಚಾಕ್ರಿ ಅವಳದು. ಬೆಳೆಗ್ಗೆ ಸಗಣಿ ಗುಡುಸಿ ತಿಪ್ಪೆ ಗಟ್ಟಿ. ಹಾಲು ಕರೆದಮೇಲೆ ದನಗಳನ್ನು ಅಡವಿಗೆ ಹೊಡಿತಿದ್ದಳು. ಇಡೀದಿನ ಕಾಯ್ದು ಸಂಜೆ ಹಟ್ಟೀಲಿ ಕಟ್ಟಿದ್ರೆ ಅವಳು ಕೆಲಸ ಮುಗಿತು. ರಾತ್ರಿ ಅಲ್ಲೆ ರಾಗಿ ಮುದ್ದೆ ಉಂಡು, ಕೂಗಿದ್ರೆ ಕೇಳೋ ದೂರದಲ್ಲಿರುವ ತನ್ನೂರಿಗೆ ಹೋಗ್ತಿದ್ದಳು. ಬಿದ್ದಾಡೆಪ್ಪ ಹಟ್ಟಿ ಕಡಿಗೂ ಒಂದು ಕಣ್ಣು ನೆಟ್ಟಿರುತ್ತಿದ್ದ. ಅವುಗಳಿಗೆ ಮೇವು ಕತ್ತರಿಸೋದು, ವ್ಯಾಳೇ ಸರಿಯಾಗಿ ನೀರು ತೋರಿಸೋದು, ಕಾಲುಬಂದಾಗ ಲತೀಫನಿಗೆ ಹೇಳಿ ಹಲ್ಲಿ ಕಟ್ಟಿಸೋದು. ಹುಸೇನಿ ಕರೆಸಿ ಕೊಂಬು ಎರುಸೋದು ಹೇಳ್ಸಿಕೇಳದಂಗ ಮಾಡ್ತಿದ್ದ. ಆ ವೇಳೆಯಲ್ಲಿ ಕಣ್ಣಿಗೆ ಬಿದ್ದವಳೇ ಈ ಕುಸ್ಲಿ. ಅದ್ಯಾವಾಗ ಕುಸ್ಲಿ ಜೊತೆ ಸಂಬಂಧ ಕುದ್ರಿಸೆಗೆಂಡಿದ್ದ ಅಂತ ಪುಟ್ಟಾಲಯ್ಯನಿಗೂ ಗೊತ್ತಿರಲಿಲ್ಲ. ಅಂತೂ ಇಬ್ಬರನ್ನು ಗಂಟುಹಾಕಿ ಕೈ ಬಿಟ್ಟಿದ್ದ.

ಒಮ್ಮೆ ಎತ್ತು ತರಲು ಕೆಂಗೊಂಡ ಜಾತ್ರೆಗೆ ಹೋಗಿದ್ದಾಗ ಪುಟ್ಟಾಲಯ್ಯನ ಮನಸಿಗೆ ಬಂದಿದ್ದ ಎತ್ತಿನ ಸುಳಿ ಸರಿಯಿರಲಿಲ್ಲ. ಅದನ್ನ ಬಿದ್ದಾಡೆಪ್ಪ ಪತ್ತೆಹಚ್ಚಿದ್ದ. ಹಿಂದ ಮುಂದ ಮೇಲೆ ಕೆಳಗೆ ನೋಡಿ. ಕೋಡು ಸುದ್ದು ಅದವೋ ಇಲ್ಲೋ... ಕೊಳಗ ನೀಟು ಐತಿಲ್ಲೋ... ಸುಳಿ ಹ್ಯಾಂಗೈತಿಯಂತ ಪರೀಕ್ಷೆ ಮಾಡಿ ‘ಅಯ್ಯಾ ಇದು ಸುಳಿಕೆಟ್ಟೇತಿ ಬ್ಯಾಡ. ಚಾಳಿನೂ ಗತಿಯಿಲ್ಲ ನಮ್ಗೆ ಸೇರಿಬರೋಲ್ಲ. ಕಮತಕ್ಕೂ ಹತ್ತಲ್ಲ ಹಬ್ಬಕ್ಕೂ ಬೀಳಲ್ಲ’ ಎಂದಿದ್ದ. ಬೇರೆ ದನ ನೋಡಲು ಹೇಳಿದ್ದರು ದೊಡ್ಡ ಬೆಲೆಯ ಎತ್ತನ್ನು ನೋಡಿ ಹೊಂದ್ಸಿಗೆಂದು ಖರೀದಿ ಮಾಡಿದ್ದರು. ಇವನ ಚಾಲಾಕಿತನ ಮೆಚ್ಚಿ ಖುಷಿಯಾಗಿ ಮಂಡಕ್ಕಿ ಮಿರ್ಚಿ ತಿನ್ನಿಸಿ ಹೊಡ್ಕೊಂಡು ಬರೋಕೆ ಹೇಳಿದ್ದರು. ರಾತ್ರಿ ಹುಳ್ಳಿನುಚ್ಚು, ಬೆಳೆಗ್ಗೆ ಶೇಂಗಾ ಹೊಟ್ಟು ನೀಡುತ್ತಿದ್ದ. ಬಿದ್ದಾಡಿ ದೇಖರಿಕೆಯಲ್ಲಿ ನೊಣ ಕುಂತ್ರೆ ಜಾರಬೇಕು ಅಂಗೆ ನೆಣ ತುಂಬಿಕೆಂದಿತ್ತು. ಮುದ್ದಿನಿಂದ ಕಾಳಿಂಗ ಅಂತಾ ಹೆಸರಿಟ್ಟಿದ್ದ.

*****

ಬೆಳ್ಳಬೆಳ್ಳೆಗ್ಗೆನೆ ಮೂರ್ನಾಕು ಕೆಲಸದಾಳುಗಳು ಕಾಳಿಂಗನನ್ನು ಸಿಂಗರಿಸುತ್ತಿದ್ದರು. ಬಿಸಿಲು ನಿಧಾನವಾಗಿ ಕಾವೇರುತ್ತಿತ್ತು. ಕಟಾಂಜನದ ಮೂಲೆಯಲ್ಲಿ ಬೆಕ್ಕೊಂದು ಮುಖ ತೊಳೆಯುತ್ತಿತ್ತು. ಬಂಡಿಜಾಡಿನ ಪಕ್ಕದಲ್ಲಿ ನಾಯಿ ಕುನ್ನಿಗಳು ಬಿಸಿಲಿಗೆ ಮೈಯೋಡ್ಡಿದ್ದವು. ಚೇರ್ಮನ್ನರು ಲಿಂಗಪೂಜೆ ಮುಗಿಸಿಕೊಂಡು ಅಂಗಳಕ್ಕೆ ಬಂದರು. ‘ಕೊಬ್ಬರಿ ಅವಣಿಗೆ ಕಟ್ರಿ ಎತ್ತಿಗೆ ತ್ರಾಸು ಆಗ್ಬಾರದು. ಲೇ... ಪುಚ್ಚಲೆಡ್ಡಿ ಕೊಮ್ಮೆಣಸು ಬಿಗಿಯಾಗಿ ಕಟ್ಟು ಚುಂಗು ಯಾರಿಗೂ ಸಿಗ್ಬಾರದು. ಕೊಂಬಿನೆಸಳಿಗೆ ಹಳ್ಳೆಂಣಿ ಪಾಡಾಗಿ ಸವರ್ರಿ ಗಾವು ಸಿಗದಂಗೆ. ಕುಟ್ಟೀರಾ ನೀನು ತಟುಗು ಪೀಪಿಚೆಟ್ಟು ಎತ್ತಿರಿಸಿ ಕಟ್ಟು ನಮ್ಮ ಕಾಳಿಂಗ ಕಳ ಕಳ ಹೊಳೀಬೇಕು ನೋಡು’ ಎಂದು ಕಚ್ಚಿಪಂಚಿ ದಟ್ಟಿ ಎಡಗೈಲಿ ಹಿಡ್ಕೊಂಡು ಸಲಹೆ ನೀಡುತಿದ್ದರು. ಕಾಳಿಂಗ ಕರಿ ಎತ್ತು ಜಾತ್ರಿಲಿ ಕೊಂಡು ತಂದಿದ್ದಲ್ಲ ಮನ್ಯಾಗ ಹುಟ್ಟಿ ಬೆಳೆದಿತ್ತು. ಎಳೆಗರು ಇದ್ದಾಗ ಬಿದ್ದಾಡಿ ಮುದ್ದಿನಿಂದ ಸಾಕಿದ್ದ. ಕರ್ರಗೈತಿ ಅಂತ ಚೇರ್ಮನ್ನರು ಅಸಡ್ಡೆ ಮಾಡಿ ಹಾಲು ಬಿಡದಂಗ ಸೀಟಿ ಇಂಡೋಕೆ ಹೇಳುತ್ತಿದ್ದರು ಅಂಗಾಗಿ ಬೊಚ್ಚು ಮೊಲಿ ಚೀಪಿ ಚೀಪಿ ದೂಕಿದ್ರೆ ಬೀಳಂಗಿತ್ತು. ಹೊಟ್ಟೆ ದೊಕ್ಕೆತ್ತಿ ಆಗಾಗ ಬಂದು ಬಿದ್ದಾಡಿ ನೆಕ್ಕುತಿತ್ತು. ಹೊಟ್ಟೆ ಚುರ್ರೆಂದ ಬಿದ್ದಾಡಿ ಚೇರ್ಮನ್ನರಿಗೆ ಗೊತ್ತಿಲ್ಲದಂಗೆ ತಿನ್ನಾಕೆ ಹುಳ್ಳಿನುಚ್ಚು ಹಿಡುತಿದ್ದ. ಅವನ ಜ್ವಾಪಾನಕ್ಕೆ ಹಂಗೆ ನುಣ್ಣುಗಾಗಿತ್ತು. ಮುದ್ದಿನಿಂದ ಕಾಳಿಂಗ ಅಂತ ಹೆಸರಿಟ್ಟಿದ್ದ. ಬಲಿತಮ್ಯಾಲೆ ಕಮತಕ್ಕ ನಿಂತಿತ್ತು. ಹಬ್ಬ ಬಂದಾಗ ಕರಿ ಬಿಡೋ ಹೋರಿಗೆ ಅಗಸಿದಾರಿ ತೋರಿಸೋ ಕೆಲಸ ನಿಕ್ಕಿಯಾಗಿತ್ತು. ಬೋಳೆತ್ತು ಕಾಳಿಂಗ ಕಿಕ್ಕಿರಿದ ಜನ ಕಂಡು ಬೆದ್ರಿ ಓಟಕೀಳುತಿತ್ತು. ಇದನ್ನು ಕಂಡ ಪುಚಲೆಡ್ಡಿ ‘ಎಲಾ ಇವ್ನ ಹ್ಯಾಂಗ ಓಡತೈತಿ ಇದ್ನೇ ಬಿಟ್ರೆ ಚಲೋ ಹಬ್ಬ ಮಾಡತೈತಿ’ ಎಂದು ಸಾರು ಮಾಡಿದ್ದ. ಅವತ್ತಿಂದ ಕಾಳಿಂಗ ಯಾರು ಕೈಗೂ ದಕ್ಕದಾಗೆ ನುಗ್ಗುತಿತ್ತು. ಹಾನಗಲ್ಲಿನ್ಯಾಗ ಭಾರಿಹಬ್ಬ ಮಾಡಿ ಚೇರ್ಮನ್ನರಿಗೆ ಟ್ಯಾಕ್ರಿ ಗೆದ್ದು ಕೊಟ್ಟಿತ್ತು.
ಚೇರ್ಮನ್ನರು ಕಾಳಿಂಗನನ್ನು ಹೆಮ್ಮಿಯಿಂದ ನೋಡ್ತಿದ್ರು.

‘ಅಯ್ಯಾ ಅಂವ ಭಾರಿ ಪೈಲ್ವಾನ ಅದಾನ ನಮ್ಮ ಹೋರಿ ಇಡಿದು ನಮ್ಮ ಮರ್ಯಾದೆ ತೆಗಿತಾನ ಅವ್ನ ಹಿಂಗೇ ಬಿಟ್ರೆ ನಾವು ಗೆಲ್ಲೋದಿಲ್ಲ. ಏನಾರ ಮಾಡಿ ಅವ್ನ ಯಡೆಮುರಿ ಕಟ್ಟಬೇಕು’ ಅಂತ ಕೆಲಸದಾಳು ಪುಚಲೆಡ್ಡಿ ಹೇಳಿದ. ‘ನಾಕು ವರ್ಷಾತು ನಮ್ಮ ಕಾಳಿಂಗನ್ನ ಯಾರು ಕೈಲೂ ಬಗ್ಗಿಸೋಕಾಗಿಲ್ಲ ಇಲ್ಲಿತಂಕ ಒಂದು ಗಿಟುಗ ಕೊಬ್ಬರಿನೂ ಕೊಟ್ಟಿಲ್ಲ. ಇಂವ ಏನು ಮಾಡ್ಯಾನು ಮುಕ್ಳಾಗ ಕೊಂಬಾಕಿ ಎತ್ತಿ ಹೋಗಿತೇತಿ ನೋಡೋಂತ್ರಿ’ ಎಂದು ಮೀಸೆ ನೀವಿ ಉಕ್ಕುರುಸಿದರು.
‘ನಿಮ್ಗೆ ಗೊತ್ತಿಲ್ಲ ಅಯ್ಯಾ ಅಂವ ಅಜ್ಜಮಟ್ಟಿಗೆ ಡುಬ್ಬಕ್ಕೆ ಕೈ ಹಾಕಿ ಗೋಣು ಮುರಿತಾನ’ ಅಂದ ಕೂಡಲೇ ಚೇರ್ಮನ್ನರು ನಗು ಉಗುಳಿ ಕೆಕ್ಕರಿಸಿದರು.

‘ಯಾರ್ಲೆ ಅಂವ’
‘ಕಾಂತ ಅಯ್ಯಾ... ಅದೇ ನಮ್ಮ ಬಿದ್ದಾಡಿ ಮಗ’
‘ನಮ್ಮ ಬಿದ್ದಾಡಿ ಮಗನೇ...’ ಗಂಭೀರವಾದರು.
‘ನಮ್ಮ ಹೋರಿ ಸುದ್ದಿಗೆ ಬರೋಕೆ ಮುಕಳ್ಯಾಗ ಎಷ್ಟರ ಜಿಗುಟೈತಲೆ ಅವ್ನಿಗೆ. ಅವರಪ್ಪನಂಗೆ ಅಗಸಿ ಹೆಣ ಆಗಬೇಕಂತ ಮಾಡೇನೇನು? ಹೋರಿ ಸುದ್ದಿಗೆ ಬರಬ್ಯಾಡ ಅಂತೇಳು. ಕೇಳದಿದ್ರೆ ಅಖಾಡದಾಗ ಅವ್ನ ಆಟ ನೆಡಿದಂಗೆ ನೋಡ್ಕೊಳ್ರಿ’ ಎಂದು ಕುಟ್ಟೀರನನ್ನು ನೋಡಿದರು. ‘ಎತ್ತು ಬಿಟ್ಟು ಮದ್ಯಾನಕ್ಕೆ ಕುಡುದು ಬಿದ್ದಕಂಡ್ರಿ ಎಂದ್ರೆ ನೋಡು ಮತ್ತೆ’ ಎಂದು ಎಚ್ಚರಿಸಿ ಪುಚ್ಚಲೇಡ್ಡಿಗಿಷ್ಟು ಸಣ್ಣತಿಮ್ಮಗಿಷ್ಟು ಅಂತ ಲೆಕ್ಕಾಕಿ ಕುಟ್ಟೀರನ ಕೈಲಿ ದುಡ್ಡು ಕೊಟ್ಟು ಕಳಿಸಿದರು.
*****

ದೀಪಾವಳಿ ಮಾರನೇ ದಿನ ಬ್ಯಾಡಗಿಯಲ್ಲಿ ಕರಿಹಬ್ಬ ಜೋರು ನಡದಿತ್ತು. ಹೋರಿಗಳ ಪೈಲ್ವಾನರ ದೊಡ್ಡ ದೊಡ್ಡ ಫ್ಲೆಕ್ಸುಗಳು ತೆಲೆಯೆತ್ತಿದ್ದವು. ತೆರಹೇವಾರಿ ಕಮಾನುಗಳಿಂದ ಸಾರುವೆ ಕಟ್ಟಿದ ಅಖಾಡ ಸಿದ್ಧವಾಗಿತ್ತು. ಕುಲಾವಿ ಪೀಪಿಚಟ್ಟು ಕಟ್ಟಿದ ಬಲೂನುಗಳು ಬಣ್ಣದ ಹೊಳೆ ಹರಿಸಿದ್ದವು. ಅಖಾಡದ ಇಕ್ಕೆಲಗಳಲ್ಲಿ ನೆರದಿದ್ದ ಜನಗಳು ಹಬ್ಬ ಕಣ್ಣುತುಂಬಿಕೊಳ್ಳಲು ಕಾತರಿಸುತ್ತಿದ್ದರು. ತೆಲೆಗೆ ಸ್ಕಾರ್ಫ್ ಸುತ್ತಿ, ಕಾಲಿಗೆ ಶೂ ಹಾಕಿ ಬಣ್ಣದ ಪೋಷಾಕು ಧರಿಸಿದ ನೂರಾರು ಪೈಲ್ವಾನರು ಸಜ್ಜಾಗಿದ್ದರು. ಏರು ಬಿಸಿಲು ಹಬ್ಬದ ಕಾವು ಹೆಚ್ಚಿಸಿತ್ತು. ಅಲ್ಲಲ್ಲಿ ಕಟ್ಟಿದ ದ್ವನಿವರ್ಧಕಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದವು. ಕಾಂತ ಅಖಾಡದಲ್ಲಿದ್ದ. ಅಗಸಿಬಾಗಿಲು ತೆಗಿಯುತಿದ್ದಂತೆ ಹೋರಿಗಳು ಪೈಲ್ವಾನರನ್ನು ಸೀಳಿಕೊಂಡು ನುಗ್ಗುತ್ತಿದ್ದವು. ಕೆಲವರು ಕೈ ಹಾಕಿದರೆ ಕೆಲವರು ಕೈ ಚೆಲ್ಲುತಿದ್ದರು. ಇನ್ನು ಕೆಲವರು ನುಗ್ಗಿದ ರಭಸಕ್ಕೆ ಕೈ ಹಾಕಿ ಮಕಾಡೆ ಬೀಳುತಿದ್ದರು.

ಮೊದಲನೇ ಸುತ್ತಿನ ಮುಕ್ತಾಯಕ್ಕೆ ಯಾವ ಹೋರಿಯನ್ನು ಪೈಲ್ವಾನರು ಬಗ್ಗಿಸಲಾಗಲಿಲ್ಲ. ಎರಡನೇ ಸುತ್ತಿನಲ್ಲಿ ಅಗಸಿಬಾಗಿಲು ತೆಗಿಯುತ್ತಿದ್ದಂತೆ ಕಾಳಿಂಗ ಧಾವಿಸಿದ...

ಬ್ಯಾಡಗಿ ಕಡ್ಡಿಪುಡಿಯಂತೆ ಕಣ್ಣು ಕೆಂಪಗೆ ಮಾಡಿ, ಮೂಗಿನ ಒಳ್ಳಿ ಹಿಗ್ಗಿಸಿ, ಬಾಲ ಹುರಿಮಾಡಿ, ಚಿಗರಿಯಂತ ಕೋಡುಗಳನ್ನು ಆಕಡೆ ಈಕಡೆ ಬೀಸಿ ಮುಂಗಾಲಗಳನ್ನು ಕೆದರಿ, ಹಿಂಗಾಲುಗಳನ್ನು ಒಮ್ಮೆ ಭಲವಾಗಿ ಜಾಡಿಸಿ, ಮುಷ್..! ಮುಷ್..! ಎಂದು ಗೂಳಿ ಗುಟುರು ಹಾಕಿತು. ಇದ ನೋಡಿದ ಗೂಳಿಹೋರಿ ಮಾಲಕ ಪುಟ್ಟಾಲಯ್ಯನ ಮೀಸೆ ಸಂತಸದಿಂದ ಕುಣಿಯಿತು. ಅಗಸಿಯಲ್ಲಿ ಕೊಬ್ಬರಿ ಹರಿಯಲು ನಿಂತ ಪೈಲ್ವಾನರ ತೊಡೆಗಳು ಸಣ್ಣಗೆ ನಡುಗಿದವು. ‘ಲೇ... ಇದು ಭಲೇ ಹೋರಿ ಐತಿ. ಭಾರಿ ಹಬ್ಬ ಮಾಡತೈತಿ ಹುಷ್ಯಾರಿ ಇರಬೇಕಲೇ... ಇಪ್ಪಟ್ಟು ಕೈ ಹಾಕಿದ್ರ ಹುಸಿಹೋಗ್ಬಾರದು ನೋಡು’ ಎಂದು ಅಗಸಿಯಲ್ಲಿ ಕೊಬ್ಬರಿ ಕೀಳಲು ನಿಂತ ಕಾಂತ ಮತ್ತು ಮಾಂತ್ಯ ತಮ್ಮೊಳಗೆ ಮಾತಾಡಿಕೊಂಡರು. ಕಟ್ಟಿದ ಸಾರುಗಳಲ್ಲಿ ಗಿಚ್ಚಿಯಾಗಿದ್ದ ಜನಗಳು ತೇಲಿ ಚಿಟ್ಟುಗುಟ್ಟುವಂತೆ ಚೀರುತಿದ್ದರು. ಮದ್ಯಾಹ್ನದ ಬಿಸಿಲು ಕೆರಳಿ ಕೆಂಡವಾಗಿತ್ತು.

‘ಕಾಳಿಂಗ ಹೋರಿ.. ಬಂತಲೇ... ಬಂತು ಅಬ್ಬಬ್ಬಾ..! ನುಗ್ಗಿತು’ ಎಂದು ದ್ವನಿ ವರ್ಧಕ ಎಚ್ಚರಿಕೆ ನೀಡಿತು. ಕಾಂತ ರಣಬೇಟೆಗಾರನಂತೆ ಕಾಲು ಕೆದರಿ ನಿಂತಿದ್ದ. ನುಗ್ಗಿದ ಕಾಳಿಂಗನ ಮೇಲೆ ಒಮ್ಮಲೇ ಜಿಗಿದು ಡುಬ್ಬಕ್ಕೆ ಕೈ ಹಾಕಿ ಚೇಟ್ಟು ಹೊಡೆದ. ಚೇಟ್ಟು ಹೊಡೆದದ್ದೆ ತಡ ಕಾಳಿಂಗ ಮುಗ್ಗರಿಸಿ ಬಿತ್ತು. ಕಾಳಿಂಗನ ಮೇಲೇರೆಗಿದ ಕಾಂತ ಕೊಬ್ಬರಿ ಕಿತ್ತ. ನೆರೆದ ಜನ ಹೋ... ಎಂಬ ಉದ್ಘಾರಾದೊಂದಿಗೆ ಸಿಳ್ಳೆಹಾಕಿ ಚಪ್ಪಾಳೆ ಹೊಡೆದರು. ಪುಟ್ಟಾಲಯ್ಯನ ಮುಖ ಕರಿಬಡಿಯಿತು. ಮುಖ ಕಿವಿಚಿ ಪುಚ್ಚೆಲೆಡ್ಡಿಯೊನ್ನೊಮ್ಮೆ ನೋಡಿದ. ಕುಟ್ಟೀರ ಪುಚ್ಚೆಲೆಡ್ಡಿ ಭಯಕ್ಕೆ ಬಿದ್ದರು. ಕುಟ್ಟೀರನ ಕಣ್ಣುಗಳು ಸರಕ್ಕನೆ ಮಾತಾಡಿದವು, ಕೂಡಲೇ ನಾಕರು ಕೆಲಸಾದಳುಗಳು ಕೊಬ್ಬರಿ ಹರಿಯುವ ಗದ್ದಲಕ್ಕೆ ಗುಮ್ರಿಯಾಕಿದರು. ಅದರಲೊಬ್ಬ ಕಾಂತನ ಹೊಟ್ಟೆಯನ್ನು ಚೂರಿಯಿಂದ ಭಲವಾಗಿ ಹಿರಿದನು. ಅಖಾಡ ಒಮ್ಮಿಂದೊಮ್ಮೆಲೆ ಮೂಕವಾಯಿತು. ಯಾರು..! ಯಾರು..! ಏನಾತು ಎನ್ನುವುದರೊಳಗೆ ಅಗಸಿಯ ಹುಡಿ ಕಾಂತನ ರಕ್ತವನ್ನು ಕುಡಿಯತೋಡಗಿತು. ಕುಸ್ಲೇವ್ವ ಹಚ್ಚಿಟ್ಟಿದ್ದ ದೀಪಾವಳಿ ದೀಪ ಪಕ್ಕನೆ ಆರಿತು.
****

ಪದಗಳ ಅರ್ಥ :
ಕರಿಹಬ್ಬ : ದೀಪಾವಳಿಯ ಮಾರನೇ ದಿನ ಹೋರಿ ಬೆದರಿಸುವ ಹಬ್ಬ
ಅಗಸಿ : ಹೋರಿಗಳು ನುಗ್ಗುವ ಬೀದಿ.
ಪೈಲ್ವಾನರು : ಹೋರಿಗಳನ್ನು ಬಗ್ಗಿಸುವ ಪಳಗಿದ ಹುಡುಗರು.
ಅಖಾಡ : ಪೈಲ್ವಾನರು ಹೋರಿ ಬಗ್ಗಿಸಲು ನಿಲ್ಲುವ ಜಾಗ.
ಸಾರು : ರೂಢಿ, ಅಭ್ಯಾಸ,
ಸಾರುವೆ : ಬಿದಿರಿನ ಬೊಂಬಿನಿಂದ ಕಟ್ಟಿದ ತಡಿಕೆ, ತಡೆಗೋಡೆ.
ಕೊಬ್ಬರಿ ಹಾರ : ಕೊಬ್ಬರಿ ಗಿಟುಗಗಳನ್ನು ಪೋಣಿಸಿ ಮಾಡಿದ ಹಾರ. ಇದನ್ನು ಹೋರಿಯ ಕೊರಳಿಗೆ ಕಟ್ಟಿರುತ್ತಾರೆ. ಈ ಹಾರದಲ್ಲಿ ಒಂದು ಗಿಟುಗವನ್ನು ಕಿತ್ತರೂ ಹೋರಿ ಸೋತಂತೆ.
ಪೀಪಿಚಟ್ಟು : ಹೋರಿಗಳ ಅಲಂಕಾರ ಮಾಡಲು ಕಟ್ಟಿದ ಬಲೂನ್ ಗಳ ಚಟ್ಟು. ಇದು ಐದರಿಂದ ಹತ್ತು ಕೆಜಿ ತೂಕವಿರುತ್ತದೆ ಮತ್ತು ಹದಿನೈದರಿಂದ ಇಪ್ಪತ್ತು ಅಡಿ ಎತ್ತರವಿರುತ್ತದೆ. ಇದನ್ನು ಹೋರಿಯ ಕೊಂಬಿಗೆ ಕಟ್ಟಿರುತ್ತಾರೆ.
ಕೊಮ್ಮೆಣಸು : ಕೊಂಬಿಗೆ ಹಾಕುವ ಅಲಂಕಾರಿಕ ವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT