ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಜ್ಞ: ಎಲ್ಲರೊಳಗಿನ ಅರಿವು

ಸರ್ವಜ್ಞ
Last Updated 14 ಜೂನ್ 2019, 19:30 IST
ಅಕ್ಷರ ಗಾತ್ರ

ಭಾಷಿತ, ವಚನ, ಗಾದೆ, ನಾಣ್ನುಡಿ, ಮೌಖಿಕ ಕಥೆ, ಚತುರೋಕ್ತಿಗಳ ದೊಡ್ಡ ಪರಂಪರೆಯೇ ನಮ್ಮ ನಾಡು–ನುಡಿಯಲ್ಲಿದೆ. ಈ ಪರಂಪರೆಯು ಜೀವಂತ ಸಂಸ್ಕೃತಿಯೇ ಹೊರತು ಬರೀ ಒಣ ಬೋಧನೆಯ ನಿಸ್ಸಾರ ಮಾತುಗಳಲ್ಲ; ಕಟ್ಟುನಿಟ್ಟಾದ ಆದೇಶ, ಆಗ್ರಹಗಳಲ್ಲ. ಬದಲಾಗಿ ಇವು ತಮ್ಮ ವಿಶಿಷ್ಟ ಭಾಷಾ ಪ್ರಯೋಗದ ಮೂಲಕ, ಅನುಭವದ ಆಪ್ಯಾಯಮಾನ ಸಂವಹನದ ಮುಖಾಂತರ ಮನಸ್ಸನ್ನು ಅರಳಿಸಿ ಬುದ್ಧಿ-ಕ್ರಿಯೆಗಳಲ್ಲಿ ಬದಲಾವಣೆಯ ಕಂಪನಗಳನ್ನು ಉಂಟುಮಾಡಬಲ್ಲಂತಹ ಸಶಕ್ತ ಸಾಂಸ್ಕೃತಿಕ ಬಿಂದುಗಳು. ಪ್ರತಿಯೊಂದು ಸಂಸ್ಕೃತಿಯಲ್ಲೂ ಇಂತಹ ಜಾನಪದೀಯ ಕಲಿಕಾ ವಿಧಾನಗಳು ಇದ್ದೇ ಇರುತ್ತವೆ. ಅಂತಹ ಒಂದು ಸರಳ ಸುಂದರ ಪರಂಪರೆ ಕನ್ನಡದ ವೈಶಿಷ್ಟ್ಯಗಳಲ್ಲೊಂದು ಸರ್ವಜ್ಞನ ತ್ರಿಪದಿಗಳು.

‘ಸರ್ವಜ್ಞ’ ಎಂದ ಕೂಡಲೇ ತನ್ನನ್ನು ತಾನು ಸರ್ವಜ್ಞ - ಎಲ್ಲ ತಿಳಿದವನು ಎಂದುಕೊಳ್ಳುವ ವ್ಯಕ್ತಿ ಅದೆಷ್ಟು ಅಹಂಕಾರಿಯಾಗಿರಬಹುದು, ಅಂತಹವನಿಂದ ನಾವೇನು ಕಲಿಯಬಲ್ಲೆವು ಎಂಬ ಯೋಚನೆ ಶಾಲಾ ದಿನಗಳಲ್ಲಿ ಸರ್ವಜ್ಞನ ವಚನಗಳನ್ನೋದುವಾಗ ನನ್ನನ್ನು ಕಾಡುತ್ತಿತ್ತು. ಆದರೆ ನಿಜವಾಗಿಯೂ ಅಹಂಕಾರವನ್ನು ಎಳ್ಳಷ್ಟೂ ಹೊಂದದ ವ್ಯಕ್ತಿ ಮಾತ್ರವೇ ತನ್ನನ್ನು ಹೀಗೆ ಕರೆದುಕೊಳ್ಳಬಹುದು ಎಂಬ ಅರಿವನ್ನು ಸರ್ವಜ್ಞನ ಒಂದು ವಚನವೇ ನೀಡುತ್ತದೆ:

ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳೊಂದೊಂದು ನುಡಿಗಲಿತುವಿದ್ಯದ

ಪರ್ವತವೆ ಆದ ಸರ್ವಜ್ಞ

‘ಸರ್ವಜ್ಞ’ ಎಂದರೆ ‘ನಾನು ಎಲ್ಲ ತಿಳಿದವನು’ಎಂಬ ಅರ್ಥವಲ್ಲ, ‘ಸರ್ವರೊಳು ಒಂದೊಂದು ನುಡಿ ಕಲಿತವನು’ ಎಂಬ ಅರ್ಥವು ಕಲಿಕೆಗಿರುವ ಸಾಮಾಜಿಕ, ಜಾನಪದೀಯ ಆಯಾಮವನ್ನು ಎತ್ತಿ ತೋರಿಸುತ್ತದೆ. ವಿದ್ಯೆಯ ಪರ್ವತವಾಗುವುದು ನಾವೇನೋ ಅಪೂರ್ವವಾದದ್ದನ್ನು ಕಲಿತು ಜ್ಞಾನ ಸಿದ್ಧಿಸಿಕೊಳ್ಳುವುದರಲ್ಲಿಲ್ಲ, ಎಲ್ಲರೊಳು ಒಂದಾಗಿ, ಎಲ್ಲರನ್ನು ಗುರುವಾಗಿ ಕಂಡು, ಎಲ್ಲರಲ್ಲೂ ಇರುವ ‘ವಿದ್ಯೆ’ಯನ್ನು ಗ್ರಹಿಸಿ, ಸಂಗ್ರಹಿಸಿ ನಮ್ಮದಾಗಿಸಿಕೊಂಡಾಗಲೇ. ಪುಸ್ತಕಗಳ ಓದು, ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಣಕ್ಕಿಂತ ಭಿನ್ನವಾದ ಸಹಜ, ಸಾಮುದಾಯಿಕ ಕಲಿಕೆ, ತಿಳಿವಳಿಕೆಗೆ ಮಹತ್ವ ನೀಡುವ ಯಾವುದೇ ವ್ಯಕ್ತಿಯು ಅಹಂಕಾರಕ್ಕೆ ದುರ್ಲಭವಾದ ಸ್ವಚ್ಛ ಜ್ಞಾನವನ್ನು ಪಡೆಯುವನೆಂಬ ಮಾರ್ಮಿಕವಾದ ಅರಿವು ಈ ಎರಡೇ ಸಾಲುಗಳಲ್ಲಿರುವುದು ನಿಜಕ್ಕೂ ಸೋಜಿಗವೇ ಅಲ್ಲವೇ?

ಹಾಗೆಯೇ ‘ತಿಳಿವಳಿಕೆ’ ಎಂಬುದು ಮಾತಿಗೆ ಸಂಬಂಧ ಪಟ್ಟಿದ್ದಲ್ಲ, ಅನುಭವಕ್ಕೆ, ಕ್ರಿಯೆಗೆ ಸಂಬಂಧಪಟ್ಟಿದ್ದು ಎಂದು ಹೇಳುವ ಈ ಸುಂದರ ಸಾಲುಗಳನ್ನೇ ನೋಡಿ:

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ
ಗೋರ್ಕಲ್ಲ ಮೇಲೆ ಮಳೆ ಸುರಿದರಾ ಕಲ್ಲು
ನೀರ್ಕೊಂಬುದುಂಟೆ ಸರ್ವಜ್ಞ

ಹಿರಿಯರಂತೂ ಮಕ್ಕಳನ್ನು ಕುರಿತು ಈ ಮಾತನ್ನು ಹೇಳುವುದು ಎಲ್ಲರ ಮನೆಯಲ್ಲಿ ಸಾಮಾನ್ಯವೇ. ಏನು ಮಾಡುವುದು? ಅನುಭವಕ್ಕೆ ಬರದ ಹೊರತು ಯಾವ ಬುದ್ಧಿಮಾತೂ ಪ್ರಭಾವ ಬೀರುವುದಿಲ್ಲವಲ್ಲ? ನಾವೇ ಹೋಗಿ, ಎಡವಿಬಿದ್ದು ಪೆಟ್ಟಾದಾಗಲೇ ಜಾಗರೂಕತೆ ಕಲಿಯುವುದರಲ್ಲಿ ತಪ್ಪೇನಿದೆ? ಅನುಭವ ಮಾತ್ರವೇ ಮನುಷ್ಯನನ್ನು ಕಲ್ಲಿನಂತಹ ಜಡತ್ವದಿಂದ ಮೇಲೆತ್ತಬಹುದು. ಆಗ ಮಾತ್ರವೇ ಬದುಕಿನ ‘ನೀರನ್ನು’ ಹೀರಬಲ್ಲಂತಹ ಸಾಮರ್ಥ್ಯ ಉಂಟಾಗುವುದಲ್ಲದೆ ಬರೀ ಮಾತಿನಿಂದ ಯಾವ ಕಲ್ಲಿಗೆ ತಾನೇ ಶಾಪ ವಿಮೋಚನೆಯಾದೀತು?

ಸರ್ವಜ್ಞನ ಎಲ್ಲ ವಚನಗಳು ಒಂದಲ್ಲ ಒಂದು ರೀತಿಯಿಂದ ಸಮಾಜದಲ್ಲಿ ನಾಲ್ಕು ಜನರ ನಡುವಿನ ನಮ್ಮ ಬಾಳಿನ ಬಗ್ಗೆಯೇ ಹೆಚ್ಚಾಗಿ ಮಾತನಾಡುವುದು. ಸಾಮಾಜಿಕ ಬದುಕು, ಸ್ವಾನುಭವ ಮತ್ತು ಜಡಶಿಲೆಯೊಳಗೆ ಜೀವ ಸಂಚಾರವಾಯಿತೇನೋ ಎಂಬಂತಹ ಅರಿವು – ಈ ಮೂರೂ ಸರ್ವಜ್ಞನ ವಚನಗಳಲ್ಲಿ ಎಲ್ಲೆಲ್ಲೂ ಎದ್ದುಕಾಣುತ್ತವೆ. ಸುಂದರ ಚಿತ್ತಾರದ ನಡುನಡುವೆ ಸಣ್ಣ ಸಣ್ಣ ಹಣತೆ ಹಚ್ಚಿಟ್ಟಂತೆ ಮಾಧುರ್ಯ ತುಂಬಿದ ಸಾಲುಗಳಲ್ಲಿಂದ ಇಣುಕಿ ನೋಡುವ ಪ್ರತಿಮೆಗಳು, ಉಪಮೆಗಳು ಹೃದಯವನ್ನು ಆವರಿಸುವ ಪರಿ ನೋಡಿ:

ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ

**
ವಿಶ್ವಬಂಧು
ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಧಾರುಣಿಯು ಎಲ್ಲ ಕುಲದೈವವಾಗಿನ್ನು
ಯಾರನ್ನು ಬಿಡಲೊ ಸರ್ವಜ್ಞ
– ಇಂಥ ವಿಶಾಲ ಹೃದಯದ ಅನುಭಾವಿ ಸರ್ವಜ್ಞಕವಿ.

‘ಊರೆಲ್ಲ ನೆಂಟರು ಉಣಬಡಿಸುವರ ಕಣೆ’ ಎಂಬ ಮನಸೋಲವನ್ನು ಇಲ್ಲಿ ನಾವು ಕಾಣುವುದಿಲ್ಲ. ಬಾಲ್ಯದ ಕಷ್ಟಕಾರ್ಪಣ್ಯಗಳ ಬೆಂಕಿಯಲ್ಲಿ ಅಪರಂಜಿಯಾದ ಸಾತ್ವಿಕನ ಮಾತದು. ಇದನ್ನೇ ಸಂಸ್ಕೃತವಾಣಿ ಹೀಗೆ ನುಡಿಯುತ್ತಿದೆ – ‘ಉದಾರ ಚರಿತಾನಾಂ ತು ವಸುದೈವ ಕುಟುಂಬಕಂ’ (ಉದಾರ ಚರಿತರಿಗೆ ವಸುಧೆ ಎಲ್ಲ ಒಂದೇ ಕುಟುಂಬ.)

ವಿಶ್ವಬಾಂಧವ್ಯದ ತಥ್ಯವನ್ನು ಕಂಡುಕೊಂಡ ಕೆಲವೇ ಕವಿಗಳಲ್ಲಿ ಸರ್ವಜ್ಞನೊಬ್ಬನು. ಕರ್ಣಾಟಕದ ಅರಸುಮನೆತನಗಳು ಕಳೆಗುಂದಿ ದೇಶದ ಆದ್ಯಂತ ನೀತಿಧರ್ಮಗಳು ನೆಲೆಗಟ್ಟು ಶಿಥಿಲವಾಗಿದ್ದ ಕಾಲದಲ್ಲಿ ಈತನು ಉದಯಿಸಿದನು. ಕ್ರಾಂತಿಪುರುಷನಂತೆ ಕಂಡನು. ಸಮಾಜದ ಹುಳುಕುಗಳನ್ನು ನಿರ್ಭೀತಿಯಿಂದ ಟೀಕಿಸಿದನು. ಕೆಲವನ್ನು ನೋಡಿ ನಕ್ಕನು, ನಗಿಸಿದನು. ನಗೆ–ವಿಡಂಬನೆಗಳಿಂದ ಸಮಾಜದ ರುಜೆಗೆ ಶಸ್ತ್ರಚಿಕಿತ್ಸೆ ನಡೆಸಿದ ಕನ್ನಡ ಧನ್ವಂತರಿಯಾಗಿ ಬಾಳಿದನು; ಬಾಳಿ ಬೆಳಗಿದನು.
ಎಂ.ಮರಿಯಪ್ಪ ಭಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT