ನಿರ್ಗತಿಕರ ‘ದಿಲ್‌ ಕಾ ರಾಜಾ’

ಸೋಮವಾರ, ಏಪ್ರಿಲ್ 22, 2019
29 °C
METRO-THOMAS

ನಿರ್ಗತಿಕರ ‘ದಿಲ್‌ ಕಾ ರಾಜಾ’

Published:
Updated:

ಇದು ಮೂರು ದಶಕಗಳ ಹಿಂದಿನ ಕಥೆ. ಉತ್ತರ ತಮಿಳುನಾಡಿನ ವಣಿಯಾಂಬಾಡಿ ಏರಿಯಾದಲ್ಲಿ ಥಾಮಸ್‌ ರಾಜಾ ಎಂಬ 16 ವರ್ಷದ ಮರಿ ರೌಡಿಯ ಹಾವಳಿ ವಿಪರೀತವಾಗಿತ್ತು. ತಾಯಿಯ ಮಂಗಳಸೂತ್ರ, ರೇಷ್ಮೆ ಸೀರೆ ಕದ್ದು ಸಿಕ್ಕು ಬಿದ್ದ ನಂತರ ಮನೆಯಿಂದ ಹೊರದಬ್ಬಲಾಯಿತು. ಕಳ್ಳತನ, ಜೂಜು, ದರೋಡೆಯಲ್ಲಿ ತೊಡಗಿದ್ದ ಆತನನ್ನು ಹಿಡಿದು ಪೊಲೀಸರು ಚೆನ್ನೈನ ಬಾಲಮಂದಿರಕ್ಕೆ ಕಳಿಸಿದರು. 

ಆ ಬಾಲಮಂದಿರ ಮನ ಪರಿವರ್ತನೆಗೆ ಕಾರಣವಾಯಿತು. ಅಲ್ಲಿಂದ ಹೊರ ಬಂದ ಆತ ಆಟೊ ಓಡಿಸಲು ಆರಂಭಿಸಿದ. ಥಾಮಸ್‌ ರಾಜಾ ಹೆಸರಿನ ಜತೆ ಆಟೊ ಸೇರಿಸಿಕೊಂಡು ಆಟೊ ರಾಜಾ ಆದ. ಆಟೊ ಕೇವಲ ಆತನ ಬದುಕಿನ ಬಂಡಿಯಾಗಿರಲಿಲ್ಲ. ಆತನಿಗೆ ಹೊಸದೊಂದು ಜಗತ್ತನ್ನು ಪರಿಚಯಿಸಿತು. 

ನಿತ್ಯ ರಸ್ತೆಗಳಲ್ಲಿಯ ಭಿಕ್ಷುಕರು, ಅನಾಥರು, ಮನೆಬಿಟ್ಟು ಓಡಿ ಬಂದ ಮಕ್ಕಳ ಒಡನಾಟ ಆತನ ಜೀವನದ ದಿಕ್ಕನ್ನೇ ಬದಲಿಸಿತು. ರಸ್ತೆಯಲ್ಲಿದ್ದ ನಿರ್ಗತಿಕರಿಗೆ ಊಟ, ಬಟ್ಟೆ, ಹೊದಿಕೆ ನೀಡಲು ಆರಂಭಿಸಿದ. ಇದು ಆತನಲ್ಲಿಯ ಒಂಟಿತನ, ಅಪರಾಧಿ ಮನೋಭಾವವನ್ನು ಕಳಚಿ ಹಾಕಿ ನೆಮ್ಮದಿ ಮೂಡಿಸಿತು. 

ಸುಮಾರು ಎರಡು ದಶಕಗಳ ಹಿಂದೆ ಚೆನ್ನೈನ ರಸ್ತೆಯಲ್ಲಿ ಬೆತ್ತಲಾಗಿ ಮಲಗಿದ್ದ ವೃದ್ಧ ರೋಗಿಯೊಬ್ಬನನ್ನು ಮನೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ. ತಾನಿದ್ದ ಮನೆಯ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಆತನಿಗೆ ಆಶ್ರಯ ನೀಡಿದ. ಹಗಲು, ರಾತ್ರಿ ಆತನ ಸೇವೆ ಮಾಡಿದ. ವೃದ್ಧನ ಮುಖದಲ್ಲಿ ಅರಳಿದ ಕೃತಜ್ಞತೆಯ ನಗು ಆಟೊ ರಾಜಾ ಬದುಕಿನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು. ನಿರ್ಗತಿಕರ ಸೇವೆಗಾಗಿ ತನ್ನ ಬಾಳನ್ನು ಮುಡಿ‍ಪಾಗಿ ಇಡಲು ನಿರ್ಧಿರಿಸಿದ ರಾಜಾ, ಆಟೊ ಬಿಟ್ಟು ಅನಾಥರ ಸೇವೆಯಲ್ಲಿ ತೊಡಗಿದರು.

‘ರಿಯಲ್‌ ಹೀರೊ’

ಆಟೊ ರಾಜಾ ಓದಿದ್ದು ಮೂರನೇ ಕ್ಲಾಸ್‌ ಮಾತ್ರ. ನಿಷ್ಕಲ್ಮಷ ಸೇವಾ ಮನೋಭಾವ ಅವರನ್ನು ನೈಜ ಬದುಕಿನ ಹೀರೊ ಪಟ್ಟಕ್ಕೆ ಏರಿಸಿವೆ.

ಕರ್ನಾಟಕ ಸರ್ಕಾರ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಗುರುತಿಸಿ, ಗೌರವಿಸಿವೆ. 2010ರಲ್ಲಿ ಸಿಎನ್‌ಎನ್‌–ಐಬಿಎನ್‌ ‘ರಿಯಲ್‌ ಹೀರೊ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಉದ್ಯಮಿ ಅನಿಲ್‌ ಅಂಬಾನಿ, ಬಾಲಿವುಡ್ ನಟರಾದ ಅಮಿತಾಬ್‌ ಬಚ್ಚನ್, ಧರ್ಮೇಂದ್ರ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಆಟೋ ರಾಜಾ ಅವರ ಬೆನ್ನು ತಟ್ಟಿದ್ದಾರೆ. 

‘ಅನಾಥರ ಸೇವೆ ಹೇಳಿದಷ್ಟು ಸುಲಭವಲ್ಲ. ಅದನ್ನು ಒಂದು ತಪ್ಪಸ್ಸಿನಂತೆ ಆಚರಿಸುತ್ತಿರುವ ಮತ್ತು ಅನಾಥರ ಸೇವೆಯಲ್ಲಿ ದೇವರನ್ನು ಕಾಣುತ್ತಿರುವ ಆಟೋ ರಾಜಾ ಅವರಂತಹ ವ್ಯಕ್ತಿ ವಿರಳ’ ಎಂದು ಅಣ್ಣಾ ಹಜಾರೆ ಹಾಡಿ ಹೊಗಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !