ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ| ಜಗದಣ್ಣನ ಲೆಕ್ಕ ಪುಸ್ತಕ

Last Updated 10 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಕಡು ಬೇಸಿಗೆಯ ದಿನಗಳು. ಸಂಗಾಪುರ ಮತ್ತು ಸುತ್ತಮುತ್ತಲಿನ ಸೀಮೆಯಲ್ಲಿ ಮಳೆ ಮಾಯವಾಗಿತ್ತು. ಮುಗಿಲನ್ನು ಎಷ್ಟೇ ಹುಡುಕಿದರು ಮಳೆಯ ಸಣ್ಣ ಕುರುಹು ಕಾಣುತ್ತಿರಲಿಲ್ಲ. ಆದರೂ ಮುಗಿಲು ನೋಡುವುದನ್ನು ಜನ ಬಿಟ್ಟಿರಲಿಲ್ಲ. ಹೊಲಮಾಳಗಳು ಬಿಕೋ ಎನ್ನುತ್ತಿದ್ದವು. ದನಕರುಗಳು ತಿಪ್ಪೆಯ ದಂಟನ್ನು ತಿಂದು ಜೀವ ಹಿಡಿದುಕೊಂಡಿದ್ದವು. ಕೆರೆಗಳು ಸತ್ತು ತುಂಬಾ ವರ್ಷಗಳೇ ಆಗಿದ್ದವು. ಎಲ್ಲಿ ನೋಡಿದರೂ ಜಾಲಿ ಮುಳ್ಳುಗಳದ್ದೆ ಸಾಮ್ರಾಜ್ಯ. ಬೀದಿಬದಿಯಲ್ಲಿ ನಿಮಿರಿ ನಿಂತು ಅಣಕಿಸುತ್ತಿದ್ದವು. ತಳ ಸೇರಿದ ಬಾವಿನೀರಿಗೆ ಜನ ಜಗಳ ಕಾಯುತ್ತಿದ್ದರು. ಯಾರ ಬಳಿಯೂ ನಯ ಪೈಸ ಇರಲಿಲ್ಲ. ಉಣ್ಣಲು ಪಡಿತರ ಅಂಗಡಿಯಲ್ಲಿ ಅಕ್ಕಿ ಮಾತ್ರ ಸಿಗುತ್ತಿತ್ತು. ಎಂದೋ ಬೆಳೆದ ಮೆಣಸಿನಕಾಯಿಗಳನ್ನು ಮನೆ ಮಹಡಿಯ ಮೇಲೆ ಒಣಗಿಸಿ ಜ್ವಾಪಾನ ಮಾಡಿಟ್ಟುಕೊಂಡಿದ್ದರು. ಒಣಕಾಯಿಯನ್ನು ದುಂಡಿಯಲ್ಲಿ ತಿರುವಿ ಕೆಂಪಿಂಡಿ ಮಾಡಿಕೊಳ್ಳುತ್ತಿದ್ದರು. ಜೋಳದ ನಿಟ್ಟುಗಳು ನಿಧಾನವಾಗಿ ಕರಗತೊಡಗಿದ್ದವು. ಕೆಲವರ ಮನೆ ವಾಡೆಗಳಲ್ಲಿ ಸೆರಿ ಜೋಳ ಸಿಗುತ್ತಿರಲಿಲ್ಲ. ಹಗೇವುಗಳು ಬಾಯ್ದೆರೆದು ಯಾರನ್ನಾದರೂ ನುಂಗಲು ಕಾಯುವಂತೆ ಕುಳಿತ್ತಿದ್ದವು. ಜೋಳ ಕಾಣದೆ ಮೂರ್ನಾಕು ವರ್ಷವಾಗಿತ್ತು. ಭುವಣ್ಣ ಮನೆ ಮುಂದಿನ ಹಗೇವು ನೋಡಿ ಕಣ್ಣೀರು ತಂದು ‘ತಮ್ಮ ಮುಚ್ಚಿ ಬಿಡ್ರಲೆ... ಸಾಕು ಬಾಯಿ ತೆಗೆದು ಬಿಡಬ್ಯಾಡ್ರಿ ಹುಡ್ರು ಉಪ್ಪಡಿ ಬಿದ್ದಾವು ಮುದುಕ್ರು ಮುಂಡ್ರನ್ನು ನುಂಗಿ ಬಿಟ್ಟಿತು... ಬ್ಯಾಡ ಸುಮ್ನೆ ಮುಚ್ಚಿ ಬಿಡ್ರಿ’ ಎಂದು ಹಗೇವು ಮುಚ್ಚಿಸಿದ್ದ. ಊಟಕ್ಕೆ ಕೆಂಪಿಂಡಿ ಅನ್ನ ಅಷ್ಟೆ. ಅದನ್ನೇ ಕಲಿಸಿಕೊಂಡು ತಿನ್ನಬೇಕಿತ್ತು. ಕೆಲವೊಮ್ಮೆ ಕುತ್ತಿಗೆ ಹಿಡಿದು ನೆತ್ತಿಗೆ ಹತ್ತಿ ಕೆಮ್ಮು ಒತ್ತರಿಸಿ ಬರುತ್ತಿತ್ತು. ಒಣಕಾಯಿ ತುಂಬಾ ಖಾರ. ಮೂಗು ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಆದರೂ ತಿನ್ನುವುದನ್ನು ಬಿಡುತ್ತಿರಲಿಲ್ಲ. ದಿನದ ಕೂಳು ಹೊಂದಿಸಿಕೊಳ್ಳುವುದು ಹರ್ಮಗಾಲ. ಜನ ಆಸೆಗಳನ್ನು ಕಾಲನ ಕೈಗೆ ಮಾರಿಬಿಟ್ಟಿದ್ದರು.

ಸಂಗಾಪುರ ಹೊನ್ನಳ್ಳಿಗೆ ಹೋಗೋ ರಸ್ತೆಯಿಂದ ಸೀಳಿಕೊಂಡು ಮೂರು ಮೈಲಿ ಒಳಗೆ ಕಾಲುದಾರಿ. ಈ ಊರಿನ ಜನ ಭಾನುವಾರ ಬೆನ್ನೂರು ಸಂತೆಗೆ ಬಂದು ಹೋದರೆ ಮತ್ತೆ ವಾರಪೂರ್ತಿ ಎಲ್ಲಿಗೂ ತಿರುಗಿ ನೋಡಲ್ಲ. ಇತ್ತೀಚಿಗೆ ಹೊಟ್ಟೆ ಪಾಡಿಗೆ ಬೆಂಗಳೂರು ಸೇರಿಕೊಂಡಿದ್ದಾರೆ. ಎಲೆಕ್ಷನ್ ಇದ್ರೆ ಮಾತ್ರ ಬಂದು ವೋಟ್ ಹಾಕಿ ಹೋಗುತ್ತಾರೆ. ರಾಜಕೀಯದವರು ಬಂದು ಹೋಗಿದ್ದಕ್ಕೆ ತಲ ವೋಟಿಗೆ ಇಷ್ಟು ಅಂತ ಲೆಕ್ಕ ಹಾಕಿ ಕೊಡುತ್ತಾರೆ. ಅದು ಬಸ್ ಖರ್ಚಿಗೆ ಆಗುತ್ತದೆ. ಎಲೆಕ್ಷನ್ ನೆಪದಗಾದ್ರು ಅಪ್ಪ ಅವ್ವನ ಮಾರಿ ನೋಡಿ ನೋಡಬೋದು ಅಂತ ಬಂದು ವೋಟು ಹಾಕಿ ತಂದೆ ತಾಯಿಗಳಿಗೆ ಖರ್ಚಿಗಿಷ್ಟು ರೊಕ್ಕ ಕೊಟ್ಟು ಹೋಗುತ್ತಾರೆ. ಮುದಿಜೀವಿಗಳು ಮುಂದಿನ ಎಲೆಕ್ಷನ್‌ವರೆಗೂ ಕಾಯಬೇಕಿತ್ತು.

ಜಗದಣ್ಣನ ಬಳಿ ಒಂದಿಷ್ಟು ದುಡ್ಡಿದ್ದವು. ಕಷ್ಟಕಾಲಕ್ಕೆ ಬೇಕಾಗಬಹುದು ಎಂದು ಬೆನ್ನೂರಿನ ಬ್ಯಾಂಕೊಂದರಲ್ಲಿ ಜಮೆ ಮಾಡಿದ್ದ. ಅವನಿಗೆ ಏನು ತಿಳಿಯಿತೋ ಗೊತ್ತಿಲ್ಲ! ಒಂದು ದಿನ ಬೆನ್ನೂರಿಗೆ ಹೋಗಿ ಬ್ಯಾಂಕಿನಲ್ಲಿರುವ ಎಲ್ಲಾ ದುಡ್ಡನ್ನು ಬಿಡಿಸಿಕೊಂಡ. ಅಂಗಡಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಖರೀದಿ ಮಾಡಿದ. ಬೆಲ್ಲ, ಬೇಳೆ, ಅಕ್ಕಿ, ಉಪ್ಪು, ಸಕ್ಕರೆ ಇನ್ನು ಮುಂತಾದ ದಿನಸಿಗಳನ್ನು ಕಟ್ಟಿಸಿದ. ಅವನದು ಊರಲ್ಲಿ ಕುಂಟು ಅಂಗಡಿಯಿತ್ತು. ತನ್ನ ಮಕ್ಕಳು ನೆನಪಾಗಿ ಒಂದು ಗೊನೆ ಬಾಳೆಹಣ್ಣು, ರಾಮಣ್ಣನ ಅಂಗಡಿಯಲ್ಲಿ ಪೇಡೆ, ರಸಗುಲ್ಲ ಕೊಂಡುಕೊಂಡ. ಕಿಳ್ಳೆ ಲಾರಿಯನ್ನು ಕಾದು ಕಿರಾಣಿಯನ್ನು ಹೊತ್ತು ಅಡಕಿದ. ಎಲ್ಲಾ ಸಾಮಾನುಗಳನ್ನು ಒಬ್ಬನೇ ಹೊತ್ತು ಹಾಕಿದ್ದರಿಂದ ತುಂಬಾ ದಣಿದಿದ್ದ. ಬೆವರು ಅವನ ಅಂಗಿಯನ್ನು ತೊಯಿಸಿ ತೊಪ್ಪೆ ಮಾಡಿತ್ತು. ದಮ್ಮು ಕುತ್ತಿಗೆ ಇಚುಗುತಿತ್ತು. ಅವನ ಕಷ್ಟ ನೋಡಲಾಗುತ್ತಿರಲಿಲ್ಲ. ಈಗಿನಂತೆ ವಾಹನಗಳಿರಲಿಲ್ಲ. ಪೇಟೆ ದಾರಿ ತುಳಿಯುಲು ಜನ ಅಂಜುತ್ತಿದ್ದರು. ಪೇಟೆಯೆಂದರೆ ಠಕ್ಕು, ಮೋಸ, ಗೊತ್ತುಗುರಿಯಿಲ್ಲದ್ದು ಎಂಬ ಭಾವ. ಎಲ್ಲರೂ ಹಳ್ಳಿಹಾದಿಯನ್ನೇ ಸವೆಸುತ್ತಿದ್ದರು. ಲಾರಿ ಊರೊಳಗೆ ಬರುತ್ತಿರಲಿಲ್ಲ. ಊರಿಂದ ಮೂರು ಕಿ.ಮೀ ದೂರದ ಕತ್ರಿಯಲ್ಲೇ ಸಾಮಾನುಗಳನ್ನು ಬಿಸಾಕಿ ಹೋದರು. ಜಗದಣ್ಣ ಎಲ್ಲ ಸಾಮಾನುಗಳನ್ನು ಚಕ್ಕಡಿಯಲ್ಲಿ ಹಾಕಿಕೊಂಡು ಅಂಗಡಿಗೆ ತಂದು ಹಾಕಿದ.

ಕಿರಾಣಿ ಬಂದಿದ್ದು ಊರಲ್ಲಿ ದೊಡ್ಡ ಸುದ್ದಿಯಾಯಿತು. ಜನರು ಹಸಿವಿನ ಕಂದು ಹರಿಯಬಹುದು ಎಂದುಕೊಂಡರು. ಉದ್ರಿ ಹೇಗೆ ಕೇಳುವುದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿತ್ತು. ಈಗಾಗಲೇ ಸಾಕಷ್ಟು ಉದ್ರಿ ಕಾಲು ಮುರಿದುಕೊಂಡು ಗುಡ್ಡದಂತೆ ಕೂತಿದೆ. ಕೇಳಿದರೆ ಜಗದಣ್ಣ ಕೊಡುತ್ತಾನಾ? ಎಲ್ಲರೂ ಲೆಕ್ಕಪುಸ್ತಕಕ್ಕೆ ಹೆದರಿ ಸುಮ್ಮನಿದ್ದರು. ಮರುದಿನ ಜಗದಣ್ಣ ಎಲ್ಲರನ್ನೂ ಕರೆದು ‘ಮುಂದಿನ ವರ್ಷ ಬೆಳೆದು ಉದ್ರಿ ತಿರುಸುವಂತ್ರಿ ಈಗ ಹೊಯ್ಯಿರಿ ಮಾಡ್ಕೆಂದು ಉಣ್ರಿ’ ಎಂದು ಕಿರಾಣಿ ತೂಗಿ ಕೊಡತೊಡಗಿದ. ಅಂಗಡಿ ಮುಂದೆ ದೊಡ್ಡ ಸಾಲು ನಿಂತಿತು. ರಾತ್ರಿ ಎರಡು ಗಂಟೆವರೆಗೂ ದಿನಸಿ ತೂಗಿಕೊಟ್ಟ. ಅಂಗಡಿ ಖಾಲಿಯಾಯಿತು. ಅವನ ಹೆಂಡತಿ ಗಿರಿಜವ್ವ ಬೈದಳು. ಅವನ ಮಕ್ಕಳು ಸುಮ್ಮನೆ ಕೂತಿದ್ದೆವು. ಅವನಪ್ಪ ರುದ್ರಜ್ಜ ‘ತಮ್ಮ ಜಗದಾ... ಬರಗಾಲದಾಗ ಉದ್ರಿಕೊಟ್ಟು ಹುಚ್ಚುಮಂಗ್ಯಾ ಆದಿ, ನಿನ್ನ ತೆಲಿ ಸುದ್ದಿಲ್ಲ. ಹೆಂಡ್ರು ಮಕ್ಕಳಿಗೆ ಚಿಪ್ಪು ಕೊಟ್ಟು ಕುಂತಿ’ ಎಂದು ಬೈದ. ಜಗದಣ್ಣ ಸುಮ್ಮನೆ ಚೀಲ ಕೊಡವಿ ಸುತ್ತಿಡುತ್ತಿದ್ದ. ಗಿರಿಜವ್ವ ತುಂಬಾ ದಿನದ ನಂತರ ಗೋಧಿಹುಗ್ಗಿ ಮಾಡಿದ್ದಳು. ಜಗದಣ್ಣ ಹೊಟ್ಟೆ ತುಂಬ ಉಂಡ. ಮಕ್ಕಳು ನಿದ್ದೇಗಂಣ್ಣಿನಲ್ಲೆ ಉಂಡವು. ಮುದುಕ ಉಣ್ಣಲಿಲ್ಲ. ಗಿರಿಜವ್ವ ಕಟ್ಟಿಗೆ ಮೂಲೆಯಲ್ಲಿ ಕುಳಿತು ಅತ್ತಳು. ಮಕ್ಕಳು ಕೂತಲ್ಲೇ ಜೋಪಡಿಸತೊಡಗಿದೆವು.

******
ಊರು ಒಂದಿಷ್ಟು ದಿನ ಜೀವನ ನೂಕಿತು. ಶಾಲೆಗಳು ಆರಂಭವಾದವು. ಜಗದಣ್ಣನ ಬಳಿ ಮಕ್ಕಳಿಗೆ ಪೆನ್ನು ಪುಸ್ತಕ ಕೊಡಿಸಲು ದುಡ್ಡಿರಲಿಲ್ಲ. ಅವನ ಗಳಿಕೆಯಲ್ಲಾ ಲೆಕ್ಕಪುಸ್ತಕ ಸೇರಿತ್ತು. ದಮ್ಮು ಜಗದಣ್ಣನನ್ನು ಆಕ್ರಮಿಸಿತು. ಮಲಗಲು ಬಿಡುತ್ತಿರಲಿಲ್ಲ. ಅವನ ಎದೆಗೂಡು ಉಸಿರ ಕಟ್ಟಿ ಕುಂತಿತ್ತು. ಬ್ಯಾಸಿಗಿಯ ಬಿಸಿಲಿನ ಝಳಕ್ಕೂ ದೂಳಿಗೂ ತೇಕು ಹೆಚ್ಚಾಯಿತು. ಮೇಲಿನ ಜೀವ ಮೇಲಕ್ಕೆ, ಕೆಳಗಿನ ಜೀವ ಕೆಳಕ್ಕೆ... ಪಕ್ಷಿಯಂತೆ ಹಾರಡುತ್ತಿತ್ತು. ಗಿರಿಜವ್ವ ಬಾಯಲ್ಲಿ ಅಕ್ಕಿಕಾಳು ಹಾಕಿಕೊಂಡು ಕುಂತಿದ್ದಳು ‘ಮಣಿಪಾಲದಾಗ ಒಳ್ಳೆ ಡಾಕ್ಟರ್ ಅದಾರ, ಚಲೋ ಔಷಧಿ ಕೊಡ್ತಾರ. ಬಾಯಲ್ಲಿ ಹೊಡ್ಕೊಳೋದು ಕೊಡ್ತಾರೆ ಅದನ್ನು ಬಾಯಾಗ ಹೊಡ್ಕೊಂಬಿಟ್ರೆ ಹೋಗೋ ಪಕ್ಷಿ ವಳ್ಳಿ ಬರತೈತಿ. ತೇಕು ನಿಂತ ಕಾಲಿನಮ್ಯಾಲ ಕಡಿಮಿ ಹಾಕ್ಕೆತಿ ಒಂದ್ಸಲ ಕರ್ಕೊಂಡು ಹೋಗಿ ತೋರ್ಸಬಾರದ’ ಮೂಲಿಮನಿ ಗಂಗಜ್ಜಿ ಹೇಳಿದ್ದು ನೆನಪಾಯಿತು. ಗಂಗಜ್ಜಿ ಮಗ ಗಾಳಿ ಬಸ್ಯಾ ಮಂಗಳೂರಿನಾಗ ಗೌಂಡಿಕೆಲಸ ಮಾಡ್ತಾನೆ. ವರ್ಷವೊಪ್ಪತ್ತು ದುಡುಕೊಂಡು ಬಂದು ಮಂತ್ಯಾನ ನಿಭಾಯಿಸುತ್ತಾನೆ. ಕಳೆದ ಸಲ ಬಂದಾಗ ಅವರವ್ವನ ದಮ್ಮು ನೋಡಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದ. ಹದಿನೈದು ದಿನ ಮಣಿಪಾಲ ಆಸ್ಪತ್ರೆಯಲ್ಲಿ ತೋರಿಸಿ ಕಳಿಸಿದ್ದ. ಆ ಔಷಧಿ ಚಲೋ ಆಗಿತ್ತು. ಗಂಗಜ್ಜಿ ಕುದುರೆಯಾಗಿದ್ದಳು. ಗಿರಿಜವ್ವಗೆ ಈ ವಿಷಯ ಮನಸ್ಸಿಗೆ ಹೊಕ್ಕುತ್ತಲೇ ಹೇಗಾದರೂ ಮಾಡಿ ತನ್ನ ಗಂಡನನ್ನು ಮಣಿಪಾಲಗೆ ಕರೆದುಕೊಂಡು ಹೋಗಬೇಕೆನ್ನಿಸಿತು.

*****
ಮಟ ಮಟ ಮಧ್ಯಾಹ್ನ. ಬಿಸಿಲಿನ ಜಳ ಬೆವರನ್ನು ಕೂಡ ನುಂಗುತ್ತಿತ್ತು. ಅಂಗಳವೆಂಬುದು ಕಾದ ಕುಲುಮೆಯಾಗಿತ್ತು. ಒಂದು ಕೊಡ ನೀರು ಚಿಮುಕಿಸಿದರೆ ಕುಲುಮೆಯಂತೆ ಹೊಗೆ ಮೇಲೇಳುತ್ತಿತ್ತು. ಗಿರಿಜವ್ವ ರೊಟ್ಟಿ ಸುಡುವುದನ್ನು ಬಿಟ್ಟು ಹಿಟ್ಟುಗೈಯಲ್ಲೇ ಬಂದು ಗಂಡನನ್ನು ನೋಡಿದಳು ಮೈ ಬೆಂಕಿಯಾಗಿತ್ತು. ವದ್ದೆ ಬಟ್ಟೆಯಿಂದ ಗಂಡನ ಮೈ ಒರೆಸಿದಳು ಆದರೂ ಕಡಿಮೆ ಆಗಲಿಲ್ಲ. ಕಣ್ಣುಗಳು ಮಂಜಾದವು. ಎದೆಯೊಳಗಿನ ಸಂಕಟ ಬಾಯಿಗೆ ಬಂತು. ಬೋರಾಡಿ ಅಳತೊಡಗಿದಳು. ಇವಳ ಅಳು ಕೇಳಿ ಮೂಲಿಮನಿ ಭುವಜ್ಜ ಬಂದ. ಜಗದಣ್ಣನ ಉಬ್ಬಸು ತಾರಕಕೇರಿತ್ತು. ‘ತಾಯಿ ನಿನ್ನ ಗಂಡ ಉಳಿಯೋಲ್ಲ... ಊರು ಸಲುವಿದ ಪುಣ್ಯಾತ್ಮಗೆ ಈಗಾಗ ಬಾರದಿತ್ತು. ಇನ್ನ ಕಾಯಿಕೆಂತ ಕುಂತ್ರ ಕೈ ತಪ್ಪಿ ಹೊಕ್ಕೆತಿ ದೊಡ್ಡ ದವಾಖಾನೆ ತೋರಿಸು’ ಎಂದ. ‘ಅಯ್ಯೋ ದೊಡ್ಡಯ್ಯ ನಂತಾಕೆ ಹಣಿಗೆ ಹಚ್ಚಾಕು ಎಂಟಾಣೆ ಇಲ್ಲ. ಇವ್ರು ಇದ್ದು ಬದ್ದುದನ್ನೆಲ್ಲಾ ಊರಿಗೆ ಕೊಟ್ಟು ಕುಂತಾರ. ಎಲ್ಲಿಂದ ತಕ್ಕಂಬರ್ಲಿ ತಿಳಿವಲ್ದಾಗೇತಿ’ ಎಂದು ಕಣ್ಣೀರು ತಂದಳು. ‘ಕಾಯಿಲೆ ಮನುಷ್ಯನಿಗೆ ಬರೆದೆ ದ್ಯಾವ್ರಿಗೆ ಬರ್ತದೆನವ್ವ... ಏನಾದ್ರೂ ಮಾಡಿದ್ರಾತು... ಕೋಣಿಜ್ಜ ಅದಾನ ಹೆದರಬ್ಯಾಡ’ ಭುವಜ್ಜ ಸಂತೈಸಿದ. ಭುವಜ್ಜ ಮತ್ತು ಗಿರಿಜವ್ವನ ಮಾವ ರುದ್ರಜ್ಜ ವಾರಿಗೆಯವರು. ಜೊತೆಗೆ ಬೆಳೆದವರು, ಜೊತೆಗೆ ಮದುವೆಯಾದವರು, ಇಬ್ಬರಿಗೂ ಗಂಡು ಮಕ್ಕಳು. ಭುವಜ್ಜ ಜಗದಣ್ಣನನ್ನು ಎತ್ತಾಡಿಸಿದವನು. ಅವನ ಕಳ್ಳು ಚುರುಕ್ಕೆನ್ನಿಸಿತು.

ಗಿರಿಜವ್ವ ದುಡ್ಡಿಗಾಗಿ ಮನೆಯೆಲ್ಲಾ ತಡಕಾಡಿದಳು. ಕಬ್ಬಿಣದ ಪಿಟಾರಿಯಲ್ಲಿ ಹತ್ತು ರೂಪಾಯಿಯ ಎರೆಡು ನೋಟು ಸಿಕ್ಕವು. ತವರಿನವರು ಹಾಲುಣ್ಣಲು ಹೊಡೆದು ಕಳಿಸಿದ್ದ ಜಳಗಿ ಎಮ್ಮೆ ಮಾರಿದ ದುಡ್ಡು ನೆನಪಾಯಿತು. ಹಟ್ಟದ ಕಡೆ ನೋಡಿದಳು. ಟ್ರಂಕು ಕಾಣಿಸಿತು. ಮೇಲಿದ್ದ ಹಳೇ ಟ್ರಂಕನ್ನು ಕೆಳಗಿಳಿಸಿದಳು. ಬೀಗ ಹಾಕಿತ್ತು. ಬೀಗ ಹುಡುಕಿದಳು ಸಿಗಲಿಲ್ಲ. ಅಲ್ಲೇ ಇದ್ದ ಕುಟುಗಲ್ಲಿನಿಂದ ಜಜ್ಜಿ ತೆಗೆದಳು. ಬಾಗಿಲು ತೆಗೆಯುತ್ತಲೇ ಲೆಕ್ಕ ಪುಸ್ತಕ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡಳು... ಕೈ ನಡುಗತೊಡಗಿತು. ತುಂಬಾ ಭಾರವೆನಿಸಿತು. ತನ್ನ ಕೈಯಲ್ಲಿ ಇನ್ನೇನು ಸಾಧ್ಯವಿಲ್ಲ... ಕರ್ಮದ ಫಲವೆಲ್ಲ ಲೆಕ್ಕ ಪುಸ್ತಕ ಸೇರಿದೆ. ಹಿಟ್ಟುಗೈಯಲ್ಲೇ ಪುಟ ತಿರುವಿದಳು... ಪುಟಗಳು ಅವಳ ಅಸಹಾಯಕತೆ ನೋಡಿ ಮರುಗಿದವು. ಕೊಣಬಿಯಲ್ಲಿ ನಾದಿಟ್ಟಿದ್ದ ಹಿಟ್ಟಿಗೆ ಮುತ್ತಿಗೆ ಹಾಕಿದ್ದ ನೊಣಗಳ ಜೇಂಕಾರ ಮೌನವನ್ನು ಮುರಿದು ಹಾಕಲು ನೋಡುತ್ತಿತ್ತು. ಒಲೆಯ ಬೆಂಕಿ ಕೆಂದೋಕಳಿಯ ಬೆಳಕು ಚೆಲ್ಲುತ್ತಿತ್ತು. ಗಿರಿಜವ್ವಳ ತೆಲೆಯೊಳಗೆ ಶರಭಿ ಗುಗ್ಗಳ ಉರಿಯುತ್ತಿತ್ತು. ಲೆಕ್ಕ ಪುಸ್ತಕ ಇದ್ದಕ್ಕಿದ್ದಂತೆ ಒಲೆಯ ಬೆಂಕಿ ಜೊತೆ ಸೇರಿತು. ರುದ್ರಜ್ಜ ‘ಅಯ್ಯೋ ತಾಯಿ ಎಂಥಾ ಕೆಲ್ಸ ಮಾಡ್ಬಿಟ್ಟೆ ಯವ್ವಾ...ಬದುಕೇ ಬೂದಿಯಾತು’ ಸಂಜೆ ಸಾಯಿಸುವಂತೆ ಕಾಣುತ್ತಿತ್ತು. ಗಿರಿಜವ್ವಳಿಗೆ ಗಂಗಜ್ಜಿ ನೆನಪಾದಳು. ದಮ್ಮಿನ ಔಷದಿ ಸಿಕ್ಕರೆ... ಹೋಗೋ ಪಕ್ಷಿ ಉಳಿಬೋದು ಎಂದು ತೆಲೆಗೋಕ್ಕಿದ್ದೆ ತಡ ಗಂಗಜ್ಜಿ ಮನೆಕಡೆ ಓಡಿದಳು.

*****
ಅಯ್ಯೋ ಗಿರಿಜವ್ವ ದ್ಯಾವ್ರಂತ ಮನಶ್ಯಂಗೆ ಇಂಗಾಗಿದೆ ಅಂದ್ರೆ ಔಷದಿ ಕೊಡದೆ ಇರ್ತಿನಾ...ತಂದೆ ತಡಿ ಎಂದು ಹಾಸಿಗೆಯಿಂದ ಮೇಲೇಳಲಾಗದೆ ಮೇಲೆದ್ದೇಳು. ಮೂಲೆಯಲ್ಲಿದ್ದ ಎಲೆ ಅಡಿಕೆಚೀಲದಲ್ಲಿನ ಔಷದಿ ತಂದು ‘ತಗ ಇದೊಂದೇ ನನ್ನ ತಾಕ ಇರೋದು ಇದನ್ನು ಬಾಯಿಗಿಟ್ಟು ಎಲ್ಡು ಸಲ ಅದುಮು ಚಿರ್ ಚಿರ್ ಅಂತಾ ಹೋಗೆ ಬರ್ತಿತಿ ಅದನ್ನು ಕುಡಿಯೋಕೆ ಹೇಳು ಉಸುರು ಸರಳ ಆಗತೈತಿ’ ಎಂದಳು

‘ನಿನ್ನ ರಿಣ ದೊಡ್ಡದು ಗಂಗಜ್ಜಿ’

‘ರಿಣ ಮಾತು ಯಾಕಾಡ್ತಿ ತಾಯಿ. ನನ್ನ ಮಗಳ ಮದಿವಿ ಹ್ಯಾಂಗ ಮಾಡ್ಲೆಪ್ಪ ಅಂತಾ ಚಿಂತಿಗೆ ಬಿದ್ದಾಗ ಗಂಡ ಹೆಂಡ್ತಿ ದ್ಯಾವ್ರಂಗೆ ಬಂದು ಮಗಳಿಗೆ ಸಿರಿ ಕುಬುಸ, ಮದಿವಿ ಊಟಕ್ಕ ಕಿರಾಣಿ ಕೊಟ್ರಿ..ಇಲ್ಲುದಿದ್ರೆ ಈ ಜಲ್ಮದಾಗೆ ಮಗಳ ಮದಿವಿ ಆಕ್ಕಿದಿಲ್ಲ. ಲೆಕ್ಕದಾಗೆ ನಾನೆ ನಿಮ್ಮ ರಿಣಿದಾಗೆ ಇದಿನವ್ವ. ನಂದೇನು ಐತಿ ಇವತ್ತಿಲ್ಲ ನಾಳೆ ಬಿದ್ದೋಗೋ ಮರ ದಿನ ಎಣಿಸೋಳು...ತಗ ಜಲ್ದಿ ಹೊಯ್ದು ಹಾಕು’ ಎಂದು ಕೊಟ್ಟಳು. ಹೊತ್ತು ಮೀರಿ ಕತ್ತಲು ಕವಚ್ಚಿಕೊಂಡಿತ್ತು. ಬೀದಿ ದೀಪಗಳು ದಾರಿ ತೋರುತ್ತಿದ್ದವು. ತಡ ಮಾಡಿದ್ರೆ ಅಪಾಯಕ್ಕಿಡಾಗಬೇಕಾದಿತು ಎಂದು ಅವಸರದಲ್ಲಿ ಮನೆಗೆ ಬಂದಳು.

*****
ಮಾರನೇ ದಿನ ಬೆಳೆಗ್ಗೆ ಭುವಜ್ಜ ರುದ್ರಜ್ಜ ಕಟ್ಟೆ ಮೇಲೆ ಕುಳಿತು ಹೂ ಬಿಸಿಲು ಕಾಯಿಸುತ್ತಿದ್ದರು. ಜಗದಣ್ಣನ ದಮ್ಮು ಕಡಿಮೆಯಾಗಿ ತೇಕು ನಿಂತಿತ್ತು. ಗಿರಿಜವ್ವಳಿಗೆ ತುಸು ನೆಮ್ಮದಿ ಸಿಕ್ಕಿತ್ತು. ಅವಳ ಪಾಲಿಗೆ ಹೊಸ ಬದುಕೊಂದು ತೆರೆದುಕೊಂಡಿತ್ತು. ಆ ಕಡೆಯಿಂದ ಕೆಂಪಣ್ಣ ಬಿರಿಸಿನಿಂದ ಹೆಜ್ಜೆ ಹಾಕುತ್ತಾ ಬಂದ ‘ಭುವಜ್ಜ ನಿಂಗೆ ಗೊತ್ತಿಲ್ಲ... ಗೊತ್ತಿಲ್ಲ... ನಿನ್ನೆ ರಾತ್ರಿ ಗಂಗಜ್ಜಿ ಶಿವ್ನ ಪಾದ ಸೇರಿಬಿಟ್ಳು. ಎಷ್ಟೋತ್ತಲಿ ಹೋಗೇತೋ ಯಾರಿಗೂ ಗೊತ್ತಿಲ್ಲ. ಬೆಳಗ್ಗೆ ನಮ್ಮ ಸಂಬಳದಾಳು ಸಿದ್ದ ನೋಡಿ ಎಬ್ಬಿಸಿದ್ರೆ ಮೇಲೇಳಲಿಲ್ಲ... ಮುಟ್ಟಿ ನೋಡಿದ್ರೆ ತಣ್ಣಗಾಗಿತ್ತಂತೆ... ಸುದ್ದಿ ಕಳಿಸ್ಯಾರ. ಮಂಗಳೂರಿಂದ ಮಗ ಬಂದಮ್ಯಾಕ ಎತ್ತರಾಂತೆ’ ಎಂದು ಹೇಳಿ ಸುದ್ದಿ ಬಿತ್ತಲು ಮುಂದಿನ ಕೆರೆಗೆ ಹೆಜ್ಜೆ ತುಳಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT