ಮಳೆಗೆ ಅಂಟಿದ ಕಥೆಯ ನೆರಳು

7

ಮಳೆಗೆ ಅಂಟಿದ ಕಥೆಯ ನೆರಳು

Published:
Updated:
Deccan Herald

‘ಕ ಥೆ, ಕಥೆ, ಕಥೆ, ಕಥೆ...’

‘ಕಥೆ, ಕಥೆ ಅಂತ ಅಳ್ತಾ ಇರಬೇಡ ಪುಟ್ಟಿ, ನೀ ಕಥೆ ಕಥೆ ಅಂತ ಗೋಗರಿತಾ ಇದ್ರೆ ಮಳೆ ನಿಲ್ಲೋದೆ ಇಲ್ಲ.’

‘ಬೇಡ, ಮಳೆ ನಿಲ್ಲೋದೆ ಬೇಡ, ಕಥೆ ಹೇಳಿ ಅಜ್ಜ.’

‘ನಿಂದೊಳ್ಳೆ ಕಥೆ ಆಯ್ತಲ್ಲ ಪುಟ್ಟಿ, ಮಳೆ ನಿಲ್ಲದೆ ಇದ್ರೆ ರಸ್ತೆ ಮೇಲೆಲ್ಲ ನೀರು ಹರಿದು, ಹೊರಗೆ ಹೋಗೋದು, ಅಂಗಡಿ ಇಂದ ಸಾಮಾನು ತರೋದು ಎಲ್ಲ ಹೇಗೆ?’

‘ಹೊರಗೆ ಹೋಗೋದೇ ಬೇಡ.... ಕಥೆ....’

‘ಮಳೆಗೆ ಕಥೆ ಅಂದ್ರೆ ತುಂಬಾ ಇಷ್ಟ ಪುಟ್ಟಿ, ನಾ ಹೇಳೋ ಭರ್ಜರಿ ಕಥೆಗಳನ್ನು ಕೇಳ್ಕೊಂಡು, ವಾಪಸ್ಸು ಹೋಗೋ ದಾರೀನೆ ಮರೆತುಬಿಡತ್ತೆ ಮಳೆ, ಆಮೇಲೆ ನಿಮ್ಮಜ್ಜೀನೆ ಬಿಸಿ ಬಿಸಿ ಬಾಳೆಕಾಯಿ ಬಜ್ಜಿ ಮಾಡಿ, ಜೊತೆಗೊಂದಿಷ್ಟು ಕಾಫಿ ಮಾಡಿ ಮಳೆಗೆ ಕೊಡ್ಬೇಕಾಗತ್ತೆ.’

‘ಅಜ್ಜಿ ಕೊಡತ್ತೆ, ಚಕ್ಕುಲಿ, ಕೋಡುಬಳೇನು ಕೊಡತ್ತೆ ಮಳೆಗೆ.’

‘ಹಾಗಂತ ನೀ ಹೇಳಿದರೆ ಆಯ್ತಾ, ಅಜ್ಜಿ ಹೇಳ್ಬೇಕು.’

‘ಅಜ್ಜಿ ಹೇಳಜ್ಜಿ, ಮಳೆಗೆ ತಿಂಡಿ ಬೇಕಂತೆ.’

‘ಅದು ಮಳೆಗೆ ಬೇಕಾಗಿರೋ ತಿಂಡಿ ಅಲ್ಲ ಮೊದ್ದು, ಅವೆಲ್ಲಾ ಆ ಮಳ್ಳ ಬ್ರಾಹ್ಮಣನ ಬಾಯಿಚಪಲಕ್ಕೆ ಬೇಕಾಗಿರೋದು. ವಯಸ್ಸಾಯ್ತು ಅಷ್ಟೇ. ಇನ್ನು ಚಿಕ್ಕ ಮಕ್ಕಳ ಹಾಗೆ ಆಡ್ತಾರೆ. ಮಳೆ ದಿನಾ ಬರತ್ತೆ, ಹಾಗಂತ ದಿನಾ ಕರಿದ ತಿಂಡಿ ಮಾಡಕ್ಕೆ ಎಣ್ಣೆ ಏನು ಬಿಟ್ಟಿ ಬರತ್ತಾ?’

ಹೀಗೆಲ್ಲ ಅಜ್ಜಿ ಗೊಣಗಾಟ ಶುರು ಮಾಡಿದ ಸರೀ ಇಪ್ಪತ್ತು ನಿಮಿಷಕ್ಕೆ ಅಜ್ಜನ ಮುಂದೆ ಬಜ್ಜಿ ತುಂಬಿದ ತಟ್ಟೆ, ಒಂದು ದೊಡ್ಡ ಲೋಟ ಕಾಫಿ ಹಾಜರಾಗುತ್ತಿತ್ತು. ಇಷ್ಟು ಖಾತರಿ ಆದ ಮೇಲೆ ಅಜ್ಜ ಸುಮ್ಮನಿರುವರೆ?

ಗಾಢಾಂಧಕಾರದ ನೀರವ ರಾತ್ರಿಗಳಲ್ಲಿ ಗಾಜಿನ ಬಾಟಲಿಯಿಂದ ಒಂದೊಂದೇ ಮಿಣುಕು ಹುಳುಗಳನ್ನು ಹಾರಲು ಬಿಡುವಂತಹ, ಸಣ್ಣ ಸಣ್ಣ ಬಗೆ ಬಗೆಯ ಬೆಳಕಿನ ಗೋಲಿಗಳನ್ನು ಅಕ್ಕರೆಯಿಂದ ಬೊಗಸೆಯಲ್ಲಿಡುವಂತಹ, ಬಿಟ್ಟ ಕಣ್ಣು ಬಿಟ್ಟಂತೆ ಆಲಿಸುವಂತಹ, ಆಗಾಗ ಮನದಲ್ಲಿ ನಕ್ಷತ್ರಕಡ್ಡಿಗಳನ್ನು ಹಚ್ಚುವಂತಹ ಕಥೆಗಳ ಕಿನ್ನರಲೋಕಕ್ಕೆ ಕರೆದೊಯ್ಯುತ್ತಿದ್ದರು. ಮೊದಲು ಪತ್ರಿಕೆಗಳಲ್ಲಿ ಬಂದಂತಹ ತಮಾಷೆಯ ಕಥೆ, ನಂತರ ಜಾನಪದದ ಕ್ಲಾಸ್ ಕಥೆಗಳು, ಮಧ್ಯೆ ಮಧ್ಯೆ ಪಂಚತಂತ್ರ, ತೆನಾಲಿ ರಾಮನ ಮಾಸ್ ಕಥೆಗಳು, ರಾಜ–ರಾಣಿ, ಲಿಲಿಪುಟ್ಟುಗಳ ಕಚಗುಳಿ ಕಥೆಗಳು, ದೆವ್ವ–ಭೂತಗಳ ಭಯಾನಕ ಕಥೆಗಳು, ಪೌರಾಣಿಕ ಭಕ್ತಿಕಥೆಗಳು, ಮಹಿಮೆಗಳು, ಸ್ವಾನುಭವದ ರೋಚಕ ಕಥೆಗಳು, ಆಮೇಲೆ ದಂತಕಥೆಗಳಾಗಿರುವ ‘ವ್ಯಕ್ತಿ’ ಕಥೆಗಳು, ಕೊನೆಗೆ ಗಹನ ಗಂಭೀರವಾದ ಒಗಟಿನಂತಹ ಉಪನಿಷತ್ ಕಥೆಗಳು. ಅಲ್ಲಿಗೆ ಅಜ್ಜನಿಗೆ ಕಥಾ‘ಸಮಯ’ ಮುಗಿದು ವಯೋಸಹಜವಾದ ಉಪದೇಶದ ಮೂಡು ಬಂದಿದೆ ಎಂದರ್ಥ. ಸಂಸ್ಕೃತಶ್ಲೋಕಗಳು, ಸುಭಾಷಿತಗಳು ಉದುರಲಿಕ್ಕೆ ಶುರುವಾಯಿತೆಂದರೆ, ಕಥೆಗಳ ಸೋಗಿನಲ್ಲಿ ಒಂದಷ್ಟು ಬುದ್ಧಿಮಾತನ್ನು ಮಕ್ಕಳಿಗೆ ರವಾನಿಸಿಬಿಡುವ ಅಜ್ಜನ ಪಿತೂರಿ ಅದು ಹೇಗೆ ಬೆಂಗಳೂರಿನ ಮರಗಳಿಗೆ, ಟ್ರಾನ್ಸ್‌ಫಾರ್ಮರ್‌
ಗಳಿಗೆ ಗೊತ್ತಾಗ್ತಾ ಇತ್ತೋ ಗೊತ್ತಿಲ್ಲ. ಮರ ಬಿತ್ತು ಕರೆಂಟು ಹೋಯ್ತು. ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೊಯ್ತು ಕರೆಂಟು ಹೋಯ್ತು. ಕತ್ತಲಾಗಿದ್ದೆ ತಡ, ಅಜ್ಜಿ ಒಂದು ಲೋಟ ಬಿಸಿ ಟೀ ತಂದು ಕೊಡುವುದರಿಂದಲೇ ಮನೆಯೆಲ್ಲ ಬೆಳಕಾಗಿ ಬಿಡುತ್ತೆ ಅನ್ನೋ ಹಾಗೆ ಅವಸರ ಅವಸರವಾಗಿ ‘ಲೇ... ಇವಳೇ... ಏಲಕ್ಕಿ, ಶುಂಠಿ ಹಾಕಿ ಒಳ್ಳೆ ಟೀ ಮಾಡೇ...’ ಅಂದು ಅಜ್ಜಿಯಿಂದ ಹೀನಮಾನ  ಬಯ್ಯಿಸಿಕೊಳ್ಳುವರು. ಅಜ್ಜಿಯ ಕಿಡಿ ಕಿಡಿ ಕಣ್ಣು ಕತ್ತಲಿನಲ್ಲಿ ಕಾಣುತ್ತಿರಲಿಲ್ಲವಾದರೂ ಕಲ್ಪನೆಯಲ್ಲೇ ಹೆದರಿಸುತ್ತಿತ್ತು.

ಅಜ್ಜಿ ಒಂದು ಸೀಮೆಎಣ್ಣೆ ದೀಪವನ್ನು ತಂದು ಹಾಲಿನ ಮಧ್ಯೆ ಹಚ್ಚಿಡುತ್ತಿದ್ದರು. ಇಷ್ಟೂ ಹೊತ್ತು ಶ್ರವ್ಯಕಾವ್ಯದ ರುಚಿ ಹತ್ತಿಸಿದ್ದ ಅಜ್ಜ ಈಗ ಈ ಅತಿ ಮಂದ ಬೆಳಕಿನಲ್ಲಿ ದೃಶ್ಯ ಕಾವ್ಯಕ್ಕೆ ಕೈ ಹಚ್ಚುತ್ತಿದ್ದರು! ಬೆರಳುಗಳನ್ನು ಹೇಗೆ ಹೇಗೋ ಮಡಿಸಿ ಪ್ರಾಣಿ–ಪಕ್ಷಿಗಳ ನೆರಳು ಮೂಡಿಸುವರು. ಕಾಗದ, ಪೆನ್ನು, ಪೆನ್ನಿನ ಕ್ಯಾಪು, ಪಿನ್ನು, ಸಿಕ್ಕ ಸಿಕ್ಕ ಚಿಕ್ಕ ವಸ್ತುಗಳನ್ನು ಸಂಯೋಜಿಸಿ ಅದರ ನೆರಳುಗಳನ್ನು ಹಿಡಿಯುವರು. ಮೂರೂ ಆಯಾಮಗಳಲ್ಲಿ ಬಿಡು ಬೀಸಾಗಿ ಪಸರಿಸಿರುವ ನಮ್ಮನ್ನು ಅದೆಷ್ಟು ಅಮಾನವೀಯವಾಗಿ ಸಪಾಟಾಗಿಸುವ ನೆರಳು ಒಂದು ದುಷ್ಟಶಕ್ತಿ ಅಂತಲೇ ತೋರುತ್ತಿತ್ತು. ನಿಜದಲ್ಲಿರುವ ನಮ್ಮ ಬಣ್ಣಗಳನ್ನು, ಹಾವಭಾವಗಳನ್ನು, ಕಣ್ಣೀರನ್ನು, ಮುಗುಳುನಗುವನ್ನು ಎಂದೆಂದೂ ತೋರದೆ ಯಾಕಿಷ್ಟು ದ್ವೇಷ ಸಾಧಿಸುತ್ತದೆ ಈ ನೆರಳು? ನೆರಳು ಜನ್ಮತಃ ಇಂತಹ ಖದೀಮನಾಗಿರುವುದಕ್ಕೆ ಇರಬೇಕು, ಸಿನಿಮಾ–ನಾಟಕಗಳಲ್ಲಿ ನೋಡಬಾರದ್ದನ್ನು ನೋಡಗೊಡಬೇಕಾದರೆ ನೆರಳಲ್ಲಿ ಮಾತ್ರ ತೋರಿಸುವುದು. ಆದರೂ ವಾಸ್ತವದಲ್ಲಿ ಒಂದಕ್ಕೊಂದು ತಾಳ ತಂತಿ ಇರದ, ನಿಜದಲ್ಲಿ ಅಷ್ಟು ಚೆನ್ನಾಗಿರದೆ ಕಸದ ಬುಟ್ಟಿ ಸೇರಲು ಯೋಗ್ಯವಾದ ವಸ್ತುಗಳನ್ನೆಲ್ಲ ಒಂದು ಮಾಡಿ ಅವುಗಳ ಸಂಯೋಗವನ್ನು ಸುಂದರ ಆಕೃತಿಯನ್ನಾಗಿ ಮಾಡುವ ನೆರಳು, ಮೇಲೆ ಗದರಿದರೂ ಒಳಗೆ ಅಪಾರ ವಾತ್ಸಲ್ಯ  ಮುಚ್ಚಿಟ್ಟುಕೊಂಡಿರುವ ಅಜ್ಜಿಯಂತೆ ಎನಿಸಿ ನೆರಳಿನ ಮೇಲೆ ಮುದ್ದು ಉಕ್ಕುತ್ತಿತ್ತು. ಪ್ರತಿಯೊಂದು ವಸ್ತುವೂ ಬೆಳಕು ಮತ್ತು ಕತ್ತಲು ಎರಡೂ ಬೇರೆ ಬೇರೆ ಪ್ರಮಾಣದಲ್ಲಿ ಸೇರಿ ಆಗಿದೆಯಂತೆ, ಇಂಥ ಕತ್ತಲು–ಬೆಳಕುಗಳ ಸಮ್ಮಿಶ್ರಣ
ವಾದ ವಸ್ತುಗಳು ಬೆಳಕಿಗೆ ಅಡ್ಡ ಬಂದರೆ ಅದರ ಕತ್ತಲಿನ ಅಂಶ ಗೋಡೆ, ನೆಲದ ಮೇಲಿನ ನೆರಳಾಗಿ, ಬೆಳಕಿನ ಅಂಶ ನೋಡುಗರ ಕಣ್ಣಿನ ಬೆಳಕಿನೊಳಗೆ ಸೇರಿ ಹೋಗುವುದಂತೆ. ಹೀಗೆ ದೃಶ್ಯಪ್ರಪಂಚದಲ್ಲಿ ಕತ್ತಲು–ಬೆಳಕುಗಳು ವಿನಿಮಯವಾಗಿ, ಮಿಶ್ರಣಗೊಂದು ಏನೇನೋ ನಡೆಯುತ್ತಿರುತ್ತಂತೆ.

ಅಜ್ಜ ಹೀಗೆ ಏನೇನೋ ವಿಚಿತ್ರ ರಹಸ್ಯಗಳನ್ನು ನಮಗೆ ದಾಟಿಸುತ್ತಿರಬೇಕಾದರೆ ಅಜ್ಜಿ ‘ಸುಮ್ನೆ ಏನೇನೋ ಹೇಳಿ ನೆರಳು ತೋರಿಸಿ ಮಕ್ಕಳಿಗೆ ಹೆದರಿಸಬೇಡಿ’ ಎಂದು ಗದರುತ್ತಿದ್ದರು. ಆಗ ಹಠಾತ್ತಾಗಿ ಮಿಂಚಿನಂತೆ ಕರೆಂಟು ಬಂದು, ಕತ್ತಲು ನಿಷ್ಕರುಣಿಯಾಗಿ ನಡುಬೆಳಕಲ್ಲಿ ನಮ್ಮ ಕೈಬಿಟ್ಟು, ಕಥೆಗಳನ್ನು ಅಪಹರಿಸಿ ಹೊತ್ತೊಯ್ದುಬಿಡುತ್ತಿತ್ತು. ಕಥೆಗಳು ನೆರಳಿನಂತೇ ಹಿಂಬಾಲಿಸಿದರೂ, ಈ ನೆರಳಿನ ನೆರಳು ಮಾತ್ರ ಮನದ ಕತ್ತಲ ಮೂಲೆಯಲ್ಲೆಲ್ಲೋ ಅವಿತು ಕುಳಿತಿರುತ್ತಿತ್ತು ಅಂತ ಕಾಣುತ್ತದೆ. ನೆರಳಿನ ನಿಗೂಢ ಕಥೆಗಳು, ಕಥೆಗಳ ನಿಗೂಢ ನೆರಳುಗಳು ಮಳೆ ನೆನೆಸಿಟ್ಟ ರಾತ್ರಿಗಳಲ್ಲಿ ಬೀಳುತ್ತಿದ್ದ ಕನಸುಗಳಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತಿತ್ತು.

ಹೀಗೆ ವಿಜ್ಞಾನದ ವಿದ್ಯಾರ್ಥಿನಿಯಾಗಿ ಒಮ್ಮೆ optics ಪ್ರಯೋಗಕ್ಕೆಂದು ನಿಗದಿಯಾದ ಕತ್ತಲ ಕೋಣೆ ಹೊಕ್ಕಿದ್ದೆ ತಡ, ಕಥೆಗಳನ್ನು ಹುಡುಕಿಕೊಂಡು, ಹನಿ ಹನಿಯಾಗಿ ಸುರಿದು ಆರ್ಭಟಿಸುತ್ತ ಮಳೆಯೂ ಭುವಿಗಿಳಿದಿತ್ತು. ನೆರಳಿನ ಬಗ್ಗೆ ಅಜ್ಜ ಹೇಳಿದ್ದ ನಿಗೂಢ ಕಥೆಗಳು ಪ್ರಯೋಗಾಲಯದ ಒಳಗಡಿ ಇಡಲಾರದೆ ಹೊರಗೆ ಚಡಪಡಿಸುತ್ತಿತ್ತು. ಅಜ್ಜನ ಶಿಫಾರಸ್ಸಿನಿಂದ ಒಳಗೆ ಕರೆಸೋಣವೆಂದರೆ ಅಜ್ಜ ಈಗ ಗೋಡೆ–ನೆಲಗಳಿಗೆ ಎಂದೂ ನೆರಳಾಗಿ ಒದಗದ, ಕತ್ತಲು–ಬೆಳಕಿನ ಲೆಕ್ಕಾಚಾರ ಮೀರಿದ ಕಥಾಪ್ರಪಂಚಕ್ಕೆ ರವಾನೆಯಾಗಿಬಿಟ್ಟಿದ್ದರು. ಈಗ ಅವರ ನೆರಳೇನಿದ್ದರೂ ಮಳೆ ಅಬ್ಬರಿಸುವ ರಾತ್ರಿಗಳಲ್ಲಿ ನಿದ್ದೆಯ ಮಬ್ಬು ಬೆಳಕಲ್ಲಿ ಕನಸಿನ ಗೋಡೆಯ ಮೇಲಷ್ಟೇ. ಆದರೆ ಅಂಥ ಕನಸಲ್ಲಿ ಅಜ್ಜ ನನ್ನನ್ನು ಗುರುತೇ ಹಿಡಿಯುವುದಿಲ್ಲ; ಥೇಟು ನೆರಳಿನಂತೆಯೇ ಮಾತಿಲ್ಲ ‘ಕಥೆ’ ಇಲ್ಲ. ಕಥೆಗಾಗಿ ಮೊರೆಯಿಟ್ಟರೆ ನೆನಪಾಗಿ ಸುರಿಯುವರು ಕಣ್ಣ ಬಾನಂಚಿನಿಂದ. ಅಜ್ಜ ಇರದಿದ್ದರೇನಂತೆ ಅಜ್ಜ ಹತ್ತಿಸಿದ್ದ ಕಥೆಯ ಹುಚ್ಚು ನೆರಳಾಗಿ ಹಿಂದೆ ಬಂದಿತ್ತಲ್ಲ. ಜೊತೆಗೆ ಮಳೆಯೂ ಭೋರ್ಗರೆಯುತ್ತಿತ್ತಲ್ಲ, ಒತ್ತಾಸೆಯಾಗಿ ಕಥೆಯೆಂದರೆ ಬಾಯಿ ಬಾಯಿ ಬಿಡುವ ಗೆಳತಿಯರಿದ್ದರಲ್ಲ. ಸರಿ ವಿಜ್ಞಾನದ ಕಥೆಗಳಿಗೆ ಎರಡು ಗಂಟೆ ವಿರಾಮ ನೀಡಿ, ಹುಚ್ಚು ಮನಸ್ಸಿನ ಹತ್ತೂ ಮುಖಗಳನ್ನು ತಣಿಸುವ ರಂಗು ರಂಗಾದ, ರುಚಿ ರುಚಿ ಯಾದ, ಬಿಸಿ ಬಿಸಿಯಾದ, ಘಮ ಘಮ ಕಥೆಗಳು ಮಳೆಯ ಆಲಾಪಕ್ಕೆ ಮೈ ಮನಗಳ ಸುಳಿಯಲ್ಲಿ ಗರಿಬಿಚ್ಚಿ, ಸಾವಿರ ಕಣ್ಣು ತೆರೆದು ನರ್ತಿಸುವ ನವಿಲುಗಳಾಗಿದ್ದವು. ಅಂಥ ನವಿಲುಗಳಿಗೆ ಸರಿಸಾಟಿಯಾಗಿ ನಲಿವ ನಮ್ಮ ಕಲ್ಪನಾವಿಹಾರಕ್ಕೆ ಯಾರ ಹಂಗು?

ಇದೆಲ್ಲ ಇಷ್ಟು ವರ್ಷದ ನಂತರ ಈಗೇಕೆ ನೆನಪಾಯಿತೆಂದರೆ ಮೊನ್ನೆ ಮಗನಿಗೆ ಕಥೆಯೊಂದನ್ನು ಓದಿ ಹೇಳುತ್ತಿದ್ದೆ. ಮಧ್ಯಪ್ರದೇಶದ ಆದಿವಾಸಿಗಳಾದ ಭೀಲರ ಕಲೆ ಹುಟ್ಟಿದ ಕಥೆ. ಭೀಲರ ಚತ್ರಗಳ ಪ್ರತಿಯೊಂದು ಆಕೃತಿಯೂ ನೆರಳಿನಂತೆಯೇ ಸಪಾಟಗಿ ಇದ್ದು ಅದರ ಒಳಗೆಲ್ಲ ವಿವಿಧ ವಿನ್ಯಾಸಗಳಲ್ಲಿ ಬಣ್ಣದ ಚುಕ್ಕೆಗಳಿರುತ್ತವೆ. ಅಂತಹ ಚಿತ್ರಗಳು ಹುಟ್ಟಿದ ಬಗೆಗೂ ಮಳೆಗೂ ನಿಕಟ ಸಂಬಂಧವಂತೆ. ಒಮ್ಮೆ ಊರಲ್ಲಿ ಭೀಕರ ಬರಗಾಲ ಉಂಟಾಗಿ, ಜನರೆಲ್ಲ ಬವಣೆ ಪಡುತ್ತಿದ್ದರಂತೆ. ಊರಿನ ದೈವದ ಬಳಿ ಹೋಗಿ ‘ಹುಂಜವನ್ನು ಬಲಿ ಕೊಡುತ್ತೀವಿ, ಮಳೆಯನ್ನು ಅನುಗ್ರಹಿಸು’ ಎಂದು ಬೇಡಿಕೊಂಡರಂತೆ. ದೈವ ಪ್ರತ್ಯಕ್ಷವಾಗಿ ಅಲ್ಲಿ ಒಣಗಿ ಹೋಗಿದ್ದ ನೀರಿನ ಮಡಕೆಯ ಮೇಲೆ ಚುಕ್ಕಿಗಳಿರುವ ಚಿತ್ತಾರ ಒಂದನ್ನು ಬರೆಯಿತಂತೆ. ಈ ದೈವ ಸೂಚನೆ ಯಾರಿಗೂ ಅರ್ಥವಾಗದೆ, ಅದರ ಗೂಢಾರ್ಥ ಬಲಿಪಶುವಾಗಿ ನಿಯೋಜಿತವಾದ ಹುಂಜಕ್ಕಷ್ಟೇ ಹೊಳೆಯಿತು. ಆ ಹುಂಜ ದೈವಾದೇಶವನ್ನು ಎಲ್ಲರಿಗೂ ತಿಳಿಸಿದ ಮೇಲೆ ವಿಶೇಷ ಪ್ರತಿಭೆಯ ಹುಂಜ ಎಂದು ಅದನ್ನು ಬಲಿ ಕೊಡದೆ ಬಿಟ್ಟು ಬಿಟ್ಟಿದ್ದಲ್ದೆಲ ಯಾವ ಪ್ರಾಣಿಯನ್ನು ಬಲಿ ಕೊಡಲಿಲ್ಲವಂತೆ!

ಬದಲಾಗಿ ಎಲ್ಲರೂ ತಮ್ಮ ತಮ್ಮ ಮನೆಯ ಮುಂಬಾಗಿಲು, ಗೋಡೆಗಳನ್ನು, ಯಾರೂ ತುಳಿಯದ ನೆಲವನ್ನು ಹೂವು, ಮರ, ಗಿಡ, ಪ್ರಾಣಿ, ಪಕ್ಷಿಗಳ, ದೈನಂದಿನ ಚಟುವಟಿಕೆಗಳ ನೆರಳಿನಂತಹ ಚಿತ್ರಗಳಿಂದ ಅಲಂಕರಿಸಿದರು. ಮತ್ತು ಆ ಬಣ್ಣದ ನೆರಳಿನಂತ ಚಿತ್ರದ ಒಳಗೆ ಚುಕ್ಕಿಗಳನ್ನಿಡುತ್ತ ಒಂದೊಂದು ಚುಕ್ಕಿಗೂ ತಮ್ಮ ಹಿರಿಯರನ್ನು ಪೂರ್ವಜರನ್ನು ನೆನೆಸಿಕೊಂಡರು. ಆಗ ಸಾಕ್ಷಾತ್ ಧರೆಗಿಳಿದ ದೈವದಂತೆ ಮಳೆ ಅವತರಿಸಿ ಇಳೆಯನ್ನು ಸಂತೈಸಿತಂತೆ. ಅಂದಿನಿಂದ ಭೀಲರು ಚಿತ್ರ ಬರೆಯುವುದನ್ನು ನಿಲ್ಲಿಸಿಲ್ಲವಂತೆ. ಮಳೆ ಉಕ್ಕುಕ್ಕಿ ಹರಿಯುತ್ತಿರುವಾಗ ಹಾವು, ಆಮೆ ಮುಂತಾದ ಪ್ರಾಣಿಗಳು ಕುಣಿ ತೊಡುವುದರಲ್ಲಿ ಮಗ್ನವಾಗಿದ್ದುವಂತೆ. ಇದನ್ನು ನೋಡಿಯೇ ಭೀಲರು ಭಾವಿ ತೋಡಿದ್ದಂತೆ, ಮಳೆಯಿಲ್ಲದಾಗ ನೆರವಾಗಲಿ ಅಂತ. ಇಂತಹ ಅಪೂರ್ವ ಜೀವಜಲ ಸಂರಕ್ಷಕ ವಿದ್ಯೆ ಹೇಳಿಕೊಟ್ಟಿದ್ದಕ್ಕಾಗಿ ಭೀಲರ ಕಲೆಯಲ್ಲಿ ಹಾವು, ಆಮೆಗಳಿಗೆ ವಿಶೇಷ ಸ್ಥಾನ. ಅವುಗಳ ಮೈಮೇಲೆ ಚುಕ್ಕಿಗಳ ವಿಶೇಷ ವಿನ್ಯಾಸ. ಈ ಕಥೆ ಹೇಳುತ್ತಿದ್ದಂತೆ ನನಗನ್ನಿಸಿದ್ದು ಅಜ್ಜ ಹೇಳಿದ್ದು ನಿಜ. ಕಥೆ ಕೇಳಕ್ಕೇ ಮಳೆ ಬರೋದು. ಕಥೆ ಇದ್ರೆ ಮಳೆ, ಬೆಳೆ, ಸಮೃದ್ಧಿ. ಮಳೆಗೂ ನಮ್ಮಂತೆಯೇ ಕಥೆ, ಚಿತ್ರ, ಹಾಡು, ನೃತ್ಯ, ಆಟ, ಹಿರಿಯರ ನೆನಪು, ನೆರಳು, ತಿಂಡಿ, ಕಾಫಿ, ಪ್ರೀತಿ, ಪ್ರೇಮ – ಎಲ್ಲ ಇಷ್ಟ. ಅದು ನಮ್ಮಂತೆಯೇ ಪರಮ ಲೌಕಿಕ, ಜೀವನವ್ಯಾಮೋಹಿ, ಸಂಸಾರದ ಎಲ್ಲಾ ಜಂಜಾಟಗಳ ಕೆಸರು ಮೆತ್ತಿಸಿಕೊಂಡು, ಇದರ ನಡುವೆಯೇ ಈಸಿ, ಇದ್ದು ಜಯಿಸಿ, ಬರಗಾಲದ ಬಿಸಿ ತಟ್ಟದ ಹಾಗೆ ನೆನಪಿನ ಕುಣಿ ರಚಿಸುವ ಕಲೆ ಹೇಳಿಕೊಡುವ ಗುರು, ಗೆಳತಿ. ಪ್ರತಿ ಮಳೆಗಾಲವೂ ಹೊಸ ಹೊಸ ನೆಲಬಾವಿಗಳನ್ನು ರಚಿಸುವ, ಹೊಸ ಆಸಕ್ತಿಗಳ ಅರಳಿಸುವ, ಹೊಸ ಅನ್ವೇಷಣೆಗಳಿಗೆ ಹುರಿದುಂಬಿಸುವ ಪ್ರಶಸ್ತ ಮುಹೂರ್ತ. ಹೀಗೆ ಕಥೆಗಳ ಹಂಬಲ ಉಂಟುಮಾಡದ, ಚಿತ್ತಾಪಹಾರಕ ಚಿತ್ರಗಳಿಗೆ ಕಾತರಿಸುವಂತೆ ಮಾಡದ ನೆನಪುಗಳ ನೇವರಿಸುವಿಕೆಗೆ ನೆಪವಾಗದ, ನಮ್ಮದೇ ಆಪ್ತಲೋಕದ ಬಣ್ಣ, ವಾಸನೆ, ರುಚಿಗಳಿರದ ಬೆಚ್ಚಗಿನ ಸ್ಪರ್ಶವಿರದ, ಬರಿದೇ ಸುರಿದು, ಹರಿದು ಹೋಗುವ ಮಳೆ ಅದು ಹೇಗಿರುತ್ತದೋ ನನಗೆ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !