ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಪೇಕ್ಷತೆ

ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 17 ನವೆಂಬರ್ 2018, 19:30 IST
ಅಕ್ಷರ ಗಾತ್ರ

ದ ಪ್ಪನೆಯ ಮಂದ ಹಳದಿ ಬಣ್ಣದ ಲಕೋಟೆಯೊಳಗಿದ್ದ ಎಲ್ಲಾ ಫೋಟೊಗಳು ದುಬುದುಬನೆ ಉದುರಿದಾಗ ಮ್ಯಾಟ್‌ಫಿನಿಷ್‌ನ ಒರಟುತನ ಸಮನ್ವಿತಾಳ ಕೈಗೆ ತಗಲಿತು. ಆದರೆ, ಆ ಒರಟುತನವೇ ಫೋಟೊಗಳ ಒಳಗಿದ್ದ ಕೃಷ್ಣವೇಣಿಯ ಉಲ್ಲಾಸದ ನಗುವನ್ನು ಹಾಳಾಗದಂತೆ ಕಾಪಾಡಿದೆ ಎಂಬ ಅರಿವು ಮೂಡಿತು. ಹೊಳಪಿನ ಗ್ಲಾಸೀ ಫಿನಿಷ್ ಇದ್ದ ತನ್ನ ಫೋಟೊಗಳಿಗಾಗಿರುವ ಗತಿ ಕಂಡು ಸಮನ್ವಿತಾ ನಿಟ್ಟುಸಿರುಬಿಟ್ಟಳು. ಮಂಗಳೂರಿನ ಆರ್ದ್ರ ಹವಾಮಾನಕ್ಕೆ ಇವಳ ನುಣುಪಿನ ಫೋಟೊಗಳೆಲ್ಲಾ ಬಣ್ಣ ಬಿಟ್ಟುಕೊಂಡು, ಒಂದಕ್ಕೊಂದು ಮೆತ್ತಿಕೊಂಡು, ಯಾರ ಮುಖವೂ ಸರಿಯಾಗಿ ಕಾಣದ ರೀತಿಯಲ್ಲಿ ಒಟ್ಟಾರೆ ಕಲಸಿ ಹೋಗಿತ್ತು. ಕೃಷ್ಣವೇಣಿಯ ಫೋಟೊಗಳು ಮಾತ್ರ ಒಟ್ಟೊಟ್ಟಿಗಿದ್ದರೂ ಅಂಟಿಕೊಳ್ಳದೆ ತಮ್ಮ ಪ್ರತ್ಯೇಕತೆ, ಅನನ್ಯತೆಯನ್ನು ಉಳಿಸಿಕೊಂಡಿದ್ದೇವೆ ಎಂಬಂತೆ ಬೀಗುತ್ತಿದ್ದವು.

ಕೃಷ್ಣವೇಣಿಯ ಬಹುತೇಕ ಫೋಟೋಗಳಲ್ಲಿ ಅವಳ ಬಿಳಿ ಗಂಡನೇ, ಮಗುವನ್ನು ಎತ್ತಿಕೊಂಡಿದ್ದಾನೆ. ಅವನ ಮುಖದಲ್ಲೊಂದು ಮಮತೆ, ಪ್ರೀತಿಯಂತಹ ಭಾವ. ಕೃಷ್ಣವೇಣಿಯ ಮುಖದಲ್ಲೇನೋ ಹೆಮ್ಮೆ, ವಿಜಯದ ಭಾವ. ಅವಳ ಆ ಮುಖಭಾವದಿಂದಾಗಿಯೇ ಫೋಟೊಗಳ ಹಿನ್ನೆಲೆಯಲ್ಲಿದ್ದ ಹಸಿರು ಲಾನ್, ನಡುವಿನ ಸುಂದರ ಮನೆ, ದೊಡ್ಡ ಮಂಚದ ಮೇಲಿನ ಕುಸಿಯುವಂತಹ ಮೆತ್ತನೆ ಹಾಸಿಗೆ, ಬೆಳ್ಳನೆಯ ಉದ್ದ ಕಾರು, ನಯಾಗರ ಜಲಪಾತ, ಡಿಸ್ನೀಲ್ಯಾಂಡಿನ ಪ್ರವೇಶದ್ವಾರ ಇವೆಲ್ಲಕ್ಕೂ ವಿಶೇಷವಾದ ಅರ್ಥ ಬಂದಂತೆ ತೋರುತ್ತಿತ್ತು.

ಪ್ರತೀ ಬಾರಿ ಮನೆಯ ಸ್ವಚ್ಛತೆ ಕೈಗೊಂಡಾಗಲೂ ಈ ಫೋಟೊಗಳು ಸಮನ್ವಿತಾಳನ್ನು ಇನ್ನಿಲ್ಲದಂತೆ ಕಾಡುತ್ತವೆ. ಹಳೆಯ ಪಾಸ್‌ಪೋರ್ಟ್‌ ಫೋಟೊಗಳನ್ನೋ, ಆಪ್ತವೆನಿಸದ ತನ್ನ ಫ್ಯಾಮಿಲಿ ಫೋಟೊಗಳನ್ನೋ ಒಂಚೂರೂ ಹಿಂಜರಿಕೆಯಿಲ್ಲದೆ ಒತ್ತರೆಯ ನೆಪದಲ್ಲಿ ಕಸದ ಬುಟ್ಟಿಗೆ ಎಸೆಯುವ ಸಮನ್ವಿತಳಿಗೆ. ಸ್ನೇಹಿತೆ ಕೃಷ್ಣವೇಣಿಯ ಈ ಫೋಟೊಗಳಿಂದ ಕಳಚಿಕೊಳ್ಳುವುದು ಮಾತ್ರ ಸಾಧ್ಯವಾಗಿರಲಿಲ್ಲ. ಯತ್ನಿಸಿದಷ್ಟೂ ಹೆಚ್ಚು ಅಂಟಿಕೊಳ್ಳುವ, ಚಪ್ಪಲಿಗೆ ಮೆತ್ತಿದ ಚ್ಯೂಯಿಂಗ್ ಗಮ್ ರೀತಿ ಕಾಡುತ್ತವೆ. ಅದನ್ನು ಎಸೆದುಬಿಟ್ಟರೆ ತನ್ನ ಬದುಕಿನ ಸರಪಳಿಯ ಯಾವುದೋ ಕೊಂಡಿ ಬಿಟ್ಟುಹೋಗಿ ಭೂತದೊಂದಿಗಿನ ಸಂಪರ್ಕವೇ ಕಡಿದು ಹೋಗಬಹುದೆಂಬ ವಿನಾಕಾರಣವಾದ ಆತಂಕವೂ ಅವಳಿಗೆ. ಹೀಗಾಗಿ ಆ ಫೋಟೊಗಳು ಮತ್ತೆ ಮತ್ತೆ ಅದೇ ಲಕೋಟೆ ಹೊಕ್ಕು, ಕಾಲಗರ್ಭದಂತಿರುವ ದೊಡ್ಡ ಬ್ಯಾಗಿನೊಳಗೆ ತೂರಿ,ಕಪಾಟಿನ ತೀರಾ ಕೆಳಭಾಗ ಸೇರುತ್ತವೆ.

***

ಹಾಗೆ ನೋಡಿದರೆ, ಎಂಟನೇ ತರಗತಿಯಲ್ಲಿ ಅವರಿಬ್ಬರ ಸ್ನೇಹಿತೆಯರು ಬೇರೆ ಬೇರೆ ಸೆಕ್ಷನ್‌ಗಳಿಗೆ ಹಂಚಿಹೋದಾಗ, ಯಾವುದೋ ಅನಿವಾರ್ಯತೆಗೆಂಬಂತೆ ಹುಟ್ಟಿಕೊಂಡ ಸ್ನೇಹ ಅವರದ್ದು. ಪಠ್ಯ, ಪಠ್ಯೇತರ ಎಲ್ಲದರಲ್ಲೂ ಮುಂದಿದ್ದ ಸಮನ್ವಿತಾಳಿಗೆ ಬಾಲದಂತಿದ್ದಳು ಕೃಷ್ಣವೇಣಿ. ವಾಚಾಳಿ ಸಮನ್ವಿತಾಳಿಗೆ ಮಿತಭಾಷಿ ವೇಣಿ ಬಿಟ್ಟಿ ಕಿವಿಯಾಗಿದ್ದಳು. ಸಮೂ ಮನೆಯ ಕಪ್ಪು ಬಿಳಿ ಟಿವಿಯಲ್ಲಿ ಬರುವ ಸಿನಿಮಾಗಳು ಅವಳ ಬಾಯಲ್ಲಿ ಮರುಪ್ರಸಾರವಾಗುವಾಗ ಶ್ರೋತೃವಾಗುತ್ತಿದ್ದಳು. ಶಾಲೆಯಿಂದ ಮನೆಯ ತನಕದ ಒಂದೂವರೆ ಕಿಲೋ ಮೀಟರ್ ದಾರಿಯ ಉದ್ದಕ್ಕೂ, ಸಮೂ ಹಿಂದಿನ ದಿನ ಬಂದ ಸಿನಿಮಾದ ಕಥೆಯನ್ನು ಸೀನ್ ಬೈ ಹೇಳುತ್ತಿದ್ದರೆ ವೇಣಿ ಕಣ್ಣರಳಿಸಿ ಕೇಳುತ್ತಿದ್ದಳು. ಇತ್ತೀಚೆಗೆ, ಸಮನ್ವಿತಾಗೆ ತಾನು ಹೇಳುತ್ತಿದ್ದ ಆ ಸಿನಿಮಾ ಕಥೆಗಳಿಂದ ಹೊರಬಿದ್ದ ಮತ್ತು ಹೊರಬಿದ್ದಾಕ್ಷಣ ತನ್ನ ಹಿಡಿತವನ್ನು ಮೀರಿ ಬೆಳೆದು ಬಿಟ್ಟ, ಬೆಳೆದು ಬಿಟ್ಚು ಈಗ ತನ್ನನ್ನೇ ಅಣಕಿಸುತ್ತಿರುವ ಯಾವುದೋ ಪಾತ್ರದಂತೆ ಅನಿಸುತ್ತಾಳೆ ಕೃಷ್ಣವೇಣಿ.

ಅದೇನೇ ಇರಲಿ, ಟಿ.ವಿ ಇಲ್ಲದ ಮನೆಯ, ನಾಚಿಕೆ ಸ್ವಭಾವದ ವೇಣಿ ಹಾಗೂ ಪೋರ್ಟಬಲ್ ಟಿ.ವಿ. ಇರುವ ಮನೆಯ ಪ್ರತಿಭಾವಂತೆ ಸಮೂ, ಹೈಸ್ಕೂಲ್‌ ಮುಗಿಯುವುದರೊಳಗೆ ಜೀವದ ಗೆಳತಿಯರಾಗಿಬಿಟ್ಟಿದ್ದರು. ಸಮನ್ವಿತಾ ಶೇಕಡ 85 ಮತ್ತು ಕೃಷ್ಣವೇಣಿ ಶೇಕಡ 74 ಮಾರ್ಕ್ಸ್ ಗಳಿಸಿ ದುಂಪದವು ಪ್ರೌಢಶಾಲೆಗೆ ವಿದಾಯ ಹೇಳಿ ದೂರದ ಮಂಗಳೂರಿನ ಕಾಲೇಜೊಂದರಲ್ಲಿ ಸೈನ್ಸ್ ವಿಭಾಗ ಪ್ರವೇಶಿಸಿದಾಗ ಅವರಿಬ್ಬರಿಗೂ ತಾವೆಂತಹ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂಬ ಸಂಗತಿಯ ಅರಿವಿದ್ದಿರಲಿಲ್ಲ.

ನಿಜ ಸಂಗತಿಯೆಂದರೆ ಕಾದಂಬರಿ ಹುಚ್ಚಿನ ಕೃಷ್ಣವೇಣಿಗೆ ತಮ್ಮೂರ ಕಾಲೇಜಿನಲ್ಲೇ ಆರ್ಟ್ಸ್ ತೆಗೆದುಕೊಂಡು ಓದುವ ಮನಸ್ಸಿತ್ತು. ಆದರೆ, ಸಮನ್ವಿತಾಳ ಒತ್ತಾಯದ ಮೇರೆಗೆ
ಪಿ.ಸಿ.ಎಂ.ಬಿ ತೆಗೆದುಕೊಂಡು ಅವಳಿಗೆ ಜೊತೆಯಾಗಿದ್ದಳು.

ಹಾಗಂತ ಸಮನ್ವಿತಾಳ ಸೈನ್ಸ್ ಆಸೆಗೇನೂ ಎಂಜಿನಿಯರ್ ಅಥವಾ ಡಾಕ್ಟರ್ ಆಗುವ ಮಹಾತ್ವಾಕಾಂಕ್ಷೆಯ ಹಂಗಿರಲಿಲ್ಲ. ‘ತನಗಿಂತ ಬುದ್ಧಿವಂತರ‍್ಯಾರಿಹರು ಜಗದಲಿ’ ಎಂಬ ಭ್ರಮೆಯಲ್ಲಿದ್ದ ಸಮನ್ವಿತಾಳಿಗೆ ಸೈನ್ಸ್‌ನಲ್ಲಿ ಪಾಸಾಗುವುದೇ ಕಷ್ಟ ಎಂಬ ಮಾತುಗಳನ್ನು ಎಲ್ಲರ ಬಾಯಲ್ಲಿ ಕೇಳಿ, ಆ ಮಹಾಮಾರಿಯನ್ನು ಪಳಗಿಸುವ ಉಮೇದು ಉಕ್ಕಿ ಬಂದಿತ್ತು ಅಷ್ಟೆ.

ಆದರೆ, ಕಾಲೇಜಿನಲ್ಲಿ ಮೊದಲ ದಿನವೇ ಎಲ್ಲಾ ಲೆಕ್ಟರರ್ಸ್ ಭರಪೂರ ಇಂಗ್ಲಿಷಿನಲ್ಲೇ ಪಾಠ ಮಾಡಿದ ಪರಿ ನೋಡಿ ಇಬ್ಬರಿಗೂ ಬವಳಿ ಬಂದಂತಾಗಿತ್ತು. ಅಪ್ಪಟ ಕನ್ನಡ ಶಾಲೆಯ ಕುವರಿಯರಿಬ್ಬರಿಗೂ ಪಾಠಗಳು ಅರ್ಥವಾಗದೇ, ಗಣಿತದ ಲೆಕ್ಚರರ್ ನಿಮಿಷಕ್ಕೊಮ್ಮೆ ಹೇಳಿದ ತೀಟಾ... ತೀಟಾ ಎಂಬ ಪದವೇ ಕನಸಿನಲ್ಲೂ ಕಾಡತೊಡಗಿತ್ತು. ರೇಡಿಯಸ್ ಎಂದರೆ ತ್ರಿಜ್ಯ... ಹೈಡ್ರೋಜನ್ ಎಂದರೆ ಜಲಜನಕ... ಫೋಟೋಸಿಂಥೆಸಿಸ್ ಎಂದರೆ ದ್ಯುತಿಸಂಷ್ಲೇಷಣೆ ಎಂದು ಇವರು ಅರ್ಥಮಾಡಿಕೊಳ್ಳುವುದರೊಳಗೆ ಮೊದಲ ಟೆಸ್ಟ್ ಮುಗಿದು ಹೋಗಿ ಇಬ್ಬರೂ ಎರಡು ವಿಷಯಗಳಲ್ಲಿ ಫೇಲ್ ಆಗಿ ಅವಮಾನದಿಂದ ಕುಸಿದಿದ್ದರು.

ಜೊತೆಗೆ ಊರಿನ ಏಕಮೇವ ಟೈಲರ್ ಗುಲಾಬಿಯಕ್ಕನ ಬಳಿ, ಅಮ್ಮನ ಸೀರೆಗಳನ್ನು ಕೊಟ್ಟು ಹೊಲಿಸಿದ್ದ ಸಲ್ವಾರ್ ಕಮೀಜ್‌ಗಳನ್ನು ಧರಿಸಿ, ಅದರ ಸೆರಗಿನಿಂದ ತಯಾರಾದ ದುಪಟ್ಟಾ ಹೊದ್ದು ಹೋಗುತ್ತಿದ್ದ ಇವರಿಬ್ಬರ ಇರುವು, ಬಗೆ ಬಗೆಯ ರೆಡಿಮೇಡ್‌ ಬಟ್ಟೆ ಧರಿಸಿ, ಯೆಸ್ ಬದಲು ‘ಯಾ...ಯಾ’ ಎನ್ನುವ ನಗರದ ಸುಂದರಿಯರ ನಡುವೆ ಪೂರಾ ಅಪ್ರಸ್ತುತವೆನಿಸಿಬಿಟ್ಟಿತ್ತು. ಸೈನ್ಸ್‌ ತೆಗೆದುಕೊಂಡಿದ್ದರಿಂದ ಆದ ಏಕಮಾತ್ರ ಉಪಯೋಗವೆಂದರೆ ಇದುವರೆಗೆ ಕಷ್ಟವೆನಿಸುತ್ತಿದ್ದ ಇಂಗ್ಲಿಷ್ ಸಬ್ಜೆಕ್ಟ್ ಈಗ ಸುಲಭವಾಗಿಬಿಟ್ಟಿತ್ತು. ಕೃಷ್ಣವೇಣಿಯಂತೂ ಎರಡು ತಿಂಗಳೊಳಗೆ, ಕಾಲೇಜು ಲೈಬ್ರರಿಯಿಂದ ಕಡ ಪಡೆದು ತನ್ನ ಜೀವನದ ಮೊಟ್ಟಮೊದಲ ಇಂಗ್ಲಿಷ್ ಕಥೆ ಪುಸ್ತಕ ಓದಿ ಮುಗಿಸಿದ್ದಳು.

ಈ ಎಲ್ಲದರಿಂದ ಹೆಚ್ಚು ನಷ್ಟಕ್ಕೆ, ಕ್ಷೋಭೆಗೆ ಒಳಗಾದವಳು ಸಮನ್ವಿತಾ. ಇದುವರೆಗೂ ತನ್ನೂರಿನ ಹೈಸ್ಕೂಲಿನಲ್ಲಿ ರಾಣಿಯಂತೆ ಮೆರೆಯುತ್ತಾ, ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾ, ಎಲ್ಲ ಶಿಕ್ಷಕರ ಅಚ್ಚುಮೆಚ್ಚಾಗಿದ್ದ, ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದ ಅವಳು, ದೊಪ್ಪನೆ ಕಳಗೆ ಬಿದ್ದು, ಕಾಲು ಮುರಿದುಕೊಂಡಂತಾಗಿದ್ದಳು. ಈ ಕಾಲೇಜಿಗೆ ತನ್ನಿರುವಿಕೆಯ ಅರಿವೇ ಇಲ್ಲ ಎಂಬ ಸತ್ಯ ಅವಳನ್ನು ಚುಚ್ಚುತ್ತಲೇ ಇತ್ತು. ಅವಳೆಲ್ಲಾ ವಟಗುಟ್ಟುವಿಕೆ ಕೃಷ್ಣವೇಣಿಗೆ ಮೀಸಲಾಗಿಬಿಟ್ಟಿತು. ನಿಧಾನವಾಗಿ ಕಾಲೇಜಿನ ಪರಿಸರಕ್ಕೆ ಹೊಂದಿಕೊಂಡರೂ ತಮ್ಮನ್ನು ಕಾಡುವ ಕೀಳರಿಮೆಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬಾರದಿರುವುದು ಹೇಗೆ ಬಹುದೊಡ್ಡ ಕಾರಣವಾಗಿದೆ ಎಂಬುದನ್ನು ಒಂದು ದಿನ ಕೃಷ್ಣವೇಣಿಯ ಬಳಿ ವಿವರವಾಗಿ ಹೇಳಿದ ಸಮನ್ವಿತಾ ಇಂದಿನಿಂದ ತಾವಿಬ್ಬರೇ ಇರುವಾಗ ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕೆಂದು, ತಪ್ಪಿಯೂ ಕನ್ನಡ ಬಳಸುವಂತಿಲ್ಲವೆಂದೂ ಹೇಳಿದಳು.

ಇದರಿಂದ ಹೆಚ್ಚೇನೂ ಮಾತನಾಡದ, ಕೇವಲ ಕೇಳುವ ಡ್ಯೂಟಿಯಲ್ಲೇ ಇರುತ್ತಿದ್ದ ಕೃಷ್ಣವೇಣಿಗೆ ಅಂತಹ ದೊಡ್ಡ ಲಾಭವಾಗಲೀ ನಷ್ಚವಾಗಲೀ ಆಗದಿದ್ದರೂ, ಸಮನ್ವಿತಾಳಿಗೆ ಬಾಯಿ ಕಟ್ಟಿದಂತಾಯಿತು. ಇಂಗ್ಲಿಷ್‌ನಲ್ಲಿ ಮಾತನಾಡಲಾರದೆ ದಿನವಿಡೀ ಮೌನವ್ರತ ಕೈಗೊಂಡವಳಂತೆ ಸುಮ್ಮನೆ ಉಳಿದ ಸಮನ್ವಿತಾ ಕೊನೆಗೆ, ‘ಸಾಯ್ಲಿ ಮಾರಾಯ್ತಿ ಬಿಡು, ನಿನ್ನೆ ಇಬ್ಬನಿ ಕರಗಿತು ಫಿಲ್ಮು ಬಂದಿತ್ತು. ಅದರ ಕಥೆ ಹ್ಯಾಂಗೇ ಹೇಳೂದು ಇಂಗ್ಲಿಷಲ್ಲಿ?’ ಎಂದು ತನ್ನ ನಿಯಮವನ್ನು ತಾನೇ ಮುರಿದು ತನ್ನ ಎಂದಿನ ಮಾತುಕತೆ ಆರಂಭಿಸಿದಳು.

ಪ್ರಥಮ ಪಿಯುಸಿಯಲ್ಲಿ ಅಂತೂ ಪಾಸ್ ಎನಿಸಿಕೊಂಡು ಇಬ್ಬರೂ ದ್ವಿತೀಯ ವರ್ಷಕ್ಕೆ ಕಾಲಿಡುವ ವೇಳೆಗಾಗಲೇ ಕೃಷ್ಣವೇಣಿಗೆ ಮದುವೆ ಪ್ರಸ್ತಾಪ ಬರಲಾರಂಭಿಸಿತ್ತು. ತುಂಡು ಅಡಿಕೆ ತೋಟ ಹಾಗೂ ಪೌರೋಹಿತ್ಯದಿಂದ ಸಂಸಾರ ತೂಗಿಸುತ್ತಿದ್ದ ವೇಣಿಯ ಅಪ್ಪ ರಾಮಚಂದ್ರ ಬೆಳ್ಳಿತ್ತಾಯರ ಗುರಿ ಸ್ಪಷ್ಟವಾಗಿತ್ತು- ಇಬ್ಬರು ಗಂಡು ಮಕ್ಕಳನ್ನು ಚೆನ್ನಾಗಿ ಓದಿಸುವುದು ಮತ್ತು ಮಗಳನ್ನು ಒಳ್ಳೆ ಮನೆ ಸೇರಿಸುವುದು. ತಮ್ಮ ಜಾತಿಯ ಮಟ್ಟಿಗೆ ತುಸು ಕಪ್ಪೇ ಎಂಬಂತಿದ್ದ ಮಗಳಿಗೆ ತಡವಾದಷ್ಟು ಗಂಡು ಸಿಗುವುದು ಕಷ್ಚವಾದೀತೆಂಬ ಅಂಜಿಕೆಯೂ ಇತ್ತು ಅವರಿಗೆ.

ಆದರೆ, ಅರ್ಧವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದೆ ಎನ್ನುವಾಗಲೇ ಒಂದು ದಿನ ಕೃಷ್ಣವೇಣಿ ಕಾಲೇಜಿಗೆ ಬರಲಿಲ್ಲ. ಹಿಂದಿನ ದಿನವಷ್ಟೇ ಕೃಷ್ಣವೇಣಿ ಕಾಲೇಜಿನಿಂದ ಹಿಂದಿರುಗುವಾಗ ‘ಹಿಂದೆ ಲಂಗದಲ್ಲಿ ಕಲೆ ಉಂಟಾ ನೋಡು...’ ಎಂದು ಕಿವಿಯಲ್ಲಿ ಪಿಸುಗುಟ್ಟಿದ್ದು ನೆನಪಿದ್ದ ಕಾರಣ ಅವಳ ಏಕಾಏಕಿ ಗೈರು ಹಾಜರಿಗೆ ಪ್ರತೀ ತಿಂಗಳೂ ಕೃಷ್ಣವೇಣಿಯನ್ನು ಕಾಡುವ ಮುಟ್ಟಿನ ಹೊಟ್ಟೆನೋವೇ ಕಾರಣ ಎಂದು ಸಮನ್ವಿತಾ ಭಾವಿಸಿದಳು. ಹೀಗಾಗಿಯೇ, ಅಂದು ರಾತ್ರಿ ಕೃಷ್ಣವೇಣಿಯ ಅಪ್ಪ ಬೆಳ್ಳಿತ್ತಾಯರು ಮಗಳನ್ನು ಹುಡುಕಿಕೊಂಡು ತನ್ನ ಮನೆಗೆ ಬಂದಾಗ ಸಮನ್ವಿತಾಳಿಗೆ ಆಶ್ಟರ್ಯವಾಗಿತ್ತು. ಕೈಯಲ್ಲಿ ದೊಡ್ಡ ಕೊಡೆಯನ್ನೂ, ಮಿಣುಕಾಗಿ ಮಿನುಗುತ್ತಿದ್ದ ಟಾರ್ಚನ್ನು ಹಿಡಿದುಕೊಂಡು ದಣಪೆ ಸರಿಸುತ್ತಲೇ ಬೆಳ್ಳಿತ್ತಾಯರು ಚಿಟ್ಟೆಯ ಮೇಲೆ ಕೂತು ಓದುತ್ತಿದ್ದ ಸಮನ್ವಿತಾಳನ್ನು ‘ಓ... ಬಾಲೆ...’ ಎಂದು ಕೂಗಿ ಕರೆದಾಗ ರಾತ್ರಿ ಎಂಟಾಗುತ್ತಾ ಬಂದಿತ್ತು. ಧಾರಾಕಾರ ಮಳೆ ಕತ್ತಲನ್ನೇ ಸುರಿಸುತ್ತಿದೆಯೇನೋ ಎಂಬಷ್ಟು ಕಪ್ಪಾಗಿತ್ತು ಹೊರಗೆ.

ಕೃಷ್ಣವೇಣಿ ಕಾಣೆಯಾಗಿದ್ದಳು. ಪ್ರಾಯಶಃ ಕೃಷ್ಣವೇಣಿ ಇಂದು ಕಾಲೇಜಿಗೆ ಬರಲೇ ಇಲ್ಲ ಎಂದು ಸಮನ್ವಿತಾ ಹೇಳುವವರೆಗೆ ಬೆಳ್ಳಿತ್ತಾಯರಿಗೂ ಸಂದರ್ಭ ಗಂಭೀರವಾಗಿದೆ ಎಂಬ ಸುಳಿವು ಸಿಕ್ಕಿರಲಿಲ್ಲವೇನೋ. ಕೆಮೆಸ್ಟ್ರಿ ಪ್ರಾಕ್ಚಿಕಲ್ಸಿನ ದೆಸೆಯಿಂದಾಗಿ ಕಾಲೇಜಿನಿಂದ ಬರುವುದು ಆಗೀಗ ತಡವಾಗುತ್ತಿತ್ತು. ಹೀಗಾಗಿ, ಬೆಳ್ಳಿತ್ತಾಯರಿಗೆ ಮಗಳು ರಾತ್ರಿ ಎಂಟಾದರೂ ಬಾರದ್ದಕ್ಕೆ ಕಾಲೇಜಿನಲ್ಲಿ ತಡವಾಗಿದೆ ಅಥವಾ ಮಳೆ ನಿಲ್ಲಲಿ ಎಂದು ಸಮನ್ವಿತಾಳ ಮನೆಯಲ್ಲಿ ಕಾಯುತ್ತಿದ್ದಾಳೆ ಎಂಬೆರಡು ಕಾರಣಗಳಷ್ಟೇ ಹೊಳೆದಿದ್ದವು. ಈಗ ನೋಡಿದರೆ, ಎಂದಿನಂತೇ ಅಂದೂ ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೊರಟಿದ್ದ ಕೃಷ್ಣವೇಣಿ ಬಸ್‌ ಸ್ಟ್ಯಾಂಡ್ ಕೂಡ ತಲುಪಿರಲಿಲ್ಲ. ವಿಷಯ ತಿಳಿದ ಸುತ್ತಮುತ್ತಲ ಮನೆಯವರೆಲ್ಲಾ ಟಾರ್ಚ್, ಕೊಡೆ ಹಿಡಿದು ಸುರಿವಮಳೆಯಲ್ಲೇ ಗದ್ದೆ ಬದುಗಳನ್ನು ದಾಟುತ್ತಾ ಕೃಷ್ಣವೇಣಿಗಾಗಿ ಹುಡುಕಿದ್ದರು. ಕೆಲವರು ಬಾವಿ ಹಣಕಿದ್ದರು. ರಾತ್ರಿ ಹತ್ತರ ನಂತರ ಏನೂ ಸುಳಿವು ಸಿಗದೆ ಎಲ್ಲಾ ತಮ್ಮ ಮನೆಗೆ ಮರಳಿದ್ದರು.

ಅಂದು ಆ ರಾತ್ರಿಯ ನೀರವತೆಯಲ್ಲಿ, ಜೀರುಂಡೆಗಳ ಸದ್ದಿನಲ್ಲಿ, ಕೃಷ್ಣವೇಣಿ ಕಾಣುತ್ತಿಲ್ಲ ಎಂಬ ಸತ್ಯದ ಅಗಾಧತೆ ಮೊದಲ ಬಾರಿಗೆ ಸಮನ್ವಿತಾಳನ್ನು ಬೆಚ್ಚಿ ಬೀಳಿಸಿತು. ಊರನ್ನೇ ಕಲಕಿದ ಈ ಎಲ್ಲಾ ಗಡಿಬಿಡಿಗಳಿಗೂ, ಕೃಷ್ಣವೇಣಿಯ ಕಣ್ಮರೆಯೇ ಕಾರಣವಾಗಿತ್ತಾದರೂ, ಅದರ ಗಂಭೀರತೆ ಸಮನ್ವಿತಾಳನ್ನು ತಟ್ಟಿದ್ದು ಮಾತ್ರ ವೇಣಿ ಈಗ ತನ್ನಂತೆ ಅವಳ ಮನೆಯಲ್ಲಿ ಬೆಚ್ಚಗೆ ಮಲಗಿಲ್ಲ ಎಂಬ ಅರಿವು ಮೂಡಿದಾಗಲೇ.

ಮಾರನೇ ದಿನ ಊರಿಗೆ ಊರೇ ಕೃಷ್ಣವೇಣಿಗಾಗಿ ಹುಡುಕಾಡಿತು. ಬೆಳ್ಳಿತ್ತಾಯರು ಕೊನೆಗೆ ಪೊಲೀಸ್ ಕಂಪ್ಲೇಂಟ್ ನೀಡಿದರು. ವಿಷಯ ಕಾಲೇಜಿನಲ್ಲೂ ಹರಡಿ ರೇಪು, ಮರ್ಡರ್, ಅಪಹರಣಗಳಂತಹ ಸಾಧ್ಯತೆಗಳು ವಾಚ್ಯವಾಗತೊಡಗಿದವು. ಸರಿಯಾಗಿ ಆಗಲೇ ಸಮನ್ವಿತಾಳಿಗೆ ಅದ್ಯಾವುದೂ ಘಟಿಸಿರಲು ಸಾಧ್ಯವೇ ಇಲ್ಲ. ಕೃಷ್ಣವೇಣಿ ಓಡಿಹೋಗಿದ್ದಾಳೆ ಎಂದು ವಿನಾಕಾರಣ ಅನಿಸಿಬಿಟ್ಟಿತು. ಕಪ್ಪು ಬೋರ್ಡ್‌ ಮೇಲೆ ಅಕ್ಷರಗಳನ್ನು ಒರೆಸಿಬಿಟ್ಟಷ್ಟು ಸುಲಭವಾಗಿ, ಸರಳವಾಗಿ, ಮೌನವಾಗಿ ಕೃಷ್ಣವೇಣಿ ಅಳಿಸಿಹೋಗುವುದು ಸಾಧ್ಯವಿರಲಿಲ್ಲ. ಅದಕ್ಕೆ ಬದಲಾಗುತ್ತಿದ್ದ ಮಂಗಳೂರಿನ ರಂಗು ಕಾರಣವಾಗಿತ್ತು.

ಬೆವರು ಸುರಿಸಿ ದುಡಿದು, ಗಂಜಿ ಉಪ್ಪಿನಕಾಯಿ ಉಂಡು, ಸುಖವಾದ ನಿದ್ರೆಗೆ ಜಾರಿದಂತಹ ನೆಮ್ಮದಿಯಲ್ಲಿರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಷ್ಟೇ ದುಃಸ್ವಪ್ನಗಳು ಬೀಳಲಾರಂಭಿಸಿದ್ದವು. ಕೆಟ್ಟ ಕನಸಿನಿಂದಾಗಿ ಬೆಚ್ಚಿ ಎದ್ದು, ಮಗ್ಗಲು ಬದಲಿಸಿ ಮತ್ತೆ ನಿದ್ದೆಗೆ ಜಾರುವ ಯತ್ನದಲ್ಲಿರುವಂತೆ ಕಾಣುತ್ತಿತ್ತು ಮಂಗಳೂರು. ಬಾಬ್ರಿಯಲ್ಲಿ ಬಿದ್ದ ಮಸೀದಿ ಇಲ್ಲಿ ಒಂದು ಶಾಶ್ವತ ಸದ್ದು ಉಳಿಸಿ ಹೋಗಿತ್ತು. ಯಕ್ಷಗಾನದಲ್ಲಿ ಮಧ್ಯರಾತ್ರಿ ಅಸುರನ ರಂಗಪ್ರವೇಶಕ್ಕೆ ಮೊದಲು ಧೀಂಗುಡುವ ಚೆಂಡೆಯ ಹೊಡೆತ ದೂರದಿಂದೆಲ್ಲೋ ಕೇಳುವಂತೆ ಈ ಸದ್ದು ಆಗಾಗ ಜನರನ್ನು ಬೆಚ್ಚಿಬೀಳಿಸುತ್ತಿತ್ತು.

ಹೀಗಾಗಿ, ಕೃಷ್ಣವೇಣಿಯ ಕಣ್ಮರೆ ಸುತ್ತ ಈಗ ಹೊಸದೊಂದೇ ಊಹಾಪೋಹ ಹುಟ್ಟಿ ಪರಿಸ್ಥಿತಿ ನಿಧಾನಕ್ಕೆ ಸೂಕ್ಷ್ಮವಾಗತೊಡಗಿತ್ತು. ಆ ಊಹೆಗಳಿಗೆ ಪುಷ್ಟಿ ಕೊಡುವ ಒಂದಾದರೂ ಸೂಚನೆಗಳು ಸಿಕ್ಕಾವೇನೋ ಎಂಬ ನಿರೀಕ್ಷೆಯಲ್ಲಿ ಹಸಿದ ಹುಲಿಯೊಂದು ಕಾಯುತ್ತಾ ಕೂತಂತಿತ್ತು. ಪ್ರಭುಗಳ ಅಂಗಡಿಯ ಕೆಲಸದ ಹುಡುಗ, ‘ಸಂಕದ ಬಳಿ ಒಂದು ದಿನ ದುಬೈ ಹನೀಫ ಹಾಗೂ ಕೃಷ್ಣವೇಣಿ ಮಾತನಾಡುತ್ತಾ ನಿಂತಿದ್ದು ನಾನು ನೋಡಿದ್ದೆ’ ಎಂದು ಹೇಳುವ ಮೂಲಕ ತಿದಿಯೊತ್ತಿದ್ದ. ದೊಂಪದವಿನಲ್ಲಿದ್ದ ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಅದರ ಬಿಸಿ ತಟ್ಟಲು ಆರಂಭವಾಯಿತು. ಕೃಷ್ಣವೇಣಿಯ ಕಣ್ಮರೆ ಇಂತಹ ಅಪಾಯಕಾರಿ ತಿರುವುಗಳನ್ನು ತೆಗೆದುಕೊಳ್ಳುತ್ತಿರುವಾಗಲೇ ಸಮನ್ವಿತಾಳಿಗೆ ತನಗೇಕೆ ವೇಣಿ ಓಡಿಹೋಗಿದ್ದಾಳೆಂದು ಬಲವಾಗಿ ಅನಿಸುತ್ತಿದೆ ಎಂಬುದು ಏಕಾಏಕಿ ಹೊಳೆದುಬಿಟ್ಟಿತು. ಸುಮಾರು ಒಂದು ತಿಂಗಳ ಹಿಂದೆ ಕೃಷ್ಣವೇಣಿಗೊಂದು ಕಾಗದ ಬಂದಿತ್ತು.

ಕೃಷ್ಣವೇಣಿಗಾಗಲೀ, ಸಮನ್ವಿತಾಳಿಗಾಗಲೀ ಕಾಲೇಜಿನ ವಿಳಾಸಕ್ಕೆ ಕಾಗದ ಬರೆಯುವವರು ಯಾರೂ ಇರಲಿಲ್ಲ. ಆದರೆ, ತಿಂಗಳ ಹಿಂದೆಯೊಮ್ಮೆ ಕೃಷ್ಣವೇಣಿಯ ಕಾಲೇಜು ವಿಳಾಸಕ್ಕೆ ಬಂದ ಕಾಗದವೊಂದು ಸಮನ್ವಿತಾಳ ಕೈ ತಲುಪಿತ್ತು. ಬರೆದವರ ವಿಳಾಸದ ಬಳಿ ಮುಂಬೈ ಎಂದು ಮಾತ್ರವಿದ್ದ ಆ ಪತ್ರದ ಬಗ್ಗೆ ದಿನವಿಡೀ ಕೇಳಿದರೂ ಕೃಷ್ಣವೇಣಿ ಸರಿಯಾಗಿ ಉತ್ತರಿಸಿರಲಿಲ್ಲ. ಈಗ ಕೃಷ್ಣವೇಣಿ ಕಾಣೆಯಾಗಿರುವುದಕ್ಕೂ ಆ ಕಾಗದಕ್ಕೂ ಸಂಬಂಧವಿದೆ ಎಂಬುದು ಸಮನ್ವಿತಾಳಿಗೆ ಬಹುತೇಕ ಖಚಿತವಾಗಿಬಿಟ್ಟಿತು.

ಪೊಲೀಸರು ವಿಚಾರಿಸಿದಾಗ ಹೆಚ್ಚೇನೂ ಮಾತನಾಡಬೇಡ ಎಂಬ ಅತ್ಯಂತ ಕಟ್ಟುನಿಟ್ಟಾದ ಆಜ್ಞೆ ಸಮನ್ವಿತಾಳಿಗೆ ಮನೆಯಲ್ಲಿ ನೀಡಿದ್ದರು. ಈಗ ತನ್ನೂರು ಯಾವುದೋ ಅನಾಹುತವೊಂದನ್ನು ಎದುರಿಸಲು ಮೌನವಾಗಿ ಸಜ್ಜಾಗುತ್ತಿರುವಾಗ ಮುಂಬೈ ಕಾಗದದ ವಿಷಯವನ್ನು ಹೇಳಿ ಆ ಅನಾಹುತದ ದಿಕ್ಕು ತಪ್ಪಿಸುವ ಅಗತ್ಯವಿದೆ ಎಂದು ಅವಳಿಗೆ ತೀವ್ರವಾಗಿ ಅನಿಸತೊಡಗಿತು.

ಆದರೆ, ಕಾಗದದ ವಿಷಯ ಹೇಳಿದರೆ ಕೃಷ್ಣವೇಣಿಯ ಬಗ್ಗೆ ಸಮಾಜದಲ್ಲಿ ಈಗಿರುವ ಅನುಕಂಪದ ಭಾವ ಅಳಿಸಿಹೋಗಿ, ಅವಳ ನಡತೆ ಬಗ್ಗೆ ತಮಗೆ ಬೇಕಾದಂತೆ ಆಡಿಕೊಳ್ಳಲು ಜಗತ್ತಿಗೆ ಲೈಸನ್ಸ್ ಕೊಟ್ಟಂತೆ ಆದೀತೆಂಬ ಅನುಮಾನ ಅವಳನ್ನು ತಡೆದಿತ್ತು. ಘಟನೆಯ ತೀವ್ರತೆ ಹೆಚ್ಚುತ್ತಲೇ ಹೋಗಿ, ದೊಂಪದವಿಗೆ ಪೊಲೀಸ್ ಕಾವಲು ಹಾಕುವ ಸ್ಥಿತಿ ತಲುಪಿದಾಗ ಮಾತ್ರ ತಾನು ಇನ್ನು ಸುಮ್ಮನಿದ್ದರೆ ಕುಟುಂಬವೊಂದರ ವೈಯಕ್ತಿಕ ದುಃಖವಾಗಿ ಕೆಲದಿನದ ಕಣ್ಣೀರಿನಲ್ಲಿ ಮುಗಿಯಬಹುದಾಗಿದ್ದ ವಿಷಯವನ್ನು ಮತೀಯ ಗಲಭೆಗೆ ತಿರುಗಿಸಿದ ಪಾಪದಲ್ಲಿ ತನ್ನ ಪಾಲೂ ಸೇರಿಬಿಟ್ಟೀತೆಂಬ ಭಯ ಮೂಡಿ ಕಾಗದದ ವಿಷಯ ಹೇಳಿಬಿಡಲು ನಿರ್ಧರಿಸಿದ್ದಳು.

ಅದರೆ, ಮರುದಿನದ ಪೇಪರ್ ನೋಡಿದಾಗ ಇನ್ನು ಅದರ ಅಗತ್ಯವಿಲ್ಲ ಎಂಬುದು ಸಮನ್ವಿತಾಳ ಅರಿವಿಗೆ ಬಂತು. ವಾರಕ್ಕೆರಡು ಪತ್ರವೋ, ಗ್ರೀಟಿಂಗ್‌ ಕಾರ್ಡೋ ಸ್ವೀಕರಿಸುವ, ಕಾಲೇಜು ಸುಂದರಿ ಪ್ರಿಯಾ ರಾವ್ ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರಿಗೆ ನೀಡಿದ್ದಳು. ಕಳೆದ ಆರು ತಿಂಗಳಿನಿಂದ ಕೃಷ್ಣವೇಣಿಗೆ ನಿಯಮಿತವಾಗಿ ಮುಂಬೈನಿಂದ ಪತ್ರ ಬರುತ್ತಿತ್ತು ಎಂಬುದನ್ನು ಪ್ರಿಯಾ ಹೇಳಿದ್ದಳು. ತನ್ನ ಪತ್ರ ತೆಗೆದುಕೊಳ್ಳಲು ಬಾಕ್ಸ್‌ ತಡಕಾಡುವಾಗ ಕೃಷ್ಣವೇಣಿಗೆ ಬರುವ ಪತ್ರಗಳನ್ನು ಅವಳು ಗಮನಿಸಿದ್ದಳು.

ಕೃಷ್ಣವೇಣಿಯ ಜೀವದ ಗೆಳತಿಯಂತಿದ್ದ ತನಗೆ ತಿಳಿಯದೇ ಹೋದ ಈ ಸಂಗತಿಗಳೆಲ್ಲಾ, ತಮ್ಮನ್ನು ಇದುವರೆಗೆ ಮಾತನಾಡಿಸಿಯೂ ಇಲ್ಲದ ಕಾನ್ವೆಂಟ್ ಕುಡಿ ಪ್ರಿಯಾಳಿಗೆ ತಿಳಿದಿರುವುದು ಸಮನ್ವಿತಾಳಿಗೆ ಆಘಾತ ತಂದಿತು. ಅವಳಿಗೆ ಮೊದಲ ಬಾರಿಗೆ ತಾನು ಸ್ವವಿಚಾರಾಸಕ್ತೆ. ತನ್ನ ಬಗ್ಗೆ, ತನ್ನ ವಿಚಾರಗಳ ಬಗ್ಗೆ ಸದಾ ವಟಗುಟ್ಟುತ್ತಾ ಇದ್ದೆನೇ ಹೊರತು ವೇಣಿಗೆ ತನ್ನೆದುರು ತೆರೆದುಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. ತಮ್ಮಿಬ್ಬರ ನಡುವೆ ಇದೆ ಎಂದು ತಾನಂದುಕೊಂಡಿದ್ದ ಅಗಾಧ ಸ್ನೇಹಕ್ಕೆ ಸರಿಯಾದ ನೆಲೆಗಟ್ಟೇ ಇರಲಿಲ್ಲ ಎನಿಸಿತು. ಸಮನ್ವಿತಾಳ ಎಣಿಕೆಯಂತೆ ಪೀಡಿತೆಯ ಸ್ಥಾನದಲ್ಲಿದ್ದ ಕೃಷ್ಣವೇಣಿ ಏಕಾಏಕಿ ಓಡಿಹೋದ ಕಳಂಕಿತಳ ಪಟ್ಟಕ್ಕೇರಿಬಿಟ್ಟಳು. ಆದರೆ, ಇದರಿಂದ ದೊಂಪದುವಿನಲ್ಲಿ ಸಿಡಿಯಲು ಸಿದ್ಧವಾಗಿದ್ದ ಜ್ವಾಲಾಮುಖಿ ಹಾಗೆಯೇ ತಣ್ಣಗಾಗಿ ಎಲ್ಲರೂ ಸಮಾಧಾನದ ಉಸಿರುಬಿಟ್ಟರು.

ಕೃಷ್ಣವೇಣಿಯ ಕಣ್ಮರೆ ಪ್ರಸಂಗ ಸಮನ್ವಿತಾಳನ್ನು ಪೂರ್ತಿ ಬದಲಿಸಿಬಿಟ್ಟಿತು. ಸಮನ್ವಿತಾ ಮಾತು ಮರೆತುಬಿಟ್ಟಳು. ಅತಿಯಾಗಿ ಓದತೊಡಗಿದಳು. ಓಡಿಹೋದವಳ ಆಪ್ತಸ್ನೇಹಿತೆಯೆಂಬ ಕಾರಣಕ್ಕೆ ತನ್ನನ್ನು ವಿಶೇಷವಾಗಿ ಗಮನಿಸುತ್ತಿರುವ ಜಗತ್ತಿಗೆ, ಒಂದು ನಮೂನೆಯ ಅಪನಂಬಿಕೆಯಿಂದ ನೋಡುತ್ತಿರುವ ಕುಟುಂಬಕ್ಕೆ ತಾನು ಅವಳಂತಲ್ಲ ಎಂಬ ಸಂದೇಶ ನೀಡಬೇಕಿತ್ತು. ಒಳ್ಳೆಯವಳಾಗಬೇಕಿತ್ತು. ಅವಳ ಸ್ನೇಹದಿಂದ ತಾನು ಕೆಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಸಮನ್ವಿತಾ ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿ, ಬಿ.ಎಸ್ಸಿ ಮುಗಿಸಿ, ಅಂಚೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿ ಅಂತೂ ಕೃಷ್ಣವೇಣಿಯ ಕರಿನೆರಳಿಂದ ಹೊರಬಂದಳು. ಆದರೆ, ಟಿ.ವಿ.ಯಲ್ಲಿ ಬರುವ ಸಿನಿಮಾಗಳಲ್ಲಿ ಮುಂಬೈ ಕಂಡಾಗಲೋ ಅಥವಾ ನಗರಗಳ ವೇಶ್ಯಾಗೃಹಗಳ ದೃಶ್ಯ ಬಂದಾಗಲೋ ಸಮನ್ವಿತಾಳಿಗೆ, ಅಯಾಚಿತಾಗಿ ಕೃಷ್ಣವೇಣಿಯ ನೆನಪೇ ಬರುತ್ತಿತ್ತು. ಅದ್ಯಾಕೋ ಕೃಷ್ಣವೇಣಿ ಯಾರನ್ನು ನಂಬಿ ಓಡಿಹೋಗಿದ್ದಾಳೋ ಆತ ಅವಳನ್ನು ಈ ನರಕಕ್ಕೆ ತಳ್ಳಿದ್ದಾನೆಂದೂ ಅವಳಿಗೆ ಬಲವಾಗಿ ಅನ್ನಿಸಿಬಿಟ್ಟಿತ್ತು, ಕೃಷ್ಣವೇಣಿಯಿಂದಕಾಗದ ಬರುವವರೆಗೂ...

ಸಮನ್ವಿತಾಳಿಗೆ ಮದುವೆಯಾಗಿ, ಮಂಗಳೂರಿನ ಗಂಡನ ಮನೆ ಸೇರಿ, ಎರಡು ಹೆಣ್ಣು ಹೆತ್ತು, ಸಂಸಾರ, ಆಫೀಸು ಎಂದು ಜೋಕಾಲಿಯಾಡಲು ಆರಂಭಿಸಿ ವರ್ಷಗಳೇ ಕಳೆದ ಮೇಲೆ ದಪ್ಪ ಲಕೋಟೆಯೊಂದು ಅವಳ ತವರಿನ ವಿಳಾಸಕ್ಕೆ ಬಂದಿತ್ತು. ಭಾನುವಾರ ಅಮ್ಮನ ಮನೆಗೆ ಹೋಗಿ ಕವರ್ ತರೆದಾಗ ಅದರೊಳಗಿಂದ ಕೃಷ್ಣವೇಣಿ ನಗುನಗುತ್ತಾ ಹೊರಬಂದಿದ್ದಳು. ಚಹರೆ ಕೊಂಚವೂ ಬದಲಾಗಿಲ್ಲದಿದ್ದರೂ, ಕೃಷ್ಣವೇಣಿ ಕೃಷ್ಣಸುಂದರಿ ಎಂಬ ಅರಿವು ಸಮನ್ವಿತಾಳಿಗೆ ಮೊದಲ ಬಾರಿಗೆ ಆಯಿತು.

ಜೊತೆಗಿದ್ದ ಪತ್ರ ಸಣ್ಣದಾಗಿತ್ತು. ತನ್ನಪ್ಪ ಹುಡುಕುತ್ತಿದ್ದ ಪೌರೋಹಿತ್ಯದ ಗಂಡುಗಳನ್ನು ಮದುವೆಯಾಗಿ ಜೀವಮಾನ ಕಳೆಯುವುದು ತನ್ನಿಂದ ಊಹಿಸಲೂ ಸಾಧ್ಯವಿಲ್ಲದ ಕಾರಣ ಆ ರೀತಿ ಮನೆ ಬಿಟ್ಟು ಬಂದಿದ್ದಾಗಿಯೂ, ಈಗ ತಾನು ಅಮೆರಿಕದ ಕಲಾ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿಯೂ, ತನ್ನ ಗಂಡನ ಹೆಸರು ಜಾರ್ಜ್ ಮತ್ತು ಮೂರು ವರ್ಷದ ಮಗನ ಹೆಸರು ಶ್ಯಾಮ್ ಎಂದೂ ಕನ್ನಡದಲ್ಲೇ ಬರೆದಿದ್ದಳು. ಆದರೆ, ದೊಂಪದವಿನ ಪಿಯುಸಿ ಹುಡುಗಿ ಅಮೆರಿಕ ತಲುಪಿದ್ದು ಹೇಗೆ ಎಂಬ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆಕ್ಷೇಪಣೆ, ಮೂದಲಿಕೆ, ಸ್ನೇಹಭಾವ ಇದ್ಯಾವುದೂ ಇಲ್ಲದ ಆ ಪತ್ರದಲ್ಲಿ ಕೇವಲ ಕ್ಷೇಮ ಸಮಾಚಾರ ತಿಳಿಸುವ ತಣ್ಣನೆಯ ನಿರ್ವಿಕಾರತೆಯಿತ್ತು.

ಹೆತ್ತವರನ್ನೂ ಬಿಟ್ಟು ಕೃಷ್ಣವೇಣಿ ತನಗೇ ಏಕೆ ಪತ್ರ ಬರೆದಳು ಎಂಬ ಪ್ರಶ್ನೆ ಸಮನ್ವಿತಾಳಲ್ಲಿ ಮೂಡಿತು. ಜೊತೆಗೆ ಅತೀವವಾದ ಹೊಟ್ಟೆಕಿಚ್ಚು ಕೂಡ. ಬೆಳ್ಳಗಿರುವ, ಮುದ್ದಾದ ಆಧುನಿಕ ಹೆಸರಿರುವ, ಅವಳಿಗಿಂತ ಜಾಣೆಯಾದ ಮತ್ತು ಆರ್ಥಿಕವಾಗಿಯೂ ಬಲವಾಗಿದ್ದ ತಾನು, ಇಲ್ಲಿ... ಮಂಗಳೂರಿನ ಸೆಖೆಗೆ ಬೇಯುತ್ತಾ, ತುಂಬಿ ತುಳುಕುವ ಬಸ್ ಹಿಡಿದು, ದೂರದ ಕೊಂಪೆಯಲ್ಲಿರುವ ಪೋಸ್ಟ್ ಆಫೀಸಿನಲ್ಲಿ ದುಡಿಯುತ್ತಾ, ಮನೆಯಲ್ಲಿ ಮತ್ತದದೇ ಅಡುಗೆ ಮಾಡುತ್ತಾ, ‘ಒಂದು ಮಾಣಿ(ಗಂಡು) ಆಗಿದ್ದರೆ ಚೆನ್ನಾಗಿತ್ತು’ ಎಂಬ ಅತ್ತೆಯ ಮಾತುಗಳನ್ನೇ ದಿನಂಪ್ರತೀ ಕೇಳುತ್ತಾ, ಇದೇ ಸುಖಜೀವನ ಎಂದುಕೊಂಡಿರುವಾಗ, ತನ್ನ ಹಿಂಬಾಲಕಿಯಂತಿದ್ದ ಕೃಷ್ಣವೇಣಿ, ಅಮೆರಿಕದಲ್ಲಿ ಪತ್ರಕರ್ತೆಯಾಗಿ, ಉದ್ದನೆಯ ಕಾರು ಡ್ರೈವ್ ಮಾಡುತ್ತಾ, ದೇಶ ಸುತ್ತುತ್ತಾ, ಮಗನಿಗೆ ತನ್ನ ನೆಲದ ಹೆಸರಿಟ್ಟು. ಅವನನ್ನು ಗಂಡನ ಕೈಯಲ್ಲಿಟ್ಟು ಫೋಟೊ ತೆಗೆಸಿಕೊಳ್ಳುತ್ತಾ ಸುಖದ ವ್ಯಾಖ್ಯಾನವನ್ನೇ ಬದಲಿಸಿಬಿಟ್ಟಂತೆ ತಳಮಳಗೊಂಡಳು.

ಸಮಾಜವನ್ನು ಧಿಕ್ಕರಿಸಿ ನಡೆದ ಕೃಷ್ಣವೇಣಿ ಹಾಳಾದಳೆಂಬ ತನ್ನ ಖಚಿತವಾದ ನಂಬುಗೆಯನ್ನು ಕಿತ್ತೊಗೆದ ಆ ಫೋಟೊಗಳು ತನ್ನ ಮತ್ತು ಅವಳ ನಡುವಿನ ಸಂಬಂಧದ ಉತ್ತರಾರ್ಧ ಎನಿಸಿತು ಸಮನ್ವಿತಾಳಿಗೆ. ಜಗತ್ತಿಗೆ ಉತ್ತರ ನೀಡಲು ತನ್ನನ್ನು ಬಳಸಿಕೊಂಡಿದ್ದಾಳೆಂಬ ಭಾವ ಮೂಡಿದರೂ ಲಕೋಟೆಯೊಳಗೆ ಬಂದಿಳಿದ ಈ ಕೃಷ್ಣವೇಣಿ ನನಗೆ ಮಾತ್ರ ಸಂಬಂಧಿಸಿದವಳು ಎನಿಸಿ ಅವುಗಳನ್ನು ಕಪಾಟಿನ ಮೂಲೆಗೆ ತಳ್ಳಿದ್ದಳು.

***

ಕೃಷ್ಣವೇಣಿಯಿಂದ ಮತ್ತೆ ಪತ್ರ ಬರಲಿಲ್ಲ. ಹದಿಮೂರು ವರ್ಷವಾದರೂ ಸಮನ್ವಿತಾಳಿಗೆ ಆ ಫೋಟೊಗಳನ್ನು ಹರಿದೆಸೆಯುವ ಮನಸ್ಸಾಗಲಿ, ಧೈರ್ಯವಾಗಲೀ ಆಗಲೇ ಇಲ್ಲ. ಜೊತೆಗಿದ್ದಷ್ಟೂ ವರ್ಷ ತನ್ನ ಮಾತುಗಳನ್ನು ಕೇಳುತ್ತಾ ಉಳಿದ ಕೃಷ್ಣವೇಣಿ ಕೊನೆಯಲ್ಲಿ ಪತ್ರದ ಮೂಲಕ ತನ್ನ ಅಂತಿಮ ಮಾತು ಹೇಳಿ ಮುಗಿಸಿ, ತನಗೆ ಉತ್ತರಿಸುವ ಅವಕಾಶವೂ ಇಲ್ಲದಂತೆ ಏಕಮುಖ ಸಂಪರ್ಕ ಸಾಧಿಸಿದ್ದಕ್ಕೆ ಸಮನ್ವಿತಾಳಿಗೆ ಸಿಟ್ಟಿದೆ. ಹೀಗಾಗಿಯೇ, ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಕೃಷ್ಣವೇಣಿಯ ಹುಡುಕಾಟ ನಡೆಸಿದ್ದಾಳೆ. ಜಗತ್ತಿನ ಉಳಿದೆಲ್ಲಾ ಕೃಷ್ಣವೇಣಿಗಳ ಮಧ್ಯೆ ಇವಳು ಸಿಗದೆ ನಿರಾಶಳಾಗಿದ್ದಾಳೆ.

ತನ್ನ ಬಗ್ಗೆ, ತಾನು ಬೇರಿಗೆ ಹತ್ತಿರವಾಗಿ ಉಳಿದ ಬಗ್ಗೆ, ಮಕ್ಕಳ ಒಳ್ಳೆಯ ಮಾರ್ಕ್ಸ್ ಬಗ್ಗೆ, ತನಗೆ ದೊರೆತ ಬೆಸ್ಟ್ ಎಂಪ್ಲಾಯಿ ಅವಾರ್ಡ್ ಬಗ್ಗೆ, ಒಟ್ಟಿನಲ್ಲಿ ಸರಳವಾದರೂ ಸುಖವಾಗಿರುವ ತನ್ನ ಸಂಸಾರದ ಬಗ್ಗೆ ಸಾಕಷ್ಟು ಹೇಳಬೇಕೆಂಬ ಒತ್ತಡ ಸಮನ್ವಿತಾಳಲ್ಲಿದೆ. ಕೃಷ್ಣವೇಣಿಯ ಫೋಟೋ ನೋಡಿದ ದಿನ ಎದೆಯಲ್ಲಿ ಸೇರಿದ, ಇನ್ನೂ ಸಣ್ಣದಾಗಿ ಚುಚ್ಚುತ್ತಲೇ ಇರುವ ಮುಳ್ಳಿಗೆ ಅದೊಂದೇ ಪರಿಹಾರ ಎನಿಸಿದೆ.

ಆದರೆ, ಇಡೀ ಪ್ರಪಂಚವೇ ಕಂಪ್ಯೂಟರ್ ತೆರೆಯ ಮೇಲೆ ಮೂಡುತ್ತಿದ್ದರೂ ಕೃಷ್ಣವೇಣಿ ಮರೆಯಲ್ಲೇ ಉಳಿದುಬಿಟ್ಟಿದ್ದಾಳೆ. ಇಂದು ಫೋಟೊ ಕಣ್ಣಿಗೆ ಬಿದ್ದಿದ್ದೇ, ಫೇಸ್‌ಬುಕ್‌ನಲ್ಲಿ ಮತ್ತೊಮ್ಮೆ ಕೃಷ್ಣವೇಣಿಗಾಗಿ ಅರಸತೊಡಗಿದಳು ಸಮನ್ವಿತಾ. ಕೃಷ್ಣವೇಣಿ ಎಂದು ಟೈಪಿಸುವಾಗಲೇ ‘ಅರೇ... ಅಮೆರಿಕದಲ್ಲಿ ಕೃಷ್ಣವೇಣಿ ಕೃಷ್ಣವೇಣಿಯೇ ಆಗಿ ಉಳಿದಿರುವ ಸಾಧ್ಯತೆ ಕಡಿಮೆ’ ಎಂಬ ಅಂಶ ಹೊಳೆದದ್ದೇ ಕೃಷ್ಣವೇಣಿ ಹೆಸರಿನ ಅಮೆರಿಕನ್‌ ರೂಪಾಂತರಗಳನ್ನು ಪ್ರಯತ್ನಿಸತೊಡಗಿದಳು.

ಆಗ ಸಿಕ್ಕಿಬಿದ್ದಳು ಕೃಷ್ಣವೇಣಿ. ಕ್ರಿಸ್ನಾ ಆಗಿ ಬದಲಾಗಿದ್ದಳು. ಅವಳ ಫೋಟೊ ಗುರುತು ಹತ್ತಿದೊಡನೆ ಗಬಗಬನೆ ಅವಳ ಫೇಸ್‌ಬುಕ್ ಖಾತೆ ತೆರೆದು ನೋಡಿದ ಸಮನ್ವಿತಾಳಿಗೆ ನಿರಾಶೆಯಾಯಿತು, ಅದರಲ್ಲಿ ಹೆಚ್ಚೇನೂ ಇರಲಿಲ್ಲ. ಕಳೆದ ಕೆಲವರ್ಷದಿಂದಂತೂ ಏನೂ ಚಟುವಟಿಕೆಯೇ ಇರಲಿಲ್ಲ. ಆದರೂ, ನಡುಗುವ ಕೈಯಿಂದ ಹತ್ತು ಬಾರಿ ಟೈಪಿಸಿ, ಅಳಿಸಿ, ಕೊನೆಗೊಂದು ಸಂದೇಶ ರವಾನಿಸಿಯೇ ಬಿಟ್ಟಳು. ರಾತ್ರಿವರೆಗೂ ಮರುಸಂದೇಶಕ್ಕೆ ಕಾದು ನಿರಾಶಳಾದ ಬಳಿಕ ಮತ್ತೊಮ್ಮೆ ಕ್ರಿಸ್ನಾ ಖಾತೆಯನ್ನು ಶೋಧಿಸಿ, ಕುಟುಂಬ ಸದಸ್ಯರ ನಡುವೆ ಮಗನನ್ನು ಕಂಡುಹಿಡಿದಳು. ಸುಮಾರು ಹದಿನಾರು ವರ್ಷದ ಅಮೆರಿಕನ್ ತರುಣ ಶ್ಯಾಮ್ ಈಗ ಸ್ಯಾಮ್ ಆಗಿದ್ದ. ತನ್ನ ಪರಿಚಯ ಹೇಳಿ, ಕೃಷ್ಣವೇಣಿಯನ್ನು ಸಂಪರ್ಕಿಸುವ ವಿಧಾನ ಹೇಗೆಂದು ಕೇಳಿ ಅವನಿಗೆ ಸಂದೇಶ ಕಳಿಸಿದವಳೇ ರಾತ್ರಿ ಸರಿಯಾಗಿ ನಿದ್ದೆಯೂ ಬರದಂತಹ ತಳಮಳದಲ್ಲಿ ಕಾಯತೊಡಗಿದಳು.

ಎರಡು ದಿನ ಕಳೆದರೂ ಯಾವುದೇ ಸಂದೇಶ ಬಾರದಾಗ ಸಮನ್ವಿತಾಳಿಗೆ ಈ ಜೂಟಾಟ ಸಾಕೆನಿಸಿತು. ತನ್ನ ನೆಚ್ಚಿನ ಸೋಮೇಶ್ವರದ ಕಡಲ ತೀರಕ್ಕೆ ಆಫೀಸಿನಿಂದಲೇ ನೇರವಾಗಿ ಬಂದಿಳಿದಳು. ತೀರವಿಲ್ಲದ ಆ ಸಾಗರದ ಮತ್ತೊಂದು ಭಾಗದಲ್ಲೆಲ್ಲೋ ಆರಾಮವಾಗಿರುವ ಕೃಷ್ಣವೇಣಿಯಿಂದ ಅವಳಿಗೆ ಮುಕ್ತಿ ಬೇಕಿತ್ತು.

ತನ್ನ ಯಾವುದೋ ಸಣ್ಣತನವನ್ನೋ, ವಿಫಲತೆಯನ್ನೋ, ಹಿಪೋಕ್ರಸಿಯನ್ನೋ ಮುಖಕ್ಕೆ ಹಿಡಿಯುವ, ತನ್ನ ಯಾವುದೇ ವಿವರಣೆಗೂ ಅವಕಾಶವೇ ನೀಡದಂತಹ ಈ ಫೋಟೋಗಳನ್ನು ದೂರ ಮಾಡದ ಹೊರತು ಸುಖವಾಗಿರಲಾರೆ ಎನಿಸಿತ್ತು ಅವಳಿಗೆ. ಹೊಯಿಗೆ ರಾಶಿಯಲ್ಲಿ ಕಾಲ್ಗುರುತು ಉಳಿಸುತ್ತಾ ನಡೆದು ಬಂಡೆ ಏರಿ ಕೂತವಳೇ ತನ್ನ ವ್ಯಾನಿಟಿ ಬ್ಯಾಗಿನೊಳಗೆ ಮಲಗಿದ್ದ ಲಕೋಟೆಯನ್ನು ಹೊರತೆಗೆದಳು. ಸಮುದ್ರಕ್ಕೆ ಎಸೆಯುವ ಮುನ್ನ ಕೊನೆಯ ಬಾರಿಗೆಂಬಂತೆ ಫೋಟೊಗಳ ಮೇಲೆ ಕಣ್ಣಾಡಿಸುತ್ತಿರುವಾಗಲೇ ಮೊಬೈಲ್ ಸದ್ದು ಮಾಡಿತು. ಲಗುಬಗೆಯಿಂದ ಮೊಬೈಲ್ ತೆಗೆದವಳ ಊಹೆ ನಿಜವಾಗಿತ್ತು. ಸ್ಯಾಮ್ ಉತ್ತರಿಸಿದ್ದ.

‘ಅಪ್ಪ– ಅಮ್ಮನ ವಿಚ್ಛೇದನದ ಬಳಿಕ ನಾನು ಅಪ್ಪನ ಬಳಿಯೇ ಉಳಿದೆ. ತನ್ನ ಗೆಳೆಯನ ಜೊತೆ ಇದ್ದ ಅಮ್ಮ ಏಕಾಏಕಿ ಮನೆ ಬಿಟ್ಟು ಹೋಗಿ ವರ್ಷ ಕಳೆದಿದೆ. ಜೀವನದಲ್ಲಿನ ಯಾವುದೋ ಖಾಲಿತನವನ್ನು ತುಂಬುವ ಹುಡುಕಾಟಕ್ಕೆ ಹೊರಟಿದ್ದೇನೆ ಎಂದು ಪತ್ರ ಬರೆದಿಟ್ಟು ಹೋಗಿಬಿಟ್ಟಿದ್ದಾಳೆ. ನಮಗೆಲ್ಲರಿಗೂ ಆಕೆ ಭಾರತದಲ್ಲೇ ಎಲ್ಲೋ ಇರಬೇಕೆಂಬ ಅನುಮಾನವಿದೆ. ನಿಮ್ಮನ್ನು ಸಂಪರ್ಕಿಸಿದಲ್ಲಿ ನಮಗೆ ದಯವಿಟ್ಟು ತಿಳಿಸಿ. ‘ವಿ ಮಿಸ್ ಹರ್’ ಎಂದು ಬರೆದಿದ್ದ.

ಸಮನ್ವಿತಾ ಬಂಡೆಗೆ ಒದ್ದು ಹಿಂದೋಡುತ್ತಿದ್ದ ಅಲೆಗಳನ್ನೇ ಕೆಲ ನಿಮಿಷ ನೋಡುತ್ತಾ ಕುಳಿತಿದ್ದಳು. ಬಳಿಕ ಕೈಯಲ್ಲಿದ್ದ ಫೋಟೊಗಳನ್ನು ಮತ್ತೆ ಲಕೋಟೆಗೆ ತುಂಬಿ ವ್ಯಾನಿಟಿ ಬ್ಯಾಗಿಗೆ ಸೇರಿಸಿದಳು. ಕೃಷ್ಣವೇಣಿ ಅದೃಶ್ಯಳಾದಷ್ಟೇ ಅಚಾನಕ್ಕಾಗಿ ಒಂದು ದಿನ ಪ್ರತ್ಯಕ್ಷವಾಗಲಿದ್ದಾಳೆ, ಆಗ ತಾನು ಕಳಿಸಿದ ಫೋಟೊಗಳೆಲ್ಲಿ ಎಂದು ಕೇಳುತ್ತಾಳೆ ಎಂಬ ಬಲವಾದ ಅನಿಸಿಕೆಯೊಂದಿಗೆ ಮೇಲೆದ್ದ ಸಮನ್ವಿತಳ ವ್ಯಾನಿಟಿಬ್ಯಾಗ್‌ ಮೊದಲಿನಷ್ಟೇ ಭಾರವಾಗಿತ್ತು.

ಆದರೆ, ವೇಣಿಗೆ ಜೀವನ ಖಾಲಿ ಖಾಲಿ ಎನಿಸಿತ್ತೆಂದು ಓದಿದ ಕ್ಷಣದಿಂದ ಮನಸ್ಸು ಅಶ್ಚರ್ಯವೆನಿಸುವಷ್ಟು ಹಗುರವಾಗಿತ್ತು. ಖುಷಿಯ ಅಲೆಯೊಂದು ಹೃದಯಕ್ಕೆತಾಕಿ ಹಾದು ಹೋದಂತೆ ಅನಿಸಿದ ಅರಿವಾದದ್ದೇ, ಸಮುದ್ಯತಾಳಿಗೆ ತನ್ನ ಬಗ್ಗೆಯೇ ನಾಚಿಕೆ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT