ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಉದ್ಘಾಟನೆ ಬದಲು ವೀಕ್ಷಣೆ!

ಶೆಟ್ಟರ್‌, ಜೋಶಿಗೆ ಸಾರ್ವಜನಿಕರಿಂದ ಸನ್ಮಾನ
Last Updated 30 ಮಾರ್ಚ್ 2018, 9:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಬೈಲಪ್ಪನವರ ನಗರದ ಕುಂಭಕೋಣಂ ಪ್ಲಾಟ್‌ನಲ್ಲಿ ಪಾಲಿಕೆಯಿಂದ ನೂತನವಾಗಿ ಅಭಿವೃದ್ಧಿ ಪಡಿಸಲಾಗಿರುವ ಉದ್ಯಾನ
ವನ್ನು ಗುರುವಾರ ಸಂಜೆ ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಅವರು ವೀಕ್ಷಣೆ ಮಾಡುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕರು, ಜೋಶಿ ಮತ್ತು ಶೆಟ್ಟರ್‌ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಟೀ, ಕಾಫಿ ವಿತರಣೆ ಮಾಡಲಾಯಿತು.

‘ಮಾರ್ಚ್‌ 29ರಂದು ನೂತನ ಉದ್ಯಾನ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಉದ್ಘಾಟನಾ ಕಾರ್ಯಕ್ರಮ ಕೈಬಿಡಲಾಯಿತು. ಅಲ್ಲಿನ ಸಾರ್ವಜನಿಕರ ಮನವಿ ಮೇರೆಗೆ ಶೆಟ್ಟರ್‌, ಜೋಶಿ ಅವರು, ಉದ್ಯಾನಕ್ಕೆ ಭೇಟಿ ವೀಕ್ಷಣೆ ಮಾಡಿದ್ದಾರೆ. ಯಾವುದೇ ಅಧಿಕೃತ ಕಾರ್ಯಕ್ರಮ ನಡೆದಿಲ್ಲ’ ಎಂದು ಮೇಯರ್‌ ಸುಧೀರ ಸರಾಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯಿಂದ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿದೆ. ಆದರೆ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ’ ಎಂದು ಪಾಲಿಕೆ ಸದಸ್ಯೆ ಲಕ್ಷ್ಮಿ ಉಪ್ಪಾರ ಹೇಳಿದರು.

ಉಲ್ಲಂಘನೆ ಆರೋಪ: ಶೆಟ್ಟರ್‌, ಜೋಶಿ ಅವರು ಉದ್ಯಾನವನ್ನು ವೀಕ್ಷಣೆ ಮಾಡುವ ನೆಪದಲ್ಲಿ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಶಕೀಲ್‌ ಅಹಮ್ಮದ್‌, ‘ಪಾಲಿಕೆಯಿಂದ ಉದ್ಯಾನ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಆಗಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT