ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗುಸಿ ಮತ್ತು ಬಡ ಹುಡುಗ

Last Updated 20 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಇಂಗಳದಾಳು ಗ್ರಾಮದಲ್ಲಿ ಕೃಷ್ಣನೆಂಬ ಬಡ ಹುಡುಗ ತಾಯಿ ಹಾಗೂ ಇಬ್ಬರು ಅಕ್ಕಂದಿರ ಜೊತೆ ವಾಸ ಮಾಡುತ್ತಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕೃಷ್ಣ ತನ್ನ ಕುಟುಂಬದವರ ಪಾಲಿಗೆ ಅಕ್ಕರೆಯ ಹುಡುಗನಾಗಿದ್ದ. ಇವನಿಗೆ ಇದ್ದ ಏಕೈಕ ಆಸ್ತಿ ಎಂದರೆ ತಂದೆ ಬಿಟ್ಟುಹೋಗಿದ್ದ ಗುಲಾಬಿಯ ಚಿಕ್ಕ ತೋಟ.

ಕೃಷ್ಣ ಪ್ರತಿದಿನ ಶಾಲೆಗೆ ಹೋಗುವ ಮುನ್ನ ತನ್ನ ಗುಲಾಬಿ ತೋಟದಲ್ಲಿ ಕೆಲಸ ಮುಗಿಸಿ ಹೊರಡುತ್ತಿದ್ದ. ಸಂಜೆಯ ಸಮಯದಲ್ಲಿ ಶಾಲೆಯ ಪಾಠಗಳನ್ನು ಓದಿಕೊಳ್ಳುತ್ತ ಹತ್ತನೆಯ ತರಗತಿ ಪರೀಕ್ಷೆ ಪಾಸಾದ.

ಇಂಗಳದಾಳು ಗ್ರಾಮದ ಸುತ್ತಮುತ್ತ ಬೇಸಿಗೆಯ ಬಿಸಿಲಿಗೆ ಬಾವಿಗಳೆಲ್ಲಾ ಬತ್ತಿಹೋದವು, ಜನ ಕುಡಿಯುವ ನೀರಿಗೂ ತತ್ವಾರ ಪಡುವಂತಾಯಿತು. ಕೃಷ್ಣನ ಗುಲಾಬಿ ತೋಟ ಸಹ ಒಣಗಲಾರಂಭಿಸಿತು. ಬಾವಿಯ ನೀರು ತಳ ಸೇರಿತು. ಒಂದು ದಿನ ಮಧ್ಯಾಹ್ನ ಕೃಷ್ಣ ಬಾವಿಯಿಂದ ನೀರು ಸೇದಿ ಸೇದಿ ತೊಟ್ಟಿಗೆ ಹಾಕುತ್ತಿರುವಾಗ, ‘ಗೆಳೆಯ, ಗೆಳೆಯ ಬಾ ಇಲ್ಲಿ’ ಎಂದು ಯಾರೋ ಕೂಗಿದಂತಾಯಿತು.

ಸುತ್ತಮುತ್ತ ನೋಡಿದರೆ ಯಾರೂ ಕಾಣಿಸಲಿಲ್ಲ. ಮತ್ತೆ ಪೊದೆಯೊಳಗಿನಿಂದ ಕಿರ್‍ರು ಕಿರ್‍ರು ಎಂಬ ಧ್ವನಿ ಬಂದಿತು. ‘ನಾನೇ ಗೆಳೆಯಾ. ಈ ಪೊದೆಯಲ್ಲಿ ಇರುವೆ, ನನ್ನ ಹೆಸರು ಮಧುರ. ನಿಮ್ಮ ಹೊಲದಲ್ಲಿ ವಾಸವಾಗಿರುವ ಮುಂಗುಸಿ’ ಎಂದಿತು ಆ ಧ್ವನಿ. ಆಗ ಧೈರ್ಯದಿಂದ ಕೃಷ್ಣನು ಪೊದೆ ಸರಿಸಿದಾಗ ಮುಂಗುಸಿ ಕಂಡಿತು. ಕೃಷ್ಣ ಆಶ್ಚರ್ಯದಿಂದ ‘ನಿನಗೆ ಮಾತನಾಡಲು ಬರುತ್ತದೆಯೇ’ ಎಂದು ಕೇಳಿದಾಗ, ಆ ಮುಂಗುಸಿಯು, ‘ಕೋಟಿ ಮುಂಗುಸಿಗಳಲ್ಲಿ ಒಂದು ಮುಂಗುಸಿಗೆ ಮಾತನಾಡುವ ಶಕ್ತಿ ಬಂದಿರುತ್ತದೆ. ಬೇರೆ ಪ್ರಾಣಿ, ಮನುಷ್ಯರ ಧ್ವನಿ ಅರ್ಥ ಮಾಡಿಕೊಂಡು ಅವರ ಭಾಷೆಯಲ್ಲೇ ನಾನು ವ್ಯವಹರಿಸಬಲ್ಲೆ’ ಎಂದಿತು.

ಅದು ಮಾತು ಮುಂದುವರಿಸಿ, ‘ಕಳೆದ ತಿಂಗಳು ನಾನು ಮರದ ಮೇಲಿದ್ದ ನಾಗರಹಾವಿನ ಮೇಲೆ ದಾಳಿ ಮಾಡಿದೆ. ಆಯತಪ್ಪಿ ಜಾಲಿಯ ಪೊದೆಯ ಮೇಲೆ ಬಿದ್ದೆ. ಅನೇಕ ಮುಳ್ಳುಗಳು ದೇಹಕ್ಕೆ ಚುಚ್ಚಿದವು. ಕೆಲವನ್ನು ತೆಗೆದುಹಾಕಿದೆ. ಕುತ್ತಿಗೆಯ ಹಿಂಭಾಗದಲ್ಲಿ ಮುರಿದ ಮುಳ್ಳನ್ನು ಕೀಳಲು ಆಗಲಿಲ್ಲ. ಅದು ಕೀವಾಗಿ ರಕ್ತ ಸೋರುತ್ತಿದೆ. ಹೀಗೇ ಆದರೆ ಈ ಗಾಯದಿಂದಲೇ ನಾನು ಪ್ರಾಣ ಕಳೆದುಕೊಳ್ಳುತ್ತೇನೆ. ದಯಮಾಡಿ ಆ ಮುಳ್ಳನ್ನು ಕೀಳು ಎಂದಿತು’.

ಕನಿಕರಗೊಂಡ ಕೃಷ್ಣ ಬೇಲಿಯಲ್ಲಿದ್ದ ಕತ್ತಾಳೆಯ ಮುಳ್ಳನ್ನು ಬಿಡಿಸಿಕೊಂಡು ಮುಂಗುಸಿಯನ್ನು ನಿಧಾನವಾಗಿ ಎತ್ತಿಕೊಂಡ. ಅದರ ಕುತ್ತಿಗೆಯಲ್ಲಿದ್ದ ಮುಳ್ಳನ್ನು ಬಗೆದು ಕಿತ್ತ. ಕೀವು ಹಿಂಡಿದ. ಕೀವು ಹೋದಂತೆಲ್ಲಾ ಮುಂಗುಸಿಗೆ ನಿರಾಳವಾದಂತೆ ಆಯಿತು. ಕೃಷ್ಣನು ಲಂಟಾನ ಸೊಪ್ಪಿನ ರಸವನ್ನು ಮುಂಗುಸಿಯ ಗಾಯದ ಭಾಗಕ್ಕೆ ಹಿಂಡಿದ. ನಂತರ ಮುಂಗುಸಿಯನ್ನು ಕೆಳಗೆ ಬಿಟ್ಟ. ಮುಂಗುಸಿಗೆ ಬಹಳ ಸಂತೋಷವಾಯಿತು.

ಅವನು ತಾನು ತಂದ ರೊಟ್ಟಿಯಲ್ಲಿ ಅದಕ್ಕೂ ಒಂದು ತುಂಡು ನೀಡಿದ. ಆ ಘಟನೆಯು ಅವರಿಬ್ಬರ ನಡುವೆ ಸ್ನೇಹ ಬೆಳೆಯುವಂತೆ ಮಾಡಿತು. ಕೃಷ್ಣ ಪ್ರತಿನಿತ್ಯವೂ ಆ ಗಾಯಕ್ಕೆ ಸೊಪ್ಪಿನ ರಸ ಹಿಂಡುತ್ತಿದ್ದ. ಕೆಲವೇ ದಿನಗಳಲ್ಲಿ ಗಾಯ ವಾಸಿಯಾಯಿತು.

ದಿನಗಳು ಉರುಳಿದವು. ಆ ವರ್ಷ ಮಳೆ ಬಾರದೆ ಬಾವಿ ಬತ್ತಿ ಅವನ ಸುಂದರ ಗುಲಾಬಿ ತೋಟ ಒಣಗಿಹೋಯಿತು. ಅಕ್ಕಂದಿರು ಮದುವೆಯ ವಯಸ್ಸಿಗೆ ಬಂದಿದ್ದರೂ ಬಡವರೆಂಬ ಕಾರಣಕ್ಕೆ ಅವರಿಗೆ ಲಗ್ನ ಕೂಡಿ ಬರಲಿಲ್ಲ. ಇದು ತಾಯಿ ಗಂಗಮ್ಮನಿಗೂ, ಕೃಷ್ಣನಿಗೂ ಚಿಂತೆ ತಂದಿಟ್ಟಿತು. ಅಕ್ಕಂದಿರಿಗೆ ಮದುವೆ ನಿಕ್ಕಿ ಆದರೂ, ಮದುವೆಗೆ ಬರುವ ಅತಿಥಿಗಳಿಗೆ ಒಳ್ಳೆಯ ಅಡುಗೆ ಮಾಡಿಸಲೂ ಹಣ ಇರಲಿಲ್ಲ.

ಒಂದು ಮುಂಜಾನೆ ಊರಿನ ಗೌಡರು, ‘ನೀನು ಓದ್ತ ಇರ್ತಿಯೋ ಅಥವಾ ಅಕ್ಕಂದಿರ ಮದುವೆ ಮಾಡ್ತಿಯೋ’ ಎಂದ ಮಾತು ಕೃಷ್ಣನ ಮನಸ್ಸನ್ನು ನೋಯಿಸಿತ್ತು. ಇದೇ ಚಿಂತೆಯಲ್ಲಿ ಕೃಷ್ಣ ಮರದ ಕೆಳಗೆ ಕುಳಿತು ಯೋಚಿಸತೊಡಗಿದ. ಅಲ್ಲಿಗೆ ಬಂದ ಅವನ ಗೆಳೆಯ ಮಧುರ, ಕೃಷ್ಣನ ಮುಖದಲ್ಲಿದ್ದ ದುಃಖ ಕಂಡು ಕಾರಣ ಕೇಳಿತು.

ಅವನಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ, ‘ಬಹಳ ಹಿಂದೆ, ನಾವು ಚಿಕ್ಕವರಾಗಿದ್ದಾಗ ನನ್ನ ತಂದೆಯ ಜೊತೆ ಬರುತ್ತಿದ್ದಾಗ ನಾಗರ ಹಾವೊಂದು ಒಬ್ಬ ರತ್ನಪಡಿ ವ್ಯಾಪಾರಿಯನ್ನು ಕಚ್ಚಿತ್ತು. ಅವನು ನರಳುತ್ತ ಆ ಹಾವನ್ನು ಕಲ್ಲಿನಿಂದ ಕೊಂದಿದ್ದನು. ಅವನು ನೋವಿನಿಂದ ಕಾಪಾಡಿ ಎಂದು ಕೂಗುತ್ತಿದ್ದ. ತಕ್ಷಣವೇ ನಾವು ನಂಜೇರದ ಸೊಪ್ಪನ್ನು ಅವನ ಮೂಗಿಗೆ ಹಿಡಿದೆವು. ವಿಷ ಇಳಿದು ಅವನು ಚೇತರಿಸಿಕೊಂಡ. ನಾವು ಬೇಡ ಎಂದರೂ ಕೇಳದೆ ಚಿನ್ನದ ನಾಣ್ಯಗಳ ಚೀಲ ನೀಡಿದ್ದ. ಚೀಲ ನಮ್ಮ ಬಿಲದ ಒಳಗೆ ಇದೆ’ ಎಂದ ಮುಂಗುಸಿ, ತಕ್ಷಣವೇ ಬಿಲದೊಳಗೆ ಕಣ್ಮರೆಯಾಯಿತು.

ನಾಣ್ಯದ ಚೀಲವನ್ನು ಬಾಯಲ್ಲಿ ಎಳೆದು ತಂದಿತು. ಅದನ್ನು ಕೃಷ್ಣನಿಗೆ ನೀಡಿತು. ಮುಂಗುಸಿಯ ಒತ್ತಾಯದ ಕಾರಣದಿಂದಾಗಿ ಕೃಷ್ಣನು ಸಂಕೋಚದಿಂದಲೇ ಅದನ್ನು ಎತ್ತಿಕೊಂಡ. ಕೃತಜ್ಞತೆ ಅರ್ಪಿಸಿ ಮನೆಗೆ ಹಿಂದಿರುಗಿದ. ಕೆಲವೇ ದಿನಗಳಲ್ಲಿ ಅಕ್ಕಂದಿರ ಮದುವೆಯನ್ನು ಅದ್ದೂರಿಯಾಗಿ ಮಾಡಿದ. ಮದುವೆಯ ದಿನದ ಸಂಜೆ ಕೃಷ್ಣನು ಸಿಹಿ ಹೋಳಿಗೆಯೊಂದಿಗೆ ತೋಟಕ್ಕೆ ಬಂದು ಮುಂಗುಸಿಗೆ ಧನ್ಯತೆಯಿಂದ ನೀಡಿದ. ಅದು ಹೋಳಿಗೆ ತಿನ್ನುವುದನ್ನು ನೋಡಿ ಕೃತಜ್ಞತೆಯ ಕಣ್ಣೀರು ಸುರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT