ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ಬೈಚಬಾಳ ಅವರ ಕಥೆ: ವಂದೇ ಮಾತರಂ-ಸಲೀಂ

Last Updated 17 ಜುಲೈ 2022, 0:15 IST
ಅಕ್ಷರ ಗಾತ್ರ

ನನ್ನ ಕಾಲ್ಗಳಿಗೀಗ ನೂರಾನಿ ಶಕ್ತಿ ಬಂದದ... ಏನು?, ಏನ್ ಮಾಡ್ಲಿ ಹೇಳು..? ಎಂದ, ಮಂದ ಕಾಲಿನ ಯಂಕನ ಮೈ ಕೊತಾಕೊತಾ ಕುದ್ಯಾಕತ್ತು. ಢಳ್‍ಫಳ್ ಮೆರುಣಿಗಿ ಸಪ್ಳ, ದೀಪ ಧೂಪದ ಸುಮಧುರ ವಾಸನಿಗಿ, ಗಡಿಗ್ಯಾಗ ಗಾಸ್ಲೇಟ್ ಎಣ್ಣಿ ತಂದ, ಅಂಧ ಕಲ್ಲಜ್ಜನ ಕಣ್ಣು ಕಂದಿಲಾತು. ಮೂಗನೊ! ಮೌನಿಯೊ! ಮೌನವಾಗಿದ್ದ ಧ್ವನಿ ಪೆಟ್ಟಿಗೆ, ಸ್ವರಾಜ್ಯ ದಿಬ್ಬಣದ ಉಗ್ಗಳಿಸುವಿಕೆಯ ಉಘೇ ಉಘೇ ಕೇಳಿದ ಕೂಡ್ಲೆ, ಸಲೀಂನ ತುಟಿಗಳಲ್ಲಿ ‘ವಂದೇ ಮಾತರಂ' ಕಂಪಿಸಿತು.

ಹರೋ... ಹರೋ... ಹಾಲಮಲ್ಲ..., ಲೋಲಮಲ್ಲ..., ಸಕ್ಕರಿಮಲ್ಲ..., ಸವಿಗಾರಮಲ್ಲ..., ಬೆಲ್ಲದಮಲ್ಲ..., ಬೆಲ್ಲದಚ್ಚಿನಮಲ್ಲ...., ಶ್ರೀಮಹಾಂತಮಲ್ಲಯ್ಯಾ...

ಉಘೇ...ಉಘೇ...

ಭಾರತ ದೇಶದ ಮಹಿಳಾ ಸಿಂಹಿಣಿ, ಸ್ವಾತಂತ್ರ್ಯ ಬೇಡುವ ಪ್ರಜ್ವಲ ರಾಣಿ ತಾಯಿ.... ಕಿತ್ತೂರ ಚೆನ್ನಮ್ಮನ ಶ್ರೀಪಾದಕ ಮಹಾಂತಮಲ್ಲಯ್ಯಾ...

ಉಘೇ...ಉಘೇ...

-ಹೀಂಗ ಉಗ್ಗಳಿಸುವುದು ಒಂದಕಡೆ ಸಾಗಿತ್ತು.


***
‘ಸಾಂಬಸ...ದಾ...ಶಿವ, ಸಾಂಬ...ಸ...ದಾ...ಹರ, ಶಿವಾ ಅನ್ನೂ...’ ಎನ್ನುವ ಭಜನಾದವರ ಹಾಡಾ, ಸಂಬಾಳ, ಟುಮರಿ, ಭೌಂವ್....ಅನ್ನೂ ಭಜಂತ್ರಿ ತಾಸೆದ ಕರಡಿ ಮಜಲ, ಉಡಾದ ತೊಗಲಿನಿಂದ ಬಿಗದ ‘ಟುಂಮಕ್ ಟುಂಮಕ್ ಟುಂಮಕ್’ ದಮಡಿ ಸಪ್ಳ, ‘ಜಡ್ಡೀನಕ್ ನಕ್‍ದಿನ್ ಜಡ್ಡೀನಕ್’ ಹಲಗಿ ಮ್ಯಾಳ, ಡಾಗ್‍ಂ... ಡುಂಗ್... ಡೊಳ್ಳಿನ ಕುಣತಾ, ಇಂಥಾ ಗದ್ದಲದಾಗ ಇವ್ರ ಹಾಡಾ, ಕುಣಿತ ಯಾರೂ ಕೇಳತಿದ್ದಿಲ್ಲ. ಆದ್ರೂ ಅವರು ಕುಣಕುಣುದು ಖುಷಿಯೊಳಗ ಹಾಡತಿದ್ರು.
-ಇದೂನು ಇನ್ನೊಂದು ಕಡೆ ನಡೆದಿತ್ತು
***
ಮಠದ ಮುಂದಿನ ಪಟಾಂಗ್ಣದಾಗ ಮಂದಿ ಗುಂಪ್ಗುಂಪ ಸೇರಿ ಗಿಜಿಗಿಜಿ ಗದ್ದಲದಾಗ ಮುಣ್ಗಿ ಹ್ವಾದ್ರು. ಈಬತ್ತಿ, ಕೂಕಮಾ, ಬಂಢಾರಾ ಗಾಳಿಗಿ ಎಲ್ಲಾಕಡೆ ಹಾರ‍್ಯಾಡಿ ಮುಗಲ ಮುಟ್ಟುವ್ಹಂಗ ತೆಲ್ಯಾಡಕತ್ತು. ಢಳ್... ಫಳ್... ಡೊಳ್ಳಿನ ಹೊಡ್ತ, ಜಡ್ಡೀನಕ...ನಕ...ದೀನ್ ಹಲ್ಗಿ ಬಡ್ತ ನಡದೇ ಇತ್ತು. ಜೂಲ್‍ಹಾಕಿ ಕೋಡಿಗಿ ಕೆಂಪರಿಬ್ಬನ್ ಕಟ್ಟಿದ ಎತ್ಗೋಳು ಹೂಡಿದ ಗಾಡಿ ನಿತ್‍ನಿತ್ ಹೊಂಟಿತ್ತು. ಇದ್ರಮ್ಯಾಗ ಮಂಟಪಾ, ಮಂಟಪದಾಗ ಹಿಂದೂಸ್ತಾನದ ಮಸಕ್ ಮಸಕಾದ ದೊಡ್ಡ ನಕಾಶಿ ಕಾಣ್ತಿತ್ತು. ತೆಲಿಗೂದ್ಲಾ ಬಿಚ್ಚಿ ಖಾದಿಸೀರಿ ಉಟ್ಟು ಎರಡೂ ಕೈಕಾಲ್ಗೋಳ್ನ ಸರಪ್ಳಿಯಿಂದ ಬಿಗಸ್ಗೊಂಡ, ಗಣ್ಮಾಗ ಹಾಕಿದ ಹೆಣ್ಸೊಂಗ ಮಂಟಪದೊಂದ ಮಗ್ಗಲದಾಗಿತ್ತು. ತೊಡಿಕಾಣಾಂಗ, ಖಾಕಿಚೊಣ್ಣ, ಖಾಕೀದ ಅಂಗಿ, ಕಾಲಾಗಬೂಟ, ಅದೆಂತಾದ ಮೂರ್‍ಮುರ್ಗಿ ಟೊಪ್ಗಿ ತೆಲಿಗಿ ಹಾಕಿ, ಈ ಹೆಣ್ಸೊಂಗಿಗಿ ಕಟ್ಟಿದ ಸರಪಳಿ ಕೈಯಾಗ ಹಿಡ್ದ ಜಗ್ಗುವ ಇನ್ನೊಂದು ಗಂಡ್ಸೊಂಗ ಮತ್ತೊಂದು ಕಡೆ ದಂಡಿಗಿತ್ತು. ಹಣಿಗಿ ಈಬತ್ತಿ ಟೊಂಕೂಕ ಸುತ್ತಿದ ಸೀರಿ, ಕತ್ತಿ-ಗುರಾಣಿ ಮಗ್ಲಿಟ್ಟು, ಕುತಿಗಿ, ಎರಡೂ ಕೈಗೊಳ್ನ ಸರಪಳ್ಯಾಗ ಬಿಗ್ಸಗೊಂಡ ಹೆಣ್ಸೊಂಗ್, ಹಿಂದೂಸ್ತಾನದ ಗಂಡ್ಸರ‍್ಗಿ ಮಾದರಿಯಾಗಾಂತಾದು, ಸೈತೆಕ ನಡುವ ಎದ್ದ ಕಾಣ್ತಿತ್ತು. ಕಣ್ಣಾಗ ನೀರ, ತೆಲಿಮ್ಯಾಗ ತಾಜ್ ಟೊಪ್ಗಿ ಹಾಕಿದ ರಾಜಕಳೆಯ ಆರು ವರ್ಷದ ಸಣ್ಣ ಕಂದನ ಸಣಸೊಂಗೂನೂ, ಕುಸ್ಗೊಳಿದ್ದ ಹೆಣ್ಮಕ್ಕಳ ಕಳ್ಳ್ ಚುರ್ ಅನಾಂಗ ಮೆರೂಣ್ಗಿ ಮುಂದಿದ್ದ ಈ ಗಾಡ್ಯಾಗ ಇತ್ತು.

ನಾಕಾರು ಮಂದಿ ಕಾವಿ ಅರಿಬಿ ಸ್ವಾಮಿಗಳು, ಅವರ ನಡನಡುವಾ ಎತ್ತರ ದೇಹದ ನಡುವಯಸ್ಸಿಗೆ ಬಂದ ವ್ಯಕ್ತಿ, ‘ತೆಲಿಗಿ ಖಾದಿ ರುಮಾಲ ಸುತ್ತ್ಯಾರ, ಮೈಯ್ಯಾಗ ಪೂರಾ ಬಗವಾ ತೊಟ್ಟಾರ, ಕೊಳ್ಳಾಗ ನಿಂಗದಕಾಯಿ ಅರಿಬ್ಯಾಗ ಸುತ್ತಿ ಕಟಗೊಂಡಾರ, ಉದ್ದನ ಶಿರ್‌ಶೈಲ ಬಡಗಿ ಕೈಯಾಗ ಹಿಡದು, ಕಟಗಿ ಆವುಗಿ ಪಾದಗೊಳಿಂದ ಸಾವಕಾಶ ಹೆಜ್ಜಿ ಇಟಗೊಂತ ಹೊಂಟಾರ. ಮಾರಿ ನೋಡಿದ್ರ, ಹಣಿಗಿ ದಟ್ಟಿನ ಈಬತ್ತಿ, ಚೂಪsನ ಮೂಗಾ, ಸಣ್ಣ ನಗಿ ಬೀರೂ ತುಟಿ, ಗಜಿಗೀನ ಮಿಂಚ ಕಪಾಳ, ಖಾದಿಶ್ಯಾಲ ಕಣ್ಣೆರ‍್ಡು ಕಮಲ, ಎಳಿ ನೋಡ ಜಳಿ ನೋಡ, ‘ಮಠಾ ನೋಡ, ಮಠದ ಮ್ಯಾಗಿನ ಝೇಂಢಾ ನೋಡ’ ಚಿನ್ನ ಮಸಿಮಾಳ ಅಗಸಿಮುಂದ ಸಾವಿರ ಮಂದ್ಯಾಗ ಸರದಾರ‍್ನಗತೆ ಎದ್ದು ಕಾಣೂ ಎತ್ತರದ ವ್ಯಕ್ತಿ’, ಈ ಮೆರುಣಿಗಿ ಕೇಂದ್ರ ಬಿಂದು ಅಂತ ಅನಸ್ತದ.

ದೊಡ್ಡದೊಡ್ಡ ಗಟ್ಟಿ ಕಲ್ಲಗೋಳು, ಗಚ್ಚಬಳಸಿ ಕಟ್ಟಿದ ಕಮಾನುಳ್ಳ ಅಗಸಿ, ಇದಕ ಮೊದಲ ಬಾಕ್ಲ ಇದ್ದೂ ಅನುದ್ಕ ಅಲ್ಲಿ ಗ್ವಾಡ್ಯಾಗ ಇದ್ದ ಕೆಬ್ಬಣ ಪಟ್ಟಿ, ಕಲ್ಲಗೊಳ್ ಸಂದ್ಯಾಗ ಪಾರಿವಾಳ, ಗುಬ್ಬಚ್ಚಿ ಗೂಡಾ, ಎತ್ತರದ ಅಗಸಿ ಕೆಳಗಿನಿಂದ ನಿಂತ್ತ ತೆಲಿ ಹಿಂಭಾಗದ ಕೊಳ್ಳಿನ ಹೆಡಸ ಒತ್ಯಗೆ ಮಡಚಿ ಗೋಣಹಿಂದ ಮಾಡಿ ನೋಡಿದ್ರ, ಅಗಸಿ ಕಟ್ಟಡದಿಂದ ಕೆಳಗ ಬಿದ್ದ ನಾಕಾರು ದೊಡ್ಡ ಬಂಡಿಗೊಳ ಖಾಲಿ ಜಾಗಾ ಕಾಣತೈತಿ. ಅಗಸಿ ಕಮಾನ ಒಳಗ ಮೆರುಣಿಗಿ ಹೋಗಾಕ ಇನಾ ನಾಕೈದು ಮಳಾ ಅಷ್ಟೆ ದೂರ ಅದ, ಈ ಮೆರುಣಗಿ ನಿತ್‍ನಿತ್ತು ಹೊಂಟಿತ್ತು. ಗಾಡಿ ಮ್ಯಾಗಿನ ಮಂಟಪದ ಕೆಳಗ ಇದ್ದ ತರುಣನೊಬ್ಬ ತಗಡಿನ ಬುಂಗಾ ಬಾಯಿಗಿ ಹಿಡಿದು ತನ್ನ ದನಿ ಕಸೂಲೆ ಬಳಸಿ ಜೋರಗೆ ಕೂಗುತ್ತಿದ್ದ.

‘ಜರದ ರುಂಬಾಲದವರು ಕೊರದ ಈಬತ್ತಿಯವರು ನೆರದ ಮಂದ್ಯಾಗ ಹೊಂಟವರು ಮರಿದ ಕೇಳ್ರಿ’, ಕುಲುಕುಲು ನಗ್ತಿರುವ ಕನ್ನಡದ ಕಲಾಭಿಮಾನಿಗಳಾದ ಮಸಬಿನಾಳ ಮತ್ತ, ಸುತ್ತಮುತ್ತಲ ಗ್ರಾಮಗಳ ಸಮಸ್ತ ಬಾಂಧವರೆ, ಶಿವಾನಂದ ಸ್ವಾಮಿಗೋಳ ಪಟ್ಟಾಧಿಕಾರಕ್ಕೆ ಕೂಡಿದ ಎಲ್ಲಾ ಮಹನಿಯರೆ, ಮಹಿಳೆಯರೆ...

ಈ ಎತ್ತಿನಗಾಡಿ ಮ್ಯಾಲಿರುವ ಸೋಂಗುದಾರಿಗಳನ್ನ ನೀವೆಲ್ಲಾ ನೋಡೀರಿ ಅಂತ ನಾ ಅನಕೋತಿನಿ. ಭಾರತ ಮಾತೆ ಈಗ ಇಲ್ಲಿ ನಿಂತಾಳ, ಕಂಪನಿ ಸರ್ಕಾರದವರು ಅಕಿನ ಕಟ್ಟಿಹಾಕ್ಯಾರ, ಮೂವತ್ತು ಕೋಟಿ ಮನಸೇರು ಇರೊ ಈ ಹಿಂದುಸ್ತಾನದಾಗ ಅಂಗ್ರೇಜಿ ಅವರ ಕಡಿಂದ ಈ ತಾಯಿನ ಬಿಡಸಬೇಕಾಗೇದ. ಕಿತ್ತೂರು ಚನ್ನಮ್ಮ ಅಂಗ್ರೇಜಿ ಅವರ ವಿರುದ್ಧ ತಿರಿಗಿ ನಿಂತು, ನಮ್ಮವರ ಮೋಸಕ್ಕ ಬಲಿಯಾಗಿ ಸೆರೆಯಾಳಾಗಿ ಜೇಲನ್ಯಾಗ ವೀರಸ್ವರ್ಗ ಸೇರ‍್ಯಾಳ. ಟಿಪ್ಪುವಿನ ಆರು ವರ್ಷದ ಎಳಿ ಕಂದ ಸೆರಮನ್ಯಾಗ ಬಂಧಿ ಆಗಿದ್ದು ನೀವು ಈ ಉತ್ಸವದ ಗಾಡಿಯಲ್ಲಿರುವ ಸೋಂಗುಗಳಲ್ಲಿ ಕಾಣಾಕತ್ತೀರಿ.

ನಮ್ಮೂರ ಈ ಮಠದ ಧರ್ಮ ಕಾರ್ಯದ ಪ್ರಭಾತಪೇರಿ ಮುಂದ, ರಾಷ್ಟ್ರಜಾಗೃತಿ ಚಳವಳಿ, ಅಂಗ್ರೇಜಿ ದೇಶದವರ ಅರಬಿ ಸುಡುದು, ನಾವು ನಮ್ಮ ದೇಶದ ಖಾದಿ ತೊಡುದ್ರ ಬಗ್ಗೆ ತಿಳಿಸ್ಕೊಡಬೇಕಾಗೇದ. ಎಲಿಬತ್ತಿ, ಬೀಡಿ, ತಂಬಾಕ ಸೇದೂದು ಬಿಡಬೇಕು. ನಾವೆಲ್ಲಾ ಸೇರಿ ಈ ಮೆರುಣಗ್ಯಾಗ ಶಪತಾ ಮಾಡಬೇಕಾಗೇದ. ಇಲ್ಲಿ ಸೇರಿದ ಎಲ್ಲಾ ಮಹನೀಯರಲ್ಲಿ ವಿನಂತಿ. ತಮ್ಮ ಕಿಸ್ಯಾಗ ಇರುವ ಚುಟ್ಟಾದ ಕಟ್ಟ, ತಂಬಾಕ ಚೀಲ, ಚಿಲಿಮಿ ಎಲ್ಲಾನೂ ಒಂದ್ಕಡೆ ಕೂಡಿಸಿ ಸುಡಾಕ ಮುಂದಾಗರಿ, ಅಂಗ್ರೇಜಿ ಅರಬಿ ಸುಡುದ್ರಿಂದ, ತಂಬಾಕು ಚೀಲ ಹಾಳ ಮಾಡುದ್ರಿಂದ ಇವತ್ತು ಶಿವಾನಂದ ಸ್ವಾಮಿಗೊಳ ಪಟ್ಟಾಧಿಕಾರದ ಈ ಧಾರ್ಮಿಕ ಸಮಾರಂಭ ಚಾಲೂ ಆಗಲಿ, ಹಿಂಗ ನಾವು ನಮ್ಮ ಕೆಟ್ಟ ಚಟ ಬಿಡುದ್ರಿಂದ ಜಾಗೃತರಾಗಿ ಟೋಳಿಕಟ್ಟಿ ಈ ಭಾರತ ಮಾತೆಯನ್ನು ದಾಸ್ಯದಿಂದ ಬಿಡುಗಡೆ ಮಾಡಾಕ ತೈಯಾರಾಗೂನು.

‘ಈಬತ್ತಿ ಉಂಡಿ, ಬೆಳ್ಳಿ ಗಿಂಡಿ, ಎಡಗೈಯಾಗ ಭಾರತ ಮಾತೆ ಅನ್ನು ಲಿಂಗಾ, ಬಲಗೈಯಾಗ ಸ್ವಾತಂತ್ರ್ಯಯೋಧರು ಅನ್ನೂ ಪತ್ರಿ ಹಿಡಕೊಂಡು, ಸ್ವಾತಂತ್ರ್ಯ ಹ್ಯಾಂಗ ತಗೊಬೇಕು ಅಂಥ ಮಂತ್ರ ಪಠಣಾ ಮಾಡಾಕ ಶಿವಾನಂದ ಅಪಗೋಳು ಇವತ್ತಿನಿಂದ ಗೇನಕಿ ಹಾಕಾಕತ್ತ್ಯಾರ’ ನಮ್ಮ ತಾಯಿ ನಮ್ಮ ನೆಲದಾಗ ಇನ್ನೊಬ್ಬರ ಬಂಧಿ ಆಗಿ ಇನ್ನೆಟದಿನಾ ಹೀಂಗಕಾಲ ಕಳಿಬೇಕು? ಅವಳನ್ನು ನಾವು ದಾಸ್ಯದಿಂದ ಬಿಡುಗಡೆ ಮಾಡಬೇಕಾಗೇದ.

***

ಅವನು ಮಾತು ನಿಲ್ಲಿಸಿ ಸ್ವಲ್ಪ ಬಾಯಿ ಆರಿಸಿಕೊಳ್ಳಲು ಸುಮ್ಮನಾದಾಗ, ಮೆರುವಣಿಗೆಯಲ್ಲೆಲ್ಲಾ ಗಲಿಬಿಲಿ ಸಾವಿರಾರು ಧ್ವನಿಗಳು...

***

ಮತ್ತೊಂದು ಕಡೆ

‘ಇದೇನಪಾ ಶಂಕ್ರೂ! ಮಬ್ಬ ನಸಿನಾಗ ಬೆಳ್ಳಿಚಿಕ್ಕಿ ಹೊಂಟಾಗ, ಮಠದಾನ ಗದ್ದಿಗಿಯೊಳಗ ಅಭಿಷೇಕ ಸುರು ಆಗೇದ ಅಂತ ಅಂದಿದ್ದಿ, ಆವಾಗ ನಡ್ದ ಮಂತ್ರಾಗಿಂತ್ರಾ ಇನಾ ಮುಗುದಿಲ್ಲನು? ಯಾರ‍್ಆರ ಯಾನ್ಯಾನ. ಮಾತ್ಯಾಡಕತ್ತಾರಲ್ಲ ಭಾಸಣಾ - ಗೀಸಣಾ ಐತೇನು? ಬಕ್ಳ ಮಂದಿ ಇಕಾಡಿನ ಹೊಂಟಾಂಗ್ ಕಾಣತದ. ಕಾಲ್ಮರಿ ಸಪ್ಳಾ, ಹೊಸಾ ಗಾಡಿ ಹಳಿ ಸಾವಕಾಸ ಉಳ್ಳುದು, ಎತ್ತಿನ ಕೊಳ್ಳಾನ ಗೆಜ್ಜಿ, ಜನಾನೂ ಭರ್ಚಕ್ ಕೂಡ್ದಂಗ ಐತಿ ಬಿಡಪಾ! ಏನ್ ಮಾಡೂದು...!! ಮಾರಿಬ್ಯಾನಿ, ದೇವರ ನನ್ನ ಮಾರಿ ಅಟೆ ಹುಳುಕ ಮಾಡಿದ್ರ ಏನೂ ಅನಸ್ತಿದ್ದಿಲ್ಲಾ, ಕಣ್ಣ ಇರತಿದ್ದೂ ನಾ ಅಪ್ಪನ ಎಲ್ಲಾ ಐಸಿರಿ ನೋಡತಿದ್ಯಾ. ಆ ಕೆಂಪ ಮುಸುಡಿ ಸೂರ್‌ಸರಜನ್ ಎಂತಾದ ಚೂಜಿ ಚುಚ್ಚಿ ಡಿಯಾಕ್ಷನ್ ಮಾಡಿ ನನ್ನ ಕಣ್ಣಾನೇ ಕಳ್ದಾ. ಅಂವನ ವಂಶ ನಿರ್ವೊಂಶ ಆಗಲಿ, ‘ಹರಕ ಜಂತಿಗಿ ಮೂರಕ ನಗಾ ಆಗಿ ಬಾಳೆ ಬದಗೆಟ್ಟ ಹೋಗಲಿ’. ಈಗ ಮೆರುಣ್ಗಿ ಹತ್ತ್ಯಾಕ ಬಂದಾಂಗ ಕಾಣಸ್ತದ, ಹೊತ್ತ ಒಂಬತ್ತಾಸ ಆಗೇದನು? ಬಾಳಾ’ ಎಂದ. ಮೆರವಣಿಗೆ ತನ್ನ ಸಮೀಪ ಬರುವದನ್ನು ಕೇಳಿಸಿಕೊಂಡ, ತೊಂಬತ್ತೆಂಟರ ಕುರುಡ ಮುದುಕ ಅಗಸಿಮನಿ ಕಲ್ಲಜ್ಜಾ.

‘ಎಲ್ಲೀ.... ಒಂಭತ್ತಾಸ. ಕಾಗಾರದನಾ ಬಿಡೂ ಹೊತ್ತಾಗಿ, ಸೂರ್ಯಾ ಮಾರಿ ಮ್ಯಾಗ ಬಂದಾನಾ, ಬಿಸಿಲ ಒಳೆಒಳೇ ಚುರ್‍ಚುರ್‍ಗುಡತದ, ನೀ ನೆಳ್ಳಾಗ ಕುಂತ್ತಿ ಏನೂ ಅನಸಿಲ್ಲ.’

‘ಹೌಂದಾ...! ಹಂಗಾರಾ...!! ಅವರು ಅದೆಂಥಾ ಮೆರುವಣಿಗಿ ತಗಿತಾರೂ ನನ್ನಿಟು ಮಾಡೆದಾಗ ಕರ್ಕೊಂಡು ಹೋಗಿ ಕಿಡಿಕ್ಯಾಗ ಕುಂದುರ್ಸು, ನಾನೂ ಇಟ ಸಾಯುದ್ರಾಗ ಶರಣರ ವಚನಾ ಕಿವಿಮ್ಯಾಗ ಹಾಕೋತಿನಿ’.

‘ಎಲ್ಲಿ... ವಚನಾ, ಪುರಾಣಾ,...! ಅದೆಲ್ಲ ಇವತ್ತ ಛಂಜಿ ಊಟ ಆಗಿಂದ ಮಕ್ಕೊಳು ಹೊತ್ತಿಗಿ. ಸುಡು ಸೂರ್ಯಾ ನೆತ್ತಿ ಮ್ಯಾಗ ಬಂದು ಬೆಳಕಿಂಡ್ಯಾಗ ಬಿಸಿಲಾ ಬೆಳ್ಳಿಕೋಲ್ನ್ಯಾಂಗ ಬಿದ್ದಿಂದ, ಈ ಮೆರುವಣಿಗಿ ಗೌಡ್ರ ಓಣಿ ಆವಾಗ ದಾಟ್ತದ. ಸೂರ್ಯಾಹೊಳ್ಳಿ ನಾಕೊತ್ತಾಸಾಗಿ, ನಮ್ಮ ಮ್ಯಾಳಗಿ ಮನಿ ಕಿಡಕ್ಯಾನ ಬೆಳಕ ಬಂದು, ಪಡಶಾಲಿ ಗಣಪತಿ ಮಾಡದಾಗ ಬಿದ್ದಗಳೆ, ಏನರ ಮೆರುಣಗಿ ತಿರಗಿ ವಿರಕ್ತಮಠಕ್ಕ ಬರ್ತದ ಅಂತ ನನಗ ಅನಸ್ತದ’.

‘ಆಯಿತು ಬಿಡಪಾ ಅಪಗೋಳೇನ ಹೊಸ್ದಾಗಿ ಸಭಾ ಕರದಾರಂತಲ್ಲೊ. ನಾವು ಮಠಕ್ಕ ಅಧಿಕಾರಿ ಆಗಿಂದ ಏನೇನ ಮಾಡಬೇಕು ಅಂತ ಇಚಾರ ಮಾಡಾಕ, ಭಕ್ತರಗಿ ಸಲ್ಲಾ ಕೊಡಾಕ ಇರಬೇಕು. ‘ಹೊಳಿ ದಂಡಿಗಿ ಬಿದರ್ ಬಾಳ, ಚಪಾತಿಗಿ ಪದರ್ ಬಾಳ’ ಇದ್ದಾಂಗ ನಮ್ಮ ಶಿವಾನಂದ ಸ್ವಾಮಿಗೊಳಿಗಿ ಒಳ್ಳೆ ಇಚಾರ ಬಾಳ, ನನ್ನ ಕಣ್ಣ ಚಲೋ ಇದ್ದಾಗ ಅವರಲ್ಲಿನ ಈ ಗುಣಾ ಕಂಡಿನೊ ಶಂಕ್ರಾ’.

‘ಈಗಿನ ಪರಕಾರ ನೋಡಿದ್ರ ಸಭಾ ನಡ್ಯಾಂಗಿಲ್ಲಾ ಯಾಕಂದ್ರ..! ದನಾ ಮೇದು ಹೊಳ್ಳಿ ಬರೂ ಹೊತ್ತಾಗಿ. ದೀಪಾ ಹಚ್ಚೂ ಯಾಳೆಕನೂ ಅವರ ಈ ಸೋಂಗಿನ ಗದ್ಲ ಮುಗ್ಯಾಂಗಿಲ್ಲಾ ಅಂತ ಕಾಣಸ್ತದ. ಅವರ‍್ಯಾರೋ ದ್ಯಾವಣಗೇರಿ ಬಿಟ್ಟು ಆಲ್ಮಟ್ಟಿಗಿ ಬಂದಾರಂತಲಾ, ಮಂಜಪ್ಪ ಮಾಸ್ತರಂತ ಅವರು ಈ ಮೆರುಣಗ್ಯಾಗ ಅದಾರ. ಅಗಾ... ಬೊಂಗಾ ಅವರ ಕೈಯಾಗ ಕೊಟ್ನೋಡು, ದೊಡಶಿವಪ್ಪ ಕಾಕಾ’ ಮನೆಯ ಕಿಡಕಿಯಿಂದಲೇ ಮೆರುಣಿಗಿ ವೀಕ್ಷಿಸುತ್ತ ಹೇಳಿದ ಶಂಕ್ರೂ.

ಮಹನೀಯರೆ,

‘ಆರದ ರೊಟ್ಟಿ ಅವರಿಕಾಳೊಣಗಿ ಅರಮನ್ಯಾಗ ಕುಂತು ಅರಬಾಟ ಉಂಡ್ರೂ ಇದೂ ನಮಗ ಸೆರಮನಿ’. ಯಾಕಂದ್ರ ನಾವು ಇನ್ನೊಬ್ರ ಕಡಿದಿಂದ ಆಳಸಗೊಳಾಕತ್ತೇವು. ನಾವೆಲ್ಲಾ ಇವತ್ತ ಈ ಮೆರುಣಿಗಿ ಮುಂದ ಸೇರಿದ ಹಕಿಕತಾ ಇಷ್ಟೇ, ‘ರಾಷ್ಟ್ರೀಯ ಜಾಗೃತೆಗಾಗಿ’ ನಾವು ಇನ ಮುಂದ ಏನೇನss ಮಾಡ್ಬೇಕಾಗೆದ ಅನುದ್ರಸಲುವಾಗಿ. ಹಿಂದೂಸ್ತಾನದಾಗ ಈ ಸದ್ಯೆ ಏನ್ ನಡ್ಯಾಕತ್ತೇದ? ಮಾತೆಯ ಮಕ್ಕಳಾದ ನಮ್ಮೆಲ್ಲರ ದಗದ ಏನು ಅನುದು ಗುಲ್ಲು ಮಾಡಿ ತಿಳಕೋಬೇಕಾಗೆದ. ‘ಭಾರತೀಯರು ನಾವು ಆದ್ರ ಭಾರತ ನಮ್ಮದಾ?! ಹೌದು, ಅಂತ ಅನ್ನೂ ಎದೆಗಾರಿಕೆ ನಮಗ್ಯಾರಿಗೂ ಇಲ್ಲಾ’. ಪರಕೀಯರಿಗೆ ಭಾರತ ಒಪ್ಪಿಸಿ, ಅವರ ನೆರಳಾಗ ಎರಕೊಂಡವರ ಬುಡಕ ಡೊಗ್ಗಿದ್ಹಾಂಗ, ಅವರ ಎಂಜಲಾ ನೆಕ್ಕೊತ ನಾವು ಎಲ್ಲಾರೂ ದಾಸ್ಯ ಸ್ವೀಕರಿಸಿ ಹೇಡಿಗಳಾಗಿ ಬದಕಾಕತ್ತೇವು, ಪರತಂತ್ರಿಗಳಾಗೇವು. ಆದ್ರ ನಾವು ಸ್ವಾತಂತ್ರ್ಯ ಪಡಿಬೇಕು. ಈ ಹಾದ್ಯಾಗ ಗುಲಾಬಿ ಹೂ ಚೆಲ್ಲಿಲ್ಲಾ, ಕಂಡಾಪಟಿ ಮುಳ್ಳ ಅದಾವು ಆದ್ರ...! ಈ ಹಾದಿ ಕಡಿದಂಡೀಗಿ ಗುರಿ ಮುಟ್ಟಿದ್ಹಂಗ ಪೂರ್ಣ ವಿಕಸಿತ ಸ್ವಾತಂತ್ರ್ಯದ ಚಂದನ ಗುಲಾಬಿ ಐತಿ. ಈ ಮೆರೂಣ್ಗಿಯಲ್ಲಿ ಇದ್ದವರೆಲ್ಲ ‘ನಿಂತ್ರ ಹೆಬ್ಬಂಡಿ, ನಡದ್ರ ಮದ್ದಾನಿ’, ಅನಾಂಗ ತಯಾರ ಆಗಬೇಕು. ‘ರಾತ್ರಿ ಕಳದಿಂದ ಹಗಲತ್ತ ಐತಿ ಅನೂದು ಎಷ್ಟ ಖರೆವದ ಅಂಬೂದು ಎಲ್ಲಾರ‍್ಗಿ ಗೊತ್ತದ. ಹಂಗ ‘ಸ್ವತಂತ್ರ ಭಾರತದ ಹುಟ್ಟು ಹೋರಾಟ್ದ ನಂತರ ಐತಿ’. ಹಳ್ಳಿ ಹಳ್ಳಿಗೂ ಶಿವಾನಂದ ಅಪಗೊಳಂತ, ಬಂಥನಾಳ ಪೂಜ್ಯರಂತ, ರಾಷ್ಟ್ರಾಭಿಮಾನಿ ಶ್ರೀಗಳ ನಿರ್ದೇಶನ ನಮಗೈತಿ. ಈಗ ನೀವು ಮಾಡಬೇಕಾದ್ದು ಇಷ್ಟೆ! ಈ ಮೆರುಣಿಗ್ಯಾಗಿನ ಜನಗಳ ಕಿಸೆಯಿಂದ ತಂಬಾಕಚೀಲ್, ಚುಟ್ಟಾ, ಚಿಲಿಮಿ ಸೇದು ಕೊಳವಿ, ಇವುಕುರ್ನ ಒಂದಕಡೆ ಕೂಡ್ಸಬೇಕು. ಈ ಊರಾಗ ಹತ್ತೆಂಟು ಮಂದಿ ಯುವಕರು ಪರದೇಶಿ ಸಂಸ್ಕೃತಿಯಾದ ಪ್ಯಾಂಟಾ, ಕೋಟಾ, ಹಾಕೊಂಡಾರಂತ ಕೇಳಿನಿ, ಅವರ ಪ್ಯಾಂಟ ಇಲ್ಲಿ ತಂದ ಸುಡಬೇಕು. ಖಾದಿ ತೊಡುವಂಗ ಅವರ ಮನಸ್ಸ ಗೆದಿಬೇಕು. ‘ವಂದೇ ಮಾತರಂ’ ಹೇಳ್ಸಬೇಕು. ನಮ್ಮ ದೇಶದಾಗಿನ ಶ್ರೀಮಂತಿಕೆ ಅವರು ಒಯ್ದು ನಮ್ಮನ್ನ ಬಡುರನ್ನಾಗಿ ದಾಸ್ಯರನ್ನಾಗಿ ಮಾಡ್ಯಾರ. ಒಂದ ಮಾತ ಹೇಳಬೇಕಂದ್ರ, ‘ತೊಗರಿ ಕಟಗಿ ಚಾಟ ನಮಗದ, ಬಂಗಾರ ತಾಟಿನ್ಯಾಗ ಅವರು ಉಣಾಕತ್ತ್ಯಾರ’. ಅದಕ್ಕ ನೀವು ಎಚ್ಚರಾಗರಿ’ ಅಂತ ಮಂಜಪ್ಪನವರು ಮಾತು ಮುಗಿಸಿದರು.

ಅವರ ಮಾತು ನಿಂತ ನಂತರ

ಸಭೆಯಲ್ಲಿಯ ನೂರಾರು ಧ್ವನಿಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ.
***

ಮತ್ತೊಂದು ಕಡೆ....

‘ಜಿಗರ್ ಆಗ್ಯಾರ ಎಲ್ಲಾರೂ ಈ..ಗ... ಜಿಗರ್ ಆಗ್ಯಾರ, ಹೊಟ್ಟಿಮ್ಯಾಲ ಕಲ್ಲ ಹೊಡಿದು ಅಂದ್ರ ಸುಮ್ಮನ ತಿಳಕೊಂಡಾರ ನಮ್ಮೂಕ ತಿಳಿಬೇಕಲಾ ಯಾಕ ಹಿಂಗ ಮಾಡಿದ್ರೂ ಯಾ ಸೂಳಿಮಗ ಗೊತ್ತ, ಸಣ ಗೌಡರಿಗಂತೂ ತಳಾ ಬುಡಾ ಏನೂ ತಿಳಿದಿಲ್ಲ. ‘ಎಕ್ಕಿ ಎಲಿ ಇನಮ್ಯಾಗ ಹಾಕುದುಬ್ಯಾಡಾ ಅಂತ ಮನಿಗಿ ಹೇಳಿಕಳಸ್ಯಾರ’. ಅಂವಾ ಒಬ್ಬ ಬಿಟ್ರ ಆತನೂ? ನಮ್ಮ ಶಿವಲಿಂಗಪ್ಪ ಬಿಡಬೇಕು, ಕುಲಕರ್ಣಿ ಕಿಟ್ಟಪ್ಪ ಸವಕಾರ ಹೂಂ ಅನಬೇಕು, ಮಠಪತಿ ಮಲ್ಲಯ್ಯದಂತೂ ಎಕ್ಕಿಬತ್ತಿ ಸೇದಲಾರ್ದ ಹೊರಕಡಿಗಿ ಸೈತೇಕ ಹೊರಗ ಬರಾಂಗಿಲ್ಲ. ‘ಇಜಾಪುರದಾಗ ಇಜಾರದವರು ಹಜಾರ ಮಂದಿ ಇದ್ರೂ, ನಮ್ಮ ಮಸಿಮಾಳದಾಗ ಮೂಗ ಸಲೀಂ ಒಬ್ನ ತಿಂಗಳದಾಗ ಹಜಾರ ಎಕ್ಕಿಬತ್ತಿ ಸೇದತಾನ’, ಅಂವಾ ಬಿಡಬೇಕಲಾ. ಅದೂ ಹಗರನೂ? ಅದೇನ ಚಳವಳಿ ಮಾಡ್ತಾರಂತ ‘ಎಕ್ಕಿಬತ್ತಿ ಚುಟ್ಟಾ ಚಿಲಿಮಿ ಸುಡತಾರಂತ’. ಅಲ್ಪ ಮಂದಿ ಮ್ಯಾಗ ಇವ್ರು ಹೊಡಿತಾರ. ‘ನನಕಾಲ ಒಂದು ಡೊಂಕ ಇದ್ರೂ ನಾ ಮಾಡೂ ಯಾವ್ಯಾರ ಮ್ಯಾಲ ನನಗ ಅಪಾಟ ಮರ್ಯಾದಿ ಐತಿ’. ನಮ್ಮ ಮುತ್ತ್ಯಾ ಮರಿಮುತ್ತ್ಯಾನ ಕಾಲದಿಂದ, ಈ ಮಸಿಮಾಳದಾಗ ಈ ಚಾಜ್ ನಮ್ಮ ಹೊಸ್ತಲಾ ಬಿಟ್ಟು ಹೋಗಿಲ್ಲಾ. ಊರ ಮಂದೀಗಿ ಎಕ್ಕಿಬತ್ತಿ ಕಟ್ಟಿಕೊಟ್ಟ ನಮ್ಮ ಮುತ್ತ್ಯಾ ಎಲ್ಲಾರ ಮನಿದಿಂದ ಒಮ್ಮನಾ, ಇಮ್ಮನಾ ಜ್ವಾಳಾ ಆಯಾ ತಂದು, ಮನಿ ಮುಂದಿನ ಎರಡು ಹಗೇವು ತುಂಬಿದ್ನಂತ. ಊರಾಗ ಬರಗಾಲ ಬಿದ್ರ. ನಮ್ಮ ಹಗೇವು ತಗದು ಊರಾನ ಮಂದೀನ ಊಟಾ ಮಡ್ಯಾರಂತ, ದೌಳುಳ್ಳ ನಮ್ಮ ಮನಿತನಕ ಈಗ ಈ ಎಕ್ಕಿಬತ್ತಿ ಆಯಾನ ಇಲ್ಲಂದ್ರ ಬದುಕುದು ಹ್ಯಾಂಗ’? ಹೊಟ್ಟಿ ಉರುದು ಮಾತ್ಯಾಡಿದ ಎಕ್ಕಿಬತ್ತಿ ಯಂಕ್ಯಾನ ನೋವ ಚಳವಳಿ ಮಾಡವರ‍್ಗಿ ಎಲ್ಲಿ ಹತ್ತಬೇಕು. ನೀನರ ಹೇಳ ಶಂಕ್ರೂ ನಾ ಇನ್ನ ಈ ಊರಾಗ ಎಕ್ಕಿಬತ್ತಿ ಹಾಕದಿದ್ರ, ಅವರು ನನಗ ಆಯಾ ಕೊಡಂಗಿಲ್ಲಾ. ಮೊದಲ ನಾ ಕುಂಟಾ, ಆ ಕೆಂಪಮಾರಿ ಅಂಗ್ರೇಜಿ ಡಾಗಡಾರ ನನ್ನ ಮಸ್ತಕಕ್ಕ ಉರಿ ಇದ್ದಾಗ ಚೂಜಿ ಚುಚ್ಚಿ ನನಕಾಲ ಬ್ಯಾರೇ ಡೊಂಕಮಾಡಿ ಇಟ್ಟಾನ.

‘ನಿನ್ನ ಎಕ್ಕಿಬತ್ತಿ ಈಗ್ಯಾರ ಕೇಳತಾರೂ ಯಂಕಪ್ಪಣ್ಣ? ಕುಂಬಾರ ಮಾಡೂ ಮುಸಿಚಿಲಿಮಿ ಬಂದಿಂದ ನಿನ್ನ ಯಾವಾರ ಕಡಿಮಿ ಆಗೇದ. ಅವರೆ ನಾಕ್ ಜಿಬಟ್ ಮಂದೆಲಾ ಇನಾ ಎಕ್ಕಿ ಬತ್ತ್ಯಾಗ ತಂಬಾಕ ಸೇದವ್ರು, ಚುಟ್ಟಾ ಬಂದಿಂದಂತೂ ಎಕ್ಕಿ, ಚಿಲಿಮಿ ಎಲ್ಲಾ ಕಡಿಮಿ ಆಗ್ಯಾವು. ಇನಾ ನೋಡು, ಅದೆಂತಹದ ಬೆಳ್ಳ ಬೆಳ್ಳಗ ಉದ್ದನ ಒಂದ ನಮೂನಿ ಹೊಸ ಚುಟ್ಟಾ ಬಂದಾವಂತ್, ಅವೆಲ್ಲಾ ದೊಡದೊಡ್ಡ ಮಂದಿ ದೌಳುಳ್ಳವರು ಶಾಹಾರ್‌ದಾಗ ಸೇದತಾರಂತ. ಅಷ್ಟಾಗಿ ನಿನ್ನ ಎಕ್ಕಿಬತ್ತಿ ಆಯಾ ಬಂದಾದ್ರ ನಿಮ್ಮನ್ಯಾಗ ನಿದ್ಹೊಂದೆ ಹೊಟ್ಟೆಲಾ. ಅಪ್ಪಾ-ಅವ್ವಾ ಗಪ್ಪಾಗ್ಯಾರ, ಹೆಂಡ್ರ.. ಮಕ್ಳ.. ಯಾಕ ಇಚಾರ ಮಾಡ್ತಿ, ಇಂಥಾ ದೊಡ್ಡ ಊರಾಗ ನಿನ್ನ ಒಬ್ಬನ ಹೊಟ್ಟಿ ವಜ್ಜೆನೂ? ಊರ ಮಂದಿನ ನಿನಗ ಊಟಕ್ಕ ಹಾಕ್ತಾರಾ, ಮಠದ ತ್ವಾಟದಾಗ ನೀರ ಬಿಟಗೊತ ಇದ್ರಂತೂ ನಿನಗ ತರತರದ ಊಟಾ, ಕಜ್ಜಾದ ಬುಟ್ಟಿ ಬರತದ. ಹೊಗಿ ಇಲ್ಲದ ಅಡಿಗಿ, ‘ತಂಬಾಕ ಚುಟ್ಟಾ ಸೇದೂದು ಬಿಡಬೇಕು. ಖಾದಿ ತೊಡಬೇಕು’. ಅಂದ್ರ ಚಲೋನೆಅಲಾ ಪರಕೂರ್ತಿ ಗಟಮೂಟ ಆಕ್ಕದ, ದೇಶದ ಬಗ್ಗೆ ಗೌರವ ಬರ್ತದ’, ಎಂದ ಶಂಕ್ರೂ.

ಯಂಕಪ್ಪ ಯೋಚಿಸಿದ, ಯಕ್ತಿಬತ್ತಿ ಜೋಳಿಗಿ ಬಗಲಿಗಿತ್ತು.

ಹೌದsಲಾ...! ಇದು ಕರೆವದ. ಪಲ್ಲಕ್ಯಾಗ ಕುಂದ್ರಬೇಕಾದ ನಮ್ಮ ಸ್ವಾಮಿಗೋಳು ತಮ್ಮ ಧಾರ್ಮಿಕ ಕಾರ್ಯದ ಮುಂದ ದೇಶಾಭಿಮಾನದ ಈ ಮೆರೂಣ್ಗಿ ನಡಸ್ಯಾರ, ನಾಡಾನೆ ಗಾಂಧಿ ಅಂತ ಕರೆವ ಮಂಜಪ್ಪಮಾಸ್ತರ ಬಂದಾರಾ, ಕೌಜಲಗಿ ಹನುಮಂತರಾಯರು ಅದಾರ ನನ್ನ ಎಕ್ಕಿಬತ್ತಿದಿಂದ ಏನಾಗಬೇಕಾಗೇದ...? ಸೇರಿದ ಇಷ್ಟ ಜನಾ, ಅವರ ಭಾಷಣಾ, ಗಾಡ್ಯಾಗಿನ ಸೊಂಗ, ಶಂಕ್ರೂನ ತಿಳುವಳಿಕಿ ಬರಾಬರಿ ಅದ. ‘ಸುಡ್ರೆಪಾ ಸುಡ್ರಿ, ಯಕ್ಕಿಬತ್ತಿ ಸುಡ್ರಿ’ ಎಂದಿತು ಒಳಮನಸು.

ನನ್ಗ ಕಾಯಕಲ್ಪ ಚಿಕಿತ್ಸೆ ಆತು, ರೀಚಾರ್ಜಆದ ಬ್ಯಾಟರಿಗತೆ ನಾ ಆಗಿನಿ, ಪ್ರಜ್ವಲಗೊಳ್ಳಾಕತ್ತಿನಿ, ಚೇತನಗೊಂಡಿನಿ, ನನ್ನ ಮೈಯಾನ ರಕ್ತಾ ಕುದ್ಯಾಕತ್ತು. ನರನಾಡಿಗೋಳು ಕಾಲುವೆ ಆಗ್ಯಾವು. ನಾನು ಕುಂಟ ಅಲ್ಲಾ, ಈ ದೇಶದ ಸೇವಾ ಮಾಡಾಕ ನನ್ನ ಕಾಲಗೋಳಗಿ ಈಗ ನೂರಾನಿ ಶಕ್ತಿ ಬಂದದ.... ಏನು...!? ಏನ್ ಮಾಡ್ಲಿ ಹೇಳು....? ಏ ಶಂಕ್ರೂ ಚಾಲೂ ಆದಾಂಗ ಆತು ನಡಿ ಹೋಗೂನು. ಆಗಾ ತಂದ್ನೋಡು ತಿಪ್ಪಣ್ಣಮಾಮಾ ಚುಟ್ಟಾದ ಚೀಲ, ತಂಬಾಕಡೆಬ್ಬಿ, ಹಚ್ಚತ್ತಾರ ನೋಡಿನ್ನ ಉರಿ ಎನ್ನುತ್ತ ಎಕ್ಕಿಎಲಿ ಜೋಳಿಗಿ ಜೋಡಿ ಶಂಕ್ರೂನ ಸಂಗಟಾ ಮೆರೂಣ್ಗಿ ಇದ್ದ ಜಾಗಾಕ ಮುಂದ ಬಂದು ನಿಂತ್ತ. ರಸ್ತಾದ ನಡುವಾ ತಂಬಾಕಡೆಬ್ಬಿ, ಚುಟ್ಟಾದ ಕಟ್ಟಾ, ಮುಸಿಚಿಲಿಮಿ, ಎಲ್ಲಾನೂ ಗ್ವಾಳೆ ಹಾಕಿದ್ರು ಅದರಾಗ ಇಂಗ್ರೇಜಿ ಅವರ ಪ್ಯಾಂಟಾನೂ ಇದ್ವು.

ಇದಕ.. ಉರಿ ಹಚ್ಚೌರು ಯಾರು...! ಸ್ವಾಮಿಗೋಳಾ...? ಮಂಜಪ್ಪನವರಾ...? ಗೌಡ್ರಾ....? ಸ್ವಾತಂತ್ರ್ಯ ಸೇನಾನಿಗೋಳಾ.....? ಯಾರು? ಯಾರದಿರಿ ಮುಂದ ಬರ್ರಿ...!

‘ಯಂಕಪ್ಪ ಜೋಳಿಗೆ ಬಿಸಾಕಿದಾ, ಕಿಸೆಯೊಳಗಿನ ದೂದಿಅಳ್ಳಿ ಚಕ್ಮುಕಿ ಕಲ್ಲು ತೆಗೆದು ಚಕಮುಖಿಸಿದ’, ತೀರಾ ಸಣ್ಣ ಕಿಡಿಯೊಂದು ಅಲ್ಲಿ ಸಿಡಿಯಿತು. ಅಳ್ಳಿಗೆ ಹಚ್ಚಿ ಬಾಯಿಯಿಂದ ಊದಿ ಉರಿಮಾಡತೊಡಗಿದ. ಮಗ್ಗಲಿದ್ದವರು ಹರಿದ ಕಾಗದ, ಅರಿವೆ ತುಂಡು ಹಿಡಿದರು. ಅಷ್ಟರಾಗ ಶಂಕ್ರೂನ ದನಿ ಮತ್ತ ವಾಸನಿ ಹಿಡ್ಕೊಂಡು, ಸಾವಿರ್ಮಂದಿ ಸರ್ಸಗೊತ ಅರಬಿಸುಡಲ್ಲಿ ಕಣ್ಣಿಲ್ಲದ ಅಗಸಿಮನಿ ಕಲ್ಲಜ್ಜ ಬಂದಾ. ಕೈಯಾಗ ಮಣ್ಣಿನ ಗಡಿಗಿ ಬ್ಯಾರೆ ಇತ್ತು. ಅವ್ನಕಂಡು ಎಲ್ಲರೂ ಗಾಬರಿಯಾದರು...! ಯುವಕನೊಬ್ಬ, ಇದನ್ಯಾಕ ತಂದ ಗಡಿಗಿ, ಹುಚ್ಚಕೋಡಿ ಮುದುಕಾ? ಬಾತಿಗಿ ಬಾರದ್ದು, ಗದ್ದಲದಾಗ ಬಿದ್ದು ಸಾಯ್‍ಬೇಕತ್ತ ಮಾಡ್ಯಾನೇನ ‘ಚುಟ್ಟಾ-ಚಿಲಿಮಿ-ತಂಬಾಕಡೆಬ್ಬ’ ತರೂದು ಬಿಟ್ಟು ಗಡ್ಗಿ ತಂದಾನ. ಏ...! ಕಸಗೋರೊ ಅದನ್ನ ಎಂದು ಅವಸರದಲ್ಲಿ ಕಸಿದುಕೊಂಡಾಗ, ಅದರಲ್ಲಿಯ ಗಾಸ್ಲೇಟ್ ಎಣ್ಣಿ ಯಂಕಪ್ಪನ ದೂದಿ ಅಳ್ಳಿಗಿ ಸಿಡಿದು ಭಗ್ಗನೆ ಉರಿಯಾಯಿತು. ಕ್ಷಣದಲ್ಲಿ ಚುಟ್ಟಾ-ತಂಬಾಕ-ಅರಿವೆಗಳು ಸುಡತೊಡಗಿದವು. ಎಲ್ಲಾರೂ ಸಂತೋಷಗೊಂಡರು. ಚಪ್ಪಾಳೆ ತಟ್ಟಿದರು, ಖುಷಿಗೊಂಡರು, ಕುಣಿದಾಡಿದರು. ಆದರೆ...!! ಊರಿನ ಏಕೈಕ ಮಾತುಬಾರದ ಸಲೀಂ ಹುಟ್ಟಿನಿಂದ ಮೂಗ, ಎಕ್ಕಿಬತ್ತಿ ದಾಸ ಅವನೂ ಅಲ್ಲಿದ್ದ. ಆದರೆ...! ಅಂವ ಕೈಯಿಂದ ಚಪ್ಪಾಳೆ ತಟ್ಟಲಿಲ್ಲ. ಕುಣಿಯಲಿಲ್ಲ, ಬದಲಾಗಿ ಅವನ ತುಟಿಗಳು ಕುಣಿದವು, ನಾಲಿಗೆ ಕಂಪಿಸಿತು ‘ಬೋಲೋ ಭಾರತ ಮಾತಾಕಿ ಜೈ, ವಂದೇ ಮಾತರಂ, ಖಾದಿಗೆ ಜಯವಾಗಲಿ’ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT