ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಇಲಾಖೆಗೆ ದೀಪದ ಕೆಳಗಿನ ಕತ್ತಲಿನ ಸ್ಥಿತಿ!

Last Updated 7 ಜೂನ್ 2018, 20:08 IST
ಅಕ್ಷರ ಗಾತ್ರ

ದೇಶದಲ್ಲಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಪಂಕ್ತಿಯಲ್ಲಿದೆ. ನಗರೀಕರಣ, ಕೃಷಿ ವಿಸ್ತರಣೆ ಮತ್ತು ಔದ್ಯಮೀಕರಣದಿಂದಾಗಿ ವಿದ್ಯುತ್‌ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆ ರಾಜ್ಯದಲ್ಲಿ ಆಗದೇ ಇರುವುದರಿಂದ ಪ್ರತಿ ವರ್ಷ ಬೇಸಿಗೆ ಹತ್ತಿರವಾಗುತ್ತಿದ್ದಂತೆ ವಿದ್ಯುತ್‌ ಖರೀದಿ ಮಾಡಲೇಬೇಕಾದ ಸ್ಥಿತಿ  ನಿರ್ಮಾಣವಾಗುತ್ತಿದೆ. ವಿದ್ಯುತ್‌ ಖರೀದಿಯ ದರ ನಿಗದಿಯಲ್ಲೇ ಅವ್ಯವಹಾರ ನಡೆಯುತ್ತಿದೆ ಎಂಬ ಕೂಗು ಕಳೆದ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ.

ವಿದ್ಯುತ್‌ ಕೊರತೆ ಮತ್ತು ಅದರ ಸುತ್ತಲಿನ ಆಗುಹೋಗುಗಳ ಬಗ್ಗೆ 2014 ರಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಬಿಸಿ– ಬಿಸಿ ಚರ್ಚೆ ನಡೆಯಿತು. ಮುಖ್ಯವಾಗಿ, ವಿದ್ಯುತ್‌ ಖರೀದಿ, ದರ ನಿಗದಿ, ಖರೀದಿ ಪ್ರಮಾಣದಲ್ಲಿ ದಿಢೀರ್‌ ಏರಿಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ನಷ್ಟದ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸುವ ತೀರ್ಮಾನಕ್ಕೂ ಬರಲಾಯಿತು. ಸದನ ಸಮಿತಿಯು 2004 ರಿಂದ 2014 ರವರೆಗಿನ ಅವಧಿಯಲ್ಲಿ ಆದ ವಿದ್ಯುತ್‌ ಖರೀದಿ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ನೀಡಿತು. ರಾಜ್ಯದ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಕುಸಿತದ ಕಾರಣ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿತು.

ವಿದ್ಯುತ್‌ ಖರೀದಿಯಲ್ಲಿ ಅವ್ಯವಹಾರಕ್ಕೆ ಅವಕಾಶ ಇರುವಂತೆ, ಕಲ್ಲಿದ್ದಲು ಸಾಗಣೆ ಮತ್ತು ಬೂದಿ ಮಿಶ್ರಿತ ಕಲ್ಲಿದ್ದಲು ಸ್ವಚ್ಛಗೊಳಿಸುವುದರಲ್ಲೂ ಅಕ್ರಮ ನಡೆದಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ ಪತ್ತೆ ಮಾಡಿತ್ತು. ಕಲ್ಲಿದ್ದಲಿಗೆ ಅಂಟಿದ ಬೂದಿಯನ್ನು ತೊಳೆದು ಸ್ವಚ್ಛಗೊಳಿಸುವುದಕ್ಕೇ ನೂರಾರು ಕೋಟಿ ವೆಚ್ಚ ಮಾಡಲಾಗಿತ್ತು. ಅದಕ್ಕೊಂದು ಉದಾಹರಣೆ ಹೀಗಿದೆ–  ಆರ್.ಟಿ.ಪಿ.ಎಸ್. ನಲ್ಲಿ ವಿದ್ಯುತ್ ಉತ್ಪಾದನೆ ಸುಧಾರಿಸಲು ತೊಳೆದ ಕಲ್ಲಿದ್ದಲ್ಲನ್ನು ಬಳಸಲು ಕೈಗೊಂಡ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಒಟ್ಟು ₹ 1590.31ಕೋಟಿ ನಷ್ಟ ಉಂಟಾಗಿತ್ತು. ಈ ಸಂಬಂಧ ಸಿಂಗರೇಣಿ ಕೋಲರಿಸ್, ಮಹಾನದಿ ಕೋಲ್ಸ್ ಫೀಲ್ಡ್ ಹಾಗೂ ವೆಸ್ಟರ್ನ್ ಕೋಲ್ ಫೀಲ್ಡ್ ಕಂಪೆನಿಗಳಿಂದ ಕಲ್ಲಿದ್ದಲು ಖರೀದಿಸಿ, ಖರೀದಿಸಿದ ಕಲ್ಲಿದ್ದಲನ್ನು ತೊಳೆಯಲು ಗುತ್ತಿಗೆ ನೀಡಲಾಗಿತ್ತು. ಆದರೆ ಕಲ್ಲಿದ್ದಲು ತೊಳೆಯುವ ಯೋಜನೆಯಿಂದ ಉತ್ಪಾದಕತೆ ಸುಧಾರಣೆ ಆಗದೆ ಆರ್.ಟಿ.ಪಿ.ಎಸ್‍ಗೆ ಆರ್ಥಿಕವಾಗಿ ನಷ್ಟವಾಗಿತ್ತು.

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಯ ಪ್ರಕಾರ, 2004–05 ರಿಂದ 2013–14 ರ ಅವಧಿಯಲ್ಲಿ ಕಲ್ಲಿದ್ದಲು ಬಳಕೆ ಗಣನೀಯವಾಗಿ ಹೆಚ್ಚಾಗಿತ್ತು. ಶಾಖೋತ್ಪನ್ನ ಘಟಕಗಳಲ್ಲಿ ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಆಗಿತ್ತು. ಕೆಪಿಸಿಎಲ್‌ ಕಳಪೆ ಗುಣಮಟ್ಟದ ಕಲ್ಲಿದ್ದಿಲಿಗೆ (ಇ ಗ್ರೇಡ್‌) ಉನ್ನತ ಶ್ರೇಣಿಯ ಕಲ್ಲಿದ್ದಲು (ಡಿ ಗ್ರೇಡ್‌) ದರ ಪಾವತಿ ಮಾಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹424.25 ಕೋಟಿ ನಷ್ಟ ಆಗಿತ್ತು. ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಪ್ರಮುಖ ಕಚ್ಚಾ ವಸ್ತು. ಇಲ್ಲಿ ಕಳಪೆ ಗುಣಮಟ್ಟದ ಕಲ್ಲಿದ್ದಲು ಬಳಸುವುದರಿಂದ ವಿದ್ಯುತ್‌ ಉತ್ಪಾದನೆ ಪ್ರಮಾಣ ಕುಸಿಯುತ್ತದೆ. ಘಟಕದ ಯಂತ್ರೋಪಕರಣಗಳಿಗೂ ಹಾನಿ ಆಗುತ್ತದೆ. ವಿದ್ಯುತ್‌ ಉತ್ಪಾದನಾ ‘ಆರೋಗ್ಯ’ದ ದೃಷ್ಟಿಯಿಂದಲೂ ಉತ್ತಮ ಗುಣಮಟ್ಟದ ಕಲ್ಲಿದ್ದಲನ್ನೇ ಬಳಸಬೇಕು ಎಂದು ಲೆಕ್ಕ ಪರಿಶೋಧಕರ ವರದಿ ತಾಕೀತು ಮಾಡಿತ್ತು.

ವಿದ್ಯುತ್‌ ಖರೀದಿಯಲ್ಲೂ ಅಕ್ರಮ: ರಾಜ್ಯದ ವಿದ್ಯುತ್‌  ಉತ್ಪಾದನಾ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿತ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವುದಿಲ್ಲ. ಇದರಿಂದ, ವಿದ್ಯುತ್ ಅಭಾವ ರಾಜ್ಯವನ್ನು ಕಾಡುತ್ತಿದೆ. ಅಚ್ಚರಿಯಿಂದರೆ, ಕಡಿಮೆ ದರದಲ್ಲಿ ವಿದ್ಯುತ್‌ ಖರೀದಿಗೆ ಬದಲು ಖಾಸಗಿಯವರಿಂದ ದುಬಾರಿ ದರದಲ್ಲಿ ವಿದ್ಯುತ್‌ ಖರೀದಿ ಮಾಡುತ್ತಿರುವುದರಿಂದ ಬೊಕ್ಕಸಕ್ಕೆ ಹೊರೆ ಆಗುತ್ತಿದೆ.

2004–05 ರಿಂದ 2013–14 ರ ಅವಧಿಯಲ್ಲಿ ರಾಜ್ಯ ಸರ್ಕಾರ ಕೆಪಿಸಿಎಲ್‌, ಕೇಂದ್ರೀಯ ವಿದ್ಯುತ್‌ ಸ್ಥಾವರ ಮತ್ತು ಖಾಸಗಿ ಉತ್ಪಾದಕರಿಂದ ಒಟ್ಟು 4,49,725.20 ದಶಲಕ್ಷ ಯೂನಿಟ್‌ಗಳನ್ನು ₹1,11,125.8 ಕೋಟಿ ವೆಚ್ಚದಲ್ಲಿ ಖರೀದಿ ಮಾಡಿತ್ತು. ಪ್ರತಿ ಯೂನಿಟ್‌ನ ಸರಾಸರಿ ದರ  ₹ 2.47 ಆಗಿತ್ತು.

ಈ ಅವಧಿಯಲ್ಲಿ ಖಾಸಗಿ ಉತ್ಪಾದಕರಿಂದ ವಿದ್ಯುತ್‌ ಖರೀದಿ ಪ್ರಮಾಣ ಹೆಚ್ಚಾಗಿರುವುದು ಮತ್ತು ಇದಕ್ಕೆ ತಗುಲಿದ ವೆಚ್ಚದಲ್ಲೂ ಏರಿಕೆ ಆಗಿರುವುದನ್ನು ಸದನ ಸಮಿತಿ ಪತ್ತೆ ಮಾಡಿತ್ತು. ರಾಜ್ಯ ಸರ್ಕಾರ ಈ ಅವಧಿಯಲ್ಲಿ ಖಾಸಗಿ ಉತ್ಪಾದಕರಿಂದ 99,051.28 ದಶಲಕ್ಷ ಯೂನಿಟ್‌ ವಿದ್ಯುತ್‌ ಖರೀದಿ ಮಾಡಿತ್ತು. ಇದಕ್ಕೆ ತಗುಲಿದ ವೆಚ್ಚ ₹ 43,760.51 ಕೋಟಿ. ಸರ್ಕಾರ ಖಾಸಗಿ ಉತ್ಪಾದಕರಿಂದ 2005–06 ರಿಂದ 2009–10ರ ಅವಧಿಯಲ್ಲಿ ಪ್ರತಿ ಯೂನಿಟ್‌ಗೆ ಕ್ರಮವಾಗಿ ಸರಾಸರಿ ₹8.55, ₹11.51, ₹12.39, ₹8.66 ಹಾಗೂ ₹ 7.77 ರಂತೆ ಖರೀದಿಸಿತ್ತು. ಖಾಸಗಿ ಕಂಪನಿಗಳ ಜತೆ ಚೌಕಾಸಿ ಮಾಡಿ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿ ಮಾಡಿದ್ದರೆ ಸಾಕಷ್ಟು ಹಣ ಉಳಿಸಲು ಸಾಧ್ಯವಾಗುತ್ತಿತ್ತು.

ಕೇಂದ್ರ ವಿದ್ಯುತ್‌ ಸ್ಥಾವರಗಳಿಂದ ರಾಜ್ಯಕ್ಕೆ ಹಂಚಿಕೆಯಾಗಿದ್ದ ಪಾಲನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದರೆ, ಆರ್ಥಿಕ ನಷ್ಟ ತಪ್ಪಿಸಬಹುದಾಗಿತ್ತು. ಮುಖ್ಯವಾಗಿ ಕೈಗಾ, ಎನ್‌ಟಿಪಿಸಿ– ತಲಚೇರಿ, ಎಂಎಪಿಎಸ್‌ ಮತ್ತು ಎನ್‌ಟಿಪಿಸಿ–ವೆಲ್ಲೂರು ಘಟಕಗಳಿಂದ ಅತಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಖರೀದಿಸಲಾಗಿತ್ತು. ಕೇಂದ್ರ ಸ್ಥಾವರಗಳಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ ₹ 2.34 ರಂತೆ ವಿದ್ಯುತ್‌ ಸಿಗುತ್ತಿತ್ತು. 2004–05 ರಿಂದ 2013–14 ರವರೆಗೆ ರಾಜ್ಯ ಸರ್ಕಾರ ತನ್ನ ಪಾಲಿನ 3,844 ದಶಲಕ್ಷ ಯೂನಿಟ್‌ಗಳ ಖರೀದಿ ಮಾಡಲೇ ಇಲ್ಲ.

2004 ರಿಂದ 2014 ರವರೆಗಿನ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ಅಧಿಕಾರದಲ್ಲಿದ್ದವು. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ರೇವಣ್ಣ ಇಂಧನ ಸಚಿವರಾಗಿದ್ದರು. ಬಿಜೆಪಿ ಅವಧಿಯಲ್ಲಿ ಕೆ.ಎಸ್‌. ಈಶ್ವರಪ್ಪ ಹಾಗೂ ಶೋಭಾ ಕರಂದ್ಲಾಜೆ ಇಂಧನ ಖಾತೆ ಸಚಿವರಾಗಿದ್ದರು. ಇವರ ಅವಧಿಯಲ್ಲೇ ಬೊಕ್ಕಸಕ್ಕೆ ನಷ್ಟ ಆಗಿದೆ ಎಂದು ಸದನ ಸಮಿತಿ ವರದಿ ಬೊಟ್ಟು ಮಾಡಿತ್ತು. ಅಲ್ಲದೆ, ಬೊಕ್ಕಸಕ್ಕೆ ನಷ್ಟ ಆಗಲು ಕಾರಣರಾದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದೂ ಶಿಫಾರಸು ಮಾಡಿತ್ತು.

ಈಗ ಜೆಡಿಎಸ್ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಸದನ ಸಮಿತಿ ವರದಿಯ ಶಿಫಾರಸು ಅನುಷ್ಠಾನ ಕಷ್ಟ. ಇದಕ್ಕೆ ಮುಖ್ಯ ಕಾರಣ ಇಂಧನ ಖಾತೆ ಜೆಡಿಎಸ್‌ ತನ್ನ ಬಳಿಯೇ ಇಟ್ಟುಕೊಂಡಿರುವುದು. ಸದನ ಸಮಿತಿ ಶಿಫಾರಸ್ಸಿನ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲು ಹೋದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ಅಣ್ಣನಾದ ರೇವಣ್ಣ ಅವರ ವಿರುದ್ಧವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕಲ್ಲಿದ್ದಲು ತೊಳೆದ ಪ್ರಕರಣ ಮತ್ತು ಹೆಚ್ಚು ದರದಲ್ಲಿ ವಿದ್ಯುತ್‌ ಖರೀದಿ ರೇವಣ್ಣ ಅವಧಿಯಲ್ಲೂ ನಡೆದಿತ್ತು. ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಡಿ.ಕೆ.ಶಿವಕುಮಾರ್‌ ಕ್ರಮಕ್ಕೆ ಒತ್ತಾಯಿಸುವ ಸಾಧ್ಯತೆ ಕಡಿಮೆ. ಮಿತ್ರ ಪಕ್ಷಕ್ಕೆ ಮುಜುಗರ ಆಗದಂತೆ ನಡೆದುಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು ಮಾಡುವ ಸಾಧ್ಯತೆ ಇದೆ. ರೇವಣ್ಣ ಅವಧಿಯ ಹಗರಣ ಬಿಟ್ಟು ಕೇವಲ ಬಿಜೆಪಿ ಅವಧಿಯ ಹಗರಣ ಮುಂದಿಟ್ಟುಕೊಂಡು ದೊಣ್ಣೆ ಬೀಸುವುದು ಈಗಿನ ಸ್ಥಿತಿಯಲ್ಲಿ ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಈಗ ಇರುವ ವಿದ್ಯುತ್‌ ಉತ್ಪಾದನಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಮತ್ತು ಕೇಂದ್ರ ವಿದ್ಯುತ್‌ ಸ್ಥಾವರಗಳಿಂದ ವಿದ್ಯುತ್‌ ಪಡೆದುಕೊಂಡರೆ ಖಾಸಗಿಯವರಿಂದ ವಿದ್ಯುತ್‌ ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಖಾಸಗಿ ವಿದ್ಯುತ್‌ ಉತ್ಪಾದನಾ ಕಂಪನಿಗಳ ಪ್ರಬಲ ಲಾಬಿಯಿಂದಾಗಿ ವಿದ್ಯುತ್‌ ಖರೀದಿ ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಸಲಾಗುತ್ತದೆ. ಇದು ಅವ್ಯವಹಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬ ಆಪಾದನೆ ಇದೆ. ಭ್ರಷ್ಟಾಚಾರ ಹಾಗೂ ನಷ್ಟಕ್ಕೆ ಕಡಿವಾಣ ಹಾಕುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬುದು ಸದ್ಯದ ಕುತೂಹಲ.
**
‘ನಷ್ಟ ತಡೆಯಲು ಇಚ್ಛಾಶಕ್ತಿ ಬೇಕು’
ರಾಜ್ಯದಲ್ಲಿ ಜಲ ವಿದ್ಯುತ್‌  ಉತ್ಪಾದನೆ ಪ್ರಮಾಣವೂ ಕುಸಿತವಾಗಿದೆ. ಇದಕ್ಕೆ ಮಳೆಯ ಕೊರತೆ ಕಾರಣವಾಗಿದ್ದರೂ ತಾಂತ್ರಿಕ ಮತ್ತು ಇತರ ತೊಂದರೆಗಳನ್ನೂ ಅಲ್ಲಗಳೆಯುವಂತಿಲ್ಲ. ವಿದ್ಯುತ್‌ ಪ್ರಸರಣ ಮತ್ತು ವಿತರಣಾ ನಷ್ಟದ ಪ್ರಮಾಣ ಶೇ 23 ರಷ್ಟಿದೆ. ಈ ನಷ್ಟದ ಪ್ರಮಾಣ ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆದಂತಿಲ್ಲ. ನವೀಕರಿಸಬಹುದಾದ ಇಂಧನ ವಲಯದಲ್ಲಿ (ಸೌರಶಕ್ತಿ, ಪವನ, ಕಿರು ಜಲ, ಜೈವಿಕ ತ್ಯಾಜ್ಯ, ಜೈವಿಕ ಇಂಧನ) ಇನ್ನು ಹೆಚ್ಚಿನ ಒತ್ತು ನೀಡಿದರೆ, ವಿದ್ಯುತ್‌ ಸ್ವಾವಲಂಬನೆ ಸಾಧ್ಯ. ಗೃಹ, ಉದ್ಯಮ, ಕೃಷಿ ಕ್ಷೇತ್ರಗಳಿಗೆ ನಿಯಮಿತವಾಗಿ ಗುಣಮಟ್ಟದ ಇಂಧನ ಪೂರೈಸುವುದು ಸರ್ಕಾರದ ಆದ್ಯತೆ ಆಗಬೇಕೆ ಹೊರತು ‘ಆದಾಯ’ದ ಮೂಲವಾಗಿ ಬಳಸಿಕೊಳ್ಳಬಾರದು. ವಿದ್ಯುತ್‌ ಖರೀದಿ ಹೆಸರಿನಲ್ಲಿ ದಂದೆಯಾಗಬಾರದು ಎಂಬುದು ಸಾರ್ವಜನಿಕರ ಅಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT