ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಸಲ್‌ ಮಾಮ್‌’ ಮಮತಾ

Last Updated 30 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ನಾಲ್ಕೂ ಮುಕ್ಕಾಲು ಎತ್ತರದ ದೇಹ ಮತ್ತು ಬರೋಬ್ಬರಿ 89 ಕೆ.ಜಿ. ತೂಗುತ್ತಿದ್ದ ಬೊಜ್ಜಿನ ಶರೀರ ಹೊಂದಿದ್ದ ಮಮತಾ ಅವರು, ನೆರೆಹೊರೆಯವರ ಚುಚ್ಚುಮಾತು, ಸ್ನೇಹಿತರು, ಸಂಬಂಧಿಕರ ಹೀಯಾಳಿಕೆಯಿಂದ ಬೇಸತ್ತು ಖಿನ್ನತೆಗೆ ಒಳಗಾಗಿದ್ದರು. ನಂತರ ಜಿಮ್‌ಗೆ ಸೇರಿಕೊಂಡು ದೇಹದ ತೂಕ ಇಳಿಸುವ ಜತೆಗೆ, ತಮ್ಮ ವ್ಯಕ್ತಿತ್ವವನ್ನೂ ಎತ್ತರದ ಸ್ಥಾನಕ್ಕೇರಿಸಿದರು.

ಜಿಮ್‌ ಸೆಂಟರ್‌ನಲ್ಲಿ ಪುರುಷರ ವ್ಯಂಗ್ಯ ಮಾತುಗಳ ನಡುವೆಯೂ ಗಂಟೆಗಟ್ಟಲೆ ಬೆವರು ಸುರಿಸಿ, ದೇಹವನ್ನು ಹುರಿಗೊಳಿಸಿದರು. ಸತತ ಪರಿಶ್ರಮ ಮತ್ತು ಛಲದಿಂದ ಒಂದು ವರ್ಷದಲ್ಲೇ ‘ಫಿಟ್‌ನೆಸ್‌ ಟ್ರೈನರ್‌’ ಆದರು. ಅಷ್ಟೇ ಅಲ್ಲ, ಎರಡೇ ವರ್ಷಗಳಲ್ಲಿ, ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಮಿಸ್‌ ಸೌತ್‌ ಇಂಡಿಯಾ’ ಕಿರೀಟವನ್ನೂ ಮುಡಿಗೇರಿಸಿಕೊಂಡರು!

ಬೆಂಗಳೂರಿನಲ್ಲಿ ಎನ್‌.ಎ.ಬಿ.ಬಿ.ಎ ಮತ್ತು ಡಬ್ಲ್ಯುಎಫ್‌ಎಫ್‌ ಸಹಯೋಗದಲ್ಲಿ ಆಯೋಜಿಸಿದ್ದ 2018ರ ಡಿಸೆಂಬರ್‌ 23ರಂದು ನಡೆದ ‘2ನೇ ಮಿಸ್ಟರ್‌ ಅಂಡ್‌ ಮಿಸ್‌ ಸೌತ್‌ ಇಂಡಿಯಾ’ ವಲಯ ಮಟ್ಟದ ಚಾಂಪಿಯನ್‌ಷಿಪ್‌‘ನ ಮಹಿಳಾ ವಿಭಾಗದಲ್ಲಿ ತಮ್ಮ ವಜ್ರಕಾಯವನ್ನು ಪ್ರದರ್ಶಿಸಿ, ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ 2018ರ ಮಾರ್ಚ್‌ನಲ್ಲಿ ಗೋವಾದಲ್ಲಿ ನಡೆದ ‘ಬಾಸ್‌ ಕ್ಲಾಸಿಕ್‌ ಚಾಂಪಿಯನ್‌ಷಿಪ್‌’ನ ಬಿಕಿನಿ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು 2018ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ‘ಮಿಸ್‌ ಬೆಂಗಳೂರು’ ಚಾಂಪಿಯನ್‌ಷಿಪ್‌ನ ಬೆಸ್ಟ್‌ ಫಿಸಿಕ್‌ ವಿಭಾಗದಲ್ಲಿ ‘ರನ್ನರ್‌ ಅಪ್‌‘ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನೋವಿಲ್ಲದೆ ಗೆಲುವಿಲ್ಲ!
‘ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ, ದೃಢ ಸಂಕಲ್ಪ, ಅರ್ಪಣಾ ಮನೋಭಾವವೇ ಯಶಸ್ಸಿನ ಮಾರ್ಗಗಳು. ನೋವಿಲ್ಲದೆ ಯಾವ ಗೆಲುವೂ ದಕ್ಕಲಾರದು. ಕಾಲೆಳೆಯುವವರ ಮುಂದೆ ಸಾಧನೆಯಿಂದಲೇ ಕಾಲೂರಿ ನಿಂತಿದ್ದೇನೆ. ಈಗಲೂ ಕೆಲವರು ನನ್ನ ಚರ್ಮದ ಸುಕ್ಕಿನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅಂಥವರಿಗೆ ನಾನು ವಿವಾಹಿತ ಮಹಿಳೆ. ನನಗೆ ನಾಲ್ಕೂವರೆ ವರ್ಷದ ಪೂರ್ವಿಕಾ ಎಂಬ ಮಗಳಿದ್ದಾಳೆ. ನಾನು ತಾಯಿಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಗರ್ವದಿಂದ ಹೇಳುತ್ತೇನೆ‘ ಎನ್ನುತ್ತಾರೆ ಮಮತಾ.

ಮಮತಾ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಬಸವಪುರ ಗ್ರಾಮದವರು. ತಂದೆ ಗುರುಸಿದ್ದಪ್ಪ ಮತ್ತು ತಾಯಿ ಗಿರಿಜಮ್ಮ. ಕೃಷಿ ಕುಟುಂಬದಿಂದ ಬಂದ ಮಮತಾ ಅವರು ಆರ್ಥಿಕ ಸಮಸ್ಯೆಯಿಂದ ಬಿ.ಕಾಂ. ವ್ಯಾಸಂಗವನ್ನು ಅರ್ಧಕ್ಕೆ ತೊರೆದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸನತ್‌ಕುಮಾರ್ ಅವರನ್ನು ಇಷ್ಟಪಟ್ಟು 2013ರಲ್ಲಿ ವಿವಾಹವಾಗಿ ಈಗ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ವಿವಾಹದ ನಂತರ ಕಾರಣಾಂತರದಿಂದ ಪತಿ ಕೆಲಸವನ್ನು ಬಿಟ್ಟರು. ಆ ವೇಳೆಗೆ ಮಮತಾ ಅವರೂ ನೌಕರಿಯನ್ನು ಬಿಟ್ಟಿದ್ದರು. ಹೀಗಾಗಿ ಕುಟುಂಬ ನಿರ್ವಹಣೆಯೇ ಕಷ್ಟವಾಯಿತು. ಆಗ ಮಮತಾ ಅವರಿಗೆ, ಅವರ ತಾಯಿ ಗಿರಿಜಮ್ಮ ‘ಏನಾದರೂ ಸಾಧನೆ ಮಾಡು, ನಿನ್ನತನವನ್ನು ಸಾಬೀತುಪಡಿಸು’ ಎಂದು ಹುರಿದುಂಬಿಸಿದರು. ಆಗ ಜಿಮ್‌ಗೆ ಹೋಗುತ್ತಿದ್ದ ಮಮತಾ ಅವರು, ಆ ಕ್ಷೇತ್ರವನ್ನೇ ಗಂಭೀರವಾಗಿ ಪರಿಗಣಿಸಿ, ‘ಫಿಟ್‌ನೆಸ್ ಟ್ರೈನರ್‌’ ಆದರು. ಅದರಲ್ಲಿ ಸಿಗುತ್ತಿದ್ದ ಸಂಬಳ ಕುಟುಂಬ ನಿರ್ವಹಣೆಗೆ ನೆರವಾಯಿತು.

ಜಿಮ್‌ ಸೆಂಟರ್‌ನಲ್ಲಿ ಮಮತಾ
ಜಿಮ್‌ ಸೆಂಟರ್‌ನಲ್ಲಿ ಮಮತಾ

ದಿನಕ್ಕೆ 12 ಮೊಟ್ಟೆ!
‘ನಿತ್ಯ 750 ಗ್ರಾಂ ಚಿಕನ್‌, 12 ಕೋಳಿಮೊಟ್ಟೆಯ ಬಿಳಿಭಾಗ, 250 ಗ್ರಾಂ ತರಕಾರಿ, ನಾಲ್ಕು ಚಪಾತಿ ಮತ್ತು ಪ್ರೋಟೀನ್‌ ಡ್ರಿಂಕ್ಸ್‌ ಅನ್ನು ತೆಗೆದುಕೊಳ್ಳುತ್ತೇನೆ. ನಾಲ್ಕು ಗಂಟೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತೇನೆ. 8 ಗಂಟೆ ಉದ್ಯೋಗ ಮಾಡುತ್ತೇನೆ. 6 ಗಂಟೆ ನಿದ್ರಿಸುತ್ತೇನೆ. ಈಗ 56 ಕೆ.ಜಿ. ನನ್ನ ತೂಕ. ಪೌಷ್ಟಿಕ ಆಹಾರ ಮತ್ತು ಕ್ರಮಬದ್ಧ ಜೀವನಕ್ರಮದಿಂದ ಆರೋಗ್ಯ ಕಾಪಾಡಿಕೊಂಡಿದ್ದೇನೆ. ತಿಂಗಳಿಗೆ ₹35ರಿಂದ 40 ಸಾವಿರ ಗಳಿಸುತ್ತೇನೆ. ಆದರೆ, ದುಡಿದ ಬಹುಪಾಲು ಹಣ ಬಾಡಿ ಮೇಲೆ ಇನ್‌ವೆಸ್ಟ್‌ ಮಾಡುತ್ತಿದ್ದೇನೆ. ದೇಹದಾರ್ಢ್ಯ ಕಾಪಾಡಿಕೊಳ್ಳುವುದು ಕಷ್ಟ ಮತ್ತು ವೆಚ್ಚದಾಯಕ ಕೂಡ’ ಎನ್ನುತ್ತಾರೆ ಮಮತಾ.

‘ಆರಂಭದಲ್ಲಿ ಟೂ ಪೀಸ್‌ ಬಿಕಿನಿ ತೊಡುವುದಕ್ಕೆ ಪತಿ ಮತ್ತು ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ಅವರೇ ನನ್ನ ಸಾಧನೆಯನ್ನು ಮೆಚ್ಚಿಕೊಂಡು ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ. ಈಗ ಎಲ್ಲರೂ ನನಗಿಂತಲೂ ನನ್ನ ಪತಿಯನ್ನೇ ಹೆಚ್ಚಾಗಿ ಹೊಗಳುತ್ತಾರೆ. ಜಿಮ್‌ ಕೋಚ್‌ಗಳಾದ ಯೋಗೇಗೌಡ ಮತ್ತು ಕೃಷ್ಣ ವೆಂಕಟೇಶ ಅವರ ಪ್ರೋತ್ಸಾಹ ಮತ್ತು ಪರಿಶ್ರಮವೂ ನನ್ನ ಗೆಲುವಿಗೆ ಕಾರಣವಾಗಿದೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ.

’ವಿವಾಹಿತ ಮಹಿಳೆಯರು, ಹುಡುಗಿಯರು, ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವವರು ಸೇರಿದಂತೆ ನಲವತ್ತಕ್ಕೂ ಹೆಚ್ಚು ಮಂದಿಗೆ ಫಿಟ್‌ನೆಸ್‌ ಟ್ರೈನಿಂಗ್‌ ನೀಡಿದ್ದೇನೆ. ಬೆಂಗಳೂರಿನಲ್ಲಿ 2019ರ ಫೆಬ್ರುವರಿಯಲ್ಲಿ ನಡೆಯುವ ‘ಶೇರು ಕ್ಲಾಸಿಕ್‌ ಸ್ಪರ್ಧೆ’ಯಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗಬೇಕು. ಸ್ವಂತ ಫಿಟ್‌ನೆಸ್‌ ಸೆಂಟರ್‌ ತೆರೆಯಬೇಕು ಎಂಬ ಆಸೆಯಿದೆ’ ಎಂದು ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

ಮಮತಾ ಅವರ ಉನ್ನತ ಸಾಧನೆಗೆ ಸ್ಪಾನ್ಸರ್‌ಗಳ ಅಗತ್ಯವಿದ್ದು, ಆಸಕ್ತರು mamathasanathkumar.p1@gmail.com ಸಂಪರ್ಕಿಸಬಹುದು.

ಮಗಳು ಪೂರ್ವಿಕಾಳೊಂದಿಗೆ ಮಮತಾ ಸನತ್‌ಕುಮಾರ್‌
ಮಗಳು ಪೂರ್ವಿಕಾಳೊಂದಿಗೆ ಮಮತಾ ಸನತ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT