ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಮ್ಮ ಮತ್ತು ಬೆನ್ನುಜ್ಜುವಿಕೆ

Last Updated 24 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನಮ್ಮನೆ ಅಮ್ಮಮ್ಮ(ಅಜ್ಜಿ)ನಿಗೊಂದು ರೂಢಿ ಇತ್ತು. ಅದು ‘ಬೆನ್ನು ಗೆಡಸುವಿಕೆ’ ಎಂಬ ಕುಟುಂಬ ಸೇವಾ ಕೈಂಕರ್ಯ.

ಮನೆಯ ಮಕ್ಕಳು, ಮೊಮ್ಮಕ್ಕಳು ಯಾರೇ ಸ್ನಾನಕ್ಕಿಳಿದಿರಲಿ, ಕೈಯಲ್ಲಿ ಸೀಗೆಪುಡಿ ತುಂಬಿದ ಗರಟೆ ಹಿಡಿದುಕೊಂಡು ಬಚ್ಚಲ ಬಾಗಿಲಲ್ಲಿ ಆಕೆ ಪ್ರತ್ಯಕ್ಷ. ‘ತಡಿ, ಹನಿ(ಸ್ವಲ್ಪ) ಬೆನ್ನು ಗೆಡಸಿಕೊಡ್ತಿ’ ಎಂಬ ಅಹವಾಲು/ಆಜ್ಞೆಯೊಂದಿಗೆ. ಸ್ನಾನಕ್ಕೆ ನಿಂತವರಿಗೆ ಮುಖ, ಕಾಲು ಕೈ, ಹೊಟ್ಟೆ ತಿಕ್ಕಿಕೊಂಡಷ್ಟು ಸಲೀಸಾಗಿ ಹಾಗೂ ಸ್ವಚ್ಛವಾಗಿ ಬೆನ್ನು ತಿಕ್ಕಿಕೊಳ್ಳಲು ಸಾಧ್ಯ ಆಗುವುದಿಲ್ಲ. ಇಂಥ ಅಸಹಾಯಕ ಜೀವಿಗಳಿಗೆ ಬೆನ್ನು ಉಜ್ಜಿಕೊಟ್ಟು ಥಳಥಳ ಎನ್ನಲು ಸಹಾಯ ಮಾಡುವುದು ತನ್ನ ಯಾವತ್ತೂ ಕರ್ತವ್ಯ ಎಂದು ಅಮ್ಮಮ್ಮ ಬಲವಾಗಿ ನಂಬಿದ್ದಳು. ಹಂಗಾಗಿ ಮನೆಯಲ್ಲಿ ದಿನಾ ಇರುವ ತನ್ನ ಮಕ್ಕಳು, ಸೊಸೆಯಂದಿರೇ ಇರಲಿ... ರಜ, ಹಬ್ಬ ಅದೂ ಇದೂ ಎಂದು ಬರುವ ಮೊಮ್ಮಕ್ಕಳೇ ಇರಲಿ ಎಲ್ಲರನ್ನೂ ತನ್ನ ಬೆನ್ನು ಸ್ವಚ್ಛತಾ ಅಭಿಯಾನದ ಗುರಿಯಾಗಿಸಿಕೊಳ್ಳುತ್ತಿದ್ದಳು.

ನಾವು ಸ್ನಾನಕ್ಕೆ ತಯಾರಾಗಿ ಬಟ್ಟೆ ಹಿಡಿದುಕೊಂಡು ಬಚ್ಚಲತ್ತ ಕಾಲು ಹಾಕಿದ್ದೇ, ‘ತಂಗಿ... ಮೈ ತೊಕ್ಕಂಬಲೆ ಹೊಂಟ್ಯ, ತಡಿ, ಬೆನ್ನು ಗೆಡಸಿಕೊಡ್ತಿ’ ಎಂದು ಫರ್ಮಾನು ಹೊರಡಿಸುತ್ತಿದ್ದಳು. ಬೆನ್ನು ಸ್ವಚ್ಛವಾಗಿದೆ. ಉಜ್ಜುವುದು ಬೇಡ ಎಂದರೆ ಕೇಳುವ ಜನವೇ ಅಲ್ಲ, ‘ಅಲ್ಲಿ ಪ್ಯಾಟೆಲಿ ಎಷ್ಟು ದೂಳು, ಹೊಗೆ ಇರ‍್ತು, ಗನಾ (ಒಳ್ಳೆಯ) ನೀರೂ ಸಿಕ್ತಿಲ್ಲೆ. ಅದು ಹ್ಯಾಂಗೆ ಚೊಕ್ಕ ಇರ‍್ತು?’ ಎಂದು ಬಾಯಿ ಮುಚ್ಚಿಸುತ್ತಿದ್ದಳು. ಮೇಲಿಂದ ನಮ್ಮ ಬೆನ್ನು ತಿಕ್ಕುವ ಸಮಯದಲ್ಲಿ ‘ನೋಡು, ಹ್ಯಾಂಗೆ ನೆಣೆ ನೆಣೆಯಾಗಿ ಕೆಸರು ಬತ್ತು’ ಎಂದು ನಮಗೆ ಕಾಣದ ಕೆಸರನ್ನು ಹೆಸರಿಸಿ ತನ್ನ ಸೇವೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಳು. ಅವಳು ಕಡ್ಡಿಯಷ್ಟೂ ಇಲ್ಲದ ಕೆಸರನ್ನು ಗುಡ್ಡೆಯಷ್ಟಿದೆಯೆಂದು ಹೇಳುತ್ತಿದ್ದರೆ ನನಗೆ ಅಮ್ಮಮ್ಮ ಇನ್ನೇನು ಪಾರ್ವತಿದೇವಿಯಾಗಿ ಈ ಕೆಸರನ್ನು ತಿದ್ದಿ ತೀಡಿ ಗಣಪನನ್ನೇ ಮಾಡಿಬಿಡುತ್ತಾಳೇನೋ ಅನ್ನಿಸುತ್ತಿತ್ತು. ಹೇಳಿಕೇಳಿ ಅಮ್ಮಮ್ಮನ ಹೆಸರು ಗೌರಿ!

ಎಲ್ಲರಿಗೂ ಈ ಬೆನ್ನು ತಿಕ್ಕುವ ಪ್ರಕ್ರಿಯೆ ಬಗೆಗಷ್ಟೇ ತಕರಾರು ಇದ್ದರೆ, ನನಗೆ ‘ಮೈ ತೊಕ್ಕಂಬದು’ ಎಂಬ ಶಬ್ದದ ಕುರಿತೂ ವಿರೋಧ ಇತ್ತು. ‘ಅಮ್ಮಮ್ಮಾ, ಮೈ ತೊಳೆಯದು ಎಲ್ಲ ದನ ಎಮ್ಮೆಗೆ, ಮನುಷ್ಯರು ಮೀಯ್ತ, ಸ್ನಾನ ಮಾಡ್ತ, ಜಳಕ ಮಾಡ್ತ’ ಎಂದು ಶುರು ಹಚ್ಚಿಕೊಳ್ಳುತ್ತಿದ್ದೆ. ‘ಎಂಥ ಹೇಳಿದ್ರೂ ಮಾಡದು ಮೈ ತೊಕ್ಕಂಬದೇ ಅಲ್ದ’ ಎಂದು ಅಮ್ಮಮ್ಮ ನನ್ನೆಲ್ಲ ಶಬ್ದ ಪಾಂಡಿತ್ಯದ ಮೇಲೆ ನಾಲ್ಕು ಚೊಂಬು ಬಿಸಿನೀರು ದಸದಸ ಹೊಯ್ದು, ಸೀಗೆಪುಡಿ ಹಚ್ಚಲು ರೆಡಿಯಾಗುತ್ತಿದ್ದಳು. ಕುಳ್ಳ ದೇಹದ, ಸ್ವಲ್ಪ ದುಂಡು ಶರೀರದ ಅಮ್ಮಮ್ಮನಿಗೆ ತನ್ನ ಬೆನ್ನು ಸಿಗುತ್ತಿರಲಿಲ್ಲ. ಹಾಗಾಗಿ ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂಬ ಸರ್ವಜ್ಞವಾಣಿಯನ್ನು ಅನ್ನವನು ಇಕ್ಕುವಷ್ಟೇ, ನನ್ನಿಯನು ನುಡಿಯುವಷ್ಟೇ ಸಲೀಸಾಗಿ ಪಾಲಿಸಿಕೊಂಡು ಬಂದಿದ್ದ ಅಮ್ಮಮ್ಮ ಸಮಸ್ತ ಮಾನವಕೋಟಿಗೂ ತಂತಮ್ಮ ಬೆನ್ನು ಸಿಗುವುದಿಲ್ಲ ಎಂಬ ಶಾಶ್ವತ ಅಭಿಪ್ರಾಯ ಹೊಂದಿದ್ದಳು. ನಾನು ಗೋಮುಖಾಸನ ಹಾಕಿ, ನನ್ನ ಬೆನ್ನು ಕೈಗೆ ತಾಗುತ್ತದೆ ಎಂದು ಸಾಕ್ಷಿಸಹಿತ ಪದೇಪದೇ ತೋರಿಸಿದರೂ ಆಕೆ ಎಂದೂ ಅದನ್ನು ಒಪ್ಪಿಕೊಂಡಿರಲಿಲ್ಲ.

ಈ ಬೆನ್ನು ಗೆಡಸುವ ಸಮಯ ಅಮ್ಮಮ್ಮನ ಪಾಲಿಗೆ ಮನೆಯ ಪ್ರತಿಯೊಬ್ಬ ಸದಸ್ಯರ ಜೊತೆಗಿನ ‘ವನ್ ಟು ವನ್’ ಹೊತ್ತು. ಬೆನ್ನಿಗೆ ಎರಡು ಚೊಂಬು ಬಿಸಿನೀರು ಹೊಯ್ದು, ಅಟ್ಳಕಾಯಿ (ಅಂಟುವಾಳ)- ಸೀಗೆಕಾಯಿ ಮಿಶ್ರಣದ ಹುಡಿಯನ್ನು ಬೆನ್ನಿಗೆ, ಕುತ್ತಿಗೆಗೆ ಹಚ್ಚಿ ಗಸಗಸ ತಿಕ್ಕಿ, ಮೇಲಿಂದ ಮತ್ತೊಂದ್ನಾಲ್ಕು ಚೊಂಬು ಬಿಸಿನೀರು ಹೊಯ್ದು ಕೊಳೆ ತೊಳೆಯುವ ಆ ಮೂರ್ನಾಲ್ಕು ನಿಮಿಷದ ಅವಧಿಯಲ್ಲಿ ಆಯಾ ವ್ಯಕ್ತಿಯ ಆರೋಗ್ಯ, ಅಭ್ಯಾಸ, ಒಳಿತು- ಕೆಡುಕು ವರ‍್ತನೆ ಎಲ್ಲದರ ಬಗ್ಗೆ ಹೇಳಿ- ಕೇಳಿ, ತನ್ನ ಅನುಭವದ ಆಧಾರದ ಮೇಲೆ ಸಲಹೆ ಸೂಚನೆ ನೀಡುವ ಅಮೂಲ್ಯ ಸಮಯ ಅದು. ತುಂಬಿದ ಮನೆಯಲ್ಲಿ ಎಲ್ಲರ ಎದುರಿಗೆ ಹೇಳಲಾಗದ್ದನ್ನು ಅರುಹುವ ಅವಕಾಶ ದೊರೆಯುತ್ತಿದ್ದುದು ಬಚ್ಚಲ ಕೋಣೆಯ ಏಕಾಂತದಲ್ಲಿ. ಬೆನ್ನಿನ ಕೊಳೆ ತೊಳೆಯುತ್ತಲೇ ಮನದ ಕೊಳೆಯನ್ನೂ ಬಳಿಯುವ ಪುಟ್ಟ ಪ್ರಯತ್ನ ಮಾಡುತ್ತಿದ್ದಳು ಅಮ್ಮಮ್ಮ.

ನಾವೆಲ್ಲ ದೊಡ್ಡವರಾಗಿ ನಮ್ಮ ಖಾಸಗಿತನವನ್ನು ನೆಚ್ಚಿಯೋ. ಮುಜುಗರದಿಂದಲೋ ಬಾಗಿಲ ಚಿಲಕವನ್ನು ಜಡಿದುಕೊಂಡು ಸ್ನಾನ ಮಾಡುತ್ತಿರುವಾಗ ಅಮ್ಮಮ್ಮ ‘ಬಾಗಿಲು ತೆಗಿ’ ಎನ್ನುತ್ತಾ ಬಂದರೆ ಕೊಂಚ ಕಿರಿಕಿರಿ ಆಗುತ್ತಿತ್ತು. ಆರಾಮಾಗಿ ಸಿನಿಮಾ ಹಾಡು ಹಾಡಿಕೊಂಡೋ, ಮನೋವಿಹಾರದಲ್ಲಿ ಮುಳುಗಿಯೋ ಹಂಡೆತುಂಬ ಬಿಸಿನೀರಿನ ಮಜ್ಜನ ಮಾಡುತ್ತಿರಬೇಕಾದರೆ ಈ ಬೆನ್ನುಜ್ಜುವಿಕೆಯ ಕಾರ್ಯಕ್ರಮ ಬೆಂಬಿಡದೇ ಬಂದು ಬಾಗಿಲು ಬಡಿಯುತ್ತಿತ್ತು. ಬಾಗಿಲು ತೆಗೆಯಲ್ಲ. ನೀ ವಾಪಸ್‌ ಹೋಗು ಎಂದು ಹೇಳಿ ಮಹಾಮಜ್ಜನ ಮುಂದುವರಿಸಿದರೂ ಅಮ್ಮಮ್ಮ ಪರಮ ತಾಳ್ಮೆಯಿಂದ ಸೀಗೆಪುಡಿ ಗರಟೆ ಸಮೇತ ಅಲ್ಲೇ ನಿಂತಿರುತ್ತಿದ್ದಳು. ಮುಪ್ಪಿನ ಮುದುಕಿಯ ಅನುನಯದ ಎದುರಿಗೆ ನಮ್ಮ ನಾಚಿಕೆ ನುಗ್ಗಾಗಿ, ಹುಸಿಮುನಿಸಿನಿಂದ ಅವಳಿಗೆ ಬಯ್ದುಕೊಳ್ಳುತ್ತ ಬಾಗಿಲು ತೆರೆದರೆ ಆಕೆ ಅದ್ಯಾವುದರ ಪರಿವೆಯೇ ಇಲ್ಲದೇ ಬೆನ್ನುಜ್ಜುವಿಕೆ ಎಂಬ ಧ್ಯಾನಸಮಾನ ಕಾಯಕಕ್ಕೆ ಅನುವಾಗುತ್ತಿದ್ದಳು.

ನಮ್ಮದೂ ಅರೆನಿಮಿಷದ ಮುನಿಸಷ್ಟೇ. ಆಕೆ ತನ್ನ ಮಾಗಿದ ಮೆತ್ತಗಿನ ಕೈಯಲ್ಲಿ ತರಿತರಿ ಸೀಗೆಪುಡಿಯನ್ನು ಬೆನ್ನಿಗೆ ಹಚ್ಚಿ ಉಜ್ಜುವಾಗ ಇದ್ದಬಿದ್ದ ತುರಿಕೆ- ಪರಿಕೆ ಎಲ್ಲ ಮಾಯವಾಗಿ ಮೇಲಿಂದ ಬಿಸಿನೀರು ಬೀಳುತ್ತಿದ್ದರೆ ಈ ಹಿತಾನುಭವ ಹೀಗೇ ಅನಂತವಾಗಿ ಮುಂದುವರಿಯಲಿ ಅನಿಸುತ್ತಿತ್ತು. ಆದರೆ, ಅಮ್ಮಮ್ಮ ನಿಲ್ಲುವವಳಲ್ಲ. ಮಿಂದ ನೀರು ಮೋರಿ ಸೇರುವುದರೊಳಗೆ ಆಕೆ ಮತ್ತೊಂದು ಕೆಲಸ ಶುರು ಮಾಡಿ ಆಗಿರುತ್ತಿತ್ತು. ಮಾರನೇ ದಿನದ ಪೂಜೆಗೆಂದು ಮುಂಜಾಗ್ರತೆಯಿಂದ ಮೊಗ್ಗೆ ಕೊಯ್ದಿಡುವುದು, ಅಂಗಳದ ತುದಿ ದಾಟಿ ರಸ್ತೆವರೆಗೆ ಕಸ ಗುಡಿಸುವುದು, ಹೂಬತ್ತಿ ಹೊಸೆದು ತುಪ್ಪದ ದೀಪ ಮಾಡಿಡುವುದು, ಮನೆ ಮಕ್ಕಳೆಲ್ಲಾ ಸರಿಯಾಗಿ ಉಂಡರೋ, ತಿಂದರೋ ಎಂದು ವಿಚಾರಿಸುವುದು, ಅದಕ್ಕಿಂತ ಹೆಚ್ಚಾಗಿ ಸೊಸೆಯಂದಿರು ಅವರಿಗೆಲ್ಲಾ ಧಾರಾಳ ತುಪ್ಪ-ಬೆಣ್ಣೆ ಬಡಿಸಿದರೋ ಇಲ್ಲವೋ ಎಂದು ನಿಗರಾನಿ ವಹಿಸುವುದು... ಹೀಗೆ ನೂರೆಂಟು ಕೆಲಸ ಆಕೆಗೆ. ಹಳೆ ಚಿತ್ರಸಂಪುಟ ತೆರೆದು ನೋಡುತ್ತಿದ್ದಾಗ ಜಪಾನಿನ ಸೂಪರ್‌ ಮಾರ್ಕೆಟ್‌ನಲ್ಲಿ ತೆಗೆದ ಈ ಚಿತ್ರ ಕಣ್ಣಿಗೆ ಬಿತ್ತು. ಬೆನ್ನು ಉಜ್ಜುವುದಕ್ಕೆಂದೇ ಎಷ್ಟೊಂದು ಸಾಧನ ಇಟ್ಟಿದ್ದಾರೆ. ಜಪಾನಿನ ಅಮ್ಮಮ್ಮಂದಿರು ಮನೆ ಮಕ್ಕಳ ಬೆನ್ನು ‘ಗೆಡಸು’ತ್ತಾರೋ ಇಲ್ಲವೋ?! ನಮ್ಮನೆ ಅಮ್ಮಮ್ಮ ಮಾತ್ರ ಮೇಲಿನ ಲೋಕದಲ್ಲೂ ಸೀಗೆಪುಡಿ ಗರಟೆ ಹಿಡಿದುಕೊಂಡು ದೇವತೆಗಳ ಬಚ್ಚಲುಮನೆ ಬಾಗಿಲು ತಟ್ಟುತ್ತಿರಬೇಕೆಂಬ ಅನುಮಾನ ನನಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT