ಮಂಗಳವಾರ, ಫೆಬ್ರವರಿ 18, 2020
26 °C

ಫೊಟೋ ಫಿನಿಶ್

ಫಾತಿಮಾ ರಲಿಯಾ Updated:

ಅಕ್ಷರ ಗಾತ್ರ : | |

Prajavani

‘ಊಹೂಂ, ಸ್ಟುಡಿಯೋಗೆ ಬಂದು ನಾನು ಫೊಟೋ ತೆಗಿಸಲಾರೆ’
ಹಾಗಂತ ಒಂದು ನಿರ್ಧಾರದ ಧ್ವನಿಯಲ್ಲಿ ಹೇಳಿದ ರೇಣು ಜಗಲಿಯ ಮೂಲೆಯಲ್ಲಿದ್ದ ಹವಾಯಿ ಚಪ್ಪಲಿ ಮೆಟ್ಟಿ ಬರ ಬರ ಸದ್ದು ಮಾಡುತ್ತಾ ಕಾಲು ದಾರಿಗೆ ಇಳಿಯುವ ಮೊದಲು ಅಮ್ಮನ ಮುಖದಲ್ಲಿನ ಸೂಕ್ಷ್ಮ ಅಸಹನೆಯ ಗೆರೆಯನ್ನೂ, ತಮ್ಮನ ಧುಮುಗುಡುವಿಕೆಯನ್ನೂ, ಅಪ್ಪನ ನಿಸ್ತೇಜ ಮುಖವನ್ನೂ ಕಂಡಿಲ್ಲ ಎಂದಲ್ಲ, ಆದರೆ ಅವಕ್ಕೆಲ್ಲ ಆಕೆ ಕಳೆದ ಇಪ್ಪತ್ತೈದು ವರ್ಷಗಳಿಂದ ತನ್ನ ಜೊತೆಗಿರುವ ಐದೂ ಬೆರಳುಗಳು ಸುಟ್ಟ ಎಡಗೈಗೆ ಒಗ್ಗಿಕೊಂಡಷ್ಟೇ ಸಲೀಸಾಗಿ ಒಗ್ಗಿಕೊಂಡುಬಿಟ್ಟಿದ್ದಳು.

ಮನೆಯಲ್ಲಿ ಹೀಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾದಾಗೆಲ್ಲ ರೇಣು ಬಿರಬಿರನೆ ನಡೆದು ನೂರೈವತ್ತು ಮೆಟ್ಟಿಲು ಹತ್ತಿ ಬೆಟ್ಟದ ಮೇಲಿನ ನರಹರಿಯ ಸನ್ನಿಧಿಯಲ್ಲಿ ಕೂತು ಬಿಡುತ್ತಾಳೆ. ಅರ್ಚಕರು ಕೊಟ್ಟ ಪ್ರಸಾದವನ್ನು ಇಷ್ಟಿಷ್ಟೇ ಬಾಯಿಗೆ ಹಾಕಿಕೊಳ್ಳುತ್ತಾ ಬೆಟ್ಟದ ಮೇಲಿಂದ ಕಾಣುವ ತನ್ನೂರನ್ನೂ, ಮಧ್ಯೆದಲ್ಲೇಲ್ಲೋ ಪುಟ್ಟ ಚುಕ್ಕಿಯಂತೆ ಕಾಣುವ ತನ್ನ ಮನೆಯನ್ನೂ, ಅದರ ವಿಶಾಲ ಅಂಗಳವನ್ನೂ, ಬಚ್ಚಲು ಮನೆಯನ್ನೂ, ತನ್ನ ಐದೂ ಬೆರಳುಗಳನ್ನು ಆಹುತಿ ಪಡೆದುಕೊಂಡ ಹಂಡೆಯೊಲೆಯನ್ನೂ ಗುರುತಿಸಲು ಪ್ರಯತ್ನಿಸುತ್ತಾ ಒಂದು ಬಗೆಯಲ್ಲಿ ನಿರಮ್ಮಳಳಾದಂತೆ ಅನ್ನಿಸಿ ಬೆಟ್ಟವಿಳಿದು ಅಷ್ಟೇ ಬಿಡು ಬೀಸಾಗಿ ನಡೆದು ಮನೆ ಸೇರಿ ಏನೂ ಆಗಿಯೇ ಇಲ್ಲವೆಂಬಂತೆ ಇದ್ದುಬಿಡುತ್ತಾಳೆ.

ಇವತ್ತೂ ಅಷ್ಟೇ, ರೇಣು ಶತ ಶತಮಾನಗಳಿಂದ ನಡೆಯುತ್ತಲೇ ಇರುವ ಪುರಾತನ ಪಳೆಯುಳಿಕೆಯೇನೋ ಎಂಬಂತೆ ತನ್ನ ಎಡಗೈಯನ್ನು ಅಭ್ಯಾಸ ಬಲದಂತೆ ದುಪ್ಪಟ್ಟಾದೊಳಗೆ ಮುಚ್ಚಿಟ್ಟುಕೊಂಡು ಆ ಹಾದಿಯಲ್ಲಿ ನಡೆಯುತ್ತಿದ್ದರೆ, ಎಲ್ಲರಂತಿದ್ದ ತನ್ನ ಎಡಗೈ, ಅದರ ಕಿರುಬೆರಳಿಗೆ ಅಪ್ಪ ಕೊಡಿಸಿದ್ದ ಒಂಟಿ‌ ಹರಳಿನ ಪುಟ್ಟ ಉಂಗುರ, ಅದನ್ನು ಧರಿಸಿ ಯಾವುದೋ ದೇಶದ ಪುಟ್ಟ ರಾಜಕುಮಾರಿಯಂತೆ ತಾನು ಸಂಭ್ರಮಿಸುತ್ತಿದ್ದುದು, ಮಾಗಿಯ ಚಳಿಯ ಆ ಮುಂಜಾವು, ತಮ್ಮ ಗಲಾಟೆ ಮಾಡಿದನೆಂದು ಅಮ್ಮ‌ ಇಲ್ಲದ ಹೊತ್ತಲ್ಲಿ ಅಟ್ಟದಲ್ಲಿದ್ದ ಹಲಸಿನ ಬೀಜ ಕದ್ದು ಹಂಡೆಯೊಲೆಯಲ್ಲಿ ಅವನಿಗೆ ಸುಟ್ಟು ಕೊಡಲು ಹೋದದ್ದು, ಬೆಂಕಿಯ ಕಿಡಿ ಅವಳ ಬೆರಳುಗಳನ್ನೇ ಆಹುತಿ ತೆಗೆದುಕೊಂಡದ್ದು, ಅಂದಿನಿಂದ ಇಡೀ ಊರಿನ ಅನುಕಂಪಕ್ಕೆ ಪಾತ್ರಳಾಗಿ ರೇಣುಕಾ ‘ರೇಣು’ ಆದದ್ದು ಎಲ್ಲ‌ ಹಳೆ ಕಾಲದ ಕ್ಯಾಮೆರಾದ ರೀಲಿನಂತೆ ಅವಳ ಹೃದಯದಲ್ಲಿ ಒಂದು ತಣ್ಣನೆಯ ವಿಷಾದದ ಅಲೆಯನ್ನು ಎಬ್ಬಿಸುತ್ತಿತ್ತು, ಯಾವ ಬಟನ್ ಒತ್ತಿದರೆ ಯಾರ ಅಸ್ಪಷ್ಟ ಫೊಟೋ ಅಚ್ಚಾಗುತ್ತದೋ ಎಂಬ ದಿಗಿಲಿನಂತೆ.

ಯಾವ ರೀತಿಯಿಂದ ಲೆಕ್ಕ ಹಾಕಿದರೂ ಈ ಶ್ರಾವಣಕ್ಕೆ ರೇಣುಗೆ ಮೂವತ್ತು ವರ್ಷ. ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಅವಳು ತನ್ನ ಎಡಗೈಗೆ, ಅನುಕಂಪಕ್ಕೆ, ಅವಹೇಳನಕ್ಕೆ, ಮನೆಯೊಳಗಿನ‌ ಸೂಕ್ಷ್ಮ ಅನಾದರಕ್ಕೆ, ‘ಎಡಗೈ ಮುಂದೆ ಚಾಚಬೇಡ’, ‘ಉದ್ದ ತೋಳಿನ ಬಟ್ಟೆ ಧರಿಸು’ಗಳಂತಹ ಮಾತುಗಳಿಗೆ ಎಷ್ಟು ಸಲೀಸಾಗಿ ಒಗ್ಗಿ ಹೋಗಿದ್ದಳೆಂದರೆ ಆ ಅನಿವಾರ್ಯತೆಯೇ ತನ್ನ ‘ಎಲ್ಲ ಸರಿಯಿದ್ದ’ ಗೆಳತಿಯರಿಗಿರುವ ಹಲವು ನವ್ಯ ಕಲ್ಪನೆಗಳು ತನ್ನತ್ತ ಸುಳಿದೂ ಬರದಂತಹ ಎಚ್ಚರಿಕೆಯೊಂದನ್ನು ದಯಪಾಲಿಸಿತ್ತು.

ಮೊದಲೊಂದು ವರ್ಷ ಮನೆಯಲ್ಲೇ ಅಕ್ಷರ ತಿದ್ದಿಸಿದ ಅಪ್ಪ ಮರುವರ್ಷ ‘ಅಕ್ಕ ತಮ್ಮ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗಲಿ’ ಎಂದು ಅವಳನ್ನು ಎರಡನೆಯ ತರಗತಿಗೂ, ಅವನನ್ನು‌ ಒಂದನೆಯ ತರಗತಿಗೂ ಸೇರಿಸಿ ಬಂದಿದ್ದ.‌ ಮೊದ ಮೊದಲು ತನ್ನ ಬ್ಯಾಗ್ ಹೊತ್ತುಕೊಳ್ಳಲು, ಬುತ್ತಿ ಚೀಲ‌ ಹಿಡಿದುಕೊಳ್ಳಲು ಅಕ್ಕ ಜೊತೆಗಿರುವುದೇ ಒಳ್ಳೆಯದಾಯ್ತು ಅಂದುಕೊಳ್ಳುತ್ತಿದ್ದವನು ಬರ ಬರುತ್ತಾ ಅವಳನ್ನು‌ ಒಂದು ಹೊರೆಯೆಂಬಂತೆ, ತನ್ನ ಬದುಕಿಗಂಟಿಕೊಂಡಿರುವ ಅನಗತ್ಯ ನಂಟಿನಂತೆ ಕಾಣತೊಡಗಿದ. ಹೈಸ್ಕೂಲಿಗೆ ಕಾಲಿಟ್ಟ ಮೇಲಂತೂ ಶಾಲೆಯಲ್ಲಿ ಆಕೆಗೂ ತನಗೂ ಸಂಬಂಧವೇ ಇಲ್ಲದಂತೆ, ತಮ್ಮಿಬ್ಬರ ನಡುವಿನ ಬಂಧ ಯಾರೊಬ್ಬರಿಗೂ ತಿಳಿಯದಂತೆ ವಿಶೇಷ ಕಾಳಜಿ ವಹಿಸುತ್ತಿದ್ದ. ಈ ಸೂಕ್ಷ್ಮ ಅರ್ಥ ಮಾಡಿಕೊಂಡ ರೇಣು ಸಹ ಒಳದಾರಿ ಬಳಸಿ ಶಾಲೆ ಸೇರಿ ತೆಪ್ಪಗೆ ಇದ್ದುಬಿಡುತ್ತಿದ್ದಳು. ಆಕೆ ಎಸ್ಸೆಲ್ಸಿ ಪಾಸಾದಾಗ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟದ್ದು ಆತನೇ.

ಆದರೆ, ಆಕೆ ಕಾಲೇಜು ಹೋಗುತ್ತೇನೆಂದಾಗ ಮಾತ್ರ ಅಪ್ಪ ‘ಎರಡೆರಡು ಬಸ್ಸು ಬದಲಾಯಿಸಿ ಪಟ್ಟಣಕ್ಕೆ ಹೋಗೋದು, ಬರೋದು ಕಷ್ಟವಾದೀತು.‌ ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಹೋದರಾಯಿತು. ಒಂದು ವರ್ಷ ಇಲ್ಲೇ ಇದ್ದು ಬೇರೇನಾದರೂ ಕಲಿ’ ಎಂದರು. ಮರುವರ್ಷ ತಮ್ಮನಿಗೆ ಮುಜುಗರದ ಪರಿಸ್ಥಿತಿ ಎದುರಾಗುವುದೇ ಬೇಡವೆಂದು ತಾನೇ ಕಾಲೇಜಿಗೆ ಹೋಗುವುದಿಲ್ಲ ಎಂದುಬಿಟ್ಟಳು. ಮೊದಲಿನಿಂದಲೂ ತನ್ನ ದೈಹಿಕ ನ್ಯೂನತೆಯನ್ನು ತಮ್ಮನ ಪ್ರತಿಷ್ಠೆಗೆ ಅಡ್ಡಿಯಾಗದಂತೆ ನೋಡಿಕೊಂಡು ಬಂದವಳಿಗೆ ಶಿಕ್ಷಣ ಮೊಟಕುಗೊಳಿಸಬೇಕಾಗಿ ಬಂದುದು ದೊಡ್ಡ ಸಂಗತಿ ಅಂತ‌ ಅನ್ನಿಸಲೇ ಇಲ್ಲ. ಆದರೆ ಎಲ್ಲ ಅರ್ಥವಾದ ಅಪ್ಪ, ಮಗಳು ಒಳಗೊಳಗೇ ಕೊರಗುತ್ತಿದ್ದಾಳೇನೋ ಅನ್ನುವ ಭಾವದಲ್ಲಿ ಹೊಯ್ದಾಡುತ್ತಿದ್ದ.

ಹಾಗೆ ಶಾಲೆ ಬಿಟ್ಟವಳು ನಿಧಾನವಾಗಿ ಮನೆಯ ಒಂದೊಂದೇ ಕೆಲಸದಲ್ಲಿ‌ ಕೈಯಾಡಿಸತೊಡಗಿದಳು. ಮೊದ ಮೊದಲು ಅಮ್ಮನ ಅಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಿಗಷ್ಟೇ ಸೀಮಿತವಾಗಿದ್ದವಳು ಬರಬರುತ್ತಾ ತೋಟದ ಕೆಲಸ ಮಾಡಿಸುವುದು, ಆಳುಗಳಿಗೆ ಸಂಬಳ ಬಟವಾಡೆ ಮಾಡುವುದು, ಊರ ಸಹಕಾರಿ ಸಂಘದಲ್ಲಿ ಅಪ್ಪನ ಕಾರ್ಯಭಾರ ನೋಡಿಕೊಳ್ಳುವುದು ಎಲ್ಲ ಮಾಡತೊಡಗಿದಳು. ತೋಟಕ್ಕೆ ಮದ್ದು ಸಿಂಪಡಿಸುವುದರಿಂದ ಹಿಡಿದು ಅಡಿಕೆ ಹೆಕ್ಕಿಸುವಲ್ಲಿಯವರೆಗೆ ರೇಣು ಇಲ್ಲದೆ ಯಾವ ಕೆಲಸವೂ ಸುಸೂತ್ರವಾಗಿ ನಡೆಯುವುದೇ ಇಲ್ಲ ಎನ್ನುವಂತಾಯಿತು. ಆಗೊಮ್ಮೆ ಈಗೊಮ್ಮೆ ಅಪ್ಪನ ಜೊತೆ ಪೇಟೆಗೆ ಹೋಗಿ ಬಿತ್ತನೆ ಬೀಜ, ಗೊಬ್ಬರ ತರುತ್ತಿದ್ದವಳು ಈಗ ಆ ಕೆಲಸವನ್ನೂ ಒಬ್ಬಳೇ ಮಾಡತೊಡಗಿದ ಮೇಲೆ ವೈಯಕ್ತಿಕ ಬದುಕಿನ ಕುಂದುಕೊರತೆಯನ್ನು ಗಮನಿಸಲೇ ಸಮಯ ಇಲ್ಲದಂತಾಯಿತು.

ಈ ಮಧ್ಯೆ ಡಿಗ್ರಿ ಕಾಲೇಜು ಸೇರಿಕೊಂಡ ತಮ್ಮ‌ ಮೊಬೈಲ್ ಬೇಕು ಅಂದಾಗ ಅಪ್ಪನ ಹತ್ರ ಜಗಳವಾಡಿ ಅವನಿಗೆ ಮೊಬೈಲ್ ಕೊಡಿಸಿದ್ದಳು. ಓದೋ ಹುಡುಗ ಎಂದು ಆಗಾಗ ಅಪ್ಪನ ಕಣ್ಣು ತಪ್ಪಿಸಿ ಅವನ ಕಿಸೆಗೆ ದುಡ್ಡು ಹಾಕಿಬಿಡುತ್ತಿದ್ದಳು. ಅಪ್ಪ ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುತ್ತಿದ್ದ. ಈಗೀಗ ತಮ್ಮನೂ ಹಿಂದಿನ ಸೆಡವು ಬಿಟ್ಟು ಮನೆಯಲ್ಲಿ ಇವಳೊಂದಿಗೆ ಮೃದುವಾಗಿ ನಡೆದುಕೊಳ್ಳುತ್ತಿದ್ದ. ಆದರೆ, ಮನೆಯಿಂದ ಹೊರಗೆ ಕಾಲಿಟ್ಟಕೂಡಲೇ ಅವನ ವರಸೆಯೇ ಬದಲಾಗಿಬಿಡುತ್ತಿತ್ತು.

ಒಮ್ಮೆ ಅವನ ಗೆಳೆಯನೊಬ್ಬ ಮನೆಗೆ ಬಂದಿದ್ದಾಗ ಬಾಲ್ಯದ ಪರಿಚಯವಲ್ಲವೇ ಎನ್ನುವ ಸಲುಗೆಯಿಂದ ಚಹಾ ಮಾಡಿಕೊಟ್ಟು ಅವನೊಂದಿಗೆ ಹರಟೆಗೆ ಕುಳಿತುಕೊಂಡುಬಿಟ್ಟಿದ್ದಳು. ತುಸು ಹೊತ್ತು ಸುಮ್ಮನಿದ್ದ ತಮ್ಮ ಯಾವುದೋ ನೆಪದಿಂದ ಅವಳನ್ನು ಅಡುಗೆ ಮನೆಗೆ ಕರೆದು ‘ಎದೆಯ ಮೇಲೆ ದುಪ್ಪಟ್ಟಾ ಸರಿಯಾಗಿ ಎಳೆದುಕೊಳ್ಳಬಾರದೇ’ ಎಂದು ರೇಗಿದ್ದ. ಅವನು ಕುಡಿದ ಚಹಾದ ಕಪ್ ಒಂದು ಕೈಯಲ್ಲಿರುವಾಗ ಬೆರಳೇ ಇಲ್ಲದ ಮತ್ತೊಂದು ಕೈಯಲ್ಲಿ ದುಪ್ಪಟ್ಟಾ ಹೇಗೆ ಸರಿ ಮಾಡಿಕೊಳ್ಳಲಿ ಎಂದು ಅರ್ಥವಾಗದ ರೇಣು ಅವನನ್ನೇ ಮಿಕ ಮಿಕ ನೋಡಿದ್ದಳು.

ಗೆಳತಿಯ ಮದುವೆಯಂದು ಧರಿಸಲೆಂದು ಅರ್ಧ ತೋಳಿನ, ಕತ್ತಿನ ಸುತ್ತ ಪುಟ್ಟ ಪುಟ್ಟ ಕನ್ನಡಿಗಳಿದ್ದ ಸಲ್ವಾರ್ ಕೊಂಡಾಗಲೂ ಅಷ್ಟೇ, ಆತ ‘ಈ ಸಿಂಗಾರವೆಲ್ಲ ನಿನಗೇಕೋ? ಅರ್ಧ ತೋಳಿನ ಬಟ್ಟೆ ಧರಿಸಿ ಒಂದು ಕೈಯಲ್ಲಿ ಬೆರಳುಗಳಿಲ್ಲದಿರುವುದನ್ನು ಇಡೀ ಪ್ರಪಂಚಕ್ಕೆ ತೋರಿಸಬೇಕು ಅಂದುಕೊಂಡಿದ್ದೀಯಾ?’ ಎಂದು ಅದನ್ನು ಅವಳ ಕೈಯಿಂದ ಕಸಿದು ಅಟ್ಟದ ಮೇಲೆ ಎಸೆದಿದ್ದ. ಮಗಳ ಸಣ್ಣ ಆಸೆಗೂ ಮಗ ತಣ್ಣೀರೆರಚಿದಾಗ ಕುದ್ದು ಹೋದ ಅಪ್ಪ ಅವನ ಕೆನ್ನೆಗೆ ಬಾರಿಸಿ ಮನೆಯಲ್ಲಿ ದೊಡ್ಡ ರಂಪಾಟವೇ ಆಗಿಹೋಗಿತ್ತು.‌ ಬೆಳೆದು ನಿಂತ ಮಗನ ಕೆನ್ನೆಗೆ ಬಾರಿಸಿದ್ದು ಅಮ್ಮನಿಗೂ ಸ್ವಲ್ಪವೂ ಸರಿದೋರಿರಲಿಲ್ಲ. ‘ಅಂವ ಮನೆ ಬಿಟ್ಟು ಹೋದರೆ?’ ಎನ್ನುವ ಆತಂಕದಲ್ಲಿ ರೇಣುವಿನ ಮೇಲೆ ಉರಿದು ಬೀಳುತ್ತಿದ್ದಳು. ಆವತ್ತೂ ಅಷ್ಟೇ, ರೇಣು ನರಹರಿಯ ಸನ್ನಿಧಿಯಲ್ಲಿ ‘ಇನ್ನೆಂದೂ ಅರ್ಧ ತೋಳಿನ ಸಲ್ವಾರಿಗೆ ಆಸೆ ಪಡುವುದೇ ಇಲ್ಲ’ ಎಂದು ಪ್ರತಿಜ್ಞೆ ಮಾಡಿದ್ದಳು.‌ ಹಾಗೆ ಬೆಟ್ಟ ಹತ್ತಿದವಳು ಮತ್ತೆ ಇಳಿದದ್ದು ಸೂರ್ಯ ಕಂತಿದ ಮೇಲೆಯೇ. ಅವಳಿಗಾದರೂ ಮನೆ ಬಿಟ್ಟರೆ ಬೇರೆ ಆಸರೆ ಎಲ್ಲಿದೆ?

ಪದವೀಧರ ಮಗ ತೋಟಕ್ಕೂ ಒಗ್ಗಿಕೊಳ್ಳದೆ, ಸಣ್ಣದೊಂದು ಕೆಲಸವನ್ನೂ ಹಿಡಿಯದೆ ಉಂಡಾಡಿಯಂತೆ ಮನೆಯಲ್ಲಿರುವುದನ್ನು ನೋಡಿ ರೋಸಿ ಹೋದ ಅಪ್ಪ ಒಂದು ದಿನ ‘ರೇಣುವೇ‌ ನನ್ನ ವಾರಸುದಾರಿಣಿ’ ಎಂದು ಹೇಳಿಬಿಟ್ಟ. ಒಳಗೊಳಗೇ ರೇಣುವಿಗೆ ತನ್ನ ಬಗ್ಗೆ ಹೆಮ್ಮೆ ಅನಿಸಿದರೂ ಇದು ಮನೆಯಲ್ಲಿ ಮತ್ತೊಂದು ಸುತ್ತಿನ ರಂಪಾಟಕ್ಕೆ ಕಾರಣವಾಗುತ್ತದೆ ಎಂದು ಗೊತ್ತಿದ್ದರಿಂದ ಅವಳು ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇದ್ದುಬಿಟ್ಟಳು. ಮೋಕ್ಷ ಕೊಡಬೇಕಾದ ಮಗ ಮನೆಯಲ್ಲಿರಬೇಕಾದರೆ ಮಗಳನ್ನು ವಾರಸುದಾರಿಣಿ ಎಂದದ್ದು ಅಮ್ಮನ ಕಣ್ಣು ಕೆಂಪಾಗಿಸಿತ್ತು. ಹೆಚ್ಚು ಮಾತಾಡಿದರೆ ಗಂಡ ಮಗನ ಜನ್ಮ ಜಾಲಾಡಿಬಿಡುತ್ತಾನೆ ಅಂತ ಅವಳೂ ಸುಮ್ಮನಾಗಿದ್ದಳು.

ಆದರೆ ಕೆಲವೇ ದಿನಗಳಲ್ಲಿ ರೇಣುವಿಗೆ ತನ್ನ ಬದುಕಿನ ಸೀಮಿತತೆ ಅರ್ಥವಾಗಿತ್ತು. ಕೇಂದ್ರದಿಂದ ಹೊರಟ ಬದುಕಿನ ತ್ರಿಜ್ಯ ಎಂದೂ ಒಂದು ಪರಿಪೂರ್ಣ ವೃತ್ತವಾಗದು, ಬದುಕು ಒಂದಿಂಚೂ ಕದಲದೆ ಇದ್ದಲ್ಲೇ ಇರುತ್ತದೆ ಎಂದಾದಾಗ ಅಧೀರಳಾದಳು. ಅಪ್ಪ ಇರುವವರೆಗಷ್ಟೇ ಈ ಮನೆಯಲ್ಲಿ ತನ್ನ ಸ್ಥಾನ ಸುಭದ್ರ ಎನ್ನುವುದು ಅವಳಿಗೆ ಯಾವತ್ತೋ ಅರ್ಥವಾಗಿತ್ತು. ಹಾಗಂತ ಅವಳ ಮದುವೆಯ ಪ್ರಯತ್ನ ಅಪ್ಪ ಮಾಡಲೇ ಇಲ್ಲ ಅಂತಲ್ಲ. ತಮ್ಮ ಗೆಳೆಯರ, ಅಪರೂಪದ ಪಾನಗೋಷ್ಠಿಯ ಜೊತೆಗಾರರ ಮೂಲಕ ಅವಳಿಗೊಂದು ವರ ಹುಡುಕಲು ತುಂಬ ಪ್ರಯತ್ನಿಸಿದ್ದ. ಮಗನ ಮೊಬೈಲ್‌ನಲ್ಲಿ ಅವಳ ವಿವಿಧ ಭಂಗಿಯಲ್ಲಿ ಕ್ಲಿಕ್ಕಿಸಿದ್ದ, ಗಂಡಿನ ಮನೆಗೆ ಕಳುಹಿಸಿದ ಫೋಟೋಗಳೆಷ್ಟೋ? ಬಂದ ಗಂಡುಗಳೆಲ್ಲ ಗಡ್ಡದ್ದಾಗಿ ತಿಂದು ತೇಗಿ ಮದುವೆಯ ಆಸೆ ಹುಟ್ಟಿಸಿ ಹೋಗಿ ಕುಂಟು ನೆಪ ಹೇಳಿ ತಿರಸ್ಕರಿಸಿದಾಗೆಲ್ಲ ಅಪ್ಪನ ಮುಖ ನೋಡಲಾಗದೆ ಒಮ್ಮೆ ರೇಣು ‘ನನಗ್ಯಾವ ಗಂಡನ್ನೂ ನೋಡಬೇಡಿ, ನಾನು ಮದುವೆಯೇ ಆಗುವುದಿಲ್ಲ’ ಎಂದು ಘೋಷಿಸಿಬಿಟ್ಟಿದ್ದಳು. ಅಲ್ಲಿಂದಾಚೆ ಆಕೆ ಫೊಟೋ ಎಂದರೆ ಮಾರು ದೂರ ಓಡುತ್ತಿದ್ದಳು. ಅಪ್ಪ ಪಾರ್ಶ್ವವಾಯು ಪೀಡಿತರಾಗಿ ಒಂದು ಬದಿ ಪೂರ್ಣ ಸ್ವಾಧೀನ ಕಳೆದುಕೊಂಡಮೇಲಂತೂ ಅವಳ ಮದುವೆಯ ಪ್ರಯತ್ನ ಸಂಪೂರ್ಣ ನಿಂತೇ ಹೋಯಿತು.

ಅಪ್ಪನ ಸೇವೆ, ಡಾಕ್ಟರ್‌ರ ಓಡಾಟ, ತೋಟ, ಮನೆ, ಪೇಟೆ ಇವೆಲ್ಲದರ ಮಧ್ಯೆ ರೇಣುವಿಗೆ ತನ್ನ ಬಗ್ಗೆ ಯೋಚಿಸಲೇ ಸಮಯ ಸಿಗುತ್ತಿರಲಿಲ್ಲ. ಆದರೆ ಎಂದಾದರೊಮ್ಮೆ ನಿಲುವುಗನ್ನಡಿಯ ಮುಂದೆ ನಿಂತಾಗ, ಹೀಗೆ ಬೆಟ್ಟದ ನೆತ್ತಿ ಹತ್ತಿ ಕೂರಬೇಕಾದ ಪ್ರಸಂಗ ಬಂದಾಗ ತನ್ನ ಇಷ್ಟುದ್ದದ ಬದುಕಿನ ನಿರರ್ಥಕತೆಯನ್ನು ನೆನೆದು ಬೇಸರವಾಗುತ್ತಿತ್ತು. ಬಳಸೀ ಬಳಸಿ ತೇಪೆದ್ದು ಹೋದ ಈ ಬೆಟ್ಟದ ಕಾಲುದಾರಿಗೂ ತನ್ನ ಬದುಕಿಗೂ ವ್ಯತ್ಯಾಸವೇ ಇಲ್ಲ ಅನ್ನಿಸುತ್ತಿತ್ತು. ಎಲ್ಲರ ಬದುಕಿನಲ್ಲಿರುವ ಆದರೆ ಯಾರಿಗೂ ಬೇಡದ ಪರಾವಲಂಬಿಯಂತೆ ತಾನು ಎಂದು ಅನ್ನಿಸುತ್ತಿತ್ತು.

ಆ ಅನಿಸಿಕೆ ಮತ್ತಷ್ಟು ತೀವ್ರವಾದದ್ದು ಮೊನ್ನೆ ತಮ್ಮನಿಗೆ ಹೆಣ್ಣು ನೋಡಲು ಹೋದಾಗ. ಹಾಗೆ ಹೋಗುವಾಗ ಇವಳನ್ನು ಕರೆದೊಯ್ಯಬೇಕೇ ಬೇಡವೇ ಎನ್ನುವುದರ ಬಗ್ಗೆಯೇ ಮನೆಯಲ್ಲಿ ನಾಲ್ಕು ಸುತ್ತಿನ ಚರ್ಚೆಯಾಗಿತ್ತು. ಕೊನೆಗೆ ‘ಅವರಿವರು ಏನೆಂದಾರು?’ ಎನ್ನುವ ಆಧಾರದ ಮೇಲೆ ಕರೆದೊಯ್ಯುವುದೆಂದು ತೀರ್ಮಾನವಾಗಿತ್ತು. ಆದರೆ ಹಾಗೆ ಹೋಗುವ ಮುನ್ನ ತಮ್ಮ ನೂರು ಸೂಚನೆಗಳನ್ನು ನೀಡಿದ್ದ. ‘ಯಾಕಾದರೂ ಬದುಕಿದ್ದೇನೋ’ ಅನ್ನಿಸಿತ್ತು ರೇಣುವಿಗೆ. ಗೋಡೆಗೆ ಮುಖ ಮಾಡಿ ಮಲಗಿದ್ದ ಅಪ್ಪನ ಗಂಟಲೂ ಸಣ್ಣಗೆ ಉಬ್ಬಿಕೊಂಡಿತ್ತು ಆಗ.

ಅಲ್ಲಿ ಹೋದ ಮೇಲೆ ಹುಡುಗಿಯ ಮನೆಯವರ ಮುಂದೆ ಕಾಣಿಸಿಕೊಳ್ಳದೆ ಅವರಿವ‌ರ ಹಿಂದೆ ಅಡಗಿಕೊಂಡದ್ದೇ ಹೆಚ್ಚು. ಆದರೆ ಚಂದನದ ಗೊಂಬೆಯಂತಿದ್ದ ಹೆಣ್ಣನ್ನು ನೋಡಿ ಆಸೆ ತಾಳಲಾರದೆ ಹಾರುತ್ತಿದ್ದ ಮುಂಗುರುಳು ತೀಡಲು ಹೋಗಿದ್ದಳಷ್ಟೇ, ಹುಡುಗಿ ಬೆಚ್ಚಿಬಿದ್ದು ಇವಳ ಕೈ ಕೊಡವಿದಳು. ಅಷ್ಟೇ ಸಾಕಾಯಿತು ರೇಣುವಿಗೆ, ತನ್ನ ಸ್ಥಾನಮಾನ ಅರ್ಥವಾಗಲು. ನಿಧಾನವಾಗಿ ಹಿಂದೆ ಸರಿದು ನಿಂತಳು. ಬಳಿ ಬಂದ ತಮ್ಮ ಕೆಂಗಣ್ಣು ಬೀರುತ್ತಾ ‘ಹಾಗೆಲ್ಲ ಮುಟ್ಟಬೇಡ, ಅವಳು ಹೆದರಿಕೊಂಡಾಳು’ ಎಂದ. ಕೈಯನ್ನು ದುಪ್ಪಟ್ಟಾದೊಳಗೆ ಎಳೆದುಕೊಂಡ ರೇಣು ಮತ್ತಷ್ಟು ಮುದ್ದೆಯಾದಳು.

ಆದರೆ, ತನ್ನ ಇರುವಿಕೆಯ ಮಿತಿ ಅವಳಿಗೆ ಮತ್ತಷ್ಟು ಸ್ಪಷ್ಟವಾದದ್ದು ಮೊನ್ನೆ ತಮ್ಮ, ಎಂದೂ ಇಲ್ಲದಂತೆ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ಆಯ್ದು ಸುಲಿಯಲು ಆಳು ಹುಡುಕಿ ತಂದಾಗ. ಏನಾಗುತ್ತಿದೆ? ತಮ್ಮ ಜವಾಬ್ದಾರಿ ಕಲಿತುಕೊಂಡ ಎಂದು ಖುಷಿಪಡಬೇಕು ಎನ್ನುವಷ್ಟರಲ್ಲಿ ಅವಳಿಗೆ ಮೀಸಲಾಗಿದ್ದ ಕೋಣೆಯನ್ನು ಖಾಲಿ ಮಾಡಿಸಿ ಅವಳ ಬಟ್ಟೆಯ ಗಂಟನ್ನೂ, ಮುಖ ಮಾತ್ರ ತೋರಿಸುವ ಪುಟ್ಟ ಕನ್ನಡಿಯನ್ನೂ, ಜೋಪಾನವಾಗಿ ನವಿಲುಗರಿ ಅಡಗಿಸಿಟ್ಟ ಹಳೆಯ ಪುಸ್ತಕದ ಕಟ್ಟನ್ನೂ ತಂದು ಅಪ್ಪನ‌ ಮಂಚದ ಅಡಿಗೆ ತಳ್ಳಿ, ‘ಹೇಗೂ ಒಬ್ಬಳೇ ಇರುದಲ್ವಾ? ನೀನಿನ್ನು ಇಲ್ಲೇ ಇರು, ಅಪ್ಪನಿಗೂ ಜೊತೆಯಾಯಿತು, ನಿನಗೂ ಬೇಸರ ಕಳೆಯುತ್ತದೆ’ ಎಂದು ಸುಲಿದ ಅಡಿಕೆಯನ್ನು ಗೋಣಿಗೆ ತುಂಬಿಸಿ ಅವಳದಾಗಿದ್ದ ಕೋಟೆಯಲ್ಲಿ ಪೇರಿಸಿಟ್ಟಾಗಲೇ. ಅಪ್ಪ ಏನೋ ಹೇಳಬೇಕೆಂದು ತೊದಲುತ್ತಿದ್ದ, ರೇಣು ಮಾತ್ರ ಕಲ್ಲಿನಂತೆ ನಿಂತೇ ಇದ್ದಳು. ಕೋಣೆಯಿಂದ ಹೊರಬಿದ್ದವಳಿಗೆ ಮನೆಯಿಂದ ಹೊರಬೀಳುವುದು ತುಂಬ ಹೊತ್ತಿನ ಕೆಲಸವಲ್ಲ ಅನ್ನಿಸುತ್ತಿತ್ತು.

ಈಗ ಎಲ್ಲ ಮುಗಿಯಿತು ಅಂದುಕೊಳ್ಳುವಾಗ ಮತ್ತೆ ಫೊಟೋದ, ಮದುವೆಯ ಪ್ರಸ್ತಾಪ! ಸಂಜೆ ಸಾಯುತ್ತಿದ್ದಂತೆ ನರಹರಿಯೂ ತನಗೆ ಸಾಂತ್ವನ ಹೇಳಲಾರ ಅನ್ನಿಸಿ ಬೆಟ್ಟ ಇಳಿದು ನಿಧಾನವಾಗಿ ಮನೆಯ ದಾರಿ ಹಿಡಿದಳು. ಮನೆಯೊಳಗೆ ಪಾತ್ರೆಯ ಸರಭರ ಸದ್ದು ಜೋರು ಜೋರು ಕೇಳುತ್ತಿತ್ತು. ಅಮ್ಮ ರಾತ್ರಿಯ ಅಡುಗೆ ತಯಾರಿ ಮಾಡುತ್ತಿದ್ದಳು. ಹಂಚಿನ ಮೂಲೆಯಲ್ಲೆಲ್ಲೋ ಕೂತ ಕಪ್ಪೆ ವಟರುಗುಟ್ಟುತ್ತಿತ್ತು. ಗೋಡೆಯನ್ನು ಕಚ್ಚಿ ಹಿಡಿದ ಹಲ್ಲಿಯೊಂದು ಜನ್ಮಾಂತರಗಳಿಂದ ಬೇಟೆಗೆ ಹೊಂಚು ಹಾಕುವಂತೆ ಕಾಣುತ್ತಿತ್ತು ‘ಅಂವ ಮಧ್ಯಾಹ್ನದಿಂದ ಏನೂ ತಿಂದೇ ಇಲ್ಲ’ ಎಲ್ಲ ನಿನ್ನಿಂದಲೇ ಅನ್ನುವ ಧಾಟಿಯಲ್ಲಿ ಹೇಳಿದಳು ಅಮ್ಮ.

ತಾನು ಬೆಳಿಗ್ಗೆಯಿಂದ ಏನೂ ತಿನ್ನದೇ ಇದ್ದುದು, ಬೆಟ್ಟ ಹತ್ತಿದವಳು ಈಗಷ್ಟೇ ಇಳಿದು ಬಂದದ್ದು ಒಂದೂ ಈ ಅಮ್ಮನಿಗೆ ತಿಳಿದೇ ಇಲ್ವಾ ಅನಿಸಿತು. ಅಪ್ಪನನ್ನು ಎಬ್ಬಿಸಿ ನಿಧಾನವಾಗಿ ನಡೆಸಿಕೊಂಡು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಬಂದು ಮತ್ತೆ ಮಲಗಿಸಿ ಅವನ ಎದೆಯವರೆಗೆ ಕೌದಿ ಎಳೆದು ಅಡುಗೆ ಮನೆಗೆ ಹಿಂದಿರುಗಿ ‘ಅದ್ಯಾವ ಊರಿನ ರಾಜಕುಮಾರನ ಜೊತೆ ಮದುವೆ ಮಾಡಿಸುತ್ತಾನೋ ನೋಡುತ್ತೇನೆ, ನಾಳೆ ಬೆಳಿಗ್ಗೆ ಸ್ಟುಡಿಯೋಗೆ ಹೋಗಿ ಫೊಟೋ ತೆಗೆಸಿಕೊಳ್ಳುತ್ತೇನೆ’ ಎಂದು ಹೇಳಿ ಅಪ್ಪನ ಮಂಚದ ಬಳಿ ಚಾಪೆ ಹಾಸಿ ಮುಸುಕೆಳೆದುಕೊಂಡಳು‌.

ಸುಸ್ತೋ ಅಥವಾ ತನ್ನ ಬದುಕು ಇಷ್ಟೇ ಅನ್ನುವ ದುರಂತದ ಮುನ್ನೆಚ್ಚರಿಕೆಯ ಆಯಾಸವೋ ದಿಂಬಿಗೆ ತಲೆ ಚಾಚುತ್ತಿದ್ದಂತೆ ನಿದ್ರೆ ಆವರಿಸಿಕೊಂಡು ಬಿಟ್ಟಿತು. ಮರುದಿನ ಬೆಳಿಗ್ಗೆ ಎದ್ದಂತೆ ಅಮ್ಮ ಒಂದು ಲೋಟ ಚಹಾ ಮಾಡಿಕೊಟ್ಟು ‘ರೆಡಿ ಆಗಬೇಕಂತೆ’ ಎಂದಳು. ‘ಇದೂ ಒಂದು ಆಗಿ ಬಿಡಲಿ’ ಅಂದುಕೊಂಡ ರೇಣು ಸ್ನಾನ ಮಾಡಲೆಂದು ತನ್ನ ಬಟ್ಟೆ ಎತ್ತಿಕೊಳ್ಳಲು ಹೋದರೆ, ತಮ್ಮ ಒಂದು ಪೊಟ್ಟಣ ತಂದು ಕೈಗಿಟ್ಟು ‘ಇದೇ ಬಟ್ಟೆ ಧರಿಸಿಕೋ’ ಎಂದ. ಇದೇನು ಹೊಸ ಅವತಾರ ಎಂದು ಆಶ್ಚರ್ಯಪಡುತ್ತಲೇ ರೇಣು ಪೊಟ್ಟಣ ಬಿಚ್ಚಿದರೆ, ಹಿಂದೊಮ್ಮೆ ತಾನು ಆಸೆಪಟ್ಟು ತಂದ ಪುಟ್ಟ ಪುಟ್ಟ ಕನ್ನಡಿಗಳಿದ್ದ ಸಲ್ವಾರ್ ತನ್ನೆದುರು ಬಿಚ್ಚಿಕೊಂಡಿತ್ತು. ಅಲ್ಲಿ ಇಲ್ಲಿ ಅಂತ ಒಂದಿಷ್ಟು ಧೂಳಿದ್ದುದು ಬಿಟ್ಟರೆ ಅದರ ಹೊಳಪು ಚೂರೂ ಮಾಸಿರಲಿಲ್ಲ. ಎತ್ತಲೋ‌ ನೋಡುತ್ತ ಅಮ್ಮ ‘ಸರಕಾರದವರು ಅಂಗವೈಕಲ್ಯ ಇರುವವರಿಗೆ ಮಾಸಾಶನ ಕೊಡುತ್ತಾರಂತೆ. ಅದಕ್ಕೊಂದು ಫೊಟೋ ಬೇಕಂತೆ. ನಾಳೆ ನಿನ್ನ ಬಾಳಿಗೂ ಒಂದು ಆಸರೆ ಬೇಕಲ್ಲಾ? ಇದನ್ನು ಧರಿಸಿ ಫೊಟೋ ಹೊಡೆಸಿಕೊಂಡರೆ ಬೆರಳುಗಳಿಲ್ಲದ ಕೈ ಸ್ಪಷ್ಟವಾಗಿ ಅಚ್ಚಾಗುತ್ತದೆ. ಆಮೇಲೆ ಅದರ ಹಿಂದೆ ಹೆಚ್ಚು ಓಡಾಡಬೇಕಿಲ್ಲ’ ಎಂದು ಯಾರದೋ ಧ್ವನಿಯಲ್ಲಿ ಮಾತಾಡುತ್ತಿದ್ದರು. ಹೊಳೆಯುತ್ತಿದ್ದ ಅಷ್ಟೂ ಕನ್ನಡಿಗಳ ಬೆಳಕು ಒಮ್ಮಲೇ ಅಕ್ಷಿಪಟಲಕ್ಕೆ ಬಡಿದು ಯಾವ ಕ್ಯಾಮೆರಾದ ಕಣ್ಣಿಗೂ ನಿಲುಕದ ಅಸ್ಪಷ್ಟ ಬಿಂಬವೊಂದು ಮೂಡಿದಂತಾಯಿತು. ರೇಣು ಬೆಳಕಿಗೆ ಕಣ್ಣು ಮುಚ್ಚಲೂ ಆಗದೆ ಬಿಡಲೂ ಆಗದೆ ತಡವರಿಸುತ್ತಾ ಅಪ್ಪನ ಪಕ್ಕ ಕುಸಿದು ಕುಳಿತಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)