ಸೋಮವಾರ, ಜೂಲೈ 6, 2020
23 °C

ಅರಿವನ್ನು ಎಚ್ಚರವಾಗಿಸುವ ಶಿವರಾತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವರಾತ್ರಿ...
ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ರಾತ್ರಿಯ ಸಮಯವು ದೇವತೆಗಳ ಪೂಜೆಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಆದರೆ ಅಂದು ರಾತ್ರಿಯ ಸಮಯದಲ್ಲಿಯೇ ಶಿವನನ್ನು ವಿಶೇಷವಾಗಿ ಪೂಜಿಸಬೇಕು ಎಂದಿರುವುದರಿಂದ ‘ಶಿವರಾತ್ರಿ’ ಎಂದು ಕರೆದಿರುವುದು ಉಚಿತವಾಗಿದೆ. ‘ಸೋಮವಾರ, ಕೃಷ್ಣಪಕ್ಷ, ಅಷ್ಟಮೀ, ಚತುರ್ದಶೀ – ಇವು ಶಿವನಿಗೆ ಸಂತೋಷವನ್ನು ಉಂಟುಮಾಡುವ ಕಾಲಗಳು. ಈ ನಾಲ್ಕರಲ್ಲಿಯೂ ಕೃಷ್ಣಪಕ್ಷದ ಚತುರ್ದಶೀ, ಎಂದರೆ ಶಿವರಾತ್ರಿಯು ಅತ್ಯಂತ ಶ್ರೇಷ್ಠ’ ಎಂದಿದೆ, ಶಿವಪುರಾಣ.

ವಚನಗಳಲ್ಲಿ ಶಿವತತ್ತ್ವ
ಶರಣರ ನೂರಾರು ವಚನಗಳಲ್ಲಿ ಶಿವತತ್ತ್ವದ ವಿವರಗಳನ್ನು ಕಾಣಬಹುದು. ಶಿವತತ್ತ್ವದ ಭವ್ಯತೆಯನ್ನು ಈ ವಚನ ತುಂಬ ಸೊಗಸಾಗಿ ನಿರೂಪಿಸಿದೆ:

ಎತ್ತೆತ್ತ ನೋಡಿದೊಡತ್ತತ್ತ ನೀನೇ ದೇವಾ ।
ಸಕಲ ವಿಸ್ತಾರದ ರೂಹು ನೀನೇ ದೇವಾ ।
ವಿಶ್ವತೋಚಕ್ಷು ನೀನೇ ದೇವಾ ।
ವಿಶ್ವತೋಮುಖ ನೀನೇ ದೇವಾ ।
ವಿಶ್ವತೋಬಾಹು ನೀನೇ ದೇವಾ ।
ವಿಶ್ವತೋಪಾದ ನೀನೇ ದೇವಾ ।
ಕೂಡಲಸಂಗಮದೇವಾ ।।

ರೂಪ ಎಂಥದ್ದು?
ಶಿವತತ್ತ್ವದ ಸಂಕೇತಗಳನ್ನು ಅವನ ರೂಪದಲ್ಲಿ ಕಾಣಬಹುದು. ಅವನ ವಾಸ ಕೈಲಾಸದಲ್ಲಿ. ಅವನಿಗೆ ಮೂರು ಕಣ್ಣುಗಳು. ಅವನು ಆನೆಯ ಚರ್ಮವನ್ನು ಧರಿಸಿದ್ದಾನೆ. ಅವನ ಜಟೆಯು ಚಂದ್ರನಿಂದಲೂ ಗಂಗೆಯಿಂದಲೂ ಅಲಂಕೃತವಾಗಿದೆ. ವೃಷಭ ಅವನ ವಾಹನ. ತ್ರಿಶೂಲವನ್ನೂ ಡಮರುವನ್ನೂ ಅವನು ಕೈಯಲ್ಲಿ ಹಿಡಿದಿದ್ದಾನೆ. ಹಣೆಯಲ್ಲಿ ಭಸ್ಮವಿದೆ. ಶಿವನ ಅರ್ಧಾಂಗಿ ಪಾರ್ವತಿ. ಶಿವ–ಪಾರ್ವತಿಯರನ್ನು ‘ಆದಿದಂಪತಿ’ ಎಂದೇ ಕರೆಯುವುದು. ಇವರ ಮಕ್ಕಳೇ ಗಣೇಶ ಮತ್ತು ಸುಬ್ರಹ್ಮಣ್ಯ. ಶಿವನನ್ನು ಅಷ್ಟಮೂರ್ತಿರೂಪದಲ್ಲೂ ಆರಾಧಿಸುವುದುಂಟು. ಈ ಎಂಟು ರೂಪಗಳೇ ಶರ್ವ, ಭವ, ಉಗ್ರ, ರುದ್ರ, ಭೀಮ, ಪಶುಪತಿ, ಮಹಾದೇವ ಮತ್ತು ಈಶಾನ.

 ಶಿವಲಿಂಗ ಶಿವನನ್ನು ಪೂಜಿಸುವುದು ಲಿಂಗರೂಪದಲ್ಲಿ.
‘ಲಿಂಗ’ ಎಂದರೆ ಗುರುತು, ಸಂಕೇತ, ಚಿಹ್ನೆ. ‘ದೇವರು’ ಎಂಬುದು ನಾಮ–ರೂಪಗಳಿಗೆ ಅತೀತವಾದ ತತ್ತ್ವ. ಹೀಗಾಗಿ ಅವನಿಗೊಂದು ನಿರ್ದಿಷ್ಟವಾದ ರೂಪವನ್ನು ನೀಡುವುದು ದೈವತ್ವಕ್ಕೆ ಒದಗಿಸುವ ಮಿತಿಯೇ ಹೌದು. ಈ ಕಾರಣದಿಂದಾಗಿಯೇ ಲಿಂಗರೂಪದಲ್ಲಿ ಶಿವನನ್ನು ಪೂಜಿಸುವುದು. ಒಂದು ರೀತಿಯಲ್ಲಿ ನಾವು ದೇವರನ್ನು ಕಲ್ಪಿಸಿಕೊಳ್ಳುವ ಎಲ್ಲ ರೂಪಗಳೂ ಕೂಡ ಚಿಹ್ನೆ, ಸಂಕೇತಗಳೇ ಹೌದು.

ಲೀಲಾಮೂರ್ತಿಗಳು
ಶಿವನಿಗೆ ಹಲವು ರೂಪಗಳು. ಅವುಗಳಲ್ಲಿ ಪ್ರಸಿದ್ಧವಾಗಿರುವುದು ಇಪ್ಪತ್ತೈದು ರೂಪಗಳು. ಇವನ್ನೇ ‘ಲೀಲಾಮೂರ್ತಿಗಳು’ ಎಂದು ಕರೆಯುವುದು. ಶ್ರೀತತ್ತ್ವನಿಧಿ ಇವನ್ನು ಹೀಗೆ ಹೆಸರಿಸಿವೆ:

1. ಚಂದ್ರಶೇಖರಮೂರ್ತಿ, 2. ಉಮಾಮಹೇಶ್ವರಮೂರ್ತಿ, 3. ವೃಷಭಾರೂಢಮೂರ್ತಿ, 4. ನಾಟ್ಯಮೂರ್ತಿ, 5. ವೈವಾಹಿಕಮೂರ್ತಿ, 6. ಭಿಕ್ಷಾಟನಮೂರ್ತಿ, 7. ಕಾಮದಹನಮೂರ್ತಿ, 8. ಕಾಳಹರಮೂರ್ತಿ, 9. ತ್ರಿಪುರಾರಿಮೂರ್ತಿ, 10. ಜಲಂಧರಮೂರ್ತಿ, 11. ಬ್ರಹ್ಮಶಿರಚ್ಛೇದನಮೂರ್ತಿ, 12. ಗಜಾಸುರಸಂಹಾರಮೂರ್ತಿ, 13. ವೀರಭದ್ರಮೂರ್ತಿ, 14. ಹರಿಹರಮೂರ್ತಿ, 15. ಅರ್ಧನಾರೀಶ್ವರಮೂರ್ತಿ, 16. ಕಿರಾತಾರ್ಜುನಮೂರ್ತಿ, 17. ಕಂಕಾಳಮೂರ್ತಿ, 18. ಚಂಡೇಶಾನುಗ್ರಹಮೂರ್ತಿ, 19. ವಿಷಾಪಹರಮೂರ್ತಿ, 20. ಚಕ್ರದಾನಮೂರ್ತಿ, 21. ವಿಘ್ವೇಶ್ವರಪ್ರಸನ್ನ, 22. ಸೋಮಾಸ್ಕಂದಮೂರ್ತಿ. 23. ಏಕಪಾದಮೂರ್ತಿ, 24. ಸುಖಾಸೀನಮೂರ್ತಿಮೂರ್ತಿ, 25. ದಕ್ಷಿಣಾಮೂರ್ತಿ.

ಶಿವನಿಗೆ ಏನು ಇಷ್ಟ?
ಶಿವನನ್ನು ‘ಅಭಿಷೇಕಪ್ರಿಯ’ ಎಂದು ಕರೆದಿದ್ದಾರೆ. ಹೀಗಾಗಿಯೇ ಶಿವರಾತ್ರಿಯಂದು ರುದ್ರ ಮತ್ತು ಚಮಕಪ್ರಶ್ನಗಳನ್ನು ಪಠಿಸುತ್ತ ಮಾಡುವ ರುದ್ರಾಭಿಷೇಕಕ್ಕೆ ತುಂಬ ಮಹತ್ವವಿದೆ. ಹೀಗೆಯೇ ಶಿವನಿಗೆ ಬಿಲ್ವಪತ್ರೆ ಎಂದರೂ ಇಷ್ಟವೇ. ತುಂಬೆ ಮತ್ತು ದಾಸವಾಳದ ಹೂವುಗಳಿಂದಲೂ ಅವನನ್ನು ಪೂಜಿಸುವುದುಂಟು.

ಶಿವ ಯಾರು?
ಬ್ರಹ್ಮ, ವಿಷ್ಣು ಮತ್ತು ಶಿವ – ಇವರು ತ್ರಿಮೂರ್ತಿಗಳು. ಬ್ರಹ್ಮನು ಸೃಷ್ಟಿ ಮಾಡಿದರೆ ವಿಷ್ಣು ಅದನ್ನು ಕಾಪಾಡುತ್ತಾನೆ; ಲಯವನ್ನು ಮಾಡುವವನೇ ಶಿವ.

ಶಂಕರ, ಪರಮೇಶ್ವರ, ಸದಾಶಿವ, ಮಹಾದೇವ, ತ್ರಿನೇತ್ರ, ಪರಶಿವ, ರುದ್ರ, ಉಮಾಪತಿ, ನೀಲಕಂಠ, ಹರ, ಶಂಭು, ತ್ರ್ಯಂಬಕ, ಚಂದ್ರಶೇಖರ, ವಿಶ್ವನಾಥ, ಶೂಲಪಾಣಿ, ಪಶುಪತಿ, ಪಿನಾಕಿ – ಹೀಗೆ ಶಿವನಿಗೆ ಹಲವು ಹೆಸರುಗಳು. ಒಂದೊಂದು ಹೆಸರು ಅವನ ಒಂದೊಮದು ತತ್ತ್ವವನ್ನು ಪ್ರತಿನೀಧಿಸುತ್ತದೆ.

‘ಶಂಕರ’ ಎಂದರೆ ಮಂಗಳಕರ ಎಂಬ ಅರ್ಥವಿದೆ. ಪ್ರಳಯಕಾಲದಲ್ಲಿ ಇಡಿಯ ಸೃಷ್ಟಿ ಯಾರಲ್ಲಿ ನಿದ್ರೆ ಮಾಡುತ್ತದೆಯೋ ಅವನೇ ಶಿವ – ಎಂಬ ಅರ್ಥವನ್ನೂ ಈ ಪದಕ್ಕೆ ಮಾಡುತ್ತಾರೆ.

ಆಚರಣೆ ಹೇಗೆ?
ಶಿವರಾತ್ರಿಯಂದು ಮಾಡಬೇಕಾದ ಎರಡು ಮುಖ್ಯ ಆಚರಣೆಗಳು ಎಂದರೆ, ಒಂದು: ಉಪವಾಸ; ಮತ್ತೊಂದು ಜಾಗರಣೆ. ಉಪವಾಸದಲ್ಲಿದ್ದುಕೊಂಡು ರಾತ್ರಿ ನಾಲ್ಕು ಯಾಮಗಳಲ್ಲಿ ಶಿವನನ್ನು ಪೂಜಿಸಬೇಕು.

ಶಿವನಿಗೆ ಪ್ರೀತಿಯಾಗುವಂತೆ ಶಿವರಾತ್ರಿವ್ರತವನ್ನು ಆಚರಿಸಬೇಕು. ಹೊರಗಿನ ಪೂಜೆಯ ಜೊತೆಗೆ ಅಂತರಂಗದ ಪೂಜೆಯೂ ಮುಖ್ಯ. ಎಲ್ಲ ವ್ರತಗಳನ್ನೂ ಆತ್ಮಗುಣಗಳಿಂದ ಮಾಡಬೇಕು ಎನ್ನುತ್ತದೆ ಪರಂಪರೆ. ಎಲ್ಲರ ಬಗ್ಗೆಯೂ ದಯೆ, ಯಾರೊಬ್ಬರ ಬಗ್ಗೆಯೂ ಅಸೂಯೆ ಇಲ್ಲದಿರುವುದು, ಶುಭ್ರವಾಗಿರುವುದು, ಅತಿಯಾಗಿ ಆಯಾಸಪಡದಿರುವುದು, ದೈನ್ಯವಿಲ್ಲದಿರುವುದು, ದುರಾಸೆ ಇಲ್ಲದಿರುವುದು, ಇತರರನ್ನು ಕ್ಷಮಿಸುವ ಗುಣ ಮತ್ತು ಒಳಿತನ್ನೇ ಆಲೋಚಿಸುವುದು – ಇವಿಷ್ಟನ್ನು ಆತ್ಮಗುಣಗಳು ಎನ್ನುತ್ತವೆ ಶಾಸ್ತ್ರಗಳು. ಯಾವುದೇ ಪೂಜೆಯ ಮೊದಲು ಪೂಜಕನು ಇಂಥವನ್ನು ನಾವು ಮೈಗೂಡಿಸಿಕೊಂಡಿರಬೇಕು.

ಉಪವಾಸ ಮತ್ತು ಜಾಗರಣೆ
ಉಪವಾಸ ಎಂದರೆ ಆಹಾರವನ್ನು ಸ್ವೀಕರಿಸದಿರುವುದು ಎನ್ನುವುದು ಸಾಮಾನ್ಯಾರ್ಥ. ಇಲ್ಲೂ ಕೂಡ ಬಹಿರಂಗರೂಪದಲ್ಲಿ, ಎಂದರೆ ಅನ್ನದ ರೂಪದಲ್ಲಿ ಎಂದು ಅರ್ಥಮಾಡಿಕೊಳ್ಳುವುದೇ ಹೆಚ್ಚು. ಮನಸ್ಸು ಕೂಡ ಬಗೆಬಗೆಯ ‘ಅನ್ನ’ವನ್ನು ಸ್ವೀಕರಿಸುತ್ತಲೇ ಇರುತ್ತದೆ. ದ್ವೇಷ, ಅಸೂಯೆ, ವಂಚನೆ, ದುಷ್ಟತನ ಮುಂತಾದ ‘ಆಹಾರ’ಗಳನ್ನು ಪ್ರತಿಕ್ಷಣವೂ ತಿನ್ನುತ್ತಿರುತ್ತದೆ. ಇಂಥ ಆಹಾರಗಳಿಂದಲೂ ದೂರ ಉಳಿಯುವುದೇ ನಿಜವಾದ ಉಪವಾಸ. 

ಜಾಗರಣೆ ಎಂದರೆ ಎಚ್ಚರದಿಂದ ಇರುವುದು. ನಿದ್ರೆಯನ್ನು ಮಾಡದಿರುವುದೇ ಎಚ್ಚರ. ಇದು ಸರಿಯೇ. ಆದರೆ ಆತ್ಮಗುಣಗಳಿಂದ ಸದಾ ಎಚ್ಚರವಾಗಿರುವುದೇ ನಿಜವಾದ ಜಾಗರಣೆ. 

ನಿದ್ರೆ ಎಂದರೆ ಮೋಹ, ಅಜ್ಞಾನ, ಕತ್ತಲೆ, ಆಲಸ್ಯ, ಮೈಮರೆವು. ಇವುಗಳಿಂದ ನಮ್ಮನ್ನು ಕಾಪಾಡಿ ನಮಗೆ ವಿವೇಕವನ್ನೂ ಅರಿವನ್ನೂ ಬೆಳಕನ್ನೂ ಉಲ್ಲಾಸವನ್ನೂ ಆನಂದವನ್ನೂ ಕೊಡುವಂಥ ಎಚ್ಚರವೇ ಜಾಗರಣೆ.

ಶಿವನಿಗೆ ಏನು ಇಷ್ಟ?
ಶಿವನನ್ನು ‘ಅಭಿಷೇಕಪ್ರಿಯ’ ಎಂದು ಕರೆದಿದ್ದಾರೆ. ಹೀಗಾಗಿಯೇ ಶಿವರಾತ್ರಿಯಂದು ರುದ್ರ ಮತ್ತು ಚಮಕಪ್ರಶ್ನಗಳನ್ನು ಪಠಿಸುತ್ತ ಮಾಡುವ ರುದ್ರಾಭಿಷೇಕಕ್ಕೆ ತುಂಬ ಮಹತ್ವವಿದೆ. ಹೀಗೆಯೇ ಶಿವನಿಗೆ ಬಿಲ್ವಪತ್ರೆ ಎಂದರೂ ಇಷ್ಟವೇ. ತುಂಬೆ ಮತ್ತು ದಾಸವಾಳದ ಹೂವುಗಳಿಂದಲೂ ಅವನನ್ನು ಪೂಜಿಸುವುದುಂಟು.

ರಾಮ ಕೃಷ್ಣ ಶಿವ
ರಾಮಮನೋಹರ ಲೋಹಿಯಾ ಅವರು ‘ರಾಮ ಕೃಷ್ಣ ಶಿವ’ ಎಂಬ ಸೊಗಸಾದ ಪ್ರಬಂಧವೊಂದನ್ನು ಬರೆದಿದ್ದಾರೆ. ಅದರ ಕೆಲವೊಂದು ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಹುದು:

‘ರಾಮ ಕೃಷ್ಣ ಶಿವ – ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್‌ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ, ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ; ಶಿವನಾದರೋ ಪ್ರಮಾಣಾತೀತ – ಎಂದರೆ, ಉದ್ದಗಲ ಎತ್ತರಗಳ ಗಾತ್ರ ಕಲ್ಪನೆಗೆ ಸಂಬಂಧವೇ ಇಲ್ಲದ, ಗಾತ್ರದ ಮಾನಕ್ಕೆ ಸಿಲುಕದ – ವ್ಯಕ್ತಿತ್ವದಲ್ಲಿ ಪೂರ್ಣತೆ.

‘ರಾಮ ಮತ್ತು ಕೃಷ್ಣ ಮನುಷ್ಯಜೀವನವನ್ನೆ ಬದುಕಿದವರಾದರೆ ಶಿವ ಹುಟ್ಟಿಲ್ಲದವನು, ಸಾವೂ ಇಲ್ಲದವನು. ದೇಹಸಹಜವೆನ್ನುವಂತೆ ಅವನು ಅನಂತ; ಆದರೆ, ದೇವತ್ವಕ್ಕೆ ವಿರುದ್ಧವಾಗಿ ಅವನ ಜೀವನ, ಕಾಲದ ಅವಧಿಯಲ್ಲೇ ಸಂಭವಿಸಿರುವ ಘಟನೆಗಳಿಂದ ತುಂಬಿಹೋಗಿದೆ. ಆ ಕಾರಣ ಅವನನ್ನು ದೇವರು ಎನ್ನುವುದಕ್ಕಿಂತಲೂ ಗಾತ್ರಾತೀತ ಎನ್ನಬೇಕು. ಪ್ರಾಯಃ, ಮಾಣವಕುಲಕ್ಕೆ ಗೊತ್ತಿರುವ ಇಂಥ ಗಾತ್ರಾತೀತತೆಯ ಕಥಾಕಲ್ಪನೆ ಅಥವಾ ಪುರಾಣನಿರ್ಮಿತಿ ಇವನೊಬ್ಬನದೇ ಸರಿ. ಈ ದೃಷ್ಟಿಯಿಂದ ಇವನ ಹತ್ತಿರಕ್ಕೆ ಬರಬಹುದಾದ ಕಲ್ಪನೆ ಇನ್ನೊಂದಿಲ್ಲ ಎಂಬುದಂತೂ ನಿಶ್ಚಿತ.

‘ಶಿವತತ್ತ್ವದ ಇನ್ನೊಂದು ದರ್ಶನ ಎಲ್ಲ ಕಾಲಕ್ಕೂ ಎಲ್ಲ ಹೊತ್ತಿನಲ್ಲೂ ಪೂಜಾರ್ಹವಾದದ್ದು. ಒಮ್ಮೆ ಯಾವನೋ ಭಕ್ತ ಶಿವನ ಜೊತೆಯಲ್ಲಿ ಪಾರ್ವತಿಗೂ ಪೂಜೆ ಸಲ್ಲಿಸಲು ನಿರಾಕರಿಸಿದಾಗ ಶಿವ ಅರ್ಧನಾರೀಶ್ವರನಾಗಿ ನಿಂತ; ದೇಹಾರ್ಧ ತಾನಾಗಿ ಮತ್ತೊಂದರ್ಧ ಪಾರ್ವತಿಯಾಗಿ ಪೂಜೆ ಕೊಂಡ. ಈ ಚಿತ್ರವನ್ನು ಮುಡಿಯಿಂದ ಅಡಿತನಕ ವಿವರ ವಿವರವಾಗಿ ಇಡೀ ಕಲ್ಪಿಸಿಕೊಳ್ಳಲು ಯತ್ನಿಸಿ ತುಂಬ ಕಷ್ಟವಾಗಿದೆ ನನಗೆ, ಅನೇಕ ಸಲ. ಆದರೆ ಈ ದರ್ಶನ ಮಾತ್ರ ತುಂಬ ಸುಂದರವಾದದ್ದು.’

(ಆಧಾರ: ‘ರಾಮಮನೋಹರ ಲೋಹಿಯಾ ಅವರ ಆಯ್ದ ಬರಹಗಳು’)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.