ಮಳೆ ಸುರಿಯಿತು!

7

ಮಳೆ ಸುರಿಯಿತು!

Published:
Updated:

ಬೆಳದಿಂಗಳು ಹತ್ತಿ ಹೂವಿನಂತಿದೆ. ಆಕಾಶದ ತುಂಬ ಅಲ್ಲಲ್ಲಿ ಮೋಡಗಳು ಹತ್ತಿಯ ಕುಪ್ಪೆಯಂತಿವೆ. ಚಂದಿರ ಬಿರಿಯುವ ಹತ್ತಿಕಾಯಿಯಂತಿದ್ದಾನೆ. ಮನೆ ಮುಂದಣ ಮಂಚದ ಮೇಲೆ ಎರಡು ಕೈಗಳನ್ನು ತಲೆಕೆಳಗಿಟ್ಟುಕೊಂಡು ಅಂಗಾತ ಮಲಗಿರುವ ಅನಂತರೆಡ್ಡಿಯ ತಲೆತುಂಬ ಭಯದ ಮೋಡಗಳು ಆವರಿಸಿಕೊಂಡಿವೆ. ಮಗಳ ಮದುವೆಗೆ ಮಾಡಿದ ಸಾಲ ಹಸಿರು ಹುಳದಂತೆ ಎದೆಯನ್ನು ಕೊರೆಯುತ್ತಿದೆ. ಭವಿಷ್ಯತ್ತು ಬಿಳಿಸೊಳ್ಳೆಯಂತೆ ಕಾಡುತ್ತಿದೆ. 

‘ಮಳೆ ಬಂದ್ರೆ ಬೇಸಿತ್ತು, ಕಂಬಳಿ ತೋಯುವಷ್ಟು ಮಳೆ ಬಂದ್ರೆ ಬಾಳ ಬೇಸಿತ್ತು.’
ಹೀಗೆ ಕಳೆದ ಹತ್ತು ದಿನಗಳಿಂದ ನೂರಾರು ಸಲ ಅಂದುಕೊಂಡಾಯ್ತು. ಮಳೆಯನ್ನು ಎದುರು ನೋಡುತ್ತಲೇ ಇದ್ದ ಈತನ ಕಣ್ಣುಗಳು ಹತ್ತಿಕಾಯಿಯಂತಾಗಿವೆ. ಆದರೂ ಆ ಮಳೆಗೆ ಕರುಣೆ ಬರಲಿಲ್ಲ. ಒಂದು ಮಳೆ ಬಂದರೂ ಸಾಕು ಹಾಕಿದ್ದನ್ನ ಬರುತ್ತೆ, ಒಂದು ಮಳೆ ಬಂದರೂ ಸಾಕು ಹತ್ತಿ ಹೊಲ ಇನ್ನೊಂದು ಹತ್ತು ಹದಿನೈದು ದಿನ ಜೀವ ಹಿಡಿದುಕೊಳ್ಳುತ್ತದೆ. 
ಆತನ ನರನಾಡಿಗಳಲ್ಲಿಯೂ ಹತ್ತಿ ಹೊಲ, ಕ್ಷಣಕ್ಷಣಕ್ಕೂ ಹತ್ತಿ ಹೊಲ. 
“ಹುಯ್ಯೋ ಹುಯ್ಯೊ ಮಳೆರಾಯ ಹತ್ತಿಹೊಲ ಬೆಳಿಬೇಕು ಮಳೆರಾಯ” ಆತನ ಮನಸ್ಸು ಶತಕೋಟಿ ಧ್ವನಿಯಿಂದ ಮಳೆಗಾಗಿ ಪ್ರಾರ್ಥಿಸುತ್ತಿದೆ. 
ವೈಶಾಖ ಮಾಸದಲ್ಲಿಯೇ ಮಗಳ ಮದುವೆ ಮಾಡಿದ್ದ ಅನಂತರೆಡ್ಡಿ. ವರದಕ್ಷಿಣೆ, ಮದುವೆ ಖರ್ಚುಗಳಿಗೆ ಲಕ್ಷದ ಮೇಲೆ ಖರ್ಚಾಯಿತು. ಅದರಲ್ಲಿ ಐವತ್ತು ಸಾವಿರ ರೂಪಾಯಿ ಸಾಲ ತಂದಿದ್ದಾನೆ. ಸಾಲ ತೀರಿಸಲು ಹತ್ತಿಹೊಲ ಬೆಳೆದರೆ ಅನುಕೂಲ ಎಂದುಕೊಂಡು ಇದ್ದ ಹತ್ತು ಎಕರೆ ಬಿತ್ತಿದ. ಬಿತ್ತುವುದಕ್ಕೂ ಸಾಲ ಮಾಡಿದ್ದಾನೆ. ಮದ್ದು, ಗೊಬ್ಬರದ ಖರ್ಚು ಇಪ್ಪತ್ತು ಸಾವಿರ ಆಗಿದೆ. ಇನ್ನೂ ಹತ್ತುಸಾವಿರವಾದರೂ ಖರ್ಚು ಮಾಡಬೇಕು. ಎಕರೆಗೆ ಒಂದೈದಾರು ಕ್ವಿಂಟಾಲ್ ಹತ್ತಿ ಬಂದರೂ ಮದುವೆಗೆ ಮಾಡಿದ ಸಾಲದ ಹೊರೆಯ ಕೊಂಚಭಾಗವಾದರೂ ತೀರುತ್ತದೆ. 
‘ಮಳೆ ಬಂದರೆ ಬೇಸಿತ್ತು ಮಳೆ ಬಂದರೆ ಬೇಸಿತ್ತು.’
ಯಾರೋ ಬಂದ ಸಪ್ಪಳ ಕೇಳಿ ತಿರುಗಿ ನೋಡಿದ ಅನಂತರೆಡ್ಡಿ. ಗೊಲ್ಲರ ರಾಮ. ಭುಜದ ಮೇಲಿನ ಕಂಬಳಿ ಹಾಸಿಕೊಳ್ಳುತ್ತಾ ಇದ್ದಾನೆ. 
‘ಮಕ್ಕಂಡಿಯಾ ಪಟೇಲಾ?’ ಕುಳಿತುಕೊಳ್ಳುತ್ತಾ ಕೇಳಿದ ರಾಮ. 
‘ಇಷ್ಟೊತ್ತಿಗೆ ಮಕ್ಕಂಬಗೈತೆನಲೆ ಕಾಲ? ಇನ್ನೂ ಉಂಡಿಲ್ಲ?’
‘ಹೌದಪೋ! ದೊಡ್ಡ ಬರಗಾಲ ಬೀಳಂಗೈತೆ ಕಾಲ. ಕೆರೆಗೆ ನೀರು ಬರದಿದ್ದರೆ ಹೋಗ್ಲಿ ನೆಲತೋಯ್ಯಂಗ ಬಂದರೂ ಬೇಸೈತೆ.’
‘ಹೌದಲೇ ನನಗೇನು ತಿಳಿದಂಗಾಗೈತೆ, ಹತ್ತಿಹೊಲವೆಲ್ಲಾ ಹಾಳಾಗಿಹೋಗತೈತೆ’ ಎಂದ ಎದ್ದು ಕುಳಿತುಕೊಳ್ಳುತ್ತಾ ಅನಂತರೆಡ್ಡಿ. 
‘ನೀವು ಮಸಾರಿ ಭೂಮೇರೆ ಹಿಂಗದ್ರೆ, ದಿಬ್ಬದ ಹೊಲದೋರು ನಮ್ಗತೇನು? ನನ್ನ ಹತ್ತಿಹೊಲ ನೋಡಾಕ ಮನಸಿಲ್ಲಪೊ, ಎಲ್ಲಾ ಒಣಗಿಹೋದಂಗಾಗಿ ಕಾಯಿ ಉದುರಾಕತ್ತೈತೆ.’
‘ಕಾಯಿ ಉದುರದಂಗ ಮದ್ದು ಹೊಡೆದಿಲ್ಲಾ.’
‘ಏನು ಮದ್ದಪೋ? ನನ್ನ ಎರಡೆಕ್ಕರೆ ಹೊಲಕ್ಕ ಇಲ್ಲಿಗೇ ಮೂರುಸಾವರ ರೂಪಾಯಿ ಮದ್ದು ಹೊಡೆದಿನಿ! ಒಂದು ಮಳೆ ಬಿದ್ದಿದ್ರೂ ಬದಿಕಿಕೊಂತಿತ್ತು. ಎಲ್ಲಾ ಸಾಯೋಕಾಲ ಬಂದೈತೆ.’
‘ನಿನ್ನ ಹೊಲ ಬೇಸೈತಂತಲ್ಲಲೇ?’
‘ಪರವಿಲ್ಲಪ ಇವಾಗ ಗಿಡಕ್ಕ ಅರವತ್ತೆಪತ್ತು ಕಾಯೈದಾವ. ಆದರೆ ನಿಂದ್ರವಲ್ಲವು.’
‘ಮೋನೋ ಕೋಟೋಪಾಸ್ ಮದ್ದು ಹೊಡೆದಿಯಾ?’
‘ಏನು ಮದ್ದುಗಳೋ ವಾರಕ್ಕೊಂದ್ಸಲ ಹೊಡಿತನೇಯಿದ್ದೀನಿ. ಮದ್ದಿನೋನು ಇನ್ನ ಉದ್ರೆ ಕೊಡಂಗಿಲ್ಲಂತಾನ, ಸೊಲುಪು ನೀನು ಹೇಳಬೇಕಪೋ, ನೀನು ಹೇಳಿದ್ರೆ ಕೇಳ್ತನ.’
‘ಹಂಗೆ ಆಗ್ಲಿ ಹೇಳ್ತಿನಿ, ನಮ್ಮೋನೆ... ಒಳ್ಳೇನು... ಹತ್ತಿ ಮಾರಿದ ದಿನನೇ ನಿನ್ನ ಬಾಕಿ ತೀರಸ್ತಾನ... ಅಂತ ಹೇಳ್ತಿನಿ ಬುಡು ಚಿಂತೆ ಮಾಡ್ಬೇಡ.’
ಅವರು ಹೀಗೆ ಮಾತಾಡುತ್ತಿರುವಾಗಲೇ ಮನೆಯೊಳಗಿಂದ ಊಟದ ಕರೆಬಂತು. 
‘ಉಣಹೋಗಪ ಪಟೇಲ! ನಾನು ಹೋಗ್‍ತಿನಿ’ ಎಂದು ಎದ್ದು ನಿಂತ. 
‘ಸರಿ ಒಳ್ಳೇದು’ ಎಂದು ತಾನು ಮಂಚ ಇಳಿದ ಅನಂತರೆಡ್ಡಿ. 
ಆತ, ಆತನ ತಾಯಿ, ಮೂರು ಮಕ್ಕಳೂ ಊಟಕ್ಕೆ ಕುಳಿತರು. ಹೆಂಡತಿ ಬಡಿಸುತ್ತಿದ್ದಾಳೆ. ಗಂಡು ಮಕ್ಕಳಿಬ್ಬರೂ ಸಣ್ಣವರು. ಪಕ್ಕದ ಊರಿಗೆ ಹೋಗಿ ಓದಿಕೊಳ್ಳುತ್ತಾರೆ. ಒಬ್ಬಳೇ ಮಗಳು. ದೊಡ್ಡವಳು. ಮದುವೆಯಾದರೂ ಇನ್ನೂ ಗಂಡನ ಮನೆಗೆ ಹೋಗಿಲ್ಲ. ತಾಯಿ ಪಾರ್ವತಮ್ಮ. ವ್ಯವಸಾಯದ ಕೆಲಸ ನೋಡಿಕೊಂಡರೆ, ಹೆಂಡತಿ ಸುಶೀಲ ಮನೆಗೆಲಸ ನೋಡಿಕೊಳ್ಳುತ್ತಾಳೆ. ಇದು ಅವನ ಕುಟುಂಬದ ವಿವರ. 
‘ನಾಳೆ ಕೂಲಿಯೋರು ಏನ್ಮಾಡ್ತರಂತೆಪಾ?’ ಎಂದು ತಾಯಿ ಪಾರ್ವತಮ್ಮ ಊಟ ಮಾಡುವಾಗ ಕೇಳಿದಳು. 
‘ಹತ್ತಿ ಹೊಲಕ್ಕ ಕುಂಟೆಕಟ್ಬೇಕಾಗಿತ್ತು, ಮೊನ್ನೆ ಒಂದು ತಾಳು ಮುರಿದೋಗೈತೆ. ನಾಳೆ ಬಡಿಗಾರನತ್ರ ಸರಿಮಾಡಿಸಿ, ನಾಡಿದ್ದಾದ್ರೆ ಕಟ್ಬೇಕು. ಇಲ್ದಿದ್ರೆ ಹೊಲ ಇನ್ನೀಟು ಬೀಳು ಬೀಳ್ತೈತೆ’ ಅನ್ನಕ್ಕೆ ಸಾಂಬಾರು ಕಲಿಸುತ್ತಾ ಹೇಳಿದ. 
‘ಕುಂಟೆ ನಾಳೆ ಕಟ್ಟಂಗಿದ್ರೆ ಹೆಣ್ಣಾಳುಗಳನ್ನ ಕರಿತೀನಿ, ಅಲ್ಲಲ್ಲಿ ಗಡ್ಡೆಮೇಲೆ ಕರಿಕೆ ಕಡ್ಡಿ ಬೆಳೆದೈತೆ, ಕಳೇವು ತೆಗಸ್ತೀನಿ.’
‘ಆಗಲಿ ಕಳೇವು ತಗಸು, ಆದರೆ ಮಂದಿ ಸಿಗತಾರೋ ಇಲ್ಲೊ.’
‘ಹೌದಪ್ಪೋ, ಹತ್ರೂಪಾಯಿ ಕೊಡ್ತೇವಂದ್ರೂ ಒಬ್ಬ ಮನಿಷ ಕೂಡ ಸಿಗುವಲ್ಲ. ಅರ್ಧ ಎಕರೆ ಇದ್ದೋನು ಹತ್ತಿಹೊಲ, ಅರವತ್ತೆಕರೆ ಇದ್ದೋನು ಗುಡ ಹತ್ತಿಹೊಲವಾದ್ರೆ ಕೂಲಿ ಮಂದಿ ಎಲ್ಲಿ ಸಿಗತಾರ.’
‘ಐದಾರು ಮಂದಿ ಬಂದ್ರೂ ಸಾಕು.’
‘ಮಸರು ಹಾಕ್ಕೆಳ್ಳಪ್ಪಾ’ ಸಾಂಬಾರಿನೊಂದಿಗೆ ಮುಗಿಸಿ ಕೈ ತೊಳೆಯುತ್ತಿದ್ದ ಅಪ್ಪನನ್ನು ಕೇಳಿದಳು ಭಾರ್ಗವಿ. 
‘ಬ್ಯಾಡ ಬುಡಮ್ಮಾ! ತಲೆವಜೈತೆ’ ಎನ್ನುತ್ತಾ ಎದ್ದ. 
ಒಬ್ಬನೇ ಬಾಗಿಲಿಗೆ ಬರುವುದರೊಳಗೆ ಹತ್ತಿಹೊಲದ ಬುಗುಲಿನ ಮೋಡಗಳು ಮತ್ತೆ ಆವರಿಸಿಕೊಂಡವು ಅವನನ್ನು.
‘ಮಳೆ ಬಂದ್ರೆ ಬೇಸಿತ್ತು, ಮಳೆ ಬಂದ್ರೆ ಬೇಸಿತ್ತು’ ಬಾಗಿಲಲ್ಲಿ ಅಡ್ಡಾಡುತ್ತಿದ್ದಾನೆ ದಿಗಿಲಿನಿಂದ. 
ಮನೆಯೊಳಗೆ ಸೆಖೆಯಾಗುತ್ತದೆಂದು ಮಕ್ಕಳು ಮಾಳಿಗೆ ಮೇಲೆ ಮಲಗಲು ಹೋಗುತ್ತಿದ್ದಾರೆ. ತಾಯಿ ವರಾಂಡದಲ್ಲಿಯೇ ತಲೆಯಿಟ್ಟಳು. 
‘ನೀನು ಇಲ್ಲೆ ಮಕ್ಕಂತೀಯಾ, ಮಾಳಿಗೆ ಮ್ಯಾಕ ಬರತೀಯಾ’ ಮನೆಗೆ ಬೀಗಹಾಕಿ ಹೊರಗೆ ಬರುತ್ತಾ ಗಂಡನನ್ನು ಕೇಳಿದಳು ಸುಶೀಲ. 
‘ಮನೆಮುಂದೆ ಅಮ್ಮ ಒಬ್ಬಾಕೆ ಆಗತಾಳ. ನಾನೀ ಬಾಗಲ್ಯಾಗ ಮಕ್ಕಂತಿನಿ ಬಿಡು.’
‘ಚೆಂಬು ನೀರು ಹೊರಗ ತಂದಿಯಾ?’
‘ತಂದೀನಿ, ಕಟ್ಟೆಮ್ಯಾಲಿಟ್ಟೀನಿ.’
‘ಕುಂದುರು’ ಅಂದ ಅನಂತರೆಡ್ಡಿ ತನ್ನ ಮಂಚದ ಮೇಲೆ ಕೂರುತ್ತಾ.
‘ಕೆಳಗ ಕುಂದ್ರುತಿನಿ ಬಿಡು’ ಅತ್ತೆಯ ಭಯದಿಂದ ಮಂಚದ ಮೇಲೆ ಕುಳಿತುಕೊಳ್ಳದೇ ನೆಲದಮೇಲೆ ಕುಳಿತಳು ಸುಶೀಲ. 
‘ಸ್ವಾಮೇರತ್ರ ಹೋಗಿಬಂದ್ಯಾ’ ಕೇಳಿದಳು ಗಂಡನನ್ನು.
‘ಯಾಕ?’
‘ಅಯ್ಯೋ ಮರತೋಯ್ತಾ, ಹುಳ್ಳಿಹೊಲ ಇಟಗೊಂಡು ಸುಮ್ನಿರಲಾರದೆ ಹತ್ತಿಹೊಲ ಇಟಗೊಂಡು ಪ್ರಾಣಕ್ಕ ತಂದುಕೊಂಡ್ನಂತೆ ಹಿಂದೆ ನಿನ್ನಂತಾತ.’ ಸಣ್ಣಗೆ ನಕ್ಕಳಾಕೆ. 
‘ಹತ್ತಿಹೊಲದ ಫಿಕರಿನ ಮೇಲೆ ಯಲ್ಲಾ ಮರಿತಿದಿ ನೀನು. ಮಗಳ ಮದುವೆ ಮಾಡಿ ಸಂಸಾರ ಮಾಡಾಕ ಕಳಸದಂಗ ಎಷ್ಟುದಿನ ಇಟಗೊಂತೀಯ ಮನ್ಯಾಗ? ಈ ಶ್ರಾವಣ ಮಾಸದಾಗ ಒಳ್ಳೆದಿನೈದವಂತ ಸ್ವಾಮೇರು ಅಂದಿದ್ರು’
‘ಹೌದಲ್ಲಾ, ನಿಜವಾಗ್ಲೂ ಅದು ಮರತೀನಿ. ನಾಳೆ ಹೊತ್ತುಂಟ್ಲೆ ಹೋಗಿಬರ್ತೀನಿ ಜರಾ ದ್ಯಾಸ ಮಾಡು.’
ವೈಶಾಖ ಮಾಸದಲ್ಲಿಯೇ ಭಾರ್ಗವಿಯ ಮದುವೆ ಮಾಡಿದ್ದ. ನಂತರ ಶುಭಕಾರ್ಯ ಕೂಡ ನಡೆಸಬೇಕೆಂದು ಮುಹೂರ್ತ ನಿರ್ಣಯಿಸಿದಾಗ ಅದೇ ದಿನ ಭಾರ್ಗವಿಯು ಮನೆಯೊಳಗೆ ಬರುವ ದಿನವಾಗಿರಲಿಲ್ಲ. ಜೇಷ್ಠ ಮಾಸದಲ್ಲಿ ಅಳಿಯನ ತಂದೆ ತಾಯಿ ಬೇಡವೆಂದಿದ್ದರು. ಆಷಾಢ ದಾಟಿಹೋದ ಮೇಲೆ ಶ್ರಾವಣ ಮಾಸದಲ್ಲಿ ಎಲ್ಲರೀತಿಯಿಂದ ಚೆನ್ನಾಗಿರುತ್ತದೆಂದುಕೊಂಡಿದ್ದರು. ಹಾಗಾಗಿಯೇ ಮದುವೆಯಾದರೂ ಭಾರ್ಗವಿ ಇನ್ನೂ ಸಂಸಾರ ಮಾಡಲು ಹೋಗದೆ ತವರುಮನೆಯಲ್ಲೇ ಇದ್ದಾಳೆ. 
‘ವಾರಕ್ಕೆ ಮುಂಚೆನೇ ನಿರ್ಣಯಿಸಿಕೊಂಡರೆ ಒಳ್ಳೇದು. ಬಾ ಅಂತ ಅಳಿಯನಿಗೆ ಕಾಗದ ಬರಿಬೇಕಲ್ಲಾ?’
‘ಹೌದೌದು ನಾಳೆ ಹೊತ್ತಿಗೆ ಮುಂಚೆನೆ ಸ್ವಾಮೇರ ಕಡೆ ಹೋಗಿಬಂದು ಅಳಿಯಗ ಕಾಗದ ಬರತಿನಿ.’
‘ಸರೆ ನಾನು ಮಕ್ಕಂತಿನಿ ಮತ್ತೆ’ ಎಂದು ಎದ್ದಳಾಕೆ.  
ಬೆಳದಿಂಗಳು ಹತ್ತಿ ಹೂವಿನಂತಿದೆ. ಮೋಡಗಳು ಹತ್ತಿ ಕುಪ್ಪೆಯಂತಿವೆ. ಅನಂತರೆಡ್ಡಿಯ ಎದೆಗುಂಡಿಗೆಯನ್ನು ಹಸಿರುಹುಳು ಕೊರೆಯುತ್ತಿದೆ. 
‘ಹುಯ್ಯೋ ಹುಯ್ಯೋ ಮಳೆರಾಯ, ಹತ್ತಿಹೊಲ ಬೆಳಿಬೇಕು ಮಳೆರಾಯ.’ 
ಭಾರದಿಂದ ಕಣ್ಣು ಮುಚ್ಚಿಕೊಂಡನು. 
***
ಮಾಳಿಗೆ ಮೇಲೆ ಮಲಗಿಕೊಂಡ ಭಾರ್ಗವಿಗೆ ನಿದ್ದೆ ಹತ್ತುತ್ತಿಲ್ಲ. ಕೆಳಗೆ ತಂದೆ ತಾಯಿ ಮಾತಾಡಿಕೊಂಡ ಸಂಭಾಷಣೆಯು ಸಣ್ಣಗೆ ಕೇಳಿಸಿಕೊಂಡಳು. ತಾಯಿ ಮೇಲೆ ಬರುವುದೂ ಗೊರಕೆ ಹೊಡೆಯುತ್ತಾ ನಿದ್ದೆ ಹೋಗುವುದು ತಿಳಿಯುತ್ತಲೇ ಇದೆ. 
ಹಿಟ್ಟು ಚೆಲ್ಲಿದಂತಿದೆ ಬೆಳದಿಂಗಳು. ಹತ್ತಿಹಳ್ಳೆಯಂತೆ ತೇಲಿ ಹೋಗುತ್ತಿವೆ ಮೋಡಗಳು. ಚಂಡು ಹೂವಿನಂತಿದ್ದಾನೆ ಚಂದ್ರ. ಆಕಾಶ ನೋಡುತ್ತಾ ಮಲಗಿರುವ ಭಾರ್ಗವಿಯ ಮನಸು ಆಹ್ಲಾದಕರವಾಗಿದೆ. ಮೆಲ್ಲಗೆ ಬೀಸುತ್ತಿರುವ ತಂಗಾಳಿ ಉದ್ವೇಗಪೂರಿತವಾಗಿದೆ. ತಲೆಯಲ್ಲಿ ಮುಡಿದ ಮಲ್ಲಿಗೆಯ ಪರಿಮಳ ಉತ್ತೇಜನಕಾರಿಯಾಗಿದೆ. 
‘ನಾಳೆ ಹೊತ್ತಿಗೆ ಮುಂಚೆ ಸ್ವಾಮೇರತ್ರ ಹೋಗಿಬಂದು ಕಾಗದ ಬರಿತಿನೇಳು’ ಎಂದ ತಂದೆಯ ಮಾತುಗಳು ಪದೇ ಪದೇ ಕಿವಿಯಲ್ಲಿ ಗುನುಗುಡುತ್ತಿವೆ. ‘ಬರ್ತಾನೆ ನನ ರಾಜ’ ಎಂದು ಹಾಡಿಕೊಳ್ಳುತ್ತಿದೆ ಮನಸು. ಹೆಚ್ಚೆಂದರೆ ಇನ್ನೊಂದು ವಾರ ತಡೆಯಬೇಕೇನೋ.
ಈ ಮೂರು ತಿಂಗಳಿನಿಂದ ವಿರಹದಿಂದ ರಾಜಶೇಖರ ಬರೆದ ಕಾಗದಗಳೆಲ್ಲಾ ಮನಸಿನ ಪರದೆಯ ಮೇಲೆ ಪ್ರತ್ಯಕ್ಷವಾಗಿ ಗೊತ್ತಿಲ್ಲದೆಯೇ ತುಟಿಯಂಚಿನ ಮೇಲೆ ಕಿರುನಗೆ ಕುಣಿಯುತ್ತಿದೆ. ಇನ್ನೂ ಸ್ವಲ್ಪ ಹೊತ್ತಿಗೆ ಬೆಳದಿಂಗಳು ಬಿಸಿಯಾಗುತ್ತದೆನಿಸುವುದರೊಳಗೆ ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಹಿಡಿದಿಟ್ಟುಕೊಂಡಳು. ಆಕೆಗೆ ಬೆನ್ನಿನ ಕೆಳಗೆ ಹೆಚ್ಚುಕಡಿಮೆ ಮಣ್ಣಿನ ಹೆಂಟೆಗಳು ಚುಚ್ಚಿದಂತಾಗಿ ತನ್ನ ತಂದೆಯ ಮನೆ ಪರಿಸ್ಥಿತಿಯೊಳಕ್ಕೆ ಬಂದಳು. ಮಣ್ಣಿನ ಮಾಳಿಗೆಗೆ ಹಾಕಿದ ಸವಳು ಮಣ್ಣು ಮಳೆಯಿಲ್ಲದ್ದರಿಂದ ಕರಗದೆ ಹೆಂಟೆಗಳು ಹಾಗೆ ಉಳಿದಿವೆ. ಚಾಪೆಯ ಮೇಲೆ ಜಮಖಾನ ಹಾಕಿಕೊಂಡಿದ್ದರೂ ಬೆನ್ನಿನ ಕೆಳಗೆ ತಗ್ಗುದಿನ್ನೆಯಿದೆ. 
ಆಕೆಗೆ ಆಗ ತನ್ನ ಮದುವೆಗೆ ತಂದೆ ಮಾಡಿದ ಸಾಲ ನೆನಪಾಯಿತು. ಅದನ್ನು ತೀರಿಸುವ ಸಲುವಾಗಿಯೇ ಆಸೆಯಿಂದ ಹೆಚ್ಚು ಹತ್ತಿ ಬಿತ್ತಿದ್ದ ಹೊಲ ನೆನಪಾಯಿತು. ಆ ಹತ್ತಿ ಹೊಲ ಬೆಳೆಯಬೇಕೆಂದರೆ ಬೀಳಬೇಕಾದ ಮಳೆಯ ನೆನಪಾಯಿತು. 
‘ಮಳೆ ಬರಬೇಕು ದೇವರೇ... ಮಳೆ ಬರಬೇಕು’ ಎಂದುಕೊಳ್ಳುತ್ತಾ ಬಲವಂತವಾಗಿ ಕಣ್ಣುಮುಚ್ಚಿಕೊಂಡು ನಿದ್ರೆಗೆ ಜಾರಿದಳು ಭಾರ್ಗವಿ. 
***
‘ನಾಳೆ ಶುಕ್ರವಾರ ಬಿಟ್ಟು ಮುಂದಿನ ಶುಕ್ರವಾರ ಬಾಳ ಒಳ್ಳೇದಿನಂತೆ ಸ್ವಾಮೇರು ಹೇಳಿದ್ರು’ ಎಂದ ಅನಂತರೆಡ್ಡಿ ಹೆಂಡತಿಯೊಂದಿಗೆ ಮರುದಿನ ಬೆಳಗ್ಗೆ.
‘ಹಂಗಾದ್ರೆ ಅಳಿಯಾಗ ಈಗಲೇ ಕಾಗದ ಬರಿ- ಶುಕ್ರವಾರ ಜಲ್ದಿ ಬಾ ಅಂತ. ಹತ್ತು ಗಂಟೆಗೆ ಪಾಲೆಂ ಹತ್ತಿರ ಗಾಡಿ ಕಳಸ್ತುವಿ ಅಂತ ಕೂಡ ಬರಿ’ ಎಂದಳು ಸುಶೀಲ.
ತಂದೆ ತಾಯಿಗಳ ಸಂಭಾಷಣೆಯು ಕೇಳುತ್ತಲೇ ಇದೆ ಭಾರ್ಗವಿಗೆ. ಮನಸ್ಸಲ್ಲಿಯೇ ಬಾಕಿ ದಿನಗಳನ್ನು ಲೆಕ್ಕ ಹಾಕಿದಳು. ಈ ಹೊತ್ತು ಬುಧವಾರ. ಬುಧವಾರ ಕಳೆದರೆ ಗುರುವಾರದಿಂದ ಗುರುವಾರಕ್ಕೆ ಎಂಟು ದಿನ!
‘ಇನ್ನೊಂದು ವಿಷಯಾನು ಹೇಳಿರು. ಈ ಮೂಹರ್ತಕ್ಕೆ ಇಬ್ಬರ ಹೆಸರಿನ ಬಲ ಕೂಡ ಚೆನ್ನಾಗಿದೆಯಂತೆ. ಇದು ತಪ್ಪಿದರೆ ಇಂಥ ಒಳ್ಳೆ ಮುಹೂರ್ತಕ್ಕಾಗಿ ಎರಡು ತಿಂಗಳು ಕಾಯಬೇಕಂತೆ!’
‘ಅಯ್ಯೋ, ಇಂತ ಒಳ್ಳೆ ಮುಹೂರ್ತ ಯಾಕ ತಪ್ಪಸ್ತೀವಿ. ನಮಗ ಅಳಿಯ ಬಂದ್ರೆ ಸಾಕು. ರಜ ಸಿಗದಿಲ್ಲಂತ ಆತ ಬರದಿದ್ದರೆ ಬಾಳ ಕಷ್ಟ. ಇಂತ ವಿಷಯ ಬರಲೇಬೇಕಂತ ಕಾಗದ ಬರಿಬೇಕು ಮತ್ತೆ.’
‘ಅವರು ಬರದೇ ಇರ್ತಾರ. ಶುಕ್ರವಾರ ಮುಂಜಾನೆವರಿಗೆ ತಡಿಯದೆ ಗುರುವಾರ ರಾತ್ರಿಗೇ ಬರ್ತಾರೇನೋ’ ಎಂದು ಗಂಡನನ್ನು ನೆನಸಿಕೊಂಡು ಮನದೊಳಗೆ ನಕ್ಕಳು ಭಾರ್ಗವಿ.

***
ಮಳೆ ಬರುವ ಮಾತು ಹಾಗಿರಲಿ, ಬಿಸಿಲು ತೀವ್ರವಾಗಿ ರೋಹಿಣಿಕಾರ್ತಿ ಬಿರುಬಿಸಿಲಿರುವುದರಿಂದ ಬೆಳೆಗಳ ಪರಿಸ್ಥಿತಿ ಮತ್ತಷ್ಟೂ ಕ್ಷೀಣವಾಗಿತ್ತು. ರೈತರೆಲ್ಲ ಕುಗ್ಗಿಹೋದರು. ಅನಂತರೆಡ್ಡಿಗೆ ಭವಿಷ್ಯವು ಅಗಮ್ಯಗೋಚರವಾಗಿದೆ. ಎಲ್ಲಿಲ್ಲದ ನಿಶ್ಯಕ್ತಿ ಆವರಿಸಿಕೊಂಡಿತು ಆತನಿಗೆ. 
ಯಾವ ಪ್ರಾಜೆಕ್ಟು ಇಲ್ಲದ, ಇದ್ದರೂ ನೀರುಬೀಳದ ಎತ್ತರದಲ್ಲಿರುವ ಮೆಹಬೂಬ್‌ನಗರ ಜಿಲ್ಲೆಯ ಮಾರುಮೂಲೆ ಕುಗ್ರಾಮ ಅದು. ಮಳೆ ಚೆನ್ನಾಗಿ ಬಂದು ಕೆರೆ ತುಂಬಿದರೂ ಕೂಡ ನೆಲ್ಲು ಸಸಿ ಹಚ್ಚುವುದಿಲ್ಲ. ಎರೆ, ದಿನ್ನೆಯ ಹೊಲಗಳಲ್ಲಿ ಒಂದು ಕಾಲದಲ್ಲಿ ಮೆಣಸಿನಕಾಯಿ, ಜೋಳ, ಔಡಲ ಹಾಕಿಕೊಂಡು ಹೇಗೋ ಕಾಲ ನೂಕುತ್ತಿದ್ದರು. ನಾಲ್ಕೈದು ವರ್ಷದಿಂದ ಹತ್ತಿಯನ್ನು ಆರಂಭಿಸಿ ಸಾವಿರಾರು ರೂಪಾಯಿ ನೋಡಿದ ಮೇಲೆ ಈ ವರ್ಷವೂ ಹುಚ್ಚಿನಿಂದ ಪ್ರತಿಯೊಬ್ಬರೂ ಹತ್ತಿ ರೈತರಾಗಿದ್ದಾರೆ. ಗುಂಟೂರು, ಪ್ರಕಾಶಂ ಜಿಲ್ಲೆಯವರನ್ನು ಭಯಭೀತರನ್ನಾಗಿ ಮಾಡಿದ ಬಿಳಿಸೊಳ್ಳೆ ಈಗ ಈ ಕಡೆಗೆ ದಾರಿ ಬದಲಿಸಿದೆ. ಇದರ ಜೊತೆಗೆ ಮಳೆಯ ಅಭಾವದ ಸ್ಥಿತಿ. 
ಒಂದೊಂದು ದಿನ ಕಳೆದಂತೆಲ್ಲಾ ಅನಂತರೆಡ್ಡಿಗೆ ಒಂದು ವರ್ಷವಾದಂತೆ ಕುಗ್ಗಿಹೋಗುತ್ತಿದ್ದಾನೆ. ಹತ್ತಿಹೊಲದ ಹತ್ತಿರ ಹೋದ್ರೆ ಅಳು ಬರುತ್ತದೆ. ಅಡಿಕೆ ಎಲೆಯಂತೆ ಮಿರಮಿರ ಮಿಂಚಿದ ಎಲೆಗಳು ಈಗ ಮಡಚಿಕೊಂಡು ಬಿದ್ದಿವೆ. ದಿನದಿನಕ್ಕೂ ಗಿಡದ ಕೆಳಗೆ ಉದುರಿ ಬೀಳುತ್ತಿರುವ ಕಾಯಿಯ ಸಂಖ್ಯೆ ಹೆಚ್ಚಾಗಿ ಗಿಡ ಒಣಗಿಹೋಗುತ್ತಿದೆ. 
ಈಗಂತೂ ಹತ್ತಿಹೊಲದ ಕಡೆ ಹೋಗುವುದನ್ನು ಬಿಟ್ಟಿದ್ದಾನೆ. ಆದರೆ ಮಳೆಮೇಲಿನ ನಂಬಿಕೆ ಮಾತ್ರ ಹೋಗಿಲ್ಲ ಆತನಿಗೆ. 

***
ಒಂದೊಂದು ದಿನ ಕಳೆದಂತೆ ಉತ್ಸಾಹ ಇಮ್ಮಡಿಯಾಗುತ್ತಿದೆ ಭಾರ್ಗವಿಗೆ. ಗುರುವಾರ ಕಳೆದು ಗುರುವಾರ ಬಂದೇ ಬಿಟ್ಟಿತು. ಯಾಕೋ ಮದುವೆಯಾಗುವಾಗಲೂ ಕೂಡ ಇಷ್ಟೊಂದು ಉದ್ವೇಗ ಪಟ್ಟಿರಲಿಲ್ಲ ಆಕೆ. ಹಾಗೆಂದು ಶೋಭನಕ್ಕಾಗಿಯೂ ಅಲ್ಲ ಈ ಉದ್ವೇಗ. ದಾಂಪತ್ಯ ಜೀವನ! ಹಿಂಜರಿಕೆ ತೊಲಗಿಸಿಕೊಂಡು ಕಳೆಯುವ ಈ ದಾಂಪತ್ಯ ಜೀವನದ ಕುರಿತೇ ಆಕೆಯ ಉದ್ವೇಗ! ಮದುವೆಯಾದರೂ ಕೂಡ ಕಾರ್ಯವೆನ್ನುತ್ತಾ, ಮುಹೂರ್ತಗಳಿಲ್ಲವೆಂದೂ ಹೀಗೆ ಹಿಂಜರಿಕೆಯಿಂದಲೇ ಇಷ್ಟುದಿನ ಬದುಕಿದ್ದೇ ಆಕೆಯನ್ನು ನೋಯಿಸಿತು. ಅದು ಈಗ ಕೊನೆಯಾಗುತ್ತಿರುವುದಕ್ಕೆ ಸಂತೋಷ. 
‘ಏನೇನ್ ತರಬೇಕು’ ಕೇಳುತ್ತಿದ್ದಾನೆ ಅನಂತರೆಡ್ಡಿ ಸುಶೀಲಳನ್ನು. 
‘ಹೂವು, ಹಣ್ಣು...’ ಹೇಳಿದಳಾಕೆ. ತಂದೆಯನ್ನು ನೋಡುತ್ತಿದ್ದ ಭಾರ್ಗವಿಗೆ ಯಾಕೋ ಹೇಳತೀರದ ನೋವು ಎನಿಸಿತು. ಮಳೆ ಬಂದಿದ್ದರೆ ತನ್ನ ತಂದೆ ಎಷ್ಟು ಉತ್ಸಾಹದಿಂದಿರುತ್ತಿದ್ದ ಎಂದುಕೊಂಡಳು. 
‘ಹುಯ್ಯೋ ಹುಯ್ಯೋ ಮಳೆರಾಯ... ಹತ್ತಿಹೊಲ ಬೆಳಿಬೇಕು ಮಳೆರಾಯ.’

***
ಭಾರ್ಗವಿಯ ಮಾತು ನಿಜವಾಯಿತು. ಶುಕ್ರವಾರ ಬೆಳಗ್ಗೆ ಬರಬೇಕಾಗಿದ್ದ ರಾಜಶೇಖರ್ ಗುರುವಾರ ರಾತ್ರಿಯೇ ಬಂದಿದ್ದಾನೆ. ಅವನು ಬಂದದ್ದು ಮನೆಮಂದಿಗೆಲ್ಲಾ ಸಂತೋಷವಾಗಿದೆ. ಮನಸ್ಸೆಲ್ಲಾ ಭಾರ್ಗವಿ ಕಡೆಯಿದ್ದರೂ ಅನಿವಾರ್ಯವಾಗಿ ರಾಜಶೇಖರ ಮಾವ- ಬಾಮೈದುನರಿಬ್ಬರೊಂದಿಗೆ ಕಾಲಕ್ಷೇಪ ಮಾಡಿದ. 
ಮರುದಿನ ಹಗಲು ಬಹುಬೇಗ ಕಳೆದಂತಾಯಿತು ಭಾರ್ಗವಿಗೆ. ತನಗೆ ಒಂದೊಂದು ನಿಮಿಷವೂ ಭಾರವಾಗುತ್ತಿದೆಯೆಂದುಕೊಳ್ಳುತ್ತಿದ್ದಾನೆ ರಾಜಶೇಖರ. 
ಆ ರಾತ್ರಿ ಎಲ್ಲರೂ ಬೇಗನೆ ಊಟ ಮಾಡಿದರು. ಆ ಮನೆಯನ್ನು ಶೋಭನದ ಮನೆಯನ್ನಾಗಿ ಮಾಡುವ ಅವಕಾಶವಿದ್ದರೂ ಒಂದು ಕೋಣೆಯನ್ನು ಸುಶೀಲ ತನಗೆ ತಿಳಿದರೀತಿಯಲ್ಲಿ ಅಲಂಕರಿಸಿದಳು. ಈ ಕಾರ್ಯದ ಸಂಭ್ರಮವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವ ರೂಢಿ ಈ ಪ್ರದೇಶದಲ್ಲಿಲ್ಲ. ಸುಶೀಲಳ ತವರುಮನೆ ಊರಿನ ಕಡೆ ಇದನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಊಟವಾದ ತಕ್ಷಣವೇ ಮಗಳನ್ನು ಅಲಂಕರಿಸುವ ಕೆಲಸದಲ್ಲಿ ಮಗ್ನಳಾದಳು ಸುಶೀಲ. ಊಟಕ್ಕೆ ಮೊದಲೇ ಶೋಭನದ ಕೋಣೆಯನ್ನು ತಯಾರಿಸಿ ಇಟ್ಟಿದ್ದಳು.
ಪಾರ್ವತಮ್ಮ ಪಡಸಾಲೆಯಲ್ಲಿ ಮಲಗಿಕೊಂಡು ಆಗಲೇ ಗೊರಕೆ ಆರಂಭಿಸಿದ್ದಾಳೆ. ಗಂಡುಮಕ್ಕಳಿಬ್ಬರೂ ಬಟ್ಟೆಗಳನ್ನು ತೆಗೆದುಕೊಂಡು ಮಾಳಿಗೆ ಮೇಲೆ ಹೋಗಿದ್ದಾರೆ. ಬಾಗಿಲಲ್ಲಿ ಮಂಚದ ಮೇಲೆ ಕುಳಿತುಕೊಂಡು ಮಾವ- ಅಳಿಯ ಹಾಳಾಗಿಹೋಗುತ್ತಿರುವ ಬೆಳೆ ಕುರಿತು, ಮುಂಬರುವ ಬರಗಾಲ ಕುರಿತು ಮಾತಾಡಿಕೊಳ್ಳುತ್ತಿದ್ದಾರೆ. 
ಇದ್ದಕ್ಕಿದ್ದಂತೆ ಬಿದ್ದಿತೊಂದು ಮಳೆಹನಿ.
ಅದು ಸರಿಯಾಗಿ ಅನಂತರೆಡ್ಡಿಯ ಕೈಮೇಲೆ.
ಗಾಬರಿಯಿಂದ ತಲೆಯೆತ್ತಿ ಮೇಲೆ ನೋಡಿದ. 
ಆಕಾಶ ನಿರಾಳವಾಗಿಯೇ ಇದೆ. 
‘ಮಳೆ ಬರ್ತಿದ್ದಂಗೈತೆ ಮಾವ’ ಎಂದನು ರಾಜಶೇಖರ. ಆತನ ಮೇಲೆಯೂ ಎರಡು ಹನಿಗಳು ಬಿದ್ದವು. 
‘ಹೌದು! ಆದರೆ ಮೋಡಗಳೇ ಇಲ್ಲ. ಇನ್ನೆಲ್ಲೆನ್ನ ಬರ್ತೈತೇನೋ’ ಎಂದ ಅನಂತರೆಡ್ಡಿ. 
ಮತ್ತೆ ಐದು ನಿಮಿಷಗಳವರೆಗೆ ನಾಲ್ಕನೇ ಹನಿ ಬೀಳಲಿಲ್ಲ. ಮಳೆಯ ಸಂಗತಿ ಮರೆತು ಮಾತಿಗಿಳಿದರು ಇಬ್ಬರೂ. ಆಗ ಆರಂಭವಾಯಿತು ತಣ್ಣನೆಯ ಗಾಳಿ. ಎಲ್ಲೋ ಮಾರುಮೂಲೆ ಪ್ರದೇಶದಲ್ಲಿ ಅಡಗಿಕೊಂಡಂತಿದ್ದ ಕಪ್ಪನೆಯ ಮೋಡಗಳು ಆ ಊರಿನ ಮೇಲೆ ಆವರಿಸಿಕೊಳ್ಳಲಾರಂಭಿಸಿದವು. 
‘ಮೋಡಾಗ್ತಿದೆ ಮಳೆ ಬರಂಗೈತೆ.’
ಆ ಮಬ್ಬುಗತ್ತಲಲ್ಲಿ ಆನಂದದ ಮೆರಗು ಆತನ ಮುಖದ ಮೇಲೆ ಪ್ರತಿಫಲಿಸಿತು. ಟಪಟಪಾ ಮಳೆಹನಿಗಳು ಬೀಳುತ್ತಿವೆ. ಧಡಲ್ ಎಂದು ಗುಡುಗು ಬಡಿಯಿತು. ಚಮಕ್ಕೆಂದು ಮಿಂಚಿತು. ತೋಯ್ದ ನೆಲದಿಂದ ಬರುವಂತೆ ಗಾಳಿಯು ಮಣ್ಣಿನ ವಾಸನೆಯನ್ನು ಹೊತ್ತುತರುತ್ತಿದೆ. 
‘ಒಳಗೋಗನ ನಡಿ ರಾಜಾ..... ತೋಯಿಸಿಗಂತೀವಿ’ ಎಂದು ಎದ್ದ ಅನಂತರೆಡ್ಡಿ.
‘ಮಂಚ ಕೂಡ ಒಯ್ಯೋಣ. ನೀನು ಆ ಸೈಡಿಗೆ ಹಿಡಕ’ ಎಂದ ರಾಜಶೇಖರ. 
‘ನೀನು ಹಿಡಕಂತಿಯಾ- ಬ್ಯಾಡ ಬ್ಯಾಡ ಬಿಡು. ನಾನೊಬ್ಬನೇ ತರ್ತೀನಿ ನೀನಡಿ.’ 
ಇನ್ನೂ ಶೋಭನ ಕೂಡ ಆಗದ ಹೊಸ ಅಳಿಯ ತನ್ನ ಸಹಾಯಕ್ಕಾಗಿ ಮಂಚ ಹಿಡಿದುಕೊಳ್ಳಲು ಬಂದಾಗ ಆತ ಅಲ್ಲಾಡಿಹೋದ. 
‘ಪರವಾಗಿಲ್ಲ ಮಾವ ತಪ್ಪೇನೈತೆ ಹಿಡಕೊ’ ಇಬ್ಬರೂ ಸೇರಿ ಮಂಚವನ್ನು ಪಡಸಾಲೆಗೆ ತಂದರು. ಮಾಳಿಗೆ ಮೇಲೆ ಮಲಗಿದ್ದ ಹುಡುಗರಿಬ್ಬರೂ ಬಟ್ಟೆ ಸುತ್ತಿಕೊಂಡು ಕೆಳಗಡೆ ಓಡಿಬಂದರು. 
‘ಈ ದಿನ ನಿಜವಾಗ್ಲೂ ಒಳ್ಳೆ ದಿನವೇ ತಾಯಿ. ಮಳೆ ಕೂಡ ಬೀಳ್ತಿದೆ’ ಮಗಳ ಹೂವಿನ ಜಡೆ ಸರಿಮಾಡುತ್ತಾ ಎಂದಳು ಸುಶೀಲ. 
‘ನಿಜ ಅಮ್ಮಾ! ಅಪ್ಪನ ಮುಖ ನೋಡ್ತಿದ್ದರೆ ಭಾಳ ನೋವಾಗಿತ್ತು.’
‘ಅಪ್ಪನಿಗೆ ಅದೆಷ್ಟು ಸಂತೋಷವಾಗಿದೆಯೋ’ ಕನ್ನಡಿ ನೋಡುತ್ತಾ ಹಣೆಯ ಮೇಲೆ ತಿಲಕವನ್ನು ಸರಿಮಾಡಿಕೊಂಡಳು ಭಾರ್ಗವಿ.
ಮಳೆ ಹಾಗೆ ಬೀಳುತ್ತಿರುವಂತೆ ಹೊರಗಿನಿಂದ ಸದ್ದು ಕೇಳುತ್ತಿದೆ. 
‘ಅಮ್ಮಾ ಮನೆಗೆ ಬುಂಗೆ ಬಿದ್ದಂಗೈತೆ’ ಸೀರೆ ಮೇಲೆ ಬಿದ್ದ ನಾಲ್ಕೈದು ಚುಕ್ಕೆ ಮಳೆ ಬೀಳುತ್ತಿದ್ದಂತೆ ದಡಗ್ಗನೇ ಎದ್ದಳು ಭಾರ್ಗವಿ. (ಬುಂಗೆ= ಮಣ್ಣಿನ ಮಾಳಿಗೆಗೆ ತೂತು ಬಿದ್ದು ಮನೆಯೊಳಗೆ ನೀರು ಸೋರುವುದು).
‘ಆ ರೂಂನ್ಯಾಗ ನೋಡಿಬರ್ತೀನಿ ಇರಮ್ಮಾ. ಮಾಳಿಗೆಲ್ಲ ಹಂಗೆ ಇದೆ’ ಎಂದು ಎದ್ದು ಬಡಬಡ ಕಾರ್ಯದ ಕೋಣೆಗೆ ಹೋದಳು. ಅಷ್ಟೊತ್ತಿಗೆ ಆ ಕೋಣೆ ಮೂರು ಕಡೆ ಸೋರುತ್ತಿದೆ. ಸರಿಯಾಗಿ ಮಂಚದ ಮೇಲೆ ಕೂಡ ಒಂದು ಬುಂಗೆಬಿದ್ದು ತೋಯುತ್ತಿದೆ. 
‘ಭಾಸ್ಕರೂ! ಜಲ್ದಿ ಇಲ್ಲಿ ಬಾ ಮಗನೇ’ ದೊಡ್ಡ ಮಗನನ್ನು ಗಾಬರಿಯಿಂದ ಕರೆದಳು. 
‘ಏನಮ್ಮಾ?’ ಇಬ್ಬರು ಮಕ್ಕಳು ಓಡೋಡಿಬಂದರು ಒಳಗಡೆ. 
‘ಎರಡ್ಮೂರು ಗಿಂಡಿ ತಗಂಬರ್ರಿ ಹೋಗ್ರಿ. ರೂಮೆಲ್ಲಾ ತಟಗು ಇಟ್ಟಿದೆ’ ಹಾಸಿಗೆಯನ್ನು ಮಡಚುತ್ತಾ ಎಂದಳು. 
ಭಾರ್ಗವಿ ಕೂಡ ಬಂದಳು. ಎಲ್ಲಿ ನೀರು ಸೋರುತ್ತಿದೆ. ಅದರ ಕೆಳಗೆ ಗಿಂಡಿಗಳಿಟ್ಟಿದ್ದರೂ ಮತ್ತೆ ಮೂರು ಕಡೆ ಸೋರಲಾರಂಭಿಸಿದೆ. ಮಂಚವನ್ನೆತ್ತಿಡಲೂ ಜಾಗವಿಲ್ಲ ಆ ಕೋಣೆಯಲ್ಲಿ. 
‘ಅರೆ ನಿಮ್ಮಪ್ಪನ್ನ ಒಳಗ ಕರಿರಲೋ’ ಗಡಿಬಿಡಿ ಹೆಚ್ಚಾಯಿತಾಕೆಗೆ. 
ಒಳಗೆ ಬಂದ ಅನಂತರೆಡ್ಡಿ ಪರಿಸ್ಥಿತಿಯನ್ನು ನೋಡಿದ. ಮಲಗಲು ಸಾಧ್ಯವಿಲ್ಲದಂತಿದೆ ಕೋಣೆ.
‘ಮಾಳಿಗೆ ಮ್ಯಾಲೋಗಿ ನಾನು ನೋಡಿ ತುಳಿದು ಬರ್ತೀನಿ’ ಎನ್ನುತ್ತಾ ಕಂಬಳಿ ಹೊದ್ದು ಬ್ಯಾಟರಿ ತೆಗೆದುಕೊಂಡು ಮೆಟ್ಟಿಲುಹತ್ತಿ ಹೋದ. 
ಮಳೆಗೆ ತೋಯ್ದ ಸವುಳು ಮಾಳಿಗೆ ಮೇಲೆ ಜಾರುತ್ತಿದೆ. ಐದಾರು ನಿಮಿಷಕ್ಕಿಂತ ಹೆಚ್ಚು ಆ ಮಳೆಯಲ್ಲಿ ನಿಲ್ಲಲಾರದೆ ಮತ್ತೆ ಕೆಳಗಡೆ ಬಂದ. ಈಗ ಆ ಕೋಣೆಯಲ್ಲದೇ ಮಧ್ಯದ ಹಾಲ್, ಸಾಮಾನಿನ ಕೋಣೆ, ಅಡುಗೆಮನೆಗಳು ಕೂಡ ಸೋರುತ್ತಿವೆ. 
ಭಾರ್ಗವಿ ಹೊರಗಡೆ ಬಂದು ರಾಜಶೇಖರನಿಗೆ ಒಳಗಿನ ಪರಿಸ್ಥಿತಿಯನ್ನು ಹೇಳುತ್ತಿದ್ದಾಳೆ. ಮಳೆ ನಿಂತರೆ ಕೂಡ ಇವತ್ತು ಮಲಗಿಕೊಳ್ಳಲು ಜಾಗವಿಲ್ಲ. ಮಳೆ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಿದೆ. ಗಾಳಿಯೂ ಜಾಸ್ತಿಯಾಯಿತು. ಅದರ ಜೊತೆಗೆ ಕರೆಂಟು ಕೂಡ ಹೋಯಿತು. ಊರಿಗೆ ಊರು ಕಗ್ಗತ್ತಲೆ ಆವರಿಸಿತು. ಬುಡ್ಡಿ ದೀಪಗಳು ಮಿಣ ಮಿಣ ಬೆಳಗಲು ಪ್ರಯತ್ನಿಸುತ್ತಿವೆ. 
‘ಛೀ! ಹಾಳಾದ್ದು ಮಳೆ! ಇಷ್ಟು ದಿನ ಬಿಟ್ಟು ಈ ಹೊತ್ತೇ ಬರ್ಬೇಕ’ ಎನ್ನುತ್ತಿದ್ದಾನೆ ಅನಂತರೆಡ್ಡಿ ಒಳಗಡೆ. 
‘ಷ್ಚ್, ಈ ದಿನ ನಿಂತುಹೋದರೆ ಎರಡು ತಿಂಗಳವರೆಗೆ ಒಳ್ಳೇ ದಿನಗಳು ಇಲ್ಲಂತೆ’ ಎನ್ನುತ್ತಿದ್ದಾಳೆ ಸುಶೀಲ. ಭಾರ್ಗವಿ, ರಾಜಶೇಖರನಿಗೆ ಕೇಳುತ್ತಿವೆ ಒಳಗಿನ ಮಾತುಗಳು. 
‘ಮಳೆಬರ್ಬೇಕು, ಮಳೆಬರ್ಬೇಕು’ ಎಂದು ಇಷ್ಟುದಿನ ಪ್ರಾರ್ಥಿಸಿದ ಅನಂತರೆಡ್ಡಿಗೆ ಮಳೆಯ ಮೇಲೆ ಕೆಟ್ಟ ಕೋಪ ಬಂತು. 
‘ಈ ಹಾಳು ಮಳೆ ಇವಾಗನ್ನ ನಿಂತ್ರೆ ಬೇಸೈತೆ’ ಎನ್ನುತ್ತಾ ಪಡಸಾಲಿಗೆ ಬಂದ ಅಳಿಯನ ಹತ್ತಿರ. 
ತನ್ನ ಸಲುವಾಗಿ ಮಳೆಯನ್ನು ನಿಲ್ಲು ಎನ್ನುತ್ತಿರುವ ಅಪ್ಪನ ಮಾತುಗಳಿಗೆ ಆಶ್ವರ್ಯಪಟ್ಟು, ತಂದೆ ತನ್ನ ಮೇಲಿಟ್ಟಿರುವ ಪ್ರೀತಿಗೆ ಅಭಿಮಾನಪಟ್ಟಳು. ಆ ತಂದೆಗೆ ಮಗಳ ದಾಂಪತ್ಯದ ಮೇಲೆ ಇರುವ ಪ್ರೇಮವನ್ನು ಮಳೆದೇವರು ಕೂಡ ಸ್ಪಂದಿಸಿದನೆಂಬಂತೆ, ಮಂತ್ರಹಾಕಿದಂತೆ ಮಳೆಯೂ ನಿಂತು ಹೋಯಿತು. 
‘ಈ ವರ್ಷ ಸರಿಹೋಗುತ್ತಾ ಅಪ್ಪ ನಮ್ಮ ಹತ್ತಿ ಹೊಲಕ್ಕ’ ಕೇಳಿದಳು ತಂದೆಯನ್ನು. 
‘ಎಷ್ಟು ಹಸಿಯಾಗೆತಮ್ಮಾ, ಎರಡಿಂಚು ಕೂಡ ತೋಯ್ದಿರದಿಲ್ಲ. ಆದರೆ ಹೋದ್ರೆ ಹೋಗ್ಲಿ ಈ ಹಾಳು ಮಳೆ’ ಕುಗ್ಗಿದ ತಂದೆ. 
‘ಹಾಗಂತಾರೇನು ಮಾವ? ಕಾರ್ಯ ನಿಂತುಹೋಗುತ್ತೆಂತ ನೋವಾಗ್ತಿದೆಯಾ? ಇಂಥ ಸಂತೋಷದ ಮುಂದೆ ಅದು ಎಂಥಾ ನೋವು’ ಎಂದ ರಾಜಶೇಖರ. 
‘ಹೌದಪ್ಪಾ! ನಮ್ಮ ಸಲುವಾಗಿ ತ್ರಾಸುಪಡುಬ್ಯಾಡ್ರಿ. ಈ ಮಳೆ ಇನ್ನೂ ಬೇಷ್ ಬರಲಿ. ನಮ್ಮ ಹತ್ತಿಹೊಲ ಕಾಯಿಹೊಡಿಲಿ’ ಎಂದಳು ಭಾರ್ಗವಿ. ಮೂರು ತಿಂಗಳ ವಿರಹದ ನಂತರ ಕಾರ್ಯ ಮತ್ತೆ ಎರಡು ತಿಂಗಳು ಮುಂದೆ ಹೋಗುತ್ತಿದ್ದರೂ ಮಳೆಗಾಗಿ ತುಂಬು ಹೃದಯದಿಂದ ಸ್ವಾಗತ ಕೋರುತ್ತಿರುವ ಆ ಯುವ ಜೋಡಿಯ ಆಹ್ವಾನಕ್ಕೆ ಸ್ಪಂದಿಸಿತೇನೋ ಎಂಬಂತೆ ಮತ್ತೆ ಮಳೆ ಸುರಿಯಲಾರಂಭಿಸಿತು. ಈ ಬಾರಿ ಮತ್ತೆ ಜೋರಾಗಿ. ಅನಂತರೆಡ್ಡಿಯ ಕಣ್ಣಂಚಲಿ ಜಾರಿದ ಆನಂದಬಾಷ್ಪಗಳಲ್ಲಿ ಬೆಳಕಿನ ಕಾಂತಿಕಿರಣ ಪುನರಾವರ್ತನೆಯಾಗಿ ಆ ಯುವ ಜೋಡಿಯ ಮುಖಗಳ ಮೇಲೆ ಕಾಮನ ಬಿಲ್ಲಿನಂತೆ ಮೂಡಿತು. 
ಹತ್ತಿಹೊಲ ಬೆಳೆಯುವಂತೆ ಮಳೆದೇವರು ವರ್ಷಧಾರೆಯನ್ನು ಸುರಿಯುತ್ತಲೇ ಇದ್ದಾನೆ ಬೆಳಗಾಗುವವರೆಗೂ.

***
ಗಂಗುಲ ನರಸಿಂಹರೆಡ್ಡಿ
ಮೆಹಬೂಬ್‌ನಗರ ಜಿಲ್ಲೆಯ ತಿಮ್ಮಾಜಿಪೇಟೆಯಲ್ಲಿ ಜನನ. ಮೂರು ಕಾದಂಬರಿಗಳನ್ನು, ಅರವತ್ತಕ್ಕೂ ಹೆಚ್ಚು ಕತೆಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರು.
***

ಜಾಜಿ ದೇವೇಂದ್ರಪ್ಪ
ಹಳೆ ಬಳ್ಳಾರಿ ಜಿಲ್ಲೆಯ ಯಳ್ಳಾರ್ತಿಯವರು. ಸಂಶೋಧನೆ, ಭಾಷಾಶಾಸ್ತ್ರ, ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಬಾನ ಬೆಡಗು’, ‘ವಿಜಲುಗಳು’ (ಕವನ ಸಂಕಲನಗಳು), ‘ಪ್ರಸ್ತಾಪನ’, ‘ಆಂಧ್ರ ಕರ್ನಾಟಕದ ಸ್ಥಳನಾಮಗಳು’ (ಸಂಶೋಧನೆ), ‘ಶ್ರೀಶೈಲ ಶಾಸನ ಸಮೀಕ್ಷೆ’, ‘ತೆಲುಗು ಸಾಹಿತ್ಯದಲ್ಲಿ ಬಸವಣ್ಣ’, ‘ಶ್ರೀಶೈಲ ಸಾಂಸ್ಕೃತಿಕ ಅಧ್ಯಯನ’, ‘ದೇವರ ರಾಜಕೀಯ ತತ್ತ್ವ’ (ಅನುವಾದಗಳು), ‘ಹೊಳಲಗುಂದಿ ಸಾಯಿಬಣ್ಣ ತತ್ತ್ವಪದಗಳು’, ‘ಕರಸಿರಿ’, ‘ಸಂಶೋಧನೆ’, ‘ಶೋಧನೆ’ (ಸಂಪಾದನೆ) ಅವರ ಕೃತಿಗಳಾಗಿವೆ. ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರು. 

 

ಮಯೂರ: ಸಂಪುಟ: 51, ಸಂಚಿಕೆ: 07, ಜುಲೈ 2018
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !