ದುಬಾರಿ ಸಂಸತ್‌ ಭವನ

ಗುರುವಾರ , ಮಾರ್ಚ್ 21, 2019
25 °C

ದುಬಾರಿ ಸಂಸತ್‌ ಭವನ

Published:
Updated:
Prajavani

ರೊಮಾನಿಯಾ ರಾಜಧಾನಿ ಬುಚರೆಸ್ಟ್‌ನ ಐತಿಹಾಸಿಕ ಕೇಂದ್ರದಲ್ಲಿ ರೊಮಾನಿಯನ್ ಸಂಸತ್ತಿನ ಬೃಹತ್ ಅರಮನೆಯಿದೆ. ಇದನ್ನು ರೊಮಾನಿಯನ್‌ ಭಾಷೆಯಲ್ಲಿ ‘ಪಲಾತುಲ್ ಪಾರ್‍ಲಮಂಟುಲುಯಿ’ ಎಂದು ಕರೆಯಲಾಗುತ್ತದೆ. ಇದು ಕಳೆದ ಶತಮಾನದಲ್ಲಿ ಕೈಗೊಂಡಿರುವ ಅತ್ಯಂತ ದುಬಾರಿ ಹಾಗೂ ಅತಿ ರಂಜಿತ ಕಟ್ಟಡ ಯೋಜನೆ.

ರೊಮಾನಿಯಾದ ಸರ್ವಾಧಿಕಾರಿ ನಿಕೋಲಾ ಸಿಯೊಸೆಸ್ಕು ಅವರ ಮಹತ್ವಾಕಾಂಕ್ಷೆಯ ಯೋಜನೆ ಇದು. ಅಪಾರವಾದ ಮಾನವ ಶ್ರಮ ಹಾಗೂ ಹಣವನ್ನು ವ್ಯಯಿಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಹೌಸ್ ಆಫ್ ರಿಪಬ್ಲಿಕ್ ಅನ್ನು ನಿರ್ಮಿಸಲು ಈ ಸರ್ವಾಧಿಕಾರಿ ಇಡೀ ಬೆಟ್ಟವನ್ನು ಮಟ್ಟಸಗೊಳಿಸಿ ಬುಚರೆಸ್ಟ್‌ನ ಐತಿಹಾಸಿಕ ಕೇಂದ್ರದ ಐದನೇ ಒಂದು ಭಾಗವನ್ನು ನಾಶಮಾಡಿದನು. ಈ ಯೋಜನೆಯೊಂದೇ ಐದು ವರ್ಷಗಳಕಾಲ ದೇಶದ ಬಜೆಟ್‍ನ ಮೂರನೆ ಒಂದು ಭಾಗದಷ್ಟು ಹಣವನ್ನು ಕಬಳಿಸಿತ್ತು. ಈ ಕಟ್ಟಡ ನಿರ್ಮಾಣವು ಅತಿ ಹೆಚ್ಚು ಟೀಕೆಗೆ ಒಳಗಾಗಿದ್ದರೂ, ಈಗ ಅತಿ ಹೆಚ್ಚು ಪ್ರವಾಸಿಗರನ್ನು ಅಕರ್ಷಿಸುವ ಕೇಂದ್ರವೂ ಆಗಿದೆ.

ಈ ಆಡಳಿತ ಭವನವು ಹಲವಾರು ಉತ್ಕೃಷ್ಟತೆಗಳನ್ನು ತನ್ನದಾಗಿರಿಸಿಕೊಂಡಿದೆ. ಇದು ವಿಶ್ವದ ಎರಡನೇ ಅತಿದೊಡ್ದ ಆಡಳಿತಾತ್ಮಕ ಕಟ್ಟಡ ಮಾತ್ರವಲ್ಲ ವಿಶ್ವದ ಮೂರನೇ ಅತಿ ದೊಡ್ಡವೂ ಕಟ್ಟಡವಾಗಿದೆ. 1989ರಲ್ಲಿ ನಿರ್ಮಾಣವಾದ ಈ ಕಟ್ಟಡದ ವೆಚ್ಚವು 1.75 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಈ ಕಟ್ಟಡದ ವಿದ್ಯುತ್ ಶುಲ್ಕವೇ ಸುಮಾರು ₹ 43 ಕೋಟಿಯಷ್ಟಾಗುತ್ತದೆ. ಈ ಕಟ್ಟಡದ ಭೂಗತ ಕಾರ್ ಪಾರ್ಕಿಂಗ್ ಜಾಗದಲ್ಲಿ  20,000 ಕಾರುಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶವಿದೆ.

‘ದಿ ಪೀಪಲ್ ಹೌಸ್’ ಎಂದು ಕರೆಯಲಾಗುತ್ತಿದ್ದ ಈ ಸಂಸತ್ ಭವನದ ಕಲ್ಪನೆಯು 1972ರಲ್ಲಿ ಉತ್ತರ ಕೊರಿಯಾದ ಎರಡನೇ ಕಿಮ್ ಸಂಗ್‍ನನ್ನು ಭೇಟಿಯಾದ ನಂತರ ಸಿಯೊಸೆಸ್ಕ್‌ನ ತಲೆಯಲ್ಲಿ ಮೊಳೆಯಿತು. ತನ್ನ ಸಹವರ್ತಿ ಸರ್ವಾಧಿಕಾರಿಯು ಪಯೋಂಗ್ಯಾಂಗ್ ಅನ್ನು ನಿರ್ಮಿಸಿದ ರೀತಿಯಿಂದ ಪ್ರಭಾವಿತನಾದ ಸಿಯೊಸೆಸ್ಕ್‌ ಈ ಅದ್ಧೂರಿ ಭವನವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲು ಅರಂಭಿಸಿದ್ದ. 1977ರಲ್ಲಿ ವಿನಾಶಕಾರಿ ಭೂಕಂಪನ ಬುಚರೆಸ್ಟ್ ಅನ್ನು ತೀವ್ರವಾಗಿ ಬಾಧಿಸಿತು. ಈ ಅವಕಾಶವನ್ನು ಬಳಸಿಕೊಂಡ ಸಿಯೊಸೆಸ್ಕ್‌, ಇಡೀ ನಗರವನ್ನು ಮರು ನಿರ್ಮಾಣ ಮಾಡಲು ನಿರ್ಧರಿಸಿದ.

ತನ್ನ ಯೋಜನೆಗಳನ್ನು ಜಾರಿಗೊಳಿಸಲು ಆತ ಎರಡು ಡಜನ್‍ಗೂ ಹೆಚ್ಚು ಚರ್ಚ್‍ಗಳು, ಯಹೂದಿಗಳ ದೇವಾಲಯಗಳು, ಅನೇಕ ಕಾರ್ಖಾನೆ, ಆಸ್ಪತ್ರೆ ಮನೆಗಳು ಸೇರಿದಂತೆ ನೂರಾರು ಕಟ್ಟಡಗಳನ್ನು ನೆಲಸಮಗೊಳಿಸಿದ. 40 ಸಾವಿರಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಯಿತು. ಬುಚರೆಸ್ಟ್‌ನ ಬೆಟ್ಟ ಸೇರಿದಂತೆ ಐದನೆಯ ಒಂದು ಭಾಗವನ್ನು ಧ್ವಂಸ ಗೊಳಿಸಲಾಯ್ತು. 1984ರಲ್ಲಿ ಕಟ್ಟಡ ನಿರ್ಮಾಣ ಕಾರ್ಯವು ಪ್ರಾರಂಭವಾಯಿತು. 20 ಸಾವಿರದಿಂದ ಒಂದು ಲಕ್ಷದಷ್ಟು ಕಾರ್ಮಿಕರು ಹಲವು ಶಿಫ್ಟ್‌ಗಳಲ್ಲಿ ವಾರದ ಏಳೂ ದಿನ, 24 ಗಂಟೆಗಳ ಕಾಲ ಕೆಲಸ ಮಾಡಿದರು. ಈ ಕಟ್ಟಡ ನಿರ್ಮಾಣಕ್ಕಾಗಿ ಸಿಯೊಸೆಸ್ಕ್‌ ಅಪಾರ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದ. ನಂತರದ ದಿನಗಳಲ್ಲಿ ದೇಶದ ಕೃಷಿ ಹಾಗೂ ಕೈಗಾರಿಕಾ ಉತ್ಪನ್ನವನ್ನು ರಫ್ತು ಮಾಡುವ ಮೂಲಕ ಸಾಲ ತೀರಿಸಲಾಯಿತು. ಇದರ ಪರಿಣಾಮ ಜನರಿಗೆ ಆಹಾರ ಲಭಿಸದಂತಾಯಿತು. ಈ ಅವಧಿಯಲ್ಲಿ ದೇಶದ ಸುಮಾರು 3000 ಜನರು ಹಸಿವಿನಿಂದ ಸತ್ತಿದ್ದಾರೆ ಎಂದು ವರದಿಯಾಗಿದೆ.

ಅರಮನೆಯು 240 ಮೀಟರ್ ಉದ್ದ, 270 ಮೀಟರ್ ಅಗಲ, ಮತ್ತು 12 ಅಂತಸ್ತುಗಳನ್ನು ಹೊಂದಿದೆ. ಒಟ್ಟು ಎಂಟು ಭೂಗತ ಮಟ್ಟಗಳಿದ್ದು, ಕೊನೆಯ ಮಟ್ಟವನ್ನು ಪರಮಾಣು ಯುದ್ಧದ ಸಂದರ್ಭದಲ್ಲಿ ಪರಮಾಣು ವಿರೋಧಿ ಬಂಕರ್ ಆಗಿ ಬಳಸಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.

ಕಟ್ಟಡದೊಳಗೆ 1,100 ಕೊಠಡಿಗಳಿವೆ. ಪಾರ್‍ಕೆಟ್ (ಹಲಗೆಗಳನ್ನು ಜೋಡಿಸಿ ರಚಿಸಿದ ನೆಲಗಟ್ಟು) ಮತ್ತು ಗೋಡೆಗೆ ಹೊಂದಿಸಿದ ಹಲಗೆಗಳಿಗಾಗಿ 9 ಲಕ್ಷ ಕ್ಯೂಬಿಕ್ ಮೀಟರ್ ಮರವನ್ನು, 10ಲಕ್ಷ ಕ್ಯೂಬಿಕ್ ಮೀಟರ್‌ ಮಾರ್ಬಲ್, 2ಲಕ್ಷ ಚದರ ಮೀಟರ್ ಕಾರ್ಪೆಟ್ ಬಳಸಲಾಗಿದೆ. ಒಟ್ಟು 480 ದೀಪಗುಚ್ಛಗಳನ್ನು ತಯಾರಿಸಲು 3,500 ಟನ್ ಕ್ರಿಸ್ಟಲ್‍ಗಳ ಬಳಕೆಯಾಗಿದೆ.

ಡಿಸೆಂಬರ್ 1989ರ ಹೊತ್ತಿಗೆ ಕಟ್ಟಡದ ಮೂರನೇ ಎರಡರಷ್ಟು ಭಾಗ ಮಾತ್ರ ಪೂರ್ಣಗೊಂಡಿತ್ತು. ರೊಮಾನಿಯಾ ಕ್ರಾಂತಿ ಸ್ಫೋಟಗೊಂಡಾಗ ಸಿಯೊಸೆಸ್ಕ್‌ ಹೆಲಿಕಾಪ್ಟರ್‌ ಬಳಸಿ ರಾಜಧಾನಿಯಿಂದ ಪರಾರಿಯಾದ. ಆದರೆ ನಂತರ ಆತನನ್ನು ಬಂಧಿಸಿ ಮರಣದಂಡನೆಗೆ ಗುರಿಪಡಿಸಲಾಯಿತು.

ಅಂತಿಮವಾಗಿ 1994ರಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಾಯಿತು. ಈಗ ರೊಮಾನಿಯನ್ ಸೆನೆಟ್ ಹಾಗೂ ಚೇಂಬರ್ ಆಫ್ ಡೆಪ್ಯುಟೀಸ್ ಮತ್ತು ನೆಲ ಮಹಡಿಯಲ್ಲಿ ಆಧುನಿಕ ಕಲಾ ವಸ್ತು ಸಂಗ್ರಹಾಲಯಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಕಟ್ಟಡದ ಶೇ 70ರಷ್ಟು ಭಾಗ ಈಗಲೂ ಖಾಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !