ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡು

Last Updated 4 ಜುಲೈ 2020, 19:30 IST
ಅಕ್ಷರ ಗಾತ್ರ

ಹುಯ್ಯಾರು ಹಿರಣ್ಣಯ್ಯ ಶೆಟ್ರು, ಸೌಡ ಆನಂದ ಶೆಟ್ರು, ಆವರ್ಸೆ ಭೋಜ ಶೆಟ್ರು, ಚೋರಾಡಿ ಹಿರಿಯಣ್ಣ ಶೆಟ್ರು, ಕೊಳ್ಕೆಬೈಲು ಸಂಜು ಶೆಟ್ರು, ಹೀಗೆ ನಮ್ಮ ಊರಿನಲ್ಲಿ ಒಂದೊಂದು ಪ್ರಾಂತ್ಯಕ್ಕೆ ಒಬ್ಬೊಬ್ಬ ದೊಡ್ಡ ಬಂಟ್ಸ್ ಸಾಹುಕಾರರು. ಅವರಲ್ಲಿ ಕೊಯ್ಕಾಡಿ ಶೇಕು ಶೆಟ್ರೂ ಒಬ್ಬರು. ಹಾಲಾಡಿ ಹೊಳೆಯ ಸಣ್ಣ ಸೇತುವೆಯ ದಕ್ಷಿಣ ಭಾಗದ, ಹೊಳೆಯ ಬದಿಯಿಂದ ಹಿಡಿದು ಪಶ್ಚಿಮಕ್ಕೆ ಕಣ್ಣುಹಾಯಿಸುವಷ್ಟು ದೂರದವರೆಗೂ ಶೇಕು ಶೆಟ್ಟರದೇ ಗದ್ದೆಗಳು ತೋಟಗಳು.

ಆ ಬಯಲಿನ ದಕ್ಷಿಣ ಭಾಗದ ಎತ್ತರದ ಗುಡ್ಡೆಯಲ್ಲಿ ದೊಡ್ಡದಾಗಿ ಕಾಣುವ ಉಪ್ಪರಿಗೆ ಮನೆಯೇ ಶೆಟ್ಟರದ್ದು. ಮನೆಯ ಮುಂದೆ ದೊಡ್ಡ ಹೆಬ್ಬಾಗಿಲು, ಅದರ ಮುಂದೆ ದೊಡ್ಡ ಜಗಲಿ. ಅವರಲ್ಲಿ ಇರುವ ಅಷ್ಟೂ ಗದ್ದೆಗಳನ್ನು ಹಾಡಿ ಗುಡ್ಡೆಗಳನ್ನು ವಿಂಗಡಿಸಿ ವಿಂಗಡಿಸಿ ಹಲವಾರು ಒಕ್ಕಲುಗಳಿಗೆ ಗೇಣಿಗೆ ಸಾಗುವಳಿ ಮಾಡಲು ಕೊಟ್ಟಿದ್ದರಿಂದ, ಅವರ ಮೇಲೆ ಅಧಿಕಾರ ಚಲಾಯಿಸಿಕೊಂಡು ಶೆಟ್ಟರು ಬಹಳ ಕಾಲದಿಂದ ಮೆರೆಯುತ್ತಿದ್ದರು. ಕಣ್ಣಿಗೆ ಕಾಣುವಷ್ಟು ದೂರ ಹಸಿರೋ ಹಸಿರು. ಒಕ್ಕಲುಗಳೂ ಶೆಟ್ಟರನ್ನು ಭಯ ಭಕ್ತಿ ಗೌರವದಿಂದ ಕಾಣುತ್ತಿದ್ದರು.

ಶೆಟ್ರು ಜಗುಲಿಯಲ್ಲಿ ಕುಳಿತು ಒಮ್ಮೊಮ್ಮೆ ಎಲ್ಲಾ ಒಕ್ಕಲುಗಳನ್ನು ಕರೆಸಿ ಪಂಚಾಯಿತಿಕೆ ಮಾಡುವುದಿತ್ತು. ಕುಶಲೋಪರಿಯ ಸಭೆ ಮಾಡುವುದಿತ್ತು. ಊಟ ಹಾಕಿಸಿ ಗಮ್ಮತ್ತು ಮಾಡುವುದಿತ್ತು. ಕೋಳಿಪಡೆ ಮಾಡಿಸಿ ಮಾಂಸದ ಊಟ ಹಾಕಿಸಿ ಗೌಜು ಮಾಡಿಸುವುದಿತ್ತು.

ಹೆಬ್ಬಾಗಿಲಿನ ಮುಂದೆ ಆರಾಮ ಕುರ್ಚಿಯಲ್ಲಿ ಕುಳಿತು ಶೆಟ್ಟರು ಹಣೆಯ ಮೇಲೆ ಅಡ್ಡಲಾಗಿ ಕೈ ಇಟ್ಟು ಕಿರುಗಣ್ಣು ಮಾಡಿ ತಮ್ಮ ಬಯಲು ಗದ್ದೆಗಳನ್ನು ನೋಡುವುದನ್ನು ನೋಡುವುದೇ ಒಂದು ಚಂದ. ಎಲ್ಲಿ ನೋಡಿದರೂ ಹಸಿರು ಭತ್ತದ ಬೆಳೆಗಳು. ತೆಂಗು ಅಡಿಕೆ ತೋಟಗಳು. ಮನೆಯ ಮುಂದೆಯೇ ದೊಡ್ಡ ಅಂಗಳ. ಪಕ್ಕದಲ್ಲೇ, ದೊಡ್ಡ ತರಕಾರಿ ಹಿತ್ತಲು.

ಆ ಶೆಟ್ಟರ ಜಾಪು ಏನು? ದೌಲತ್ತು ಏನು? ಉಟ್ಟ ಪಂಚೆಯ ಒಂದು ಸೆರಗನ್ನು ಕೈಯಲ್ಲಿ ಹಿಡಿದು, ನಿಧಾನವಾಗಿ ಸುತ್ತಲೂ ನೋಡುತ್ತಾ ರಾಜ ಗಾಂಭೀರ್ಯದಿಂದ ನಡೆದು ಎದುರು ಬರುವಾಗ, ಸರಿಯಾದ ಸರಿ ದೃಷ್ಟಿ ಇದ್ದರೂ ಕಿರುಗಣ್ಣಿಂದ ನೋಡಿ, “ಹೋ ಮಾಣಿ? ಎಲ್ಲಿಗ್ ಹ್ವಾತ್ ಸವಾರಿ? ಅಪ್ಪಯ್ಯ ಬಂದೀರಾ?” ಎಂದು ನಕ್ಕು ಹೇಳಿ, ನಾನು ಅವರ ಮಾತನ್ನು ಕೇಳಿಸಿಕೊಂಡು ಪ್ರತಿಯಾಗಿ ನಕ್ಕು, ಉತ್ತರಕ್ಕೆ ಸಿದ್ಧನಾಗುವುದರ ಒಳಗೆ, ಉತ್ತರಕ್ಕೂ ಕಾಯದೇ ಮುಂದೆ ಹೋಗುವ ಗತ್ತು ಯಾರನ್ನೂ ಮರುಳು ಮಾಡೀತು.

ಆಗಿನ ಕಾಲವೂ ಹಾಗೆಯೇ ಇತ್ತಲ್ಲವೇ?. ನಮಗೆ ಇರುವ ಆರು ಎಕರೆ ಭೂಮಿಯಲ್ಲಿ, ನಾವೂ ಸುಮಾರು ಐದು ಎಕರೆಯಷ್ಟನ್ನು ಒಕ್ಕಲುಗಳಿಗೇ ಗೇಣಿಗೆ ಕೊಟ್ಟಿದ್ದೆವು. ನನ್ನ ಅಣ್ಣಂದಿರು ಓದಲಿಕ್ಕೆ, ಕೆಲಸಕ್ಕೆ ಅಂತ ಬೇರೆ ಬೇರೆ ಊರುಗಳಿಗೆ ಹೋದರು. ಮನೆಯಲ್ಲಿ ಬೇಸಾಯ ಮಾಡುವವರು ಗಟ್ಟಿ ಆಳು ಅಂತ ಯಾರೂ ಇರಲಿಲ್ಲ. ಎಲ್ಲ ಅಮ್ಮನದೇ ಯಜಮಾನಿಕೆ. ಯಜಮಾನಿಕೆ ಅಂದರೆ ಏನು ಮಣ್ಣು?. ಗದ್ದೆಯ ಕೆಲಸಗಳು, ಹಟ್ಟಿಗೆ ಸೊಪ್ಪು, ಗಂಟಿಗಳ ಆರೈಕೆ ಎಲ್ಲಾ ನೋಡುತ್ತಿದ್ದುದು, ಆ ನಮ್ಮ ಒಕ್ಕಲುಗಳೆ. ಅವರಿಗೆ ಗೇಣಿಗೆ ಕೊಟ್ಟ ಗದ್ದೆಯ ಹೂಟಿ ಕೊಯ್ಲುಗಳ ಜೊತೆಗೆ ನಮ್ಮದನ್ನೂ ಅವರೇ ಮಾಡಿಕೊಡುವುದು. ನಾವು ಬರೀ “ಅದು ಆಗಿಲ್ಲ. ಇದು ಆಗಿಲ್ಲ” ಅಂತ ಆತಂಕ ತೋರಿಸುವುದು ಅಷ್ಟೆ. ಆಗ ಯಾರಾದರೂ ಒಕ್ಕಲು ಗಂಡಸರು ಬಂದು, “ನೀವು ತಲೆಬಿಸಿ ಮಾಡ್ಬೇಡಿಯಮ್ಮ. ನಾವೆಲ್ಲ ಇಲ್ಯಾ? ಏನಾರು ಮಾಡ್ವ” ಎನ್ನುತ್ತಾರೆ. ಆಗ ಅಮ್ಮನಿಗೆ ಸಮಾಧಾನ.
ನಮ್ಮ ಎಲ್ಲಾ ಗದ್ದೆಗಳಿಗೆ ಯಾವ ಕಾಲಕ್ಕೆ ಏನು ಮಾಡಬೇಕು? ಯಾವ ಬೀಜ ಹಾಕಬೇಕು? ಯಾವಾಗ ಹೂಟಿ ಮಾಡಬೇಕು? ನೆಟ್ಟಿ ಮಾಡಬೇಕು? ಯಾವಾಗ ಕೊಯ್ಲು ಮಾಡಬೇಕು? ಯಾವ ಯಾವ ಧಾನ್ಯ ಹಾಕಬೇಕು? ಎಂದು ಎಲ್ಲವನ್ನೂ ನಿರ್ಧರಿಸಿ ಆಯಾಯ ಕಾಲಕ್ಕೆ ಕುಂದಿಲ್ಲದೇ ಮಾಡಿಕೊಡುತ್ತಿದ್ದವರು ಅವರೆ.

ಅದೇಕೋ ಒಮ್ಮೆ ರಾತ್ರಿ ತಿಂಗಳ ಬೆಳಕಲ್ಲೂ ಗದ್ದೆಯ ಹೂಟಿ ಮಾಡುತ್ತಿದ್ದರಪ. ಕೇಳಿದರೆ ಹಗಲು ಝಳಝಳ ಬಿಸಿಲು. ಎತ್ತುಗಳಿಗೆ ಕಷ್ಟವಾಗುತ್ತದೆ. ಬೇಗ ದಣಿವಾಗುತ್ತದೆ. ರಾತ್ರಿ ತಂಪಿರುತ್ತದೆಯಲ್ಲ ಅದಕ್ಕೆ ಅನ್ನುತ್ತಿದ್ದರು. ಆದರೆ ಅಮ್ಮ ಹೇಳುತ್ತಿದ್ದುದೇ ಬೇರೆ. “ನನಗೆ ಗೊತ್ತು. ಅವರ ಗದ್ದೆ ಕೆಲಸ ಮಾಡುವಾಗ, ನಮ್ಮದು ತಡವಾಗಿ ಹೋಗಿ, ನಮಗೆ ಬೇಜಾರ್ ಆಪ್ಕಾಗ ಅಂತ ಹಾಗೆ ಮಾಡೋದ್” ಅನ್ನುತ್ತಿದ್ದಳು.

ರಾತ್ರಿ ಎಷ್ಟು ಎಷ್ಟು ಹೊತ್ತಿಗೋ ಬಂದು, ನಮ್ಮ ಮನೆಯ ಗಂಟಿ ಕರುಗಳಿಗೆ, ಹುಲ್ಲು, ಅಕ್ಕಚ್ಚು, ಬೈರುಗಳನ್ನು ಕೊಟ್ಟಿಗೆ ಬಾಗಿಲಿನ ಮೂಲಕ ಒಳಗೆ ಬಂದು ಹಾಕುತ್ತಿದ್ದರು. ನಮ್ಮ ಮನೆ ಅವರದೇ ಮನೆ ಎಂಬಷ್ಟು ಅಧಿಕಾರ ಆ ಒಕ್ಕಲುಗಳಿಗೆ. ಅಧಿಕಾರವಾ ಅದು? ಅಲ್ಲ ಅಭಿಮಾನ. ಗೇಣಿಗೆ ಅಂತ ನಾವು ಗದ್ದೆಗಳನ್ನು ಅವರಿಗೆ ಕೊಟ್ಟಿದ್ದೆವಲ್ಲ. ಜೀವನಕ್ಕೊಂದು ಹೊತ್ತು ತುತ್ತಿಗೆ, ಊಟಕ್ಕೆ ದಾರಿ ಮಾಡಿಕೊಟ್ಟಿದ್ದೆವಲ್ಲ. ಆ ಋಣಕ್ಕೆ.

ಯಾರ ಮನೆಯಲ್ಲಾದರೂ ಹೆರಿಗೆಯೋ, ಮರಣವೋ ಆದರೆ, ಹುಷಾರಿಲ್ಲದಿದ್ದರೆ ಅದು ಅವರೊಬ್ಬರ ಸಂತೋಷ ಸಂಕಟ ಮಾತ್ರ ಆಗುತ್ತಿರಲಿಲ್ಲ. ಅದು ಇಡೀ ನಮ್ಮ ಊರಿನದ್ದೇ ಎಂಬ ಭಾವ ಆಗುತ್ತಿತ್ತು. ಎದುರು ಸಿಕ್ಕಿದರೆ ಮಾತಿಗೆ ವಿಷಯ ಬೇಕಾಗುತ್ತಿರಲಿಲ್ಲ.
ಆದರೆ ಒಕ್ಕಲು ಮಸೂದೆ ಎಂಬ ರಾಕ್ಷಸ ಕಾನೂನು ಬಂದ ನಂತರ ನಮ್ಮೂರಿನ ಪರಿಸ್ಥಿತಿಯೇ ಬದಲಾಯಿತು.
*****************

ಒಕ್ಕಲು ಮಸೂದೆ ಕಾಯಿದೆ ಬರುತ್ತಿದ್ದ ಹಾಗೆ ಒಡೆಯ ಒಕ್ಕಲುಗಳ ನಡುವಿನ ಮನೋಭಾವವೇ ಬದಲಾಗಿ ಹೋಯಿತಲ್ಲ. ಬರೀ ನಿಂತದ್ದರಿಂದ ಆ ನೆಲ ನಮ್ಮದು ಎಂಬ ಕಾನೂನು ಅದು. ಮನುಷ್ಯ ಮನುಷ್ಯರ ಮಧ್ಯದ ವಿಶ್ವಾಸ ನಂಬಿಕೆಗಳಿಗೆ ಕೊಡಲಿಯಿಟ್ಟ ಕಾನೂನು. ಅಂತಹ ಒಂದು ಕಾನೂನು ಬಂದು ಒಡೆಯರು ಒಕ್ಕಲುಗಳು ಅಂತ ಏನು, ಒಬ್ಬರು ಇನ್ನೊಬ್ಬರನ್ನು ನಂಬಿಕೆಯಿಂದ ಕಾಣದ ಹಾಗಾಯಿತು.

ಬೇರೆಯವರದು ನಮ್ಮದು ಎಂದು ಸಾಧಿಸುವುದರ ಜೊತೆಗೆ ನಮ್ಮದನ್ನು ಇನ್ನೊಬ್ಬರು ಅಪಹರಿಸದ ಹಾಗೆ ನೋಡುವುದೂ ಜನರ ಕೆಲಸವಾಯಿತು. ಎದುರಿಗೆ ಬಂದು ಎದೆಕೊಟ್ಟು ಅಂತಃಕರಣಪೂರ್ವಕವಾಗಿ ಮಾತಾಡುತ್ತಿದ್ದವರೂ “ಹೌದು ಹಾಂಗೆ ಹೇಳ್ತ್ರಪ, ಮತ್ತೆಂತ ಮಾಡೂದ್, ಇವರು ಹೀಂಗ್ ಹೇಳಿದ್ರಲೆ ಅಂತ ನಾನ್ ಮಾಡಿದಿ” ಎಂಬ ಅತಂತ್ರ ಧೋರಣೆಯ ಮಾತುಗಳು ಆತ್ಮೀಯರೆನ್ನಿಸಿಕೊಂಡವರಿಂದಲೇ ಕೇಳಬೇಕಾಯಿತು.

ಕೊಯ್ಕಾಡಿ ಶೆಟ್ಟರು ಅನೂಚಾನವಾಗಿ ನನ್ನದು ಎಂದು ತಿಳಿದು ಬೀಗುತ್ತಾ, ಮೆರೆಯುತ್ತಾ ಇದ್ದ ಭೂಮಿಗಳು, ಗದ್ದೆಗಳು, ತೋಟ ಹಾಡಿಗಳು, ರಾತ್ರಿ ಬೆಳೆಗಾಗುವುದರೊಳಗೆ ‘ಅವರದಲ್ಲ ಅದನ್ನು ಅನುಭವಿಸುತ್ತಿರುವವರದು’ ಎಂದಾಯಿತು. ಒಕ್ಕಲುಗಳು ಹೇಳದೇ ಕೇಳದೇ ಇವರ ಭೂಮಿಗಳಿಗೆ ತಮ್ಮದು ಎಂದು ಡಿಕ್ಲರೇಶನ್ ಕೊಟ್ಟಿದ್ದರಿಂದ, ಶೆಟ್ರ ಮನಸ್ಸು ಮಂಕಾಯಿತು. ಇದು ಹೀಗೂ ಆಗಲು ಸಾಧ್ಯವೇ ಎಂದು ದಿಗಿಲುಗೊಂಡ ಅವರ ದರ್ಬಾರು ಕಳೆಗುಂದಿತು.

ಒಕ್ಕಲುಗಳು ಕೂಲಿಗಳು ನಂತರ ಶೆಟ್ಟರ ಎದುರು ಬಂದು ಮುಖ ತೋರಿಸದೇ, ಎದುರಿಗೆ ಬಾರದೇ ತಲೆ ತಪ್ಪಿಸಿಕೊಂಡು ತಿರುಗಾಡಲು ಶುರುಮಾಡಿದರು. ಶೆಟ್ಟರೇ ಕರೆ ಕಳಿಸಿದರೂ ಏನೋ ಒಂದು ಸುಳ್ಳು ನೆವಹೇಳಿ ತಪ್ಪಿಸಿಕೊಳ್ಳಲು ದಾರಿ ಹುಡುಕಿಕೊಳ್ಳುತ್ತಿದ್ದರು.

ಶೆಟ್ಟರ ಸಿಟ್ಟು ಶೆಡವು ಹೆಚ್ಚಾಯಿತು, ಶೆಟ್ಟರು ವೃಥಾ ಎಲ್ಲರ ಮೇಲೂ ಹರಿಹಾಯಲು ಶುರು ಮಾಡಿದ್ದರಿಂದ ನಾಯಕರಾಗಿದ್ದ ಶೆಟ್ಟರು ಕಳೆಗುಂದಿ, ಬಸವಳಿದು, ಅಮಾನವೀಯ ಕಾನೂನಿನ ಮುಂದೆ ಖಳನಾಯಕರಾಗಬೇಕಾಯಿತು. ಕಡೆಗೂ ಬದುಕುವುದಕ್ಕೊಂದಷ್ಟು ತನ್ನದೇ ಭೂಮಿಯನ್ನು ಉಳಿಸಿಕೊಳ್ಳುವುದರಲ್ಲಿ ಶೆಟ್ಟರು ಯಶಸ್ವಿಯಾದರೂ, ಹೈರಾಣಾಗಿಬಿಟ್ಟರು.
ಅಂತಹ ಕಾಲದಲ್ಲಿ ಅವರ ಒಬ್ಬಳೇ ಮಗಳು ಮಿಣ್ಕು ಶೆಡ್ತಿ, ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದವಳು, ಓದಿನಲ್ಲಿ ಹಿಂದೆ ಬಿದ್ದು, ಎಸ್‌ಎಸ್ಎಲ್‌ಸಿಯಲ್ಲಿ ಡುಮ್ಕಿ ಹೊಡೆದದ್ದರಿಂದ, ಇನ್ನೂ ಅವಮಾನವಾದಂತಾಗಿ ಶೆಟ್ಟರು, ಅವಳಿಗೆ ,
“ಇನ್ನು ನೀನ್ ಓದಿ ಉದ್ದರಿಸಿದ್ದ್ ಸಾಕ್. ಒಂದು ಮದುವೆ ಮಾಡ್ತೆ ಹೆಣೆ ನಿಂಗೆ” ಎಂದು ಹೊರಟಿದ್ದೇ, ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಮನೆಯವರೊಂದಿಗೆ ಮಾತಾಡಿ ಸಂಬಂಧ ಕುದುರಿಸಿ, ಗಡದ್ದಾಗಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆತರುವುದರಲ್ಲಿ ಪ್ರಕರಣ ಅಂತ್ಯವಾಗಿತ್ತು.

ಆದರೆ ಆ ಅಳಿಯನೂ ಮಾವನಂತೆಯೇ ಸ್ವಲ್ಪ ದರ್ಪದವನೂ, ದರ್ಬಾರಿಯೂ ಆದ್ದರಿಂದ, ಅವರ ಮಧ್ಯ ಸರಿಬರದೇ ಇರಲು ಹೆಚ್ಚು ಕಾಲ ಬೇಕಾಗಲಿಲ್ಲ. ಮನೆಯಲ್ಲಿ ಮಾವ ಇದ್ದರೆ, ಅಳಿಯ ಇಲ್ಲ. ಅಳಿಯ ಇದ್ದರೆ, ಮಾವ ಇಲ್ಲ ಎಂಬಂತಾಯಿತು. ಇಬ್ಬರೂ ಮುಷುಂಡಿಗಳೆ. ಆದರೆ ಗ್ರಹಚಾರಕ್ಕೆ, ಮದುವೆಯಾದ ಒಂದೆರಡು ವರ್ಷದಲ್ಲಿ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಗೆ ಬೆನ್ನಿನ ಮೂಳೆಯಲ್ಲಿ ನೋವು ಕಾಣಿಸಿಕೊಂಡಿತು. ಕಂಡವರು ಹೇಳಿದ ಮದ್ದನ್ನು ಮಾಡಿಸಿದ್ದಾಯಿತು. ಮಣಿಪಾಲದಲ್ಲಿ ತೋರಿಸಿಯಾಯಿತು. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೀರೂ ಕುಡಿದಾಯಿತು. ಪಕ್ಕ ಯಾನೆ ಜಯ ಪ್ರಕಾಶ ಶೆಟ್ಟಿ, ಸೋತು ಹಣ್ಣಾಗಿ ಬಿಟ್ಟ.

ಆಸ್ಪತ್ರೆಗೆ ಹೋಗಿ ಗುಣ ಅಂತ ಆಗಿ, ಮನೆಗೆ ಬಂದ ಕೆಲವು ದಿನ, ನೋವು ಸ್ವಲ್ಪ ಕಡಿಮೆಯಾದಂತೆ ತೋರಿದರೂ, ಕಡೆಕಡೆಗೆ ಏಳಲೂ ಆಗದೇ ಅವನು ಹಾಸಿಗೆ ಹಿಡಿದ. ಓಡಾಡಲಿಕ್ಕೇ ಆಗದ ಪರಿಸ್ಥಿತಿ. ಬೆನ್ನು ನೋವಿನಿಂದ ಹಾಸಿಗೆಯಲ್ಲಿಯೇ ಇದ್ದು ನರಳತೊಡಗಿದ.

ಮಲಗಿದಲ್ಲೇ ಅಂತ ಆದ ಮೇಲೆ ಅವನ ಪರಿಸ್ಥಿತಿ ಮತ್ತೂ ಚಿಂತಾಜನಕವಾಯಿತು. ಆಗಾಗ ಕೊಡಬೇಕಾದ ಇಂಜಕ್ಷನ್ ವಗೈರೆಗೆ ಒಬ್ಬ ಡಾಕ್ಟರರನ್ನು ಗೊತ್ತು ಮಾಡಬೇಕಾಯಿತು. ಇಂಜಕ್ಷನ್ ತೆಗೆದುಕೊಳ್ಳುವುದು ಕೇವಲ ನೋವು ನಿವಾರಣೆಗೇ ಆದರೂ, ಅದನ್ನು ತೆಗೆದುಕೊಳ್ಳದಿದ್ದರೆ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಸೊಂಟದ ನೋವು ತೀವ್ರವಾಗಿ ಅವನ ಬೊಬ್ಬೆಗೆ, ಕಿರುಚಾಟಕ್ಕೆ ಎಣೆಯೇ ಇಲ್ಲವಾಗುತ್ತಿತ್ತು. ಮನೆಗೆ ಬಂದು ಇಂಜಕ್ಷನ್ ಆದರೂ ಕೊಡಲು ಒಬ್ಬ ಡಾಕ್ಟರ್ ಬೇಕಾಯಿತು.
ಒಬ್ಬರು ಸಿಕ್ಕಿದರು. ಪಕ್ಕ ಯಾನೆ ಜಯಪ್ರಾಕಾಶ ಶೆಟ್ಟಿಯ ಮಾವನ ಸ್ನೇಹಿತರೇ ಆದ, ಸದಾಶಿವ ಶೆಟ್ಟಿ ಎನ್ನುವವರು.ಆಯಿತು ಅವರನ್ನು ಕಂಡು ಮಾತಾಡಿ ಗೊತ್ತು ಮಾಡಿದರು. ಅವರದ್ದು ಮೂಡುಹಾಲಾಡಿಯ ಬಸ್ ಸ್ಟಾಂಡ್ ಹತ್ತಿರದ ಉತ್ತರ ಬದಿಯ ಎತ್ತರದ ಜಾಗದಲ್ಲಿ ಸಾಲಾಗಿ ಇರುವ ಕಳಿನ್ ಸಾಹೇಬರು ಎಂಬುವರ ಕಟ್ಟಡದಲ್ಲಿ ಇರುವ ಒಂದು ಬಾಡಿಗೆ ಶಾಪು.

ಪಕ್ಕದಲ್ಲೇ ಸರಕಾರಿ ಧರ್ಮಾಸ್ಪತ್ರೆಯೂ ಇದ್ದುದರಿಂದ, ಅವರಲ್ಲಿಗೆ ಗಿರಾಕಿಗಳು ಹೆಚ್ಚಿಗೆ ಬರುತ್ತಿರಲಿಲ್ಲ. ಅವರಿಗೆ ವಾರಕ್ಕೊಮ್ಮೆ ಕೊಯ್ಕಾಡಿಯ ಶೆಟ್ಟರ ಮನೆಗೆ ಬಂದು ಪಕ್ಕನಿಗೆ ಇಂಜಕ್ಷನ್ ಕೊಡುವುದೂ ಕಷ್ಟವಾಗದೇ ಇರುವುದರಿಂದ, ಅದರಿಂದ ಖಾಯಂ ಆದಾಯವೂ ಬರುತ್ತಿದ್ದುದರಿಂದ ಅವರು ಆ ಹೊಣೆಯನ್ನು ವಹಿಸಿಕೊಂಡರು. ಅವರಿಗೂ ಗುಲಾಬಿಗೂ ಸ್ನೇಹವಿತ್ತು ಎಂದು ಜನ ಆಡಿಕೊಳ್ಳುತ್ತಿದ್ದರು.
ಕೊಯ್ಕಾಡಿ ಶೆಟ್ಟರ ಮನೆಯಲ್ಲಿ ಒಂದು ದೊಡ್ಡ ಆಲ್ಶೇಶಿಯನ್ ನಾಯಿ ಇತ್ತು. ಅದು ಯಾವಾಗಲೂ ಈ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಭಂಟ. ಅವನ ಹಾಸಿಗೆಯ ಬಳಿಯೇ ಕುಳಿತಿರುತ್ತಿತ್ತು. ಅವನನ್ನು ಕಂಡರೆ ಆ ನಾಯಿಗೆ ಪಂಚಪ್ರಾಣ. ಅವನ ಊಟ ತಿಂಡಿಗಳಲ್ಲಿ ಅದಕ್ಕೊಂದು ಪಾಲು.
ಆದರೆ ಅದೇಕೋ ಗೊತ್ತಿಲ್ಲ. ಆ ನಾಯಿಗೆ ಈ ಸದಾಶಿವ ಡಾಕ್ಟರರನ್ನು ಕಂಡರೆ ಆಗುತ್ತಿರಲಿಲ್ಲ. ಸದಾಶಿವ ಡಾಕ್ಟರು ಬಂದರೆ ಸಾಕು, ಅದು ಅವರ ಮೇಲೆ ಎರಗಿ ಕಚ್ಚಲು ಹೋಗುತ್ತಿತ್ತು.
****************

ನಾನು ಕುಂದಾಪುರದ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಮನೆಗೆ ಬಂದೆ. ಆದರೆ ನಮ್ಮ ಮನೆ ಇರುವುದು ಹಾಲಾಡಿಯಿಂದ ದಕ್ಷಿಣ ದಿಕ್ಕಿನಲ್ಲಿ. ಸುಮಾರು ಐದು ಮೈಲಿ ದೂರದಲ್ಲಿ. ನಡೆದೇ ಹೋಗಬೇಕು. ರಸ್ತೆ ಸೌಕರ್ಯ ಇಲ್ಲ. ಹಲವಾರು ಗದ್ದೆ ಬಯಲು, ಹಾಡಿ ಗುಡ್ಡವನ್ನೂ, ತೋಡಿಗೆ ಹಾಕಿದ ಸಂಕವನ್ನು ದಾಟಿ, ಬೇಲಿಗಳನ್ನು ಹಾರಿ ದಾಟಿಕೊಂಡೇ ಹೋಗಬೇಕು. ನನಗೆ ಡಿಗ್ರಿಯಾದ ಮೇಲೆ ಮುಂದೆ ಓದುವ ಅನುಕೂಲವಿಲ್ಲದಿದ್ದುದರಿಂದ ನಾನು ಮನೆಯಲ್ಲಿ ಅಣ್ಣನೊಂದಿಗೆ ಅದೂ ಇದೂ ಕೆಲಸ ಮಾಡುತ್ತಾ, ಪ್ರತಿ ದಿನ ಸಂಜೆಯ ಹೊತ್ತಿಗೆ ಹಾಲಾಡಿಯವರೆಗೆ ನಡೆದು ಬಂದು ಗೋಳೇರ ಜೀನಸಿ ಅಂಗಡಿಯಲ್ಲಿ, ಎದುರಿನ ದೊಡ್ಡ ಚಾವಡಿಯಂತಹ ಜಾಗದ ಬೆಂಚಿನಲ್ಲಿ ಕುಳಿತು, ಅವರು ತರಿಸುವ ನಾಲ್ಕಾರು ದಿನಪತ್ರಿಕೆಗಳನ್ನು ಓದುತ್ತಿದ್ದೆ. ಪೇಪರಲ್ಲಿ ‘ಬೇಕಾಗಿದ್ದಾರೆ’ ಎಂಬ ಕಾಲಂ ಅನ್ನು ತಪ್ಪದೇ ನೋಡಿ, ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕುತ್ತಿದ್ದೆ. ಮತ್ತು ಕತ್ತಲಾಗುವ ಮೊದಲು ಮನೆಯನ್ನು ಸೇರಿಕೊಳ್ಳುತ್ತಿದ್ದೆ.

ನಮ್ಮ ಮನೆಯಿಂದ ಹಾಲಾಡಿಗೆ ಹೋಗುವಾಗ, ನಾವು ಮನೆಯ ಮುಂದಿನ ಬಯಲನ್ನು ಒಂದು ಸಣ್ಣ ಹೊಳೆಯ ಸಂಕವನ್ನು ದಾಟಿ, ಗುಡ್ಡದಲ್ಲಿ ಸ್ವಲ್ಪ ದೂರ ಸಾಗಿ, ತಟ್ಟುವಟ್ಟು ಬಯಲಿಗೆ ಇಳಿದು ದಾಟಿ, ಕುಚ್ಚಾಲಿನ ಹಾಡಿಯಲ್ಲಿ ನಡೆಯುತ್ತಾ ಬಂದು, ಒಂದು ಸಣ್ಣ ಗುಡ್ಡವನ್ನು ದಾಟಿದರೆ ಅದು ಇಳಿಯುವುದು ಕೊಯ್ಕಾಡಿಯ ಆ ಶೇಕು ಶೆಟ್ಟರ ಮನೆಯ ಹಿಂದಿನ ಹಟ್ಟಿಯ ಪಕ್ಕದಲ್ಲಿ.
ಅಲ್ಲಿಂದ ಹಾಗೆ ಕೆಳಗೆ ಇಳಿದು, ಮತ್ತೆ ಆ ಶೆಟ್ಟ್ರ ಮನೆಯನ್ನು ಬಳಸಿಕೊಂಡು ಎದುರಿನ ಅಂಗಳದ ಪಕ್ಕದಲ್ಲಿ ನಡೆದು ಬರಬೇಕು. ಅಂಗಳದ ಮತ್ತೊಂದು ಬದಿಯಲ್ಲಿ ದೊಡ್ಡ ಕಣಿ, ಪ್ರಪಾತ. ಮಣ್ಣು ಜರಿದು ಹೋಗಬಾರದು ಅಂತ ಅಲ್ಲಿ ನಾಲ್ಕಾರು ಹಲಸು, ಮಾವಿನ ಮರಗಳನ್ನು ನೆಟ್ಟಿದ್ದರು. ಉಂಡ ಬಾಳೆಯೆಲೆ ಕಸಕಡ್ಡಿಗಳನ್ನು ಅಲ್ಲಿಯೇ ಎಸೆಯುತ್ತಿದ್ದರು. ಅಲ್ಲಿಂದ ಅಂಗಳಬದಿಯಲ್ಲೇ ಮುಂದಕ್ಕೆ ಹೋಗಿ ಮೆಟ್ಟಲಲ್ಲಿ ಇಳಿದು, ಹೋಗಿ ಗದ್ದೆಯ ಬಯಲು ಅದನ್ನು ದಾಟಬೇಕು. ನೋಡಲಿಕ್ಕೆ ನಾನೂ ಸುಮಾರಾಗಿ ಆ ಸದಾಶಿವ ಡಾಕ್ಟರ ಹಾಗೇ ಇದ್ದೆ ಎಂದು, ಮಿಣ್ಕು ಶೆಡ್ತಿ ಅವರ ಮನೆಯ ದಾರಿಯಲ್ಲಿ ಹಾಲಾಡಿಗೆ ಹೋಗುವಾಗ ಎದುರು ಸಿಕ್ಕಾಗಲೆಲ್ಲ ಹೇಳುತ್ತಿದ್ದಳು.
ಇದೆಲ್ಲ ಸುಮಾರು ಹತ್ತು ಹನ್ನೆರಡು ವರ್ಷದ ಹಿಂದಿನ ಕತೆ.

******************


ಆಮೇಲೆ ನನಗೆ ಒಂದು ಕೆಲಸ ಸಿಕ್ಕಿ, ಮದುವೆಯೂ ಆಗಿ, ಈಗ ದೂರದ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿ, ಮತ್ತೆ ಉಡುಪಿಗೆ ಬಂದು ಸೆಟ್ಲ್ ಆಗಿದ್ದೇವೆ. ಅಮ್ಮ ಅಪ್ಪಯ್ಯ ತೀರಿಹೋದ ಮೇಲೆ ಊರಿಗೆ ಹೋಗುವುದು ತೀರಾ ಕಡಿಮೆ. ಇದ್ದಕ್ಕಿದ್ದಂತೆ ಒಮ್ಮೆ ಮಳೆಗಾಲದಲ್ಲಿ ನನಗೆ ನಾಲ್ಕು ದಿನ ರಜೆ ಸಿಕ್ಕಿದಾಗ, ಊರಿಗೆ ಹೋಗಿ ಬರುವ ಅಂತ ಮನಸ್ಸಾಯಿತು. ಬಸ್ಸಿನಲ್ಲಿ ಹಾಲಾಡಿಗೆ ಹೊರಟೆವು. ಸಂಜೆಯ ಹೊತ್ತಿಗೆ ಹಾಲಾಡಿಗೆ ಬಂದು ಇಳಿದೆವು.

ಆಗಲೇ ಸಂಜೆಯಾಗುತ್ತಾ ಬಂದದ್ದರಿಂದ ಸ್ವಲ್ಪ ಸ್ವಲ್ಪ ಕತ್ತಲು ಆವರಿಸುತ್ತಿತ್ತು. ಪೂರ್ತಿ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳುವ ಎಂದು ಗಡಿಬಿಡಿಯಿಂದ ಬೇಗ ಬೇಗ ಹೊರೆಟವು. ಓಣಿಯಲ್ಲಿ ನಡೆದು, ತೋಡಿಗೆ ಹಾಕಿದ ಸಂಕವನ್ನು ದಾಟಿ, ಮುಂದಿನ ಗದ್ದೆ ಬಯಲಿನ ಕಂಟದಲ್ಲಿ ಕೆಸರಿನಲ್ಲಿ ಕಾಲನ್ನು ತೋಯಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ದಾಟಿದೆವು.
ಈಗ ಮೊದಲಿನ ಹಾಗೆ ಉತ್ಸಾಹದಿಂದ ಬೇಸಾಯವನ್ನು ಮಾಡುವವರಿಲ್ಲ. ಕೆಲವು ಗದ್ದೆಗಳು ಬೇಸಾಯ ಮಾಡದೇ ಹಡಲು ಬಿದ್ದಿತ್ತು. ಹಿಂದೆ ಹಸಿರಿನಿಂದ ನಳನಳಿಸುತ್ತಿದ್ದ ಭತ್ತದ ಗದ್ದೆಗಳೆಲ್ಲ ಈಗ ಕಳೆ ಬೆಳೆದು ಕಾಂತಿಹೀನವಾಗಿತ್ತು. ಮಧ್ಯೆ ಮಧ್ಯೆ ಅಲ್ಲೊಂದು ಇಲ್ಲೊಂದು ಗದ್ದೆ ನಟ್ಟಿ ಮಾಡಿದ್ದರೂ ಹಿಂದಿನಂತೆ ಬೆಳೆ ನಳನಳಿಸುತ್ತಿರಲಿಲ್ಲ. ಶೆಟ್ರ ವಿಶಾಲ ಗದ್ದೆ ಬಯಲು ಯಾವುದೋ ವೈಭವದ ಅವಶೇಷದಂತೆ ಕಾಣುತ್ತಿತ್ತು.

ಯಾರೋ ಎದುರಿನಿಂದ ಕೊಡೆ ಹಿಡಿದುಕೊಂಡು ಬರುತ್ತಿದ್ದರು. ಮೊದಲಾದರೆ ಗದ್ದೆಗೆ ಇಳಿದು ನಮಗೆ ದಾರಿ ಮಾಡಿಕೊಡುತ್ತಿದ್ದರು. ಈಗ ಕಂಟದ ಬದಿಯಲ್ಲಿ ಬ್ಯಾಲೆನ್ಸ್ ಮಾಡುತ್ತಾ ನಮ್ಮನ್ನು ದಾಟಿದರು. ಯಾರೋ ಪರಿಚಿತ ಮುಖ ಅನ್ನಿಸಿತು. ಅವರು ತಿರುಗಿ ನೋಡದಿದ್ದರೂ ನಾನೇ ಮಾತಾಡಿಸಿದೆ.

“ಹ್ಯಾಯ್, ಇದು ನಟ್ಟಿ ಮಾಡುವ ಸಮಯ ಅಲ್ದಾ?”
ಅವರು ತಿರುಗಿ ನಿಂತು ಉತ್ತರಿಸಿದರು,
“ಹೌದು. ನಿಮಗೆ ಎಲ್ಲಾಯಿತು?. ಈಗ ಯಾರ್ ನಟ್ಟಿ ಮಾಡ್ತ್ರೆ? ಮಾಡೂಕ್ ಜನವು ಸಿಕ್ಕುದಿಲ್ಲೆ. ಮನೆಯಂಗು ಒಬ್ಬಿಬ್ಬರು ಇಪ್ಪುದಲ್ದೆ? ಹೆಂಗಸ್ರೆಲ್ಲ ಬೀಡಿ ಕಟ್ಟುಕ್ ಹ್ವಾತ್ವೆ. ಗಂಡಸರು ಕಾರ್ಖಾನಿ ಕೆಲಸಕ್ಕೆ ಹ್ವಾತ್ರು. ಹಾಂಗಾಯಿ ಈಗ ನಟ್ಟಿ ಬೇಸಾಯ ಮಾಡ್ವವರೇ ಇಲ್ಲೆ”.
“ಮತ್ತೆ ಉಂಬುಕೆ?”
‘ನೀವ್ ಎಲ್ಲಿದ್ರಿ? ಈಗ ಸರ್ಕಾರವೇ ಧರ್ಮಕ್ ಬೇಕಂಬಷ್ಟು ಅಕ್ಕಿ ಕೊಡತ್ತಲೆ”ಬೀಸಾಯ ಯಾರಿಗ್ ಬೇಕ್?.
ಎಂತಹಾ ಧಗಾ.? ವಂಚನೆ !. ವರ್ಷ ವರ್ಷ ಉತ್ತು ಬಿತ್ತಿ ಹಸನಾಗಿ ಬಿತ್ತಿದ ಬೀಜಕ್ಕೆ ಅನ್ನ ಕೊಡುತ್ತಿದ್ದ ಭೂಮಿ ತಾಯಿ ಇವರನ್ನೆಲ್ಲ ಕ್ಷಮಿಸಿಯಾಳೇ? ಬೆಂಕಿ ಬೇಂಕಿಯಾಗಿ ಉರಿದು ಇವರನ್ನೆಲ್ಲಾ ಸುಟ್ಟು ನಾಶ ಮಾಡಲಿಕ್ಕಿಲ್ಲವೇ? ಏನೋ.
ಅವರಿಗೆ ಏನೂ ಅನ್ನಿಸಲಿಲ್ಲ. ನಕ್ಕು ಮುಂದೆ ಹೊರಟುಹೋದರು.

ಕೊಯ್ಕಾಡಿ ಶೆಟ್ಟರ ಮನೆಯ ಅಂಗಳದ ಎದುರಿನ ಮೆಟ್ಟಲುಗಳನ್ನು ಹತ್ತಿ ಮೇಲೆ ಬರುತ್ತಿದ್ದೆನಷ್ಟೆ.
ನನ್ನನ್ನು ನೋಡಿದ ಅವರ ಮನೆಯ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಕೂಗುತ್ತಾ ಓಡಿ ಬಂದು, ನನ್ನ ಮೇಲೆ ಎರಗಲು ಹಾರಿತು. ನನಗೆ ಒಮ್ಮೆಲೇ ಗಾಬರಿಯಾಯಿತು. ಸಣ್ಣಗೆ ಮಳೆಯೂ ಬರುತ್ತಿದ್ದುದರಿಂದ ನಾನು ಕೊಡೆಯನ್ನು ಹಿಡಿದಿದ್ದೆ, ಯಾವ ಧೈರ್ಯವೋ ಒಮ್ಮೆಲೇ ಕೊಡೆಯನ್ನು ಪಕ್ಕನೇ ಅಡ್ಡ ಹಿಡಿದೆ. ಆಗಲೇ ಆ ನಾಯಿ ಮುದಿಯಾಗುತ್ತಾ ಬಂದಿದ್ದು, ಬಹುಷ್ಯ ಅದರ ಗುರಿ ಸ್ವಲ್ಪ ತಪ್ಪಿದ್ದಿರಬೇಕು. ಅಥವಾ ನನ್ನ ಕೊಡೆಯು ಇದ್ದಕ್ಕಿದ್ದಂತೆ ಅಡ್ಡ ಬಂದುದರಿಂದ ಹೆದರಿ ಅದರ ಗತಿಯನ್ನು ಸ್ವಲ್ಪ ಬದಲಾಯಿಸಿತೋ ಏನೋ.,
ಅಂತೂ ಒಮ್ಮೆಲೇ ಹಾರಿದ ರಭಸಕ್ಕೆ ನನ್ನ ಕೊಡೆಯ ಮುಂದಿನ ಭಾಗಕ್ಕೆ ರಪಕ್ಕನೇ ಬಡಿದು, ಮುಂದಕ್ಕೆ ಜಿಗಿದು, ನನ್ನ ಮುಂಭಾಗದಿಂದ ದಾಟಿ ಎಡಬದಿಯ ದೊಡ್ಡ ಪ್ರಪಾತಕ್ಕೆ ಬಿದ್ದು ಬಿಟ್ಟಿತು. ಅದರ ತಲೆಯು ಯಾವುದೋ ಚೂಪಾದ ಕಲ್ಲಿಗೆ ಬಡಿದಿದ್ದಿರಬೇಕು. ಒಮ್ಮೆಲೇ ಅದರ ಗೌವ್ ಗೌವ್ ಸ್ವರ ಮಾಯವಾಗಿ ಕುಯ್ ಕುಯ್ ಆಗಿ ಸ್ವಲ್ಪ ಹೊತ್ತಿನಲ್ಲಿಯೇ ಅದೂ ನಿಂತು ಹೋಯಿತು.

ನಾನು ಹೆದರಿಕೆಯಿಂದ ಗಡಗಡ ನಡುಗುತ್ತಿದ್ದೆ. ನನ್ನ ಹೆಂಡತಿ ಜೋರಾಗಿ “ಅಯ್ಯೋ ಏನಾಯ್ತು? ಯಾರಾದ್ರುಉ ಬನ್ನಿ” ಎಂದು ಕೂಗುತ್ತಿದ್ದಳು. ಮಗ ಇನ್ನೂ ಮೆಟ್ಟಲು ಹತ್ತುತ್ತಾ ಇದ್ದವನು, ಓಡೋಡಿ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡ. ಅಷ್ಟರಲ್ಲಿ ಆ ಶೆಟ್ಟರ ಮನೆಯ ದೊಡ್ಡ ಹೆಬ್ಬಾಗಿಲನ್ನು ತೆರೆದು ಒಬ್ಬರು, "ಯಾರದು? ಯಾರದು?"ಎನ್ನುತ್ತಾ ಕೈಯಲ್ಲಿ ಒಂದು ಕೊಡೆಯನ್ನು ಹಿಡಿದುಕೊಂಡು ಬಿಡಿಸುತ್ತಾ ಓಡಿಬಂದರು.
ನಾನು "ಎಂತ ಮರ್ರೆ, ನಿಮ್ಮ ನಾಯಿ ನನ್ನನ್ ಕೊಲ್ತಿತ್ತಲೆ.... ಎಂದು ತೊದಲಿದೆ. ಅವರು "ಎಂತ ಆಯ್ತು ? ಎಂತ ಆಯ್ತು? ಎನ್ನುತ್ತ ಹತ್ತಿರ ಓಡಿ ಬಂದರು. ನಾನು "ಎಂತ ಆಗಲಿಲ್ಲ ಪುಣ್ಯಕ್ಕೆ. ನಿಮ್ಮ ನಾಯಿ ಇಲ್ಲೆ ಕೆಳಗೆ ಬಿತ್ತು ಕಾಣಿ" ಎಂದು ತೊದಲಿದೆ.
“ಹೌದಾ ಮರ್ರೆ ಈಗ ಅದಕ್ಕೆ ಕಣ್ಣು ಸಮಾ ಕಾಂತಿಲ್ಯೆ?” ಎನ್ನುತ್ತಾ ಗಡಿಬಿಡಿಯಲ್ಲಿ ಅವನು ಮತ್ತೆ ಮನೆಯ ಒಳಗೆ ಹೋಗಿ, ಒಂದು ಬ್ಯಾಟರಿಯನ್ನು ತಂದ. ಅಂಗಳದ ತುದಿಯಲ್ಲಿ ನಿಂತು, ಕೆಳಗೆ ಬೆಳಕು ಬಿಟ್ಟ.
ನಾಯಿ ಪ್ರಪಾತದ ಮಧ್ಯ ಧರೆಯಲ್ಲಿ ಒಂದು ಬೇರಿಗೆ ಸಿಕ್ಕಿ ಬಿದ್ದಿತ್ತು. ಅವನು "ಟೀಪು, ಟೀಪು, ಬಾರಾ ಬಾರಾ" ಎಂದು ಕೂಗಿದ. ಅದು ಮಿಸುಕಾಡಲಿಲ್ಲ.
ಕೊನೆಗೆ “ಎಂತ ಮರ್ರೆ ? ಹೋಯ್ತಾ ಅಂತ. ಆ ಸಣ್ಣ ಶೆಟ್ರ ಸತ್ ಹೋದ ಮೇಲೆ, ಈ ನಾಯಿ ತಣ್ಣಗೆ ಆಯಿತ್. ಕೂಗುದೇ ಕೈದ್ ಮಾಡಿತ್ ಮರ್ರೆ. ಅದ್ ಇಷ್ಟ್ ಕೂಗಿದ್ದು, ನಾನ್ ಕೇಣ್ಲೆ ಇಲ್ಲೆ" ಅಂದ.
ನಾನು ಅಷ್ಟರೊಳಗೆ ಸ್ವಲ್ಪ ಸುಧಾರಿಸಿಕೊಂಡಿದ್ದೆ.
"ಹೋ ಜಯಪ್ರಕಾಶ ಶೆಟ್ರು ತೀರಿಕೊಂಡ್ರಾ?" ಅಂದೆ.
"ಹೌದು. ಅವರು ಹೋಗಿ ಏಳೆಂಟು ವರ್ಷವೇ ಆಯ್ತಲ್ಲ ಮರ್ರೆ. ನೀವು ಯಾರು?” ಎಂದ.
ನನ್ನ ಪರಿಚಯ ಹೇಳಿ ಅವನು ಯಾರೆಂದೂ ಕೇಳಿದೆ.
ಅವನು ಅಲ್ಲಿಯ ಒಬ್ಬ ಕೂಲಿಯಾಳು. ದೊಡ್ಡ ಶೆಟ್ರು ಅಂದರೆ ಶೇಕು ಶೆಟ್ರು ಈಗ ಹಾಸಿಗೆಯಲ್ಲಿಯೇ. ಅವರಿಗೆ ಉಬ್ಬಸವಂತೆ. ಅವರನ್ನು ನೋಡಿಕೊಳ್ಳಲು ಅವನು ಇದ್ದನಂತೆ.
"ಮನೆಯಲ್ಲಿ ಬೇರೆ ಯಾರೂ ಇಲ್ಲವಾ? ಎಂದೆ. ಅವನು "ಇಲ್ಲ ಮಾರಾಯ್ರೆ. ನಾವೇ ಸೈ" ಅಂದ.
ನಾನು "ಮಿಣುಕು ಶೆಡ್ತಿಯವರು ಅಂತ ಒಬ್ರು ಇದ್ದಿದ್ರಲ್ಲ" ಅಂದೆ.
ಅದಕ್ಕೆ ಅವನು, "ಅವರು ಈಗ ಬೊಂಬಾಯಿಯಂಗೆ ಇದ್ರು. ಇಲ್ಲಿಗೆ ವರ್ಷಕ್ಕೆ ಒಂದೆರಡು ಸಲ ಬರ್ತು ಅಷ್ಟೆ" ಅಂದ.
"ಬೊಂಬಾಯಿಯಲ್ಲಿ ಅವರಿಗೆ ಯಾರು ಇದ್ದಾರೆ?" ಎಂದದ್ದಕ್ಕೆ ಅವನು,
"ಅಲ್ ಯಾರೂ ಇಲ್ಲೆ. ಆಚಿ ಪೇಟೆಯ ರಾಜೀವಿಗೂ, ಈ ಅಮ್ಮಂಗೂ ದೋಸ್ತಿಯಾಯ್ತು. ಅವರೇ ಕರ್ಕ್ಕೊಂಡು ಹೋದ್ರು" ಅಂದ.
ನನಗೆ ಗೊತ್ತಾಯಿತು.
ರಾಜೀವಿ ಅಂದರೆ ಹಾಲಾಡಿ ಪೇಟೆಯಲ್ಲಿ ಇರುವ ಒಬ್ಬ ಸೂಳೆಯರವಳು, ದೇವದಾಸಿ. ನಾನು ಸುಮ್ಮನಾದೆ.
ಅವನೇ ಹೇಳಿದ "ನಾನೂ, ನನ್ನ ಹೆಂಡ್ತಿಯೂ ಇಲ್ಲಿ ಇಪ್ದು. ಮಲ್ಕಂಡೇ ಇದ್ದ ಹಳೆಯ ಶೆಟ್ರಿಗೆ ಊಟ ಬೇಯಿಸಿ ಹಾಕಿ, ಮನೆ ನೋಡ್ಕಂಡ್ ಇದ್ದೊ, ಆ ಮಿಣುಕಮ್ಮ ಶೆಡ್ತಿಯರೇ ಬೊಂಬಾಯಿಯಿಂದ ಆಗಾಗ ಮನಿ ಕರ್ಚಿಗ್ ದುಡ್ಡು ಕಳ್ಸ್ತ್ರೆ” ಅಂದ.
ಅವನು ಪುನಃ ಏನೋ ನೆನಪಾದಂತೆ, "ಈ ನಾಯಿಗ್ ಎಂತ ಆಯ್ತು ಮರ್ರೆ!" ಎಂದು ಮತ್ತೆ ಆ ದೊಡ್ಡ ಧರೆಯ ಅಂಚಿಗೆ ಬ್ಯಾಟರಿ ಬೆಳಕನ್ನು ಬಿಡುತ್ತಾ ನೋಡಿದ.
ಕಡೆಗೆ ಮೆಲ್ಲನೆ ಕೆಳಗೆ ಇಳಿಯತೊಡಗಿದ.
ಒಂದು ಹಲಸಿನ ಮರದ ಬೇರಿಗೆ ತಲೆ ಹೊಡೆದು ರಕ್ತ ಕಾರಿದ ಆ ನಾಯಿ ಆಗಲೇ ಪ್ರಾಣ ಬಿಟ್ಟಿತ್ತು.
ನಾನು ಆಗಲೇ ಮಳೆಗೆ ಒದ್ದೆಯಾದ ನನ್ನ ಕನ್ನಡಕವನ್ನು ತೆಗೆದು, ಕರ್ಚೀಪಿನಿಂದ ಒರೆಸಿಕೊಂಡು, ಮುಂದೆ ಬೋಳಾಗಿದ್ದ ನನ್ನ ತಲೆಯನ್ನು ನೇವರಿಸಿಕೊಂಡೆ.
ಆಗಲೇ ಕತ್ತಲಾಗಲು ಶುರುವಾಗಿತ್ತು.
ಮಳೆಯೂ ಸಣ್ಣಗೆ ಸುರಿಯುತ್ತಿತ್ತು.
ಅವನು ಅಷ್ಟರಲ್ಲಿ ಆ ನಾಯಿಯ ಕಾಲನ್ನು ಹಿಡಿದು ಎಳೆದು ಮೇಲೆ ತಂದು ಅಂಗಳದಲ್ಲಿ ಹಾಕಿದ.
“ಇನ್ ಇದನ್ ಎಂತ ಮಾಡೂದಂತ ಕಾಣಕ್’’ ಎಂದು ಅವನಷ್ಟಕ್ಕೇ ಹೇಳಿಕೊಂಡ.
"ಮಾರಾಯಾ, ಇಲ್ಲಿಯೇ ಕತ್ತಲಾಗಿ ಬಿಟ್ಡಿತಲ್ಲ. ನಮಗೊಂದು ಬ್ಯಾಟರಿಯಾದರೂ ಕೊಡು. ನಾಳೆ ಮತ್ತೆ ಬರುವಾಗ ವಾಪಾಸು ಕೊಡ್ತೇನೆ" ಎಂದೆ.
“ಅಕ್ಕೆ, ಒಂದ್ ಬ್ಯಾಟರಿ ಇರ್ಕ್. ತಡೀನಿ ತಂದ್ ಕೊಡ್ತಿ” ಅಂತ ಹೇಳಿ ಅವನು ಬ್ಯಾಟರಿಯನ್ನು ತರಲು ಒಳಗೆ ಹೋದ.
ಸಣ್ಣಗೆ ಮಳೆ ಸುರಿಯುತ್ತಲೇ ಇತ್ತು. ಸುತ್ತಲೂ ಕತ್ತಲು ಆವರಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT