ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ

ಮಂಗಳವಾರ, ಮೇ 21, 2019
32 °C

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ

Published:
Updated:
Prajavani

ಲಾಸಫರ್‌ ಆಲನ್‌ ವಾಟ್ಸ್‌ ಅವರ ಪುಸ್ತಕವೊಂದರ ಶೀರ್ಷಿಕೆ ‘ಸಂತೋಷದ ಅರ್ಥ’ (Meaning of Happiness). ನಾವು ಎಷ್ಟೋ ಸಲ ಅಂದುಕೊಳ್ಳುತ್ತೇವೆ – ‘ನಮಗೆ ಸಂತೋಷ ಎಂದರೆ ಏನೆಂದು ಗೊತ್ತಿದೆ’ ಎಂದು. ಹೌದೆ? ನಮಗೆ ಸಂತೋಷ ಎಂದರೇನು – ಎಂದು ಗೊತ್ತೆ? ಸಂತೋಷದ ಅರ್ಥ – ನಮಗೆ ತಿಳಿದಿದೆಯೆ?

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ!
ಘಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ!
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ ||

ನಮ್ಮ ‘ಸಂತೋಷ’ದ ಕಲ್ಪನೆಯನ್ನು ಅಲ್ಲಮಪ್ರಭು ಈ ವಚನದಲ್ಲಿ ತುಂಬ ಸೊಗಸಾಗಿ ವ್ಯಂಗ್ಯ ಮಾಡಿದ್ದಾರೆ.

ಸಂತೋಷ ಸಿಗುವುದು ಯಾವಾಗ? ಸುಖದಲ್ಲಿ ತಾನೆ? ನಾವು ಹಂಬಲಿಸುತ್ತಿರುವ ಸುಖವಾದರೂ ಎಂಥದು? ಅದರ ಪ್ರಮಾಣ ಎಷ್ಟು? ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ನೋಡಾ’. ಸಾಗರವನ್ನೆಲ್ಲ ಈಜಾಡಿ ನಾವು ಪಡೆಯುತ್ತಿರುವ ಸುಖದ ಗಾತ್ರ ಸಾಸಿವೆಯಷ್ಟು! ಈ ಅಲ್ಪ ಸುಖವನ್ನು ಪಡೆಯಲು ನಾವು ಕಳೆದುಕೊಳ್ಳುತ್ತಿರುವುದಾದರೂ ಏನನ್ನು? ಆ ಕೂಡಲೇ ನಮಗೆ ಯಾವುದು ರುಚಿಸುತ್ತದೆಯೋ ಅದನ್ನೇ ನಾವು ಆರೋಗ್ಯಕರ ಆಹಾರ ಎಂದು ತಿಳಿದುಕೊಂಡು ಗಬಗಬನೆ ನುಂಗುತ್ತೇವೆ. ಆದರೆ ವಾಸ್ತವದಲ್ಲಿ ಅದು ನಮ್ಮ ಆರೋಗ್ಯವನ್ನು ಕೆಡಿಸುವಂಥ ಆಹಾರವಾಗಿರುತ್ತದೆ; ಆದರೆ ಅದು ನಮಗೆ ಗೊತ್ತಾಗುವುದು ನಮ್ಮ ಆರೋಗ್ಯ ಕೆಟ್ಟಾಗಲೇ. ಇದನ್ನೇ ‘ಘಳಿಗೆಯ ಬೇಟವ ಮಾಡಿ’ ಎಂದು ಅಲ್ಲಪ್ರಭು ವಿಡಂಬಿಸುತ್ತಿರುವುದು. ಆರೋಗ್ಯವನ್ನು ಕೆಡಿಸಿಕೊಂಡು ನಾವು ಪಡೆಯುತ್ತಿರುವ ‘ಲಾಭ’ವಾದರೂ ಏನು? ‘ನಮ್ಮನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ’. ಇದು ಹೇಗೆ? ನಾವು ಸಂಪತ್ತನ್ನು ಕೊಂಡುಕೊಳ್ಳುತ್ತಿದ್ದೇವೆ, ನಿಜ. ಆದರೆ ಏನನ್ನು ಮಾರಿ, ಯಾವುದನ್ನು ಕೊಳ್ಳುತ್ತಿದ್ದೇವೆ? ನಮ್ಮನ್ನು ಮಾರಿಕೊಂಡು ಸಿರಿಸಂಪತ್ತನ್ನು ಕೊಳ್ಳುತ್ತಿದ್ದೇವೆ. ‘ತನ್ನನಿಕ್ಕಿ ನಿಧಾನವ ಸಾಧಿಸು’ವ ಪರಿ ಎಂದು ಪ್ರಭು ಹೇಳುತ್ತಿರುವುದು ಈ ಸ್ಥಿತಿಯನ್ನೇ! ನಾವೇ ಬೇರೆಯವರ ವಶವಾದಮೇಲೆ ನಮಗೆ ಸಂಪತ್ತನ್ನು ಅನುಭವಿಸುವ ಹಕ್ಕಾದರೂ ಹೇಗೆ ದಕ್ಕೀತು? ದಾಸ್ಯದಲ್ಲಿದ್ದವನಿಗೆ ಸುಖವನ್ನು ಅನುಭವಿಸುವ ಹಕ್ಕು ಒದಗೀತೆ?

ನಮ್ಮನ್ನು ನಾವು ಕಳೆದುಕೊಳ್ಳಬಾರದು. ಸುಖವನ್ನು ಅನುಭವಿಸಲು, ಸಂತೋಷವಾಗಿ ಇರಲು – ನಾವು ವಹಿಸಬೇಕಾದ ಮೊದಲ ಎಚ್ಚರಿಕೆ ಇದು.

ನಮ್ಮನ್ನು ನಾವು ಕಳೆದುಕೊಳ್ಳುವುದು ಎಂದರೆ ನಮ್ಮತನದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು. ಹೀಗಾಗಿಯೇ ಆಲನ್‌ ವಾಟ್ಸ್‌ ಹೀಗೆಂದಿರುವುದು: ‘Man's life begins when he awakens to his freedom’ - ಮನುಷ್ಯನ ಜೀವನ ಆರಂಭವಾಗುವುದು ಅವನು ಸ್ವಾತಂತ್ರ್ಯದ ದೆಸೆಯಿಂದ ಎಚ್ಚರವಾದಾಗ. ಸೃಷ್ಟಿಯಲ್ಲಿಯೇ ಮನುಷ್ಯನಿಗೆ ವಿಶೇಷವಾದ ಶಕ್ತಿಯೊಂದು ಒದಗಿದೆ. ಅದೇ ಅವನ ಅಂತರಂಗದ ಸ್ವಾತಂತ್ರ್ಯ. ಇದರ ಮೂಲಕವಾಗಿ ಅವನು ತನ್ನನ್ನು ತಾನು, ತನ್ನ ಜೀವನದ ಮೂಲಕ ‘ಪಡೆದುಕೊಳ್ಳಬಹುದು’ ಎನ್ನುತ್ತಾರೆ, ಆಲನ್‌ ವಾಟ್ಸ್‌. ಈ ಪ್ರಕ್ರಿಯೆಯಲ್ಲಿ ನಮ್ಮ ನೆರವಿಗೆ ಬರುವಂಥದ್ದು ‘ಧರ್ಮ’. ಧರ್ಮವೇ ಜೀವನದ ಗುರಿಯಲ್ಲ; ಅದು ಜೀವನದ ಒಳಹೋಗಲು ಇರುವ ಪ್ರವೇಶ ಎಂದೂ ಅವರು ಹೇಳುತ್ತಾರೆ.

ಈ ಸ್ವಾತಂತ್ರ್ಯಕ್ಕೂ ಅವನ ಸುಖಕ್ಕೂ ಇರುವ ಸಂಬಂಧವಾದರೂ ಏನು? ಈ ಸ್ವಾತಂತ್ರ್ಯದ ಕಾರಣದಿಂದಾಗಿಯೇ ಅವನು ದೇವರನ್ನು ಕಂಡುಕೊಂಡ ಎನ್ನುತ್ತಾರೆ, ಆಲನ್‌ ವಾಟ್ಸ್‌. ದೇವರನ್ನು ಅವನು ಕೇವಲ ದೇವರನ್ನು ಕುರಿತ ಆಲೋಚನೆಯಲ್ಲಿ ಮಾತ್ರವೇ ಕಾಣಲಿಲ್ಲ, ಆ ಆಲೋಚನೆಯನ್ನೇ ದೇವರನ್ನಾಗಿ ಕಂಡ. ಅದು ಅವನ ವಿಶೇಷತೆ. ಅಷ್ಟೇ ಅಲ್ಲ ತನ್ನಲ್ಲಿಯೂ ದೇವರನ್ನು ಕಂಡ; ಅವನು ಲೌಕಿಕ ಪ್ರಪಂಚದಲ್ಲಿ ಕಳೆದುಹೋಗಿದ್ದಾಗಲೂ ಅವನ ಅಂತರಂಗದಲ್ಲಿ ದೈವತ್ವದ ಮರೆವು ಇರುವುದಿಲ್ಲ. ಆಧ್ಯಾತ್ಮಿಕತೆ ಎನ್ನುವುದು ಅಧ್ಯಾತ್ಮವನ್ನು ಕುರಿತು ಚಿಂತನೆ ಮಾಡುವುದಲ್ಲ; ಎಲ್ಲ ಲೌಕಿಕ ವಿವರಗಳಲ್ಲೂ ಲೌಕಿಕವನ್ನು ಕಾಣುವುದೇ ಅಧ್ಯಾತ್ಮ ಎಂಬ ಅರಿವನ್ನೂ ಅವನು ದಕ್ಕಿಸಿಕೊಂಡಿದ್ದಾನೆ. ಹೀಗಾಗಿಯೇ ಅವನು ನಿತ್ಯದ ಎಲ್ಲ ಸಂಗತಿಗಳ ಮೇಲೂ ಧ್ಯಾನಶೀಲನಾಗಬಲ್ಲ. ವ್ಯಾಪಾರದಲ್ಲಿ, ಸಂಗೀತದಲ್ಲಿ, ಸಾಹಿತ್ಯದಲ್ಲಿ, ವಿಜ್ಞಾನದಲ್ಲಿ, ವೈದ್ಯವೃತ್ತಿಯಲ್ಲಿ; ತಿನ್ನುವಾಗ, ಕುಡಿಯುವಾಗ, ನಡೆಯುವಾಗ, ಆಡುವಾಗ, ಉಸಿರಾಡುವಾಗ, ನಕ್ಷತ್ರಗಳನ್ನು ನೋಡುವಾಗ – ಹೀಗೆ ಎಲ್ಲ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಕೊಸಿಕೊಳ್ಳಬಲ್ಲ. ಇದೇ ಅವನಿಗಿರುವ ಸ್ವಾತಂತ್ರ್ಯ. ಸೃಷ್ಟಿಯಲ್ಲಿರುವ ಎಲ್ಲ ವಸ್ತು ಮತ್ತು ವಿವರಗಳು ದೇವರ ಆಲೋಚನೆಯಲ್ಲದೆ ಬೇರಲ್ಲ. ಈ ವಸ್ತುಗಳೊಂದಿಗೆ ಒಡನಾಟವನ್ನು ಸಾಧಿಸುವ ನಮ್ಮ ಸ್ವಾತಂತ್ರ್ಯ ಅದು ನಿಜವಾದುದೇ ಆದರೆ ಅದು ದೇವರೊಂದಿಗಿನ ಸಂಪರ್ಕವೇ ಹೌದು. ಎಂದರೆ ನಾವು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಪ್ರಾಮಾಣಿಕವಾಗಿಯೂ ಪೂರ್ಣವಾಗಿಯೂ ತೊಡಗಿಕೊಳ್ಳುವುದೇ ದೇವರೊಂದಿಗೆ ನಡೆಸುವ ಸಂವಾದ. ಇಂಥ ಏಕಾಗ್ರತೆಯೇ ನಮ್ಮ ಸುಖಕ್ಕೆ ಕಾರಣವಾಗುವಂಥದ್ದು.

ಈಗ ನಮಗೆ ಸಿಕ್ಕಿರುವುದನ್ನು ಗಮನಿಸದೆ ಅಥವಾ ತಿರಸ್ಕರಿಸಿದೆ ಅದನ್ನು ದೇವರ ಅನುಗ್ರಹ ಎಂದು ಸ್ವೀಕರಿಸಿ, ಅದರಲ್ಲಿ ಪೂರ್ಣವಾಗಿ ಮಗ್ನವಾಗುವುದೇ ಸಂತೋಷಕ್ಕೆ ಇರುವ ದಾರಿ – ಎನ್ನುವುದು ಆಲನ್‌ ವಾಟ್ಟ್‌ ಅವರ ಮಾತುಗಳ ತಿರುಳು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !